ಸ್ತ್ರೀ ದೇಹ –ಅದರ ಅಧಿಪತ್ಯ: ನಾಗರೇಖಾ ಗಾಂವಕರ

ಕೆಲವು ತಿಂಗಳುಗಳ ಹಿಂದೆ ಲಾಹೋರಿನ 16 ವರ್ಷದ ಬಾಲಕಿಯ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆ ಬಾಲಕಿಯ ಅಣ್ಣ ಉಮರ್ ವಡ್ಡಾ ಎಂಬಾತ ಅಶ್ಪಾಕ್ ಎಂಬ ಯುವಕನ ತಂಗಿಯ ಮೇಲೆ ಅತ್ಯಚಾರ ಎಸಗಿದ. ಇದನ್ನು ಸೇಡಿಗೆ ತೆಗೆದುಕೊಂಡ ಆ ಯುವಕ ಆತನ ತಂಗಿಯನ್ನು ಆಕೆಯ ಕುಟುಂಬ ಎಲ್ಲರೆದುರೇ ಅತ್ಯಾಚಾರ ಮಾಡಿದ್ದ. ಹೀಗೆ ಮಾಡುವಂತೆ ಅಲ್ಲಿಯ ಗ್ರಾಮ ಮಂಡಳಿಯೇ ತೀರ್ಮಾನ ತೆಗೆದುಕೊಂಡು ಆತನಿಗೆ ಆದೇಶಿಸಿತ್ತು. ಹಾಗೆ ಮಾಡಿದಾಗ ಮಾತ್ರ ಆ ಮತ್ತೊಬ್ಬ ಯುವಕನ ತಂಗಿಗೆ ನ್ಯಾಯ ನೀಡಿದಂತಾಗುವುದು ಎಂಬ ವಿಚಿತ್ರ ಕಾನೂನು ಹೊರಡಿಸಿದ ಆ ಗ್ರಾಮ ಮಂಡಳಿಯ ನಿರ್ಧಾರವನ್ನು ನಾಗರಿಕ ಸಮಾಜ ಜಿರ್ಣಿಸಿಕೊಳ್ಳುವುದು ಅದು ಹೇಗೆ?ಎಂತಹ ಅನಾಗರಿಕತೆ. ಆತನ ದುವರ್ತನೆಗೆ ಶಿಕ್ಷೆಯನ್ನು ಅತ್ಯಾಚಾರ ಮಾಡಿದ ವ್ಯಕ್ತಿಗೆ ನೀಡದೇ ಆತನ ತಂಗಿಗೇ ನೀಡಿ ವಿಕೃತತೆ ಮೆರೆದ ಪುರುಷ ಸಮುದಾಯದ ಈ ಬೀಬತ್ಸ ವರ್ತನೆಗೆ ಏನೆನ್ನೋಣ? ಯಾವ ಅನ್ಯಾಯ ಮಾಡದ ಮುಗ್ಧ ಹುಡುಗಿಯರ ಬದುಕು ವಿಕೃತ ಮನಸ್ಸಿನ ಪುರುಷರಿಂದ ಭ್ರಷ್ಟಗೊಳಿಸಲ್ಪಟ್ಟಿತು. ಇದಕ್ಕೆ ಮೂಲ ಹೆಣ್ಣನ್ನು ಸಮಾಜ ನೋಡುವ ಪರಿಗೆ ಬದಲಾಯಿಸಿದರೆ ಅರಿವಾದೀತು. ಸ್ತ್ರೀ ದೇಹ ಪುರುಷನ ಸ್ವತ್ತು ಎಂಬ ನಿರ್ಧಾರ ಹೊಂದಿದ ಸಮಾಜದ ದೃಷ್ಟಿ ವಿಚಿತ್ರವಾದರೂ ಸತ್ಯ. ಹೆಣ್ಣು ಎಂದಾಕ್ಷಣ ಭೋಗದ ಕಲ್ಪನೆ ಮೂಡಿಸುವ ಅದನ್ನು ವೈಭವೀಕರೀಸುವ ತಂತ್ರಗಳೇ ಜಗತ್ತಿನುದ್ದಕ್ಕೂ ಹೆಣೆಯಲ್ಪಟ್ಟಿವೆ.

ಭಾರತದಲ್ಲಿ ದಿನನಿತ್ಯ ಪ್ರತಿ 10 ನಿಮಿಷಕ್ಕೆ ಒಂದು ಲೈಂಗಿಕ ದೌರ್ಜನ್ಯ, ಇಪ್ಪತ್ತು ನಿಮಿಷಕ್ಕೊಂದು ಅತ್ಯಾಚಾರವಾಗುತ್ತದೆ ಎಂಬ ವರದಿಯನ್ನು ಕೇಳಿದ್ದೇವೆ, ಹೀಗೆ ಸ್ತ್ರೀ ದೇಹದ ಮೇಲೆ ಅನ್ಯಾಯಗಳು ಆಗುತ್ತಲೇ ಇರುತ್ತವೆ. ಇನ್ನು ಬಾಲಕಿಯರನ್ನೂ ಒಳಗೊಂಡು ಲೈಂಗಿಕ ಕಿರುಕುಳ ನಡೆಯುತ್ತಲೆ ಇದೆ. ಇದು ಬರೀಯ ಅತ್ಯಾಚಾರ ಮತ್ತು ವಿಕೃತ ಮನಸ್ಸಿನ ಅತ್ಯಾಚಾರಿಗಳಿಗೆ ಸಂಬಂಧ ಪಟ್ಟಿಲ್ಲ. ಸುಶಿಕ್ಷಿತ ಸಮಾಜ ಕೂಡಾ ಸ್ತ್ರೀ ಧೌರ್ಜನ್ಯ ಎಸಗುವುದರಲ್ಲಿ ಇದಕ್ಕಿಂತ ಮುಂದಿದೆ.

