ಸ್ವಾನುಕಂಪ ಇರದಿದ್ದರಷ್ಟೇ ಸಾಕು: ಅಮರ್ ದೀಪ್ ಪಿ.ಎಸ್.

ಮನೆಯಲ್ಲಿ ಕೇಬಲ್ ಕನೆಕ್ಷನ್ ಇಲ್ಲ. ಪುಟ್ಟಿ ಇದೆ. ಅದಕ್ಕೆ ತಿಂಗಳಿಗೊಮ್ಮೆ ಹಸಿವು. ಎರಡು ತಿಂಗಳಿಂದ ಉಪವಾಸ ಹಾಕಿದ್ದೇನೆ.  ಮನೆ ಮಾಳಿಗೆಯಿಂದ ಹೊರ ಕಳಿಸಲು ಯೋಚಿಸುತ್ತಿದ್ದೇನೆ.  ದಿನ ಬೆಳಗಾದರೆ ಒಂದಲ್ಲಾ ಒಂದು ಚಾನಲ್ ತಿರುವುತ್ತಾ ಸುದ್ದಿಗಳಿಂದ ಸುದ್ದಿಗೆ ಹಾರುತ್ತಾ ಮಕ್ಕಳ ಶಾಲೆಗೆ, ನನ್ನ ಕಛೇರಿಗೆ ಸಮಯವಾಗುವ ಹತ್ತಿರಕ್ಕೆ ದಿಗಿದಿಗಿ ಟೀವಿ ಬಿಟ್ಟು ಏಳುವುದು, ಸ್ನಾನ, ತಿಂಡಿಯಾಗಿ, ಬೈಕ್ ಕೀ, ಚಾಳೀಸು ಎತ್ತಿಕೊಂಡು ಹೊರಟರೆ ಅವತ್ತಿನ ಮನೆಯ ಬೆಳಗಿನ ದಿನಚರಿ ಸಮಾಪ್ತಿ.  ಅದಕ್ಕೂ ಮುಂಚೆ ಐದುವರೆ ಆರಕ್ಕೆಲ್ಲಾ ಎದ್ದು, ಡಿ.ಸಿ. ಕಛೇರಿ ಸುತ್ತ ತಿರುಗಿ ಚಿತ್ರಗಳು ಸಿಕ್ಕರೆ ಸೈ, ಸಿಗದಿದ್ದರೂ ರೈಯಾ…. ಒಂದು ರೌಂಡ್ ಹಾಕಿ ಕ್ಯಾಮೆರಾ ಕೆಳಗಿಳಿಸಿದ್ದಾಗಿರುತ್ತೆ. ಆ ದಿನವಿಡೀ ಆಗುವ, ಅಂದುಕೊಂಡ ಕೆಲಸಗಳೆಲ್ಲವನ್ನು ಮಾಡಲಾಗದಿದ್ದರೂ ಹೊತ್ತು ಮುಳುಗಿ ರಾತ್ರಿಯಾಗುತ್ತಲೇ ಆ ದಿನ ಅಂದುಕೊಂಡ ಎಷ್ಟು ಕೆಲಸ ಮಾಡಿದ್ದೇನೆ? ಎಷ್ಟು ಬಿಟ್ಟಿದ್ದೇನೆ?  ಲೆಕ್ಕ ಹಾಕಿ ನೋಡಿ “ಅರೇ ಇಸ್ಕಿ…!” ಅನ್ನಿಸಿದರೆ ಅಲ್ಲಿಗೆ ನನ್ನ ಯೋಗ್ಯತೆ ಗೊತ್ತಾಗಿರುತ್ತೆ. ಇಷ್ಟಾದರೂ ನಾಳೆ ಏನು ಮಾಡಬೇಕೆನ್ನುವುದರ ಬಗ್ಗೆ  ರಾತ್ರಿ ಮಲಗುವ ಮುನ್ನ ಸಣ್ಣ ಪಟ್ಟಿ ಸಿದ್ಧ ಮಾಡುವುದೇನೋ.  ಬೆಳಿಗ್ಗೆ ಆಗುವುದೇನೋ ಎಲ್ಲಾ ಕಲಕಾಮಲಕ. ಬರೀ ಟೀವಿ ನನ್ನ ಸಮಯ ತಿನ್ನುತ್ತದೆಂದು ಬರೀ ಡಿಶ್ ತೆಗೆಸುವುದರಿಂದಲೋ, ಪುಟ್ಟಿ ಕೆಳಗಿಳಿಸುವುದರಿಂದಲೋ ನನ್ನ ದಿನಚರಿ ಬದಲಾಗುವುದಿಲ್ಲ. ಸಮಸ್ಯೆಗೆ ಟಿ.ವಿ ಮಾತ್ರವೇ ಕಾರಣವಲ್ಲ. ದಿನಚರಿ ಬದಲಾಯಿಸಬೇಕಾದವನು ನಾನು. ಬದಲಾಗಬೇಕಾದವನೂ  ನಾನೇ.

