ಪಂಜು-ವಿಶೇಷ

ಸ್ಪಾಟಾಗಿದ್ದರೆ : ಡಾ. ಗವಿಸ್ವಾಮಿ


ಸಂಜೆ ಐದಾಗಿತ್ತು. ಬೈಕಿನಲ್ಲಿ ಊರಿಗೆ ಹೋಗುತ್ತಿದ್ದೆ.
ಐವತ್ತರವತ್ತು ಮೀಟರಿನಷ್ಟು ಮುಂದೆ ಗೌರ್ಮೆಂಟ್ ಬಸ್ ಹೋಗುತ್ತಿತ್ತು.

ಬಿರುಗಾಳಿ ವೇಗದಲ್ಲಿ ನನ್ನ ಸನಿಹಕ್ಕೇ ಬಂದು ಸೈಡು ಹೊಡೆದು  ಹೋಯ್ತು ಒಂದು ಬೈಕು.

ಒಂದು ಕ್ಷಣ ಎದೆ ಝಲ್ಲೆಂದಿತು.

ಬಸ್ಸನ್ನೂ ಸೈಡು ಹೊಡೆಯಲು  ಯತ್ನಿಸಿದ ಬೈಕ್ ಸವಾರ.

ಎದುರಿಗೆ ಲಾರಿ ಬಂದು ಬಿಡ್ತು.

ಸಿಕ್ಕಿಕೊಂಡು ಬಿಟ್ಟಿದ್ದರೆ ಅಲ್ಲೇ ಕತೆಯಾಗಿರುತ್ತಿದ್ದ .

ಸಣ್ಣ ಗ್ಯಾಪಿನಲ್ಲಿ ನುಸುಳಿಬಿಟ್ಟ.

ಆದರೆ ಅದೇ ಸ್ಪೀಡಿನಲ್ಲಿ ಹೋಗಿ  ಎದುರಿಗಿದ್ದ ಮೈಲಿಗಲ್ಲಿಗೆ ಗುದ್ದಿಸಿಬಿಟ್ಟ!

ಕೇವಲ ಐದಾರು ಸೆಕೆಂಡುಗಳಲ್ಲಿ  ಇಷ್ಟೆಲ್ಲಾ  ನಡೆದುಹೋಯ್ತು.

ಗುದ್ದಿದ ರಭಸಕ್ಕೆ ಹತ್ತದಿನೈದು  ಮಾರು ದೂರ ಹಾರಿ ಬೇಲಿಯೊಳಕ್ಕೆ ತುರುಕಿಕೊಂಡಿದ್ದ.

ಅಲ್ಲೇ ದನ ಮೇಯಿಸುತ್ತಿದ್ದ ಮುದುಕನೊಬ್ಬ ನೀರಿನ ಬಾಟಲಿ ಹಿಡಿದು ಓಡಿಬಂದ.

ಅವನನ್ನು ಬೇಲಿಯಿಂದ ಈಚೆಗೆ ಎಳೆದು ತೊಡೆಯಮೇಲೆ ಹಾಕಿಕೊಂಡು ಮುಖದ ಮೇಲೆ ನೀರು ಚಿಮುಕಿಸಿದ.

ಹುಡುಗ ಪಿಳಿಪಿಳಿ ಕಣ್ಣು ಬಿಡುತ್ತಾ ಅತ್ತಿತ್ತ ನೋಡಿದ. ಕಣ್ಣುಗಳು ಕೆಂಪಗಾಗಿದ್ದವು.
ಫುಲ್ ಟೈಟಾಗಿಬಿಟ್ಟಿದ್ದ.
ಅದೃಷ್ಟವಶಾತ್ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು ಅಷ್ಟೇ.

ಅಷ್ಟರಲ್ಲಾಗಲೇ ದಾರಿಹೋಕರು ಮತ್ತು  ಬೈಕಿನವರು, ಕಾರಿನವರು ತಂತಮ್ಮ ವಾಹನಗಳನ್ನು ನಿಲ್ಲಿಸಿ ಮುತ್ತಿಕೊಳ್ಳತೊಡಗಿದರು.

ಯಾರೋ ಪರಿಚಯಸ್ಥರು
ಹುಡುಗನಿಗೆ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದರು!

ಯಮಹಾ ಬೈಕನ್ನು ಸೈಡಿಗೆ ಹಾಕಿ ಗುಂಪಿನತ್ತ ತಡಬಡಾಯಿಸಿಕೊಂಡು ಬಂದರು ಇಬ್ಬರು.

