ಸ್ನೇಹ ಭಾಂದವ್ಯ (ಭಾಗ 9): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ)

ಸುಧಾ ಎಚ್ಚರವಾಗಿದುದ್ದನ್ನು ನೋಡಿದ ರಾಜೇಶ ಅವಳ ಹತ್ತಿರ ಒಂದು ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಿದ್ದ ಕಾವೇರಮ್ಮ ಅವನಿಗೆ ಜಾಗ ಬಿಟ್ಟು ಎದ್ದಳು. ಆಗ ರಾಜೇಶ ಆ ಕುರ್ಚಿಯಲ್ಲಿ ಕೂಡುತ್ತ ಸುಧಾ ಎಂದು ಅವಳ ಕೈಯನ್ನು ಹಿಡಿದ ಆಗ ಸುಧಾಳ ಕಣ್ಣಲ್ಲಿ ನೀರು ಹರಿಯಲಾರಂಭಿಸಿತು. ದಯವಿಟ್ಟು ನನ್ನ ಕ್ಷಮಿಸು ಸುಧಾ. ನಾನು ನನ್ನ ಕೆಲಸದ ಒತ್ತಡದಲ್ಲಿ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಾ ಅವಳ ಕಣ್ಣೀರು ಒರೆಸಿದ. ಇನ್ನು ಮೇಲೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ನಂಬು ಎಂದ. ಆಗ ಪದ್ಮಮ್ಮ ದಯವಿಟ್ಟು ನನ್ನ ಕ್ಷಮಿಸಿಬಿಡಮ್ಮ ನಿನಗೆ ನನ್ನಿಂದಾನೆ ಈ ಅವಸ್ಥೆ ಬಂದಿರೋದು ಎಂದು ಅವಳಿಗೆ ಕೈಮುಗಿದು ಕ್ಷಮಾಪಣೆ ಕೇಳಲು ಹೋದಳು. ಅದುವರೆಗೂ ಯಾರ ಜೋತೆಯೂ ಒಂದು ಮಾತು ಆಡದೆ ಇದ್ದ ಸುಧಾ ಅತ್ತೆ ನೀವು ದೊಡ್ಡವರು ಹೀಗೆಲ್ಲಾ ಮಾತಾಡಬೇಡಿ ಎಂದು ಏಳಲು ಹೋದಳು. ಆಗ ಪದ್ಮಮ್ಮ ಏಳಬೇಡಮ್ಮ ಇನ್ನು ಸ್ವಲ್ಪ ಹೊತ್ತು ಮಲಗಿರು ಎಂದಳು ಪದ್ಮಮ್ಮ. ಕೊನೆಗೆ ಅತ್ತೆ-ಸೊಸೆ ರಾಜಿಯಾದರು ಎಂದು ರಮಾನಂದರು ಸಮಾಧಾನಪಟ್ಟುಕೊಂಡರು. ಅಷ್ಟೊತ್ತಿಗೆ ವೆಂಕಟಗಿರಿ ಮಗ ಚಂದ್ರುವಿನೊಡನೆ ಆಸ್ಪತ್ರೆಗೆ ಬಂದಾಗ ಅಲ್ಲಿ ಎಲ್ಲರೂ ಸುಧಾಳ ಮಂಚದ ಸುತ್ತ ನಿಂತಿದ್ದರು. ಇವರ ಕಾಲಸಪ್ಪಳಕ್ಕೆ ಎಲ್ಲರೂ ಅತ್ತ ನೋಡಿದರು.

ಅಕ್ಕಾ ಎಚ್ಚರವಾಗಿದುದು ಚಂದ್ರುವಿಗೆ ಹೇಳಲಾರದಷ್ಟು ಸಂತೋಷವಾಯಿತು. ಅವನೋಡಿ ಬಂದು ಅಕ್ಕಾ ಚೆನ್ನಾಗಿದ್ದಿಯಾ ಎಂದು ಸುಧಾಳನ್ನು ತಬ್ಬಿಕೊಂಡ. ನಾನು ಚೆನ್ನಾಗಿದ್ದೆನೆ ನೀನು ಹೇಗಿದ್ದಿಯಾ ಎಂದಳು. ನನ್ನದಿರಲಿ ನೀನು ಬೇಗ ಮನೆಗೆ ಬಾ ಅಕ್ಕಾ ಈ ಸಲ ನೀನು ನಮ್ಮ ಮನೆಗೆ ಬರಬೇಕಕ್ಕಾ ಅಂದ ಅವನ ಮಾತಿಗೆ ಪದ್ಮಮ್ಮ ರಾಜೇಶನ ಮುಖ ನೋಡಿದಳು. ಆದರೆ ರಾಜೇಶನ ಮುಖದಲ್ಲಿ ಯಾವ ಬದಲಾವಣೆನೂ ಕಾಣಲಿಲ್ಲ. ಸುಧಾ ನಿನಗೋಸ್ಕರ ನನ್ನ ಕೈಯಾರೆ ಗಂಜಿ ಮಾಡಿಕೊಂಡು ಬಂದಿದಿನಿ ಕುಡಿಯಮ್ಮ ಅಂದ. ಆಗ ಕಾವೇರಮ್ಮ ಗಂಡನ ಮುಖ ನೋಡಿದಳು. ಅವರನ್ನು ಮದುವೆಯಾದಾಗಿನಿಂದ ಇಲ್ಲಿಯವರೆಗೆ ತನ್ನ ಆರೋಗ್ಯ ಚೆನ್ನಾಗಿಲ್ಲದೆ ಇದ್ದಾಗಲು ಒಂದು ದಿನ ಅಡಿಗೆ ಮನೆಗೆ ಹೋದವರಲ್ಲ. ಆದರೆ ಇಂದು ಎಂದು ಯೋಚಿಸುವಷ್ಟರಲ್ಲಿ ಏನೇ ಹಾಗೆ ನೋಡ್ತಾ ಇದ್ದಿಯಾ ಅವಳಿಗೆ ಸ್ವಲ್ಪ ಗಂಜಿ ಕುಡಿಸು ಎಂದರು ವೆಂಕಟಗಿರಿ. ಆಗ ಕಾವೇರಮ್ಮ ಸುಧಾಳಿಗೆ ಗಂಜಿ ಕುಡಿಯಲು ಕೊಟ್ಟಳು.