ಬೇಸಿಗೆ ದಾಟಿ ಮಳೆಗಾಲಕ್ಕೆ ಹೆಜ್ಜೆ ಇಟ್ಟಾಗಿದೆ.  ರಾತ್ರಿ ಹತ್ತು ದಾಟಿದ ಸಮಯ. ಹೊರಗೆ ಜೋರು ಮಳೆ, ಪವರ್ ಕಟ್. ಯುಪಿಎಸ್ ನಮ್ಮಲ್ಲಿಲ್ಲ. ಚಾರ್ಜರ್ ಬ್ಯಾಟರಿ ಒಂದು ಮೂಲೆಗಿಟ್ಟು ದುಂಡಗೆ ಕೂತು ಮಕ್ಕಳಿಗೆ ಉಣಿಸಿ, ಹೆಚ್ಚು ಬಿಟ್ಟ ಎಡೆ ಇದ್ದ ತಟ್ಟೆಯಲ್ಲೇ ಉಂಡು ಕೈತೊಳೆದುಕೊಂಡೆ. ಅಷ್ಟರಲ್ಲಾಗಲೇ ಹೆಂಡತಿಯೂ ಅವಸರವಸರವಾಗಿ ಉಂಡು ನಿದ್ರೆಗೆ ಜಾರಿದ್ದಳು.  ಬಾಗಿಲ ಅಗುಳಿ ಹಾಕಿ, ಪರದೆ ಕಟ್ಟಿ, ಒಂದ್ ರೌಂಡ್ ಸೊಳ್ಳೆಗಳ ಬೇಟೆಯಾಗಿ ದಿಂಬಿಗೆ ತಲೆಯಾನಿಸಿದೆ. ಪರದೆ ಹೊರಗಿಂದ ಸೊಳ್ಳೆಗಳ ಗಾನ ಸಂಭ್ರಮ. ಒಳಗೆ ಬೆವರು ವಾಸನೆ. ಬೆನ್ನಿಗೆ, ಹೊಟ್ಟೆಗೆ ಮೊಣಕಾಲು ಆನಿಸುತ್ತಾ, ಒದೆಯುತ್ತಾ ಇಬ್ಬರೂ ಮಕ್ಕಳ ಒದ್ದಾಟ.  ಮೂವತ್ತು ವರ್ಷದ ಹುಟ್ಟುಹಬ್ಬ ಕಂಡ ಆರ್.ಆರ್.ಸಿ ರೂಫ್ ದಿಟ್ಟಿಸಿದೆ.  ಅಲ್ಲಲ್ಲಿ ನಮ್ಮಂತೆಯೇ ಕನಸುಗಳನ್ನು ಕೆರೆದುಕೊಂಡು ಗಾಯವಾದಂಥ ಛಾವಣಿಯ ಪದರು. ಹದಿನೈದು ದಿನವಾಗಿಲ್ಲ, ಜಾಡು ತೆಗೆದು. ಆಗಲೇ ಜೇಡ ಬಲೆ ಹೆಣೆದಿದೆ. ಅದದೇ ಆಫೀಸು, ಮನೆ, ಊಟ, ನಿದ್ರೆ, ಹಳೇ ಇಷ್ಟದ ಹಾಡು, ಈಚಿನ ದಿನಗಳಲ್ಲಿ ಹೊಸತೇನು ಕಲಿತೇ? ನೆನಪಿಗೆ ಬರುತ್ತಿಲ್ಲ. ಹೊಸದಾಗಿ ಓದಿದ ಪದ್ಯಗಳು, ಲೇಖನಗಳು ನೆನಪಾದವು. ನನಗ್ಯಾಕೆ ಈ ಥರದ ಬರಹ ದಕ್ಕಿಲ್ಲವೆಂಬುದಕ್ಕೆ ಮತ್ತು ನಾನು ಇತ್ತೀಚೆಗೆ ಹೆಚ್ಚು ಓದಿಗೆ ಒಗ್ಗಿಲ್ಲವೆಂಬುದರ ಕಾರಣವನ್ನು ಅವೇ ಒತ್ತಿ ಹೇಳುತ್ತಿದ್ದವು. ಅಬ್ಬಬ್ಬಾ ಅಂದರೆ ನೋಡಿದ ಸಿನಿಮಾ, ತಿರುಗಿದ ಹೊಸ ಜಾಗಗಳು ನನ್ನನ್ನು ಖುಷಿಯಲ್ಲಿಟ್ಟಿದ್ದವು.

