ಯಾವ ವಿಮರ್ಶಕನ ಪುತ್ಥಳಿಯನ್ನೂ
ಯಾವ ಊರ ಸರ್ಕಲಿನಲ್ಲೂ ಇಡುವುದಿಲ್ಲ
– ಅನ್ನುತ್ತಲೇ ವಿಮರ್ಶೆಯ ಹಂಗಿನಾಚೆ ಬರೆಯುತ್ತಿರುವವರು ತಾವು ಎಂದು ಘೋಷಿಸಿಕೊಳ್ಳುವ ಕವಿ ಚಕ್ರವರ್ತಿ ಚಂದ್ರಚೂಡ್, ಪದ್ಯ ಹೆಣಿಗೆಯ ಖಚಿತ ಚೌಕಟ್ಟುಗಳಾಚೆಯೇ ನಿಂತು ಬರೆಯುತ್ತಿರುವವರು. ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿಯವರ "ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)" ಕವನ ಸಂಕಲನ ಇದಕ್ಕೊಂದು ನಿದರ್ಶನ.
*
ಇಲ್ಲಿನ ಪದ್ಯಗಳನ್ನು ಓದುವಾಗ ಸಾವಿನ ಮನೆಯ ಚಟುವಟಿಕೆಯಂತೆ ವಿಲಕ್ಷಣ ಅನುಭವ ಉಂಟಾಗುತ್ತದೆ. ಅದೊಂದು ಬಗೆಯ ಸತ್ಯದ ಮುಖಾಮುಖಿ, ನಿರಾಕರಿಸುತ್ತಲೇ ಒಪ್ಪಿಕೊಳ್ಳುವ ಬಗೆ ಹಾಗೂ ನಮಗೂ ತಟ್ಟುವಂಥದೇ ಇದು – ಅನ್ನುವಂಥ ಭಯ ಮತ್ತು ಆಪ್ತತೆ.
ಊರ ಜನ ಬೊಬ್ಬೆ ಹೊಡೆದರು
ಅಗ್ನಿ ಚಪ್ಪಾಳೆ ಹೊಡೆದ….
ಇವನ ಹೃದಯ ಸುಟ್ಟು ಬೂದಿಯಾಗಿ
ಶತಮಾನಗಳಾಯ್ತಲ್ಲಾ…..
ಬೂದಿಯಾಗಲು
ಬಾಕಿಯೇನಿದೆ?….
– ಅನ್ನುವಂಥ ಸಾಲುಗಳನ್ನೋದುವಾಗ ಇದು ಇನ್ನಷ್ಟು ಗಾಢವಾಗಿ ಅನುಭವಕ್ಕೆ ಬರುತ್ತದೆ. ಈ ಸಂಕಲನದ ಯಾವ ಪದ್ಯಕ್ಕೂ ಶೀರ್ಷಿಕೆಯಿಲ್ಲವಾದ್ದರಿಂದ ಪದ್ಯಗಳನ್ನು ಉಲ್ಲೇಖಿಸುವುದೊಂದು ತೊಡಕು.
ಮಳೆಗಾಲದ ಮತ್ತೊಂದರ ಹಸಿವು
ನಿನ್ನೊಳಗೆ ಅನ್ನ ಬೆಂದಂತೆಯೇ
ಮಧುವೂ ತಣ್ಣಗೆ ಕುದಿಯುತ್ತದೆ
ಅದನು ಹೀರಿ ಹೀರಿ
ತಣಿದ ಖಯ್ಯಾಮನಾದೆ….
~
ಅವರು ಪ್ರೀತಿ ಬೇರುಗಳ
ಉಲ್ಲಂಘಿಸಿದ್ದಾರೆ
ನಾನು ಅಲ್ಲಮನ ಆಲಂಗಿಸಿದ್ದೇನೆ..
ಮಿಲನ ಮರೀಚಿಕೆಯಲ್ಲವೇ?…..