ವೀಕೆಂಡಿಗೆ ಹೊರಟ ಟೂರಿಸ್ಟರಂತೆ ಕಾಣುತ್ತಿದ್ದರು.

ನನ್ನನ್ನು ಕೇಳಿದರು,
‘ಸ್ಪಾಟಾ ಗುರು?’

ನಾನಂದೆ,
‘ಏನಿಲ್ಲ ಬಾಸ್ ಸ್ವಲ್ಪ ತರಚಿದೆ ಅಷ್ಟೇ’

ಅವರ ಮುಖದಲ್ಲಿದ್ದ ಕುತೂಹಲ, ಉತ್ಸುಕತೆ  ಕುಗ್ಗಿ ಹೋಯಿತು.

‘ಹೌದಾ …’  ಎನ್ನುತ್ತಾ ಹಾಗೇ ಹೊರಟು ಹೋದರು.

ಸ್ಪಾಟಾಗಿದ್ದರೆ ಬಹುಶಃ ಮುಂದೆ ಬಂದು ನೋಡುತ್ತಿದ್ದರೇನೋ!

 



ಈ ವ್ಯಕ್ತಿಯ ಬಗ್ಗೆ ಫೇಸ್ ಬುಕ್ಕಿನಲ್ಲಿ  ಬರೆದಿದ್ದೆ.

ಎರಡೂ ಕಣ್ಣುಗಳಲ್ಲಿ ದೃಷ್ಟಿಯಿಲ್ಲ.
ಬಸ್ಟಾಂಡಿನಲ್ಲಿ ಮಾದಪ್ಪನ ಭಜನೆ ಹಾಡುತ್ತಾ  ಹೊಟ್ಟೆಹೊರೆಯುತ್ತಾನೆ. ಸುಮಾರು ಮೂವತ್ತೈದರಿಂದ ನಲವತ್ತು ವರ್ಷ ವಯಸ್ಸಾಗಿದೆ.

ಹೊರಗಣ್ಣಿನ ದೃಷ್ಟಿಯಿಲ್ಲದಿದ್ದರೇನಂತೆ, ಅವನ ಒಳಗಣ್ಣಿನ ದೃಷ್ಟಿ ಮಾತ್ರ ಅದ್ಭುತ. ಅವನ ಪಕ್ಕ ಕುಳಿತು ಹಾಡು ಕೇಳುತ್ತಿದ್ದರೆ ಮನಸ್ಸಿಗೆ ಒಂಥರಾ ನೆಮ್ಮದಿ.

ಜನಜಂಗುಳಿಯಲ್ಲಿ ಒಂದು ಅಂದಾಜಿನ ಮೇಲೆ ಸಲೀಸಾಗಿ ತಿರುಗಾಡುತ್ತಾನೆ. ಕೈ ಹಿಡಿಸಿಕೊಂಡು ತಿರುಗಾಡಿದ್ದು ತೀರಾ ಅಪರೂಪ .

ನನಗೆ ಪರಿಚಯಸ್ಥ. ನನ್ನ ದನಿಯನ್ನು ಗುರುತುಹಿಡಿಯುತ್ತಾನೆ. ಈ ವ್ಯಕ್ತಿ ಒಂದು  ದಿನ ನನ್ನ ಬಳಿಗೆ  ಬಂದಿದ್ದ. ಅಷ್ಟರಲ್ಲಾಗಲೇ ಅವನ ಪರಿಚಯವಾಗಿತ್ತು.

‘ದ್ಯಾವ್ರು ಗ್ಯಾಪ್ಗ ಇಟ್ಗಂಡಿದ್ದರ್ಯಾ ನನ್ನಾ?’

‘ಹೂಂ ಕಣೇಳಪ್ಪ . ಏನು ವಿಚಾರ ?’ ಅಂದೆ.

ಅಂಗವಿಕಲರ ಕೋಟಾದಡಿ ಅವನಿಗೆ ಹಸುವಿನ ಲೋನಾಗಿತ್ತು. ನಾನೇ  ಹೆಲ್ತ್ ಸರಟಿಪಿಕೆಟ್ ಕೊಟ್ಟಿದ್ದೆ, ನೂರು ರೂಪಾಯಿ ಈಸಿಕೊಂಡು.

‘ಅವನಿಗೆ’ ಅಂದರೆ ಫಾಯಿದೆ ಅವನಿಗಲ್ಲ. ಮನೆಯವರಿಗೆ!

