ಸ್ನೇಹಿತೆ….ಪತ್ನಿ…ಗೆಳತಿ…ಮಡದಿ..: ಸಹನಾ ಪ್ರಸಾದ್


ಶೀರ್ಷಿಕೆ ವಿಚಿತ್ರವಾಗಿದೆ ಅಂದಿರಲ್ಲಾ? ಹೌದು, ಗೆಳತಿಯೊಬ್ಬಳು ಮಡದಿಯಾದ ಮೇಲೂ ಮತ್ತೆ ಸ್ನೇಹಿತೆಯಾಗಬಲ್ಲಳೇ? ಈಗಿನ ಯುವ ಪೀಡಿಗೆಯಲ್ಲಿ ಗಂಡ ಹೆಂಡಿರ ನಡುವೆ ಸಾಕಷ್ಟು ಸ್ನೇಹವಿರುತ್ತದೆ. ನಾ ಇತ್ತೀಚಿಗೆ ಕಂಡಿರುವ ಚಿಕ್ಕ ವಯಸ್ಸಿನ ದಂಪತಿಗಳಲ್ಲಿ, ನಮ್ಮ ಜ಼ಮಾನದಲ್ಲಿ ಇದ್ದ ಕೆಲವು ಸಂಗತಿಗಳು ಕಾಣಸಿಗುವುದಿಲ್ಲ. ಅದೂ ನಗರಗಳಲ್ಲಿ. ಗಂಡನನ್ನು ” ನೀವು” ಅನ್ನುವುದು ಈ ಕಾಲದಲ್ಲಿ ಅಪರೂಪ. ಕೆಲಸಗಳನ್ನು ಇಬ್ಬರೂ ಸರಿ ಸಮಾನವಾಗಿ ಹಂಚಿಕೊಂಡು ಮಾಡುವುದೂ ಕೂಡ ಕಾಣಸಿಗುತ್ತದೆ. ಇಬ್ಬರೂ ಕೆಲಸಕ್ಕೆ ಹೋಗುವಾಗ ಇದು ಅತ್ಯಗತ್ಯ ಕೂಡ.

ನಮ್ಮ ಕಾಲದ ” ಏನೇ- ಏನ್ರೀ” ಹೋಗಿ ಈಗ ” ನೀನು”, ” ಹೋಗು”, “ಬಾ” ಎನ್ನುವುದು ಸರ್ವೇಸಾಮಾನ್ಯ. ತಪ್ಪೇನಿಲ್ಲ. ಗಂಡ ಹೆಂಡಿರ ನಡುವೆ ಇರಬೇಕಾದದ್ದು ಸ್ನೇಹ. ಸ್ನೇಹವಿದ್ದರೆ ಪ್ರೀತಿ, ವಿಶ್ವಾಸ, ನಂಬುಕೆ ಎಲ್ಲವೂ ಬರುತ್ತದೆ. ಕೆಲವು ದಾಂಪತ್ಯಗಳಲ್ಲಿ ಸ್ನೇಹಕ್ಕೆ ಕೊರತೆ. ದಬ್ಬಾಳಿಕೆ, ಜೋರು ಜಾಸ್ತಿ. ಹಾ.. ಗಂಡನೊಬ್ಬನದೇ ಎಂದು ತಿಳಿಯಬೇಡಿ. ಬಹಳಷ್ಟು ಕಡೆ ಹೆಂಡತಿಯರೂ ಜೋರಿರುತ್ತಾರೆ. ಗಂಡಸರು ಅತ್ತೆ, ಮನೆಗೆ ಬಂದರೆ ಬೇಸರಿಸಿಕೊಳ್ಳುವ ಎಷ್ಟೋ ಜೋಕುಗಳಿರುವ ಹಾಗೆ ಹೆಣ್ಣು ಮಕ್ಕಳು ಕೂಡ ಗಂಡನ ಕಡೆಯವರನ್ನು ಅಲಕ್ಷಿಸುವುದು ಕೂಡ ಕತೆಗಳಲ್ಲಿ, ಸಿನೆಮಾಗಳಲ್ಲಿ ಚಿತ್ರಿಸಿದೆ.

