ನಿನ್ನ ಬಾಳನ್ನು ಬೆಳಗೋಕ್ ಬಂದ ಹುಡುಗಿ ಇನ್ನೊಂದು ಹೆಣ್ಣಿನ ಬಾಳನ್ನು ಕತ್ತಲೆ ಮಾಡಿದ್ದು ನಿಜವಲ್ವೆ. ಕನಸುಗಳ ಬಿತ್ತಿ ನೀರು ಸುರಿಸದೆ ಸುರುಟಿದೆ ನನ್ನ ಕನಸು.
೨೦೧೦ ರ ಒಂದು ಮಧ್ಯಾನ್ಹ ಬಂದ ಇ-ಮೇಲ್,
೨೦೦೯ ರಲ್ಲಿ ಯಾವುದೋ ಹಳೆ ಪೇಮೆಂಟ್ ಕೊಟ್ ಬಿಡಿ ಅಂತ ಮೆಸ್ಸೇಜು…
ಅವತ್ತಿಗೆ ರಿಪ್ಲೈ ಆಯ್ತು, ಕೊಡೋಣ ತಡ್ಕೊಳಪ್ಪ ……
ಮತ್ತೆ ಮೂರನೇ ದಿವಸಕ್ಕೆ ಒಂದು ರಿಮೈನ್ಡರ್ ಕೊಡ್ತೀರೋ ಇಲ್ಲವೋ..
ಫೋನೆತ್ತಿ ಮಾತಾಡಿ ತಡೆದುಕೊಳ್ ಪುಣ್ಯಾತ್ಮ ನಿನ್ನ ಚೆಕ್ಕುಗೆ ರೆಕ್ವಿಸಿಶನ್ ಹಾಕಿದೀನಿ ಡೆಲ್ಲಿ ಇಂದ ಬರಬೇಕು
ಅಂದೇ "ಆಯ್ತು ಕಾಯುವೆ" ಅಂದಾಯ್ತು ಅತ್ತಲಿನ ಮಾತು.
ಚೆಕ್ಕು ಕಳಿಸಿದ್ದು ಆಯ್ತು, ಅದ್ಯಾವ ಕಾರಣಕ್ಕೆ ನಿನ್ನ ಮೊಬೈಲ್ ನಂಬರ್ ಸೇವ್ ಮಾಡಿಕೊಂಡಿದ್ದೇನೋ ಕಾಣೆ…. ಒಂದೊಮ್ಮೆ ನಿನ್ನ ಮೆಸೇಜು ನನ್ನ ಇನ್ ಬಾಕ್ಸ್ ಗೆ ….
ಅದೂ ಬೋರಿಂಗ್ ಹೈದರಾಬಾದ್ ಟ್ರಿಪ್….
ಯಾರಿಗೆ ಕಳಿಸೋಕ್ ಹೋಗಿದ್ಯೋ ನಂಗೆ ಬಂತು…. ನನ್ನ ಕ್ವೊಷ್ಚನ್ ಮಾರ್ಕ್ ರಿಪ್ಲೈ ಹೋಯ್ತು,
ಹಾಂ ಹಂಗೆ ಮಾತುಕತೆ ಮುಂದುವರೆಯಿತು, ಇಬ್ಬರು ಹಾಗೆ ಹೀಗೆ ಒಮ್ಮೆ ಮಾತು ಆಡ್ತಿದ್ವಿ.
ಯಾವತ್ತೋ ಇದ್ದಕ್ಕಿದ್ದ ಹಾಗೆ ನೀನು ಕೇಳಿದೆ ನಿಂಗೆ ಟೈಮ್ ಇದ್ದೀಯ ಮೀಟ್ ಮಾಡೋಣ…. ಕೆ ಆರ್ ಪುರಂ ಹತ್ರ ಇರೋ ಬಿಗ್ ಬಜಾರ್ ಹತ್ರ ಅಂತ…
ಆಯ್ತು ಅಂದು, ಟೈಮ್ ಫಿಕ್ಸು ಮಾಡಿದೆವು, ಬಂದೆ ನೀನ್ ನಿನ್ನ ಆದೆ ಹಳೆಯ ಜೀನ್ಸ್ ಪ್ಯಾಂಟಿನ ಹುಡುಗ ನಾನ್ ಚೂಡಿದಾರ್ ಗೌರಮ್ಮ … ನಿಂಗೆ ಶಾಪಿಂಗ್ ನಲ್ಲಿ ಬರಿದೇ ಸುತ್ತೋದು ಆಗೋಲ್ಲ ಆದರು ಅವತ್ತಿಗೆ ಸಹಿಸಿಕೊಂಡಿದ್ದೆ .
ನಿಂಗೆ ನೆನಪಿದ್ಯ ಮೊದಲ ಬಾರಿಗೆ, ಅದೇನೋ ಏನೋ ಅರಾಬಿಕ್ ಪಲ್ಪಿ ಗ್ರೇಪ್ ಜ್ಯೂಸು ಅಂತ ಕುಡ್ದಿದ್ದು, ಎಣ್ಣೆ ಕುಡಿಯೋ ಹುಡುಗನಿಗೆ ಪಲ್ಪಿ ಜ್ಯೂಸು ಯಾವ ಲೆಕ್ಕ ಎರಡು ಕುಡಿದೆ. ಹೂಂ ಅವತ್ತಿನ ಮಟ್ಟಿಗೆ ವಿದಾಯ ಹೇಳಿದೆ …. ಅದ್ಯಾಕೋ ನಿನ್ನ ನಡವಳಿಕೆ ಇಷ್ಟ ಆಯ್ತು ಮಾತು ಕತೆ ಮುಂದುವರಿತು…
ನೀನು ನನ್ನ ಆಫೀಸಿಗೆ ಬಂದು, ನನ್ನ ರೆಸುಮೆ ರೆಡಿ ಮಾಡಿಕೊಟ್ಟು, ನಾನು ನಿಂಗೆ ಒಂದು ಒಳ್ಳೆ ಊಟ ಕೊಡುಸ್ತೀನಿ ಅಂತ ಹೇಳಿದ್ದೆ, ಹಾಗೆ ಆಯ್ತು, ಶಿವಾಜಿನಗರದ ಯಾವುದೋ ಏರಿಯಾದಲ್ಲಿ ಇರುವ ಸ್ವಾತಿ ಹೋಟೆಲ್ಲಿಗೆ ಹೋಗಿದ್ವಿ , ನಿನ್ನಿಷ್ಟದ ಮೀನು ಫ್ರೈ, ಬಿರಿಯಾನಿ ಪಟ್ಟಾಗೆ ಹೊಡೆದು ತಿಂದೆ. ಯಾವುದೇ ಬಿಗುಮಾನವಿಲ್ಲದೆ ನೀ ಊಟ ಮಾಡೋ ರೀತಿಗೆ, ನಂಗೆ ಗೊತ್ತಿಲ್ಲದೇ….ನೀ ಇಷ್ಟವಾಗೊಕ್ ಶುರುವಾದೆ ಹುಡುಗ.
ನೀ ತುಂಬಾ ಒಳ್ಳೆಯವನು ಅನ್ನಿಸೋಕ್ ಶುರು ಆಯ್ತು ಆಗೊಮ್ಮೆ ಈಗೊಮ್ಮೆ ಮತ್ತೆ ಮಾತುಕತೆ ಕೂಡ. ನೀ ಒಮ್ಮೆ ವಿಪ್ರೊ ಕಂಪನಿಗೆ ಸೇರಿದೆ ಅಂತ ಒಮ್ಮೆ ನಿನ್ನ ವಿಸಿಟಿಂಗ್ ಕಾರ್ಡ್ ಕೊಟ್ಟಾಗ ತುಂಬಾ ಖುಷಿಯಾಗಿತ್ತು .. ಯಾಕೆ ಗೊತ್ತ ಅಷ್ಟೊತ್ತಿಗೆ ನೀನು ತುಂಬಾ ಸುಳ್ಳು ಹೇಳ್ತಿಯ ಊಟದ ವಿಷಯದಲ್ಲಿ ಅಂತ…. ಒಟ್ಟಿನಲ್ಲಿ ಒಳ್ಳೆ ಕೆಲಸ ಸಿಕ್ಕಿತು, ಊಟದ ತೊಂದರೆ ತಪ್ಪಿತು, ಅದ್ಯಾಕೋ ಯಾರಾದ್ರೂ ಊಟ ಮಾಡಿಲ್ಲ ಅಂದ್ರೆ ಕರುಳು ಚುರುಕ್ ಅನ್ನತ್ತೆ.
