ಈ ಮನುಷ್ಯನಿಗೆ ತಲೆಬಾಗಿ ಹೃದಯಪೂರ್ವಕ ನಮಿಸಬೇಕೆನ್ನಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಮುಂದಾಳು ಆಗಿದ್ದ ಎಂದು ಅಲ್ಲ. ಹೋರಾಡಲು ಆಯ್ದುಕೊಂಡ ಮಾರ್ಗ ಅತ್ಯುನ್ನತವಾದುದು ಆಗಿತ್ತೆಂದು.
ಸ್ವಾತಂತ್ರ್ಯ ಎಂದರೆ ನಾವು ಬಯಸಿದಂತೆ ಬದುಕಲು ಸಾಧ್ಯವಾಗುವದು. ಬದುಕಿನ ಮೇಲೆ ಯಾರ, ಯಾವ ಒತ್ತಡವೂ ಇರದೆ ಬದುಕುವುದು. ಯಾರ ಕಟ್ಟುಪಾಡುಗಳಿಗೆ ದೌರ್ಜನ್ಯಕೂ ಒಳಗಾಗದೆ ಬದುಕುವುದು. ಕಟ್ಟುಪಾಡುಗಳೇನಾದರೂ ಹಾಕಿದರೆ, ಹಿಂಸೆ ಮಾಡಿದರೆ ಮಾನವನು ಬದುಕಲು ತೊಂದರೆಯಾಗುತ್ತದೆ.ಕಟ್ಟುಪಾಡುಗಳು, ಹಿಂಸೆ ಹೆಚ್ಚಿದಂತೆಲ್ಲ ಬದುಕಲು ತೊಂದರೆ ಹೆಚ್ಚಿ,ಉಸಿರುಗಟ್ಟಿದಂತಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ. ಇದೇ ವಾತಾವರಣ ಮುಂದುವರಿದರೆ, ಸಹಿಸಿ ಸಾಕಾಗಿ ಕಟ್ಟುಪಾಡುಗಳನ್ನು ಮುರಿಯಲು ದೌರ್ಜನ್ಯವನ್ನು ವಿರೋಧಿಸಲು ಆರಂಭಿಸುತ್ತಾರೆ, ಹೀಗೆ ವಿರೋಧ, ಪ್ರತಿಭಟನೆಗಳು ಮುಂದುವರಿಯುತ್ತವೆ. ತಮ್ಮ ಮೇಲೆ ಇತರರು ಅಧಿಕಾರ ಚಲಾಯಿಸುವುದನ್ನು, ದೌರ್ಜನ್ಯ ಮಾಡುವುದನ್ನು ಯಾರೂ ಇಷ್ಟಪಡುವುದಿಲ್ಲ.
ಹೀಗೆ ಬ್ರಿಟಿಷರ ದೌರ್ಜನ್ಯದ ವಿರುದ್ಧ ಭಾರತೀಯರು ಹೋರಾಟಕ್ಕೆ ಮುಂದಾದದ್ದು. ಎಲ್ಲಾ ದೇಶದ ಮಾನವ ಇತಿಹಾಸದಲ್ಲಿ ಯುದ್ಧಗಳು ಹಾಸುಹೊಕ್ಕಾಗಿವೆ. ಯುದ್ಧ ಮಾಡಿಯೇ ಸಾಮ್ರಾಜ್ಯ ವಿಸ್ತರಿಸಿದ್ದು, ರಾಜ್ಯ ಕಳೆದಕೊಂಡದ್ದು ,ರಾಜ್ಯ ಮರಳಿ ಪಡೆದದ್ದು., ಅಧಿಕಾರ, ಹೆಣ್ಣು, ಹೊನ್ನನೂ…. ಬ್ರಿಟೀಷರಿಂದ ನಮ್ಮ ದೇಶವನ್ನು ಹಿಂಪಡೆಯಲು, ನಾವು ಸ್ವಾತಂತ್ರ್ಯರಾಗಲು ಯುದ್ಧ ಬಿಟ್ಟು ಬೇರೆ ಆಯ್ಕೆಗಳೇ ಇರಲಿಲ್ಲ. ಯುದ್ಧದ ಪರಂಪರೆಯೇ ಇತಿಹಾಸಕ್ಕಿರುವುದರಿಂದ, ಅದೂ ಯುದ್ಧವನ್ನೇ ಸೂಚಿಸುತ್ತದೆ. ಎಲ್ಲರ ಬಳಿ ಇದ್ದದ್ದು ಯುದ್ಧ ಮಾಡಬೇಕೆಂಬ ಸಿದ್ದ ಉತ್ತರ. ಇದನ್ನು ಬಿಟ್ಟು ಯಾರೇ ಆಗಲಿ ಬೇರೆ ಯೋಚಿಸಲು ಅವಕಾಶವೇ ಇರಲಿಲ್ಲ..ಇಂಥಾ ಸಂದರ್ಭದಲ್ಲಿ ಬೇರೆ ಯೋಚನೆ ಬಂದದ್ದಾರೂ ಹೇಗೆ? ಯೋಚಿಸಿದ್ದಾದರೂ ಏಕೆ ? ಯಾರು?