ರಾತ್ರಿಯಿಂದ ಹಾಗೆ ಕುಳಿತೆ ಇದ್ದಿದುರಿಂದಲೋ ಏನೋ ರೇಖಾಳಿಗೆ ನಿದ್ದೆ ಬರಲು ಶುರುವಾಯಿತು. ಅಮ್ಮಾ ನಾನು ಸ್ವಲ್ಪ ಹೊತ್ತು ನಿದ್ದೆ ಮಾಡ್ತಿನಮ್ಮ ಒಂದು ಗಂಟೆ ಬಿಟ್ಟು ಎಬ್ಬಿಸು ಎಂದು ಮಲಗಲು ಹೋದಳು. ರಾಧಮ್ಮ ಅಡಿಗೆ ಮಾಡಲು ಶುರು ಮಾಡಿದರು. ಇನ್ನೊಮ್ಮ ಸುಧಾಳನ್ನು ನೋಡಲು ಬಂದ ಡಾಕ್ಟರ್ ಮನೆಯವರೆಲ್ಲರು ಇದ್ದುದನ್ನು ನೋಡಿ ಏನು ಎಲ್ಲರೂ ಇಲ್ಲೆ ಇದ್ದಿರಲ್ಲಾ ಯಾರಾದರೂ ಒಬ್ಬರು ಇದ್ದಿದರೂ ಆಗುತಿತ್ತು ಎಂದವರೆ ಸುಧಾ ನಿಮ್ಮನ್ನ ಈಗ ಡಿಸ್ಚ್ಯಾರ್ಜ ಮಾಡ್ತಾ ಇದ್ದಿವಿ ನೀವಿನ್ನು ಮನೆಗೆ ಹೋಗಬಹುದು ಆದರೆ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕು. ನಾನೀಗ ಒಂದಿಷ್ಟು ಟಾನಿಕ ಬರೆದುಕೊಡ್ತಿನಿ ಹೊತ್ತು ಹೊತ್ತಿಗೆ ಸರಿಯಾಗಿ ತಗೊಬೇಕು ಎಂದು ಹೇಳಿದರು. ಸುಧಾ ನಗುತ್ತಾ ಆಗಲಿ ಡಾಕ್ಟರ ಎಂದಳು. ನೀವಿನ್ನು ಇವಳನ್ನು ಕರೆದುಕೊಂಡು ಹೋಗಿ ಎಂದಳು ಡಾಕ್ಟರ. ವೆಂಕಟಗಿರಿ ಡಾಕ್ಟರ ನಿಮ್ಮ ಫೀಸ್ ಎಷ್ಟಾಯಿತು ಎಂದ ಅದಕ್ಕೆ ರಾಜೇಶ ನಾನು ಕೊಡ್ತಿನಿ ಮಾವಾ ಎಂದು ದುಡ್ಡು ಕೊಡಲು ಹೋದ ಆಗ ಡಾಕ್ಟರ ಫೀಸ್ ಆಗಲೆ ರೇಖಾ ಮೊದಲೆ ಕಟ್ಟಿದ್ದಾರೆ ಎಂದು ಹೇಳಿ ಅಲ್ಲಿಂದ ಹೋದರು. ರಾಜೇಶನಿಗೆ ರೇಖಾಳ ಎದುರು ತಾನು ತೀರ ಚಿಕ್ಕವನೆಂದು ಭಾಸವಾಯಿತು. ವೆಂಕಟಗಿರಿ ಮತ್ತು ಕಾವೇರಮ್ಮ ಸುಧಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ರಮಾನಂದರಿಗೆ ಹೇಳಿದರು. ನಮ್ಮನೆಗೆ ಕಳಿಸಿ ರಾಯರೆ ಎಂದರು ರಮಾನಂದರು. ಬೇಡಿ ರಮಾನಂದರವರೇ ಅವಳಿಗೆ ಈಗ ಐದನೆಯ ತಿಂಗಳು ತುಂಬ್ತಾ ಇದೆ. ನಾವು ಅವಳಿಗೆ ಸೀಮಂತ ಮಾಡಬೇಕು ಅದು ಅಲ್ಲದೆ ಬಾಣಂತನ ನಮ್ಮನೇಲಿ ನಡೆಯಬೇಕು. ನಮ್ಮನೇಲಿ ಇದ್ದರೆ ಅವಳ ತಾಯಿ ಅವಳನ್ನ ಚೆನ್ನಾಗಿ ನೋಡ್ಕೊತಾಳೆ ಎಂದು ಒತ್ತಿ ಹೇಳಿದರು. ಇದರಿಂದ ಪದ್ಮಮ್ಮಳ ಮುಖಕ್ಕೆ ಬಾರಿಸಿದಂತಾಯಿತು. ಆಗ ರಮಾನಂದರಿಗೆ ವೆಂಕಟಗಿರಿಯವರಿಗೆ ನಮ್ಮ ಮೇಲೆ ಅಸಮಾಧಾನವಿದೆ ಎಂದು ತಿಳಿಯಿತು. ವೆಂಕಟಗಿರಿಯವರು ತಮ್ಮ ಮಾತಿನ ದಾಟಿಯಲ್ಲಿಯೆ ತಮ್ಮ ನೋವನ್ನು ವ್ಯಕ್ತಪಡಿಸಿದರು. ಆಗ ರಾಜೇಶ ಮಾವ ಎಂದು ಏನೊ ಹೇಳಬೇಕೆನ್ನುವಷ್ಟರಲ್ಲಿ ರಮಾನಂದರು ತಡೆದರು.