ಮಾತು ಜಾಸ್ತಿ ಆದಾಗ ಜಗಳ ಆಗಲೇ ಬೇಕಲ್ಲ ಒಂದೊಮ್ಮೆ ಅದ್ಯಾಕೋ ಜಗಳ ಕೂಡ ಆಯ್ತು, ಜೋರು – ಜೋರಾಗಿ ಮಾತಾಡಿ ಸಿಟ್ಟಿನ ಭರದಲ್ಲಿ ಎಂ. ಜಿ. ರೋಡಿಂದ – ಶಿವಾಜಿನಗರದ ಬಸ್ ಸ್ಟಾಂಡ್ ತನಕ ನಡೆದು ಬಿಟ್ಟೆ. ನಿನ್ನ ನಂಬರ್ ಕೂಡ ಡಿಲೀಟ್ ಮಾಡಿ ಬಿಸಾಕಿದ್ದೆ, ಆ ದಿವಸ ನೀನು ನನ್ನ ಅಂತ ಚೀಪ್ ಲೆವೆಲ್ಲ್ಗೆ ಇಳಿಸಿ ಮಾತಾಡಿದ್ದೆ ಅಂತ ಕೋಪ ಬಂದಿತ್ತು.
ಆದೇ ಜಗಳದ ಕೊನೆ ಮಾತುಕತೆ ಇರಲಿಲ್ಲ ನಿನ್ನ-ನನ್ನ ಮಧ್ಯೆ, ಅದ್ಯಾಕೋ ಒಮ್ಮೆ ಸಂಜೆ ಏಳರ ತನಕ ಆಫೀಸಲ್ಲಿ ಇದ್ದು ಎಫ್. ಬಿ. ಲಾಗಿನ್ ಆದರೆ, ನಿನ್ನ ಹುಟ್ಟಿದ ಹಬ್ಬ ಅಂತ ನೋಟಿಫಿಕೇಶನ್, ಛೆ ಮಿಸ್ ಮಾಡಿದೆನಲ್ಲ ಬಿಡು ಜಗಳಕ್ಕೆ ಒಂದು ಕೊನೆಯಾದರು ಮಾಡುವ ಅಂತ ಹೇಳಿ, ಗಟ್ಟಿ ಮನಸ್ಸು ಮಾಡಿ ಫೋನು ಮಾಡಿದೆ.
ಹುಫ್ಫ್ ನೀನು ರಿಸೀವ್ ಕೂಡ ಮಾಡಿದೆ, ಹೀಗೆ ಮಾತುಕತೆ ಆಯ್ತು, ನಾನು ಪಾರ್ಟಿ ಕೇಳಿದೆ. ನೀನು ಕೊಡಿಸೋಣ ಅಂದೇ.
ನನ್ನ ಕೆರಿಯರ್ ಒಮ್ಮೆ ಬ್ರೇಕ್ ಆದಾಗ ಕಾಳಜಿಯಿಂದ ಕೇಳಿದ್ದೆ ಏನ್ ಮಾಡಬೇಕು ಅಂದ್ಕೊಂಡಿದೀಯ, ಬಾ ಇಲ್ಲೇ ಜಾಬ್ ಹುಡುಕು ಮನೆಯಲ್ಲೇನು ಮಾಡ್ತಿಯಂತ. ಹಾಗೆ ಆಯ್ತು ವರ್ಷದ ಬ್ರೇಕ್ ನಂತರ ನನಗೊಂದು ಜಾಬ್ ಕೂಡ, ನಿನ್ನ ಏರಿಯಾದ ಹತ್ತಿರಾನೆ…… ಜಾಬ್ ಜಾಯಿನ್ ಆದ ಮೂರ್ ದಿವಸಕ್ಕೆ ನನ್ನ ಖುಷಿ ನಿಂದ ಮಾತಾಡಿಸಿದ್ದೆ. ಮೆಜೆಸ್ಟಿಕ್ ಮೂಲೆ ಇಂದ ಬರೋದ್ಯಾಕೆ ಇಲ್ಲೇ ಒಂದು ರೂಂ ಹುಡುಕು, ಸಾಧ್ಯವಾದರೆ ನಾನ್ ಹೇಳ್ತೀನಿ ಅಂದೇ.
