ಮೊನ್ನೆ ಶ್ರೀವಲ್ಲಭ ಆರ್ . ಕುಲಕರ್ಣಿ ಇವರ "ಹೀಗೊಂದು ವಧು ಪರೀಕ್ಷೆ" ಲಲಿತ ಪ್ರಬಂಧ ಓದುತ್ತಿದ್ದೆ… ಹೌದೌದು ಅನ್ನಿಸಿಬಿಟ್ಟಿತ್ತು. ನನಗೀಗ ಅಪಘಾತವಾಗಿ ಕ್ಷಮಿಸಿ ಮದುವೆಯಾಗಿ ೧೧ ವರ್ಷ.. ಹನ್ನೊಂದು ವರ್ಷದ ಹಿಂದೆ ನಾನು ವಧು ಪರೀಕ್ಷೆಗೆ ಹೋದದ್ದು… ಒಂದಲ್ಲ ಅಂತ ಒಂಬತ್ತು. ಒಮ್ಮೆ ಗದಗ ಜಿಲ್ಲೆಯ ಯಾವುದೋ ಊರಿಗೆ ಕನ್ಯಾ ನೋಡಲು ಹೋಗಿದ್ದೆವು. ದಾರಿಯಲ್ಲಿ ಹೋಗುತ್ತಾ ಜವಳಿ ಅಂಗಡಿ ಕಿರಾಣಿ ಅಂಗಡಿ ಎಲ್ಲಾ ನೋಡಿದೆ… "ವೈನ ಶಾಪ …. ಕಿರಾಣಿ ಶಾಪ …. ಕಟ್ಟಿಂಗ ಸಲೂನ …." ಹೀಗೆ ಸಾಗಿತ್ತು ಹೆಸರುಗಳ ಪಟ್ಟಿ.. ಅದರಲ್ಲೂ ಒಂದು ಅಂಗಡಿಗಿದ್ದ " ಒಂದೇ ಮಾತಿನ ಅಂಗಡಿ" ಹೆಸರು ನೋಡಿ ಎಲಾ ಇವ್ನಾ ನಾನೇನಾದ್ರು ಆ ಊರಿನ ಹುಡುಗಿ ನೋಡಿ ಬಂದದ್ದೇ ನಿಜವಾದರೆ " ನೀವು ಒಂದ್ಸಲ ಕನ್ಯಾ ನೋಡಾಕ್ ಬಂದೀರಿ ಅಂದ್ರ ಒಪ್ಪಿ ಮದುವೆ ಆಗಕಾಬೇಕಂದ್ರ ಏನಪ್ಪಾ ಮಾಡೋದು ಅನ್ನಿಸಿತ್ತು.. "ಅನುಕೂಲಕೊಬ್ಬ ಗಂಡ" ಸಿನಿಮಾದ " "ಒಂಬತ್ತು ಒಂಬತ್ತು ಒಂಬತ್ತು …………………… " ಹಾಡನ್ನು ಈಗ ನೆನೆಸಿಕೊಂಡು ಬಿಕ್ಕಳಿಸಿ ಬಿಕ್ಕಳಿಸಿ ನಗುತ್ತಿರುತ್ತೇನೆ. ಒಂಭತ್ತನೆಯದಕ್ಕೆ ನೋಡೋ ಶಾಸ್ತ್ರ ಮುಗಿಸಿ ಬಂದು ಒಂದು ವಾರದಾಗ ರಿಸಲ್ಟ್ ಕೊಡುವುದಾಗಿ ಬಂದಿದ್ದೆವು… ಋಣಾನುಬಂಧ ರೂಪೇನಾ …. ಅಂತೇನೋ ಹೇಳುತ್ತಾರಲ್ಲ… ಒಪ್ಪಿಕೊಂಡಿದ್ದು ಆಯಿತು. ಅಭಿಪ್ರಾಯ ತಿಳಿಸಿದ್ದು ಆಯಿತು… "ಮದುವೆ" ಎಂಬ ನಿಗದಿಯಿರದ ಮೊತ್ತದ ಪಾಲಿಸಿಗೆ ನಾವು ಲೈಫ್ ಲಾಂಗ್ ಇನ್ಸ್ಟಾಲ್ಮೆಂಟ್ ಕಟ್ಟುತ್ತೇವೆ. ಆದರೆ "ಮ್ಯಾಚುರಿಟಿ" ಅಂತೂ ಖಂಡಿತ ಇದೆ.. ಅನುಭವದಲ್ಲೂ ಅಯುಷ್ಯದಲ್ಲೂ.
