ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು…: ಸಿಂಧುಭಾರ್ಗವ್ ಬೆಂಗಳೂರು

SINDHU BHARGAV

ನಗುತಿರು ಪುಟ್ಟ ಮನವೇ ಬೆಳಂದಿಗಳಿನಂತೆ..!
ನಾನಿರುವೆನು ಜೊತೆಗೆ ಎಂದಿನಂತೆ..!!
ಈಗೀಗ ಎಲ್ಲವನೂ ಸ್ವೀಕರಿಸುವ ಧೈರ್ಯ ಬಂದಿದೆ..!
ಮನದಲಿ ನೋವುನಲಿವು ಮಾಮೂಲಿಯಾಗಿದೆ..!!
~
ನಿಜವಾಗಿ ಹೇಳುವುದಾದರೆ ಈ ಜೀವನದ ಸಂತೆಯಲಿ ಸಿಕ್ಕಿದವನಾತ. ನನ್ನ ಮೊಗದಲ್ಲಿ ನಗುವ ಬಯಸಿದವನಾತ. "ಬಿಕ್ಕಿದ್ದು ಸಾಕು ನಿನ್ನ ನಗುಮೊಗವ ನಾ ನೋಡಬೇಕು" ಎಂದಾಗ ಮತ್ತಷ್ಟು ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಖುಷಿಯ ಯಾರಲ್ಲಿ ಹೇಳಲಿ.?! ಬೇಕಿತ್ತೇನೋ ಅವನೊಬ್ಬ ನನ್ನ ಕಣ್ಣೀರು ಒರೆಸಲೆಂದು. ಅದಕ್ಕೇ ಬಹಳ ಹತ್ತಿರಕ್ಕೆ ಸೇರಿಸಿಕೊಂಡೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡೆ. ಪರವಾಗಿಲ್ಲ. "ನಾ ನಿನ್ನ ಇಷ್ಟು ಹಚ್ಚಿಕೊಳ್ಳಲು ಕಾರಣವೇನು..?!" ಎಂದು ಕೇಳಿದರೆ "ಅವನಲ್ಲಿ ನಾನು ನನ್ನ ತಂದೆಯ ನೋಡಿದ್ದೆ, ಅವನ ಸವೆತ ನೋಡಿದ್ದೆ, ಬೆವರು ಹರಿಸಿ ದುಡಿದು ನಂಬಿಕೊಂಡವರ  ಬೇಕುಬೇಡಗಳ ಪೂರೈಸುವುದರಲ್ಲೇ ಜೀವನ‌ ಸವೆಸುವುದ ನೋಡಿದ್ದೆ. ಕಣ್ತುಂಬಾ ಕನಸುಗಳ ಹೊತ್ತಿದ್ದ ನೋಡಿದ್ದೆ. ನಿಷ್ಕಲ್ಮಷವಾದ ಮನಸ್ಸು, ಪ್ರೀತಿ ಎಂದರೆ ಪ್ರೀತಿಯೊಂದೇ ಗೊತ್ತಿರುವುದು, ಸತ್ಯನ್ಯಾಯಕ್ಕೆ ಜಗಳಬೇಕಾದರೂ ಮಾಡುವನು, ಆಗಾಗ ಬರುವ ಕೋಪ,  ಬೇಡವೆಂದರೂ ನೆನಪಿಸಿಕೊಳ್ಳುವ ಅವನ  ಹುಚ್ಚುಮನಸ್ಸು, ಒಮ್ಮೆ ನಾನಿಲ್ಲವೆಂದರೆ ಅವನಾಗೇ ಹುಡಿಕಿಕೊಂಡು ಬರುವುದು , ನಾ ಜೊತೆಗೆ ಇರುವೆನೆಂಬ ನಂಬಿಕೆಯೆಯಿಂದಲೇ ದಿನದ ಆಯಾಸವ ಕಳೆಯುವುದು, ನನಗಿಂತ ಅವನೇ ಹೆಚ್ಚು ಹಚ್ಚಿಕೊಂಡು ಬಿಟ್ಟಿದ್ದ ಎನ್ನಬಹುದು. ದಿನಗಳು ಕಳೆದಂತೆ ನಾವು ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದೆವು. ಅದಕ್ಕೊಂದು ನಾಮಕರಣ ಮಾಡಲು ನನಗಂತೂ ಭಯ. ಈ ಕೆಟ್ಟ ಪ್ರಪಂಚ ಏನೆನ್ನುವುದೋ ಎಂದು.