~
ಭೂಮಿಗೆ ಹಡೆಯುವುದರಿಂದ
ಇವನು ಕೊಟ್ಟ ವಿಶ್ರಾಂತಿಯೇ
ಮರುಭೂಮಿ
– ಎನ್ನುವಂಥ ಹೇಳಿಕೆಗಳಲ್ಲಿ ಬದುಕನ್ನು ನೋಡುವ ಕ್ರಮವನ್ನೂ ಮರುಭೂಮಿಯನ್ನೂ ಪ್ರೇಮದಲ್ಲಿ ಒಳಗೊಳ್ಳುವ ಪರಿಯನ್ನೂ ಕಾಣಬಹುದಾಗಿದೆ. ಇಂಥ ಅಪರೂಪದ ಪ್ರಯೋಗಗಳಲ್ಲಿ ಚಕ್ರವರ್ತಿ ಒಬ್ಬ ಸಮರ್ಥ ಕವಿಯಾಗುತ್ತಾರೆ. ಈ ಪದ್ಯಗಳು ಓದಿನ ರುಚಿ ಹತ್ತಿಸಿ ಸವಿಯುವಂತೆ ಮಾಡುತ್ತವೆ. ತೊಂಭತ್ತಕ್ಕೂ ಹೆಚ್ಚಿರುವ ಇಲ್ಲಿನ ಪದ್ಯಗಳಲ್ಲಿ ಅರ್ಧದಷ್ಟು ಪದ್ಯಗಳು ಇಂಥ ಲಯವನ್ನು ಒಳಗೊಂಡಿವೆ.
ರಾವಣನನ್ನು ’ಪ್ರೇಮವೀರ’ನೆಂದು ಕರೆದು ಸೀತೆಯನ್ನು ಅಪ್ಪಟ ಸ್ತ್ರೀ ಭಾವದಲ್ಲಿ ಬಿಂಬಿಸುತ್ತಾ ’ಸೀತೆಯನ್ನು ಅಗ್ನಿದಿವ್ಯಕ್ಕೇರಿಸಿದಾಗ ನಿಜಕ್ಕೂ ಬೆಂದಿದ್ದು ರಾವಣನ ತಪ್ತ ಹೃದಯ’ ಎಂದು ಕೊನೆಯಾಗುವ ಪದ್ಯವಿರಬಹುದು, ಜೈಲಿನ ಖೈದಿಯೊಬ್ಬ ತನ್ನಮ್ಮನ ಬಗ್ಗೆ ಹೇಳುತ್ತ ಊಟ ಬಿಟ್ಟು ಕೊನೆಯಲ್ಲಿ ’ಅಣ್ಣಾ, ಕಣ್ಣೀರು ಉಪ್ಪಲ್ಲವಾ?’ ಎಂದು ಮುಗಿಸುವ ಪದ್ಯವಿರಬಹುದು… ಇವೆಲ್ಲ ಒಂದು ದಟ್ಟ ವಿಷಾದವನ್ನು ಕಟ್ಟಿಕೊಡುತ್ತಾ ಪದ್ಯವು ನಮ್ಮೊಳಗೆ ಇಳಿದು ಬಹುಕಾಲ ಉಳಿಯುವಂತೆ ಮಾಡುತ್ತವೆ.
ಒಂದು ನಿಟ್ಟಿನಿಂದ ನೋಡಿದರೆ ಪದ್ಯ ಕಟ್ಟುವ ಕ್ರಮವನ್ನು ಒರಟೊರಟಾಗಿ ದುಡಿಸಿಕೊಂಡಿದ್ದಾರೆ ಚಕ್ರವರ್ತಿ. ಅಲ್ಲಿ ಮಾಧುರ್ಯವಿಲ್ಲ. ತೀವ್ರತೆಯಿದೆ. ಆದರೆ ಸಾವಧಾನವಿಲ್ಲ. ಇವರ ಎಷ್ಟೋ ಪದ್ಯಗಳು ಕತೆಯಾಗುವ ಸಾಧ್ಯತೆ ಉಳ್ಳಂಥವು. ಕೊಂಚ ವ್ಯವಧಾನಿಸಿದ್ದರೆ ಕತೆಯಾಗಿಯೇಬಿಡುವಂಥವು. ಬಹುಶಃ ಚುಟುಕಾಗಿ ಬರೆಯುವ ತುರ್ತಿನಲ್ಲಿ ಅವರು ಆ ವಸ್ತುಗಳನ್ನಿಟ್ಟುಕೊಂಡು ಪದ್ಯ ಕಟ್ಟಿದರೇನೋ. ಅಥವಾ ಫೇಸ್ಬುಕ್ ಅನ್ನು ತಮ್ಮ ವೇದಿಕೆಯಾಗಿಸಿಕೊಂಡಿದ್ದರಿಂದ ಪದ್ಯಕ್ಕೆ ಸೀಮಿತಗೊಳಿಸಿಕೊಂಡರೇನೋ.
