ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಹಚ್ಚಿದ ಸ್ವಾತಂತ್ರ್ಯದ ಕಿಚ್ಚು ಈಗ ಯಾವ ಆಳ-ಅಗಲಕ್ಕೆ ಹಬ್ಬಿದೆ ಎಂಬುದನ್ನು, ಸ್ವತಂತ್ರ ಭಾರತ ಜನನದ ಮಹಾಮಹೋತ್ಸವಕ್ಕೆಂದು ಇಂದು ನಾವು ಹಚ್ಚುವ ೬೭ ಹಣತೆಗಳ ಬೆಳಕಿನಲ್ಲಿ ಒಮ್ಮೆ ನಿಟ್ಟಿಸಿ ನೋಡುವುದು ಒಳಿತು. ಅಂದು ರಾಷ್ಟ್ರಸ್ವಾತಂತ್ರ್ಯಕ್ಕೆಂದು ಎಬ್ಬಿಸಿದ್ದ ಆ ಕಿಚ್ಚು ತಡವಿಲ್ಲದೇ ರಾಜ್ಯಸ್ವಾತಂತ್ರ್ಯಗಳೆಡೆಗೆ ತಿರುಗಿ, ಎಲ್ಲ ರಾಜ್ಯಗಳೂ ತಂತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡತೊಡಗಿದವು. ೧೯೫೬ರಲ್ಲಿ ಪುನರ್ವಿಂಗಡನೆಯ ಕಾರಣ ಕೇವಲ ಹದಿನಾಲ್ಕು ಆಗಿದ್ದ ರಾಜ್ಯಗಳ ಸಂಖ್ಯೆ ಇಂದು ಇಪ್ಪತ್ತೊಂಬತ್ತಾಗಿದೆ. ಬೋಡೋಲ್ಯಾಂಡ್, ಗೋರ್ಖಾಲ್ಯಾಂಡ್, ಪೂರ್ವಾಂಚಲ, ಬುಂದೇಲ್‌ಖಂಡ್, ವಿಂಧ್ಯದೇಶ, ವಿದರ್ಭ ಮತ್ತು ಕರ್ನಾಟಕದೊಳಗೇ, ಉತ್ತರಕರ್ನಾಟಕ, ಕೊಡವಸೀಮೆ, ತುಳುನಾಡು ಮುಂತಾದ ಸ್ವತಂತ್ರ ರಾಜ್ಯಗಳ ಸ್ಥಾಪನೆಗೆ ಈಗಾಗಲೇ ಕೂಗೆದ್ದಿದ್ದು, ಭಾರತದ ನೂರನೇ ಆಗಸ್ಟೋತ್ಸವದ ವೇಳೆಗೆ (೨೦೪೭) ಮತ್ತೆ ಅದೇ ಚಂದಮಾಮ ಕಥೆ ಕಾಲದ ಛಪ್ಪನ್ನ (೫೬) ರಾಜ್ಯಗಳ ವ್ಯವಸ್ಥೆಗೆ ನಾವು ತಲುಪುವ ಉಜ್ವಲ ಸಾಧ್ಯತೆಯಿದೆ. ಆಗ ಬರುವ ನವೀಕರಿತ ಭೂಪಟದಲ್ಲಿ, ಅಂಗ, ವಂಗ, ಕಳಿಂಗ, ತೆಲುಂಗ, ಕೊಂಗ ಮುಂತಾದ ಹೆಸರುಗಳ ಬದಲು, ಉತ್ತರೋತ್ತರ ಪ್ರದೇಶ್, ವರುಣಾಚಲ್, ಪಶ್ಚಿಮ್‌ಖಂಡ್, ಮಹಾವಾಯುವ್ಯರಾಷ್ಟ್ರ, ತೆಂಕನಾಡು, ಆಗ್ನೇಯಸೀಮಾ, ಡೆಕ್ಕನ್ ಲ್ಯಾಂಡ್ ಮುಂತಾದ ನವ್ಯನಾಮಗಳು ಕಾಣಬಹುದು; ಅಷ್ಟೇ ವ್ಯತ್ಯಾಸ. [ಭಾರ್ಯಾವರ್ತ, ದೀನಾಚಲ್, ಮೂರ್ಖಾಲ್ಯಾಂಡ್, ಶ್ರೀಖಂಡ್, ನಿರುತ್ತರಪ್ರದೇಶ್ ಅಥವಾ ಪ್ರಶ್ನಪ್ರದೇಶ್ ಎಂಬ ವಿಶಿಷ್ಟ ರಾಜ್ಯಗಳನ್ನೂ ಅಗತ್ಯಾನುಸಾರ ರಚಿಸಿಕೊಳ್ಳಬಹುದು; ಕೆಲವು ಹೊಸ ರಾಜ್ಯಗಳಿಗೆ ರಾಜಕಾರಣಪುರುಷರ ದಿವ್ಯನಾಮಗಳನ್ನು ಇಡುವುದಂತೂ ಇದ್ದೇ ಇದೆ.]
ಸ್ವತಂತ್ರ ವಿಶಾಲಾಂಧ್ರವು ಸ್ವತಂತ್ರ ತೆಲಂಗಾಣವನ್ನು ಹೆತ್ತು, ಸ್ವಾತಂತ್ರ್ಯವು ಹೇಗೆ ಒಮ್ಮೆಲೇ ದ್ವಿಗುಣವಾಯಿತು ಎಂಬುದನ್ನು ನಾವೆಲ್ಲರೂ ಮೊನ್ನೆಮೊನ್ನೆ ನೋಡಿದ್ದೇವೆ. ಈಗ ಹೈದರಾಬಾದ್‌ನ ವಶಕ್ಕಾಗಿ ಈ ಎರಡು ನವನಿರ್ಮಿತ ರಾಜ್ಯಗಳ ನಡುವೆ ಶುರುವಾಗಿರುವ ತಿಕ್ಕಾಟವನ್ನು ನೋಡಿದರೆ, ಅದರಿಂದಾಗಿ ನಾಳೆ ಹೈದರಾಬಾದ್ ಎಂಬ ಸ್ವತಂತ್ರ ರಾಜ್ಯವೊಂದೇ ಉದ್ಭವಿಸಬಹುದೆನಿಸುತ್ತದೆ. ವಿವಾದ ವಿಪರೀತವಾದರೆ, ಬೆಳಗಾವಿಯೂ ಇದೇ ಘನ ಸ್ವತಂತ್ರ ಹಾದಿಯನ್ನು ಹಿಡಿದು, ನಾಳೆ ಬೆಳಗಾಂವ್‌ಸ್ತಾನ್ ಹುಟ್ಟಿಕೊಳ್ಳಬಹುದು.
ಇನ್ನು ಜಿಲ್ಲಾಮಟ್ಟ ಸ್ವಾತಂತ್ರ್ಯವನ್ನಂತೂ ಬಿಟ್ಟೇಬಿಡಿ. ಜಿಲ್ಲೆಗಳನ್ನು ಕಂಡಲ್ಲಿ ತುಂಡು ಮಾಡಿ, ಯಾರು ಯಾವಾಗಲಾದರೂ ಸ್ವಾತಂತ್ರ್ಯ ನೀಡಬಹುದಾಗಿದೆ. ನಾವು ನೋಡುತ್ತಿದ್ದಂತೆಯೇ ಹತ್ತೊಂಬತ್ತಿದ್ದ ಕರ್ನಾಟಕ ಜಿಲ್ಲೆಗಳು ಈಗ ಹೇಗೆ ಇಪ್ಪತ್ತೆಂಟಾಗಿ ಹರಡಿ ಕೂತಿವೆ, ನೋಡಿ.
ಈಗ ಏನಿದ್ದರೂ ಉಳಿದಿರುವುದು ರಾಜ್ಯಗಳಿಗೆ ಕೇಂದ್ರದಿಂದ ಸ್ವಾತಂತ್ರ್ಯ, ಕೇಂದ್ರಕ್ಕೆ ನ್ಯಾಯಾಂಗ-ಶಾಸಕಾಂಗಗಳಿಂದ ಸ್ವಾತಂತ್ರ್ಯ, ಜಿಲ್ಲೆಗಳಿಗೆ ರಾಜ್ಯದಿಂದ ಸ್ವಾತಂತ್ರ್ಯ, ಪಾಲಿಕೆ-ಪಂಚಾಯ್ತಿಗಳಿಗೆ ಪ್ರಜೆಗಳಿಂದ ಸ್ವಾತಂತ್ರ್ಯ, ಮತ್ತು ಎಲ್ಲ ಮಟ್ಟದ ಸರ್ಕಾರಗಳಿಗೂ ಕರ್ತವ್ಯ-ಜವಾಬ್ದಾರಿಗಳಿಂದ ಶುದ್ಧ ಸ್ವಾತಂತ್ರ್ಯ. ಅಂತೆಯೇ, ಉಳ್ಳವರೆಲ್ಲರಿಗೂ, ಬೇರೆಲ್ಲರ ಸ್ವಾತಂತ್ರ್ಯವನ್ನು ಕಸಿಯುವ ಸ್ವಾತಂತ್ರ್ಯ ಮತ್ತು ಕಾನೂನುಕಟ್ಟಳೆಗಳಿಂದ ಪೂರ್ಣ ಸ್ವಾತಂತ್ರ್ಯ. ಜೊತೆಗೆ, ಬಹುತುರ್ತಾಗಿ, ಇಡೀ ದೇಶಕ್ಕೆ ಇಂಗ್ಲಿಷ್ ಭಾಷೆಯಿಂದ ಪೂರ ಸ್ವಾತಂತ್ರ್ಯ!
