ಕಾದಂಬರಿ

ಸ್ನೇಹ ಭಾಂದವ್ಯ (ಭಾಗ 1): ನಾಗರತ್ನಾ ಗೋವಿಂದನ್ನವರ

     

     ಶಿವಮೊಗ್ಗ ಜಿಲ್ಲೆಯಲ್ಲಿರುವ ಅಗಸವಳ್ಳಿ ಇದೊಂದು ಪ್ರಕೃತಿಯ ಮಧ್ಯ ಇರುವ ಸುಂದರವಾದ ಹಳ್ಳಿ. ಈ ಹಳ್ಳಿಯಲ್ಲಿ ಮಧ್ಯಮ ಕುಟುಂಬದಲ್ಲಿ ಜನಿಸಿರುವ ಇಬ್ಬರು ಹುಡುಗಿಯರ ಕತೆ ಇದು. ಮೊಬೈಲ್ ಬಳಕೆ ಇನ್ನು ಆರಂಭವಾಗಿರದ ಸಮಯವದು.

     ಹಾಳಾದ ಕರೆಂಟು ಯಾವಾಗಂದ್ರೆ ಆವಾಗ ಕೈಕೊಟ್ಟು ಬಿಡುತ್ತದೆ ಎಂದು ಅಡುಗೆ ಮನೆಯಲ್ಲಿದ್ದ ರಾಧಮ್ಮ ಗೊಣಗುತ್ತಿದ್ದಳು. ಹಾಲಿನಲ್ಲಿ ಕುಳಿತಿದ್ದ ಶಿವಾನಂದನಿಗೆ ಇದು ಕಿರಿಕಿರಿ ಎನಿಸಿತು. ಏನೇ ನಿನ್ನದು ಬೇಗ ದೀಪಾ ಹಚ್ಚಬಾರದೇನೆ ಎಂದು ಹೆಂಡತಿಗೆ ಹೇಳಿದ. ಇರೀ ಅಂದ್ರೆ ಈಗ ಹಚ್ಚಿಬಿಡ್ತಿನಿ ಎನ್ನುತ್ತಾ ಕತ್ತಲೆಯಲ್ಲೆ ತಡಕಾಡಿ ಕಡ್ಡಿ ಪೆಟ್ಟಿಗೆಯನ್ನು ಗೀರಿ ಅಲ್ಲೆ ಇದ್ದ ಲ್ಯಾಂಪಿಗೆ ದೀಪಾ ಹಚ್ಚಿದಳು. ಮೇಣಬತ್ತಿಯೊಂದನ್ನು ಹಚ್ಚಿಕೊಂಡು ಶಿವಾನಂದ ಇದ್ದಲ್ಲಿಗೆ ಬಂದಳು. ಆ ಮಂದ ಬೆಳಕಿನಲ್ಲಿ ಹೆಂಡತಿಗೆ ಏನೊ ಹೇಳಬೇಕೆನ್ನುವಷ್ಟರಲ್ಲಿ ಕರೆಂಟು ಬಂದಿತು.

