ಸ್ಮರಣಾ ಲೇಖನ: ಡಾ. ಎಚ್.ಎಸ್. ಚಂದ್ರೇಗೌಡ


“ಕನ್ನಡ ಮೇಷ್ಟ್ರುಗಳ ಮೇಷ್ಟ್ರು”-ಎಸ್.ಆರ್.ಮಳಗಿ
“ಮೇಷ್ಟ್ರುಗಳ ಮೇಷ್ಟ್ರು” ಎನಿಸಿಕೊಂಡಿದ್ದ ಪ್ರೊ. ಸೇತುರಾಮ ರಾಘವೇಂದ್ರ ಮಳಗಿ ಕನ್ನಡ ಸಾಹಿತ್ಯವಲಯದಲ್ಲಿ ಎಸ್.ಆರ್.ಮಳಗಿ ಎಂದೇ ಜನಜನಿತರಾಗಿದ್ದರು. ೧೦೩ ತುಂಬು ವಸಂತಗಳನ್ನು ಪೂರೈಸಿದವರನ್ನು ತಮ್ಮೆಲ್ಲಾ ಶಿಷ್ಯರು “ಮಳಗಿ ಮೇಷ್ಟ್ರು” ಎಂದೇ ಕರೆಯುತ್ತಿದ್ದರು. ಅಂಥ ಒಂದು ವಿಶಿಷ್ಟ ಪರಂಪರೆಯ ಕೊಂಡಿಯಾಗಿದ್ದ ಮಳಗಿ ಮೇಷ್ಟ್ರು, ತಮ್ಮ ೧೦೩ ವಯಸ್ಸಿನಲ್ಲಿ ಅಂದರೆ, ಡಿಸೆಂಬರ್ ೨೪ ರಂದು ವಿಧಿವಶರಾದರು. ಕನ್ನಡದ ಗುರುಪರಂಪರೆಯಲ್ಲಿ ಮಳಗಿ ಮೇಷ್ಟ್ರ ಹೆಸರು ಅಜರಾಮರ. ತದನಿಮಿತ್ತ ಈ ಸ್ಮರಣಾ ಲೇಖನ.