ಇವರೆಲ್ಲರ ಮಾತಿನಂತೆ ಅಕ್ಕ ತಮ್ಮ ಮನೆಗೆ ಬರುತ್ತಾಳೆ ಎಂದು ಚಂದ್ರುಗೆ ಸಂತೋಷವಾಯಿತು. ಅಕ್ಕಾ ಏಳಕ್ಕ ಮನೆಗೆ ಹೋಗೊಣಾ ಎಂದು ಸುಧಾಳನ್ನು ಎಬ್ಬಿಸಿದ. ಅಷ್ಟೊತ್ತಿಗೆ ರಾಜೇಶ ತಾನು ಆಟೊ ತರುವುದಾಗಿ ಹೇಳಿ ಹೊರಗೆ ಹೋದ. ಸುಧಾಳನ್ನು ಹಿಡಿದುಕೊಂಡು ಕಾವೇರಮ್ಮ, ವೆಂಕಟಗಿರಿ, ಚಂದ್ರು, ರಮಾನಂದ ಮತ್ತು ಪದ್ಮಮ್ಮ ಎಲ್ಲರೂ ಆಸ್ಪತ್ರೆಯಿಂದ ಹೊರಗೆ ಬಂದರು. ಅಷ್ಟೊತ್ತಿಗೆ ರಾಜೇಶ ಆಟೊ ತಂದ. ಕಾವೇರಮ್ಮ, ಚಂದ್ರು, ಸುಧಾ ಮತ್ತು ವೆಂಕಟಗಿರಿ ಆಟೊದಲ್ಲಿ ಹತ್ತಿ ಕುಳಿತರು. ರಾಜೇಶ ಸುಧಾಗೆ ಕೈಬಿಸಿದ ಪ್ರತಿಯಾಗಿ ಸುಧಾ ಕೂಡ ಕೈಬೀಸಿದಳು. ಆಟೊ ಹೊರಟಿತು.

ರೇಖಾ ನಿದ್ದೆಯಿಂದ ಎಚ್ಚೆತ್ತಾಗ ಸಮಯ ನಾಲ್ಕು ಗಂಟೆಯಾಗಿತ್ತು. ಏನಮ್ಮಾ ನೀನು ಒಂದು ಗಂಟೆ ಬಿಟ್ಟು ಎಬ್ಬಿಸು ಅಂದ್ರು ಎಬ್ಬಿಸಿಯೆ ಇಲ್ವಲ್ಲ ಎಂದಳು. ನೀನು ತುಂಬಾ ಸುಸ್ತಾಗಿದ್ದಿ ಅದಕ್ಕೆ ಮಲಗಲಿ ಎಂದು ಸುಮ್ಮನಾದೆ ಎಂದಳು ರಾಧಮ್ಮ. ರೇಖಾ ಎದ್ದು ಮುಖ ತೊಳೆದು ಬಂದಳು. ರಾಧಮ್ಮ ಮಗಳಿಗೆ ಕಾಫಿ ಕೊಟ್ಟರು. ಕಾಫಿ ಕುಡಿದು ರೇಖಾ ಹೊರಗೆ ಅಂಗಳದಲ್ಲಿ ಬಂದು ನಿಂತಳು. ಅವಳ ಹಿಂದೆನೆ ಬಂದ ರಾಧಮ್ಮ ನೀನು ಇನ್ನು ಎಷ್ಟು ದಿನ ಓದಬೇಕೆ ಎಂದರು. ಏನಮ್ಮಾ ಹೀಗ ಕೇಳ್ತಿದ್ದಿಯಾ ಇದು ಕೊನೆಯ ವರ್ಷ ಅಮ್ಮಾ ಇನ್ನೊಂದು ಆರು ತಿಂಗಳಿಗೆ ಕಾಲೇಜು ಮುಗಿದು ಬಿಡುತ್ತದೆ. ಆಮೇಲೆ ಫಲಿತಾಂಶಕ್ಕಾಗಿ ಕಾಯೋದು ಫಲಿತಾಂಶ ಬಂದ ಕೂಡಲೆ ಸ್ವಂತ ಪ್ರ್ಯಾಕ್ಟಿಸ್ ಶುರು ಮಾಡೋದು ಅಥವಾ ಯಾರಾದರು ಸಿನಿಯರ ಕೈ ಕೆಳಗೆ ಸ್ವಲ್ಪ ದಿನ ಕೆಲಸ ಮಾಡೋದು ಎಂದಳು. ಅಬ್ಬಾ ನೀನು ಹೇಳ್ತಾ ಇರೊದನ್ನೆಲ್ಲಾ ಕೇಳ್ತಾ ಇದ್ದರೆ ನಾನಿನ್ನು