ದಿಂಬಿಗಾನಿಕೊಂಡು ಕಣ್ಣಷ್ಟೇ ಮುಚ್ಚಿದೆ. ಅಪರೂಪಕ್ಕೆ ಒಂದರೆಡು ಸಾಲುಗಳು ಹೊಳೆದವು. ಅವು ಪದ್ಯವಾಗುತ್ತವಾ? ಅದರ ಹಿಡಿತ ನನಗಿಲ್ಲ.  ಅದೇ ಸಾಲುಗಳಿಂದ ಬರಹ ಬರೆಯಬಹುದೆನ್ನಿಸಿತು.  ನನ್ನ ಸುತ್ತಲ ಬದುಕಿನ ಚಿತ್ರಣದ ಅನಿಸಿಕೆಯನ್ನು, ಆ ಕ್ಷಣಕ್ಕೆ ಹೊಳೆದ ಯೋಚನೆಯನ್ನು  ಒಂದು ಕಡೆ ಬರೆದಿಡಲು ಎದ್ದು ಕತ್ತಲಲ್ಲಿ ಹಾಳೆ, ಪೆನ್ನು ಹುಡುಕಿ ಕುರುಡು ಬೆಳಕಿಗೆ ಮುಖ ಮಾಡುವ ಹೊತ್ತಿಗಾಗಲೇ ಪದಗಳೇ ಕಳೆದುಹೋದವು.  ಮತ್ತೆ ದಿಂಬಿಗೆ ತಲೆಯಾನಿತು. ನಿದ್ದೆ ಬರುತ್ತಿಲ್ಲ.  

ನನ್ನ ಸ್ನೇಹಿತರು, ಇಷ್ಟದ ಲೇಖಕರು ಅದೆಷ್ಟು ಚೆಂದಗೆ ಅಂಕಣ ಬರೆಯುತ್ತಾರೆ.  ಸರಳವಾಗಿಯೇ ಪ್ರಸಕ್ತ ಜೀವನದ ಸುತ್ತಲ ಎಳೆಯನ್ನೇ ಬಿಡಿ ಬಿಡಿಸಿ ತಾಕುವಂತೆ ಬರೆದು ಅದರಲ್ಲೊಂದು ಬದಲಾವಣೆ, ಭರವಸೆ ಮತ್ತು ಕಾಳಜಿಯುಕ್ತ ಚಾಚುಹಸ್ತವನ್ನೋ, ಮನೋಸ್ಥೈರ್ಯವನ್ನೋ ಮೆಚ್ಚುಗೆಯನ್ನೋ ನೀಡಲು ಮುಂದಾಗುವಂತೆ ಪ್ರೇರೇಪಿಸಿ ಕೊನೆ ಸಾಲಾಗಿರುತ್ತಾರೆ. 