ಭಾರತದಲ್ಲೀಗ ಸ್ವಾತಂತ್ರ್ಯದ ಕಾಡ್ಗಿಚ್ಚು ಯಾವ ಪರಿಯಲ್ಲಿ ಹಬ್ಬುತ್ತಿದೆಯೆಂದರೆ, ಈಚೆಗೆ ಕೆಲವು ಹೊಸಹೊಸ ಸ್ವಾತಂತ್ರ್ಯಾವತಾರಗಳು ಹೊರಹೊಮ್ಮಹತ್ತಿವೆ. ರೇಪಾತುರ-ರೇಪಾತ್ಮ (ಚೈಲ್ಡ್ ಸ್ಪೆಶಲಿಸ್ ಕಾಮಿಗಳೂ ಸೇರಿದಂತೆ) ಜನಸಾಂದ್ರತೆಯು ಉಬ್ಬುತ್ತಿದ್ದಂತೆ, ರೇಪ್ ಎಂಬುದು ಗ್ರೇಪ್ ಜ್ಯೂಸ್ ಕುಡಿಯುವಷ್ಟು ಸಾಮಾನ್ಯವಾಗಿ, ಗ್ಯಾಂಗ್‌ರೇಪ್ ಎಂಬುದು ನಮ್ಮ ಪ್ರಮುಖ ರಾಷ್ಟ್ರೀಯ ತಂಡಕ್ರೀಡೆಯಾಗಿ, ರೇಪ್ ಸ್ವಾತಂತ್ರ್ಯವೂ ಒಂದು ಹಕ್ಕಾಗಿ ಮಾನ್ಯವಾಗುತ್ತಿದೆ.
[ಗ್ಯಾಂಗ್‌ರೇಪ್ ಸಾಂಕ್ರಾಮಿಕವು ಗ್ಯಾಂಗ್ರೀನ್ ಮಾದರಿಯಲ್ಲಿ ನಮ್ಮ ಸಮಾಜವನ್ನು ಕೊಳೆಸುತ್ತಿರುವಂತೆ, ಮೂವತ್ತು ನಿಮಿಷಕ್ಕೆ ಒಂದು ರೇಪ್ ಎನ್ನುವುದು ಒಂದು ನಿಮಿಷಕ್ಕೆ ಮೂವತ್ತು ರೇಪ್ ಆಗಬಹುದೆಂಬ ಆಘಾತಕರ ಸೂಚನೆಯು ರೇಪ್‌ರೆಕಾರ್ಡರ್‌ನಲ್ಲಿ ಫ಼್ಲ್ಯಾಶ್ ಆಗುತ್ತಿರುವಂತೆ, ರೇಪಾತುರಾಣಾಂ ನ ಭಯಂ ನ ಲಜ್ಜಾಃ ಎಂಬ ಆತಂಕವಾಕ್ಯ ಸುತ್ತಲೆಲ್ಲ ಗುಡುಗುತ್ತಿರುವಂತೆ, ರೇಪ್ ನಿಯಂತ್ರಣಕ್ಕಾಗಿ ಎಲ್ಲೆಡೆ ಬೊಬ್ಬೆಯೆದ್ದಿದೆ. ಈ ವಿಷಮಸ್ಥಿತಿಯಲ್ಲಿ, ರೇಪ್ ಜ್ಞಾನಿ-ವಿಜ್ಞಾನಿಗಳ ತಂಡವೊಂದು ಈ ಸಮಸ್ಯೆಯನ್ನು ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಿಸಿ, ಪ್ರಾಯೋಗಿಕ ಪರಿಹಾರವನ್ನು ಸೂಚಿಸುವಂತಾದರೆ ಉಪಯುಕ್ತವಾಗುವುದಲ್ಲವೇ? ಆದರೆ, ಇಂಥ ತಂಡದ ಸದಸ್ಯರಲ್ಲಿ ಸ್ತ್ರೀಯರು-ಪುರುಷರು ಇಬ್ಬರೂ ಇದ್ದಲ್ಲಿ, ಅವರ ನಡುವೆಯೇ ಏನಾದರೂ ಎಡವಟ್ಟು ಅಥವಾ ಹಗರಣ ಜರುಗಿದರೆ?!]
