ಸ್ನೇಹದ ಕಡಲಲ್ಲಿ: ಸುಧಾ ಹುಚ್ಚಣ್ಣವರ

ಮನುಷ್ಯ ಇತರ ಎಲ್ಲ ಜೀವಿಗಳಿಗಿಂತ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ, ಹಾಗೆಯೇ ಸಂಘಜೀವಿ. ಸಮಾಜವನ್ನು ಬಿಟ್ಟು ಬದುಕಲಾರ ತನ್ನ ಎಲ್ಲ ಬೇಕು ಬೇಡಿಕೆಗಳನ್ನು ಸಮಾಜದ ಸಂಘ ಜೀವನದಲ್ಲಿ ಈಡೇರಿಸಿಕೊಳ್ಳುತ್ತಾನೆ. ತನ್ನ ಕುಟುಂಬದ ಸದಸ್ಯರ ಜೊತೆ ನೆರೆಹೊರೆಯವರ ಜೊತೆ ಪ್ರೀತಿ ಸ್ನೇಹ ಸಹಕಾರ ಕೊಟ್ಟು ತೆಗೆದುಕೊಳ್ಳುವ ಭಾವನೆಯಿಂದ ಬೆಳೆಯುತ್ತಾ ಸಾಗುತ್ತಾನೆ. ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ “ಜೀವನದ ಮೌಲ್ಯಗಳು” ಎಂಬ ವಿಷಯದ ಕುರಿತು ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಿಗೆ ಹೇಳುತ್ತಾರೆ, ಮಕ್ಕಳೇ ಜೀವನದಲ್ಲಿ “ಪ್ರೀತಿ ಸ್ನೇಹ “ಎಲ್ಲವೂ ಬಹಳಷ್ಟು ಮುಖ್ಯ. ಮನುಷ್ಯ ಮಾನವೀಯತೆಯಿಂದ ಬದುಕಬೇಕಾದರೆ ಪರಸ್ಪರ ಸಹಾಯ ಸಹಕಾರ ಹಾಗೂ  ಪ್ರೀತಿ ಸ್ನೇಹ ಹೀಗೆ ಇವೆಲ್ಲವೂ ಜೀವನದಲ್ಲಿ ಮುಖ್ಯ ಎಂದು ಪಾಠ ಮಾಡುತ್ತಾರೆ. ನಂತರ ಅಂದು ಶಾಲೆ ಮುಗಿದ ನಂತರ “ತಿಮ್ಮ” ಮತ್ತು “ರಾಜು” ಎಂಬ ಇಬ್ಬರು ಸ್ನೇಹಿತರು ಮನೆ ಕಡೆಗೆ ಹೋಗುತ್ತಿರುವಾಗ ತಿಮ್ಮ ತನ್ನ ಸ್ನೇಹಿತ ರಾಜುವಿಗೆ ಕೇಳುತ್ತಾನೆ ಸ್ನೇಹಿತ, ಇಂದು ಶಿಕ್ಷಕರು ಮೌಲ್ಯಗಳ ಬಗ್ಗೆ ಪಾಠ ಮಾಡಿದ್ದಾರೆ. ನಿನಗೆ ಜೀವನದಲ್ಲಿ ಸ್ನೇಹ ಮುಖ್ಯನಾ ಅಥವಾ ಪ್ರೀತಿ ಮುಖ್ಯನಾ ಅಂತ ಕೇಳುತ್ತಾನೆ. ಆಗ ರಾಜು ಹೇಳುತ್ತಾನೆ ಇಲ್ಲ ನನಗೆ ಜೀವನದಲ್ಲಿ ಪ್ರೀತಿ ಮುಖ್ಯ ಎಂದು ಉತ್ತರಿಸುತ್ತಾನೆ. ನಂತರ ರಾಜು ತಿಮ್ಮನಿಗೆ ಇದೇ ಪ್ರಶ್ನೆಯನ್ನು ಕೇಳುತ್ತಾನೆ. ನಿನಗೆ ಜೀವನದಲ್ಲಿ ಯಾವುದು ಮುಖ್ಯ ಎಂದು ಕೇಳಿದಾಗ ತಿಮ್ಮ ಉತ್ತರಿಸುತ್ತಾನೆ, ನನಗೆ ಪ್ರೀತಿಗಿಂತ ಸ್ನೇಹ ನೇ ತುಂಬಾ ಮುಖ್ಯ ಎನ್ನುತ್ತಾನೆ. ಆಗ ರಾಜು ಮುಂದುವರಿದು ಸ್ನೇಹ ನೇ ಯಾಕೆ ಮುಖ್ಯ ಎಂದು ಕೇಳಿದಾಗ,  ತಿಮ್ಮ ಹೇಳುತ್ತಾನೆ. ಇಲ್ಲ ಪ್ರೀತಿ ಹತ್ತನೇ ತರಗತಿ ಪಾಸಾಗಿ ಹೋಗಿದ್ದಾಳೆ ಆದರೆ “ಸ್ನೇಹಾ” ಇನ್ನೂ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದಾಗ ರಾಜು ಒಂದು ಕ್ಷಣ ಹೌಹಾರಿ ನಿಂತ.