     ಹೋದ ಕಣ್ಣು ಈಗ ಬಂದಂಗಾಯ್ತುರಿ ಎಂದಳು ರಾಧಮ್ಮ. ಹೌದೆ ನಮಗೆ ಹಾಗನಿಸುವುದು ಸಹಜ. ಹಳೇ ಕಾಲದಲ್ಲಿ ಹಿಂದಿನ ಜನಕ್ಕೆ ಕರೆಂಟ್ ಅಂದ್ರೆ ಏನೂಂತ ಗೊತ್ತೇ ಇರಲಿಲ್ಲ. ಅವರೆಲ್ಲ ಚಿಮಣಿ ಬೆಳಕಿನಲ್ಲಿಯೆ ಕೆಲಸ ಮಾಡ್ತಿದ್ರು. ನಾವು ಇದೀವಿ ಕರೆಂಟು ಹೋದ್ರೆ ಅದು ಬರುವವರೆಗೂ ಚಡಪಡಿಸ್ತೀವಿ ಇಲ್ಲಾ ಕೆ.ಇ.ಬಿಯವರಿಗೆ ಬಯ್ಯತ್ತಿರುತ್ತೇವೆ. ರ್ರೀ ನಾನು ನಿಮಗೊಂದು ಮಾತು ಕೇಳಲೇನ್ರಿ. ಕೇಳೆ ಎಂದ ಶಿವಾನಂದ. ರೇಖಾ ಕಾಲೇಜಿಗೆ ಹೋಗುವುದು ನನಗೆ ಸ್ವಲ್ಪಾನು ಇಷ್ಟಾನೆ ಇಲ್ಲಾರಿ, ಇವಳೊಬ್ಬಳೇ ಮಗಳು ನಮಗೀರೊದು ಇವಳು ಓದಿ ಯಾರನ್ನು ಉದ್ದಾರ ಮಾಡಬೇಕಾಗಿದೆ ಆದಷ್ಟು ಬೇಗ ಸಾಲ ತೆಗೆದಾದರು ಇವಳಿಗೊಂದು ಮದುವೆ ಮಾಡಿ ಮುಗಿಸಿಬಿಡೋಣ ಎಂದಳು. ಆದರೆ ರೇಖಾಳ ತಂದೆಯಾದ ಶಿವಾನಂದ ಅದಕ್ಕೇನು ಅವಸರ ಈಗ ಮೊದಲು ಅವಳು ಚೆನ್ನಾಗಿ ಓದಿ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಲಿ ಈಗೇನಿದ್ರೂ ಉದ್ಯೋಗಂ ಸ್ತ್ರೀ-ಪುರುಷ ಲಕ್ಷಣಂ ಅಂತಾಗಿದೆ. ಹಿಂದಿನ ಕಾಲದಲ್ಲಾಗಿದ್ದರೆ ಉದ್ಯೋಗ ಪುರುಷರಿಗೆ ಮಾತ್ರ ಸೀಮಿತವಾಗಿತ್ತು ಅಂತ ಹೇಳುತ್ತಾ ಹೆಂಡತಿಯ ಬಾಯಿ ಮುಚ್ಚಿಸಿದ.

     ಮಾತೆತ್ತಿದರೆ ಸಾಕು ಹಿಂದಿನ ಕಾಲ ಹಿಂದಿನ ಜನ ಅಂತಿರ್ತಾರೆ ಎಂದು ಮನಸಿನಲ್ಲಿಯೇ ಬ್ಯೆದುಕೊಂಡಳು. ರೇಖಾಳಿಗೂ ಅಷ್ಟೆ ತಾನು ಓದಿ ಮುಂದೆ ಬಂದು ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ಇತ್ತು. ರೇಖಾ ಹ್ಯೆಸ್ಕೂಲಿಗೆ ಮೊದಲಿಗಳಾಗಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಳು. ಅವಳ ಗೆಳತಿಯಾದ ಸುಧಾ ಕೂಡ ಪ್ರಥಮ ದರ್ಜೆಯಲ್ಲಿ ಪಾಸಾಗಿ ಹೈಸ್ಕೂಲಿಗೆ ದ್ವೀತಿಯಳಾಗಿದ್ದಳು. ಸುಧಾಳ ತಂದೆ ವೆಂಕಟಗಿರಿ ತಾಯಿ ಕಾವೇರಮ್ಮ ಇಬ್ಬರು ಸುಧಾಳಿಗೆ ಗಂಡು ನೋಡುವ ಅವಸರದಲ್ಲಿದ್ದರು. ಆದರೆ ಸುಧಾಳಿಗೆ ಅಷ್ಟು ಬೇಗ ಮದುವೆ ಬೇಕಾಗಿರಲಿಲ್ಲ. ಅವಳು ತಾನು ಮುಂದೆ ಓದುವುದಾಗಿ ಹಠ ಹಿಡಿದಳು. ಅವಳ ತಮ್ಮ ಚಂದ್ರು ಆರನೆ ತರಗತಿಗೆ ಹೋಗುತ್ತಿದ್ದ ನಾವು ಎಲ್ಲಾ ದುಡ್ಡನ್ನು ನಿನಗೆ ಖರ್ಚು ಮಾಡ್ತಾ ಹೋದರೆ ಮುಂದೆ ಚಂದ್ರನ ಹೇಗೆ ಓದಿಸೋದು ಎಂದು ವೆಂಕಟಗಿರಿ ಅಂದಾಗ ಸುಧಾ ನನಗೆ ಅತಿ ಹೆಚ್ಚಿನ ಅಂಕ ಸಿಕ್ಕು ಪಾಸಾಗಿದ್ದರಿಂದ ಸ್ಕಾಲರಶಿಪ್ ಸಿಗುತ್ತದೆ ಅನ್ನುವ ನಂಬಿಕೆ ನನಗಿದೆಯಪ್ಪಾ ಅದರಲ್ಲಿ ಓದುತ್ತೇನೆ ಅಂದಾಗ ವೆಂಕಟಗಿರಿ ಒಪ್ಪಲೇಬೇಕಾಯಿತು. ಇಲ್ಲದಿದ್ದರೆ ಆತ ಖಂಡಿತಾ ಒಪ್ಪುತ್ತಿರಲಿಲ್ಲ. ಏಕೆಂದರೆ ಆತ ಒಂದು ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿದ್ದ. ಆ ಫ್ಯಾಕ್ಟರಿಯೇನು ಅಷ್ಟೊಂದು ಪ್ರಗತಿ ಹೊಂದಿರಲಿಲ್ಲ. ಹೀಗಾಗಿ ಅಲ್ಲಿಯ ಕೆಲಸಗಾರರಿಗೂ ದೊರಕುವ ಸಂಬಳ ಕಡಿಮೆಯೇ ಇರುತ್ತಿತ್ತು.