ಕನ್ನಡದ ಕಣ್ವ, ಆಧುನಿಕ ಕವಿಗಳ ಗುರು ಎಂದೇ ಪ್ರಸಿದ್ಧರಾಗಿದ್ದ ಬಿ.ಎಂ.ಶ್ರೀ ಮತ್ತು “ಆಚಾರ್ಯ” ತೀನಂಶ್ರೀ ಅವರೊಡನೆ ಉತ್ತಮ ಒಡನಾಟ ಹೊಂದಿದ್ದ ಎಸ್.ಆರ್.ಮಳಗಿ ಅವರು ಛಂದಸ್ಸು,ವ್ಯಾಕರಣ ಶಾಸ್ತ್ರದಲ್ಲಿ ಅಪಾರವಾದ ವಿದ್ವತ್ತನ್ನು ಹೊಂದಿದ್ದ ವಿಶಿಷ್ಟ ಪ್ರತಿಭೆ. ಅವರು ತಮ್ಮ ಪ್ರತಿಭಾಶೀಲ ಗುಣದಿಂದ ವಿಮರ್ಶಾಕೃತಿ, ಅನುವಾದಿತಕೃತಿಗಳು ಸೇರಿದಂತೆ ಅನೇಕ ಶ್ರೇಷ್ಠಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದವರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ೫೦ ವರ್ಷಗಳು ತುಂಬುತ್ತಿರುವ ಈ ಸುಸಮಯದಲ್ಲಿಡಿ ಕನ್ನಡ ವಿಭಾಗದಲ್ಲಿ ಕೆಲಸಮಾಡಿದ ಮಹನೀಯರನ್ನು ಕಂಡು, ಅಭಿನಂದಿಸುವ ಸಲುವಾಗಿ ಕಳೆದ ಜೂನ್ ತಿಂಗಳಲ್ಲಿ ಅವರ ಮನೆಗೆ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೊನ್ನುಸಿದ್ಧಾರ್ಥ, ಪ್ರಾಧ್ಯಾಪಕರಾದ ಡಾ.ಬಿ.ಗಂಗಾಧರ, ಡಾ.ಡಿ.ಕೆ.ಚಿತ್ತಯ್ಯ ಪೂಜಾರ್, ಹನಿಯೂರು ಚಂದ್ರೇಗೌಡ ಹಾಗೂ ನಾವು ಭೇಟಿ ಮಾಡಿ, ಅಭಿನಂದಿಸಿ ಬಂದಿದ್ದೆವು. (ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ದುಡಿದ ಮಹನೀಯರಲ್ಲಿ ಸದ್ಯ ಬದುಕಿದ್ದವರು ಅವರೊಬ್ಬರೆ ಎನ್ನುವ ಕಾರಣಕ್ಕಾಗಿ!) ಆ ಸಂದರ್ಭದಲ್ಲಿ ಬಹಳ ಲವಲವಿಕೆಯಿಂದಲೇ ಬೆಂ.ವಿವಿ ಯ ಕನ್ನಡ ವಿಭಾಗ ಬೆಲೆದು ಬಂದ ರೀತಿ, ಅಲ್ಲಿನ ಖ್ಯಾತ ಪ್ರಾಧ್ಯಾಕರೊಡನೆ ಅವರಿಗಿದ್ದ ಒಡನಾಟ. ಕೇಂದ್ರದ ಸಾಹಿತ್ಯಕ ಚಟುವಟಿಕೆ, ಅದರಲ್ಲೂ ಅವರ ವೃತ್ತಿ ಬದುಕಿನಲ್ಲಿ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ.ರಂ.ಶ್ರೀ.ಮುಗಳಿ ಅವರ ಸಹಕಾರ, ಎಲ್ಲವನ್ನೂ ನಗುಮುಖದಿಂದಲೇ ಹಂಚಿಕೊಂಡಿದ್ದರು. ಇಳಿವಯಸ್ಸಿನಲ್ಲಿಯೂ ಮಳಗಿ ಮೇಷ್ಟ್ರಲ್ಲಿದ್ದ ಆ ಚಟುವಟಿಕೆಯ, ಜೀವಪರ, ವೃತ್ತಿಪರ ಧೋರಣೆ, ಸಾಹಿತ್ಯಕ ವಿಷಯಗಳೆಡೆಗಿನ ಆಸಕ್ತಿ ಬೆರಗು ಹುಟ್ಟಿಸಿತ್ತು.

೧೦೦ ವರ್ಷ ದಾಟಿದ ನಂತರ ಸ್ವಲ್ಪ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದ ಮಳಗಿ ಮೇಷ್ಟ್ರು, ರಂ.ಶ್ರೀ.ಮುಗಳಿ ಅವರ ಹೆಸರೆತ್ತಿದರೆ ಸಾಕು, ಅವರಿಗೆ ನೂರು ನಾಲಗೆ ಬಂದಂತಾಗುತ್ತಿತ್ತು. ಅವತ್ತು ಹಾಗೆಯೇ ಆಯಿತು. ಸಾಮಾನ್ಯವಾಗಿದ್ದ ಸೆಂಟ್ರಲ್ ಕಾಲೇಜಿನ ಕನ್ನಡ ವಿಭಾಗವನ್ನು ಉನ್ನತಮಟ್ಟದ ಭಾಷಾ ಅಧ್ಯಯನ ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ್ದ ರಂ.ಶ್ರೀ.ಮುಗಳಿ, ಮತ್ತವರ ಸಹೋದ್ಯೋಗಿಗಳ ಗುಣಗಾನ ಮಾಡಲು ಆರಂಭಿಸಿದ್ದರು. ಆಗ ಅವರ ಮುಖದಲ್ಲಿ ಒಮದು ರೀತಿಯ ಸಂತೃಪ್ತಭಾವ ಮನೆಮಾಡಿದ್ದನ್ನು ನಾವೆಲ್ಲಾ ಅಚ್ಚರಿಯ ಜೊತೆಗೆ ಕುತೂಹಲದಿಂದ ಗಮನಿಸಿದ್ದೆವು. ಗುರು-ಹಿರಿಯರನ್ನು ಗೌರವಿಸುವಂಥ ಶ್ರೇಷ್ಠಗುಣ ಮಳಗಿ ಮೇಷ್ಟ್ರಲ್ಲಿತ್ತು. ತಮ್ಮ ನಿವೃತ್ತಿಯ ನಂತರವೂ ರಂ.ಶ್ರೀ.ಮುಗಳಿ ಅವರ ಜೊತೆಗಿದ್ದ ಸ್ನೇಹ-ಸಂಬಂಧ ಹೇಗೆ, ಮಳಗಿ ಅವರನ್ನು ಕ್ರಿಯಾಶೀಲರನ್ನಾಗಿಸಿತ್ತು ಎಂಬುದರ ವಿವರ ಅವರ ಮಾತಿನಲ್ಲಿತ್ತು.