ಸಂಕೋಚಪಟ್ಟುಕೊಳ್ಳುತ್ತಲೇ ಕೇಳಿದ.
‘ದ್ಯಾವ್ರು ಅರ್ಜೆಂಟ್ ಐವತ್ರೂಪಾಯ್ ಬೇಕಾಗಿತ್ತು. ನಾನು ಉಳಿಸ್ಕಳಲ್ಲ ವಾಪಾಸ್ಕೊಟ್ಬುಡ್ತಿನಿ  ಕೊಡಿ’ ಅಂದ.

ನನಗೆ ಗಲಿಬಿಲಿಯಾಯಿತು. ಕೆಲವು ಕ್ಷಣಗಳ ಕಾಲ ಮೌನವಾದೆ.

ಕಣ್ಣುಗಳಿದ್ದಿದ್ದರೆ ನನ್ನ ಮುಖದಲ್ಲಿ ಹಾದುಹೋದ expression  ಅವನಿಗೆ ಅರ್ಥವಾಗುತ್ತಿತ್ತು. ಆದರೂ, ನಾನು ಮೌನವಹಿಸಿದ್ದರ ಕಾರಣವನ್ನು ಅರ್ಥ ಮಾಡಿಕೊಂಡವನಂತೆ ಕೇಳಿದ.

‘ಒಂದ್ರುಪಾಯ್ ಏಡ್ರುಪಾಯ್  ಬಿಕ್ಸ ಕ್ಯಾಳಂವ  ಏಕ್ದಂ ಐವತ್ರೂಪಾಯ್ ಕೇಳ್ದದ್ಕ ಗಾಬ್ರಿಯಾಗ್ಬುಟ್ರ್ಯಾ ದೇವ್ರು. ಅಂಗೇನೂ ತಿಳ್ಕಬೇಡಿ ವಾಪಾಸ್ ಕೊಡ್ತೀನಿ ಕೊಡಿ’ ಅಂದ.

ನಾನು,’ಹಂಗೇನಿಲ್ಲಾ..’ ಅನ್ನುತ್ತಾ ಐವತ್ತರ ನೋಟನ್ನು ತೆಗೆದು ಅರೆಮನಸ್ಸಿಂದಲೇ ಅವನ ಕೈಗಿತ್ತೆ.

ಅವನು,’ಬತ್ತಿನಿ ದ್ಯಾವ್ರು ‘ ಎಂದು ನೋಟನ್ನು ಕಣ್ಣಿಗೊತ್ತಿಕೊಂಡು ಹೊರಟುಹೋದ.

ಕೇವಲ ಒಂದು ತಿಂಗಳೂ ತುಂಬಿರಲಿಲ್ಲ. ಮತ್ತೆ ಬಂದ.

‘ತಕ್ಕಳಿ ದ್ಯಾವ್ರು ನಿಮ್ಮ ದುಡ್ಡಾ’
ಅನ್ನುತ್ತಾ ಮಡಚಿಟ್ಟಿದ್ದ ಐವತ್ತರ ನೋಟನ್ನು ಕೊಡಲು ಬಂದ .

‘ಬ್ಯಾಡ ಬುಡಪ್ಪ ನೀನೇ ಇಟ್ಕೋ ‘
ಅಂದೆ.
infact ಅವನಿಂದ ಈಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ.

‘ಮಾತು ಅಂದ್ಮೇಲ್ ಮಾತು, ಮಾದಪ್ ಮೆಚ್ಚಿನಾ ದ್ಯಾವ್ರು’ ಎಂದವನೇ ನನ್ನ ಕೈಗೆ ತುರುಕೇಬಿಟ್ಟ.

ಆ ನೋಟು ಕೇವಲ ನನ್ನ ಕೈಯನ್ನು  ಸುಡುತ್ತಿರಲಿಲ್ಲ. ನನ್ನ ಅಹಂ, ಸಣ್ಣತನ ಮತ್ತು ಸಂಕುಚಿತತೆಯನ್ನು ಸುಡುತ್ತಿತ್ತು.

ಮುಖ್ಯ ವಿಷಯಕ್ಕೆ ಬರುತ್ತೇನೆ.

ಮೊನ್ನೆ ಬಸ್ಟಾಂಡಿನಲ್ಲಿ ಅಡ್ಡಾಡುತ್ತಿದ್ದಾಗ ಅವನ ದನಿ ಕೇಳಿಬರುತ್ತಿತ್ತು. ತಿರುಗಿ ನೋಡಲಾಗಿ ಅವನು ಹೊಂಗೆ ಮರದಡಿಯಲ್ಲಿ ಕುಳಿತು ಹಾಡುತ್ತಿದ್ದ.ಅವನ ಪಕ್ಕ ಇಬ್ಬರು ಕುಳಿತಿದ್ದರು.

