ಸ್ವಾತಂತ್ರ್ಯೋತ್ಸವದ ಪಾವನ ದಿನ: ಹೊಳಲ್ಕೆರೆ ಲಕ್ಷ್ಮಿವೆಂಕಟೇಶ್

ನಮ್ಮ ದೇಶದ  ಸ್ವಾತಂತ್ರ್ಯೋತ್ಸವದ ಪಾವನ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ !
ಈ  ಹಬ್ಬದ ಆಚರಣೆ ಕೇವಲ ಸಿಹಿ-ತಿಂಡಿ ತಿನ್ನಲು, ಇಲ್ಲವೇ ಮಜಾಮಾಡುತ್ತಾ ಕಾಲಹರಣ ಮಾಡುವುದಕ್ಕಲ್ಲ ಎನ್ನುವುದನ್ನು ನಾವು ಮೊದಲು ತಿಳಿಯಬೇಕು, ಮತ್ತು ಇತರರಿಗೆ ತಿಳಿಸಬೇಕು ಸಹಿತ !

ಬಾಲಗಂಗಾಧರ ತಿಳಕ್, ಗಾಂಧಿ, ನೆಹರು, ಪಟೇಲ್, ಬೋಸ್, ಮತ್ತು ಸಾವಿರಾರು ಜನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ತನುಮನ ಧನಗಳನ್ನು ಒತ್ತೆಯಿಟ್ಟು  ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಆ ಎಲ್ಲಾ ಮಹನೀಯರು ಮಹಿಳೆಯರಿಗೆ ನಾವು ಶಿರಬಾಗಿ ನಮನ ಸಲ್ಲಿಸೋಣ !  ನಮಗೆಲ್ಲಾ ಈ ಸ್ವಾಧೀನತಾ ದಿನ,ಹೊಸ ಶಕ್ತಿಯನ್ನು ಕರುಣಿಸಲಿ. ಸಿಕ್ಕಿರುವ ಸ್ವಾತಂತ್ರ್ಯವನ್ನು ಹೇಗೆ ದಕ್ಕಿಸಿಕೊಂಡು ನಾಗಾಲೋಟದಿಂದ ಓಡುತ್ತಿರುವ ವಿಶ್ವದ ಜೊತೆ ಸಂಧಾನಮಾಡಿಕೊಂಡು ಬದುಕಬೇಕಾದ ಪ್ರಮೇಯವನ್ನು ಕಾಣುತ್ತಿದ್ದೇವೆ. ನಾವೂ ಸಿದ್ಧರಾಗೋಣ !
 
ಬನ್ನಿ; ಮೊದಲು ನಾವು ಇದರ ಮಹತ್ವವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಮಕ್ಕಳೊಡನೆ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. ಈ ‘ಸುದಿನ’ ದಂದು ನಾವು ಅವರ ಹೃದಯದಲ್ಲಿ ದೇಶಪ್ರೇಮ ಬಿತ್ತಿ, ನೀರೆರದು ಬೆಳೆಸಲು ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ಬರಲಿರುವ ೧೫ ನೆಯ ತಾರೀಖಿನ ‘ರಾಷ್ಟ್ರವ್ಯಾಪಿ ಹಬ್ಬ’ಕ್ಕೆ ಮಾನಸಿಕವಾಗಿ ಪೂರ್ತಿಯಾಗಿ ಸಿದ್ಧರಾಗಬೇಕಾಗಿದೆ.

ಅಲೆಗ್ಝಾಂಡರನ ದಾಳಿಯಿಂದ ಹಿಡಿದು ೧೯೪೭ ರ ವರೆಗೆ ಅನೇಕ ‘ವಿದೇಶಿ ಶಕ್ತಿಗಳು’ ನಮ್ಮದೇಶದಮೇಲೆ ಮುತ್ತಿಗೆ ಹಾಕಿ, ಕೊಳ್ಳೆ ಹೊಡೆದು, ಸುಲಿಗೆ ಮಾಡಿ, ಸಂಪತ್ತನ್ನೆಲ್ಲಾ ದೋಚಿಕೊಂಡು ಪಲಾಯಮಾಡಿದ್ದರು. ಇನ್ನು ಹಲವರು ಈ ದೇಶದಲ್ಲೇ ತಳವೂರಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮ ಅಸ್ತಿತ್ವವೇ ಇಲ್ಲವೆನ್ನಿಸುವಂತೆ ಮಾಡಿದರು. ಹೀಗೆ ನಾವು ಶತಮಾನಗಳ ದಾಸ್ಯದ ಹೊರೆಯಿಂದ ನರಳಿ ಬೆಂಡಾಗಿದ್ದೆವು. ಕೊನೆಯ ೨೦೦ ವರ್ಷಗಳು ಬ್ರಿಟಿಷರ ಲೆಖ್ಖಕ್ಕೆ ಸೇರಿವೆ.