     ರೇಖಾಳ ತಂದೆಯಾದ ಶಿವಾನಂದನು ಕೂಡಾ ಬೇರೊಂದು ಫ್ಯಾಕ್ಟರಿಯಲ್ಲಿ ಗುಮಾಸ್ತನಾಗಿದ್ದ, ಮಕ್ಕಳ ಮೂಲಕ ಪರಿಚಿತರಾದ ಶಿವಾನಂದ ಮತ್ತು ವೆಂಕಟಗಿರಿ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ತಮ್ಮ ತಮ್ಮ ಫ್ಯಾಕ್ಟರಿಯಲ್ಲಿಯ ಕಷ್ಟ-ಸುಖಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದರು. ರೇಖಾ – ಸುಧಾ ಕುಡಾ ಅಷ್ಟೆ ಆತ್ಮೀಯ ಗೇಳತಿಯರಾಗಿದ್ದರು. ರಜಾ ದಿನಗಳು ಕಳೆದು ಕಾಲೇಜಿನಲ್ಲಿ ಅಡ್ಮೀಷನ್ ಶುರು ಆಗಿತ್ತು. ಆಗ ಈಗಾಗಲೇ ಏನನ್ನೋ ಸಾಧಿಸಿದಷ್ಟು ಸಂತೋಷ ಗೆಳತಿಯರಿಬ್ಬರ ಮುಖದಲ್ಲಿ ಕಾಣುತ್ತಿತ್ತು.