ಏನನ್ನೇ ಆಗಲಿ ಪಡೆಯಲು ನಾನಾ ದಾರಿಗಳಿರುತ್ತವೆ. ಅದನ್ನು ಯಾವ ಮಾರ್ಗದಿಂದ ಪಡದೆ ಎಂಬುದರ ಮೇಲೆ ಪಡೆದವರನ್ನು ಅಳೆಯಲಾಗುತ್ತದೆ. ಗುರಿ ಮುಟ್ಟಲು ಆಯ್ದುಕೊಳ್ಳುವ ದಾರಿಗಳು, ಅವರವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತವೆ. ಉತ್ತಮ ಮಾರ್ಗ ತುಳಿದವರನ್ನು ಉತ್ತಮರೆನ್ನುತ್ತಾರೆ. ಗುರಿಯಷ್ಟೇ ಮಾರ್ಗವೂ ಮುಖ್ಯ. ಕಷ್ಟಗಳು ಬಂದವೆಂದರೆ ಕೆಲವರು ಮಾರ್ಗ ಬದಲಿಸುತ್ತಾರೆ. ಕೆಲವರು ಎಷ್ಟೇ ಕಷ್ಟಗಳು ಬಂದರೂ ತಾವು ಹಿಡಿದ ಮಾರ್ಗ ಸರಿಯೆಂದು ಅನ್ನಿಸಿದರೆ ಬದಲಿಸಲಾರರು. ಅವರ ತೀರ್ಮಾನ ಎಷ್ಟು ಅಛಲವಾಗಿರುತ್ತದೋ ಅಷ್ಟೇ ಅವರು ಗುರಿ ತಲುಪುವುದೂ ಅವರಿಗೆ ಸ್ಪಷ್ಟವಾಗಿರುತ್ತದೆ. ಈ ಮನುಷ್ಯ ಆಯ್ದುಕೊಂಡದ್ದು ಸತ್ಯಾಗ್ರಹ, ಅಹಿಂಸಾ … ಮಾರ್ಗ. ಈ ಮನುಷ್ಯ ಅನೇಕ ಧರ್ಮ ಗ್ರಂಥಗಳನ್ನು, ಮಹಾನ್ ವ್ಯಕ್ತಿಗಳ ಮಹಾನ್ ಕೃತಿಗಳನ್ನು ಅಧ್ಯಯನ ಮಾಡಿದ್ದರ ಫಲವಾಗಿ ಆ ಕಲ್ಪನೆಗಳು, ಚಿಂತನೆಗಳು ಬಂದವು. ಏಸುಕ್ರಿಸ್ತ, ಬುದ್ಧ,ಮಹಾವೀರ ಮೊದಲಾದವರು ಪ್ರೀತಿ, ಅಹಿಂಸೆಯ ಮೂಲಕ ಗುರಿ ಸಾಧನೆಗೆ ಕರೆ ನೀಡಿದ್ದರು. ಈ ಕಲ್ಪನೆಯನ್ನ ಚಲಾವಣೆಗೆ ತರಲು ಯತ್ನಿಸಿ, ಅದಕ್ಕೊಂದು ತಾತ್ವಿಕ ರೂಪಕೊಟ್ಟು ಅದ್ಭುತ ಮಾನವೀಯ.ಅಸ್ತ್ರವ ಮಾನವ ಕುಲ ಕೋಟಿಗೆ ಕೊಟ್ಟು ಅಸಾಮಾನ್ಯರಾದರು. ಜೂಲು ಧಂಗೆಯ ಪರಿಣಾಮ ಅವರನ್ನು ಯುದ್ಧದಿಂದ ವಿಮುಖನಾಗುವಂತೆ ಮಾಡುವಷ್ಟು ಕಾಡಿತು. " The kingdom of God with in you " ಎಂಬ ಟಾಲ್‌ಸ್ಟಾಯ್ ಗ್ರಂಥದಿಂದ ಅಹಿಂಸ ತತ್ವದ ಬಗ್ಗೆ ದೃಢನಂಬಿಕೆ ಹೊಂದಲು ಸಾದ್ಯವಾಯಿತು. ಜತೆಗೆ ತನ್ನೊಳಗಿರುವ ಮನುಕುಲದ ಬಗೆಗಿನ ಪ್ರೀತಿಯ ಸೆಳೆತ!