೧೫೦ ವರ್ಷಗಳ ಹಿಂದೆಯೇ ನಮ್ಮ ಸೇನೆಯ ‘ಸಿಪಾಯಿ’ಗಳು ಇಂಗ್ಲಿಷ್ ಪ್ರಭುತ್ವವನ್ನು ಪ್ರತಿಭಟಿಸಿ ಹೋರಾಡಿದ್ದರು. ಆದರೆ ದೇಶದಲ್ಲಿ ಸಾಕಷ್ಟು ಬೆಂಬಲ ಸಿಗದೆ ಪ್ರತಿಭಟನೆಯ ಜ್ವಾಲೆ ಆಗಲೇ ನಂದಿತು ! ಮುಂದೆ ತಿಳಕರು, ಗೋಪಾಲಕೃಷ್ಣ ಗೋಖಲೆಯವರು, ದಾದಾಭಾಯಿ ನವರೋಜಿಯವರು, ಗಡಿನಾಡು ಗಾಂಧಿಯವರು, ಮೊದಲಾದವರು ಯುವಕರನ್ನು ಹೋರಾಡಲು ಮಾನಸಿಕವಾಗಿ ತಯಾರುಮಾಡಲು ಶ್ರಮಿಸಿದ್ದರು. ಆದರೆ ಅದು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರ ಫಲಕಾರಿಯಾಗಿದ್ದು ರಾಷ್ಟ್ರದಾದ್ಯಂತ ಹಬ್ಬಲಿಲ್ಲ. ೧೯೨೦ ರ ಹೊತ್ತಿಗೆ ದಕ್ಷಿಣ ಆಫ್ರಿಕದಿಂದ ಒಬ್ಬ ಮಹಾನ್ ಆದರ್ಶವಾದಿ, ಪ್ರಭಾವಿ ಸಂಘಟಕ ಭಾರತಕ್ಕೆ ಬಂದರು. ಸುಮಾರು ೪೭ ವರ್ಷವಯಸ್ಸಿನ, ಬಡಕಲು ಶರೀರದ ಈ ವ್ಯಕ್ತಿ ದೇಶದ ‘ಹೋರಾಟದನೀಲನಕ್ಷೆ’ ಯನ್ನು ಜೊತೆಗೆ ತಂದಿದ್ದರೇನೋ ಅನ್ನಿಸುತ್ತಿತ್ತು. ಭಾರತ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಕೊನೆಯವರೆವಿಗೂ ಎಲ್ಲಾ ಸಂಘರ್ಷಗಳಲ್ಲೂ ತಮ್ಮ ಇಳಿಯ ವಯಸ್ಸಿನಲ್ಲೂ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ತಮ್ಮ ಪರಿವಾರದ ಏಳಿಗೆಯನ್ನೂ ಲೆಕ್ಕಿಸದೆ ಕೇವಲ ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟರು ಅವರೇ ಗುಜರಾತಿನ ‘ಮೋಹನದಾಸ್ ಕರಮಚಂದ್ ಗಾಂಧಿಯವರು ‘ ! ಅವರು ಒಬ್ಬ ಸುಶಿಕ್ಷಿತ ವಕೀಲರು.ದಕ್ಷಿಣ ಆಫ್ರಿಕ ದಲ್ಲಿ ಕೆಲಸ ಮಾಡಿ ಬಂದ ಅವರಿಗೆ ಬಿಳಿಯರ ದೌರ್ಜನ್ಯ, ದಬ್ಬಾಳಿಕೆಗಳ ಕಟು ಅನುಭವವಾಗಿತ್ತು. ಶುದ್ಧ ಚಾರಿತ್ರ್ಯದ, ವಿಶಾಲ ಹೃದಯದ, ಸಮರ್ಥ ಸಂಘಟಕರಾದ ಗಾಂಧಿಯವರು ದೇಶದಾದ್ಯಂತ ಸುತ್ತಿ ತಮ್ಮ ಪ್ರಭಾವದಿಂದ ಎಲ್ಲಾ ವರ್ಗದ ಭಾರತೀಯರನ್ನೂ ಆಕರ್ಶಿಸಿದರು. ಅವರು ಸ್ವಾತಂತ್ರ್ಯದ ಆಂದೋಳನವನ್ನು ನಡೆಸಿಕೊಂದು ಹೋದ ರೀತಿ ಅನನ್ಯ ! ಅವರ ಅಸಂಖ್ಯ ಬೆಂಬಲಿಗರು, ದಿನ ದಿನ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಬೆಳೆಯುತ್ತಲೇ ಹೋದರು. ಇಂತಹ ಹೋರಾಟ ದಶಕಗಟ್ಟಲೆ ಸಮಯದಲ್ಲಿ ನಡೆದು ಅವರ ‘ಸತ್ಯಾಗ್ರಹ’ದಿಂದ ಬ್ರಿಟಿಷ್ ಸರ್ಕಾರ ನಡುಗಿಹೋಯಿತು.
ಕೊನೆಗೆ ಯಾವ ಉಪಾಯವೂ ಕಾಣದೆ ಸಂದರ್ಭದ ಒತ್ತಡಕ್ಕೆ ಮಣಿದು ತೆಪ್ಪಗೆ ದೇಶ ಬಿಟ್ಟು ಕೊಟ್ಟು ಹೋಗಬೇಕಾಗಿ ಬಂತು. ‘ಜಲಿಯನ್ ವಾಲಾ ಹತ್ಯಾಕಾಂಡ’ದ ರಕ್ತ ಪಾತ ವನ್ನು ಮರೆಯಲು ಸಾಧ್ಯವೇ ? ನಮ್ಮಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಗಳಿರಲಿಲ್ಲ. ಹೀಗೆ ಶಾಂತಿಯ ಮಾರ್ಗದಿಂದ ಸಿಕ್ಕ ‘ವಿಜಯದ ಘಟನೆ’ ವಿಶ್ವದ ಇತಿಹಾಸದಲ್ಲಾಗಲೀ ಭಾರತದ ಇತಿಹಾಸದಲ್ಲಾಗಲೀ ಹುಡುಕಿದರು ಸಿಗುವುದು ಕಷ್ಟ !