ಮುಂದೆ ಬೀಗರಾಗುವವರಿಗೆ ಹುಡುಗಿ ಫೋಟೋ ಕಳಿಸಿಕೊಡಲು ಹೇಳಿದೆವು… ಪಾಪ, ಪೋಸ್ಟ್ ಮ್ಯಾನ್ ತಪ್ಪೋ ಇವರು ಕಳಿಸಿದ್ದೇ ಲೇಟೋ ಅಂತೂ ಮೂರು ತಿಂಗಳ ನಂತರ ಫೋಟೋ ಬಂತು. ಫೋಟೋ ನೋಡುವವರೆಗೂ ನಾನು ನೋಡಲು ಹೋಗಿದ್ದ, ನೋಡಿ ಬಂದಿದ್ದ ಮುಖವೇ ಮರೆತು ಬಿಟ್ಟಿದ್ದೆ. ಆಮೇಲೆ ನಿಶ್ಚಿತಾರ್ಥವೂ ಆಯಿತು. ಬಿಡಿ, ಹುಡುಗಿಯೊಂದಿಗೆ ಸಣ್ಣ ದಾಗಿ ಮಾತುಕತೆ ಶುರು ಮಾಡಬೇಕು, ಮೊಬೈಲ್ ಇದ್ದಿಲ್ಲ, ಲ್ಯಾಂಡ್ ಲೈನ್ ಗೆ ಮಾತಾಡಬೇಕು. ಒಂದಿನ ಮಾತಾಡಿ ಶುರು ಮಾಡಿದ್ದಾಗಿತ್ತು.. ಮಾತುಗಳ ಮಧ್ಯೆ ಓದು ಆಸಕ್ತಿ, ಹವ್ಯಾಸ, ಎಲ್ಲದರ ಬಗ್ಗೆ ಹೇಳಿ ಕೇಳಿದ್ದಾಗಿತ್ತು. ಆಗಾಗ ಫೋನ್ ಮಾಡಿ ಮಾತಾಡುವುದು ನಡೆದಿತ್ತು..
ಒಂದಿನ ಮಾತಾಡ್ತಾ "ನಿಂಗೇನಿಷ್ಟ" ಕೇಳಿದೆ. "ನಂಗೆ ಸ್ಪಿರಿಟ್ ಅಂದ್ರೆ ಭಾಳ ಇಷ್ಟ ಈ ಸಲ ಬಂದ್ರೆ ತಗೊಂಡು ಬರ್ರಿ … ಅದು ಎಲ್ಡು ಲೀಟರ್ ದ್ದು" ಅಂದುಬಿಟ್ಟಳು ಹುಡುಗಿ …. ಒಮ್ಮಿಂದೊಮ್ಮೆಲೇ ಗಾಬರಿಯಾಗಿ ದಿಕ್ಕೇ ತಪ್ಪಿದಂತಾಗಿ ಹಾಂ ? ಅಂದೆ. … "ಅಯ್ಯ, ಇವನೌನ ಈಕಿಗ್ಯಾಕೆ ಸ್ಪಿರಿಟ್ ಕುಡ್ದು ಸಾಯಾ ಬುದ್ಧಿ ಬಂತೋ" ಅಂದುಕೊಂಡೆ.. ತಿರುಗಾ ಮುರುಗಾ ಕೇಳಿದ ಮೇಲೆ ಗೊತ್ತಾತು ಅದು "ಸ್ಪ್ರೈಟ್ ಕೂಲ್ ಡ್ರಿಂಕ್". ಏನ್ ಮಾಡ್ತೀರಿ. ಆ ಹುಡುಗಿ ಪೀಯುಸಿ ಬ್ರಾಕೆಟ್ (ಆಮೇಲೆ ಡಿಗ್ರಿ ಮುಗಿಸಿಕೊಂಡಳು ಆ ಮಾತು ಬೇರೆ ) ನಾನು ಡಿಗ್ರಿ ಬ್ರಾಕೆಟ್…. ಒಂದೇ ಸಮಾಧಾನ ಅಂದರೆ ಇಬ್ಬರೂ ಕನ್ನಡ ಮೀಡಿಯುಂ. ಏನೋ ಸಣ್ಣ ಸರ್ಕಾರಿ ನೌಕರಿ ಇತ್ತಷ್ಟೇ… ನಾನೂ ಡಾಕ್ಟರ್ ಆಗಿದ್ರೆ ಮೈಲುದ್ದ ಓದಿನ ಪಟ್ಟಿ ಇಟ್ಟ್ಕೊಂಡು ಡಾಕ್ಟರನ್ನೋ, ಇಂಜಿನೀರ್ ಆಗಿದ್ರೆ ಇಂಜಿನೀರ್ ಅನ್ನೋ ಮದುವೆ ಆಗೋ ಚಾನ್ಸ್ ಇರುತ್ತಿತ್ತು, ಅದು ಸಾಫ್ಟ್ವೇರ್… ಡೊಮೇನ್ ಎಲ್ಲಾ ಪಕ್ಕ ತಿಳ್ಕೊಂಡು… ಬಟ್ ಆ ಚಾನ್ಸ್ ಇದ್ದಿಲ್ಲ ಬಿಡಿ.
