ಸ್ನೇಹ ಭಾಂದವ್ಯ (ಭಾಗ 4): ನಾಗರತ್ನಾ ಗೋವಿಂದನ್ನವರ


(ಇಲ್ಲಿಯವರೆಗೆ)

ಆ ದಿನ ರಾತ್ರಿ ಸುಧಾಳಿಗೆ ನಿದ್ದೆ ಹತ್ತಿರ ಸುಳಿಯದಾಯಿತು ಈ ವಿಷಯವನ್ನು ಹೇಗಾದರೂ ಮಾಡಿ ರೇಖಾಳಿಗೆ ತಿಳಿಸಬೇಕು. ಊರಿಗೆ ಬಂದು ಐದಾರು ದಿನಗಳು ಕಳೆದಿವೆ ಆದರೂ ರೇಖಾಳನ್ನು ಭೇಟಿಯಾಗಿಲ್ಲ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಬೇಕೆಂದು ಚಿಂತಿಸುತ್ತ ಮಲಗಿದವಳಿಗೆ ಬೆಳಕು ಹರಿದಿದ್ದೆ ತಿಳಿಯಲಿಲ್ಲ. ಏಳೇ ಸುಧಾ ಇನ್ನು ಮಲಗೆ ಇದ್ದೀಯಲ್ಲೆ. ಗಂಡಿನ ಕಡೆಯವರು ಬರುವುದರೊಳಗಾಗಿ ಮನೆಯ ಕೆಲಸವೆಲ್ಲ ಮುಗಿಯಬೇಕು ಎಂದು ಕಾವೇರಮ್ಮ ಎಬ್ಬಿಸಿದಾಗಲೇ ಸುಧಾಳಿಗೆ ಎಚ್ಚರ. ಸುಧಾ ಎದ್ದು ಬೇಗ ಬೇಗನೆ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡಿ ಎಲ್ಲ ಕೆಲಸವನ್ನು ಮುಗಿಸಿದ ಬಳಿಕ ಅಮ್ಮಾ ನಾನು ಸ್ಷಲ್ಪ ರೇಖಾಳ ಮನೆಗೆ ಹೋಗ್ತಿನಿ ಬಂದಾಂಗಿನಿಂದ ಇಬ್ಬರು ಭೇಟಿನೆ ಆಗಿಲ್ಲ ಎಂದಳು. ಇವತ್ತು ಬೇಡಾ ನಾಳೆ ಹೋಗುವಿಯಂತೆ. ಈಗಾಗಲೇ ಮಧ್ಯಾಹ್ನ ಆಗಿದೆ. ನಿಮ್ಮಪ್ಪಾ ಬರುವ ಹೊತ್ತಾಗಿದೆ. ಅವರು ಬಂದಾಗ ನೀನಿಲ್ಲ ಅಂದರೆ ನಾನು ಬೈಸಿಕೊಳ್ಳಬೇಕಾಗುತ್ತದೆ ಅಂದಾಗ ಸುಧಾಳಿಗೆ ತಾಯಿಯ ಮೇಲೆ ವಿಪರೀತ ಕೋಪ ಬಂದು ತನ್ನ ರೂಮಿಗೆ ಹೋಗಿ ಬಾಗಿಲ ಚಿಲಕ ಹಾಕಿ ತನ್ನ ಮನದ ಅಳಲನ್ನು ಯಾರ ಹತ್ತಿರ ಹೇಳಲಿ ಎಂದು ಚಿಂತಿಸತೊಡಗಿದಳು. ಇತ್ತ ರೇಖಾಳಿಗೆ ಎಷ್ಟು ದಿನ ಆಯಿತು. ನಾವು ಊರಿಗೆ ಬಂದು ನಾನು ಸುಧಾಳನ್ನು ಭೇಟಿಯಾಗಿಲ್ಲ. ಅವಳಾದರೂ ಬರೋದು ಬೇಡ್ವೆ ಅವಳು ಬಂದಿಲ್ಲ. ನಾಳೆ ಅವಳ ಮನೆಗೆ ಹೋಗಬೇಕು ಎಂದುಕೊಂಡಳು. ಊಟಕ್ಕೆ ಎಲೆ ಹಾಕಿ ಸಿದ್ದ ಮಾಡಬಾರೆ ರೇಖಾ ಎಂದ ರಾಧಮ್ಮಳ ಮಾತಿಗೆ ರೇಖಾ ವಾಸ್ತವಕ್ಕೆ ಬಂದಳು. ಏನಮ್ಮಾ ಒಂದು ಕಡೆ ಕೂತ್ಕೊಳ್ಳೊದಿಕ್ಕೂ ಬಿಡೊದಿಲ್ಲಾ ನೋಡು ನೀನು ಎಂದು ಊಟಕ್ಕೆ ಸಿದ್ಧ ಮಾಡತೊಡಗಿದಳು.

ಸುಧಾ ಬಾರೆ ಊಟ ಮಾಡಬಾರೆ ಎಂದು ಕಾವೇರಮ್ಮ ಕರೆದಾಗ ಸುಧಾಳಿಗೆ ಊಟ ಬೇಡವಾಗಿತ್ತು. ನನಗೆ ಹಸಿವಿಲ್ಲಮ್ಮ ಎಂದು ತನ್ನ ರೂಮಿನೊಳಗಿನಿಂದಲೇ ಉತ್ತರ ಕೊಟ್ಟಳು. ವೆಂಕಟಗಿರಿಗೆ ಕೋಪ ಬಂದರು ನುಂಗಿಕೊಂಡು ಊಟ ಮಾಡಬಾಮ್ಮ ಸುಧಾ ಹಟ ಮಾಡಬೇಡಾ ಬೇಗ ಊಟ ಮಾಡಿ ಗಂಡಿನ ಕಡೆಯವರು ಬರುವುದರೊಳಗಾಗಿ ತಯಾರಾಗಮ್ಮ ಸುಮ್ಮನೆ ಊಟ ಬಿಟ್ಟು ನನ್ನ ಮನಸ್ಸಿಗೆ ನೋವು ಕೊಡಬೇಡಾ ಎಂದಾಗ ಸುಧಾ ವಿಧಿಯಿಲ್ಲದೆ ಎದ್ದು ಬಂದು ಉಂಡಶಾಸ್ತ್ರ ಮಾಡಿದಳು. ನಂತರ ಕಾವೇರಮ್ಮ ಅವಳಿಗೆ ರೇಷ್ಮೆ ಸೀರೆ ಉಟ್ಟು ಹೂ ಮುಡಿದು ಬೇಗ ರೇಡಿಯಾಗಮ್ಮ ಸುಧಾ ಎಂದು ಅವಸರಪಡಿಸಿದಳು. ಸುಧಾಳಿಗೇಕೊ ಇವರಿಗೆ ನನ್ನ ಮನಸ್ಸೆ ಅರ್ಥ ಆಗೊಲ್ವಾ ಅಂತ ಯೋಚಿಸುತ್ತಿದ್ದವಳು ಅಮ್ಮನ ಮಾತಿಗೆ ಮಣಿದು ರೆಡಿಯಾಗಲು ಹೋದಳು. ಅಷ್ಟೊತ್ತಿಗೆ ಜೋಯಿಷರು ಗಂಡಿನವರೊಂದಿಗೆ ಬಂದುದನ್ನು ನೋಡಿದ ವೆಂಕಟಗಿರಿ ಬನ್ನಿ ಬನ್ನಿ ಎಂದು ಮುಗುಳು ನಗೆಯೊಂದಿಗೆ ಸ್ವಾಗತಿಸಿದರು. 

ರಾಜೇಶ ತನ್ನ ತಂದೆ-ತಾಯಿಯೊಂದಿಗೆ ಹೆಣ್ಣು ನೋಡಲು ಉತ್ಸಾಹದಿಂದ ಬಂದಿದ್ದ. ವೆಂಕಟಗಿರಿ ಅವರನ್ನು ಕುರ್ಚಿಯಲ್ಲಿ ಕೂಡಿಸಿ ಒಳಗೆ ಹೋದರು. ಏನೇ ನಿನ್ನ ಮಗಳಿನ್ನು ರೇಡಿಯಾಗಿಲ್ವೆನೆ. ಅವರೆಲ್ಲಾ ಬಂದಿದ್ದಾರೆ. ಬೇಗ ರೆಡಿಯಾಗಿ ತಿಂಡಿಯ ತಟ್ಟೆಯನ್ನು ತೆಗೆದುಕೊಂಡು ಬಾ ಅನ್ನು ಎಂದು ಹೆಂಡತಿಗೆ ಪಿಸುಧ್ವನಿಯಲ್ಲಿ ಹೇಳಿ ಹೊರಗೆ ನಗುತ್ತಾ ಬಂದರು. ಎಲ್ಲಿ ನಿಮ್ಮ ಹೆಂಡತಿ, ಮಕ್ಕಳು ಎಂದು ರಾಜೇಶನ ತಂದೆ ರಮಾನಂದ ಕೇಳಿದರು. ಅಲ್ಲೆ ನಿಂತಿದ್ದ ಚಂದ್ರುನ ಅವರಿಗೆ ಪರಿಚಯಿಸಿದ ವೆಂಕಟಗಿರಿ. ಅಷ್ಟೊತ್ತಿಗೆ ಕಾವೇರಮ್ಮ ಮಗಳೊಂದಿಗೆ ಹೊರಗೆ ಬಂದರು. ಆಗ ವೆಂಕಟಗಿರಿ ಅವರನ್ನು ಪರಿಚಯಿಸಿದ. ಸುಧಾ ತಿಂಡಿಯ ಪ್ಲೇಟುಗಳನ್ನು ಎಲ್ಲರಿಗೂ ಕೊಡಮ್ಮಾ ಎಂದು ಕಾವೇರಮ್ಮ ಜ್ಞಾಪಿಸಿದಾಗ ಸುಧಾ ಎಲ್ಲರಿಗೂ ಕೊಟ್ಟಳು. ಜೋಯಿಷರು ಹೇಳಿದಂತೆ ಸುಧಾ ನಿಜವಾಗಲೂ ಅಪ್ರತಿಮ ಸುಂದರಿ ಎನಿಸಿತು ರಾಜೇಶನಿಗೆ. ತಾನು ಸುಧಾಳಿಗಿಂತ ಹತ್ತುಪಟ್ಟು ಸುಂದರಿಯಾಗಿರುವ ಹುಡುಗಿಯರನ್ನು ನೋಡಿದ್ದೇನೆ ಆದರೂ ಸುಧಾಳಲ್ಲಿ ಸೌಂದರ್ಯದ ಜೋತೆಗೆ ಏನೊ ಒಂದು ಆಕರ್ಷಣೆ ಇದೆ ಅಂತ ಅನಿಸ್ತಾ ಇದೆ. ಇವಳನ್ನು ನೋಡಿದವರಾರು ಇವಳನ್ನು ಒಪ್ಪದಿರಲು ಸಾಧ್ಯವಿಲ್ಲ ಎಂದು ಮನದಲ್ಲಿ ಅಂದುಕೊಂಡನು.  

ರಾಜೇಶನ ತಾಯಿ ಪದ್ಮಾಳಿಗೂ ಕೂಡಾ ಸುಧಾ ಸುಂದರವಾಗಿದ್ದಾಳೆ. ಇವಳ ಹಾಗೂ ರಾಜೇಶನ ಜೋಡಿ ತುಂಬಾ ಚೆನ್ನಾಗಿರುತ್ತದೆ. ಹೇಳಿ ಮಾಡಿಸಿದಂತಹ ಜೋಡಿ ಎಂದುಕೊಂಡಳು. ಅವಳು ರಾಜೇಶನನ್ನು ಕಣ್ಣಸನ್ನೆಯಲ್ಲೆ ಹುಡುಗಿ ಒಪ್ಪಿಗೆಯೇನು ಎಂದು ಕೇಳಿದಳು. ಅದಕ್ಕವನು ತನ್ನ ಸಮ್ಮತಿ ಸೂಚಿಸಿದ. ಆಗ ರಮಾನಂದ ನಮ್ಮ ಹುಡುಗನಿಗೆ ನಿಮ್ಮ ಹುಡುಗಿ ಒಪ್ಪಿಗೆಯಾಗಿದ್ದಾಳೆ. ನಿಮ್ಮ ಹುಡುಗಿಗೆ ನಮ್ಮ ಹುಡುಗ ಒಪ್ಪಿಗೆಯಾಗಿದ್ದರೆ ಮುಂದಿನ ಮಾತಾಡಬಹುದು ಎಂದರು. ಅದಕ್ಕೆ ವೆಂಕಟಗಿರಿ ಅವಳನ್ನು ಏನು ಕೇಳುವುದು ನಾನು ಹೇಳಿದ ಮೇಲೆ ಮುಗಿತು ನನ್ನ ಮಾತು ಮೀರೊದಿಲ್ಲ ಎಂದರು. ಹಾಗಾದರೆ ಸಂತೋಷ. ನಮ್ಮ ಹುಡುಗನಿಗೆ ಏನು ಕೊಡುತ್ತೀರಿ ಎಂದು ರಮಾನಂದರು ನೇರವಾಗಿ ಕೇಳಿದರು ಅದಕ್ಕೆ ವೆಂಕಟಗಿರಿ ನಾವು ಅಷ್ಟೇನೂ ಶ್ರೀಮಂತರಲ್ಲ. ಏನೊ ಅವಳ ಹೆಸರಲ್ಲಿ ಸ್ವಲ್ಪ ಅಷ್ಟೊ ಇಷ್ಟೊ ಉಳಿಸಿಟ್ಟಿದ್ದೀವೆ ಅದನ್ನೇ ಈಗ ಅವಳ ಮದುವೆಗೆ ಖರ್ಚು ಮಾಡುತ್ತೇವೆ ಅಷ್ಟೆ. ಹುಡುಗನಿಗೆ ಸೂಟು, ಬೂಟು ಒಂದು ವಾಚು, ಒಂದು ತೊಲಿ ಬಂಗಾರ ಇಷ್ಟೆಲ್ಲಾ ಕೊಟ್ಟು ಸರಳವಾಗಿ ನಾವೆ ಮದುವೆ ಮಾಡಿಕೊಡ್ತಿವಿ ಆಗಬಹುದೇ ಎಂದರು. ಓ ಅವಶ್ಯವಾಗಿ ನಿಮ್ಮ ಶಕ್ತಿಗೆ ಮೀರಿದ್ದನ್ನು ನಾವು ಬಯಸೋದಿಲ್ಲ. ನಮಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ. ಮಗಾ ಬ್ಯಾಂಕಿನಲ್ಲಿ ಕೆಲಸ ಮಾಡ್ತಾ ಇದ್ದಾನೆ. ನಮಗೂ ಹೆಚ್ಚಿನ ಆಸೆ ಇಲ್ಲ. ಮಹಾಲಕ್ಷ್ಮಿಯ ಹಾಗೆ ನಿಮ್ಮ ಸುಧಾ ನಮ್ಮ ಮನೆಗೆ ಸೊಸೆಯಾಗಿ ಬಂದರೆ ಸಾಕೆಂದು ನಗೆಯಾಡಿದರು. ಇದನ್ನೆಲ್ಲಾ ಕೇಳುತ್ತಿದ್ದ ಸುಧಾಳಿಗೆ ಅಲ್ಲಿ ಕೂತುಕೊಳ್ಳೊಕಾಗದೆ ಒಳಗೆ ಎದ್ದುಹೋದಳು. ಅವಳು ಎದ್ದು ಹೋಗಿದ್ದನ್ನು ಕಂಡು ಪದ್ಮಮ್ಮಾ ಹುಡುಗಿ ನಾಚಿಕೊಂಡು ಎದ್ದುಹೋದಳೆಂದು ತಿಳಿದುಕೊಂಡಳು.

ಆದರೆ ಸುಧಾಳಿಗೆ ಇದ್ಯಾವುದು ಹಿಡಿಸಲಿಲ್ಲ. ಜೋಯಿಷರು ಇವತ್ತು ಹೇಗಿದ್ದರೂ ಒಳ್ಳೆಯ ಮಹೂರ್ತ ಇದೆ. ತಾಂಬೂಲ ಬದಲಾಯಿಸಿಕೊಂಡು ಬಿಡಿ ಎಂದರು. ಅವರಂದಂತೆಯೆ ಹಾಗೆ ಆಗಲಿ ಎಂದು ಹಣ್ಣು-ತಾಂಬೂಲವನ್ನು ಬದಲಾಯಿಸಿಕೊಂಡರು. ಒಂದು ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥ ಹಾಗೆಯೆ ಒಂದು ವಾರದಲ್ಲಿ ಮದುವೆಯನ್ನು ಮಾಡಿ ಮುಗಿಸಿಬಿಡೋಣ ಎಂದರು. ಅದಕ್ಕೆ ವೆಂಕಟಗಿರಿ ಹಾಗೆ ಆಗಲಿ ಈ ಕಾರ್ಯ ಎಷ್ಟು ಬೇಗ ಆದರೆ ಅಷ್ಟು ಒಳ್ಳೆಯದು ಅಂದಾಗ ವೆಂಕಟಗಿರಿ ತಮ್ಮ ಸಮ್ಮತಿ ಸೂಚಿಸಿದರು. ನಾವಿನ್ನು ಹೋಗಿ ಬರುತ್ತೇವೆ ಎಂದು ರಮಾನಂದರು ತಮ್ಮ ಪರಿವಾರದೊಂದಿಗೆ ಹೊರಗೆ ಬಂದರು. ಅವರು ಮನೆ ದಾಟಿದ್ದೆ ತಡ ಪದ್ಮಾವತಿ ಬಯ್ಯಲು ಶುರು ಮಾಡಿದಳು. ರ್ರೀ. ನಿಮಗೇನಾದರೂ ಬುದ್ಧಿ ಇದೆಯೊ ಇಲ್ವೊ ನಮಗಿರೋನು ಒಬ್ಬನೇ ಮಗ ಇವನ ಮದುವೆ ಚೆನ್ನಾಗಿ ಮಾಡೋದು ಬೇಡ್ವೆ. ಚೆನ್ನಾಗಿಯೆ ಮಾಡೆ ಯಾರು ಬೇಡಾಂದವರು. ಯಾರೇನು ಬೇಡಾಂದಿಲ್ಲ ಆದರೆ ನೀವ್ಯಾಕೆ ಒಂದೇ ತೊಲಿ ಬಂಗಾರಕ್ಕೆ ಒಪ್ಪಿಕೊಂಡಿರಿ. ಸ್ವಲ್ಪ ಜಾಸ್ತಿ ಕೇಳಬೇಕಾಗಿತ್ತು. ಅಯ್ಯೋ ನಿನ್ನದು ಅತಿ ಆಸೆಯಾಯ್ತು, ಯಾಕೆ ದುಡ್ಡು ದುಡ್ಡು ಅಂತ ಬಡಕೋತಿಯಾ. ಹುಡುಗಿನ ನೋಡಿದೆಯಾ ಸಾಕ್ಷಾತಾ ಮಹಾಲಕ್ಷ್ಮೀ ಇದ್ದ ಹಾಗಿದ್ದಾಳೆ. ನಮ್ಮ ರಾಜೇಶನಿಗೆ ಇಷ್ಟ ಆಗಿದ್ದಾಳೆ ಅಲ್ವೆನೋ ರಾಜೇಶ. ಹೌದಮ್ಮಾ ನಾನು ಮದುವೆಯಾದರೆ ಆ ಹುಡುಗಿಯನ್ನೆ ಇಲ್ಲದೆ ಇದ್ದರೆ ನನಗೆ ಮದುವೆನೆ ಬೇಡಾ ಎಂದಾಗ ಪದ್ಮಮ್ಮ ವಿಧಿಯಿಲ್ಲದೆ ಸುಮ್ಮನಾದಳು.

