ಸ್ನೇಹ ಭಾಂದವ್ಯ (ಭಾಗ 11): ನಾಗರತ್ನಾ ಗೋವಿಂದನ್ನವರ

 

 

 

 

 

 

ಇಲ್ಲಿಯವರೆಗೆ

ಪತ್ರ ಓದಿದ ಸುಧಾಳಿಗೆ ತುಂಬಾ ಸಂತೋಷವಾಯಿತು. ಅವಳು ಕಲಾಕೃತಿಯನ್ನು ಕೈಗೆ ತಗೊಂಡು ನೋಡಿದಳು. ಆಗ ಚಂದ್ರು ಏನಕ್ಕಾ ನೀನು ಎಷ್ಟೊಂದು ಒಳ್ಳೆ ಉಡುಗೊರೆಗಳು ಬಂದಿವೆ ಅದು ಬಿಟ್ಟು ನೀನು ಕಡಿಮೆ ಬೆಲೆಯ ಆ ಕಲಾಕೃತಿಯನ್ನು ಹಿಡಿದಿದೆಯಲ್ಲ ಎಂದ. ಚಂದ್ರು ಹಾಗೆಲ್ಲ ಅನಬಾರದು. ಉಡುಗೊರೆಗಳಿಗೆಲ್ಲಾ ಹಾಗೆಲ್ಲ ಬೆಲೆ ಕಟ್ಟಬಾರದು. ಇಷ್ಟೆಲ್ಲಾ ಉಡುಗೊರೆಗಳಲ್ಲಿ ಈ ಉಡುಗೊರೆ ತುಂಬಾ ಅಮೂಲ್ಯವಾದದ್ದು ಗೊತ್ತಾ ಇದರಲ್ಲಿ ತಾಯಿ ಮಗುವಿನ ಬಂಧ ಎಂತದು ಅನ್ನೊದು ಗೊತ್ತಾಗತ್ತೆ. ಎಂದು ಅವಳು ರೇಖಾಳಿಗೆ ಅಭಿನಂದನೆ ತಿಳಿಸಿ ಪತ್ರ ಬರೆದಳು. ಚಂದ್ರು ಪೋಸ್ಟ ಮಾಡಲು ಹೋದ. ಈ ಸಮಯದಲ್ಲಿ ಪುರಾಣ, ಪುಣ್ಯಕಥೆಗಳನ್ನೆಲ್ಲ ಕೇಳಬೇಕು ಅಂದರೆ ಮನಸ್ಸು ಸಮಾಧಾನವಾಗಿರತ್ತೆ ಎಂದು ಕಾವೇರಮ್ಮ ಮಗಳನ್ನು ಪ್ರವಚನ, ಪುರಾಣ ಕೇಳಲು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ದಿನಗಳು ಉರುಳುತ್ತಿದ್ದವು. ರೇಖಾ ಸುಧಾಳಿಂದ ಬಂದ ಪತ್ರ ಓದಿದಳು. ಅವಳಿಗೆ ಸಂತೋಷವಾಯಿತು. ಹೀಗೆ ಗೆಳತಿಯರಿಬ್ಬರು ಒಬ್ಬರಿಗೊಬ್ಬರು ಪತ್ರ ಬರೆದು ಕ್ಷೇಮ -ಸಮಾಚಾರ ವಿಚಾರಿಸುತ್ತಿದ್ದರು.