ವರಕವಿ ದ.ರಾ.ಬೇಂದ್ರೆಯವರನ್ನು ಮಳಗಿ ಅವರು ತಮ್ಮ ಅಧ್ಯಾತ್ಮ ಗುರು ಎಂದೇ ಪರಿಗಣಿಸಿದ್ದ ಮಳಗಿ ಮೇಷ್ಟ್ರು, ಅಕ್ಷರಶಃ ಬೇಂದ್ರೆಯವರ ಮಾನಸ ಪುತ್ರರಂತೆಯೇ ಬದುಕಿದವರು.
ಬಾಲ್ಯ ಜೀವನ:

ಕರ್ನಾಟಕದ “ಗುಮ್ಮಟ ನಗರಿ” ಎಂದು ಪ್ರಖ್ಯಾತಿಗಳಿಸಿದ ಬಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದಲ್ಲಿ ೧೯೧೦ ರ ಜುಲೈ ೮ ರಂದು ಮಳಗಿ ಮೇಷ್ಟ್ರು ಜನಿಸಿದರು. ತಂದೆ, ವೃತ್ತಿಯಲ್ಲಿ ಶಾಲಾ ಮಾಸ್ತರರಾಗಿದ್ದ ರಾಘವೇಂದ್ರ ಪಾಂಡುರಂಗ ಮಳಗಿ, ತಾಯಿ ಲಕ್ಷ್ಮೀಬಾಯಿ.

ಶಿಕ್ಷಣ:
ಅತ್ಯಂತ ಕಡುಬಡತನದಲ್ಲಿ ಬೆಳೆದ ಬಾಲಕ ಎಸ್.ಆರ್.ಮಳಗಿ ಅವರು ಅತ್ಯಂತ ಬುದ್ಧವಂತ ವಿದ್ಯಾರ್ಥಿಯಾಗಿದ್ದರು.  ಅವರ ಪ್ರಾಥಮಿಕ ಶಿಕ್ಷಣ ಧಾರವಾಡ ಮತ್ತು ಗದಗ ನಲ್ಲಿ ನಡೆಯಿತು. ೧೯೩೭ ರಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅದಾದ ನಂತರ ೧೯೪೦ ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿಯನ್ನು ಪಡೆದು, ತಮ್ಮ ವೃತ್ತಿ ಬದುಕಿಗೊಂದು ದಾರಿ ಕಂಡಕೊಂಡರು.