ಮತ್ತೊಂದಿನ ಮಾತಾಡ್ತಾ ಇದ್ದಾಗ "ನಿಮಗೇನಾದ್ರೂ ಬೀಡಿ ಸಿಗರೇಟು, ಡ್ರಿಂಕು ಏನಾದ್ರೂ ಅಭ್ಯಾಸ ಇದೆಯಾ? ಕೇಳಿಬಿಟ್ಟಳು.. ಅಲೆಲೆಲೆಲೇ ಯಾಕೋ ಹಿಂದೆ ಸ್ಕ್ರೀನಿಂಗ್ ಕಮಿಟಿ ಕೆಲಸ ಮಾಡ್ತಾ ಇದ್ದಂಗಿದೆ ಅನ್ನಿಸಿ, ಹಳೇ ಸಿನಿಮಾವೊಂದರಲ್ಲಿ (ಲಗ್ನ ಪತ್ರಿಕೆ ಇರಬೇಕು ) ಹೊನ್ನವಳ್ಳಿ ಕೃಷ್ಣ ಅವರ ಸರ್ವಗುಣ ಸಂಪನ್ನ ಗೆಳೆಯನ ಬಗ್ಗೆ ಬೀಗರ ಹತ್ತಿರ ಬಹಳ ಚೆಂದ ಹೇಳುವ ಸನ್ನಿವೇಶ ಹಾದು ಹೋದಂತಾಗಿ ನೆಕ್ಸ್ಟ್ ಅಂದುಬಿಟ್ಟೆ.
ಮದುವೆ ದಿನಾಂಕ ಗೊತ್ತು ಮಾಡಿದರು.ಮದುವೆ ದಿನಾನೂ ಬಂತು ತಾಳಿ ಕಟ್ಟುವ ಸಮಯನೂ ಬಂತು. ಇನ್ನೇನು ತಾಳಿ ಕಟ್ಟಬೇಕು… ಪೂಜಾರಪ್ಪ್ನೋರು ಶುರು ಹಚ್ಚಿಕೊಂಡರು "ನಾನ್ ಹೇಳಿದಂಗ್ ಹೇಳು- ಮುತ್ತು, ರತ್ನ, ಹವಳ, ವಜ್ರ, ವೈಡ್ಹುರ್ಯ, ಬೆಳ್ಳಿ ಬಂಗಾರ…… " ಮುಂದಕ್ಕೆ ಹೇಳಿ ಅಂದೆ.