ಆಯಿತು ವೆಂಕಟಗಿರಿಯವರೇ ನಾನಿನ್ನು ಬರುತ್ತೇನೆ ಆದಷ್ಟು ಬೇಗ ನಿಶ್ಚಿತಾರ್ಥದ ಸಿದ್ಧತೆ ಮಾಡಿಕೊಳ್ಳಿ ಎಂದು ಜೋಯಿಷರು ಹೇಳಿದರು. ಆಗ ವೆಂಕಟಗಿರಿ ಇದನ್ನು ತಾವು ಹೇಳಬೇಕೆ, ನಾವು ಮಾಡಿಯೆ ಮಾಡುತ್ತೇವೆ ಎಂದರು. ಮರುದಿನ ರೇಖಾಳ ಮನೆಗೆ ಸುಧಾ ಬಂದಳು. ತುಳಸಿ ಪೂಜೆ ಮಾಡುತ್ತಿದ್ದ ರಾಧಮ್ಮ ಸುಧಾಳನ್ನು ನೋಡಿ ಏನಮ್ಮಾ ಸುಧಾ ಚೆನ್ನಾಗಿದ್ದಿಯಾ? ಅದೇನು ಇಷ್ಟು ಬೇಳಿಗ್ಗೆನೆ ಬಂದು ಬಿಟ್ಟಿದಿ. ನಾನು ಚೆನ್ನಾಗಿದ್ದೇನೆ ಆಂಟಿ ನೀವು ಹೇಗಿದ್ದೀರಾ? ನಾನು ಚೆನ್ನಾಗಿದ್ದೆನಮ್ಮಾ. ಆಂಟಿ ರೇಖಾ ಇಲ್ವಾ ಅಂದಳು. ಒಳಗಿದ್ದಾಳೆ ಹೋಗಿ ನೋಡು ಎಂದರು. ಸುಧಾ ಒಳಗೆ ಬಂದಾಗ ರೇಖಾ ತಿಂಡಿ ರೇಡಿ ಮಾಡುತ್ತಿದ್ದವಳು ಇವಳನ್ನು ನೋಡಿ ಏನೇ ನಿನಗೆ ಇವತ್ತು ನನ್ನ ನೆನಪಾಯ್ತಾ ಎಂದಾಗ ಸುಧಾ ಹೌದೇ ನನಗೇನು ಇವತ್ತು ನೆನಪು ಬಂತು ಬಂದೆ ಆದರೆ ನಿನಗಾದರೂ ನನ್ನ ನೆನಪಿರೊದು ಬೇಡ್ವಾ, ನೀನಾದರೂ ನನ್ನ ಮನೆಗೆ ಬರಬಾರದಾಗಿತ್ತಾ ಎಂದಳು. ಹೊಗಲಿ ಬಿಡು ಒಬ್ಬರ ಮೇಲೊಬ್ಬರು ಹೀಗೆ ಆರೋಪ ಹೊರಸ್ತೀರೊಣ್ವಾ ಅಥವಾ ಏನಾದರೂ ಮಾತಾಡೋಣ್ವಾ ಎಂದಳು ರೇಖಾ. ನಾನು ನಿನ್ನ ಹತ್ತಿರ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಅದಕ್ಕೆ ಇಷ್ಟು ಬೆಳಿಗ್ಗೆನೆ ಬಂದಿದ್ದೇನೆ. ಅದೇನು ಅಂತ ಹೇಳು ಸುಧಾ. ಇಲ್ಲಿ ಮಾತಾಡೋದು ಬೇಡಾ ರೇಖಾ ಮನೆಯ ಮಾಳಿಗೆಯ ಮೇಲೆ ಹೋಗೋಣ ಬಾ ಎಂದಳು ಸುಧಾ. ಸರಿ ನಡಿ ಎಂದು ರೇಖಾ ಸುಧಾಳನ್ನು ಕರೆದುಕೊಂಡು ಮನೆಯ ಮೇಲ್ಚಾವಣಿಯ ಮೇಲೆ ಬಂದಳು. 