     ಸುಧಾ ನೀನು ಕಾಲೇಜಕ್ಕೆ ಹಚ್ಚುತ್ತಿಯಾ ತಾನೆ ನೀನಿಲ್ಲದಿದ್ದರೆ ನಾನು ಕಲಿಯೋದಿಲ್ಲ ಎಂದು ರೇಖಾ ಹೇಳಿದಾಗ ಸುಧಾ ನಕ್ಕು ಹಾಗಾದರೆ ನಾನು ಬಿಟ್ಟರೆ ನೀನು ಬಿಟ್ಟುಬಿಡ್ತಿಯಾ ಎಂದು ಕೇಳಿದಳು. ಬಿಡೊದೇನು ಬಂತು ನೀನು ಕೇಳಿದರೆ ಪ್ರಾಣಾನು ಕೊಟ್ಟುಬಿಡ್ತೀನಿ ಎಂದು ನಕ್ಕಳು. ಸುಧಾ ಕೋಪದಿಂದ ಥೂ ಬಿಡ್ತು ಅನ್ನು ಅಂತ ಮಾತಾಡಬೇಡ. ಇಬ್ಬರೂ ಕಾಲೇಜಿಗೆ ಹಚ್ತಾ ಇದ್ದೀವಿ ತಿಳಿತಾ ಎಂದಳು ಆದರೆ ರೇಖಾ ನಮ್ಮಿಬ್ಬರದು ಮಧ್ಯಮ ವರ್ಗದ ಕುಟುಂಬ. ನಾವಿಬ್ಬರೂ ಎಲ್.ಎಲ್.ಬಿ. ನೇ ಓದಿ ಲಾಯರಾಗಬೇಕಂತ ಇದ್ದೀವಿ ಅದಕ್ಕೆಲ್ಲಾ ತುಂಬಾ ದುಡ್ಡು ಬೇಕಾಗುತ್ತದೆ ಅದು ಅಲ್ಲದೆ ನಾವು ಹಳ್ಳಿ ಬಿಟ್ಟು ಸಿಟಿಗೆ ಹೋಗಿ ಹಾಸ್ಟೆಲ್ ನಲ್ಲಿದ್ದು ಕಲಿಯಬೇಕಾಗುತ್ತದೆ. ಏನೂ ಮಾಡೋದಂತ ತಿಳಿತಿಲ್ಲಾ ಅದಕ್ಕೆ ರೇಖಾ ಇಷ್ಡು ಬೇಗ ಅದರ ಯೋಚನೆ ಯಾಕ ಮಾಡೋದು ಮೊದಲು ಪಿ.ಯು.ಸಿ ಮುಗಿಬೇಕಲ್ಲ. ಆಮೇಲೆ ಮುಂದಿನ ಚಿಂತೆ. ನಮಗಿಬ್ಬರಿಗೂ ಸ್ಕಾಲರಶಿಪ್ನ ಹಣ ಸಿಕ್ಕೇ ಸಿಗುತ್ತದೆ ಅನ್ನುವ ಭರವಸೆ ಇದ್ದೇ ಇದೆ. ಜೊತೆಗೆ ಮನೆಯವರು ಸ್ಷಲ್ಪ ಹಣ ಕೊಟ್ಟೇ ಕೊಡ್ತಾರೆ ಎಂದೆಲ್ಲ ಹೇಳಿದರು ಸುಧಾಳ ಮನಸ್ಸು ಮಾತ್ರ ಚಿಂತಿಸುತ್ತಲೇ ಇತ್ತು. ಗೆಳತಿಯ ಚಿಂತೆಯ ಮುಖ ನೋಡಿ ರೇಖಾಳಿಗೆ ಅಯ್ಯೋ ಅನಿಸಿತು ಅದಕ್ಕವಳು ಗೆಳತಿಯ ಚಿಂತೆಯನ್ನು ಸ್ಷಲ್ಪ ಕಡಿಮೆ ಮಾಡಬೇಕೆಂದು ಅವಳಿಗೆ ಒಂದು ಉಪಾಯ ಹೇಳಿದಳು. ನಾವಿಬ್ಬರೂ ಹಾಸ್ಟೆಲ್ ನಲ್ಲಿರುವುದು ಬೇಡಾ. ಒಂದು ರೂಮು ಮಾಡೋಣ  ಇದರಿಂದ ಖರ್ಚು ಕಡಿಮೆಯಾಗುತ್ತದೆ. ರೇಖಾಳ ಮಾತು ಸುಧಾಳಿಗೆ ಸರಿಕಂಡಿತು. ಸರಿ ಹಾಗೆ ಮಾಡೋಣ. ಈಗ ಬಹಳ ಹೊತ್ತಾಯಿತು ಮನೆಯಲ್ಲಿ ಅಮ್ಮ ಇಷ್ಟೊತ್ತಾದರೂ ಬಂದಿಲ್ಲವಲ್ಲಾಂತ ಪೇಚಾಡ್ತಿರ್ತಾಳೆ ಈಗ ಬೇಗ ಮನೆಗೆ ಹೋಗೋಣ ಮತ್ತೆ ನಾಳೆ ಇದೇ ಮಾವಿನ ಮರದ ಹತ್ತೀರ ಭೇಟಿಯೋಗೋಣ ಎಂದು ಗೆಳತಿಯರಿಬ್ಬರು ಮನೆಯ ದಾರಿ ಹಿಡಿದರು. ಅವರಿಬ್ಬರು ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದವರು ತುಂಬಾ ಆತ್ಮೀಯ ಗೆಳತಿಯರಾಗಿದ್ದರು. ಅವರು ಚಿಕ್ಕಂದಿನಿಂದಲೂ ಪರಸ್ಪರ ಭೇಟಿಯಾಗುತ್ತಿದ್ದ ಸ್ಥಳ ಒಂದು ಮಾವಿನ ಮರದ ಕೆಳಗೆ. 