*
ಅವನ ಸ್ನೇಹದಿಂದ ದಿನಕಳೆದುದೇ ತಿಳಿಯಲಿಲ್ಲ. ಆದರೆ ಅವನಿಗೆ ಕೆಲಸದ ಒತ್ತಡಗಳು ಜಾಸ್ತಿಯಾಗಿವೆಯೇ ಹೊರತು ಆ ಭಾರ ಕಡಿಮೆ ಆಗಲಿಲ್ಲ. ಸಮಯವೂ ಸಾಕಾಗುತ್ತಿಲ್ಲ. ನಿದಿರೆ ಊಟ ಎಲ್ಲದರಲ್ಲೂ ವ್ಯತ್ಯಯ. ಜವಾಬ್ದಾರಿ ಹೊತ್ತ ಬೆನ್ನು ಬಾಗುತ್ತಿದೆ. ಕಣ್ತುಂಬಾ ತುಂಬಿಸಿಕೊಂಡಿದ್ದ ಕನಸುಗಳೆಲ್ಲ ಬತ್ತಿಹೋದ ನದಿಯಲ್ಲಿ ತಳಸೇರಿಹೋಗಿದೆ. ಮಾತಿನಲ್ಲಿ ಬದಲಾವಣೆಯಾಗಿದೆ. ಏನೋ ಯೋಚನೆ ಮಾಡುತ್ತಾ ಕುಳಿತುಕೊಳ್ಳುವ, "ಯಾಕೆ ಹೀಗೆ.?! ನನಗೆ ಹೇಳಿದ ನೀನು.. ನೀನ್ಯಾಕೆ ಹೀಗಾದೆ?" ಇನ್ನು ಚಿಕ್ಕ ವಯಸ್ಸು ಜೀವನದ ಹೊಸ ಪರ್ವ ನೋಡಲಿನ್ನು ಬಾಕಿ ಇದೆ. ಈಗಲೇ "ನನ್ನದೆಲ್ಲ ಮುಗಿಯಿತು, ನನಗೆ ಇನ್ನೇನಾಗಬೇಕಿದೆ ? ಎಂದು ಹೇಳುವುದ ಕೇಳಿದರೆ ದುಗುಢವಾಗುತ್ತದೆ. ಮನಸ್ಸಿನಲ್ಲಿ ಆತಂಕವಾಗುತ್ತದೆ, ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟವಾಗುತ್ತದೆ. ಕನಸನ್ನೆಲ್ಲ ತಾಜವಾಗಿರಿಸಿಕೊಳ್ಳಬೇಕು, ಆದರೆ ಅವನ ಮನಸ್ಸಿನಲ್ಲಿ ಏನೋ ಏರುಪೇರು ಕಾಣುತ್ತಿದೆ. ತಮ್ಮವರಿಗಾಗಿ ಜೀವನವನ್ನೇ ತೇದಿತೇದಿ ಇಂಚಿಂಚಾಗಿ ಕರಗಿಹೋಗುತಲಿರುವ ಶ್ರೀಗಂಧನಾತ. ಅವನಿರುವಲ್ಲಿ ಘಮವೇ ಘಮ. ಆದರೆ ಅವನು ಮಾತ್ರ..?! 
*
ಇಲ್ಲ , ನಾನು ಅವನ ಜೊತೆಗೆ ಇದ್ದು ಅವನ ಕನಸುಗಳನ್ನೆಲ್ಲ ಜೀವಂತವಾಗಿರಿಸುವಂತೆ ನೋಡಿಕೊಳ್ಳಬೇಕು. ಅವನು ಅದೇ ಮೊದಲ‌ಮಳೆಯಲ್ಲಿ ಯಾವಾಗಲು ನೆನೆಯುತಿರಬೇಕು.ಅವನ ನಗುವಿಗು, ಅಳುವಿಗೂ ಜೊತೆಯಾಗಬೇಕು. ಆಯಾಸವಾದಾಗೆಲ್ಲ ನನ್ನ ತೊಡೆಯಮೇಲೆ ತಲೆಯಿಟ್ಟು ಮಲಗಲು ಹೇಳಬೇಕು. ಅವನ ಕಂಗಳಲಿ ಮತ್ತೆ ಪ್ರೀತಿ ತುಂಬಿಸಬೇಕು. ನಾಳೆ ಅವನ ನಂಬಿ ಬರುವವಳಿಗೆ ಮೋಸವಾಗಬಾರದು. ಅವಳು ಕತ್ತಲೆಯಲ್ಲಿ ಕೂತು ಅಳಬಾರದು.ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು. ಅದಕ್ಕೆಂದೇ ನಾನೀಗ ಅವನ ಜೊತೆಗಿರಬೇಕು.

~ಸಿಂಧುಭಾರ್ಗವ್ ಬೆಂಗಳೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x