ಭಾರತದ ಕೊನೆಯ ವೈಸ್ ರಾಯ್, ಮೌಂಟ್ ಬ್ಯಾಟನ್ ನಮ್ಮ ಪ್ರಥಮ ಪ್ರಧಾನಿ ಪಂ.ನೆಹರೂ ರವರಿಗೆ ದೇಶದ ‘ಚುಕ್ಕಾಣಿ’ಯನ್ನು ಒಪ್ಪಿಸಿ ‘ಹಸ್ತಲಾಘ’ ವನ್ನು ಕೊಟ್ಟು ತಮ್ಮ ದೇಶಕ್ಕೆ ನಿರ್ಗಮಿಸಿದ ದೃಷ್ಯ ಬಹುಶಃ ಯಾವ ದೇಷದಲ್ಲೂ ಕಂಡರಿಯದ, ಕೇಳರಿಯದ ಸಂಗತಿಯಾಗಿದೆ ! ಇದನ್ನು ‘ಸುವರ್ಣಾಕ್ಷರಗಳಲ್ಲಿ’ ಬರೆಯಬಹುದೇನೋ !

ಆ ಸಮಯದಲ್ಲಿ ನಮ್ಮ ‘ರಾಷ್ಟ್ರಪಿತ, ಮಹಾತ್ಮಾ ಗಾಂಧಿ’ಯವರು ಉಪಸ್ಥಿತರಾಗಲು ಸಾಧ್ಯವಾಗಲಿಲ್ಲ ! ಅವರು ಬಂಗಾಳದ ಕೊಮುವಾರು ಸಂಘರ್ಷದಲ್ಲಿ, ಉಭಯತ್ರರಿಗೂ ಮನಒಲಿಸಲು ‘ಸತ್ಯಾಗ್ರಹ’ ಕೈಗೊಂಡಿದ್ದರು !

ಈ ತರಹದ ‘ಶಕ್ತಿ’ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುಲಭವಾಗಿ ‘ಹಸ್ತಾಂತರ’ ವಾಗಲು ಕಾರಣ, ಮಹಾತ್ಮ ಗಾಂಧಿಯವರ ‘ಅಮೋಘವ್ಯಕ್ತಿತ್ವ’ ಮುಂದಾಳುತನ, ಮತ್ತು ಅವರು ನಂಬಿದ ಅದರ್ಶಗಳು, ನಡೆಸಿಕೊಂಡು ಬಂದ ರೀತಿ, ಮತ್ತು ಅವರ ‘ಕಾರ್ಯ ವೈಖರಿಗಳೆ’ ಕಾರಣ ! ಅವರ ಹಿಂಬಾಲಕರುಗಳು ಗಾಧಿಯವರ ತತ್ವಗಳನ್ನು ಮೈಗೂಡಿಸಿಕೊಂಡಿದ್ದರು.ಅವರಿಗೆ ವಿರುದ್ಧವಾಗಿ ಎಂದೂ ಹೊಗಲಿಲ್ಲ !
ಈ ದಿನ, ಅಂತಹ ಮಹಾನುಭಾವರುಗಳ ದೇಶಪ್ರೇಮ,ತ್ಯಾಗಗಳನ್ನು ಸ್ಮರಿಸಿಕೊಂಡು ಅದರಂತೆ ನಡೆದು ನಮ್ಮದೇಶವನ್ನು ಮುಂದೆ ತರಬೇಕಾಗಿದೆ !