     ರೇಖಾ ಮನೆಗೆ ಬಂದಾಗ ರಾಧಮ್ಮ ದೇವರ ಮುಂದೆ ದೀಪಾ ಹಚ್ಚುತ್ತಿದ್ದವಳು ರೇಖಾಳನ್ನು ನೋಡಿ ಏನೇ ಇಷ್ಟೊತ್ತಾ ಮನೆಗೆ ಬರೋದು, ಸಾಯಂಕಾಲ ದೀಪಾ ಹಚ್ಚುವುದರೊಳಗಾಗಿ ಹೆಣ್ಣು ಮಕ್ಕಳು ಮನೆಯಲ್ಲಿರಬೇಕೂಂತ ತಿಳಿಯೋದಿಲ್ವಾ ನಿನಗೆ. ಇಲ್ಲಮ್ಮಾ ನಾನು ಬೇಗ ಬರೋಣ ಅಂತಿದ್ದೆ. ಆದರೆ ಸುಧಾಳ ಜೊತೆ ಮಾತಾಡ್ತಾ ಮಾತಾಡ್ತಾ ಹೊತ್ತು ಹೋಗಿದ್ದು ತಿಳಿಲಿಲ್ಲಾ. ಹೌದಮ್ಮಾ ಹೌದು. ನೀವು ಗೆಳತಿಯರಿಬ್ಬರು ಕೂಡಿಬಿಟ್ಟರೆ ಅಷ್ಟೆ ಪ್ರಪಂಚಾನೆ ಮರೆತಿರಾ ಎಂದು ನಗುತ್ತಾ ರಾಧಮ್ಮ ಮಗಳಿಗೆ ಕಾಫಿ ತರಲು ಒಳಗೆ ಹೋದರು. ಅಷ್ಟೊತ್ತಿಗೆ ಶಿವಾನಂದ ಮನೆಗೆ ಬಂದ. ರಾಧಮ್ಮ ಒಂದೇ ಕಾಫಿ ಕಫ್ ತಂದುದನ್ನು ನೋಡಿ ಯಾಕೆ ನನಗಿಲ್ವೇನೆ ಎಂದು ನಗತೊಡಗಿದರು. ಅದಕ್ಕೆ ರಾಧಮ್ಮ ನೀವು ಬಂದದ್ದು ತಿಳಿಯಲಿಲ್ಲರಿ. ಈಗ ಇದನ್ನ ನೀವೆ ತಗೊಳ್ಳಿ ಎಂದು ಹೇಳುತ್ತಾ ರೇಖಾಳಿಗೆ ಮತ್ತೊಂದು ಕಾಫಿ ಕಪ್ ತಂದುಕೊಟ್ಟಳು.

     ರೇಖಾ ಕಾಫಿಯನ್ನು ಕುಡಿಯುತ್ತಾ ತಂದೆಯ ಮುಖದಲ್ಲಿ ಎದ್ದು ಕಾಣುವ ಆಯಾಸವನ್ನು ಗಮನಿಸಿ ಏನಪ್ಪಾ ತುಂಬಾ ಸುಸ್ತಾಗಿದ್ದೀಯಲ್ಲ. ಏಕೆ ಆರಾಮ ಇಲ್ವಾ ಎಂದು ಕೇಳಿದಳು. ಇನ್ನೇನಮ್ಮ  ಫ್ಯಾಕ್ಟರಿ ದುಡಿತ ಅಂದ್ರೆ ಸಾಮಾನ್ಯನಾ ಎಂದರು. ಅಷ್ಟೊತ್ತಿಗೆ ರಾಧಮ್ಮ ರೇಖಾ ಸ್ವಲ್ಪ ತರಕಾರಿ ಹೆಚ್ಚಿಕೊಡಬಾರಮ್ಮಾ ಎಂದಿದ್ದರಿಂದ ರೇಖಾ ಅಡಿಗೆ ಮನೆಗೆ ಹೊರಟಳು. ಆಗ ಶಿವಾನಂದ ರೇಖಾಳಿಗೆ ಟಿ.ವಿಯಲ್ಲಿ ಯಾವದಾದರು ಧಾರಾವಾಹಿ ಇದ್ದರೆ ಹಚ್ಚಿ ಹೋಗಮ್ಮಾ ಎಂದನು. ಆಯಿತಪ್ಪ ಎನ್ನುತ್ತಾ ರೇಖಾ ಒಂದು ಧಾರಾವಾಹಿಯನ್ನು ಹಚ್ಚಿ ಒಳಗೆ ಹೋದಳು.