ನನ್ನ ಸ್ನೇಹಿತರು ನನ್ನ ಕೆಲ ಬರಹಗಳನ್ನು ಓದಿ ಆದಷ್ಟು ಮೊಟಕುಗೊಳಿಸಲು ಸೂಚಿಸಿದವರಿದ್ದಾರೆ. ಮೊನ್ನೆ ಹಿರಿಯರೊಬ್ಬರು ಬರಹ ವರದಿ ಮಾದರಿಯಲ್ಲಿವೆ, ಪ್ರಭಂಧದ ಓದಿನ ಓಘದಿಂದ ವಾಲುವಂತಿರುತ್ತವೆಂದಿದ್ದರು. ನಾನು ಬರೆಯಲು ಆರಂಭಿಸಿದ್ದು ಒಂದು ಸಿದ್ಧ ಮಾದರಿಯ ರೂಪಕ್ಕೆ ಹೊಂದಿಸಿಕೊಂಡು ಸಂದೇಶವನ್ನೋ ಸಾರಂಶವನ್ನೋ ಹೇಳಲು ಬಯಸುವಂಥದ್ದಲ್ಲ.  ಆದರೆ, ನನ್ನ ಅನುಭವವನ್ನು ಬರಹಕ್ಕೆ ಪರಿವರ್ತಿಸಿ ಪರಿಸಮಾಪ್ತಿಗೊಳಿಸುವಂಥದ್ದಷ್ಟೇ ಆಗಿತ್ತು. ಅದರಲ್ಲಿ ಯಾರನ್ನೋ ಉದ್ದೇಶಿಸಿ, ಸಲಹೆ ಕೊಡುವ ಮಟ್ಟಕ್ಕೆ ಅಥವಾ ನನ್ನ ನಿಲುವನ್ನು ಸಮರ್ಥಿಸಿ ಒಪ್ಪಬೇಕೆಂತಲೋ ಅಲ್ಲ. ಆ ಮಟ್ಟಿಗೆ ಈಗಾಗಲೇ ನನ್ನಿಷ್ಟದ ಸಾಕಷ್ಟು ಬರಹಗಾರರು ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ,  ಸಾಮಾನ್ಯನಾಗಿ ನಾನು ಸಲಹೆಗಳನ್ನು ತೆಗೆದುಕೊಳ್ಳುವುದಷ್ಟೇ ಅಲ್ಲದೇ ಅವುಗಳನ್ನು ಪಾಲಿಸುವುದು ಸೌಜನ್ಯದ ಕ್ರಮ.   ನಾನು ಸೌಜನ್ಯದಿಂದ ಇರಬಯಸುತ್ತೇನೆ,  

ಪದಗಳ ಮಿತಿಯನ್ನು ದಾಟದೇ ಬರೆವ ರೂಢಿಯನ್ನು ಅನುಸರಿಸಿದ್ದರೆ ಪ್ರಕಾರವೂ ಹಿಡಿತದ ಬರಹವೂ ಒಲಿಯುತ್ತಿತ್ತೇನೋ. ಒಮ್ಮೊಮ್ಮೆ ನಿರ್ಧಿಷ್ಟ ವಿಷಯದ ಬಗ್ಗೆ ಬರೆಯುವ ಅವಸರದಲ್ಲಿ ಪದಗಳ ಮಿತಿಯನ್ನು ಮೀರಿ, ಸಂಧರ್ಭಗಳ ಅನಾವಶ್ಯಕ ಬಳಕೆ ಮತ್ತು ಲಂಬಿತನಗೊಳಿಸಿದ ಬರಹಗಳು ನನ್ನನ್ನು ದಾಟಿದ ಉದಾಹರಣೆಗಳಿವೆ.  ಬಹುಶ: ಅದೇ ನನ್ನ ದೌರ್ಬಲ್ಯವಿರಬಹುದು. ಅಷ್ಟಕ್ಕೂ ನಾನು ಬರಹಗಾರರ ಸಾಲಿಗೆ ಸೇರಿದವನೇ ಅಲ್ಲ. ಅನಿಸಿಕೆಯನ್ನು ಹಂಚಿಕೊಂಡವರ ಸಾಲಲ್ಲಿರುವವನು. ಬರೀ ಬರವಣಿಗೆಗೊಂದೇ ಅಲ್ಲದೇ ಫೋಟೋಗ್ರಫಿ, ಕಛೇರಿ ಆಡಳಿತ ಕೆಲಸ, ಹಣಕಾಸಿನ ಉಳಿತಾಯಕ್ಕೆ, ಆರೋಗ್ಯದ ಲಕ್ಷ್ಯದೆಡೆಗೆ, ಇನ್ನು ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ನೇರವಾಗಿ, ಬರಹಗಳ ಮೂಲಕ, ಹೀಗೆ ಸಲಹೆ ನೀಡದವರಿಲ್ಲ. ಬಹುಶ: ನನಗೆ ಸಲಹೆ ನೀಡಿದವರೆಲ್ಲರ ಆಶಯಕ್ಕೆ ನಿಲುಕಿದ್ದೇನೋ ಇಲ್ಲವೋ ಅದು ಬೇರೆ ಪ್ರಶ್ನೆ.  ಆದರೆ, ಅವರನ್ನು ಧಿಕ್ಕರಿಸಿದ್ದಂತೂ ಇಲ್ಲ.  ಇವೇ ಮೊದಲಾದ ನನ್ನ ಸ್ವವಿಮರ್ಶೆಗಳು ತಲೆಯಲ್ಲಿ ಹಾದು ಹೋದವು.