ಒಂದು ದಿನ ಸುಧಾ ಚಂದ್ರುವಿಗೆ ರಾಜೇಶನಿಗೆ ತನ್ನ ಸೂಟಕೇಸಲ್ಲಿ ಒಂದು ಪೇಟಿಂಗ್ ಚಿತ್ರ ಇದೆ ಅದನ್ನು ಕೊಡು ಅಂತ ಹೇಳು ಎಂದು ಚಂದ್ರುವನ್ನು ತನ್ನ ಗಂಡನ ಮನೆಗೆ ಕಳಿಸಿದಳು. ಚಂದ್ರು ಹೋಗಿ ಅಕ್ಕಾ ಹೇಳಿದ್ದನ್ನು ಹೇಳಿದ. ರಾಜೇಶ ಅವಳ ಸೂಟಕೇಸನಲ್ಲಿ ಹುಡುಕಿದ. ಎರಡು ಹಕ್ಕಿಗಳ ಚಿತ್ರದ ಪೇಟಿಂಗ್ ಸಿಕ್ಕಿತು. ಅದನ್ನು ಕೊಟ್ಟ. ಥ್ಯಾಂಕ್ಸ್ ಭಾವಾ ಎಂದು ನಿಲ್ಲದೆ ಓಡಿ ಬಂದು ಸುಧಾಳಿಗೆ ಕೊಟ್ಟ. ಸುಧಾ ಆ ಚಿತ್ರವನ್ನು ನೋಡಿದಳು. ಅನಂತರ ಆ ತಾಯಿ ಮಗುವಿನ ಕಲಾಕೃತಿಯನ್ನೊಮ್ಮೆ ನೋಡಿದಳು. ಅವೆರಡನ್ನು ತನ್ನ ಮಂಚದ ಬದಿಯಿದ್ದ ಮೇಜಿನ ಮೇಲಿಟ್ಟಳು. ಚಂದ್ರುವಿನ ಪರೀಕ್ಷೆ ಮುಗಿದು  ಹಾಯಾಗಿ ಸುಧಾಳೊಂದಿಗೆ ಹರಟುತ್ತ ಕಾಲಕಳೆಯುತ್ತಿದ್ದ. ಒಂದು ದಿನಾ ಸುಧಾಳಿಗೆ ಇದ್ದಕಿದ್ದಂತೆ ಹೊಟ್ಟೆ ನೋವು ಶುರುವಾಯಿತು. ಆಗ ಕಾವೇರಮ್ಮ ಹೆರಿಗೆ ನೋವು ಶುರು ಆಗಿದೆಯಂತೆ ಕಾಣುತ್ತದೆ ಎಂದುಕೊಂಡು ಚಂದ್ರು ನೀನು ಬೇಗ ಹೋಗಿ ಆಟೊ ತಗೊಂಡು ಬಾರಪ್ಪಾ ಸುಧಾನ ಆಸ್ಪತ್ರೆಗೆ ಕರಕೊಂಡು ಹೋಗಬೇಕು ಅಂದಳು.

ಸರಿಯಮ್ಮ ಎಂದವನೆ ಆಟೊ ತರಲು ಹೋದ. ಅವನು ಆಟೊ ತರುವುದರೊಳಗಾಗಿ ಕಾವೇರಮ್ಮ ಸುಧಾಳನ್ನು ಮನೆಯ ಹೊರಗೆ ಕರಕೊಂಡು ಬಂದಿದ್ದಳು. ಮನೆಗೆ ಬೀಗ ಹಾಕಿ ಸುಧಾಳನ್ನು ಹಿಡಿದುಕೊಂಡು ಆಟೊ ಹತ್ತಿದಳು. ಚಂದ್ರುನು ಹತ್ತಿದ. ಆಟೊ ಅಸ್ಪತ್ರೆಗೆ ಬಂದಿತು. ಆಗ ಕಾವೇರಮ್ಮನಿಗೆ ಗಾಬರಿಯಿಂದ ಕೈಕಾಲುಗಳೇ ಆಡಂದಂತಾಯಿತು. ಚಂದ್ರುನೆ ಅಮ್ಮ ಆಸ್ಪತ್ರೆ ಬಂದಿದೆ ಇಳಿಯಮ್ಮ ಅಂದಾಗ ಇಳಿದಳು. ಅವರು ಸುಧಾಳನ್ನು ಆಸ್ಪತ್ರೆಯ ಒಳಗೆ ಕರೆದುಕೊಂಡು ಬರಲು ತುಂಬಾ ಕಷ್ಟಪಡಬೇಕಾಯಿತು. ಸುಧಾಳಿಗೆ ಹೊಟ್ಟೆನೋವಿನಿಂದ ನಡೆಯಲು ಆಗುತ್ತಿರಲಿಲ್ಲ.