ವೃತ್ತಿ ಜೀವನ:
ಉತ್ತಮ ವಿದ್ಯಾರ್ಥಿ ಎಂದು ತಮ್ಮ ಗುರುಗಳ ಪ್ರೀತಿಗೆ ಪಾತ್ರವಾಗಿದ್ದ ಮಳಗಿ ಅವರು ಅನೇಕ ಕನ್ನಡ ಮೇಷ್ಟ್ರುಗಳಿಗೆ ಗುರುವಾಗುವ ಮೂಲಕ “ಮೇಷ್ಟ್ರುಗಳ ಮೇಷ್ಟ್ರೆ”ನಿಸಿಕೊಂಡಿದ್ದರು. ತಮ್ಮ ಸ್ನಾತಕೋತ್ತರ ಪದವಿ ವ್ಯಾಸಂಗದ ನಂತರ ಅವರು ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ(೧೯೩೮ ರಿಂದ ೧೯೪೨ ರವರೆಗೆ) ಸುಮಾರು ೪ ವರ್ಷಗಳ ಕಾಲ ದುಡಿದರು. ಇದು ಮಳಗಿ ಅವರ ವೃತ್ತಿಜೀವನದಲ್ಲಿಯೇ ಉತ್ತಮ ಅವಕಾಶಗಳ ಹೆಬ್ಬಾಗಿಲಾಯಿತು. ಇಲ್ಲಿಂದ ಹಿಂದಿರುಗಿ ನೋಡದ ಮಳಗಿ ಮೇಷ್ಟ್ರು ಅಲ್ಲಿಂದ ಆ ಕಾಲಕ್ಕೇ ಉತ್ತಮ ಶಿಕ್ಷಣ ನೀಡುವಿಕೆಗೆ ಪ್ರಖ್ಯಾತಿ ಪಡೆದಿದ್ದ ಧಾರವಾಡದ ಕರ್ನಾಟಕ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡು, ಬರೋಬ್ಬರಿ ೨೦ ವರ್ಷಗಳ(೧೯೪೨ ರಿಂದ ೧೯೬೧ ರವರೆಗೆ) ಕಾಲ ಸೇವೆಸಲ್ಲಿಸಿದರು.

ಕರ್ನಾಟಕ ಕಾಲೇಜಿನಲ್ಲಿ ಕೆಲಸ ಮಾಡುವುದೆಂದರೆ, ಅದೊಂದು ಅದೃಷ್ಟದ ಕಾರ್ಯವೆಂದೆ ಭಾವಿಸಿದ್ದ ಕಾರಣ, ಸಾಹಿತ್ಯ ಕ್ಷೇತ್ರದ ಘಟಾನುಘಟಿ ದಿಗ್ಗಜರ ಸಾಮೀಪ್ಯದ ಜೊತೆಗೆ ಬಾಂಧವ್ಯವೂ ದೊರೆಯಿತು. ಅಲ್ಲಿಯೇ ಬೇಂದ್ರೆಯವರ ಒಡನಾಟ ಲಭಿಸಿ, ತಮ್ಮ ಅಧ್ಯಾತ್ಮ ಗುರುವನ್ನಾಗಿ ಸ್ವೀಕರಿಸಲು ಅವಕಾಶ ದೊರೆತಂತಾಯಿತು.

ಅದರನಂತರ, ಮಳಗಿ ಮೇಷ್ಟ್ರು ತಮ್ಮ ೫೧ ನೇ ವಯಸ್ಸಿನಲ್ಲಿ ಕರ್ನಾಟಕ ಕಾಲೇಜು ತೊರೆದು, ದಾವಣಗೆರೆಯ ಶ್ರೀ ಧರ್ಮರತ್ನಾಕರ ಮದ್ದೂರಾಯಪ್ಪ ಕಾಲೇಜಿಗೆ ಸೇರಿ, ಅಧ್ಯಾಪನ ವೃತ್ತಿಯಲ್ಲಿ ತೊಡಗಿಕೊಂಡರು.  ಅಲ್ಲಿಂದ ಬೆಂಗಳೂರು ವಿಶ್ವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಪ್ರತಿಷ್ಠಿತ ಕನ್ನಡ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರ ಸಾಮೀಪ್ಯದಿಂದಾಗಿ ಉತ್ತಮ ಸೇವೆ ಸಲ್ಲಿಸಲು ಅನುಕೂಲವಾಯಿತು. ಮಳಗಿ ಮೇಷ್ಟ್ರ ಸ್ನೇಹಪರವಾದ ನಡೆ-ನುಡಿ, ವಿಶಿಷ್ಟ ಸಾಹಿತ್ಯ ಸೇವೆ, ಬೋಧನಾ ಕ್ರಮ, ಶಿಷ್ಯವೃಂದದ ಮೇಲಿನ ಕಾಳಜಿಪೂರ್ವ ಪ್ರೀತಿ-ಗೌರವದಿಂದಾಗಿ ತಮ್ಮ ಗುರುಗಳು ಹಾಗೂ ಶಿಷ್ವೃಂದದಿಂದಲೇ “ಮೇಷ್ಟ್ರುಗಳ ಮೇಷ್ಟ್ರು” ಎಂಬ ಗೌರವಾಭಿಮಾನಕ್ಕೆ ಪಾತ್ರವಾದರು. ಅದಾದ ಕೆಲ ದಿನಗಳಲ್ಲಿ ಬೆಂಗಳೂರು ವಿವಿಯ ಕರ್ತವ್ಯದಿಂದ ನಿವೃತ್ತಿಹೊಂದಿದರು.