ಆ ವೇಶ್ಯೆಯೆದುರು ನಿಂತು
ನಿನ್ನ ಹೆಸರೇನು ಅಂದೆ….
ಅವಳು ಹೆಸರ ಉಸಿರಿದ
ಮರುಕ್ಷಣ ಬರಸೆಳೆದು ತಬ್ಬಿದೆ
– ಎಂದು ಶುರುವಾಗುವ ಪದ್ಯವಿರಬಹುದು;
೩೧, ೩೨, ೩೩ ಹೀಗೆ ,ಇಷ್ಟು
ಅವಳ ವಸಂತಗಳು
ಒಣಗಿದ ಎಲೆಗಳಂತೆ
ಉದುರಿ ಹೋದವು…..
ಯಾವ ಕ್ಷಣಕಾದರೂ ಬರುವ
ಅಂತಿಮ ಅತಿಥಿಯ ಸ್ವಾಗತಕೆ
ಕಾದಳು, ಸಿಂಗಾರದ ಭಾರ ಹೊತ್ತು …
– ಎಂದು ಶುರುವಾಗುವ ಪದ್ಯವಿರಬಹುದು;
ಹಾಗೆಯೇ, ಅಪ್ಪನ ಕುರಿತಾದ, ಅವ್ವನ ಕುರಿತಾದ, ಸೀರೆಯ ಬಗ್ಗೆ ಹೆಣೆದ ಪದ್ಯಗಳಿರಬಹುದು… ಇವುಗಳು ಪದ್ಯಕ್ರಮದಲ್ಲಿ ರಚನೆಯಾಗಿದ್ದರೂ ಇವುಗಳ ಸತ್ವ ಕಥನ ಗುಣವುಳ್ಳದ್ದಾಗಿವೆ. ಪದ್ಯಗಳಾಗಿ ಇವು ಗೆದ್ದಿದ್ದರೂ ಚಕ್ರವರ್ತಿ ಎಲ್ಲೋ ತಮ್ಮನ್ನು ತಾವು ಅಷ್ಟಕ್ಕೆ ಸೀಮಿತಗೊಳಿಸಿಕೊಂಡುಬಿಡುತ್ತಾರಾ ಅನ್ನಿಸದೆ ಇರದು.
*
ಈ ಧಾವಂತದ ನಡುವೆಯೂ ಚಕ್ರವರ್ತಿ ಬಹಳಷ್ಟು ಒಳ್ಳೆಯ ಪದ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿಯ ಬಹಳಷ್ಟು ಪದ್ಯಗಳ ಚರಣಗಳನ್ನು ಪ್ರತ್ಯೇಕವಾಗಿ ಓದಿಕೊಂಡರೂ ಪರಿಪೂರ್ಣವಾಗಿರುವಂತೆಯೇ ಅನ್ನಿಸುವುದು ವಿಶೇಷ.
’ನಾನು’
ಸಮಾಧಿ ಮಾಡಲಾಗದ ಹೆಣ!
~
ಲೋಕದ ಗೋರಿಗಳಿಗೆಲ್ಲ
ಒಂದೇ ಆಕಾರವೇ… ಛೇ!
~
ಗೋರಿಯ ಮೇಲೆ ಅರಳಿದ
ಯಾವ ಹೂವಿಗೂ
ಹೆಣದ ವಾಸನೆ ಇರುವುದಿಲ್ಲ
~
ತುಸು ಹೊತ್ತು ದುಃಖವಾಗಿಯಾದರೂ
ನಿಮ್ಮ ಎದೆಯಲ್ಲಿರುವೆ
~
ಕೂಸೇ ನೀನು
ಔಷಧವಾಗಬೇಕು
ಗಾಯಕ್ಕಲ್ಲ
ನೋವಿಗೆ…
– ಇಂಥಾ ಭಾವ ತೀವ್ರ ಸಾಲುಗಳು ಪ್ರತ್ಯೇಕ ಹೇಳಿಕೆಗಳಾಗಿ ಮನ ಸೆಳೆಯುತ್ತವೆ. ’ಕೋಟಬಲ್’ ಅನ್ನುತ್ತಾರಲ್ಲ, ಹಾಗೆ.
