ಕಥಾಲೋಕ

ಸ್ವಗತ: ನಾಗರೇಖಾ ಗಾಂವಕರ


ಎರಡನೇಯ ಗರ್ಭವೂ ಹೆಣ್ಣೆಂದು ಗೊತ್ತಾಗಿದೆ. ಗಂಡ ಆತನ ಕುಟುಂಬ ಸುತಾರಂ ಮಗುವನ್ನು ಇಟ್ಟುಕೊಳ್ಳಲು ತಯಾರಿಲ್ಲ. ತಾಯಿಯೊಬ್ಬಳು ಒತ್ತಾಯದ ಗರ್ಭಪಾತಕ್ಕೆ ಸಿದ್ಧಳಾಗಿ ಕೂತಿದ್ದಾಗಿದೆ, ತಾಯಿಯ ಗರ್ಭದೊಳಗಿನ ಭ್ರೂಣ ಬಿಕ್ಕಳಿಸುತಿದೆ.

ಅಯ್ಯೋ! ಅವರು ಬಂದೇ ಬರುತ್ತಾರೆ. ನನ್ನನ್ನು ಕತ್ತರಿಸಿ ಹೊರಗೆಸೆಯಲು. ಅವರಿಗೇನೂ ಅದು ಹೊಸತಲ್ಲ. ಆದರೆ ನನ್ನಮ್ಮನಿಗೆ ನಾನು ಏನೂ ಅಲ್ಲವೇ? ಅವಳ ರಕ್ತದ ರಕ್ತ ನಾನು. ಅವಳ ಮಾಂಸದ ಮುದ್ದೆ ನಾನು. ಅಮ್ಮ ದಯವಿಟ್ಟು ಹೇಳಮ್ಮ. ಅವಳಿಗೆ ನನ್ನ ದನಿ ಕೇಳುತ್ತಿಲ್ಲವೇ? ಅಮ್ಮನ್ಯಾಕೆ ಮೂಕಿಯಾಗಿದ್ದಾಳೆ.. ಸಪ್ಪಗಿದ್ದಾಳೆ.. ನನಗೆ ಗೊತ್ತು. ಆಕೆ ನನ್ನ ತುಂಬಾ ಪ್ರೀತಿಸುವಳು ಎಂದು. ಹಚ್ಚಿಕೊಂಡಿರುವಳು ಎಂದು. ನಾನವಳ ಹೊಟ್ಟೆ ಸೇರಿದ ದಿನದಿಂದಲೂ ಅದೆಷ್ಟು ಸಲ ಆಕೆ ತನ್ನ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ನನ್ನನ್ನೆ ಸವರಿದ ಅನುಭವ ಪಟ್ಟು ಖುಷಿಯಾಗಿರಲಿಲ್ಲ. ಆಗೆಲ್ಲ ಆಕೆಯ ಮುಖದಲ್ಲಿ ಅದೆಂಥಹ ತೃಪ್ತಿ ಇತ್ತು. ನಾನೆಂದರೆ ಅದೆಂತಹ ಅಕ್ಕರೆ. ಆದರೆ ಈಗ ಅಮ್ಮಾ ಮೌನವನ್ನೇ ಹೊದ್ದುಕೊಂಡಿದ್ದಾಳೆ. ಕಣ್ಣೀರು ಆಕೆಯ ಗಲ್ಲ ತೋಯಿಸದ ದಿನವಿಲ್ಲ. ಅಯ್ಯೋ ಅಕ್ಕ ಹುಟ್ಟಿದ ದಿನ ಆಕೆಗೆ ಅದೆಷ್ಟು ಸಂಭ್ರಮ ಪಟ್ಟಿದ್ದಳಂತೆ. ಆದರೆ ಆಕೆಯನ್ನು ಹೊರತು ಪಡಿಸಿ, ಯಾರಿಗೂ ಖುಷಿಯಾಗಲಿಲ್ಲವಂತೆ. ಅದಕ್ಕೆ ಇರಬಹುದು ಅಮ್ಮ ಬೇಸರಗೊಂಡಿದ್ದಾಳೆ. ನಾನೂ ಹೆಣ್ಣೆಂದು ತಿಳಿದಾಗಿನಿಂದ ಅಮ್ಮ ಅಮ್ಮನಾಗಿಲ್ಲ. ನನಗಾಗೇ ಮರುಗುತ್ತಿರಬಹುದು.