ಹೇಳೆ ಏನದು ವಿಷಯ ಎಂದು ರೇಖಾ ಕೇಳಿದಳು. ರೇಖಾ ನನಗೆ ಮುಂದೆ ಓದೋದಿಕ್ಕಾಗುತ್ತದೊ ಇಲ್ವೊ ಗೊತಿಲ್ಲ ಏನೆ ಹಾಗಂದರೆ ಎಂದು ರೇಖಾ ಕೇಳಿದಳು. ನಮ್ಮನೆಗೆ ನಿನ್ನೆ ನನ್ನ ನೋಡೋಕೆ ಗಂಡು ಬಂದಿದ್ದ ಅವನು ನನ್ನನ್ನು ಮೆಚ್ಚಿಕೊಂಡಿದ್ದಾನೆ ಎರಡು ಮನೆಯವರು ಈಗಾಗಲೆ ತಾಂಬೂಲವನ್ನು ಬದಲಾಯಿಸಿಕೊಂಡು ನಿಶ್ಚಿತಾರ್ಥದ ದಿನಾನು ಗೊತ್ತು ಮಾಡಿದ್ದಾರೆ ಕಣೆ. ಹಿರಿಯರಿಗೆ ಎದುರು ಮಾತಾಡೋಕೊ ಆಗದೆ ಈ ಪರಿಸ್ಥಿತಿನ ಒಪ್ಪಿಕೊಳ್ಳೊಕು ಆಗದೆ ಒದ್ದಾಡ್ತಿದ್ದಿನಿ ಕಣೆ ಏನು ಮಾಡಬೇಕೂಂತ ತಿಳಿತಾ ಇಲ್ಲ. ಹೌದೆನೆ ನಾನು ನಿಮ್ಮ ತಾಯಿಯ ಹತ್ತಿರ ಮಾತಾಡ್ಲಾ ಎಂದಳು ರೇಖಾ. ಹಾಗೆ ಮಾತ್ರ ಮಾಡಬೇಡಮ್ಮಾ ನಮ್ಮನೇಲಿ ಇನ್ನಷ್ಟು ರಾದ್ಧಾಂತ ಆಗೊತ್ತೆ ಅದೂ ಅಲ್ಲದೆ ನಿನಗೂ ಬುದ್ಧಿ ಹೇಳಿ ನೀನು ಮದುವೆ ಆಗೋಂತ ಹೇಳ್ತಾರೆ ಅಷ್ಟೆ ಹಾಗಾದರೆ ಏನು ಮಾಡೋದು. ಒಂದು ಉಪಾಯ ಇದೆ ಏನದು ಎಂದಳು ಸುಧಾ ನಿನ್ನ ಭಾವಿ ಪತಿ ಅದೇ ನಿನ್ನ ಮೆಚ್ಚಿಕೊಂಡ ಹುಡುಗ, ಏ ನನ್ನ ರೇಗಿಸ್ತಿಯೇನೆ ಎಂದು ರೇಖಾಳ ಮಾತನ್ನು ಅಧದಲ್ಲಿ ತಡೆದಳು ಸುಧಾ. ಸರಿ ಬಿಡು ನಿನಗೆ ತಮಾಷೆ ಮಾಡಲ್ಲ. ಈಗ ನಾನು ಸಿರಿಯಸ್ಸಾಗಿ ಹೇಳ್ತಾ ಇದ್ದಿನಿ ಕೇಳು ಎಂದಳು ರೇಖಾ. ಏನೇ ಕೇಳೋದು ನನ್ನ ಸಂಕಟ ನನಗೆ ನಿನಗೆ ಮಾತ್ರ ತಮಾಷೆನಾ ಎಂದಳು ಸುಧಾ. ನೋಡು ಆ ಹುಡುಗನ್ನ ಒಂದು ಸ್ಥಳಕ್ಕೆ ಬಾ ಅಂತ ಹೇಳು ಅಲ್ಲಿ ನೀನು ಅವನನ್ನು ಭೇಟಿಯಾಗಿ ನಾನು ಓದಬೇಕೂಂತ ಇದ್ದಿನಿ ಒಂದೆರಡು ವರ್ಷ ಬಿಟ್ಟು ಮದುವೆ ಆಗೋಣಾ ಅಂತ ಹೇಳು. ನಿನ್ನ ತುಂಬಾ  ಪ್ರೀತಿಸುವ ಹುಡುಗ ಆಗಿದ್ದರೆ ನಿನ್ನ ಬಿಡಲಾರದೆ ನಿನ್ನ ಷರತ್ತಿಗೆ ಖಂಡಿತಾ ಒಪ್ಕೊತಾನೆ ಎಂದಳು. ಸರಿ ಹಾಗೆ ಮಾಡುತ್ತೇನೆ ರೇಖಾ ನಿನಗೆ ತುಂಬಾ ಥ್ಯಾಂಕ್ಸ್ ಕಣೆ. ನನಗೆ ಈಗ ಸ್ವಲ್ಪ ಸಮಾಧಾನ ಆಯಿತು ಎಂದಳು. ಹೌದು ಹುಡುಗಾ ನೋಡೊಕೆ ಹೇಗಿದ್ದಾನೆ ನಿನಗೆ ಇಷ್ಟಾ ಆದನಾ ಎನು ಹೇಳಲೆ ಇಲ್ಲ ನೀನು.  ನೋಡೋಕೆ ಚೆನ್ನಾಗಿದ್ದಾರೆ ಆದ್ರೆ ನನ್ನ ಕಂಡಿಷನ್ಗೆ ಒಪ್ಪಿಕೊಂಡರೆ ಮಾತ್ರ ನಾನು ಈ ಮದುವೆಗೆ ಒಪ್ಪಿಕೋತಿನಿ ಇಲ್ಲಾಂದ್ರೆ ಇಲ್ಲಾ ಕಣೆ. ಅಷ್ಟೋತ್ತಿಗೆ ರಾಧಮ್ಮ ರೇಖಾ ಎಂದು ಕರೆದುದನ್ನು ಕೇಳಿ ಇಬ್ಬರು ಕೆಳಗಿಳಿದು ಬಂದರು. ರೇಖಾ ಏನಮ್ಮಾ ಎಂದಾಗ ತಿಂಡಿ ಹಾಕಿಟ್ಟಿದ್ದಿನಿ ಇಬ್ಬರು ತಿನ್ನಬರ್ರಿ ಎಂದಳು. ಆಗ ಸುಧಾ ನನ್ನದು ಆಗಿದೆ ಎಂದರು ಕೇಳದೆ ರಾಧಮ್ಮ ಬಲವಂತ ಮಾಡಿದ್ದರಿಂದ ಸುಧಾಳು ತಿಂಡಿ ತಿಂದಳು. ನಾನಿನ್ನು ಹೊರಡ್ತಿನಿ ರೇಖಾ ಎಂದಳು. ಸರಿ ಸುಧಾ ಆದರೆ ನಾನು ಹೇಳಿದ್ದು ಮರೆಯಬೇಡಾ ಎಂದು ಗೆಳತಿಗೆ ಮತ್ತೊಮ್ಮೆ ನೆನಪಿಸಿದಳು. ಇಲ್ಲ ಮರೆಯೊದಿಲ್ಲಾ ಎನ್ನುತ್ತಾ ಸುಧಾ ಮನೆಯ ದಾರಿ ಹಿಡಿದಳು. 