ಅಹಿಂಸೆ ಎಂಬ ಪದ ಮೊದಲು ಛಂಧೋಯ ಉಪನಿಷತ್ತಿನಲ್ಲಿ ಕಾಣಸಿಗುತ್ತದೆ.ಜೈನ ಧರ್ಮದ ಸಾರ ಅಹಿಂಸೆಯೇ ಆಗಿದೆ.ಅಹಿಂಸಾ ಪರಮೋ ಧರ್ಮಃ. ಬುದ್ಧ, ಬಾಹುಬಲಿ, ಅಶೋಕ ….. ಅಹಿಂಸೆಯ ಪರಮಾವತಾರಿಗಳಾಗಿದ್ದಾರೆ.ಸಮಾಜದಲ್ಲಿ ಬರುವ ತೊಂದರೆಗಳನ್ನು ಪ್ರೀತಿಯಿಂದ, ತಾವು ನೋವನ್ನನುಭವಿಸುವುದರಿಂದ ಇತರರ ಮನಸ್ಸನ್ನು, ಹೃದಯವನ್ನೂ ಗೆಲ್ಲುವುದರ ಮೂಲಕ ಅವರು ಮಾಡಿದ ತಪ್ಪುಗಳನ್ನು ಅವರಿಗೆ ಅರಿವು ಮಾಡಿಕೊಡುವುದೇ ಅಹಿಂಸೆಯ ಮುಖ್ಯ ಉದ್ದೇಶವಾಗಿದೆ. ಈ ವ್ರತ ಪಾಲಿಸಲು ಹೋದಾಗ ಇದೆಷ್ಟು ಕಠಿಣ ಎಂಬುದು ತಿಳಿಯುತ್ತದೆ.
ಸತ್ಯಾಗ್ರಹದ ಸ್ವರೂಪ ಸ್ಪಷ್ಟವಾಗಿದ್ದರೂ, ಅದನ್ನು ಪ್ರತಿಬಿಂಬಿಸುವ ಪದ ದೊರೆತಿರಲಿಲ್ಲ. ಈ ಮನುಷ್ಯನ ಕೋರಿಕೆ ಮೇರೆಗೆ ' ಸದಾಗ್ರಹ ' ಎಂಬ ಪದವನ್ನು ಸೂಚಿಸಿ ಮಗನಲಾಲಾ ಗಾಂಧಿ ಬಹುಮಾನ ಪಡೆದರು. ' ಸದಾಗ್ರಹ ' ವನ್ನು ಈ ಮನುಷ್ಯ ಸತ್ಯಾಗ್ರಹ ಎಂದು ಬದಲಿಸಿಕೊಂಡು, ಆ ತತ್ವವನ್ನು ವರ್ಣಿಸಲು ತಕ್ಕುದಾಗಿ ಮಾಡಿಕೊಂಡರು. ಸತ್ಯಾಗ್ರಹವೆಂದರೆ ಸತ್ಯಕ್ಕಾಗಿ ಆಗ್ರಹಪಡಿಸುವುದೇ ಸತ್ಯಾಗ್ರಹ. ಸತ್ಯಾಗ್ರಹವೆಂದರೆ ಸತ್ಯಾಗ್ರಹಿ ತಾನಾಗಿ ಕಷ್ಟವನ್ನು ಅನುಭವಿಸುವುದರ ಮೂಲಕ ಅಥವಾ ಇತರರನ್ನು ಪ್ರೀತಿಸುವುದರ ಮೂಲಕ, ಸತ್ಯವನ್ನು ಎತ್ತಿ ಹಿಡಿಯುವುದು. ಅಸಹಕಾರ, ಹರತಾಳ, ಸಾಮಾಜಿಕ ಬಹಿಷ್ಕಾರ, ಪಿಕೆಟಿಂಗ್, ಅಹಿಂಸೆ, ಹಿಜರತ್, ಉಪವಾಸ, ಕಾನೂನು ಭಂಗ ಚಳುವಳಿ, ಕರ ನಿರಾಕರಣೆ ಮುಂತಾದವು ಅಹಿಂಸೆಯಿಂದ ಮಾಡುವ ಸತ್ಯಾಗ್ರಹದ ಮಾರ್ಗಗಳಾಗಿವೆ. ಈ ಮಾರ್ಗಗಳನ್ನು ಅನುಸರಿಸುವುದು ಸಾಮಾನ್ಯರಿಗೆ ಕಷ್ಟ ಸಾಧ್ಯ.
