ಮೊದಲು ಓದುಗನಾಗು

ಸ್ಪೂರ್ತಿಯ ಸುಮಗಳೊಂದಿಗೆ ಮನಸ್ಪೂರ್ತಿಯಾಗಿ ಮಾತಾದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಕವನಸಂಕಲನ: ಸ್ಪೂರ್ತಿಯ ಸುಮಗಳು
ಲೇಖಕಿಯರು: ಶ್ರೀಮತಿ ದಾಕ್ಷಾಯಣಿ ಮಂಡಿ

‘ಸ್ಪೂರ್ತಿಯ ಸುಮಗಳು’ ಶ್ರೀಮತಿ ದಾಕ್ಷಾಯಿಣಿ ಮಂಡಿ ಅವರ ಮೊದಲ ಕವನ ಸಂಕಲನ ಈ ಸಂಕಲನದಲ್ಲಿ 60 ವಿಭಿನ್ನವಾದ ಕವಿತೆಗಳಿವೆ. ಪ್ರತಿಯೊಂದು ಕವಿತೆಯ ವಸ್ತುವು ವಿಭಿನ್ನತೆಯಿಂದ ಕುಡಿದೆ. ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿಶೇಷವಾಗಿ ಮಹಾಕವಿ ರನ್ನ, ಹೆಣ್ಣಿನ ಕೋರಿಕೆ, ಮನದ ಹಂಬಲ, ಗುರುವಿನ ಮಹಿಮೆ, ಮಹಾತ್ಮ ಗಾಂಧೀಜಿ, ನೂತನ ಪಿಂಚಣಿ, ದೇಶ ರಕ್ಷಕ, ನಿಸರ್ಗ ರಮ್ಯತೆ, ಮತದಾನ, ಗೆಳೆತನದ ಮಾಧುರ್ಯ, ಕೃಷಿ, ಭ್ರಷ್ಟಾಚಾರ, ವೈಯಕ್ತಿಕ ಹೋರಾಟದ ಬದುಕು, ಸಾಮಾಜಿಕ ನೆಲೆಯಲ್ಲಿ ಜಗತ್ತನ್ನು ನೋಡುವ ಸೂಕ್ಷ್ಮತೆ ಇವೆಲ್ಲವೂ ಇವರ ಕವಿತೆಯ ವಿಷಯ ವಸ್ತುಗಳಾಗಿವೆ.

ಮಹಾಕವಿ ರನ್ನ ಎಂಬ ಕವಿತೆಯಲ್ಲಿ

ರನ್ನ ಸವಿಗನ್ನಡದ ಕಳಸಕ್ಕೆ ಹೊನ್ನ
ಇಮ್ಮಡಿಯಾಗುತ್ತಿದೆ ಈ ನೆಲದ ಬಣ್ಣ..

ನೀನು ಕನ್ನಡಾಂಬೆಯ ಹೊನ್ನುಡಿ
ನಿನ್ನ ಬಗ್ಗೆ ನುಡಿಯಲಾರದು ಅನ್ಯರು ಮಾರ್ನುಡಿ

ಎಂದು ಹೇಳುವುದರ ಮೂಲಕ ಕವಿಚಕ್ರವರ್ತಿ ರನ್ನನ ಮೇಲಿನ ಅಭಿಮಾನವನ್ನು ತಮ್ಮ ಕವಿತೆಯ ಮೂಲಕ ಇಲ್ಲಿ ಸಾದರಪಡಿಸಿದ್ದಾರೆ.

ನೆನಪುಗಳು ಕಹಿ ನೆನಪಾಗಲಿ ಸಿಹಿ ನೆನಪುಗಳೇ ಆಗಲಿ ಎಲ್ಲರನ್ನು ಕಾಡುವುದು ಸಹಜ ಅದರಲ್ಲೂ ಪ್ರೀತಿಯ ನೆನಪುಗಳು ನೋವಿಂದ ಕೂಡಿದರೂ ನಗುವಿನಿಂದ ಕುಡಿದರೂ ಮತ್ತೆ ಮತ್ತೆ ಕಾಡುತ್ತಲೆ ಇರುತ್ತವೆ.