ಈ ಚಿಂತನೆಯಲ್ಲಿ, ನಮಗೆ ಸನಾತನ ವರದಾನವಾಗಿರುವ ಲಂಚ ಸ್ವಾಹಾತಂತ್ರ್ಯವನ್ನು ಹೇಗಾದರೂ ಮರೆಯಲಾದೀತು? ಭಾರತದ ’ಕೋಲ್‌ಗೇಟ್ ಸ್ಮೈಲ್ನಿಂದಾಗಿ ಇಂದು ಜಗತ್ತಿನಲ್ಲಿಡೀ ನಗೆ ಹರಡಿಲ್ಲವೇ?
ಇಷ್ಟಾದರೂ, ಈ ಸ್ವಾತಂತ್ರ್ಯವನ್ನೂ ಅಧಿಕೃತವಾಗಿ ಗೌರವಿಸುವ ಕನ್ನ ಭಾಗ್ಯ ಮಾದರಿ ಕಲ್ಪನಾಶೀಲ ಯೋಜನೆಗಳು ಅದೇಕೆ ಇನ್ನೂ ಜಾರಿಯಾಗಿಲ್ಲವೋ ತಿಳಿಯದು.
ಇಲ್ಲಿಗೇ ಮುಗಿಯಿತೇ? ಓಟಿಗಾಗಿ ಜನರನ್ನು ಉದ್ರೇಕಿಸುವ ಟಾಕ್ ಸ್ವಾತಂತ್ರ್ಯ, ಪಾದಚಾರಿಗಳ ಮೇಲೆ ಮೋಟರುಗಳನ್ನೇರಿಸಿ ಪರರ ವಾಕ್ ಸ್ವಾತಂತ್ರ್ಯಕ್ಕೆ ಸಂಚಕಾರ ತರುವ ಸ್ವ-ಸಂಚಾರ ಸ್ವಾತಂತ್ರ್ಯ, ಎಲ್ಲೆಂದರಲ್ಲಿ ಅಂತರ್ಜಲವನ್ನು ಚೆಲ್ಲುವ ಬಯಲು ಶೌಚಾಲಯ ಸ್ವಾತಂತ್ರ್ಯ, ಶೋಷಿತ-ದುಃಖಿತ-ವಂಚಿತ ಎಂದುಕೊಳ್ಳುವ ಪ್ರಜೆಗಳಿಗೆ, ಹೆದ್ದಾರಿಯನ್ನು ಅಡ್ಡಗಟ್ಟುವ ಸಂಚಾರಭಂಗ ಸ್ವಾತಂತ್ರ್ಯ, ಇಡೀ ಇಂಡಿಯಾದ ನಾಡಿಬಡಿತವನ್ನೇ ತಡೆದುನಿಲ್ಲಿಸಲು, ಅತಂತ್ರ-ಜ್ಞರಿಗೆ ಅಮಿತ ಹರತಾಳ ಸ್ವಾತಂತ್ರ್ಯ, ಬೇಸತ್ತ-ಅರೆಸತ್ತ ರೈತರಿಗೆ ಆತ್ಮಹತ್ಯಾ ಸ್ವಾತಂತ್ರ್ಯ, ’ನೀತ್ಯತೀತ ಜಾತಿ-ಅತೀವತೆ’ಯನ್ನು ಚಲಾಯಿಸುವ ಸ್ವಾತಂತ್ರ್ಯ, ಫ಼ತ್ವಾ ಅಥವಾ ಖಾಪ್ ಕಟ್ಟೆನ್ಯಾಯಗಳನ್ನು ಜಾರಿಗೊಳಿಸುವ ಸ್ವಾತಂತ್ರ್ಯ, ಕ್ರಿಸ್ತಪೂರ್ವ ೧೯೪೭ ಆಗಸ್ಟ್ ೧೫ರ ವೇದವೈಭವದಿನಕ್ಕೆ ಭಾರತರಥವನ್ನು ’ಹಿಂದೂ’ಡುವ ಸ್ವಾತಂತ್ರ್ಯ, ಶಾಸಕರಿಗೆ ಶಾಸನಸಭೆಗಳಲ್ಲಿ ದುಃಶಾಸನರಾಗುವ ಅಥವಾ ಶಾಶ್ವತವಾಗಿ ಗೈರುಹಾಜರಾಗುವ ಸ್ವಾತಂತ್ರ್ಯ … ಹ್ಞಾ, ಹೌದು, ಹೆಣ್ಣಾಗುವುದೆಂದಾದಲ್ಲಿ, ಕೂಸು ಹುಟ್ಟುವ ಮುಂಚೆಯೇ ಕುಡಿಯನ್ನು ಚಿವುಟಿ ಬಿಸಾಡುವ ಲಿಂಗ ನಿರ್ಧಾರಣ-ನಿರ್ವಾಚನ ಸ್ವಾತಂತ್ರ್ಯ, ಈ ಪಟ್ಟಿಯು ಬಡಪೆಟ್ಟಿಗೆ ಮುಗಿಯದು.