ಇಂದಿನ ಆತಂಕವಾದ,
ದೇಶದಲ್ಲಿನ ಆದರ್ಶಗಳ ಕೊರತೆ,
ಲಂಚಕೋರತನ,
ಅಸಮಾನತೆಗಳನ್ನು ನಿರ್ಮೂಲಮಾಡಲು ಪ್ರತಿಜ್ಞೆ ಮಾಡಬೇಕಾಗಿದೆ !
ಇವೆಲ್ಲಾ ಯಶಸ್ವಿಯಾಗಿ ನಡೆಯಬೇಕಾದರೆ ‘ನಮ್ಮ ಯುವ ಪೀಡಿ’ ಮತ್ತು ‘ಮಕ್ಕಳನ್ನು’ ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗುವುದು ಅತಿಮುಖ್ಯ. ಅವರ ಮುಂದಿನ ಬಾಳನ್ನು ಹಸನಾಗಿಸಲು ‘ಸದೃಢ’ ಗೊಳಿಸಲು ‘ಪಂಚತಂತ್ರ’, ‘ದಶತಂತ್ರ’, ‘ಶತತಂತ್ರಗಳ’ ನ್ನು ಬೋಧಿಸ ಬೇಕಾಗಿದೆ. ಈಗಿನ ‘ಸ್ಪರ್ಧಾತ್ಮಕ’ ಜೀವನದಲ್ಲಿ ಎಷ್ಟು ಕಲಿತರೂ ಕಡಿಮೆಯೇ !

ಹಿರಿಯರಾದ ನಾವು, ನಮ್ಮ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆ ಕಳೆಯಬೇಕು. ಜಾಗರೂಕತೆಯಿಂದ, ಮೊದಲು “ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು” ಬಹಳ ಮುಖ್ಯ ! ನಂತರ, ಅವರ ಜೀವನದ ಮಾರ್ಗದಲ್ಲಿ ‘ಕೈಮರ’ವಾಗಿ ನಿಲ್ಲಬೇಕಾದದ್ದು ಅನಿವಾರ್ಯವಾಗಿದೆ.

ನನ್ನ ದೃಷ್ಟಿಯಲ್ಲಿ ಮೊಟ್ಟಮೊದಲು ನಮ್ಮನ್ನು ನಾವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗದೆ ನಿಯಂತ್ರಿಸಿಕೊಳ್ಳುವುದು, ಒಳ್ಳೆಯ ಜೀವನಕ್ಕೆ ತಯಾರು ಮಾಡಿಕೊಳ್ಳುವ ಅಗತ್ಯ ಬಂದಿದೆ. ಎಲ್ಲಕ್ಕಿಂತ ಮೊದಲು ನಮ್ಮ ಮುಂದಿನ ಜನಾಂಗ ಮಕ್ಕಳೇ ಅಲ್ಲವೇ ಅವರನ್ನು ತಯಾರುಮಾಡಿ ಸಿದ್ಧಗೊಳಿಸುವುದು ಅತಿ ಪ್ರಮುಖ ವಾದ ಹೆಜ್ಜೆಗಳಲ್ಲೊಂದು :