ಡಾಕ್ಟರ ನೋಡಿದವರೆ ಈ ಪೇಷಂಟನ್ನು ಎಮರ್ಜೆನ್ಸಿ ವಾರ್ಡಗೆ ಶಿಫ್ಟ ಮಾಡಿ ಎಂದರು. ಡಾಕ್ಟರ್ ಅವಳನ್ನು ಪರೀಕ್ಷಿಸಿ ನಾರ್ಮಲ ಡೆಲಿವರಿ ಸಾಧ್ಯತೆಯಿಲ್ಲ ಅಂದಾಗ ಅನಿವಾರ್ಯವಾಗಿ ಆಪರೇಷನ ಮಾಡಲೆಬೇಕು ಎಂದು ತೀರ್ಮಾನಿಸಿದರು. ಅವರು ಹೊರಗೆ ಬಂದು ಅವರ ಗಂಡ ಎಲ್ಲಿದ್ದಾರೆ ಎಂದು ಕಾವೇರಮ್ಮನನ್ನು ಕೇಳಿದರು. ಅದಕ್ಕೆ ಕಾವೇರಮ್ಮ ಅಳಿಯಂದ್ರು ಇಷ್ಟೊತ್ತಿಗೆ ಬ್ಯಾಂಕಿನಲ್ಲಿರ್‍ತಾರಮ್ಮ ಎಂದಳು. ಸರಿ ಹಾಗಾದರೆ ಅವರಿಗೆ ಫೋನ ಮಾಡಿ ಆದಷ್ಟು ಬೇಗ ಕರೆಸಿ ಎಂದಳು. ಅದರಂತೆ ಕಾವೇರಮ್ಮ ಫೋನ ಮಾಡಲು ಹೊರಟರು. ಅಮ್ಮಾ ನೀನು ಇಲ್ಲೆ ಇರಮ್ಮ ನಾನೆಲ್ಲ ಫೋನ ಮಾಡಿ ಬರುತ್ತೇನೆ ಎಂದು ಚಂದ್ರು ಫೋನ ಮಾಡಲು ಹೋದ. ಅತ್ತ ಹಲೋ ಎಂಬ ರಾಜೇಶನ ಧ್ವನಿ ಕೇಳುತ್ತಲೆ ಚಂದ್ರು ಹಲೋ ಭಾವಾ ಅಕ್ಕನ್ನ ಆಸ್ಪತ್ರೆಗೆ ಸೇರಿಸಿದ್ದೀವಿ ನೀವು ಬೇಗ ಬರಬೇಕಂತೆ ಎಂದು ಒಂದೇ ಉಸುರಿಗೆ ಹೇಳಿ ಪೋನ ಇಟ್ಟ. ರಾಜೇಶ ಗಾಬರಿಯಿಂದ ಬ್ಯಾಂಕಿಗೆ ರಜೆ ಹಾಕಿ ಆಸ್ಪತ್ರೆಗೆ ಬಂದ ಅಷ್ಟರಲ್ಲಿ ಚಂದ್ರು ವೆಂಕಟಗಿರಿಗೆ ಫೋನ ಮಾಡಿ ವಿಷಯವನ್ನು ತಿಳಿಸಿದ್ದ. ರಾಜೇಶ ಆಸ್ಪತ್ರೆಗೆ ಬಂದಾಗ ಕಾವೇರಮ್ಮ ಚಡಪಡಿಸುತ್ತ ಅತ್ತಿಂದಿತ್ತ ಓಡಾಡುತ್ತಿದ್ದವರು ರಾಜೇಶನನ್ನ ನೋಡಿ ಅಳಿಯಂದ್ರೆ ಡಾಕ್ಟರು ನಿಮ್ಮನ್ನು ಕೇಳ್ತಿದ್ದಾರೆ ಎಂದಳು. ಆಗ ಡಾಕ್ಟರ ಬಂದವರೆ ಸಿಸ್ಟರಗಳಿಗೆ ಆಪರೇಷನ್‌ಗೆ ರೇಡಿ ಮಾಡಿ ಎಂದು ಹೇಳಿ ನೀವು ಇಲ್ಲಿ ಒಂದು ಸಹಿ ಮಾಡಿ ಎಂದು ಒಂದು ಹಾಳೆಯ ಮೇಲೆ ರಾಜೇಶನ ಸಹಿ ಮಾಡಿಸಿಕೊಂಡರು. ರಾಜೇಶ ಮನೆಗೆ ವಿಷಯ ತಿಳಿಸಿದ. ಆಗ ರಮಾನಂದ ಮತ್ತು ಪದ್ಮಮ್ಮ ಇಬ್ಬರು ಆಸ್ಪತ್ರೆಗೆ ಬಂದರು.