ನಾನು ಕಣ್ಣು ಮುಚ್ಚಿ ಎಚ್ಚರದ ಸ್ಥಿತಿಯಲ್ಲಿಯೇ ಇದ್ದರೂ  ಕತ್ತಲೆಯಿಂದ  ಹಾಳೆ, ಪೆನ್ನು, ಕುರುಡು ಬೆಳಕನ್ನು ದಾಟಿ ಇಷ್ಟದ ಲೇಖನ, ಲೇಖಕರು ಪೀಠಿಕೆ, ವಿಷಯ, ಉಪಸಂಹಾರ, ಸಲಹೆ, ಸೌಜನ್ಯದವರೆಗೆ ಹರಿದು ಬಂದ ನನ್ನ ಯೋಚನೆ ಬರಬರುತ್ತಾ ಶಾಂತವಾಯಿತು.  ಕೆಲ ಹೊತ್ತಿನ ಹಿಂದಿದ್ದ ಸೊಳ್ಳೆಗಳ ಗಾನವಿಲ್ಲ. ಪರದೆಯೊಳಗೆ ಬೆವರ ವಾಸನೆಯಿಲ್ಲ.  ಕಣ್ಣು ಬಿಟ್ಟೆ, ಕಿಟಕಿಯಿಂದ ಬೀಸಿದ ತಣ್ಣನೆ ಗಾಳಿ  ಅಲ್ಲೆಲ್ಲೋ ಮೋಡ ಕರಗಿದ ವಾಸನೆ ಸೂಸುತ್ತಿತ್ತು. ಇಲ್ಲೂ ಅಷ್ಟೇ ಉಳಿದಿದ್ದ  ಚೂರು ಸ್ವಾನುಕಂಪದ ಪರದೆಯನ್ನು ಕಳಚಿಟ್ಟ  ನನಗೀಗ ಸಣ್ಣಗೆ ನಿದ್ರೆ ಹತ್ತುತ್ತಿದೆ; ನಿರಾಳವಾಗಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ganesh
ganesh
8 years ago

ಯಾರು ಏನೇ ಹೇಳಲಿ.. ಹೊಗಳಿಕ್ಕೆ ಅಲ್ಲ.. ನಿಮ್ಮ ಬರಹದಲ್ಲಿ ಒಂದು ಹೊಸ ವಸ್ತುಗಳನ್ನು ನೋಡುತ್ತೇನೆ.. ಕಂಡಿದ್ದು ಕಾಣದ್ದು ಎಲ್ಲಾ ಬರುತ್ತವೆ.. ಅದಕ್ಕೆ ಹೇಳಿದ್ದು ಅಲ್ವಾ.. ರವಿ ಕಾಣದ್ದು ಕವಿ ಕಂಡ  ಅಂತ..

 

1
0
Would love your thoughts, please comment.x
()
x