ತಡಬಡಾಯಿಸಿಕೊಂಡು ಓಡಿ ಹೋಗಿ ಅವನ ಹಿಂದೆ ಕುಳಿತೆ.
ಮಾತನಾಡಿಸಲಿಲ್ಲ.
ಮಾತನಾಡಿಸಿದರೆ ಹಾಡು ನಿಲ್ಲಿಸಿಬಿಡುತ್ತಾನೆ! ಹಾಗಾಗಿ ಮಾತನಾಡಿಸದೆ ಸುಮ್ಮನೆ ಕುಳಿತೆ.

ಅರೆ! ಅವನು ಅಲ್ಲಿ ಹಾಡುತ್ತಿದ್ದುದು ಬೇರೆಯದೇ ಹಾಡು. ದೇವರ ಹಾಡಲ್ಲ. ಅವನು ದೇವರ ಹಾಡುಗಳನ್ನು ಹಾಡುವುದನ್ನು ಮಾತ್ರ ನಾನು ನೋಡಿದ್ದೆ.

ಇದು ನನಗೆ ಹೊಸದು. ಆಗಲೇ ಮುಕ್ಕಾಲು ಭಾಗ ಲಿರಿಕ್ಸ್ ಮುಗಿದು ಹೋಗಿತ್ತು. ನಾನು ಅಲ್ಲಿ ಕುಳಿತು ಕೇಳಿಸಿಕೊಂಡ ಹಾಡಿನ ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಕಂಸಾಳೆ ಬಟ್ಟಲಿನ ಲಯವಾದ ಹಿಮ್ಮೇಳದಲ್ಲಿ ಹಾಡುಕೇಳಿಬರುತ್ತಿತ್ತು.

ಕುಡಿಬ್ಯಾಡ ಪುಟ್ಟಣ್ಣ ನೀನೂ…
ಒಳ್ಳೆದ್ಕೇ ಹೇಳ್ತೀನಿ ನಾನೂ..

ನಂಜನ್ಗೂಡು ಒಲಂಕಾರ್ ಬಾರಲ್ಲೀ…
ಒಂದ್ ನೈಂಟಿ ನೋಡು ಗ್ಲಾಸಲ್ಲೀ..

ನಂಜನ್ಗೂಡು ಒಲಂಕಾರ್ ಬಾರಲ್ಲೀ…
ಒಂದ್ ಪ್ಲೆಗ್ಗು ನೋಡು ಗ್ಲಾಸಲ್ಲೀ.
ಸಿಕ್ಕಾಬಟ್ಟಾ ಕುಡಿತಿದ್ರ ನೀನೂ..
ತಬ್ಬಲಿ ನಿನ ಮಕ್ಕಾ ಗ್ಯಾರಂಟೀ..

ಸಿಕ್ಕಾಬಟ್ಟಾ ಕುಡಿತಿದ್ರ ನೀನೂ..
ತಬ್ಬಲಿ ನಿನ ಮಕ್ಕಾ ಗ್ಯಾರಂಟೀ..

ಅಣ್ಣ ಕುಡಿಬ್ಯಾಡ ಪುಟ್ಟಣ್ಣ ನೀನೂ..
ಒಳ್ಳೆದ್ಕೇ ಹೇಳ್ತೀನಿ ನಾನೂ ..

ಹಾಡು ಮುಗಿದ ಮೇಲೆ, ಪಕ್ಕದಲ್ಲಿ ಕುಳಿತಿದ್ದವನನ್ನು ಕೇಳಿದ, ”ಪದ ಚೆಂದಗಿತ್ತ ದ್ಯಾವ್ರು?’

ಅದಕ್ಕವನು ‘ಸೂಪರಾಗಿತ್ತು ಕಯಾ, ಸರ್ಸೊತಿ ಒಲ್ದವ್ಳ ಕಯ್ಯ ನಿಂಗ’ ಅಂದ.

ಆ ಮಾತು ಕೇಳಿದ ಅವನ ಮುಖದಲ್ಲಿ ಧನ್ಯತೆ ಎದ್ದು ಕಾಣುತ್ತಿತ್ತು. ಹಾಡು ಕೇಳುತ್ತಾ ನಿಂತಿದ್ದ ಒಂದಿಬ್ಬರು ಕಾಲೇಜು ಹುಡುಗರು ಹತ್ತರ ನೋಟುಗಳನ್ನು ಕೊಟ್ಟರು.