     ಸುಧಾ ಮನೆಗೆ ಬಂದು ಬಹಳ ಹೊತ್ತಾದ ಮೇಲೆ ಚಂದ್ರು ಮನೆಗೆ ಬಂದ. ಇದನ್ನು ಗಮನಿಸಿದ ಸುಧಾ ತಮ್ಮನನ್ನು ಗದರಿದಳು ಎಷ್ಟೊತ್ತು ಆಟಕ್ಕೆ ಹೋಗೊದು, ಹೊಂವರ್ಕ್ ಮಾಡೋದು, ಓದಿಕೊಳ್ಳೋದು ಏನು ಇಲ್ವೇನೊ ಅಂದಾಗ ಹೋಗಕ್ಕಾ ಓದೋದು ಇದ್ದೇ ಇದೆ. ನಾನು ನನ್ನ ಗೆಳೆಯರ ಜೊತೆ ಫುಟ್ಬಾಲ್ ಆಡ್ತಾ ಇದ್ದೆ ಗೊತ್ತಾ ನನ್ನಷ್ಟು ಚೆನ್ನಾಗಿ ಆಡೋವಂತಹ ಚಾಂಪಿಯನ್ ಈ ಊರಲ್ಲಿ ಯಾರಿದ್ದಾರೆ ಹೇಳು ಎಂದು ಸವಾಲು ಎಸೆಯುವಂತೆ ಅಕ್ಕನಿಗೆ ಕೇಳಿದ. ಆಯ್ತಪ್ಪ ನೀನು ಫುಟ್ಬಾಲ್ ಚಾಂಪಿಯನ್ನೇ ಆಯಿತಾ. ಈಗ ಮೊದಲು ಓದೋದಿಕೆ ಕುತ್ಕೊ ಎಂದಳು. ಆಗ ಒಳಗಿನಿಂದ ಬಂದ ಕಾವೇರಮ್ಮ ಯಾಕೆ ಆ ಮಗೂನ್ನ ಅಷ್ಡು ಗದರ್ತೀಯಾ? ಈಗ ತಾನೆ ಹೊರಗಿನಿಂದ ಬಂದಿದಾನೆ. ಸ್ವಲ್ಪ ಹಾಲು ಕುಡಿದು ಆಮೇಲೆ ಓದುತ್ತಾನೆ ಬಿಡು ಅಂದಳು.