’ಮರೀಚಿಕೆಗಳನ್ನು ಹರಾಜು’ ಕೂಗುವ, ’ಸಾವು ಮತ್ತೆ ಮತ್ತೆ ಹುಟ್ಟಿ’ ಬರುವ, ’ಮೈಥುನವೇ ಲೋಕದ ಶಾಪವಾಗಿ’ ಜನಿಸುವ, ’ಈ ಊರ ಹೆಣವೆಂದರೆ ಜೀವಂತಿಕೆಯ ರುಚಿ’ ಎನ್ನುವ ಇವರ ವಾಕ್ಯ ಪ್ರಯೋಗಗಳು ವಿನೂತನವೂ ವಿಲಕ್ಷಣವೂ ಎನ್ನಿಸುತ್ತವೆ.
*
ಒಟ್ಟಾರೆ ಈ ’ಪಾಪಿಯೊಬ್ಬನ ಪ್ರೇಮ ಪದ್ಯಗಳು’ ಎಲ್ಲ ಬಗೆಯ ಪಾಪವನ್ನೂ ಪ್ರೇಮವನ್ನೂ ನಿವೇದಿಸುವ ಗುಚ್ಛ. ಅಪ್ಪ, ಅಮ್ಮ, ಮಗಳು, ಸಂಗಾತಿ, ಬದುಕು, ಸುತ್ತಲಿನ ಜನ, ವಿದ್ಯಮಾನಗಳು – ಎಲ್ಲವೂ ಇಲ್ಲಿ ಸಂಬಂಧದ ಎಳೆಯಲ್ಲಿ ಪೋಣಿಸಿಕೊಳ್ಳುತ್ತ ಹೋಗುತ್ತವೆ.
ಮೇಕಿಂಗ್ ದೃಷ್ಟಿಯಿಂದಲೂ ವಿಭಿನ್ನವಾಗಿರುವ ಈ ಪುಸ್ತಕವು ಲಯ ಹಿಡಿದು ಓದಲು ಅನುಕೂಲವಾಗುವಂತೆ ರಚಿಸಲ್ಪಟ್ಟಿದೆ. ಈ ಪದ್ಯವನ್ನು ಯಾವ ಧ್ವನಿಯಲ್ಲಿ ಓದಬೇಕು ಎನ್ನುವುದಕ್ಕೆ ದಿಕ್ಸೂಚಿಯಂತೆ ಕವಿಯ ‘ಭಗವದ್ಗೀತೆಯ ಪ್ರಮಾಣ ಹಾಗೂ ಕನ್ಫೆಷನ್ ಬಾಕ್ಸಿನ ಹಂಗು’ಗಳಿಲ್ಲದ ಮುಮ್ಮಾತುಗಳಿವೆ.
99 ರೂಪಾಯಿ ಮುಖಬೆಲೆಯ ’ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)’ ಪುಸ್ತಕ ಸದ್ಯಕ್ಕೆ ಸಪ್ನ ಬುಕ್ ಹೌಸ್ -ಗಾಂಧಿನಗರ, ನವಕರ್ನಾಟಕ ಪಬ್ಲಿಕೇಷನ್ಸ್ , ಆಕೃತಿ ಬುಕ್ ಹೌಸ್ -ರಾಜಾಜಿನಗರ, ಬೆಳಗೆರೆ ಬುಕ್ಸ್ ಅಂಡ್ ಕಾಫಿ -ಗಾಂಧಿಬಜಾರ್, ಸಾಯಿ ಬುಕ್ಸ್ – ಗಾಂಧಿ ಬಜಾರ್ (ವಿದ್ಯಾರ್ಥಿ ಭವನ್ ಪಕ್ಕ), ಅಂಕಿತ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತಿದೆ.
*****
ಪ್ರಭುದ್ದ ಕವನಗಳು ,ವಿಮರ್ಶೆಯೂ ಚಿಂತನಕ್ಕೆ ಮಾಡುವಂತಿದೆ … ಮತ್ತೊಮ್ಮೆ ಓದಬೇಕು … ಬದುಕಿನ ಸತ್ಯಕ್ಕೆ ಕಣ್ತೆರೆಸುವ ಕವನಗಳು … ಚಂದ್ರಚೂಡರದು …
ಹಂಗುಗಳಾಚೆಯ ’ಪಾಪಿ’ ಪದ್ಯಗಳು: ಜ್ಞಾನೇಂದ್ರ ಕುಮಾರ್
’ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)’
– ಇಂಥಾ ಭಾವ ತೀವ್ರ ಸಾಲುಗಳು ಪ್ರತ್ಯೇಕ ಹೇಳಿಕೆಗಳಾಗಿ ಮನ ಸೆಳೆಯುತ್ತವೆ. ’ಕೋಟಬಲ್’ ಅನ್ನುತ್ತಾರಲ್ಲ, ಹಾಗೆ.