ಆಫೀಸಿನ ಹತ್ತಿರದಲ್ಲಿ ಶಿಫ್ಟ್ ಆದ ನಂತರ ನಿನ್ನೋಟ್ಟಿಗೆ, ಆಗೊಮ್ಮೆ ಈಗೊಮ್ಮೆ ಹೊರಗೆ ಹೋಗೋದು ಇತ್ತು. ವಾರದ ಕೊನೆಯಲ್ಲಿ ನಿನ್ನ ರೂಮಲ್ಲಿ ಫ್ರೆಂಡ್ಸ್ ಗಳನ ಗುಡ್ಡೆ ಹಾಕ್ಕೊಂಡು ಪಾರ್ಟಿ ಮಾಡಿದೆ ಅಂತಿದ್ದೆ. ನಾನು ಕುತೂಹಲಕ್ಕೆ ಯಾರ್ ಯಾರ್ ಅಂತ ಕೇಳಿದ್ದೆ. ನೀ ನಿರಾಯಾಸವಾಗಿ ಇಂತದ್ದೆ ಅಂತಿಲ್ಲ ಕಲೀಗ್ಸ್ ಬರ್ತಾರೆ. ಹುಡ್ಗ -ಹುಡುಗಿ ಅಂತೆಲ್ಲ ಭೇದವಿಲ್ಲ… ಕುಡಿತಾರೆ, ಊಟ ಮಾಡ್ತಾರೆ, ಮನೆಗೆ ಹೊಗ್ತಾರೆ. ನಾನು ಅಷ್ಟೇ ಅವರ ರೂಮ್ಗೆ ಹೋಗ್ತೀನಿ ಅಂದೇ. ನಂಗೆ ಮನಸಲೆಲ್ಲ ಕಸಿವಿಸಿ ಅದ್ ಹೆಂಗಪ್ಪ ಹಡುಗ -ಹುಡುಗಿಯರು ಒಟ್ಟಿಗೆ ಕೂತು ಕುಡಿಯೋದು… ಹೇಳಲಾರೆ ಸುಮ್ಮನಾದೆ.
ಒಂದೊಮ್ಮೆ ಹೀಗೆ ನನ್ನ ವೀಕೆಂಡ್ ಬೆಂಗಳೂರಲ್ಲೇ ಕಳಿಯೋ ದಿವಸ ಹೆಚ್ಚಿನ ಫ್ರೆಂಡ್ಸ್ ಇಲ್ಲದೆ, ಇರೋ ಹಳೆ ಪುಸ್ತಕಗಳನ್ ತಿರುವಿ ಹಾಕ್ತ ಇದ್ದೆ, ಇದ್ದಕಿದ್ದ ಹಾಗೆ ನಿನ್ನ ಫೋನ್,
ಏನ್ ಮಾಡ್ತಾ ಇದ್ದೀಯ? ಫ್ರೀ ಇದ್ದರೆ ನನ್ನ ರೂಮ್ಗೆ ಬಾ ನಿನ್ನ ಅಭ್ಯಂತರವಿಲ್ಲದಿದ್ದರೆ? ನಿನ್ನ ಆಹ್ವಾನ ತಿರಸ್ಕರಿಸೋ ಹಾಗಿಲ್ಲ ಬಿಡೋ ಹಾಗಿಲ್ಲ. ಒಂಟಿ ಹುಡಗನ ರೂಮ್ಗೆ ಹೋಗೋದು ಹೇಗಪ್ಪ ಅಂತ ಯೋಚನೆ. ನಂಗೆ ಸ್ವಲ್ಪ ಟೈಮ್ ಕೊಡು ನನ್ನ ಕೆಲಸ ಮುಗ್ದಿಲ್ಲ, ಅದೆಲ್ಲ ಮುಗಿಸಿ ನಿಂಗೆ ಫೋನು ಮಾಡ್ತೀನಿ ಅನ್ದೆ. ಅವನು, ನೀ ಬರುವ ಹಾಗಿದ್ರೆ ನನ್ನ ಬೇರೆ ಫ್ರೆಂಡ್ಸ್ ನು ಕರೀಲ ಅಂದೇ, ಅದು ನಿನ್ನಿಷ್ಟ ಅಂದು ಸುಮ್ಮನಾದೆ.