ಹಿಂದಿನ ಕಾಲದಲ್ಲಿ ಗಂಡಸರು ಮದುವೆಯಾದ ಮೇಲೆ ಹೆಂಡತಿಯ ಕಡೆಯವರನ್ನು ಜಾಸ್ತಿ ಮಾತಾಡಿಸುತ್ತಿರಲಿಲ್ಲ. ಅಳಿಯತನದ ಗರ್ವ, ದುರಹಂಕಾರ ತೋರುತ್ತಿದ್ದು ಸರ್ವೇ ಸಾಮಾನ್ಯ. ಅದು ಆಗಿನ ಪದ್ದತಿ. ಅದಕ್ಕೆ ಬಹಳಷ್ಟು ಮನೆಗಳಲ್ಲಿ ಅಳಿಯ ಅತ್ತೆ, ಮಾವನಿಗಿಂತ ಎಷ್ಟು ಚಿಕ್ಕವನಾದರೂ ಅವನನ್ನು ಮರ್ಯಾದೆಯಿಂದ “ಅಳಿಯಂದಿರೇ” ಎಂದು ಬಹುವಚನದಲ್ಲೆ ಕರೆಯುತ್ತಾ ಇದ್ದದ್ದು. ವರನ ಕಡೆಯವರೆಲ್ಲಾ ಬಹುವಚನಕ್ಕೆ ಅರ್ಹರು. ಮೊನ್ನೆ ಯಾರೊ ನೆನೆಪಿಸಿಕೊಳ್ತಾ ಇದ್ದರು, ಅವರ ಗೆಳತಿಯ ಮಗನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರಂತೆ. ಮದುವೆ ಮುಂಚೆ ” ಏನೇ, ಹೋಗೇ”, “ಬಾರೇ” ಅಂತಿದ್ದ, ಅನ್ನಿಸಿಕೊಳ್ತಿದ್ದ ಗೆಳತಿ ಬೀಗಿತ್ತ ಆದ ತಕ್ಷಣ ” ನೀವು”, “ಹೋಗಿ”, “ಬನ್ನಿ” ಎನ್ನಬೇಕೆಂಬ ಶರತ್ತು ಹಾಕಿದಳಂತೆ.

ಬೀಗರ ದರ್ಬಾರು ತೋರುವುದು, ಬೀಗಿತ್ತಿತನ ಮೆರೆಯುವುದು ಕೂಡ ಬಹಳಷ್ಟು ಕಡೆ ಓದಿ, ನೋಡಿ, ಕೇಳಿದೀವಿ. ಹಿಂದಿ ಸಿನೆಮಾಗಳಲ್ಲಿ ಮದುವೆ ಸಮಯದಲ್ಲಿ, ಹೆಣ್ಣಿನ ತಂದೆ ಗಂಡಿನವರ ಮುಂದೆ ಅಂಗಲಾಚುವುದು, ಪೇಟವನ್ನು ಅವರ ಪಾದದಲ್ಲಿ ಇರಿಸುವುದು, ಮನೆ ಮರ್ಯಾದೆ ಕಾಪಾಡಿ, ನನ್ನ ಮಗಳನ್ನು ವರಿಸಿ ಕರೆದುಕೊಂಡು ಹೋಗಿ ಎಂದು ಬೇಡಿಕೊಳ್ಳುವುದು ಸಾಕಷ್ಟು ಸಲ ನೋಡಿದೀವಿ. ಆದರೆ ಇಂತಹ ಘಟನೆಯಿಂದ ಶುರುವಾದ ಸಂಸಾರದಲ್ಲಿ ಸ್ನೇಹವೆಂಬುದು ಸಾಧ್ಯವೇ? ಈಗ ಬರುತ್ತಿರುವ ಚಿತ್ರಗಳಲ್ಲಿ ಇದು ಇರೋದಿಲ್ಲ, ಬಿಡಿ. ಈಗೆಲ್ಲ ಕಾಲ ಬದಲಾಗಿದೆ.. ಅಲ್ಲವೇ? ಸಧ್ಯ, ಹೆಣ್ಣು ವರಿಸಿದರೆ ಸಾಕು ಎನ್ನುವ ಗಂಡುಗಳು ಜಾಸ್ತಿ ಈಗ.