’ಮರೀಚಿಕೆಗಳನ್ನು ಹರಾಜು’ ಕೂಗುವ, ’ಸಾವು ಮತ್ತೆ ಮತ್ತೆ ಹುಟ್ಟಿ’ ಬರುವ, ’ಮೈಥುನವೇ ಲೋಕದ ಶಾಪವಾಗಿ’ ಜನಿಸುವ, ’ಈ ಊರ ಹೆಣವೆಂದರೆ ಜೀವಂತಿಕೆಯ ರುಚಿ’ ಎನ್ನುವ ಇವರ ವಾಕ್ಯ ಪ್ರಯೋಗಗಳು ವಿನೂತನವೂ ವಿಲಕ್ಷಣವೂ ಎನ್ನಿಸುತ್ತವೆ.
*
ಒಟ್ಟಾರೆ ಈ ’ಪಾಪಿಯೊಬ್ಬನ ಪ್ರೇಮ ಪದ್ಯಗಳು’ ಎಲ್ಲ ಬಗೆಯ ಪಾಪವನ್ನೂ ಪ್ರೇಮವನ್ನೂ ನಿವೇದಿಸುವ ಗುಚ್ಛ. ಅಪ್ಪ, ಅಮ್ಮ, ಮಗಳು, ಸಂಗಾತಿ, ಬದುಕು, ಸುತ್ತಲಿನ ಜನ, ವಿದ್ಯಮಾನಗಳು – ಎಲ್ಲವೂ ಇಲ್ಲಿ ಸಂಬಂಧದ ಎಳೆಯಲ್ಲಿ ಪೋಣಿಸಿಕೊಳ್ಳುತ್ತ ಹೋಗುತ್ತವೆ.
dr.vinaya.a.s. says:
May 19, 2014 at 8:38 am
ಪ್ರಭುದ್ದ ಕವನಗಳು ,ವಿಮರ್ಶೆಯೂ ಚಿಂತನಕ್ಕೆ ಮಾಡುವಂತಿದೆ … ಮತ್ತೊಮ್ಮೆ ಓದಬೇಕು … ಬದುಕಿನ ಸತ್ಯಕ್ಕೆ ಕಣ್ತೆರೆಸುವ ಕವನಗಳು … ಚಂದ್ರಚೂಡರದು …
ಮೇಲಿನ ಎಲ್ಲಾ ಸಾಲುಗಳನ್ನು ಮರು ಪೇಸ್ಟಿಸಿರುವ ಉದ್ದೇಶವಿಷ್ಟೇ….
ಎಲ್ಲವೂ ನಮ್ಮ ಕಣ್ಣ ಮಂದೆ ಕಾಣುವ ಸತ್ಯದ ತಲೆಯ ಮೇಲೆ ಹೊಡೆದಂತಿವೆ…
It's an awesome effort and support too… keep it up… all of you.
ಉತ್ತಮ ವಿಮರ್ಶೆ. ನಿಜಕ್ಕೂ "ಖಾಲಿ ಶಿಲುಬೆ" ಉತ್ತಮ ಸಂಕಲನ. ಇಲ್ಲಿನ ಸಾಲುಗಳನ್ನ ಓದಿದಾಗ ಅದೆನೋ ಹೊಸ ಅನುಭವ. ಈ ಕೃತಿಯನ್ನ ಬಿಡುಗಡೆಯೂ ಕೂಡ ವಿಶಿಷ್ಟ ಪದ್ದತಿಯಲ್ಲೇ ನಡೆದಿದೆ.ಚಕ್ರವರ್ತಿ ಚಂದ್ರಚೂಡ್ ಅವರಿಗೆ ಅಭಿನಂದನೆಗಳು.
ಪುಸ್ತಕವನ್ನ ಕೋಂಡು ಓದಬೇಕಾಗಿದೆ.