೧. ಪ್ರತಿವರ್ಷದ ಆಗಸ್ಟ್ ೧೫ ರಂದು ಮನೆಯಲ್ಲಿ, ನಮ್ಮ ಯುಗಾದಿ, ದೀಪಾವಳಿಯ ತರಹ ಸ್ವಾತಂತ್ರ್ಯದ ದಿನವನ್ನೂ ಹಬ್ಬದಂತೆ ಆಚರಿಸಬೇಕು.
೨. ಆ ದಿನ ತಪ್ಪದೆ ಮಕ್ಕಳ ಜೊತೆ, ‘ಗಾಂಧಿಯವರ ಸ್ವಾತಂತ್ರ್ಯ ಸಂಗ್ರಾಮದ ಚಿತ್ರ’ವನ್ನು  ಖಡ್ಡಾಯವಾಗಿ ನೋಡಬೇಕು. ನಂತರ, ಚಿತ್ರದ ಬಗ್ಗೆ ಅವರು ಕೇಳುವ ಪ್ರಶ್ನೆ ಗಳಿಗೆ ಸಮರ್ಪಕವಾಗಿ ಉತ್ತರಿಸ ಬೇಕು.ಆಮೆಲೆ ಅವರ ತಿಳುವಳಿಕೆಯ ಮಟ್ಟಕ್ಕೆ ಸರಿಯಾಗಿ ಸಾಂದರ್ಭಿಕ ಸನ್ನಿವೇಷಗಳನ್ನು ‘ಕಥೆ’ಯ ರೂಪದಲ್ಲಿ ಅವರಿಗೆ ತಿಳಿಯಹೇಳ ಬೇಕು.
೩. ನಾವು ವೀಕ್ಷಿಸುವ ‘ಟೀವಿ’ ಕಾರ್ಯಕ್ರಮಗಳ ಮೇಲೆ ಹಿಡಿತ ಅತಿ ಮುಖ್ಯ ! ಇಲ್ಲಿ ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು ಅತಿ ಮುಖ್ಯ ! ತಂದೆ ತಾಯಿಗಳು ಸಮಾಲೊಚಿಸಿ ಮಕ್ಕಳಿಗೆ ಏನು ತೊರಿಸ ಬೇಕು,ಎಷ್ಟು, ಎನ್ನುವುದನ್ನು ನಿರ್ಧರಿಸಬೇಕು. ಮಕ್ಕಳಿಲ್ಲದಿದ್ದಾಗ ಬೇರೆ ಕಾರ್ಯಕ್ರಮಗಳನ್ನು ನೋಡಬಹುದು !
೪. ಮನೆಯಲ್ಲಿ ಅವರ ಜೊತೆ ಖಡ್ಡಾಯವಾಗಿ ಕನ್ನಡದಲ್ಲೇ (ಮಾತೃಭಾಷೆ)ಮಾತನಾಡಬೇಕು. ಅವರಿಗೆ ಅದರಲ್ಲಿ ಓದಲು,ಬರೆಯಲು ಕಲಿಸಬೇಕು. ಸ್ವಲ್ಪ ದೇಹಕ್ಕೆ ಪೆಟ್ಟಾದರು ‘ಅಮ್ಮಾ’
ಎಂದು ಚೀರುವಷ್ಟು ಭಾಷೆ ಬೇಕು. ‘ಮಾತೃಭಾಷೆ’ಯಲ್ಲಿ ಯೊಚಿಸುವುದನ್ನು ಕಲಿಸಲೇ ಬೇಕು.
೫. ನಮ್ಮ ದೇಶದ ಸಂಸ್ಕೃತಿಯ ಪರಿಚಯ ಅವರಿಗೆ ಬೇಕು. ಸಂಗೀತ,ನೃತ್ಯ,ಕಲೆಯ ಪರಿಚಯ ಸಾಧ್ಯವಾದಾಗಲೆಲ್ಲಾ ಮಾಡಿಸಬೇಕು.
೬. ನಮ್ಮ ಮಕ್ಕಳು ‘ಅತ್ಯಾಧುನಿಕ ಉಡುಪು’ ಧರಿಸಲಿ, ಅತ್ಯಾಧುನಿಕ ‘ತಂತ್ರಜ್ಞಾನ’ ಪಡೆಯಲಿ. ಆದರೆ ಹೃದಯದಲ್ಲಿ ಭಾರತೀಯತೆ ತುಂಬಿರಲಿ !
೭. ಬೇರೆ ಭಾಷೆ, ನಡವಳಿಕೆ, ‘ಸಹಬಾಳ್ವೆ’ ಯಿಂದ ಬಂದೇಬರುತ್ತೆ. ಯೋಚಿಸುವುದು ಬೇಡ.
೮. ನಾವು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ “ಹೆಚ್ಚು ಹೆಚ್ಚು ಆಶೆಬುರುಕರಾಗೋಣ” ! ಮೇಲೆ ತಿಳಿಸಿದ ಎಲ್ಲಾ ‘ವಿಶೇಷ ಗುಣಗಳು’ ನಮ್ಮ ಮಕ್ಕಳಲ್ಲಿ ಮೇಳೈಸುವಂತೆ ಗಮನ ಹರಿಸೋಣ !
-ಭಾರತ್ ಮಾತಾ ಕಿ ಜೈ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
h.r.l.venkatesh
3 years ago

This is a good magazine. Users friendly and easy to operate. Best of luck.

1
0
Would love your thoughts, please comment.x
()
x