ಸ್ತ್ರೀ ಸಾಮರ್ಥ್ಯ ಮತ್ತು ಅವಕಾಶಗಳು: ನಾಗರೇಖಾ ಗಾಂವಕರ

nagarekha
ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಈ ತಿಂಗಳ ಮೊದಲ ವಾರವಷ್ಟೇ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ  ಜವಾಬ್ದಾರಿ ಯಾವುದು ಇಲ್ಲ ಎಂಬುದಕ್ಕೆ  ಸಾಕ್ಷಿಯಾಗುತ್ತಿದ್ದಾರೆ. ಸ್ತ್ರೀ ಜಾಗತಿಕ ರಂಗದಲ್ಲಿ ಪುರುಷನಿಗೆ ಸಮಾನವಾಗಿ ಮಿಂಚುವ ಯಾವ ಸಾಮಥ್ರ್ಯದಲ್ಲೂ ಕಡಿಮೆಯಿಲ್ಲ. ಹಾಗಾಗಿ ಮಹಿಳೆ ಮತ್ತು ಮಹಿಳಾ ಜಗತ್ತು ಇಂದು ವ್ಯಾಪಕ ಅರ್ಥ ಹಾಗೂ ವಿಸ್ತಾರವನ್ನು ಪಡೆದುಕೊಳ್ಳುತ್ತಿದೆ.

ಜಾಗತಿಕ ಸಮೀಕ್ಷೆಯ ಪ್ರಕಾರ 2017 ನೇ ಇಸ್ವಿಯಲ್ಲಿ ಅತಿ ಹೆಚ್ಚು ಬಳಕೆಯಾದ ಪದ ಸ್ತ್ರೀ ವಾದ ಎಂದು ಪತ್ರಿಕೆಯ ಸುದ್ದಿಗಳಲ್ಲಿ ರಾರಾಜಿಸುತ್ತಿದೆ. ಹೆಣ್ಣು ಎಚ್ಚರಗೊಳ್ಳುತ್ತಿದ್ದಾಳೆ. ತನ್ನ ಮೇಲಿನ ಪಾರಮ್ಯವನ್ನು ಧಿಕ್ಕರಿಸಿ ಸಮಾನತೆಯ ಶಂಖ ಊದುವ ತುರಾತುರಿಯಲ್ಲಿದ್ದಾಳೆ. ಆದರೆ ಆಕೆಯ ಎಲ್ಲ ಸಾಮಥ್ರ್ಯಗಳನ್ನು ತಡೆಯಲಾಗದ ಹಂತದಲ್ಲಿ ಸಮಾಜ ಆಕೆಗೆ ಕೊಲೆಯ  ಮೂಲಕ ನಿಯಂತ್ರಿಸುತ್ತಿರುವುದು ನಿನ್ನೆಯ ಅಥವಾ ಇಂದಿನ ಹೊಸ ಉಲ್ಲೇಖವಲ್ಲ. ಹದಿನಾಲ್ಕನೇ ಶತಮಾನದಲ್ಲಿ ಪುರುಷನಿಗೂ ಮಿಗಿಲಾದ ಸಾಮಥ್ರ್ಯ ತೋರಿದ ಜೋನ್ ಆಫ್ ಆರ್ಕಳಿಗೆ  ಮಾಟಗಾತಿಯ ಪಟ್ಟ ನೀಡಿ ಸಮಾಜ ಆಕೆಯ ಕೊಲೆಯ ಸಂಚು ಮಾಡಿತ್ತು. ಅಪೂರ್ವ ಬುದ್ದಿವಂತಿಕೆಯಿಂದ ದೇಶವನ್ನು ಎರಡು ಅವಧಿಗೆ ಆಳಿದ ತೀಕ್ಷ್ಣಮತಿ ಇಂದಿರಾಗಾಂಧಿಯನ್ನು ಕೊಲೆಗೈಯಲಾಯಿತು. ನಾಲ್ಕು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ಪ್ರಗತಿಪರ ವಿಚಾರಧಾರೆಗಳ ಸುಂಟರಗಾಳಿ ಗೌರಿ ಲಂಕೇಶರ ಕೊಲೆಯಾಯಿತು. ಇವೆಲ್ಲವೂ ಮಹಿಳಾ ದ್ವನಿಯನ್ನು ಹತ್ತಿಕ್ಕುವ ಸಮಾಜದ ಕುತಂತ್ರವೂ ಆಗಿರಬಹುದಾದ ಸಾಧ್ಯತೆಗಳಿವೆ

ಹೌದು ಪುರುಷ ಸಮಾಜ ಸ್ತ್ರೀ ತನಗೆ ಪ್ರತಿಸ್ಪರ್ಧಿಯಾಗುವುದನ್ನು ಸಮಾನ ಸ್ಥಾನಕ್ಕೆ ಬೆಳೆಯುವುದನ್ನು ಇಷ್ಟಪಡುವುದಿಲ್ಲ. ಮೇಲ್ಮಟ್ಟದ ಹುದ್ದೆಗಳಲ್ಲಿ ಮಹಿಳೆಯ ಪ್ರಾತಿನಿಧ್ಯತೆ ತೀರಾ ಕಡಿಮೆ. ಉನ್ನತ ಹುದ್ದೆಗಳ ಆಯ್ಕೆಯಲ್ಲಿ ಇಪ್ಪತ್ತು ಜನ ಗಂಡಸರಿದ್ದರೆ, ಒಬ್ಬರೋ ಇಲ್ಲ ಇಬ್ಬರೋ ಮಹಿಳೆಯರಿರುವುದು ನಮ್ಮಲ್ಲಿ ತೀರಾ ಸಾಮಾನ್ಯ. ಇದಕ್ಕೆ ಕಾರಣ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಸ್ಪರ್ಧೆ ಬಹುತೇಕ ಕಡಿಮೆ.ದೊಡ್ಡ ಹುದ್ದೆಗೆ ತಮ್ಮಿಂದ ಸರಿಯಾದ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗದೆಂಬ ಮಹಿಳೆಯರ ಹಿಂಜರಿಕೆಯೂ ಇರಬಹುದು.ಇದು ಸಾಮಾಜಿಕ ಸಮಸ್ಯೆಗಿಂತ ಮಾನಸಿಕ ಸಮಸ್ಯೆಯಾಗಿರಬಹುದು, ಆದರೂ ಈ ಮಾನಸಿಕ ಒಪ್ಪಿತ ಮನಸ್ಥಿತಿಗೆ ಕಾರಣ ಕೂಡಾ ಸಮಾಜೀಕರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಹಿಳೆಯ ಬದುಕಿನ ಹಂತಹಂತದಲ್ಲೂ ಹೀಗೆ ಇರಬೇಕೆಂಬ ಅಲಿಖಿತ ನಿಯಮಗಳಿವೆ. ಹೆಣ್ಣು ಬಾಲ್ಯದಲ್ಲಿ ಹೀಗಿರಬೇಕು.ಯೌವನಕ್ಕೆ ಹೀಗೆ ವರ್ತಿಸಬೇಕು. ವೃದ್ಯಾಪ್ಯದಲ್ಲಿ ಹೀಗಿದ್ದರೆ ಚೆನ್ನ ಎಂಬ ಸಂಗತಿಗಳು ಆಕೆಯ ವ್ಯಕ್ತಿತ್ವ ವಿಕಸನಕ್ಕೆ ತಡೆಯನ್ನು ಒಡ್ಡುತ್ತ ಹೋಗುತ್ತವೆ. ಈ ಎಲ್ಲ ಸ್ತರಗಳನ್ನು ಸಾಮಾಜೀಕರಣದ ಕಟ್ಟಳೆಗಳು ಆಕೆಯ ಸುತ್ತ ಬೇಲಿಯನ್ನೆ ಹೆಣೆದಿವೆ.

ಕುಟುಂಬ ಸಮಾಜದ ಒಂದು ಭಾಗವಾಗಿದ್ದು,  ಕೌಟಂಬಿಕ ವ್ಯವಸ್ಥೆಯಲ್ಲಿ ಸ್ತ್ರೀಯರ ಬಗ್ಗೆ ಕಾಳಜಿ, ಪ್ರೀತಿ, ಜವಾಬ್ದಾರಿಗಳ ಹೆಸರಿನಲ್ಲಿ ಆಕೆಯ ಸಾಮಥ್ರ್ಯವನ್ನು ನಿರ್ದಿಷ್ಟ   ಫ್ರೇಮಿನ ಒಳಗಡೆಯಲ್ಲಿಯೇ ನೋಡಬಯಸುತ್ತದೆ ಸಮಾಜ.  ಅದರೊಂದಿಗೆ ಹೆಣ್ಣು ತಗ್ಗಿಬಗ್ಗಿ ನಡೆಯಬೇಕು. ಜೋರಾಗಿ ಮಾತನಾಡುವುದು ಅಸಭ್ಯ. ಹೊರಹೋದಾಗ ನಿರ್ಧಿಷ್ಟ ಸಮಯದೊಳಗಡೆ ಮನೆಯ ಸೇರಬೇಕು. ಎಲ್ಲಿಯಾದರೂ ಅರ್ದ ಗಂಟೆ ತಡವಾದರೂ  ಅಲ್ಲೊಂದು ಆಗಬಾರದ್ದು ಆಗೇ ಹೋಯಿತೆನ್ನುವ ಮನೋಭಾವ ಹೆತ್ತವರದ್ದು. ಇಂತಹ ಧೋರಣೆಯ ಸಮಾಜೀಕರಣದ ನೆಲಗಟ್ಟನ್ನು ಹೊಂದಿದ ದೇಶದಲ್ಲಿ  ಸ್ತ್ರೀ ಸಾಮಥ್ರ್ಯಗಳು ಸಹಜವಾಗಿಯೇ ಕುಂಠಿತವಾಗುತ್ತದೆ. ಈ ಪರಿಸರವನ್ನು ಮನೆಯಲ್ಲಿಯೇ ಸಿಧ್ಧಪಡಿಸಲಾಗುತ್ತಿದೆ. ವಿದ್ಯಾವಂತ ಸಮುದಾಯವೂ ಈ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ. ಹಿಗಿದ್ದಲ್ಲಿ ಸಮಾನತೆಯ ಪ್ರಯತ್ನದಲ್ಲಿ ಸ್ತ್ರೀ ಸ್ಪರ್ಧಿಸಲಾಗದೇ ಹಿಂದೆ ಬೀಳುತ್ತಿದ್ದಾಳೆ.