ನಿವೃತ್ತಿಯ ನಂತರ ಅವರನ್ನು ಶಿವಮೊಗ್ಗದ ಲಾಲ್ ಬಹಾದ್ದೂರ್ ಕಾಲೇಜಿನ ಪ್ರಾಂಶುಪಾಲರ ಹುದ್ದೆ ಹುಡುಕಿಕೊಂಡು ಬಂದಿತು. ಇದು ಮಳಗಿ ಅವರಲ್ಲಿದ್ದ ಆಡಳಿತ ಜ್ಞಾನ, ಶಿಷ್ಯರ ಮೇಲಿನ ಪ್ರೀತಿ-ವಿಶ್ವಾಸ ಹಾಗೂ ಒಳ್ಳೆಯ ಶೈಕ್ಷಣಿಕ ಹಿನ್ನೆಲೆಗೆ ಹಿಡಿದ ಕನ್ನಡಿಯಾಗಿತ್ತು. ಪ್ರಾಂಶುಪಾಲರಾಗಿ ಆ ಭಾಗದ ವಿದ್ಯಾರ್ಥಿಗಳು ಹಾಗೂ ಆ ಕಾಲೇಜಿನ ಉನ್ನತಿಗೆ ಶ್ರಮಿಸಿದ ಮಳಗಿ ಅವರು ಅಲ್ಲಿಂದ ನಿವೃತ್ತಿ ಪಡೆದು, ವಿಶ್ರಾಂತ ಜೀವನವನ್ನು ಅನುಭವಿಸುತ್ತಾ, ಮಿಕ್ಕ ಸಮಯವನ್ನು ಸಾಹಿತ್ಯ ರಚನೆಯಲ್ಲಿ ಕಳೆಯತೊಡಗಿದರು.

ಸಾಹಿತ್ಯ ಸಾಂಗತ್ಯ:
ಉತ್ತಮ ಭಾಷಾ ಪಂಡಿತರೂ ಘನ ವಿದ್ವಾಂಸರೂ ಆಗಿದ್ದ ಸೇತುರಾಮ ರಾಘವೇಂದ್ರ ಮಳಗಿ ಅವರು ರಚಿಸಿದ ಅನೇಕ ಕೃತಿಗಳು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಗಳಾಗಿ ಮಿನುಗುತ್ತಿವೆ. ಉತ್ತಮ ವಿಮರ್ಶಕ, ಕವಿ, ಅನುವಾದಕ, ಜೀವನ ಚರಿತ್ರೆಕಾರ…ಹೀಗೆ ಬಹುಮುಖಿ ವ್ಯಕ್ತಿತ್ವದ ಮಳಗಿ ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕೃತಿ ರಚಿಸಿದ ಕೀರ್ತಿಗೆ ಪಾತ್ರರು.