ಇಲ್ಲಿ ಶಿಕ್ಷಕರು ಹೇಳಿದ ಮೌಲ್ಯಗಳ ಅರ್ಥವೇ ಬೇರೆ ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಈ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ ರೀತಿಯೇ ಮತ್ತೊಂದಾಗಿತ್ತು. ಹೀಗೆ ನಮ್ಮ ಸುತ್ತಲಿನ ಎಷ್ಟೋ ಸನ್ನಿವೇಶಗಳಲ್ಲಿ ಈ ತರಹದ ಸಂದರ್ಭಗಳನ್ನು ನೋಡುತ್ತೇವೆ. ಜೀವಕ್ಕೆ ಜೀವ ಕೊಡುವ ಭಾವನಾತ್ಮಕ ಸ್ನೇಹದ ಬಂಧನಗಳು ಒಂದು ಕಡೆಯಾದರೆ, ಸಂಕುಚಿತವಾಗಿ ಕಾಲಕ್ಕೆ ತಕ್ಕಂತೆ ಬದಲಾಗುವ ಸ್ನೇಹ ಸಂಬಂಧಗಳು ಮತ್ತೊಂದು ಕಡೆ. ತಾಯಿ ಮಗುವಿಗೆ  “ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆ ಹಂಗ, ಕ್ಷುಲ್ಲಕರ  ಗೆಳೆತನ ಮಾಡಿದರೆ ನನ್ನ ಕಂದ, ಸಲ್ಲದ ಮಾತು ಬರತಾವ ”  ಎಂದು ಹೇಳಿದ ಸಂಸ್ಕೃತಿ ನಮ್ಮದು. ಆದರೆ ಇಂದು ಓಡುತ್ತಿರುವ ಜಗತ್ತಿನಲ್ಲಿ ಮಕ್ಕಳು ಎಷ್ಟೋ ಸಾರಿ ಕೆಟ್ಟವರ, ಕೆಟ್ಟ ಸ್ನೇಹದ ಒಂದು ಸಹವಾಸದಿಂದಲೇ ಹಾಳಾಗುತ್ತಿರುವುದು ವಿಷಾದದ ಸಂಗತಿ. ಗೆಳೆಯನ ಜೊತೆ ಹುಡುಕಾಟಕ್ಕಾಗಿ ಮಾಡಿದ ಒಂದು ಚಟ ಮುಂದೆ ಇಡೀ ಜೀವನವನ್ನೇ ನುಂಗಿ ಹಾಕುವ ಸ್ಥಿತಿಗೆ ತಲುಪಿಸಬಹುದು, ಬೀಡಿ ಸಿಗರೇಟ್ ಗಾಂಜಾ ಗುಟ್ಕಾ ಮುಂತಾದ ಕೆಟ್ಟ ಚಟಗಳನ್ನು ಒಬ್ಬ ಸ್ನೇಹಿತನಿಂದ ಮತ್ತೊಬ್ಬ, ಮತ್ತೊಬ್ಬನಿಂದ ಮುಗದೊಬ್ಬ ಹೀಗೆ ಶಾಲಾ ಜೀವನವನ್ನು ಹಾಳು ಮಾಡುವ ಇಂತಹ ಸ್ನೇಹದ ಸಂಗತಿಗಳು ದುರಂತವೇ ಸರಿ.