ಅದೆಷ್ಟು ವರ್ಷ ಕಾಯಬೇಕೊ ಅಂತ ಅನಿಸ್ತಿದೆ. ನಿನ್ಯಾಕಮ್ಮ ಕಾಯಬೇಕು ಎಂದಳೂ ರೇಖಾ. ಯಾಕಂದ್ರೆ ನಿನಗೊಂದು ಮದುವೆ ಮಾಡಬೇಕಲ್ಲ ಎಂದಳು ರಾಧಮ್ಮ. ಅಮ್ಮಾ ಯಾಕಮ್ಮ ಮದುವೆ  ಮದುವೆ ಅಂತಿಯಾ. ಹೀಗ ಮದುವೆ ಅಂತ ಬಡಕೊಂಡಿದ್ದಕೆನೆ ಸುಧಾ ಇವತ್ತು ಈ ಸ್ಥಿತಿಯಲ್ಲಿರೊದು ಎಂದಳು ರೇಖಾ. ಎಲ್ಲಾದಕ್ಕೂ ಸುಧಾಳ ಉದಾಹರಣೆ ತಗೋತಿಯಾ ಊಳಿದವರು ಅದೆಷ್ಟು ಜನ ನಿನ್ನ ಗೆಳತಿಯರು ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರಲ್ಲ ಎಂದಳು ರಾಧಮ್ಮ. ಅದೇನೊ ನನಗೊಂದು ಗೊತ್ತಿಲ್ಲ. ಮದುವೆಯಾಗುವ ಕಾಲ ಬಂದಾಗ ಮದುವೆಯಾದರಾಯಿತು ಸದ್ಯಕ್ಕೆ ಆ ವಿಷಯ ಎತ್ತಬೇಡಮ್ಮ ಎನ್ನುತ್ತ ರೇಖಾ ತನ್ನ ರೂಮಿಗೆ ಹೋದಳು. ಹೋಗಿ ಹೋಗಿ ನಿನಗೆ ಹೇಳೋಕೆ ಬರ್‍ತಿನಲ್ಲ ನನಗೆ ಬುದ್ಧಿ ಇಲ್ಲ ಎಂದರು.

ಆಟೊ ಮನೆಯ ಮುಂದೆ ಬಂದು ನಿಂತಿತು. ಮೊದಲು ಆಟೊದಿಂದಿಳಿದ ವೆಂಕಟಗಿರಿ ಆಟೋದವನಿಗೆ ದುಡ್ಡು ಕೊಡಲು ಎಷ್ಟಪ್ಪ ದುಡ್ಡು ಎಂದರು. ಬೇಡಾ ಸಾಬ ಆಟೊ ಕೇಳಲು ಬಂದಿದ್ದರಲ್ಲಾ ಅವರೇ ದುಡ್ಡು ಕೊಟ್ಟರು ಸಾಬ ಎಂದ. ದುಡ್ಡು ಕೊಟ್ಟಿಲ್ಲ ಎಂದು ಮತ್ತೆ ದುಡ್ಡು ಕೇಳುವವರು ಇರುತ್ತಾರೆ ಅಂತದ್ದರಲ್ಲಿ ಇಷ್ಟು ನಿಯತ್ತಾದ ಆಟೊದವನನ್ನು ಇವತ್ತೆ ನೋಡಿದ್ದು ಎಂದೆನಿಸಿತು ಅವರಿಗೆ. ಸುಧಾ, ಚಂದ್ರು ಮತ್ತು ಕಾವೇರಮ್ಮ ಆಟೊದಿಂದ ಕೆಳಗಿಳಿದರು. ಆಟೋದವನು ಹೊರಟುಹೋದ ಕಾವೇರಮ್ಮ ಸುಧಾಳನ್ನು ಕರೆದುಕೊಂಡು ಮನೆಗೆ ಹಾಕಿದ್ದ ಬೀಗವನ್ನು ತೆರೆದು ಒಳಗೆ ಹೋದರು. ಅವರ ಹಿಂದೆಯೆ ವೆಂಕಟಗಿರಿ ಮತ್ತು ಚಂದ್ರು ಹೋದರು. ಸುಧಾ ನೀನು ಸ್ವಲ್ಪ ಹೊತ್ತು ಮಲಗಮ್ಮ ನಾನು ಅಡಿಗೆ ಮಾಡಿ ನಿನ್ನನ್ನು ಎಬ್ಬಿಸ್ತಿನಿ ಎಂದು ಕಾವೇರಮ್ಮ ಅಡಿಗೆ ಮನೆಗೆ ಹೋದಳು. ವೆಂಕಟಗಿರಿ ಎರಡು ದಿನದಿಂದ ಫ್ಯಾಕ್ಟರಿಗೆ ಹೋಗಿರಲಿಲ್ಲ ರಜೆ ಹಾಕಿದ್ದ ಹೀಗಾಗಿ ಮರುದಿನ ಫ್ಯಾಕ್ಟರಿಗೆ ಹೋಗಬೇಕು ಈಗ ಸ್ವಲ್ಪ ಸುಧಾರಿಸಿಕೊಳ್ಳಬೇಕು ಎಂದು