     ಸರಿಬಿಡಮ್ಮ ನೀನು ಇವನನ್ನ ಇಷ್ಟು ಮುದ್ದು ಮಾಡ್ತಾ ಇದ್ದರೆ ಇವನಿಗೆ ಓದು ತಲೆಗೆ ಹತ್ತಿದ ಹಾಗೇನೆ ಎಂದು ಸುಧಾ ಹೇಳಿದಳು. ಸರಿ ನೀನು ಒಳಗೆ ಹೋಗಿ ಒಂದಿಷ್ಟು ಚಪಾತಿ, ಹುಳಿಯನ್ನ ಮಾಡಿಬಿಡು ಎಂದು ಕಾವೇರಮ್ಮ ಮಗಳನ್ನು ಅಲ್ಲಿಂದ ಕಳಿಸಿದಳು ಆಗ ಚಂದ್ರುಗೆ ಅಮ್ಮ ತನ್ನ ಪರವಾಗಿದ್ದಾಳೆ ಅಂತ ಸಮಾಧಾನ ಆಯಿತು. ಹಾಗೇನೆ ಅಕ್ಕಾ ಹೇಳಿದ ಹಾಗೆ ತಾನು ಗಂಭೀರವಾಗಿ ಓದೋಕೆ ಶುರು ಮಾಡಬೇಕು ಇಲ್ಲಾಂದ್ರೆ ಓದಿನಲ್ಲಿ ಹಿಂದೆ ಉಳಿತೀನಿ ಅಂತ ಅನಿಸಿದರೂ ಇವತ್ತೊಂದು ದಿನ ನಾಳೆಯಿಂದ ಓದೋಕೆ ಶುರು ಮಾಡಿದರಾಯಿತು ಎಂದುಕೊಂಡ. ಚಂದ್ರುಗೆ ಓದಿಗಿಂತ ಆಟದಲ್ಲಿಯೆ ಹೆಚ್ಚಿನ ಆಸಕ್ತಿ ಇರುತ್ತಿತ್ತು. ಸದಾ ಗೆಳೆಯರ ಜೊತೆ ಆಟವಾಡುವುದರಲ್ಲಿ ಸಮಯ ಕಳೆಯುತ್ತಿದ್ದ. ಅವನು ಓದಿನಲ್ಲಿ ಅಷ್ಟೊಂದು ಜಾಣನಾಗಿರಲಿಲ್ಲ. 