ನಾನೇ  ನೋಡಿದ ಶಾಲಾ ವಿದ್ಯಾರ್ಥಿಗಳ ಒಂದು ಪ್ರಸಂಗ ನಿಜಕ್ಕೂ ನನ್ನ ಮನಸ್ಸನ್ನು ತುಂಬಾ ಘಾಸಿಗೊಳಿಸಿದ ಸಂದರ್ಭವದು, ಒಂದು ದೊಡ್ಡ ಕಾಲೇಜು ಕಾಲೇಜಿನ ಕ್ಯಾಂಪಸ್ಸಿನ ಮುಂದುಗಡೆ ಹತ್ತಾರು ವಿದ್ಯಾರ್ಥಿ /ವಿದ್ಯಾರ್ಥಿನಿಯರ ಗುಂಪು, ನಾಲ್ಕು ಜನ ಸುತ್ತಲೂ ನಿಂತಿರುವುದು, ಅವರ ಪಕ್ಕ ಒಂದು ಬೆಂಚಿನಲ್ಲಿ ಮತ್ತೆ ನಾಲ್ಕು ಜನ ವಿದ್ಯಾರ್ಥಿನಿಯರು  ಕುಳಿತಿರುವುದು, ಅವರ ಹಿಂದುಗಡೆ ನಾಲ್ಕು ವಿದ್ಯಾರ್ಥಿಗಳು  ಇಣುಕಿ ನೋಡುತ್ತ ನಗುತ್ತಿರುವುದು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಅವರೆಲ್ಲ ಒಂದು ಸಿಗರೇಟನ್ನು ಒಬ್ಬ ಸೇದಿ ಇನ್ನೊಬ್ಬರಿಗೆ ಕೊಡುವುದು, ಅವನು ಎರಡು ಜೂರಿ ಸೇದಿ  ಅದರ ಆನಂದವನ್ನು ಅನುಭವಿಸಿ ಇನ್ನೊಬ್ಬ ಹುಡುಗಿಗೆ ಕೊಡುವುದು, ಅವಳು ಮತ್ತೊಬ್ಬ ಹುಡುಗನಿಗೆ ಕೊಡುವುದು ಹೀಗೆ ಅವರು ಒಂದು ಸಿಗರೇಟಿನ ಸ್ನೇಹದ ಕಡಲು, ಆ ಸಿಗರೇಟಿನ ಹೊಗೆಯಲ್ಲಿ ತಲ್ಲಿನವಾದ ಅವರೆಲ್ಲರ  ಸ್ನೇಹದ ಒಡಲು, ಅಬ್ಬಾ! ಅದನ್ನೆಲ್ಲ ನೋಡಿದ ನನಗೆ  ಹೀಗೂ ಇರುತ್ತಾರಾ ಮಕ್ಕಳು ಎಂದು ತಬ್ಬಿಬ್ಬುಗೊಂಡೆ. ನಮ್ಮ ಮಗ ಅಥವಾ ಮಗಳು ಶಾಲೆ ಕಾಲೇಜಿಗೆ ಹೋಗಿ ಓದಿ ಮುಂದೆ ಭವಿಷ್ಯದಲ್ಲಿ ಒಬ್ಬ ಉತ್ತಮ ಪ್ರಜೆಗಳು ಆಗುತ್ತಾರೆ ಎಂದು ಮಹದಾಸೆಯನ್ನು ಹೊತ್ತು ಕುಳಿತಿರುವ ತಂದೆ ತಾಯಿಗಳ ಪಾಡೇನು?

“ಮಿತವಿರಲಿ ನಿನ್ನೆಲ್ಲ ಜಗದ ವರ್ತನೆಗಳಲ್ಲಿ, ಅತಿರೇಕದಿಂದೊಳಿತೆ! ॥ ಮಂಕುತಿಮ್ಮ॥ ಎನ್ನುವ ಡಿವಿಜಿಯವರ ಈ ಮಾತಿನಂತೆ “ಅತಿಯಾದರೆ ಅಮೃತವೂ ವಿಷಯವೆಂಬಂತೆ” ಯಾವುದೇ ಸ್ನೇಹವಿರಲಿ ಹಿತಮಿತವಾಗಿದ್ದಾಗ ಸುಂದರವಾಗಿರುವುದು. ಆದರೆ ಮಿತಿಮೀರಿ ಹೋದಾಗ ಇಂತಹ ಕೆಟ್ಟ ಸ್ನೇಹದ ಕಡಲು ಅಮೂಲ್ಯವಾದ ಭವಿಷ್ಯವನ್ನು ನುಂಗಿ ಹಾಕಲು ಬಹುದು ಅಲ್ಲವೇ ಸ್ನೇಹಿತರೇ!.  

ಸುಧಾ ಹುಚ್ಚಣ್ಣವರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x