ಅಳೆದು ತೂಗಿ, ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರೋ ಹೊತ್ತಿಗೆ , ಭಾನುವಾರದ ಮಧ್ಯಾನ್ಹ ಒಂದೂವರೆ ಘಂಟೆ. ಮತ್ತೆ ನಿನ್ನ ಅಲಾರ್ಮ್ ಬರ್ತಿಯೋ ಇಲ್ಲವೋ? ಹೊರಟಿತು ನಮ್ಮ ಸವಾರಿ ಮನಸ್ಸಿನಲ್ಲಿ ಅಲ್ಪ ಅಳುಕು. ಅರ್ಧ ಘಂಟೆಯೊಳಗೆ ನಿನ್ನ ರೂಮಿನ ಮುಂದಿದ್ದೆ, ಖುಷಿಯಿಂದನೆ ಬಾ ಮನೆಯೊಳಗೇ ಅಂದೆ, ಮನೆಯೊಳಗೇ ಅಲ್ಲಲ್ಲ ನಿನ್ನ ರೂಮೊಳಗೆ ಕಾಲಿಟ್ಟ ಕ್ಷಣ ಕಂಡದ್ದು ನಿನ್ನ ಅಡ್ಡಾದಿಡ್ಡಿ ಹರಡಿದ ಬಟ್ಟೆ, ಒಂದು ಕಡೆ ನಿನ್ನ ಮಂಚ, ಪುಟ್ಟ ಕಬೋರ್ಡ್ , ನಿನ್ನ ಗ್ಯಾಸ್ ಓಲೆ, ನೀರಿನ ಕ್ಯಾನ್ ಎಲ್ಲವನ್ನು ಒಂದು ಕ್ಷಣ ಗಮನಿಸಿದೆ ಪರವಾಗಿಲ್ಲ ಸ್ವಲ್ಪ ನೀಟ್ ನೆಸ್ ಇಲ್ಲದೆ ಇದ್ದರು ಮೆಸ್ಸ್ ಅಂತು ಆಗಿಲ್ಲ.
ಅಡುಗೆ ಮಾಡ್ತೀಯ ಅಂತ ಕೇಳಿದ್ದೆ ? ಏನಿದೆ ಅಂದೇ?
ಏನು ಬೇಕು ಹೇಳು ತಂದು ಬಿಡು ಮಾಡೋದಿದ್ದ್ರೆ ಅಂದೇ ? ಮೊದಲಿಗೆ ಅಡುಗೆ ಮಾಡೋದೇ ಕಷ್ಟ ಅಂತದ್ದರಲ್ಲಿ. ಅವತ್ತಿನ ಮಟ್ಟಿಗೆ ಏನೋ ಟೊಮೇಟೊ ತಿಳಿ ಸಾರು ಮಾಡಿ ತಿಂದು ನಿನಗೊಂದು ವಿದಾಯ ಹೇಳಿ ಬಂದಾಯ್ತು.
ಅದೇ ತರಹದ ರಿಪೀಟೆಡ್ ವೀಕೆಂಡ್ ಗಳು ಬಂದು ಹೋದವು ನಮ್ಮ ನಡುವೆ ಯಾವತ್ತು ಹದ್ದು ಮೀರದ ನಡವಳಿಕೆ, ಹಾಗೆ ಅದು-ಇದು ಮಾತುಕತೆಯಲ್ಲಿ ಹೇಳಿದೆ ಯಾಕೋ ಇನ್ನು ಮದುವೆ ಆಗದೆ ಇದ್ದೀಯ ನಿನಗೆಂತ ಕಡಿಮೆ ಮದುವೆ ಮಾಡಿಕೊಳ್ಳಲಿಕ್ಕೆ ಕಡಿಮೆ, ಹುಡುಗಿಯರ ಕ್ಯೂ ನಿಲ್ಲತ್ತೆ ನಿಂಗೆ. ಮದುವೆ ಆಗಿ ಬಿಡು ಒಳ್ಳೆ ಊಟ ತಿಂದು ಆರಾಮವಾಗಿರಬಹುದು.. ತಟ್ಟನೆ ನಿನ್ನುತ್ತರ ಬಂತು ಮದುವೆ ಆಗಿ ಬಿಡೋಣ್ವಾ ಹಾಗಿದ್ರೆ, ನಗು ತಡಿಲಾರದೆ ಸುಸ್ತಾಗಿದ್ದೆ. ನಿಂದೊಳೆ ಕಥೆಯಾಯ್ತಲ್ಲ, ಮದುವೆಯಾಗೋ ರಂಗ ಅಂದ್ರೆ ನೀನೆ ನನ್ನ 'ಹೆಂಡತಿ' ಅನ್ನೋ ಹಂಗೆ.