ಸುಧಾಳನ್ನು ಆಪರೇಷನ್ ಥೇಟರ್ ಒಳಗೆ ಒಯ್ದರು. ಒಳಗೆ ಆಪರೇಷನ್ ನಡೆಯುತ್ತಿತ್ತು. ಹೊರಗೆ ಕಾವೇರಮ್ಮನಿಗೆ ದುಃಖದಿಂದ ಆಳಲು ಶುರು ಮಾಡಿದರು. ಆಗ ವೆಂಕಟಗಿರಿ ಸಮಾಧಾನ ಹೇಳುತ್ತಿದ್ದನಾದರು ಎಲ್ಲರ ಮುಖದಲ್ಲಿ ದುಃಖದ ಛಾಯೆ ಇತ್ತು. ಆಪರೇಷನ್ ಮುಗಿದ ಮೇಲೆ ಲೇಡಿ ಡಾಕ್ಟರ್ ರಜನಿ ಹೊರಗೆ ಬಂದರು. ಅದಕ್ಕವರು ದಯವಿಟ್ಟು ಕ್ಷಮಿಸಿ ತಾಯಿನ ಉಳಿಸಿಕೊಳ್ಳಲಾಗಲಿಲ್ಲ ಮಗು ಮಾತ್ರ ಬದುಕಿದೆ ಎಂದು ಹೇಳಿ ಹೋದರು. ಕಾವೇರಮ್ಮ ಕುಸಿದು ಕುಳಿತರು. ಆಕೆಯ ಮನಸ್ಸಿಗೆ ದೊಡ್ಡ ಆಘಾತವಾಗಿತ್ತು. ರಾಜೇಶನಿಂದ ಹಿಡಿದು ಎಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು. ಯಾರಿಗೂ ಮಗುವನ್ನು ನೋಡಬೇಕೆನಿಸಿರಲಿಲ್ಲ. ಸಿಸ್ಟರ್ ಬಂದು ಎಚ್ಚರಿಸಿದಾಗಲೆ ಇವರಿಗೆ ವಾಸ್ತವದ ಅರಿವಾಗಿದ್ದು ಅದಾಗಲೆ ಸಿಸ್ಟರ್ ಮಗುವನ್ನು ರಾಜೇಶನಿಗೆ ಕೊಡಲು ಹೋದಳು ಆದರೆ ಅವನು ನನಗೀ ಮಗು ಬೇಡಾ ನನಗೆ ನನ್ನ ಸುಧಾ ಬೇಕು ಎನ್ನುತ್ತಾ ಅದೇ ತಾನೆ ಸುಧಾಳ ಶವವನ್ನು ಹೋರಗೆ ತಂದಿದ್ದರು ಅತ್ತ ಕಡೆ ಓಡಿದ. ಆಗ ನರ್ಸಳ ಕೈಯಲ್ಲಿದ್ದ ಸುಧಾಳ ಮಗುವನ್ನು ಕಾವೇರಮ್ಮ ಎತ್ತಿಕೊಂಡರು. ಅವರೆಲ್ಲರು ಸುಧಾಳ ಹೆಣದತ್ತ ಬಂದು ಅಳಲು ಶುರುಮಾಡಿದ್ದರು. ಯಾರೆಷ್ಟೆ ಅತ್ತರು ಸುಧಾ ಹಿಂತಿರುಗಿ ಬಾರದ ಲೋಕಕ್ಕೆ ಹೋಗಿದ್ದಳು. ಅವಳಿಗೆ ಸ್ವಾತಂತ್ರ್ಯ ಬೇಕಿತ್ತು ಆದರೆ ವಿಧಿ ಅವಳಿಗೆ ಈ ಸ್ವಾರ್ಥ ಪ್ರಪಂಚದಿಂದ ಶಾಶ್ವತವಾದ ಸ್ವಾತಂತ್ರ್ಯ ನೀಡಿತ್ತು.