ಆಯಾಸವಾಗಿದ್ದರಿಂದಲೊ ಗಾಢವಾದ ನಿದ್ರೆ ಆವರಿಸಿತು. ಕಾವೇರಮ್ಮ ಮೊದಲು ಮನೆಯ ಕಸಗೂಡಿಸಿ ಅಡುಗೆಗೆ ಇಡಬೇಕು ಎಂದು ಕಸಬರಿಗೆ ಹಿಡಿಯುವುದರಲ್ಲಿ ಚಂದ್ರು ಒಂದು ಅಮ್ಮ ನಾನು ಕಸಗೂಡಿಸುತ್ತೇನೆ. ನೀನು ಬೇಗ ಅಡಿಗೆ ಮಾಡಮ್ಮ ಹೊಟ್ಟೆ ಹಸಿತಾ ಇದೆ ಅಂದ. ಸರಿ ಎಂದು ಅವಳು ಅಡಿಗೆ ಮಾಡಲು ಹೋದಳು. ಚಂದ್ರು ಮನೆಯ ಕಸಗೂಡಿಸಿ ಅಂಗಳದ ಕಸಗೂಡಿಸಿ ಬಾಗಿಲಿಗೆ ನೀರು ಚಳೆ ಹೊಡೆದು ಬಂದ. ಆಮೇಲೆ ಓದಲು ಕುಳಿತ ಇತ್ತ ಸುಧಾಳಿಗೆ ನಿದ್ದೆ ಹತ್ತಿರಲಿಲ್ಲ. ಅವಳು ಯೋಚಿಸುತ್ತಲೆ ಇದ್ದಳು. ರೇಖಾ ನನಗೊಸ್ತರ ಅದೆಷ್ಟು ಚಡಪಡಿಸುತ್ತಾಳೆ. ಸಮಯಕ್ಕೆ ಸರಿಯಾಗಿ ಅವಳು ಬಾರದಿದ್ದರೆ ನನ್ನ ಗತಿ ಏನಾಗುತ್ತಿತ್ತು. ತನ್ನವರು ಎನಿಸಿಕೊಂಡವರಿಗೆ ತನ್ನ ಬಗ್ಗೆ ಸ್ವಲ್ಪನು ಕಾಳಜಿ ಇರಲಿಲ್ಲ ಆದರೆ ರೇಖಾ ಯಾವಾಗಲು ತನ್ನ ಒಳಿತನ್ನೆ ಬಯಸಿದ್ದಾಳೆ. ನನ್ನ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡಿದ್ದಾಳೆ. ಅವಳು ತಮ್ಮ ಸ್ನೇಹದ ಪ್ರತೀಕವಾಗಿದ್ದ ಪೇಟಿಂಗನ್ನು ನೋಡಲು ತನ್ನ ಸೂಟಕೇಸ್‌ಲ್ಲಿ ಹುಡುಕಿದಳು. ಅದು ಇರಲಿಲ್ಲ. ಓ ಅದು ತನ್ನ ಗಂಡನ ಮನೆಯಲ್ಲಿಯೆ ಉಳಿದಿರಬೇಕೆಂದುಕೊಂಡು ಸುಮ್ಮನಾದಳು. ಅವಳಿಗೆ ತನ್ನ ಹೊಟ್ಟೆಯಲ್ಲಿ ಏನೊ ಚಲನವಲನ ಶುರುವಾಗಿದೆ ಎಂದೆನಿಸಿತು. ಅದು ತನ್ನ ಮಗುವಿನದು ಎಂದೆನಿಸಿದಾಗ ಅವಳು ತನ್ನ ಮಗುವಿನ ಬಗ್ಗೆ ಏನೊ ಕಲ್ಪನೆ ಮಾಡಿಕೊಳ್ಳುತ್ತಿದ್ದಳು. ನಾಳೆ ಈ ಮಗುವಿಗೆ ಏನೆಂದು ಹೆಸರಿಡುವುದು. ಛೆ ಇದನ್ನು ನಾನು ರಾಜೇಶ ನಿರ್ಧರಿಸಬೇಕಾಗಿತ್ತು. ಆದರೆ ರಾಜೇಶನಿಗೆ ತನ್ನ ಕೆಲಸವೇ ಪ್ರಪಂಚವಾಗಿತ್ತು ಎಂದು ನೆನೆಸಿಕೊಂಡಾಗ ಸುಧಾಳಿಗೆ ವ್ಯಥೆಯಾಯಿತು. ಕಾವೇರಮ್ಮ ಅಡುಗೆ ಮುಗಿಸಿ ಸುಧಾಳನ್ನು ಎಬ್ಬಿಸಲು ಬಂದಳು. ಅವಳು ಬಂದಾಗ ಸುಧಾ ಶೂನ್ಯ ನೋಟ ಬೀರಿ ಏನೊ ಯೋಚಿಸುತ್ತಿದ್ದಳು. ಏನೇ ಸುಧಾ ನಿದ್ದೆ ಹತ್ತಲಿಲ್ಲವೆನೆ. ಅದು ಸರಿ ಅನ್ನು ಹಳೆಯದನ್ನೆಲ್ಲ ಯೋಚನೆ ಮಾಡ್ತಾ ಇದ್ದರೆ ನಿದ್ದೆ ಹತ್ತಿರ ಹೇಗೆ ಸುಳಿಯುತ್ತದೆ ಎಂದಳು. ಆಗ ಸುಧಾ ಏನು ಇಲ್ಲಮ್ಮ ನಿದ್ದೆ ಹತ್ತಲಿಲ್ಲ ಅಷ್ಟೆ ಎಂದಳು. ನಾನು ನಿನ್ನ ತಾಯಿ ಕಣೆ ನನ್ನ ಹತ್ತಿರಾನೆ ಸುಳ್ಳು ಹೇಳ್ತಿಯಾ ಅಂದಾಗ ಸುಧಾ ಬಿಕ್ಕಿ ಬಿಕ್ಕಿ ಅತ್ತಳು. ಆಗ ಕಾವೇರಮ್ಮ ಸಮಾಧಾನ ಹೇಳಿ ಸುಧಾ ನಿಮ್ಮ ಅತ್ತೆಯ ಮನೆಯಲ್ಲಿ ನೀನು ಸುಖವಾಗಿದ್ದಿಯಾ ಅಂದುಕೊಂಡಿದ್ದಿವಿ. ಆದರೆ ನೀನು ಹೀಗಾಗ್ತಿಯಾ ಅಂತ ಅನಕೊಂಡಿರಲಿಲ್ಲ. ನನಗೆ ಗೊತ್ತಮ್ಮಾ ನಿನ್ನ ಬಯಕೆಗಳನ್ನು ತೀರಿಸೊವಷ್ಟು  ವಿಶಾಲ ಹೃದಯದವರಲ್ಲ ನಿಮ್ಮ ಅತ್ತೆ ಅಂತ. ಹೇಳಮ್ಮ ನೀನಗೇನು ಬೇಕೂಂತ ಎಂದು ಕೇಳಿದರು. ಆಗ ಸುಧಾ ತಾನು ಹುಣಸೆಕಾಯಿ ತಿನ್ನಬೇಕೆಂದು ಹೇಳಿದಳು. ಅಷ್ಟೆನಾ ನಾಳೆನೆ ಚಂದ್ರು ತಂದುಕೊಡ್ತಾನೆ ಬಿಡು ಎಂದಳು. ಈಗ ಊಟಕ್ಕೆ ನಡಿಯಮ್ಮ ಎಂದು ಕರೆದುಕೊಂಡು ಹೋದಳು.

ಮರುದಿನ ಮುಂಜಾನೆ ರಾಜೇಶ ಸುಧಾಳ ಮನೆಗೆ ಬಂದ ಸುಧಾ ಆಗ ತಾನೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚುತ್ತಿದ್ದಳು. ಕಾವೇರಮ್ಮ ರಾಜೇಶನನ್ನು ನೋಡಿ ಬರ್ರಿ ಅಳಿಯಂದ್ರೆ ಕೂತುಕೋ ಬರ್ರಿ ಎಂದು ಸೋಫಾದ ಕಡೆ ಕೈ ತೋರಿಸಿದಳು. ರಾಜೇಶ ಕೂಡುತ್ತಾ ಅತ್ತೆ ಸುಧಾ ಇಲ್ವಾ ಅಂದ ಇದ್ದಾಳೆ ತಾಳು ಕರಿತೀನಿ ಎಂದವಳೆ ಒಳಗೆ ಹೋದಳು. ಆಗ ವೆಂಕಟಗಿರಿ ಫ್ಯಾಕ್ಟರಿಗೆ ಹೊರಡಲು ತಯಾರಾಗುತ್ತಿದ್ದವನು ರಾಜೇಶನನ್ನು ನೋಡಿ ಓ ಅಳಿಯಂದ್ರು ಯಾವಾಗ ಬಂದ್ರಿ ಎಂದು ಕೇಳಿದ. ಈಗ ತಾನೆ ಬಂದೆ ಮಾವಾ. ಮಾವಾ ನಿಮ್ಮ ಅಭ್ಯಂತರ ಇಲ್ಲಾಂದ್ರೆ ನಾನು ಸುಧಾಳನ್ನು ಹೊರಗೆ ಕರಕೊಂಡು ಹೋಗಿ ಬರ್‍ತಿನಿ ಅಂದ. ಅಯ್ಯೋ ಇದರಲ್ಲಿ ನನ್ನ ಅಭ್ಯಂತರ ಏನು ಬಂತು. ನಿನ್ನ ಹೆಂಡತಿನ ನೀನು ಕರಕೊಂಡು ಹೋಗುತ್ತಿಯಾ ಆದ್ರೆ ಹುಷಾರಾಗಿ ಕರಕೊಂಡು ಹೋಗಿ ಬಾಪ್ಪಾ ಎಂದರು. ಆಯ್ತು ಮಾವಾ ಎಂದ ರಾಜೇಶ ಸರಿ ನನಗೆ ಹೊತ್ತಾಗತ್ತೆ ನಾನು ಫ್ಯಾಕ್ಟರಿಗೆ ಹೋಗ್ತಿನಿ ನೀನು ತಿಂಡಿ ತಿನ್ನಕೊಂಡು ಹೋಗು ಎಂದ. ನನ್ನದು ಆಗಿದೆ ಮಾವಾ ನೀವು ಹೋಗಿಬನ್ನಿ ಎಂದ. ವೆಂಕಟಗಿರಿ ಫ್ಯಾಕ್ಟರಿಗೆ ಹೋದ. ಕಾವೇರಮ್ಮ ಸುಧಾಳಿಗೆ ಅಳಿಯಂದ್ರು ಬಂದಿದ್ದಾರೆ. ತಗೊ ಕಾಫಿ ಕೊಡು ಎಂದು ಕಾಫಿಯ ಕಫನ್ನು ಸುಧಾಳಿಗೆ ಕೊಟ್ಟಳು. ಆಯ್ತಮ್ಮ ಎನ್ನುತ್ತಾ ಅವಳು ಕಾಫಿಯನ್ನು ತಂದು ರಾಜೇಶನಿಗೆ ಕೊಟ್ಟಳು. ಈಗ ಹೇಗಿದ್ದಿಯಾ ಸುಧಾ ಎಂದ ರಾಜೇಶ. ಚೆನ್ನಾಗಿದ್ದೆನೆ ಎಂದಳು ಸುಧಾ. ಚಂದ್ರು ಎಲ್ಲಿ ಕಾಣ್ತಾನೆ ಇಲ್ಲ ಎಂದ ಅವನು ಟ್ಯೂಷನ್‌ಗೆ ಹೋಗಿದ್ದಾನೆ. ಅತ್ತಿಂದನೆ ಶಾಲೆಗೂ ಹೋಗ್ತಾನೆ ಎಂದಳು. ಈ ವರ್ಷ ಅವನು ಎಷ್ಟನೆಯ ಕ್ಲಾಸು ಒದ್ತಾ ಇದ್ದಾನೆ ಎಂದು ಕೇಳಿದ. ಅವನು ಈಗ ೧೦ ನೆಯ ತರಗತಿಗೆ ಹೋಗ್ತಾ ಇದ್ದಾನೆ ಎಂದಳು. ಹೌದಾ ಎಂದು ಸುಮ್ಮನಾದ. ಅವನು ಕಾಫಿ ಕುಡಿಯತೊಡಗಿದ. ಇಬ್ಬರು ಮೌನವಾದರು. ಇವರಿಬ್ಬರು ಮೌನವಾಗಿರುವುದನ್ನು ಕಂಡು ಕಾವೇರಮ್ಮ ಏನಪ್ಪಾ ರಾಜೇಶ ಬೆಳಿಗ್ಗೆನೆ ಬಂದುಬಿಟ್ಟಿದಿಯಲ್ಲ ಬ್ಯಾಂಕಿಗೆ ಹೊತ್ತಾಗಲ್ವಾ ಎಂದಳು. ಇಲ್ಲಾ ಅತ್ತೆ ಇವತ್ತೊಂದು ದಿನ ಬ್ಯಾಂಕಿಗೆ ರಜಾ ಹಾಕಿದ್ದಿನಿ ಎಂದ. ಹೌದಾ ಸರಿ ಬಿಡು ಎಂದು ಒಳಗೆ ಹೋಗುತ್ತಿದ್ದವಳನ್ನು ತಡೆದು ಅತ್ತೆ ಸುಧಾಳನ್ನು ಹೊರಗೆ ಕರೆದುಕೊಂಡು ಹೊಗ್ತಿನಿ ಮಾವಾಗೆ ಹೇಳಿದ್ದಿನಿ ಹೂ ಎಂದರು ಎಂದು ಅತ್ತೆಯ ಅಪ್ಪಣೆಗಾಗಿ ಕಾದು ಕುಳಿತ. ಅವರು ಹೂ ಅಂದ ಮೇಲೆ ಮುಗಿಯಿತು. ಕರಕೊಂಡು ಹೋಗಪ್ಪಾ ಎಂದರು. ಸುಧಾ ರೆಡಿಯಾಗಮ್ಮ ಎಂದರು. ಕಾವೇರಮ್ಮ ಸುಧಾ ಸೀರೆಯನ್ನು ಬದಲಾಯಿಸಲು ಒಳಗೆ ಹೋದಳು. ಆಗ ಕಾವೇರಮ್ಮ ಉಪ್ಪಿಟು ಮಾಡಿದ್ದಿನಿ ತಿನ್ನಪ್ಪಾ ಎಂದಳು. ಬೇಡಾ ಅತ್ತೆ ನನ್ನದೆಲ್ಲ ಮುಗಿದಿದೆ ಎನ್ನುತ್ತಲೆ ಸುಧಾ ರೇಡಿಯಾಗಿ ಬಂದಳು. ಬಾ ಸುಧಾ ಎಂದು ಕರೆದ ರಾಜೇಶ ಹೋಗಿ ಬರ್‍ತಿವಿ ಅತ್ತೆ ಎಂದ. ಹೋಗಿಬಾಪ್ಪಾ ಎಂದಳು ಕಾವೇರಮ್ಮ. ಮನೆಯಿಂದ ಎಷ್ಟೊದೂರ ಬಂದರು ಇಬ್ಬರಲ್ಲಿ ಯಾರು ಮಾತಾಡಲಿಲ್ಲ.

ಆಮೇಲೆ ಆ ಮೌನವನ್ನು ಮುರಿದ ರಾಜೇಶ ಸುಧಾ ನನ್ನನ್ನು ಇನ್ನು ಕ್ಷಮಿಸಿಲ್ಲವೆ ಎಂದ. ಆಗಲು ಸುಧಾ ಮೌನವಾಗಿದ್ದಳು. ಅವಳ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅರಿತ ರಾಜೇಶ ಹೊರಡುವ ಆತುರದಲ್ಲಿ ಅವಳು ತಿಂಡಿ ತಿಂದಳೊ ಇಲ್ಲೊ ಗಮನಿಸಲಿಲ್ಲವಲ್ಲ ಎಂದುಕೊಂಡು ರಸ್ತೆಯ ಬದಿಯಲ್ಲಿ ಬೇಲ ಪೂರಿ ಮಾರುತ್ತಿದ್ದವನ ಹತ್ತಿರ ಹೋಗಿ ಎರಡು ಬೇಲ ಪೂರಿ ಕಟ್ಟಿಸಿಕೊಂಡು ಬಂದ. ಆಮೇಲೆ ಸಮೀಪದ ಪಾರ್ಕಿಗೆ ಸುಧಾಳನ್ನು ಕೆರೆದುಕೊಂಡು ಹೋದ. ಹಸಿರು ಹುಲ್ಲಿನ ಮೇಲೆ ಇಬ್ಬರು ಕುಳಿತರು. ತಾನು ತಂದಿದ್ದ ಬೇಲ ಪುರಿಯ ಪೊಟ್ಟಣವನ್ನು ಬಿಚ್ಚಿ ಸುಧಾಳಿಗೆ ತಿನ್ನಲುಕೊಟ್ಟ ಹಸಿವಾಗಿದ್ದರಿಂದ ಸುಧಾ ಸುಮ್ಮನೆ ತಿಂದಳು. ರಾಜೇಶನು ತಿಂದ. ಸ್ವಲ್ಪ ಹೊತ್ತು ಅಲ್ಲೆ ಸಮಯ ಕಳೆದರು. ಆಮೇಲೆ ರಾಜೇಶ ಸಿನೇಮಾ ನೋಡೊಕೆ ಹೋಗೋಣ್ವಾ ಎಂದ. ಆಗ ಸುಧಾಳಿಗೆ ಆಶ್ಚರ್ಯವಾಯಿತು. ಮದುವೆಯಾದಾಗಿನಿಂದ ಒಂದು ದಿನವು ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಿರಲಿಲ್ಲ ಆದರೆ ಇಂದು ರಾಜೇಶ ಬ್ಯಾಂಕಿಗೆ ರಜಾ ಹಾಕಿ ತನ್ನ ಜೊತೆನೆ ಇದ್ದಾನೆ. ರಾಜೇಶ ಮೊದಲಿನ ಹಾಗಿಲ್ಲ ಹಲವು ಬದಲಾವಣೆಯಾಗಿದೆ ಎಂದು ಯೋಚಿಸುತ್ತಿದ್ದವಳನ್ನು ರಾಜೇಶ ಎಚ್ಚರಿಸಿದ. ಏನು ಯೋಚನೆ ಮಾಡ್ತಾ ಇದ್ದಿಯಾ ಸುಧಾ ಎಂದಾಗ ಏನು ಇಲ್ಲ ಅಂದಳು. ಹಾಗಾದರೆ ಸಿನೆಮಾಕೆ ಹೋಗೋಣ್ವಾ ಎಂದ. ಓ ಹೋಗೊಣಾ ಎಂದಳು. ಆಗ ರಾಜೇಶನಿಗೆ ಸಂತೋಷವಾಯಿತು. ಇಬ್ಬರು ಸೇರಿ ಸಿನೆಮಾ ನೋಡಲು ಹೋದರು.

*****

(ಮುಂದುವರೆಯುವುದು…)

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x