ಯಾತಕೋ ಕಣೋ ನೀ ಹೇಳಿದ ಮಾತು ಮತ್ತೊಮ್ಮೆ ಯೋಚಿಸೋ ಹಾಗೆ ಮಾಡಿತ್ತು ಅವತ್ತಿಗೆ. ಆದರೆ ಮತ್ಯಾವತ್ತು ನಮ್ಮಿಬ್ಬರ ಮಧ್ಯದಲ್ಲಿ ಈ ವಿಷಯ ಬರಲೇ ಇಲ್ಲ… ನಾನು ಅದರ ಬಗ್ಗೆ ಚಕಾರ ಎತ್ತಲಿಲ್ಲ. ಇರಲಿ ಬಿಡು ಇಂಥ ವಿಷಯಗಳು ಬಲೆ ಸೂಕ್ಷ್ಮ ಇವತ್ತಿಗೆ ಇರೋ ಪ್ರೀತಿ , ಪ್ರಾಮಾಣಿಕತೆ ನಾಳೆಗೆ ಹೇಗ್ ಬದಲಾಗುತ್ತೋ ಕಾಣೆ ಅಂತ ನಾನು ಸುಮ್ಮನಾಗಿಬಿಟ್ಟೆ, ಮಧ್ಯ ನನ್ನ ಕೆಲಸದ ಒತ್ತಡಗಳು, ಮನೆಯ ಒಡನಾಟ , ಅಲ್ಲಿ ಇಲ್ಲಿನ ಓಡಾಟದಲ್ಲಿ ನಿನ್ನೊಟ್ಟಿಗೆ ಮಾತಡೋದು ಕಡಿಮೆಯಾಗಿತ್ತು. ನೀನು ಇತ್ತೀಚಿಗೆ ಮೊಬೈಲ್ ಗೆ ಅಂಟಿಕೊಂಡಿರ್ತಾದ್ದೆ. ಯಾರೋ ಹೊಸ ಹುಡುಗಿ ಮಾತಾಡ್ತಾ ಇದ್ದಾಳೆ ಅಂದೇ ಆಗಲಿ ಅಂದೇ, ನನಗೇಕೋ ಅಳುಕು ಯಾವುದು ತಳಮಳ ಇರಬಹುದೇನೋ ಪ್ರೀತಿ ಗೊತ್ತಿರಲಿಲ್ಲ.
ಅದಾದ ಹದಿನೈದು ದಿನಗಳ ಅಂತರದಲ್ಲಿ ಹೇಳಿದೆ ಹುಡುಗಿ ಗೊತ್ತಾಯ್ತು ಅಂತ ನಾನು ಒಳ್ಳೇದು ಅಂದೇ ಮದುವೆ ಮಾಡ್ಕೋ ಬದುಕು ಬದಲಾಗತ್ತೆ ಆದರೆ ಯಾತಕೋ ಗೊತ್ತಿಲ್ಲ ನಾನ್ ಒಂಟಿಯಾಗೊಕ್ ಶುರುವಾದೆ ಮತ್ತು ನಮ್ಮ ವೀಕೆಂಡುಗಳು ಒಂಟಿನೆ ಆದವು.
ನಮ್ಮಿಬ್ಬರ ಮಧ್ಯೆ ಮತ್ತೆ ಮಾತುಗಳು ಕಡಿಮೆ ಆಗಿ ನಿಂತೇ ಹೋದವು ನನ್ನ ಎದೆಯಲ್ಲಿ ಮಾತುಗಳೇ ಉಳಿದು ಕೊಲ್ಲೋಕ್ ಶುರು ಮಾಡಿದ್ವೋ ಹುಡುಗ. ಮತ್ಯಾವತ್ತೋ ಒಮ್ಮೆ ಹೇಳಿದೆ ನನ್ನ ಮದುವೆ ಬಂದು ಬಿಡು. ಅದ್ಯಾಕೋ ನಿನ್ನ ಮದುವೆಗೆ ಬರಲಿಕ್ಕೆ ಧೈರ್ಯವಿಲ್ಲದೆ ಹೋಯ್ತು. ನಿನ್ನ ಮದುವೆ ಇನ್ವಿಟೇಶನ್ ಬಂದ ದಿವಸ ಗಟ್ಟಿ ನಿರ್ಧಾರ ಮಾಡಿದೆ ಮತ್ತೊಮ್ಮೆ ನಿನ್ನ ಭೇಟಿ ಮಾಡಬಾರದು ಅಂತ.
*****
Tumba closeness annodu ommomme nammanna onti madibidutte… Gatti nirdhara thakkoluvashtu gatti manassu ivattina dinagalli beke beku..
gatti nirdhara hidisthu akka.. (y)