ಪಕ್ಕದಲ್ಲೇ ಇನ್ನೊಬ್ಬ ‘ಟೈಟ್ ಪಾರ್ಟಿ’ ಹಾಡಿನಲ್ಲಿ ತಲ್ಲೀನನಾಗಿ ಕುಳಿತಿದ್ದ .

ಅವನಿಗೆ ಯಾರೋ ಇನ್ನೊಬ್ಬ ಹೇಳಿದ, ”ತಿಳ್ಕ ಬಡ್ಡಿಕೂಸೇ, ನಿನ್ನಂತವರ್ಗಾಗಿಯಾ ಈ ಹಾಡು  ”

‘ಟೈಟ್ ಪಾರ್ಟಿ ‘ ಹಾಡು ಕೇಳಿದ ಮೇಲೆ  ಸ್ವಲ್ಪ ವಿಚಲಿತನಾದವಂತೆ ಮೆತ್ತಗೆ  ಕುಳಿತಿದ್ದ.

ಅವನ ಒಳಮನಸ್ಸಿನ ಮೇಲೆ ಎಷ್ಟು ಪರಿಣಾಮವಾಯಿತೋ  ನನಗೆ ಗೊತ್ತಿಲ್ಲ.  ಮುಂದೆ ಅವನು ಬದಲಾಗುತ್ತಾನಾ? I can’t say.

ಆದರೆ ಆ ದೃಷ್ಟಿಹೀನನ  ಸಾಮಾಜಿಕ ಕಳಕಳಿಯನ್ನು ನೋಡಿ ನನಗಂತೂ ಅವನ ಬಗ್ಗೆ ಹೆಮ್ಮೆಯಾಯಿತು. ಅವನಿಗೆ ನಾವು ತಿರುಗಾಡುವ ದಾರಿಯನ್ನು  ತೋರಿಸಿದರೆ, ಆತ  ನಮಗೆ ಬದುಕುವ ದಾರಿಯನ್ನೇ ತೋರಿಸುತ್ತಾನೆ.

I really felt proud of him.

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಸ್ಪಾಟಾಗಿದ್ದರೆ : ಡಾ. ಗವಿಸ್ವಾಮಿ

  1. ಸೂಪರ್ ಸಾರ್..
    ಸ್ಪಾಟ್ ಕೇಸ್ : ಜನ ಹಿಂಗೇ ಅಲ್ವಾ ? !! ಥೂ.. ಸತ್ತವರಿಗಿರುವ ಪ್ರಾಮುಖ್ಯ ಬದುಕಿರೋನಿಗೇಕಿಲ್ಲ 🙁

    ಕಣ್ಣಪ್ಪನ ಕತೆ: ನಿಜಕ್ಕೂ ಖುಷಿಯಾಯ್ತು ಸರ್.. ಅವರ ಜೀವನಪ್ರೀತಿ, ಸ್ವಾಭಿಮಾನ ಮತ್ತು ಕಳಕಳಿಗಳ ಬಗ್ಗೆ ಓದಿ

  2. ಮನಕಲಕಿದ ಘಟನೆಗಳು….ಪ್ರಸ್ತುತ ಪಡಿಸುವ ಆತ್ಮೀಯ ಶೈಲಿ ಇಷ್ಟವಾಯಿತು !

  3. ಸ್ಪಾಟಾ??… ಹೌದು ಬಿಡಿ ಈಗ ಜನರಿಗೆ ರೋಚಕತೆ ಇರಬೇಕು ಘಟನೆಯಲ್ಲಿ ,  ಸಾವಿಲ್ಲದಿದ್ದರೆ ಅಲ್ಲಿ ಟೀವಿಯವರು ಸುಳಿಯಲ್ಲ. ಪೇಪರಿನಲ್ಲಿ ಬರಲ್ಲ.  ಅಷ್ಟಕ್ಕು ಕುಡಿಯುವುದು ತಪ್ಪು ಎನ್ನುವದನ್ನು ನಮ್ಮ ಯುವಜನಾಂಗಕ್ಕೆ ಕಲಿಸಲು ಯಾರು ಇಲ್ಲ ಅನ್ನುವುದು ಈಗಿನ ದುರಂತ 

Leave a Reply

Your email address will not be published. Required fields are marked *