ನಿನ್ನ ಮೋಡಿಯ ನುಡಿಗಳು ಕಷ್ಟಗಳ ಮರೆಸತಾವ
ನಿನ್ನಿಷ್ಟ ಗಳ ಬೆನ್ನತ್ತಿ ನನ್ನ ತಿರುಗಿಸುತಾವ
ವಿರಹ ವೇದನೆಯನ್ನು ನನ್ನಿಂದ ದೂರ ಮಾಡತಾವ
ಸಾಧನೆಯ ಹಾದಿಯಲ್ಲಿ ನನ್ನ ಮುನ್ನಡೆಸುತಾವ

ಎಂಬ (ನೆನಪುಗಳು) ಕವಿತೆಯ ಸಾಲುಗಳು ಸಹಜವಾಗಿಯೇ ಕಂಡರು ಬದುಕಿನ ಏಳುಬೀಳುಗಳಲ್ಲಿ ನಮ್ಮನ್ನು ಪ್ರೀತಿಯಿಂದ ನೆನಪಿಸಿಕೊಂಡು ನಮ್ಮನ್ನು ತನ್ನತ್ತ ತಿರುಗಿಸಿಕೊಂಡು ನಮ್ಮನ್ನು ಸಂತೈಸಿ ನಾವು ನಡೆಯುವ ದಾರಿಯಲ್ಲಿ ನಮ್ಮ ಜೊತೆಗೆ ನಿಂತು ಮುನ್ನಡೆಸುತ್ತವೆ ಎಂಬ ಧನಾತ್ಮಕ ವಿಚಾರಗಳು ಕವಿತೆಯ ಮೂಲವಾಗಿ ಕಾಣಸಿಗುತ್ತವೆ.

ಕವನ ಸಂಕಲನದಲ್ಲಿ ಕೆಲವು ಕವಿತೆಗಳು ಕವಿತೆಯಾಗಿ ತಟ್ಟುವುದಿಲ್ಲ ನೇರ ನುಡಿಗಳಾಗಿ ನೇರ ಮಾತುಗಳಾಗಿ ಮಾತ್ರ ಗೋಚರಿಸುತ್ತವೆ. ಅದರ ಹೊರತಾಗಿ ಕವಯತ್ರಿಯವರು ಪ್ರಾಸದ ಚಮತ್ಕಾರಿಕ ಶಬ್ದಗಳನ್ನು ತುಂಬಾ ಚಾಣಾಕ್ಷತೆಯಿಂದ ಬಳಸಿದ್ದಾರೆ. ಪ್ರಾದೇಶಿಕ ಭಾಷೆಯನ್ನು ಮತ್ತು ಗ್ರಾಮೀಣ ಭಾಷೆಯನ್ನು ಕವಿತೆಗಳಲ್ಲಿ ತುಂಬಾ ಸೊಗಸಾಗಿ ಹಿಡಿದಿಟ್ಟಿದ್ದಾರೆ.

ಜಗದ ವೈಚಿತ್ರ್ಯ ಎಂಬ ಕವನದಲ್ಲಿ ಬಡವರು ಮತ್ತು ಶ್ರೀಮಂತರು ಮನುಷ್ಯರೇ ಆದರೂ ಅವರು ಬದುಕುವ ರೀತಿ ಭಿನ್ನವಾಗಿರುತ್ತದೆ ಇಬ್ಬರು ಹೋರಾಟಗಾರರು ಒಬ್ಬರು ಇರುವದನ್ನು ಉಳಿಸಿಕೊಳ್ಳಲು ಹೋರಾಡುತ್ತಾರೆ. ಇನ್ನೊಬ್ಬರು ಗಳಿಸಲು ಹೋರಾಡುತ್ತಾರೆ. ಗಳಿಸಿದ್ದು ಉಳಿಸಿದ್ದು ಎಲ್ಲವೂ ನಶ್ವರವೇ ಹೌದು ನಮ್ಮ ಕಣ್ಮುಂದಿರುವ ಪ್ರಕೃತಿಯಂತೆ ನಾವು ಬದುಕುತ್ತಿಲ್ಲ ಪ್ರಕೃತಿ ಯಾರಲ್ಲಿಯೂ ಬೇದಬಾವ ಮಾಡುವುದಿಲ್ಲ ಆದರೆ ಮನುಷ್ಯ ಬಡವ-ಶ್ರೀಮಂತ ಎಂಬ ಅಂತಸ್ತುಗಳನ್ನು ಗುರುತಿಸಿಕೊಂಡು ವ್ಯರ್ಥ ಹೋರಾಟಕ್ಕೆ ಇಳಿದಿದ್ದಾನೆ ಎಂಬುದು ಒಂದು ವಿಚಿತ್ರವಾದ ಸಂಗತಿ ಎಂಬ ಪ್ರಶ್ನಾರ್ಥಕ ಮನೋಭಾವನೆಯನ್ನು ಕವಿತೆಯ ಮೂಲಕ ಕವಯತ್ರಿ ವ್ಯಕ್ತಪಡಿಸುತ್ತಾರೆ.