ಹಂಗಲ್ಲಪ್ಪ ಇವನ್ನೆಲ್ಲಾ ನೀ ಹೇಳಿದ ಮೇಲೆ ಹೇಳ್ತೇನೆ ಅಂದರು… ಉಹೂ.. ನೀವ್ ಇವನ್ನೆಲ್ಲ ಹೇಳಿದ್ ಮೇಲೆ ಏನ್ ಹೇಳ್ಬೇಕು ಅಂತಿದೀರೋ ಅದನ್ನ ಹೇಳಿ ಅಂದೆ. "ಅವುಗಳನ್ ನೋಡ್ಕೊಳ್ಳೋ ಹಾಗೆ ನೀನು ನಿನ್ನ ಹೆಂಡತಿಯನ್ನು ನೋಡ್ಕೊಳ್ತೇನೆ ಅಂತ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಬೇಕು" ಅಂದರು.. ಆಗಲ್ಲ ಅಂದುಬಿಟ್ಟೆ.. "ನೋಡಿ, ಅವುಗಳನ್ನೆಲ್ಲಾ ತಗಂಡೋಗಿ ಬೀರುವಿನಲ್ಲೋ ಬ್ಯಾಂಕಿನ ಸೇಫ್ ಲಾಕರ್ ನಲ್ಲೋ ಇಟ್ಟು ಬರ್ತೀವಿ, ಹಂಗೆ ಇವಳನ್ನು ಇಟ್ಟು ಕೂಡಿ ಹಾಕೋಕಾಗುತ್ತಾ, ಆಗಲ್ಲ, ಹೆಂಡತಿಯನ್ನು ಹೆಂಡತಿಯಂತೆಯೇ, ಅರ್ಧಾಂಗಿಯಂತೆಯೇ ನೋಡಿಕೊಳ್ಳುತ್ತೇನೆಂದು" ಮಾತ್ರ ಪ್ರಮಾಣ ಮಾಡುತ್ತೇನೆ, ಅಂದಾಗ ಪೂಜಾರಪ್ನೋರು ಬೇರೆ ದಾರಿಯಿಲ್ಲದೇ ಆಯ್ತಪ್ಪ ಅಂದು ತಾಳಿ ಕಟ್ಟಿಸಿದ್ದರು.
ಮದುವೆ ಮಾಡ್ಕೊಂಡು ಮನೆಗೆ ಬಂದ ಹೊಸದಾಗಿ ಹೆಂಡತಿಗೆ ಅಡುಗೆ ಚೆಂದಾಗಿ ಮಾಡೋದು ಕಲಿತುಕೋ ಎಂದೆ. ಅವತ್ತು ಮತ್ತೊಮ್ಮೆ ಬೆಚ್ಚಿ ಬೀಳುವ ಫಜೀತಿಗೆ ಬಿದ್ದಿದ್ದೆ… "ನಾನ್ ಮಾಡಿದ ಅಡುಗೆ ಘಮ ಘಮ ವಾಸನೆ ಬಂದ್ರೆ ಸಾಕು ನಿಮ್ ನಾಲಿಗೆಯಲ್ಲಿ "ಲಾವಾರಸ" ಉಕ್ಕಿ ಉಕ್ಕಿ ಹರೀಬೇಕು, ನೋಡ್ತಾ ಇರಿ" ಅಂದಳು… ಲಾಲಾರಸ ಅವಳ ಬಾಯಲ್ಲಿ "ಲಾವಾರಸ "ವಾಗಿ ಬದಲಾಗಿತ್ತು.
ಹನ್ನೊಂದು ವರ್ಷವಾದವು .ಸ್ಪಿರಿಟ್ಟು ಲಾವಾರಸ ಪ್ರಸಂಗಗಳು ಕೇವಲ ನಮ್ಮಲ್ಲೇ ತಮಾಷೆಗೆ ಆಡಿಕೊಂಡು, ಹೇಳಿಕೊಂಡಿದ್ದವಾದರು .. ನಾವಿನ್ನು ನಿನ್ನೆ ಮೊನ್ನೆ ಮದುವೆ ಅದವರಂತೆಯೇ ಇದ್ದೇವೆ…ಈಗ ನನ್ನ ಮಗ ಎಲ್ಲಾದ್ರೂ ಎಲ್ಲರು ಒಟ್ಟಿಗೆ ಹೊರಗೆ ಹೋದರೆ ನೇರವಾಗಿ "ಅಪ್ಪಾಜಿ, ಸ್ಪ್ರೈಟ್ ಕೊಡ್ಸು" ಅನ್ನುತ್ತಾನೆ. ನಾನು ನನ್ನ ಹೆಂಡತಿ ಮುಖ ನೋಡುತ್ತೇನೆ. ಅವಳು ಮುಖ ತಪ್ಪಿಸುತ್ತಾಳೆ.
******
super sir…. ha ha ha ha
bahala nagisidri. santhosha aithu.
Humorous! Long live the 'Spirit' of Marriage!!
ಸಿಕ್ಕಾಪಟ್ಟೆ ನಕ್ಕುಬಿಟ್ಟೆ. ಚೆನ್ನಾಗಿದೆ. 🙂
Superb le Putty….. keep it up…..
bahusha nin maduve bandidre innu majavagirtittu amar
Tamaasheya Baraha, Chennagide.