     ಸುಧಾ ರಾತ್ರಿಯ ಅಡುಗೆಯನ್ನು ಮುಗಿಸಿ ವರಾಂಡಕ್ಕೆ ಬಂದು ನಿಂತಳು. ರಾತ್ರಿ ಆಕಾಶದಲ್ಲಿ ಚಂದ್ರನನ್ನು ನೋಡುತ್ತಾ ತಂಗಾಳಿಗೆ ಮೈಯೊಡ್ಡಿ ನಿಂತಳು. ಸ್ವಲ್ಪ ಹಿತವೆನಿಸಿತು. ಅವಳು ಮುಂದಿನ ದಿನಗಳು ಹೇಗೆಲ್ಲಾ ಇರಬಹುದೆಂದು ಕಲ್ಪನಾ ಲೋಕಕ್ಕೆ ಜಾರಿದಳು. ತಾನು ಲಾಯರ್ ಆದ ಹಾಗೆ, ತನ್ನ ಮನೆಯ ಪರಿಸ್ಥಿತಿ ಸುಧಾರಿಸಿದ ಹಾಗೆ ಆಮೇಲೆ ತಾನು ಇಷ್ಟ ಪಟ್ಟ ವರನನ್ನು ಮದುವೆಯಾಗುವುದು, ಅವನು ತನ್ನನ್ನು ತುಂಬಾ ಪ್ರೀತಿಸುವವನಾಗಿರಬೇಕು. ಸುಂದರವಾಗಿಲ್ಲದಿದ್ದರು ಒಳ್ಳೆಯ ಗುಣವಂತನಾಗಿದ್ದರೆ ಸಾಕು ಎಂದು ಅಂದುಕೊಳ್ಳುತ್ತಿದ್ದಳು ಅಷ್ಟರಲ್ಲಿ ಸುಧಾ ಎಂದು ಕರೆಯುವ ಕಾವೇರಮ್ಮನ ಕೂಗಿಗೆ ವಾಸ್ತವಕ್ಕೆ ಮರಳಿದಳು. ಕಾವೇರಮ್ಮ ಮತ್ತೊಂದು ಸಲ ಸುಧಾ ಎಂದು ಕರೆದಾಗ ಸುಧಾ ಅಡುಗೆ ಮನೆಗೆ ಹೋದಳು.  ಅಷ್ಟರಲ್ಲಿ ಕಾವೇರಮ್ಮ ಎಲ್ಲರಿಗೂ ಬಾಳೆ ಎಲೆಯನ್ನು ಇಡುತ್ತಾ ಊಟಕ್ಕೆ ಸಿದ್ಧ ಪಡಿಸುತ್ತಿದ್ದಳು. ಸುಧಾಳನ್ನು ನೋಡಿ ಊಟಕ್ಕೆ ಬಡಿಸಿ ನೀನು ಊಟ ಮಾಡು ಬಾ ಎಂದಳು. ಅಷ್ಟರಲ್ಲಿ ವೆಂಕಟಗಿರಿ, ಚಂದ್ರು ಇಬ್ಬರು ಕೈಕಾಲು ತೊಳೆದುಕೊಂಡು ಬಂದರು. ದೇವರಿಗೆ ನಮಸ್ಕರಿಸಿ ಎಲೆಯ ಮುಂದೆ ಊಟಕ್ಕೆ ಕುಳಿತರು. ಸುಧಾ ತಂದೆಯ ಎಲೆಗೆ ಮತ್ತು ಚಂದ್ರುನ ಎಲೆಗೆ ಎರಡೆರಡು ಚಪಾತಿ, ಪಲ್ಯ, ಒಂದು ಬಟ್ಟಲು ಮಜ್ಜಿಗೆ, ಹುಳಿಯನ್ನ, ಉಪ್ಪಿನಕಾಯಿ ಮತ್ತು ಹಪ್ಪಳ ಎಲ್ಲವನ್ನು ಬಡಿಸಿ ತಾನು ಬಡಿಸಿಕೊಂಡು ಊಟ ಮಾಡಲು ಕುಳಿತಳು. ಈ ಹುಳಿಯನ್ನ ತುಂಬಾ ರುಚಿಯಾಗಿದೆ. ಸುಧಾ ನಿನ್ನ ಕೈ ಅಡುಗೆ ಅಮೃತಾ ಕಣಮ್ಮ ಎಂದು ವೆಂಕಟಗಿರಿ ಮಗಳನ್ನು ಹೊಗಳಿದರು. ಕಾವೇರಮ್ಮ ಮಧ್ಯದಲ್ಲಿ ಬಾಯಿ ಹಾಕುತ್ತಾ ಹೌದೂಂದ್ರೆ ಸುಧಾ ಕೈ ಅಡುಗೆ ಅಂದ್ರೆ ಸಾಮಾನ್ಯನಾ ಇವಳನ್ನ ಕಟ್ಕೊಳ್ಳುವಾತ ಬಹಳ ಅದೃಷ್ಟ ಮಾಡಿರಬೇಕು. ಆಗ ಸುಧಾ ಹೋಗಮ್ಮಾ ನಿನಗೆ ಯಾವಾಗಲು ನನ್ನ ಮದುವೇದೆ ಚಿಂತೆ ಎಂದು ಹುಸಿಮುನಿಸು ತೋರಿದಳು. ಯಾಕಕ್ಕಾ ಕೋಪ ಮಾಡ್ಕೋತಿಯಾ ಇರೋದೆ ತಾನೆ ಎಂದು ಚಂದ್ರು ಅಂದಾಗ ಏ ತರಲೆ ಎಂದು ಹೊಡೆಯಲು ಸುಧಾ ಕೈಯೆತ್ತಿದಾಗ ಎಲ್ಲರೂ ನಗತೊಡಗಿದರು. 

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಸ್ನೇಹ ಭಾಂದವ್ಯ (ಭಾಗ 1): ನಾಗರತ್ನಾ ಗೋವಿಂದನ್ನವರ

  1. ಕಾದಂಬರಿ ಸರಳ ಭಾಷೆಯನ್ನು ಒಳಗೊಂಡಿದ್ದು ಉತ್ತಮ ವಿಷಯ ಇದೆ ಮುಂದೆ ಕೂಡಾ ಅನಿಸಿತು ಲೇಖಕರು ಭಾಷಯ ಹಿಡಿತ ಹಾಗೂ ಪರಿಚಯಿಸುವ ರೀತಿ ನಿಜಕ್ಕೂ ಉತ್ತಮ ಸಂಭಾಷಣೆ 

  2. ನನ್ನ ಕಾದಂಬರಿಯನ್ನು ಓದಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲಾ ಧನ್ಯವಾದಗಳು.

  3. nice, actually to say i faced difficulty to read(because i dont know kannada word fully but some words are similar to telugu), nice story keep on writing. by these type of stories we come to know about past things which encourage us to done hard work.

Leave a Reply

Your email address will not be published. Required fields are marked *