ಕಾಂಚಾಣದ ಕರಾಮತ್ತು ಎಂಬ ಕವಿತೆ ಕವನಸಂಕಲನದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ವಾಸ್ತವ ಜಗತ್ತನ್ನು ಬಿಚ್ಚಿಡುವುದರೊಂದಿಗೆ ಹಣ ಯಾರನ್ನೆಲ್ಲಾ ಹೇಗೆ ತನ್ನ ವಶಕ್ಕೆ ಪಡೆದುಕೊಂಡಿದೆ ಎಂಬುದನ್ನು ಸೂಕ್ಷ್ಮವಾಗಿ ಮತ್ತು ಅಷ್ಟೇ ಸರಳವಾಗಿ ಬಿತ್ತರಿಸುತ್ತಾರೆ.

ರಾಜಕಾರಣಿಗಳ ಜೋಳಿಗೆಯಲ್ಲಿ ತುಂಬಿರುವೆ
ಅಧಿಕಾರಿಗಳ ಅಂಗಳದಲ್ಲಿ ಅಡ್ಡೆಯಾಗಿರುವೆ
ಜೈ ಎಂದವರ ಬಾಯಲ್ಲಿ ಹೋಳಿಗೆ ಹಾಕುವೆ
ಸತ್ಯದಿಂದ ದೂರಾದವರ ಸೊತ್ತಾಗಿ ಮೆರೆವೆ
ಕಾಂಚಾಣವೇ ನೀ ಎಲ್ಲರಿಗೂ ಕರಾಮತ್ತು ಮಾಡಿರುವೆ|