ದಾರಿಯಲ್ಲಿ ಕ್ವಾಯಿನ್ ಬಾಕ್ಸ್ ಕಂಡಿದ್ದರಿಂದ ರಾಜೇಶನ ಬ್ಯಾಂಕಿಗೆ ಫೋನ ಮಾಡಿದರೆ ಎನ್ನುವ ಯೋಚನೆ ಬಂದದ್ದೆ ತಡ ಫೋನ ಮಾಡಲು ಹೋದಳು. ಅವನಿಗೆ ಫೋನ್ ಮಾಡುತ್ತಲೆ ಆ ಕಡೆ ಹಲೋ ಎಂದು ರಾಜೇಶನ ಧ್ವನಿ ಕೇಳುತ್ತಲೆ ಸುಧಾಳಿಗೆ ಮಾತಾಡಲು ಸಂಕೋಚ, ಮುಜುಗರ ಎರಡು ಆಯಿತು. ಅಷ್ಟರಲ್ಲಿ ಆ ಕಡೆಯಿಂದ ಎರಡು ಮೂರು ಬಾರಿ ಹಲೊ ಅನ್ನುವ ಧ್ವನಿ ಕೇಳಿಸಿದ್ದರಿಂದ ಧೈರ್ಯ ತಂದುಕೊಂಡು ಹಲೋ ನಾನು ಸುಧಾ ಮಾತಾಡ್ತಿರೋದು ಎಂದಳು. ಆಗ ರಾಜೇಶನಿಗೆ ಆಶ್ಚರ್ಯ, ಸಂತೋಷ ಎರಡು ಒಟ್ಟಿಗೆ ಆದವು. ಹೇಳಿ ಸುಧಾವರೇ ಏನು ಫೋನು ಮಾಡಿದ್ದು ಅಂದಾಗ ರಾಜೇಶರವರೇ ನಾನು ನಿಮ್ಮ ಜೊತೆ ಮಾತಾಡಬೇಕಾಗಿತ್ತು ಅದು ಫೋನಿನಲ್ಲಿ ಬೇಡಾ ನೀವು ನಾಳೆ ಸಾಯಂಕಾಲ ೫ ಗಂಟೆಗೆ ಪಾರ್ಕಿಗೆ ಬಂದರೆ ಎಂದಳು. ಆಗಲಿ ನಾಳೆ ನಾನು ಬರುತ್ತೇನೆ ಎಂದು ರಾಜೇಶ ಹೇಳೀದಾಗ ಸರಿ ಹಾಗಾದರೆ ಫೋನ ಇಡುತ್ತೇನೆ ಎನ್ನುತ್ತಾ ಫೋನ ಇಟ್ಟು ಹೊರಗೆ ಬಂದಳು. ಸುಧಾ ಮನೆಗೆ ಬಂದಾಗ ಕಾವೇರಮ್ಮ ಏನೇ ಇಷ್ಟೊತ್ತು ಎಲ್ಲಿಗೆ ಹೋಗಿದ್ದಿ ಎಂದು ಗದರಿದಳು. ರೇಖಾಳ ಮನೆಗೆ ಹೋಗಿದ್ದೆ ಅಮ್ಮ. ಸರಿ ಸರಿ ಹೋಗಿ ತಿಂಡಿ ತಿಂದು ಬಟ್ಟೆ ತೊಳೆಯೋಗು ಎಂದಳು. ತಿಂಡಿ ರೇಖಾಳ ಮನೆಯಲ್ಲಿ ಮುಗಿತಮ್ಮಾ ಈಗೇನು ಬೇಡಾ ಬಟ್ಟೆ ತೋಳೆತೀನಿ ಎನ್ನುತ್ತಾ ಬಚ್ಚಲು ಮನೆಗೆ ಹೋದಳು. ಬಟ್ಟೆ ಒಗೆಯುತ್ತಿದ್ದರು. ಅವಳ ಮನಸ್ಸು ಮಾತ್ರ ನಾಳೆ ತಾನು ರಾಜೇಶನ ಜೊತೆ ಹೇಗೆ ಮಾತಾಡೋದು? ನಾನು ಹೇಳಿದ್ದಕ್ಕೆ ಅವರು ಒಪ್ಪಿಕೊಳ್ಳುತ್ತಾರೊ ಇಲ್ವೊ ಎಂದು ಚಿಂತಿಸುತ್ತಿತು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಚಂದ್ರು ಅಕ್ಕಾ ಏನೊ ಯೋಚಿಸ್ತಾ ಇದ್ದದನ್ನು ಗಮನಿಸಿ ಏನಕ್ಕಾ ಆಗಲೇ ಹಗಲುಗನಸು ಕಾಣ್ತಾ ಇದಿಯಾ ಎಂದು ರೇಗಿಸಿದ ಏನೊ ತರಲೆ ನಿನ್ನದೊಂದು ಕಾಟಾ ನನಗೆ ಎಂದಳು ಸುಧಾ.

****

(ಮುಂದುವರೆಯುವುದು)

     

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x