ಸಾರ್ವಜನಿಕ ಜೀವನದರ್ಶನವನ್ನು ಬದಿಗಿಟ್ಟು, ನಮ್ಮ ಕುಟುಂಬಗಳೊಳಕ್ಕೂ ಒಂದು ಘಳಿಗೆ ಇಣುಕಿದರೆ, ಅಲ್ಲಿ ಕಾಣಸಿಗುವುದೂ ಮತ್ತೆ ಅದೇ ದೃಶ್ಯ: ಯುವದಂಪತಿಗಳಿಗೆ ವೃದ್ಧತಾಯಿತಂದೆಯರಿಂದ ಸ್ವಾತಂತ್ರ್ಯ, ಹೆಂಡತಿಗೆ ಗಂಡನಿಂದ ಹಾಗೂ ಗಂಡನಿಗೆ ಹೆಂಡತಿಯಿಂದ ಸ್ವಾತಂತ್ರ್ಯ, ಶಾಲಾಕಾಲೇಜು ಮಕ್ಕಳಿಗೆ ಪೋಷಕರಿಂದ, ಶಿಕ್ಷಕರಿಂದ ಮತ್ತು ಪರೀಕ್ಷೆಗಳಿಂದ ಸ್ವಾತಂತ್ರ್ಯ, ಇತ್ಯಾದಿ. ಇನ್ನು, ಇಂಡೋ-ಅಮೇರಿಕೀ ಮದುವೆಯಾದ ಕುಟುಂಬಗಳಿಗಂತೂ (ಇದೊಂದು ರೀತಿ ಎಫ಼್.ಡಿ. ಐ. ಅಥವಾ ಫ಼ಾರಿನ್ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್), ಅಲ್ಲಿನ ಮತ್ತು ಇಲ್ಲಿನ ಡಬಲ್ ಸ್ವಾತಂತ್ರ್ಯ!
ಇವೆಲ್ಲವೂ ನಮ್ಮ ದೇಶವನ್ನು ಇಂದು ತೀವ್ರವಾಗಿ ಆವರಿಸುತ್ತಿರುವ ಸ್ವಾತಂತ್ರ್ಯಾಗ್ನಿಯ ಕುರುಹಲ್ಲದೇ ಮತ್ತೇನು? ವಾಸ್ತವವಾಗಿ, ಇಂದು ನಮ್ಮಲ್ಲಿ ಸ್ವಾತಂತ್ರ್ಯರಸವು ಯಾವ ಎತ್ತರದಲ್ಲಿ ಉಕ್ಕುತ್ತಿದೆಯೆಂದರೆ, ಅದರ ಬಹಳಷ್ಟು ಹೊರಹರಿವನ್ನು ನಾವಿಂದು ಸ್ವಾತಂತ್ರ್ಯಹೀನ ಹೊರದೇಶಗಳಿಗೆ ಸಲೀಸಾಗಿ ರಫ಼್ತು ಮಾಡಬಹುದು. ಅಂತೆಯೇ, ವಿಶ್ವಗುರುವಾಗುವಷ್ಟರಮಟ್ಟಿಗೆ ನಮ್ಮಲ್ಲಿರುವ ಲಂಚಜ್ಞಾನ-ಚಾತುರ್ಯಗಳನ್ನೂ, ಮತ್ತು ಇತ್ತೀಚೆಗೆ ನಾವು ಗಳಿಸಿರುವ ಗ್ಯಾಂಗ್‌ರೇಪ್ ತಂತ್ರವಿದ್ಯೆಯ ಅಮೂಲ್ಯ ಒಳರಹಸ್ಯಗಳನ್ನೂ, ಆಸಕ್ತ ಹೊರದೇಶಗಳೊಡನೆ ಉದಾರವಾಗಿ ಹಂಚಿಕೊಳ್ಳಬಹುದು.