ಎಂದು ಹೇಳುವುದರ ಮೂಲಕ ಕವಿಯತ್ರಿ ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ’ ಎಂಬ ನುಡಿಯನ್ನು ಇಲ್ಲಿ ಅಧಿಕೃತವಾಗಿ ಸಮರ್ಥಿಸಿಕೊಳ್ಳುವುದರ ಮೂಲಕ ಅದು ಸತ್ಯವೆಂಬುದನ್ನು ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುನ್ನುಡಿಯಲ್ಲಿ ಡಾಕ್ಟರ್ ಅಶೋಕ್ ನರೋಡೆಯವರು ಹೇಳುವಂತೆ ಸ್ಪೂರ್ತಿಯ ಸುಮಗಳು ಕವನಸಂಕಲನದಲ್ಲಿ ವಸ್ತು ವೈವಿಧ್ಯತೆಯ ಕವನಗಳು ಬದುಕಿನ ಜೀವನಪ್ರೀತಿಯ, ಜೀವನ ಶ್ರದ್ಧೆಯ ಕವನಗಳು ಗಮನ ಸೆಳೆಯುತ್ತವೆ. ಕಾವ್ಯ ಸುಮಗಳು ನಿತ್ಯ ಸಂಜೀವಿನಿಯಂತೆ ತನ್ನ ಪರಿಮಳವನ್ನು ಪಸರಿಸುತ್ತಲಿವೆ. ಎಂದಿರುವುದು ಸೂಕ್ತ ಮತ್ತು ವಿಮರ್ಶಾತ್ಮಕ ಮಾತಾಗಿ ಕಾಣುತ್ತದೆ.
ಬೆನ್ನುಡಿಯ ಮಾತುಗಳಲ್ಲಿ ಡಾಕ್ಟರ್ ಸಿದ್ದು ರಾ. ದಿವಾಣ ಅವರು ಕವಯತ್ರಿ ಕಾವ್ಯಕ್ಕೆ ಬೇಕಾದ ಪರಿಸರ ಮತ್ತು ಪರಿಕರಗಳನ್ನು ಭಾವ-ಸ್ವಭಾವ-ಪ್ರಭಾವ ಅನುಭವ ಮತ್ತು ಅನುಭಾವವನ್ನು ಸ್ಪೂರ್ತಿಯ ಸುಮಗಳು ಕೃತಿಯ ಮೂಲಕ ಉಣಿಸಿದ್ದಾರೆ. ಎಂಬ ಮಾತು ಕವನಸಂಕಲನದ ತೂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕವನ ಸಂಕಲನದಲ್ಲಿನ ಅವ್ವ ಮತ್ತು ಅಪ್ಪನ ಕುರಿತಾದ ಕವಿ-ತೆಗಳು ಭಾವನಾತ್ಮಕವಾಗಿ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ಹಸಿವು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕವಿತೆಗಳು ನಮ್ಮನ್ನು ಯೋಚನೆಗಿಳಿಸುತ್ತವೆ. ನಾಡು-ನುಡಿ ದೇಶ ಪ್ರೇಮ ನಿಸರ್ಗ ಸ್ನೇಹ ಇವುಗಳನ್ನು ಮೈತುಂಬಿಕೊಂಡ ಕವಿತೆಗಳು ನಮ್ಮಲ್ಲಿಯೂ ಪ್ರೀತಿಯನ್ನು ಹುಟ್ಟಿಸುತ್ತವೆ. ಒಟ್ಟಾರೆಯಾಗಿ ಸ್ಪೂರ್ತಿಯಿಂದಲೆ ಸಾಹಿತ್ಯಕ್ಷೇತ್ರಕ್ಕೆ ಹೆಜ್ಜೆ ಇಟ್ಟಿರುವ ಶ್ರೀಮತಿ ದಾಕ್ಷಾಯಣಿ ಮಂಡಿ ಅವರು ಸಾಹಿತ್ಯದ ಮೂಲಕ ಮತ್ತಷ್ಟು ಸ್ಪೂರ್ತಿ ಪಡೆದುಕೊಂಡು ಸ್ಪೂರ್ತಿಯನ್ನೆ ಉಣಿಸುವಂತಹ ಮಹತ್ತರವಾದ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಲಿ ಎಂಬ ಮಹದಾಸೆಯೊಂದಿಗೆ ನನ್ನೆರಡು ಅನಿಸಿಕೆಗಳನ್ನು ತಮ್ಮೆದುರು ನೀಡಿದ್ದೇನೆ. ಪುಸ್ತಕವನ್ನು ಪ್ರೀತಿಯಿಂದ ಕಳಿಸಿ ನನ್ನನ್ನು ಓದಿಗೆ ತೊಡಗಿಸಿಕೊಳ್ಳುವಂತೆ ಮಾಡಿದ್ದಕ್ಕೆ ತುಂಬು ಪ್ರೀತಿಯ ಧನ್ಯವಾದಗಳು.

-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಸ್ಪೂರ್ತಿಯ ಸುಮಗಳೊಂದಿಗೆ ಮನಸ್ಪೂರ್ತಿಯಾಗಿ ಮಾತಾದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

  1. ಬಹಳ ಹತ್ತಿರದವರಾಗಿದ್ದರೂ ,ಬಹು ದೂರಕೆ ಓದಿನ ಮೂಲಕ ಓದುಗರನ್ನೂ ಒಯ್ಯಬಲ್ಲ ಚಾಲಕ ಬಲ ಇವರಲ್ಲಿ ಮೂಡಿ ಬಂದಿದೆ .ಹೀಗೆಯೇ ಸಾಹಿತ್ಯ ಕುಸುಮಗಳು ಅರಳಲಿ.ನಮ್ಮವರೇ ಆದ ದ್ರಾಕ್ಷಾಯಣಿ ಮಂಡಿಯವರಿಗೆ ಶುಭ ಹಾರೈಕೆಗಳು .

Leave a Reply

Your email address will not be published. Required fields are marked *