ಅವುಗಳಲ್ಲಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತೆ, ಕನ್ನಡ ಕವಿಕಾವ್ಯ ಪರಿಚಯ(ಇಂಗ್ಲಿಷ್), ಸಾಹಿತ್ಯ ವಿಮರ್ಶೆ, ವ್ಯಾಕರಣ ಛಂದಸ್ಸು, ಕಾವ್ಯ ಮೀಮಾಂಸೆ, ಹರಿಶ್ಚಂದ್ರ ಕಾವ್ಯ ಚರಿತೆ, ಭಾಷಾಶಾಸ್ತ್ರ, ಬಿಡುಗಡೆಯ ಬೇಲಿ: ಸ್ವಾತಂತ್ರ್ಯ ಚರಿತೆ, ವಾಕ್ಯಮಾಣಿಕ್ಯ ಕೋಶ, ವೈದಿಕ ಸಂಸ್ಕೃತ(ಇಂಗ್ಲಿಷ್ ಅನುವಾದ), ಬಾಳದಾರಿಯಲ್ಲಿ(ಕವನ ಸಂಕಲನ), ಶ್ರೀಅರವಿಂದ ಪ್ರವೇಶಿಕೆ(ಆಧ್ಯಾತ್ಮಿಕ ಬರಹಗಳು), ಛಂದೋದರ್ಶನ(ಬ್ರಹ್ಮರ್ಷಿ ದೀವರಾಟ), ವೀರಮಾತೆ ಗುತ್ತಲ ಗುರುಪಾದತಾಯಿ(ಜೀವನ ಚರಿತೆ) ಪ್ರಮುಖವಾಗಿವೆ.

ಇಷ್ಟೇ ಅಲ್ಲದೆ, ಸಂಪಾದಕರಾಗಿಯೂ ಅನೇಕ ಸಾಹಿತ್ಯಕ ಪತ್ರಿಕೆಗಳನ್ನು ಹೊರತಂದಿರುವ ಮಳಗಿ ಅವರು, ಶ್ರೀಅರವಿಂದ ಆಶ್ರಮದಿಂದ ಪ್ರಕಟಿಸುತ್ತಿದ್ದ, “ಅಖಿಲ ಭಾರತ ಪತ್ರಿಕೆ”ಯ ಪ್ರಧಾನ ಸಂಪಾದಕರಾಗಿ ಸುಮಾರು ೨೩ ವರ್ಷಗಳ ಕಾಲ(೧೯೭೩ ರಿಂದ ೧೯೯೫) ದುಡಿದಿದ್ದಾರೆ.   ಇದಲ್ಲದೆ, ಅನೇಕ ವಿದ್ವಾಂಸರಿಂದ ಸಂಶೋಧನಾ ಲೇಖನ-ಕೃತಿಗಳನ್ನು ಬರೆಸಿ, ಕೇಶಿರಾಜನ ಶಬ್ದಮಣಿ ದರ್ಪಣ ಸಂಗ್ರಹ, ಕವಿಕಾವ್ಯ ದರ್ಶನ ಎಂಬಿತ್ಯಾದಿ ಸಂಪಾದಿತ ಕೃತಿಗಳನ್ನು ಕನ್ನಡ ಸಾಹಿತ್ಯದ ಮಡಿಲಿಗೆ ಅರ್ಪಿಸಿದ ಕೀರ್ತಿಗೆ “ಮಳಗಿ ಮೇಷ್ಟ್ರು” ಪಾತ್ರರಾಗಿದ್ದಾರೆ. ಈಗ ಅವರ ಭೌತಿಕ ದೇಹ “ಮಣ್ಣಾದರೂ” ಅವರ ಭಾಷಾ ಪ್ರೌಢಿಮೆ, ಸಾಹಿತ್ಯದಲ್ಲಿನ ವಿಷಯ ವೈವಿಧ್ಯತೆ, ಗುರು-ಶಿಷ್ಯ ಪರಂಪರೆ ಮೇಲಿನ ಅವರ ನಂಬುಗೆ, ಮಳಗಿ ಮೇಷ್ಟ್ರನ್ನು ಸಾಹಿತ್ಯಾಸಕ್ತರೆದೆಯಲ್ಲಿ ಅಜರಾಮರರನ್ನಾಗಿಸಿದೆ. ಆ ಮೂಲಕ ಅವರ ನೆನಪು ಸಾಹಿತ್ಯಲೋಕವೆಂಬ ಮಹಾಸಾಗರದಲ್ಲಿ ಸ್ವಾತಿಮುತ್ತಾಗಿ ಕಂಗೊಳಿಸಲಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x