ತನ್ನ ಸ್ವಾತಂತ್ರ್ಯಘನ ಗುಣವಿಶೇಷಣಗಳಿಂದಾಗಿ, ಭಾರತವು ಇಂದು ಜಾತೀಯ-ತ್ವ, ಲಂಚ-ತ್ವ ಮತ್ತು ರೇಪ್‌ಗಡುಕ-ತ್ವ, ಈ ಮೂರು ಥತ್!ತ್ವಗಳಲ್ಲೂ ಹಿರಿಮೆಯನ್ನು ಸ್ಥಾಪಿಸಿ, ಧರ್ಮ-ಅರ್ಥ-ಕಾಮ ಎಂಬ ತ್ರಿವಿಧ ಪುರುಷಾರ್ಥಗಳಲ್ಲಿ [ರೇಪ್‌ಗಡುಕತ್ವದಲ್ಲಂತೂ ವಿಶೇಷ ಪುರುಷ-ಅರ್ಥವನ್ನೇ ಕಾಣಬಹುದು] ಈ ತನ್ನ ಅತಿಶಯ ಸಾಧನೆಯ ಬಗ್ಗೆ ಪ್ರಪಂಚವೇ ಮಾತನಾಡಿಕೊಳ್ಳುವಂತೆ ಮೆರೆದಿದೆ. ಜೊತೆಜೊತೆಗೇ, ಅತಿಬಡದೇಶಗಳ ಪಟ್ಟಿಗೆ ಅಂಟಿ ಕೂತಿದ್ದಾಗ್ಯೂ, ಭಾರತವಿಂದು ಅತಿಶ್ರೀಮಂತರ ಅತಿಬಡದೇಶ ಎಂದು ವಿಶ್ವದಲ್ಲಿ ಬೆಳಗುತ್ತಿದೆ. ಹೀಗೆಲ್ಲ ಆಗಿ, ಅಚ್ಚೇ ದಿನ್ ಆನೇವಾಲಾ ಹೈ! ಎಂದು ನಾವಿನ್ನು ಕಾಯಬೇಕೆಂದೇನೂ ಇಲ್ಲ; ಅಚ್ಚರಿಯ ದಿನಗಳ ಆನೆಬಾಲ – ಅಥವಾ ಆನೆಯ ಮೇಲಿನ ಅಂಬಾರಿ ಸವಾರಿಯೇ – ನಮಗೀಗ ಪ್ರಾಪ್ತವಾಗಿಬಿಟ್ಟಿದೆ.
ನಿಜಕ್ಕೂ, ಮೋಕ್ಷ ಎಂಬ ಪರಮಪುರುಷಾರ್ಥವನ್ನು ಬಿಟ್ಟರೆ, ಈಗ ಈ ಅತಿಧನ್ಯದೇಶಕ್ಕೆ ಬೇಕಿರುವುದಾದರೂ ಏನು? ಮುಂಬರುವ ಕೆಲವೇ ಆಗಸ್ಟ್ ೧೫ಗಳಲ್ಲಿ, ಅದೂ ಕೂಡ ಬಂದೇಬಿಡಬಹುದೇನೋ!!
~ ಜೈ ಹಿಂದ್! ಭಲೇ ಭಾರತ್!! ಶಹಭಾಸ್ ಇಂಡಿಯಾ!!! ~
~ ನಯಮನಘನ ಜನಸಾಮಾನ್ಯ ಜಯಹೇ, ಭಾರತ ಮಂಗಳದಾತ! ~
*****