ಆಕೆಗೆ ಅಪ್ಪನ ಬಿಟ್ಟರೆ ಗತಿಯಿಲ್ಲ. ಅಪ್ಪನಿಗೆ ನಾಲ್ಕು ಜನರ ಮುಂದೆ ತನಗೊಂದು ಗಂಡು ಮಗನಿದ್ದಾನೆಂದು ಮೀಸೆ ತಿರುವಿ ಹೇಳಿಕೊಳ್ಳಬೇಕೆಂಬ ಹುಚ್ಚು ಹಂಬಲ. ಅದನ್ನಾತ ಹಲವು ಬಾರಿ ಏಕಾಂತದಲ್ಲಿ ಅಮ್ಮನಲ್ಲಿ ಹೇಳಿಯೂ ಇದ್ದ. ನಾ ಒಳಗಿದ್ದೆ. ಅಮ್ಮನ ಮಡಿಲಲ್ಲಿ. ನನ್ನ ಸಂದೇಹ ಹುಸಿಯಾಗಲಿಲ್ಲ. ನಾನು ಹೆಣ್ಣೆಂದು ತಿಳಿದಂದಿನಿಂದ ಆತ ಅಮ್ಮನನ್ನು ವಿನಾಕಾರಣ ಹಂಗಿಸುತ್ತಾನೆ. ಗಂಡು ಮಗ ಅದೇನು ತಂದುಕೊಡುವ. ನಾ ನೀಡದ ಅದೆಂತಹ ಭರವಸೆಯ ನೀಡುವನಾತ. ಅಪ್ಪನ ಅಮ್ಮ ಕೂಡಾ ಅವನಿಗೆ ಬೆಂಬಲಿಸಿ ಮಾತಾಡುವರಲ್ಲ. ಅವರೆಲ್ಲ ಬೀಸಾದ ಚರ್ಚೆಯಲ್ಲಿ ತೊಡಗಿದ್ದು ನೋಡಿದರೆ ನನ್ನ ಎದೆಯಲ್ಲಿ ನೀರೇ ಬತ್ತಿ ಹೋದ ಅನುಭವವಾಗುತ್ತಿದೆ. ನಾನು ಹೆಣ್ಣಾದ ಕಾರಣಕ್ಕೆ ನನಗೀ ಶಿಕ್ಷೆಯೇ? ನಾನು ಹೆಣ್ಣಾಗುವೆನೆಂದು ನನಗೆ ತಿಳಿದಿತ್ತೇ? ಆ ಕಾರಣಕ್ಕಾಗಿಯಾದರೂ ಕಲಿತ ಅಪ್ಪ ನನ್ನ ಪಾಲಿಸಬಾರದೇ? ಅಪ್ಪನಿಗೆ ನಾನು ಹೊರೆಯಾಗುವೆನೇ? ಹೆಣ್ಣು ಸಂತತಿಯನ್ನು ಕತ್ತರಿಸಿ ಹಾಕುವ ಕಠೋರತೆ ನನ್ನ ಜನ್ಮದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಅಮ್ಮನ ಗರ್ಭದಿಂದ ಹೊರತೆಗೆದು ದಫನ್ ಕೂಡಾ ಮಾಡದೇ ನನ್ನ ಎಸೆದುಬಿಡುವರು. ಹೆಣ್ಣಾದ ತಪ್ಪಿಗೆ ಎಂತಹ ಪರಿತಾಪಗಳ ಸೈರಿಸಬೇಕೋ? ನನಗೆ ಬದುಕು ಬೇಕು.. ಹೆಣ್ಣಾದ್ದಕ್ಕೆ ಯಾರಲ್ಲಿ ದೂರಲಿ, ಯಾರಲ್ಲಿ ದಯೆ ಬೇಡಲಿ,!.

ಅಗೋ ಅವರು ಬರುತ್ತಿದ್ದಾರೆ. ಕೈಗಳಿಗೆ ಬಿಳಿಯ ಅದೇನೋ ತೊಟ್ಟುಕೊಂಡಿದ್ದಾರೆ. ಹಾ.. ಅದೇ ಗ್ಲೌಸು. ಬಿಳಿಬಟ್ಟೆಯಲ್ಲಿ ಸುಂದರವಾಗಿದ್ದಾರೆ. ಅವರಲ್ಲೊಬ್ಬಾಕೆಯ ಕೈಯಲ್ಲಿ ಅದೇನದು ತಟ್ಟೆ! ಅಯ್ಯೋ ಅದರಲ್ಲಿ ತುಂಬಿರುವ ಸಲಕರಣೆಗಳೇನು? ಚೂಪುಚೂಪಾದ ತುದಿ ಇರುವ ಸೂಜಿ, ಕತ್ತರಿ, ಇಕ್ಕಳ, ಬಕ್ಕಳ ಇರಿವ ಕತ್ತರಿಸುವ,ಹೊಲಿಯುವ, ಬಗಿದು ತೆಗೆಯುವ ಆಯುಧಗಳೇ? ಅಯ್ಯೋ ದೇವರೇ! ನನಗೆ ಸಾಯಲು ಇಷ್ಟವಿಲ್ಲ. ಬದುಕು ಹೌದು.. ನನಗೂ ಬದುಕು ಬೇಕು. ನಾನು ಎಲ್ಲರಂತೆ ಖುಷಿಯಿಂದ ಹುಟ್ಟಬೇಕೆಂದು ಬಯಸಿದ್ದೆನಲ್ಲವೇ?.. ನನ್ನ ಜನನ ಅಮ್ಮನ ಮುಖದಲ್ಲಿ ಸಂತಸದ ನಗುವನ್ನು ತರಬೇಕು. ಮನೆಯಲ್ಲಿ ಸಡಗರವಿರಬೇಕು. ಅಪ್ಪಾ ದಯವಿಟ್ಟು ಒಮ್ಮೆ ಹೇಳಿಬಿಡು. ನನ್ನನ್ನು ತೆಗೆಯಬೇಡಿರೆಂದು. ಅಯ್ಯೋ ಅಮ್ಮಾ..ನನ್ನ ಇಕ್ಕಳವೊಂದು ಇರಿಯುತ್ತಿದೆ. ತುಂಬಾ… ನೋವಾಗುತ್ತಿದೆ…

-ನಾಗರೇಖಾ ಗಾಂವಕರ,


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *