ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ ಎಂದು ಮಗನನ್ನು ಆಸ್ಪತ್ರೆಗೆ ಕಳುಹಿಸಿದ. ರಮಾನಂದರು ಹೆಂಡತಿ ಅಳುವುದನ್ನು ಕಂಡು ಈಗ ಅತ್ತರೆ ಏನೆ ಪ್ರಯೋಜನ. ಆ ಹುಡುಗಿಗೆ ಅನ್ಯಾಯ ಮಾಡಿಬಿಟಿಯಲ್ಲೆ ಅವಳಿಗೇನಾದರೂ ಹೆಚ್ಚು ಕಡಿಮೆಯಾದರೆ ಏನೆ ಗತಿ ಈಗ ನಿನಗೆಷ್ಟು ದುಡ್ಡು ಕೊಟ್ಟರೂ ಅವಳ ಜೀವನ ಸರಿಹೋಗುತ್ತದಾ ಎಂದರು. ಅದಕ್ಕೆ ಪದ್ಮಮ್ಮ ಗಂಡನ ಕಾಲನ್ನು ಹಿಡಿದು ಅಳತೊಡಗಿದಳು. ನನ್ನನ್ನು ಕ್ಷಮಿಸಿ ಇನ್ನೊಮ್ಮೆ ತಪ್ಪು ಮಾಡೊಲ್ಲ ಎಂದು ಗೋಗರೆದಳು. ಕ್ಷಮಿಸಬೇಕಾದವನು ನಾನಲ್ಲ ಸುಧಾ ಎಂದು ಅವಳಿಂದ ಕಾಲು ಬಿಡಿಸಿಕೊಂಡು ಆಸ್ಪತ್ರೆಯ ದಾರಿ ಹಿಡಿದ. ಆಸ್ಪತ್ರೆಯಲ್ಲಿ ಡಾಕ್ಟರ್ ಕಾವೇರಮ್ಮ ಮತ್ತು ವೆಂಕಟಗಿರಿಯವರಿಗೆ ಸಮಯಕ್ಕೆ ಸರಿಯಾಗಿ ಈ ಹುಡುಗಿ ನಿಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರದಿದ್ದರೆ ನಿಮ್ಮ ಮಗಳ ಸ್ಥಿತಿ ಇನ್ನು ಬಿಗಡಾಯಿಸುತಿತ್ತು ಎಂದರು. ಆಗ ಕಾವೇರಮ್ಮ ರೇಖಾ ನೀನು ನಮ್ಮ ಪಾಲಿನ ದೇವರು ಕಣಮ್ಮ ಎಂದು ಅವಳಿಗೆ ಕೈ ಮುಗಿದಳು. ಅಯ್ಯೋ ಆಂಟಿ ಇದೇನು ಮಾಡ್ತೀದ್ದಿರಿ ತಾವು ದೊಡ್ಡವರು ಎಂದಳು. ನಾವು ದೊಡ್ಡವರು ನಿಜಾ ಆದರೆ ನಿನ್ನ ಸ್ನೇಹದ ಭಾಂದವ್ಯದ ಮುಂದೆ ನಾವೆಲ್ಲರೂ ಚಿಕ್ಕವರಾಗಿ ಕಾಣ್ತಾ ಇದ್ದಿವಿ ಎಂದಳು. ನಾವು ಇವಳು ನಿನ್ನ ಜೊತೆ ಓದ್ತೀನಿ ನಾನು ಮುಂದೆ ಬರ್ತೀನಿ ಎಂದು ಎಷ್ಟು ಹೇಳಿದರೂ ಕೇಳದೆ ಮದುವೆ ಮಾಡಿಬಿಟ್ಟೆ. ಈಗ ನೋಡು ಅವಳ ಸ್ಥಿತಿ ಹೇಗಾಗಿದೆ. ಅವಳು ಒಂದು ದಿನಾನು ನಮ್ಮ ಮುಂದೆ ತನ್ನ ದುಃಖ ಹೇಳಿಕೊಳ್ಳಲಿಲ್ಲ. ಒಂದು ರೀತೀಲಿ ಈ ಎಲ್ಲದಕ್ಕೂ ನಾನೇ ಹೋಣೆ ಎಂದು ಅಳಲು ಶುರುಮಾಡಿದರು. ರೇಖಾಳಿಗೆ ಅವರನ್ನ ಹೇಗೆ ಸಮಾಧಾನ ಮಾಡಬೇಕು ಅನ್ನೋದು ತಿಳಿಯಲಿಲ್ಲ. ಚಂದ್ರು ರೇಖಾ ಅಕ್ಕ, ಸುಧಾ ಅಕ್ಕಾ ಆರಾಮ ಆಗ್ತಾಳಲ್ವಾ ಅಂದ. ಆಗ ರೇಖಾ ಖಂಡಿತಾ ಆರಾಮಾಗ್ತಾಳೆ ಹೇದರಬೇಡ ಎಂದಳು.
ಅಷ್ಟೊತ್ತಿಗೆ ರಾಜೇಶ ಆಸ್ಪತ್ರೆಗೆ ಬಂದ ಆದರೆ ಸುಧಾಳಿಗೆ ಮಾತ್ರ ಎಚ್ಚರ ಆಗಿರಲಿಲ್ಲ. ಅವಳ ಮಂಚದ ಬದಿಗೆ ಕುಳಿತುಕೊಂಡ. ಅನಂತರ ರಮಾನಂದ ಮತ್ತು ಪದ್ಮಮ್ಮ ಆಸ್ಪತ್ರೆಗೆ ಬಂದರು. ಕಾವೇರಮ್ಮನಿಗೆ ಪದ್ಮಮ್ಮನ ಮೇಲೆ ವಿಪರೀತ ಕೋಪ ಬಂದಿತು. ಆದರೆ ಜಗಳಾಡಲು ಇದು ಸಮಯವಲ್ಲ ಎಂದು ಸುಮ್ಮನಾದಳು. ಇತ್ತ ರೇಖಾಳ ಮನೆಯಲ್ಲಿ ರಾಧಮ್ಮಳಿಗೆ ಕತ್ತಲಾದರೂ ಮಗಳಿನ್ನು ಬಂದಿಲ್ಲವಲ್ಲ ಎಂದು ಚಿಂತೆಯಾಯಿತು. ಅದೇ ತಾನೆ ಹೊರಗಿನಿಂದ ಬಂದ ಶಿವಾನಂದನಿಗೆ ಏನ್ರಿ ರೇಖಾ ಯಾವತ್ತು ಇಷ್ಟೊತ್ತು ಹೋದವಳಲ್ಲ, ಎಲ್ಲಿಗೆ ಹೋದರೂ ಹೊತ್ತು ಮುಳುಗುವುದರೊಳಗಾಗಿ ವಾಪಸ್ಸು ಮನೆಗೆ ಬರುತ್ತಿದ್ದವಳು ಇಂದೇಕೊ ಇನ್ನು ಬಂದಿಲ್ಲ. ನನಗೆ ತುಂಬಾ ಗಾಬರಿಯಾಗ್ತಾ ಇದೆ ಎಂದು ಒಂದೇ ಉಸುರಿಗೆ ಹೇಳಿದಳು. ನೀನೇನು ಹೇದರಬೇಡ ನನ್ನ ಮಗಳು ಧೈರ್ಯಸ್ಥೆ ಅವಳಿಗೇನು ಆಗಿರೊಲ್ಲ ಎಂದ. ಹೋಗುವಾಗ ಎಲ್ಲಿಗೆ ಹೋಗ್ತಿನಿಂತ ಹೇಳಿದಳಾ ಎಂದು ಹೆಂಡತಿಯನ್ನು ಕೇಳಿದ ಶಿವಾನಂದ. ಹೌದು ಸುಧಾಳ ಮನೆಗೆ ಹೊಗ್ತಿನಿ ಎಂದು ಹೇಳಿದಳು. ಸರಿ ಹಾಗದ್ರೆ ನಾನು ಸುಧಾಳ ಮನೆಗೆ ಹೋಗಿ ಬರುತ್ತೇನೆ ಎಂದು ಸುಧಾಳ ಮನೆಗೆ ಹೋದ. ಮನೆಗೆ ಬೀಗ ಹಾಕಿದುದನ್ನು ನೋಡಿ ಎಲ್ಲಿಗೆ ಹೋಗಿರಬಹುದು ಎಂದು ಚಿಂತಿಸುತ್ತ ಗೇಟು ಹಾಕುತ್ತಾ ಹೊರಗೆ ಬಂದು ಪಕ್ಕದ ಮನೆಯಲ್ಲಿ ವಿಚಾರಿಸಿದರೆ ಎಂಬ ಯೋಚನೆ ಬರುತ್ತಲೆ ಪಕ್ಕದ ಮನೆಗೆ ಹೋದ. ಅಪರಿಚಿತನನ್ನು ಕಂಡ ಕೂಡಲೆ ಸರೋಜ ಯಾರು ಬೇಕಾಗಿತ್ತು ಎಂದಳು. ಈ ಮನೆಯವರೆಲ್ಲ ಎಲ್ಲಿ ಹೋಗಿದ್ದಾರೆ ನೀಮಗೇನಾದರೂ ಗೊತ್ತಾ ಎಂದರು. ಅವರೆಲ್ಲ ತಮ್ಮ ಸೊಸೆಯನ್ನು ಅಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರಂತೆ ಅಲ್ಲಿಗೆ ಹೋಗಿದ್ದಾರೆ. ಯಾವ ಆಸ್ಪತ್ರೆ ಅಂತ ಏನಾದರೂ ಗೊತ್ತೆನಮ್ಮ ಎಂದ. ರಜನಿ ನರ್ಸಿಂಗ್ ಹೋಮ್ ಎಂದಳು. ಸರಿ ಎಂದು ಶಿವಾನಂದ ಒಂದು ರೀತಿಯ ಆತಂಕದಲ್ಲಿ ಆಸ್ಪತ್ರೆಗೆ ಬಂದ. ಅಲ್ಲಿ ವಿಚಾರಿಸಿದಾಗ ರೇಖಾ ಅಲ್ಲೆ ಇರುವುದು ತಿಳಿದು ಅವಳಿದ್ದಲ್ಲಿಗೆ ಬಂದ ಅಪ್ಪನನ್ನು ಕಂಡು ರೇಖಾ ನನ್ನ ಕ್ಷಮಿಸಪ್ಪಾ ನೀವು ನನ್ನ ಬಹಳ ಹುಡುಕಾಡಿದ್ರಾ ಎಂದಳು. ಏನಿಲ್ಲ ಬಿಡಮ್ಮ ನೀನು ಇಲ್ಲಿದಿಯಾ ಅಂತ ತಿಳಿತು ಬಂದೆ ಎಂದ. ಆಗ ರಮಾನಂದರು ಇಂತಹ ಮಗಳನ್ನು ಪಡೆದ ನೀವು ಪುಣ್ಯವಂತರು. ಸ್ವಾಮಿ ಸಕಾಲಕ್ಕೆ ನಿಮ್ಮ ಮಗಳು ನಮ್ಮ ಸೊಸೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ ಇಲ್ಲದಿದ್ದರೆ ಎಂದು ಸುಮ್ಮನಾದರೂ ವಿಷಯ ತಿಳಿದ ಶಿವಾನಂದನಿಗೆ ರೇಖಾಳ ಬಗ್ಗೆ ಹೆಮ್ಮೆಯಾಯಿತು. ಎಲ್ಲರೂ ಸುಧಾ ಎಚ್ಚರವಾಗುವುದನ್ನೆ ಕಾದಿದ್ದರು. ರಾತ್ರಿ ಇವರ ಜೊತೆ ಯಾರಾದರೂ ಇಬ್ಬರಿದ್ದು ಊಳಿದವರೆಲ್ಲ ಮನೆಗೆ ಹೋಗಿ ಎಂದರು ಡಾಕ್ಟರ್. ಅವರ ಹೇಳಿಕೆಯಂತೆ ರಾಜೇಶ ತಾನಿರುವುದಾಗಿ ಹೇಳಿದ. ಆದರೆ ರೇಖಾಳೆ ಬೇಡಿ ಎಂದಳು. ರಾಜೇಶ ನೀವೆಲ್ಲರೂ ಮನೆಗೆ ಹೋಗಿ ಬೆಳಿಗ್ಗೆ ಬನ್ನಿ ಅಲ್ಲಿಯವರೆಗೂ ನಾನು ಆಂಟಿ ಇವಳ ಹತಿರ ಇರುತ್ತೇವೆ ಎಂದಳು. ನೀನು ಮನೆಗೆ ಹೋಗಮ್ಮಾ ಅದು ಬಿಟ್ಟು ಊಟ ಬಿಟ್ಟು ಇಲ್ಲಿರೋದು ಅಷ್ಟು ಸೂಕ್ತ ಅಲ್ಲಮ್ಮ. ನಿಮ್ಮ ತಂದೆಯವರು ಬಂದಿದ್ದಾರೆ. ಅಲ್ಲಿ ನಿಮ್ಮ ತಾಯಿ ಚಡಪಡಿಸ್ತಿರಬಹುದು. ನೀನು ಮನೆಗೆ ಹೋದರೆ ಅವರಿಗೂ ಒಂದಿಷ್ಟು ಸಮಾಧಾನ ಎಂದು ಹೇಳಿದರು. ಆದರೆ ರೇಖಾಳಿಗೆ ಸುಧಾಳನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಇಲ್ಲಾ ಅಂಕಲ್ ನಾನು ಮನೆಗೆ ಹೋದರು ನನಗೆ ಊಟ ಸೇರೊಲ್ಲಾ. ನನ್ನ ಮನಸ್ಸು ಇಲ್ಲಿಯೆ ಇರುತ್ತದೆ. ದಯವಿಟ್ಟು ಅಂಕಲ್ ನಾನು ಸುಧಾಳ ಹತ್ತಿರ ಇರೋಕೆ ಅವಕಾಶ ಕೊಡಿ ಎಂದಳು. ಆಗ ಶಿವಾನಂದನೆ ಇರಲಿ ಬಿಡಿ ರಾಯರೇ. ಅವಳು ತನ್ನ ಗೆಳತಿಯ ಹತ್ತಿರ ಇರಲಿ ಬಿಡಿ. ಅವಳಿಗೆ ನಾನು ವಿಷಯವನ್ನೆಲ್ಲಾ ಹೇಳುತ್ತೇನೆ ಅವಳಿಗೆ ಅರ್ಥ ಆಗೊತ್ತೆ ಈಗ ನಾವೆಲ್ಲರೂ ಹೋಗೋಣಾ ಬನ್ನಿ ಎಂದರು. ಅವರು ಹೇಳಿದಂತೆ ಕಾವೇರಮ್ಮ ಮತ್ತು ಸುಧಾಳನ್ನು ಬಿಟ್ಟು ಎಲ್ಲರೂ ಹೊರಟು ಹೋದರು.
ಆಗ ರೇಖಾಳಿಗೆ ಕಾವೇರಮ್ಮನ ಕಳೆಗುಂದಿದ ಮುಖ ನೋಡಿ ಅಯ್ಯೋ ಅನಿಸಿತು. ಅವಳು ಒಂದ್ನಿಮಿಷ ಬೇಗ ಬಂದು ಬಿಡ್ತೀನಿ ಎಂದು ಹೊರಗೆ ಬಂದಳು. ಆಸ್ಪತ್ರೆಯ ಎದುರಿಗಿದ್ದ ಒಂದು ಜ್ಯೂಸ್ ಅಂಗಡಿಗೆ ಹೋಗಿ ಎರಡು ಲೋಟ ಜ್ಯೂಸ್ ತಂದಳು. ಒಂದನ್ನು ಕಾವೇರಮ್ಮನಿಗೆ ಕೊಡಲು ಹೋದಳು. ಅದಕ್ಕೆ ಕಾವೇರಮ್ಮ ಸುಧಾ ಎಚ್ಚೆತ್ತುಕೊಳ್ಳುವರೆಗೂ ನನಗೇನು ಬೇಡಮ್ಮಾ ಅಂದಳು. ಆಂಟಿ ಮನಸ್ಸಿನ ನೋವುಗಳಿಗೆಲ್ಲಾ ದೇಹವನ್ನು ದಂಡಿಸುವುದು ಯಾವ ನ್ಯಾಯ? ನೀವು ಜ್ಯೂಸ್ ಕುಡಿದರೆ ಮಾತ್ರ ನಾನು ಕುಡಿಯುತ್ತೇನೆ ಎಂದಾಗ ವಿಧಿಯಿಲ್ಲದೆ ಕಾವೇರಮ್ಮ ಜ್ಯೂಸ ಕುಡಿದಳು. ರೇಖಾ ತಾನು ಕುಡಿದು ಲೋಟಗಳನ್ನು ಜ್ಯೂಸ್ ಅಂಗಡಿಗೆ ಕೊಟ್ಟು ಬಂದಳು. ಕಾವೇರಮ್ಮ ರೇಖಾ ನಿನ್ನ ಈ ಋಣಾನ ಹೇಗೆ ತೀರಿಸೋದಮ್ಮ ಎಂದಳು. ಏನ್ ಆಂಟಿ ಇಷ್ಟಕ್ಕೆಲ್ಲಾ ಋಣದ ಮಾತ್ಯಾಕೆ. ನನ್ನನ್ನು ನಿಮ್ಮ ಮಗಳೆಂದು ತಿಳಿದಿಕೊಳ್ಳಿ ಆಗ ಋಣದ ಮಾತೇ ಇರಲ್ಲ ಎಂದು ನಕ್ಕಳು. ಕಾವೇರಮ್ಮನಿಗೆ ರೇಖಾ ತುಂಬಾ ಬುದ್ಧಿವಂತ ಹುಡುಗಿ ಎಂದೆನಿಸಿತು. ರೇಖಾ ಮಂಚದ ಹತ್ತಿರ ಕೆಳಗೊಂದು ಚಾಪೆ ಹಾಸಿ ಮಲಕೊಳ್ಳಿ ಆಂಟಿ ಎಂದು ಒತ್ತಾಯ ಮಾಡಿದ್ದರಿಂದ ಕಾವೇರಮ್ಮ ಮಲಗಿದಳು. ಆದರೆ ತಾನು ಮಾತ್ರ ಮಲಗದೆ ಅವಳ ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಳು. ರೇಖಾ ಹಳೆಯ ನೆನಪಿಗೆ ಜಾರಿದಳು. ತಾವಿಬ್ಬರು ಚಿಕ್ಕವರಿದ್ದಾಗ ಮಾವಿನ ಮರದ ಮೇಲೆ ಹತ್ತಿದ್ದು ಸುಧಾಳಿಗೆ ಮರದಿಂದ ಕೆಳಗಿಳಿಯೋಕೆ ಆಗದಿದ್ದಾಗ ಜಿಗಿದು ಕಾಲು ನೋವು ಮಾಡಿಕೊಂಡಿದ್ದು ಇಬ್ಬರ ಯೋಚನೆಗಳು ಒಂದೇ ರೀತಿಯಾಗಿರುತ್ತಿತ್ತು. ಈ ಸ್ನೇಹ ಅದೆಷ್ಟು ಅಮೂಲ್ಯವಾದದ್ದು ಯಾಕಂದ್ರೆ ನಾವು ಹುಟ್ಟಿದ ಮೇಲೆ ಅಪ್ಪ -ಅಮ್ಮ, ಒಡಹುಟ್ಟಿದವರ ಪ್ರೀತಿಯ ಜೋತೆಗೆ ಮೊದಲು ಸಂಪಾದನೆ ಮಾಡೊದು ಸ್ನೇಹನಾ. ಸ್ಕೂಲ್‌ಗೆ ಹೋಗೊಕೆ ಶುರು ಮಾಡಿದ ಮೇಲೆ ಸ್ನೇಹಿತರ ಒಡನಾಟದಲ್ಲಿ ಬೇಳಿತೀವಿ. ಚಿಕ್ಕಂದಿನಲ್ಲಿ ಶುರುವಾದ ಗೆಳೆತನ ಜೀವನದ ಕೊನೆವರೆಗೂ ಮುಂದುವರೆಯುತ್ತದೆ. ಬಂಧು ಭಾಂದವರು ಎಷ್ಟೋ ಸಲ ಕೈಕೊಟ್ಟಾಗ ಸಹಾಯಕ್ಕೆ ಬರೋರು ಸ್ನೇಹಿತರು. ದುಃಖದಲ್ಲಿದ್ದಾಗ ಸ್ವಾಂತನ ಹೇಳಿ ನಗುವ ಹಾಗೆ ಮಾಡೋದು ಸ್ನೇಹ, ತಪ್ಪು ದಾರೀಲಿ ಹೋಗ್ತಾ ಇದ್ದರೆ ಇದು ತಪ್ಪು ಅಂತ ತಿದ್ದಿ ಹೇಳಿ ಸರಿಯಾದ ದಾರೀಲಿ ನಡಿಯೋಕೆ ಮಾರ್ಗದರ್ಶನ ಮಾಡೋದು ಸ್ನೇಹ, ಸುಖ-ದುಃಖದಲ್ಲಿ ಯಾವಾಗಲೂ ಜೋತೆಯಾಗಿರೊದು ಇದು ಮಧ್ಯದಲ್ಲಿ ಬಂದಿರೊದಲ್ಲ, ಮಗು ಇರೊವಾಗ ಶುರುವಾಗಿ ಸಾಯೊವರೆಗು ಜೋತೆಯಲ್ಲಿರುವಂತದು. ಇಂತಹ ಸ್ನೇಹ ನಮ್ಮಿಬ್ಬರ ಮಧ್ಯೆ ಕೊನೆವರೆಗು ಗಟ್ಟಿಯಾಗಿರಲಿ ಎಂದು ಅಂದುಕೊಂಡಳು ರೇಖಾ. ಹೈಸ್ಕೂಲಿನಲ್ಲಿದ್ದಾಗ ನಮ್ಮಿಬ್ಬರ ಕಂಡು ಉಳಿದ ಗೆಳತಿಯರು ಹೊಟ್ಟೆಕಿಚ್ಚು ಪಟ್ಟಿದ್ದು ಉಂಟು. ದೇವರೆ ಸುಧಾ ಬೇಗ ಹುಷಾರಾಗಲಿ ಎಂದು ಕಾಣದ ದೇವರಿಗೆ ಕೈಮುಗಿದಳು. ಆಗ ಇದ್ದಕಿದ್ದಂತೆ ಸುಧಾಳಿಗೆ ಎಚ್ಚರವಾಯಿತು. ಅವಳು ರೇಖಾಳನ್ನು ನೋಡಿ ಮತ್ತೆ ಅಳುತ್ತಾ ರೇಖಾ ನಾನು ನಿನ್ನ ಜೊತೆ ಬರ್ತೀನಿ. ನಿನ್ನ ಹತ್ತಿರ ಇರ್‍ತಿನಿ ಎಂದು ಏನೆನೊ ಕನವರಿಸಿ ಮತ್ತೆ ನಿದ್ದೆ ಹೋದಳು. ಸಿಸ್ಟರ್ ಬಂದಾಗ ಸುಧಾ ಮತ್ತೆ ನಿದ್ದೆ ಹೋದುದನ್ನು ಕಂಡು ಹೆದರಬೇಡಿ ರೇಖಾ ಅವರಿಗ ಅರೆಪ್ರಜ್ಞಾವಸ್ತೆಯಲ್ಲಿದ್ದುರಂತ ಕಾಣತ್ತೆ. ನಾಳೆ ಅನ್ನೋವಷ್ಟರಲ್ಲಿ ಸರಿಯಾಗತ್ತೆ ಎಂದು ಹೇಳಿ ಹೋದರು. ಸ್ವಲ್ಪ ಹೊತ್ತಿಗೆ ರೇಖಾ ಕುಳಿತಲ್ಲಿಯೆ ನಿದ್ದೆ ಹೋದಳು. ಬೆಳಕು ಹರಿದಾಗ ಕಾವೇರಮ್ಮನಿಗೆ ಎಚ್ಚರವಾಯಿತು. ಅವಳು ರೇಖಾಳನ್ನು ನೋಡಿದಳು. ಅವಳು ಮಲಗಿದ್ದನ್ನು ಕಂಡು ಅಯ್ಯೋ ಅನಿಸಿತವಳಿಗೆ. ಅವಳು ರೇಖಾಳನ್ನು ಎಬ್ಬಿಸಿದಳು. ರೇಖಾ ಎಚ್ಚರವಾಗಿ ಮುಖ ತೊಳೆದು ಬಂದಳು. ಆದರೆ ಸುಧಾಳಿಗೆ ಮಾತ್ರ ಎಚ್ಚರವಾಗಿರಲಿಲ್ಲ. ಅಷ್ಟೊತ್ತಿಗೆ ಕಾವೇರಮ್ಮನು ಮುಖ ತೊಳೆದು ಬಂದರು. ರಾಧಮ್ಮ ಕಾಫಿ ಮಾಡಿಕೊಂಡು ಥರ್ಮಾಸ್‌ಗೆ ಹಾಕಿಕೊಂಡು ಆಸ್ಪತ್ರೆಗೆ ತಗೊಂಡು ಬಂದಿದ್ದರು. ಕಾವೇರಮ್ಮ ನೀವ್ಯಾಕೆ ತೊಂದರೆ ತಗೋಳೋಕೆ ಹೋದಿರಿ. ಈಗಾಗಲೇ ನಮ್ಮಿಂದ ನಿಮಗಳಿಗೆಲ್ಲ ತುಂಬಾ ತೊಂದರೆಯಾಗಿದೆ ಎಂದಳು. ಇದರಲ್ಲಿ ತೊಂದರೆ ಏನು ಬಂತು. ಕಾವೇರಮ್ಮ ನನ್ನ ಮಗಳು ನಿಮ್ಮ ಜೊತೆ ಇದ್ದಾಳೆ ಅಂದ ಮೇಲೆ ಬರದೆ ಇರೊಕ್ಕಾಗತ್ತಾ ಎಂದರು.
ರಾಧಮ್ಮ ಕಾಫಿಯನ್ನು ಕಾವೇರಮ್ಮನಿಗೂ ಮತ್ತು ರೇಖಾಳಿಗೂ ಕೊಟ್ಟರು. ಇಬ್ಬರು ಕುಡಿದರು. ಸುಧಾ ಹೇಗಿದ್ದಾಳೆ ಎಂದರು ರಾಧಮ್ಮ. ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೂ ಅವಳಿಗಿನ್ನು ಎಚ್ಚರವಾಗಿರಲಿಲ್ಲ ಎಂದರು ಕಾವೇರಮ್ಮ. ಸರಿಯಾಗ್ತಾಳೆ ಬಿಡಿ ನೀವೇನು ಚಿಂತಿಸಬೇಡಿ ಎಂದು ರಾಧಮ್ಮ ಕಾವೇರಮ್ಮನಿಗೆ ಸಮಾಧಾನ ಹೇಳಿದರು. ಕಾವೇರಮ್ಮನಿಗೆ ಮಾತ್ರ ಇದೆಲ್ಲಾ ತನ್ನಿಂದಾನೆ ಆಗಿದ್ದು ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ನಾನು ಇವಳೆಷ್ಟು ಬೇಡಾ ಬೇಡಾಂದರು ಕೇಳದೆ ಮದುವೆ ಮಾಡಿ ನಮ್ಮ ಜವಾಬ್ದಾರಿ ಮುಗಿತು ಅಂತ ಸುಮ್ಮನಾಗಿಬಿಟ್ಟಿವಿ. ಇವಳಿಗೆ ಮುಂದೆ ಓದಬೇಕೂಂತ ತುಂಬಾ ಆಸೆ ಇತ್ತು ಇವಳ ಆಸೆಗೆ ತಣ್ಣೀರೆರಚಿಬಿಟ್ಟಿವಿ. ಈಗ ನೋಡಿ ಇವಳ ಸ್ಥಿತಿ ಹೇಗಾಗಿದೆ ಅಂತ ಎಂದು ಕಾವೇರಮ್ಮ ರಾಧಮ್ಮನಿಗೆ ಹೇಳತೊಡಗಿದಳು. ಸಮಾಧಾನ ಮಾಡಿಕೊಳ್ಳಿ ಕಾವೇರಮ್ಮ ಎಲ್ಲ ನಮ್ಮ ಕೈಯಲ್ಲೇನಿದೆ ಎಲ್ಲ ದೇವರ ಇಚ್ಚೆ ಎಂದಳು. ಅಷ್ಟೊತ್ತಿಗೆ ಸುಧಾಳಿಗೆ ಪ್ರಜ್ಞೆ ಬಂದಿತು. ಅವಳು ಎಚ್ಚರವಾಗುತ್ತಲೆ ಮತ್ತೆ ಮತ್ತೆ ಮೊದಲಿನ ಹಾಗೆ ಕನವರಿಸತೊಡಗಿದಳು. ರೇಖಾ ಡಾಕ್ಟರನ್ನು ಕರೆಯಲು ಹೋದಳು.
ಅದೇ ತಾನೆ ಡ್ಯೂಟಿಗೆ ಹಾಜರಾಗಿದ್ದ ಡಾಕ್ಟರ ರಜನಿ ಇವಳು ಕರೆಯುತ್ತಲೇ ಸುಧಾಳನ್ನು ನೋಡಲು ಬಂದಳು. ಸುಧಾ ಇನ್ನು ಕನವರಿಸುತ್ತಲೇ ಇದ್ದಳು. ಡಾಕ್ಟರ ರಜನಿ ಸುಧಾಳನ್ನು ಪರೀಕ್ಷಿಸಿದಳು. ನಿಮ್ಮ ಮಗಳು ಈಗ ಆರೋಗ್ಯವಾಗಿದ್ದಾಳೆ ಕಾವೇರಮ್ಮ. ಸಾಯಂಕಾಲದೊಳಗಾಗಿ ನಿಮ್ಮ ಮಗಳನ್ನು ಮನೆಗೆ ಕರೆದೊಯ್ಯಬಹುದು ಎಂದಾಗ ಎಲ್ಲರಿಗಿಂತ ಮುಂಚಿತವಾಗಿ ರೇಖಾ ಥ್ಯಾಂಕು ಎಂದಳು. ಅಲ್ಲಿ ನೆರದಿದ್ದ ಎಲ್ಲರ ಮುಖದಲ್ಲಿಯೂ ಸಂತೋಷ ತುಂಬಿತು. ಆದರೆ ಒಂದು ಇವರೀಗೀಗ ಐದನೆಯ ತಿಂಗಳು ತುಂಬುತ್ತಿರುವುದರಿಂದ ಇನ್ನು ಹೆರಿಗೆಯಾಗುವವರೆಗೆ ಇವರನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಇವರೀಗೆ ಆದಷ್ಟು ಯಾವುದೇ ರೀತಿಯ ಮಾನಸಿಕ ಆಘಾತ ಆಗದಂತೆ ನೋಡಿಕೊಳ್ಳಬೇಕು. ಇವರಿಗೆ ಸ್ವಲ್ಪ ಹವಾ ಬದಲಾವಣೆಯಾಗಬೇಕು ಅಂದರೆ ಒಳ್ಳೆಯದು. ಈಗ ಇವರಿಗೆ ಕುಡಿಯಲು ಜ್ಯೂಸ್ ಅಥವಾ ಷರಬತ್ತು ಏನಾದರು ಕೊಡಿ ಎಂದರು. ಡಾಕ್ಟರ್ ಕಾಫಿ ಇದೆ ಕೊಡಬಹುದಾ ಎಂದರು. ರಾಧಮ್ಮ. ಕೊಡಿ ಎಂದು ಹೇಳಿ ಡಾಕ್ಟರ್ ಬೇರೆ ಪೇಷೆಂಟನ್ನು ನೋಡಲು ಹೋದರು.
ಸುಧಾಳಿಗೆ ಡಾಕ್ಟರ ಮಾತು ಕೇಳಿ ತಾನು ಆಸ್ಪತ್ರೆಯಲ್ಲಿರುವುದು ಖಚಿತವಾಯಿತು. ಆದರೆ ತಾನು ಇಲ್ಲಿಗೆ ಹೇಗೆ ಬಂದೆ ಎಂದು ಹಳೆಯದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದಳು. ರೇಖಾ ತನ್ನನು ನೋಡಲು ಬಂದಿದ್ದು ತಾನು ತನ್ನ ಮನಸ್ಸಿನ ದುಗುಡವನ್ನು ಅವಳ ಹತ್ತಿರ ಹೇಳಿಕೊಂಡಿದ್ದು ಆಮೇಲೆ ತನ್ನ ಅತ್ತೆ ಅವಳಿಗೆ ಬಯ್ಯುತಿದ್ದದು ರೇಖಾ ಮಾತ್ರ ಅದನ್ನು ತಲೆಗೆ ಹಚ್ಚಿಕೊಳ್ಳದೆ ತನ್ನನ್ನು ಕರೆದುಕೊಂಡು ಆಟೊ ಹಿಡಿದುದು ಇಷ್ಟೆಲ್ಲಾ ಮಸುಕು ಮಸುಕಾಗಿ ನೆನಪಿಗೆ ಬಂತು. ರಾಧಮ್ಮನವರು ಕಾಫಿಯನ್ನು ಕಾವೇರಮ್ಮನಿಗೆ ಕೊಡುತ್ತಾ ಸುಧಾಳಿಗೆ ಕೊಡಿ ಎಂದರು. ಆಗ ಕಾವೇರಮ್ಮ ನೀನೇ ಕುಡಿಸಮ್ಮ ಎಂದು ಕಾಫಿಯ ಕಫ್‌ನ್ನು ರೇಖಾಳಿಗೆ ಕೊಟ್ಟರು. ಸುಧಾ ರೇಖಾಳನ್ನು ಕೃತಜ್ಞತಾಪೂರ್ವಕ ದೃಷ್ಟಿಯಿಂದ ನೋಡಿದಳು. ಏನೊ ಮಾತಾಡಬೇಕೆಂದು ಸುಧಾ ಬಾಯಿ ತೆರೆಯುವುದರಲ್ಲಿ ರೇಖಾ ಏನು ಮಾತಾಡಬೇಡವೆಂದು ಹೇಳಿ ಒಂದು ಟ್ರೇಯನ್ನು ತಂದು ಅದರಲ್ಲಿ ನೀರು ಬೀಳುವ ಹಾಗೆ ಅವಳ ಮುಖವನ್ನು ತೊಳೆದಳು ನಂತರ ಟವಲ್ಲಿನಿಂದ ಮುಖ ಒರೆಸಿ ಕಾಫಿಯನ್ನು ಕುಡಿಸಿದಳು. ಆಗ ಕಾವೇರಮ್ಮ ರೇಖಾ ಯಾವ ಜನ್ಮದ ಋಣಾನು ಬಂಧಾನೋ ಏನೋ ತಾಯಿ ಇಂದು ನಿನ್ನಿಂದ ನಮಗೆಷ್ಟು ಸಹಾಯ ಆಗಿದೆ ಎಂದರು. ಆಗ ರಾಧಮ್ಮನವರು ಇದರಲ್ಲಿ ಸಹಾಯ ಏನು ಬಂತು ಬಿಡಿ ಇವರಿಬ್ಬರು ಗೆಳತಿಯರಿಗಿಂತ ಹಚ್ಚಾಗಿ ಓಡಹುಟ್ಟಿದ ಅಕ್ಕ-ತಂಗಿಯರ ಹಾಗಿದ್ದಾರೆ ಎಂದಳು. ಅದು ನಿಜಾ ಅನ್ನಿ ಎಂದಳು ಕಾವೇರಮ್ಮ. ರೇಖಾ ನಿನಿನ್ನು ಮನೆಗೆ ಹೋಗಿ ಸ್ನಾನ ತಿಂಡಿ ಎಲ್ಲ ಮಾಡಿಕೊಂಡು ಬಾರಮ್ಮಾ ನಿನ್ನೆ ರಾತ್ರಿಯಿಂದ ನನ್ನ ಮಗಳ ಹತ್ತಿರಾನೆ ಇದ್ದಿಯಾ ಎಂದಳು ಕಾವೇರಮ್ಮ ಅದಕ್ಕೆ ರಾಧಮ್ಮನು ಹೌದು ನಡಿ ರೇಖಾ ಇನ್ನೆನು ನಿನ್ನ ಗೆಳತಿ ಚೇತರಿಸಿಕೊಂಡಿದ್ದಾಳೆ ಮನೆಗು ಬಂದು ಬಿಡ್ತಾಳೆ ಎಂದಳು ರಾಧಮ್ಮ. ರೇಖಾಳಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಸುಧಾ ಎಚ್ಚರವಾಗಿ ಆರೋಗ್ಯವಾಗಿದ್ದರಿಂದ ಅವಳ ಮನಸ್ಸಿಗೆ ನಿರಾಳ ಎನಿಸಿದ್ದರಿಂದ ರಾಧಮ್ಮನೊಡನೆ ಮನೆಗೆ ಹೋಗಲು ಒಪ್ಪಿಕೊಂಡಳು. ರೇಖಾ ಅತ್ತ ಹೋಗುತ್ತಲೆ ರಾಜೇಶ, ರಮಾನಂದ ಮತ್ತು ಪದ್ಮಮ್ಮ ಎಲ್ಲರು ಬಂದರು.
*****
(ಮುಂದುವರೆಯುವುದು…)
[…] (ಇಲ್ಲಿಯವರೆಗೆ) […]