ಸುಧಾಳಿಗೆ ಹೆಣ್ಣು ಮಗು ಹುಟ್ಟಿತ್ತು. ಅದು ಎಲ್ಲ ಸುಧಾಳ ಪಡಿಯಚ್ಚಿನಂತೆ ಇತ್ತು. ಕಾವೇರಮ್ಮನಿಗೆ ಆ ಮಗುವನ್ನು ನೋಡಿದಾಗ ತನ್ನ ಸುಧಾ ಮಗುವಿದ್ದಾಗ ಹೀಗೆ ಇರಲಿಲ್ಲವೆ ಎಂದೆನಿಸಿತು ಅವಳಿಗೆ ಅವಳು ಆ ಮಗುವನ್ನು ಸುಧಾ ಸುಧಾ ಎಂದು ತಬ್ಬಿಕೊಂಡು ಅತ್ತಳು. ಡಾಕ್ಟರ್ ರಜನಿ ಹೊರಗೆ ಬಂದು ನೊಂದ ಹೃದಯಗಳಿಗೆ ಸ್ವಾಂತನ ಹೇಳಿ ಹೆಣವನ್ನು ಅವರಿಗೆ ಒಪ್ಪಿಸಿದರು. ಆಗ ರಮಾನಂದನೆ ರಾಜೇಶನಿಗೆ ಮತ್ತು ವೆಂಕಟಗಿರಿಯವರಿಗೆ ಸಮಾಧಾನ ಹೇಳಿ ಮುಂದಾಗಬೇಕಿದ್ದ ಕಾರ್ಯದ ಕಡೆ ಗಮನ ಕೊಡಿ ಎಂದರು. ರಾಜೇಶ ಸುಧಾಳನ್ನು ನೋಡಿದ ಅವಳು ನೆಮ್ಮದಿಯಿಂದ ನಿದ್ರಿಸುತ್ತಿದ್ದಾಳೆ ಎಂದೆನಿಸಿತು ಅವನಿಗೆ. ಅವಳ ಮುಖದಲ್ಲಿ ಪ್ರಶಾಂತತೆ ಇತ್ತು. ಚಂದ್ರುವಿಗೆ ದುಃಖ ಒತ್ತರಿಸಿ ಬರುತ್ತಿತ್ತು. ಅಕ್ಕಾ ನನ್ನನ್ಯಾಕಕ್ಕಾ ಬಿಟ್ಟು ಹೋದಿ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆಮೇಲೆ ರಮಾನಂದರ ಒತ್ತಾಯದ ಮೇರೆಗೆ ಸುಧಾಳ ಹೆಣವನ್ನು ಸ್ಮಶಾನಕ್ಕೆ ಒಯ್ಯಲಾಯಿತು. ಅವಳ ಹೆಣವನ್ನು ಚಿತೆಗೆರಿಸಿ ರಾಜೇಶನೆ ಬೆಂಕಿ ಹಚ್ಚಿದ. ಎಲ್ಲರೂ ಹಿಂತಿರುಗಿ ಮನೆಗೆ ಬಂದರು. ಸುಧಾ ಸತ್ತು ಎರಡು ದಿನವಾದರು ಕಾವೇರಮ್ಮ ಅನ್ನ ನೀರು ಮುಟ್ಟಿರಲಿಲ್ಲ. ಅವಳಿಗೊಂದು ರೀತಿಯ ಮಂಕು ಬಡಿದಿತ್ತು. ವಿಷಯ ತಿಳಿದ ರೇಖಾಳ ತಂದೆ-ತಾಯಿಯವರು ಕಾವೇರಮ್ಮ ಮತ್ತು ವೆಂಕಟಗಿರಿಯವರಿಗೆ ಸಮಾಧಾನ ಹೇಳಿದರು. ನೀವು ಹೀಗೆ ಅನ್ನ ನೀರು ಬಿಟ್ಟು ಕೂತರೆ ಸುಧಾ ಹಿಂತಿರುಗಿ ಬರಲು ಸಾಧ್ಯವೆ. ಆದದ್ದು ಆಯಿತು. ಅವಳಿಗೆ ಈ ಪ್ರಪಂಚದ ಋಣಾ ಇಷ್ಟೆ ಇತ್ತೂಂತ ಕಾಣುತ್ತೆ. ಈಗ ಅವಳ ಪ್ರತಿರೂಪದಂತಿರುವ ಈ ಮಗೂನೆ ಸುಧಾ ಅನಕೊಳ್ಳಿ ಎಂದು ಹೇಳಿ ಕಾವೇರಮ್ಮನಿಗೆ ಬಲವಂತದಿಂದ ಊಟ ಮಾಡಿಸಿ ರಾಧಮ್ಮ ಹೊರಟು ಹೋದರು. ಇತ್ತ ಪದ್ಮಮ್ಮ ರಾಜೇಶನಿಗೆ ನಮ್ಮ ವಂಶದ ಕುಡಿಯದು ದಯವಿಟ್ಟು ಮಗೂನ ಕರೆದುಕೊಂದು ಬಾ ಎಂದಳು. ಇಲ್ಲಮ್ಮ ಆ ಮಗೂನಿಂದಾನೆ ನನ್ನ ಸುಧಾ ಸತ್ತಿರೋದು ಆ ಮಗೂನ ನಾನು ಕರಕೊಂಡು ಬರೋಲ್ಲ. ನೀವೆನಾದರೂ ಆ ಮಗೂನ ಕರಕೊಂಡು ಬಂದ್ರೆ ನಾನು ಮನೆ ಬಿಟ್ಟು ಹೋಗ್ತಿನಿ ಎಂದ ಆಗ ಪದ್ಮಮ್ಮ ಸುಮ್ಮನಾದಳು. ದಿನ ದಿನಕ್ಕೆ ಸುಧಾಳ ನೆನಪಿನಲ್ಲೆ ರಾಜೇಶ ಹುಚ್ಚನಂತಾದ ಯಾಂತ್ರಿಕವೆಂಬಂತೆ ಬ್ಯಾಂಕಿಗೆ ಹೋಗಿ ಬಂದವನೆ ತನ್ನ ರೂಮು ಸೇರುತ್ತಿದ್ದ.