ಶಿಸ್ತು, ತ್ಯಾಗ, ಅಹಿಂಸಾ ತತ್ವ, ಸತ್ಯಾಗ್ರಹ …. ಇವು ಈ ಮನುಷ್ಯ ಹೋರಾಟಕ್ಕೆ ಹಾಕಿಕೊಂಡ ಚೌಕಟ್ಟುಗಳು, ಈ ವ್ರತಗಳ ಸ್ವ ಬಂಧಿಯಾಗಿ, ಪರತಂತ್ರ ಬಂಧನದಿಂದ ವಿಮುಕ್ತನಾಗಲು ಹೋರಾಡಬೇಕಾಯ್ತು. ಇದು ವಿಪರ್ಯಾಸ, ಆದರೂ ಋಜು ಮಾರ್ಗ,ನಾವು ಸ್ವಾತಂತ್ರ್ಯಗಳಿಸಲು ಆಯ್ದುಕೊಂಡ ಮಾನವೀಯ ಶ್ರೇಷ್ಠ ಮಾರ್ಗ.ಈ ಚೌಕಟ್ಟುಗಳ ಮಿತಿ ಹಾಕಿಕೊಳ್ಳದಿದ್ದಲ್ಲಿ ಹೋರಾಡುವ ಅವಕಾಶಗಳು ಹೆಚ್ಚಾಗುತ್ತಿದ್ದವು, ಬೇರೆ ಬೇರೆ ವಿಧದಲ್ಲಿ ಹೋರಾಡಬಹುದಿತ್ತು, ಆದರೆ ಭಾರತ ಈ ಪರಿ ಕೀರ್ತಿಗೆ ಭಾಜನವಾಗುತ್ತಿರಲಿಲ್ಲ.ಮಿತಿ ಹಾಕಿಕೊಂಡಿದ್ದರಿಂದಾಗಿ ಋಜು ಮಾರ್ಗ ಹಿಡಿದ ಪ್ರಯುಕ್ತ ಬಹು ಜನರ ಬಲಿ, ನೋವು, ಅಶಾಂತಿ ತಪ್ಪಿ , ಶಾಂತಿ ನೆಲೆಸುವಂತಾಯ್ತು. ಇಂದು ಹಣ ಗಳಿಸುವುದೇ ಜೀವನದ ಪರಮ ಗುರಿಯೆಂದು, ಬೇಡವಾದ ಮಾರ್ಗಗಳ ಹಿಡಿದು ಹಣ ಗಳಿಸಿ, ನಿಕೃಷ್ಟ ನೀಚ ಬದುಕೇ ಪರಮ ಸುಖವೆಂದು, ಅಮೇಧ್ಯವೇ ಅಮೃತವೆಂದು ಸವಿಯುತ ಬದುಕುತ್ತಿರುವವರಿಗೆ ಹೇಗೆ ಅರ್ಥವಾಗಬೇಕು ಈ ಮಹಾ ಮಾರ್ಗಗಳು, ಮೌಲ್ಯಯುತ ಗುರಿಗಳು, ಈ ಸಾಮಾನ್ಯ ಮನುಷ್ಯನ ಅಸಾಮಾನ್ಯ ಮಾನವ ಪ್ರೇಮ!
* ಕೆ ಟಿ ಸೋಮಶೇಖರ ಹೊಳಲ್ಕೆರೆ,