ಇರಲಿ, ಈಗ ಗಂಡ ಹೆಂಡಿರ ಬಗ್ಗೆ ಮಾತಾಡೊಣ. ಮದುವೆಯಾದ ಹೊಸತರಲ್ಲಿ ಗೆಳತಿ, ಪ್ರಾಣ ಸ್ನೇಹಿತೆ ಎಂದೆಲ್ಲ ಕರೆಯುವ ಗಂಡ, ಯಾವಾಗ “ಏನೇ” ಗೆ ಶಿಫ಼್ಟ್ ಆಗುತಾನೊ ಹೇಳಕ್ಕೆ ಆಗುವುದಿಲ್ಲ. ಅವನ ಮಕ್ಕಳ ತಾಯಿಯಾದ ದಿನವೇ? ಅವನ ಅಮ್ಮ, ಹೆಂಡತಿಯ ಜಗಳ ಸಾಕಾದ ದಿನವೇ? ಈಗಿನ ಕಾಲದಲ್ಲಿ ಅತ್ತೆಯರೂ ಕೂಡ ಬಹಳಷ್ಟು ಮಾಡರ್ನ್ ಆಗಿರುವದರಿಂದ ಅತ್ತೆಯರಿಂದ ಪತಿ, ಪತ್ನಿಯರ ಸ್ನೇಹಕ್ಕೆ ಧಕ್ಕೆ ಬರುವ ಸಾಧ್ಯತೆ ಕಡಿಮೆ. ಇನ್ನು ಇರುವುದು ಬೇರೆ ಕಾರಣಗಳು, ಸಮೀಕ್ಷೆಗಳ ಪ್ರಕಾರ ದಾಂಪತ್ಯದಲ್ಲಿ ವಿರಸ ಮೂಡುವುದು ಹಣಕಾಸಿನ ವಿಷಯಕ್ಕೆ. ಅದಾದ ನಂತರ ಬೇರೊಬ್ಬ ಗಂಡಸು/ಹೆಂಗಸಿನ ಸ್ನೇಹ, ಕುಟುಂಬದ ಇತರೆ ಸದಸ್ಯರು ಇಡುವ ಬತ್ತಿ, ಕಿಚ್ಚು ಇತ್ಯಾದಿ.

ಮಕ್ಕಳು ಬೆಳೆದು ದೊಡ್ಡವರಾಗುವವರೆಗೆ ಸ್ನೇಹ ಅಷ್ಟಕಷ್ಟೇ. ಮಕ್ಕಳನ್ನು ಬೆಳೆಸುವ, ತಿದ್ದುವ ಕೆಲಸದಲ್ಲಿ ಸ್ನೇಹಿತರಿರಲಿ, ಪತಿ-ಪತ್ನಿಯರು ಎನ್ನುವುದೇ ಕೆಲವೊಮ್ಮೆ ಮರೆತು ಹೋಗಿರುತ್ತದೆ. ಮಕ್ಕಳು ಬೆಳೆದು ತಮ್ಮ ತಮ್ಮ ಗೂಡು ಕಟ್ಟಿಕೊಂಡ ಮೇಲೆ ಮತ್ತೆ ಸ್ನೇಹ ಚಿಗುರೊಡೆಯುತ್ತದೆ. ಆಗ ಜತೆ ಜತೆಯಾಗಿ ಓಡಾಡಲು( ಇನ್ಯಾರೂ ಸಿಗದೆ ಇರುವುದಕ್ಕೆ ಅಲ್ಲ!) ಶುರುವಿಡುತ್ತಾರೆ. ಈ ಸಮಯದಲ್ಲೂ ಸ್ನೇಹ ಬೆಳೆಸದೆ, ಯಾವುದೋ ಸಿಟ್ಟು, ಕೋಪ, ದ್ವೇಷ, ಅಸಹನೆ ಮೈಕೂಡಿಸಿಕೊಂಡವರೂ ಇರುತ್ತಾರೆ. ಅವರನ್ನು ನೋಡಿ ಕನಿಕರ ಪಡಲಾಗುತ್ತದೆ ಅಷ್ಟೇ.

ಕಾಲ ಚಕ್ರ ತಿರುಗಿದಂತೆ ಹಳೇ ಪ್ರೀತಿ, ವಿಶ್ವಾಸ ಮತ್ತೆ ಉದಯಿಸಿದರೆ ಅದರಷ್ಟು ಸುಖ ಇನ್ನೊಂದಿಲ್ಲ. ಯಾವುದೊ ಚಿತ್ರದಲ್ಲಿ ಹೇಳಿದಂತೆ ಸ್ನೇಹಿತರನ್ನು ಮದುವೆಯಾಗುವ ಸೌಭಾಗ್ಯ ಕೆಲವರಿಗೆ ಮಾತ್ರ ದಕ್ಕುತ್ತದೆ. ಎಲ್ಲರ ಪಾಲಿಗೆ ಪ್ರೀತಿ, ಸ್ನೇಹ ಸಿಕ್ಕರೆ ಅದಕ್ಕೆ ಬೆಲೆ ಎಲ್ಲಿದೆ? ಆದರೆ ಮದುವೆಯಾದವರೊಡನೆ ಸ್ನೇಹಿತನನ್ನು/ ಸ್ನೇಹಿತೆಯನ್ನು ಕಾಣುವುದು ನಿಜಕ್ಕೂ ಅದೃಷ್ಟವೇ ಸರಿ. ‌

ಸಹನಾ ಪ್ರಸಾದ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x