ರೇಖಾ ಪರೀಕ್ಷೆ ಮುಗಿಸಿ ಊರಿಗೆ ಹೊರಡಲು ಬಸ್ ಹತ್ತಿದಳು. ಕಿಟಕಿಯ ಪಕ್ಕ ಕುಳಿತಳು. ಕಿಟಕಿಯ ಹೊರಗಡೆ ನೋಡುತ್ತಾ ಏನೊ ಯೋಚಿಸುತ್ತಿದ್ದವಳು ಎಲ್ಲಿಗಮ್ಮಾ ಎನ್ನುವ ಕಂಡಕ್ಟರ್ ಮಾತಿಗೆ ಕಂಡಕ್ಟರ್ ಕಡೆ ಹೊರಳಿ ಅಗಸವಳ್ಳಿ ಎಂದಳು. ಆದರೆ ಇಂದೆಕೊ ನನ್ನ ಮನಸ್ಸು ಶಾಂತವಾಗಿಲ್ಲ. ಏನೊ ಕಳವಳವೊ, ಸಂಕಟವೊ ಇಲ್ಲಾ ಬೀತಿಯೊ ಒಂದು ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿಯಿಲ್ಲ ಕಾರಣವು ಗೊತ್ತಾಗುತ್ತಿಲ್ಲ ಯಾಕೆ ಹೀಗನಿಸುತ್ತಿದೆ ನನಗೆ ಎಂದು ಯೋಚಿಸುತ್ತಿದ್ದವಳಿಗೆ ಉತ್ತರ ದೊರೆತದ್ದು ಅವಳು ಊರು ತಲುಪಿ ಮನೆಗೆ ಬಂದ ಮೇಲೆಯೆ. ಬಂದವಳು ಸುಧಾ ಇಲ್ಲ ಅನ್ನುವ ಸುದ್ಧಿ ಕೇಳುತ್ತಲೆ ಅವಳಿಗೆ ಆಘಾತವಾಯಿತು. ಏನಮ್ಮ ನೀನು ನನಗೆ ಈ ವಿಷಯ ಮೊದಲೆ ತಿಳಿಸಬಾರದಾಗಿತ್ತಾ ಎಂದಳು. ತಿಳಿಸಿದ್ದರೆ ನೀನು ಪರೀಕ್ಷೆ ಬರಿಯದೆ ಹಾಗೆ ಬರುತ್ತಿದೆ ಎಂದು ತಿಳಿಸಲಿಲ್ಲ ಎಂದಳು. ಛೀ ಹೋಗಮ್ಮಾ ಅನ್ಯಾಯವಾಗಿ ಕೊನೆಗಾಲದಲ್ಲಿ ನನ್ನ ಆತ್ಮೀಯ ಗೆಳತಿಯ ಮುಖ ನೋಡದ ಹಾಗೆ ಮಾಡಿಬಿಟ್ಟಿರಿ ಎನ್ನುತ್ತ ದುಃಖ ಪಟ್ಟಳು. ಅವಳು ಬಿಕ್ಕಿ ಬಿಕ್ಕಿ ಅತ್ತಳು. ಅವಳು ಅಳುವುದನ್ನು ನೋಡುತ್ತಿರುವ ರಾಧಮ್ಮನಿಗೆ ಎನೊ ಸಂಕಟವಾಯಿತು ಅಯ್ಯೋ ತಾನು ತಪ್ಪು ಮಾಡಿಬಿಟ್ಟೆನೆ ಚಿಕ್ಕಂದಿನಿಂದ ಕೂಡಿ ಆಡಿ ಬೆಳೆದ ಗೆಳತಿಯರು ಇವರಿಬ್ಬರು. ಸ್ವಂತ ಒಡಹುಟ್ಟಿದ ಅಕ್ಕ-ತಂಗಿಯರಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಇದ್ದವರು ಈಗ ಅವಳ ಗೆಳತಿಯ ಜೀವದ ಕೊನೆಯ ಕ್ಷಣಗಳಲ್ಲಿ ಇವಳು ಹತ್ತಿರ ಇಲ್ಲದ ಹಾಗೆ ಮಾಡಿಬಿಟ್ಟೆ ಎಂತಹ ತಪ್ಪು ಮಾಡಿದೆ. ಆದರೂ ಇವಳ ಭವಿಷ್ಯಕ್ಕಾಗಿ ಇದು ಅನಿವಾರ್ಯವಾಗಿತ್ತು ಇಲ್ಲದೆ ಹೋಗಿದ್ದರೆ ಇವಳು ಪರೀಕ್ಷೆ ಬರಿಯದೆ ಮಧ್ಯದಲ್ಲಿ ಬಂದು ಅನ್ಯಾಯವಾಗಿ ಒಂದು ವರ್ಷ ಹಾಳಾಗುತ್ತಿತ್ತು ಇರಲಿ ತಾನು ಮಾಡಿದ್ದು ಅವಳ ಒಳ್ಳೆಯದಕ್ಕೆ ಎಂದು ಯೋಚಿಸಿ ಸುಮ್ಮನಾಗಿ ಅವಳನ್ನು ಸ್ವಲ್ಪ ಹೊತ್ತು ಒಂಟಿಯಾಗಿ ಬಿಟ್ಟರೆ ಎಲ್ಲ ಸರಿಹೊಗುತ್ತುದೆ. ದುಃಖ ಕಡಿಮೆ ಆದ ಮೇಲೆ ಮತ್ತೆ ಮಾತಾಡಿದರಾಯಿತು ಎಂದು ಅಲ್ಲಿಂದ ಹೋದಳು.  ಅವಳು ಸುಧಾಳ ತಾಯಿ ಮನೆಗೆ ಬಂದಳು. ಅವಳು ಬಂದಾಗ ಕಾವೇರಮ್ಮ ಮಗೂನ ಆಡಿಸುತ್ತ ಕುಳಿತ್ತಿದ್ದವಳು ರೇಖಾಳನ್ನು ನೋಡಿ ಅಳಲು ಶುರು  ಮಾಡಿದರು. ರೇಖಾ ಹೇಗಾಯ್ತು ಆಂಟಿ ಎಂದಳು. ಕಾವೇರಮ್ಮ ನಡೆದುದೆಲ್ಲವನ್ನು ಹೆಳಿದರು. ರೇಖಾಳ ಕಣ್ಣಂಚಿನಲ್ಲಿ ನೀರು ಬಂದರು ತೋರಿಸದೆ ಅವಳು ಕಾವೇರಮ್ಮನಿಗೆ ಸಮಾಧಾನ ಹೇಳಿದಳು. ಆ ಮಗೂವನ್ನು ಎತ್ತಿಕೊಂಡಳು. ಅದು ಬಹಳ ಮುದ್ದಾಗಿತ್ತು. ಸುಧಾಳ ಪ್ರತಿರೂಪದಂತೆ ಸುಂದರವಾಗಿತ್ತು. ರೇಖಾ ಅದನ್ನೆತ್ತಿಕೊಂಡು ಮುದ್ದಾಡಿದಳು. ಸ್ವಲ್ಪ ಹೊತ್ತು ಅಲ್ಲಿದ್ದು ಮನೆಗೆ ಬಂದಳು. ಮರುದಿನ ಅವಳು ರಾಜೇಶನನ್ನು ಭೇಟಿಯಾಗಲು ಹೋದಳು.

*****

(ಮುಂದುವರೆಯುವುದು…)

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
sridhar
sridhar
10 years ago

Happy New Year… All the best keep going

Ratna G.
Ratna G.
10 years ago

Thank you. Wish u the same

Sunil
10 years ago

olle kathe mattu nijavada sambhashane

Chidananda
10 years ago

It’s nice but i read little bit & excellent keep witting  

5
0
Would love your thoughts, please comment.x
()
x