ರಾಜಕೀಯ ರಂಗದಲ್ಲಿ ಶೇಕಡಾ 33ರಷ್ಟು ಅವಕಾಶಗಳಿದ್ದಾಗಲೂ  ಸ್ತ್ರೀಯರ ತೊಡಗಿಸಿಕೊಳ್ಳುವಿಕೆ ಗಣನೀಯವಾಗಿ ಕಡಿಮೆ. ಕಾರಣ ಅಲ್ಲಿ ಹೆಂಗಳೆÀಯರ ಮೇಲೆ ನಡೆಯಬಹುದೆನ್ನುವ  ದೌರ್ಜನ್ಯಗಳ ಭೀತಿ. ಹೊರಪ್ರಪಂಚದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಪರಪುರುಷನೊಂದಿಗೆ ವ್ಯವಹರಿಸಬೇಕಾದ ಸಂದರ್ಭಗಳಲ್ಲಿ ಆಕೆಯ ನೈತಿಕತೆಯ ಪ್ರಜ್ಞೆ ಅದಕ್ಕೆ ಸಂಪ್ರದಾಯಸ್ಥ ಸಮಾಜದ ಕೊಂಕುನುಡಿಗಳು ಆಕೆಯ ಸಾಮಥ್ರ್ಯದ ಹೊರತಾಗಿಯೂ ಆಕೆಯಲ್ಲಿ ನಕಾರಾತ್ಮಕ ನಿಲುವನ್ನು ಬೆಳೆಸಿಬಿಡುತ್ತವೆ. ಇದರಿಂದ ಹೆಣ್ಣು ತನ್ನ ವ್ಯಕ್ತಿತ್ವಕ್ಕೆ ಕುಂದುಂಟಾಗುವ ಭಯದಿಂದ ಜನರ ಅವಹೇಳನಕರ ಮಾತಿಗಳಿಗೆ ಹೆದರಿ ರಾಜಕೀಯ ಪ್ರಪಂಚದಲ್ಲಿ ಇಲ್ಲ ಸಾಮಾಜಿಕ ಬದುಕಿನಲ್ಲಿ ಸ್ವತಂತ್ರವಾಗಿ ತೊಡಗಿಕೊಳ್ಳುವುದಿಲ್ಲ.

ಉದ್ಯೋಗ ರಂಗದಲ್ಲಿಯೂ ಈ ಕಿರುಕುಳದ ಸಾಧ್ಯತೆಗಳಿರುತ್ತವೆ.ಅಲ್ಲಿಯೂ ಲೈಂಗಿಕ ಕಿರುಕುಳದ ಸಾಧ್ಯತೆ ಇರುವುದು ಸಾಮಾನ್ಯವಾಗುತ್ತಿದೆ.  ಲೈಂಗಿಕ ಕಿರುಕುಳವೆಂದರೆ ಬರಿಯ ಬಲಾತ್ಕಾರವಷ್ಟೇ ಅಲ್ಲದೇ ಅದಕ್ಕೆ ಸಮಾನಾಂತರವಾದ ಮಾನಸಿಕ ಹಿಂಸೆ ಕೂಡಾ ಆಗಬಹುದು. ಮಹಿಳಾ ಸಹೋದ್ಯೋಗಿಗೆ ಡ್ರಾಪ್ ಕೊಡುವ ಪ್ರಸ್ತಾಪ ಮಾಡುವುದು, ಪುರುಷ  ಮೇಲಾಧಿಕಾರಿ ಕಛೇರಿ ಅವಧಿಗೂ ಹೆಚ್ಚು ಮಹಿಳಾ ಉದ್ಯೋಗಿಯನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅದಕ್ಕಾಗಿ ಒತ್ತಾಯಿಸುವುದು, ಅಗತ್ಯಕ್ಕೂ ಮೀರಿ ತನ್ನ ಛೇಂಬರಿಗೆ ಕರೆಯಿಸಿಕೊಳ್ಳುತ್ತ ಆಕೆಗೆ ಮುಜುಗರ ನೀಡುವುದು, ಆಕೆಯ ಮನಸ್ಸಿಗೆ ಹಿಂಸೆಯಾಗುವಂತೆ ವರ್ತಿಸುವ ಎಲ್ಲವೂ ಲೈಂಗಿಕ ದೌರ್ಜನ್ಯದ ಮುಖಗಳೇ ಆಗಿವೆ. ಮತ್ತು ಇವೆಲ್ಲವೂ ಆಧುನಿಕ ಜಗತ್ತಿನಲ್ಲಿ ಹೇರಳವಾಗಿ ನಡೆಯುತ್ತಲೂ ಇರುತ್ತವೆ. ಇಂತಹ ಸನ್ನಿವೇಷಗಳಲ್ಲಿ ಮುಗ್ಧ, ನಾಚಿಕೆ ಸ್ವಭಾವದ, ಎಳೆಯ ಅನುಭವದ ಯುವತಿಯರು ಬಹುಮಟ್ಟಿಗೆ ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾರೆ. ಆ ಕಾರಣದಿಂದಲೂ ಸ್ತ್ರೀ ಹೊರ ಜಗತ್ತಿನಲ್ಲಿ ತನ್ನ ಸಾಮಥ್ರ್ಯ ಉಪಯೋಗಿಸಿಕೊಳ್ಳದೇ ಅದು ಮನೆಯಲ್ಲಿಯೇ ಕೊಳೆತು ಹೋಗುತ್ತಿರುತ್ತದೆ.  ಈ ಹಿಂಜರಿಕೆಯ ಮನೋಧರ್ಮವನ್ನು ಬೆಳೆಸುತ್ತಿರುವುದು ಸಮಾಜೀಕರಣದ ಸಿದ್ಧಾಂತಗಳು. ಹೆಣ್ಣು ಅತಿಯಾಗಿ ಹೊರಜಗತ್ತಿಗೆ ತೆರೆದುಕೊಂಡಷ್ಟು  ಸಮಾಜ ಆಕೆಯನ್ನು ಕಾಮಾಲೆ ಕಣ್ಣನಿಂದ ನೋಡುತ್ತಿರುತ್ತದೆ ಅದು 21 ನೇ ಶತಮಾನದ ಇಂದಿಗೂ ಬದಲಾಗಿಲ್ಲ.

ಅದೂ ಅಲ್ಲದೇ ಮೇಲಾಧಿಕಾರಿಣಿ ಹೆಣ್ಣಾಗಿದ್ದರೆ, ಪುರುಷ ಸಹೋದ್ಯೋಗಿಗಳು ಅದನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅಲ್ಲದೇ ಆಕೆಯ ಸಾಮಥ್ರ್ಯದ ಕುರಿತೇ ಕೊಂಕು ನುಡಿಯುತ್ತಿರುತ್ತಾರೆ.  ಇದೆಲ್ಲವೂ ಮಹಿಳೆಯ ಸಾಮಥ್ರ್ಯವನ್ನು ದನಿಯನ್ನು ಕುಂಠಿತಗೊಳಿಸುವ ಪ್ರಯತ್ನವೇ ಆಗಿದೆ.ಇವೆಲ್ಲಕ್ಕೂ ಉತ್ತರವಾಗಿ  ಸ್ತ್ರೀ ಸಾಮಥ್ರ್ಯಕ್ಕೆ ದ್ಯೋತಕವಾಗಿ ಇಂದಿನ ಹೆಣ್ಣು ಹೆಜ್ಜೆ ಇಡಬೇಕಾದ ಅಗತ್ಯತೆ ಇದೆ. ತನ್ನ ಸಾಮಥ್ರ್ಯದ ಅರಿವನ್ನು ಅರಿತುಕೊಂಡು ಸಮಂಜಸವಾದ ರೀತಿಯಲ್ಲಿ ತಾರ್ಕಿಕವಾಗಿ ಯೋಚಿಸುತ್ತ, ಅವಕಾಶಗಳನ್ನು ಕೈಬಿಡದೆ, ಮುಂದುವರೆದರೆ ಭವಿಷ್ಯದಲ್ಲಿ ಆಶಯ ಗೋಚರಿಸಬಹುದು.
– ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Bhoomika shetty
Bhoomika shetty
6 years ago

Kavitha lankesh alla Gauri lankesh murder agiddu

1
0
Would love your thoughts, please comment.x
()
x