ಉದಾಹರಣೆಗೆ ಸಿನೇಮಾರಂಗದಲ್ಲಿ ಕಳೆದೆರಡು ದಶಕಗಳಿಂದ “ಕ್ಯಾಸ್ಟಿಂಗ್ ಕೌಚ್ “ಎಂಬ ಅಸಹ್ಯದ ಪರಂಪರೆ ಭೂತಾಕಾರವಾಗಿ ಬೆಳೆಯುತ್ತಿದೆ. ಸಿನೇಮಾದಲ್ಲಿ ನಟಿಸಲು ಅವಕಾಶ ನೀಡುವ ನೆಪದಲ್ಲಿ ನಟಿಯರನ್ನು ತಮ್ಮ ಲೈಂಗಿಕ ತೃಪ್ತಿಗೆ ಬಳಸಿಕೊಳ್ಳುವುದು. ಕೆಲವೊಮ್ಮೆ ನಟಿಯರ ವಿರೋಧದ ನಡುವೆಯೂ ದೌರ್ಜನ್ಯ ಎಸಗುವುದು ಸಾಮಾನ್ಯ ಸಂಗತಿ. ಸಿನೇಮಾದಲ್ಲಿ ನಟಿಸುವ ಇರಾದೆಯಿಂದ ಬರುವ ನಟಿಮಣಿಗಳು ಅವಕಾಶಕ್ಕಾಗಿ ಹಲ್ಲುಗಿಂಜುತ್ತಾರೆಂಬದನ್ನು ತಿಳಿದುಕೊಳ್ಳುವ ಪುರುಷ ಮಣಿಗಳು ನಿರ್ದೇಶಕನಿಂದ ಹಿಡಿದು ಕ್ಯಾಮರಾಮನ್ಗಳವರೆಗೂ ಇಂತಹ ಹೆಣ್ಣುಗಳ ಗೋಳು ಹೊಯ್ದುಕೊಳ್ಳುವುದರಲ್ಲಿ ನಿಸ್ಸಿಮರು. ಹಾಗಾಗಿ ಕೆಲವು ಸಮರ್ಥ ನಟಿಯರು ಕೆಲವೊಮ್ಮೆ ಅವಕಾಶ ವಂಚಿತರಾಗುವುದು ಇದೆ. ಇದು ನಟಿಯರನ್ನು, ಪೋಷಕ ನಟಿಯರನ್ನು ,ಕೊನೆಗೆ ಐಟಂ ಸಾಂಗ ನೃತ್ಯಗಾರ್ತಿಯರನ್ನು ಬಿಡದೆ ಶೋಷಣೆ ಜೀವ ಹಿಂಡುತ್ತದೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿವ ಹಿರೋಯಿನ್ಗಳ ಮೆರೆಸುವ ನಿರ್ಮಾಪಕರು ನಿರ್ದೇಶಕರು ಇದ್ದಾರೆ. ಆದರೆ ಬಹಳ ಸಂದರ್ಭಗಳಲ್ಲಿ ಮರ್ಯಾದೆ, ಅವಕಾಶ ನೀಡಿದ್ದಕ್ಕಾಗಿ ಉಪಕಾರ ಸ್ಮರಣೆ ಹೀಗೆ ಈ ನಟಿಮಣಿಗಳು ಸಹಕರಿಸುವುದು ಆ ದೌರ್ಜನ್ಯಕ್ಕೆ ಸ್ವತಃ ತಾವೇ ಬಲಿಯಾಗುವುದು ಇದೆ. ಇದೊಂದು ಸಾಮಾಜಿಕ ಪಿಡುಗಿನಂತೆ ಹಬ್ಬಿ ಬೆಳೆಯುತ್ತಿದೆ.

ಇದು ಬರೀಯ ಬಣ್ಣದ ಲೋಕ ಎಂದೆ ಹೆಸರಾದ ಸಿನೇಮಾ ರಂಗಕ್ಕೆ ಸೀಮಿತವಾಗಿಲ್ಲ. ಐಟಿಬಿಟಿ ಕ್ಷೇತ್ರಗಳಲ್ಲಿ,ಸರಕಾರಿ ಉದ್ಯೋಗ ಕ್ಷೇತ್ರಗಳಲ್ಲಿ,ಫ್ಯಾಕ್ಟರಿಗಳಲ್ಲಿ,ಗಾರ್ಮೆಂಟ್ಸುಗಳಲ್ಲಿ ಹೀಗೆ ಎಲ್ಲ ಕಡೆಗಳ ಬೇರೆ ಬೇರೆ ರೂಪದಲ್ಲಿ ತಾಂಡವವಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣವೆಂದರೆ ಆಯಕಟ್ಟಿನ ಸ್ಥಳಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಪುರುಷನಿರುವುದು, ಮಹಿಳೆ ಇಂತಹ ಅವಸ್ಥೆಗೆ ಬಲಿಯಾಗುತ್ತಿದ್ದಾಳೆ. ಇನ್ನೂ ವಿಪರ್ಯಾಸವೆಂದರೆ ಅಕ್ಷರ ಲೋಕ ಸಾತ್ವಿಕ ಲೋಕವೆಂದೆ ಪ್ರಸಿದ್ಧ. ಇಂತಿದ್ದು ಸಾಹಿತ್ಯ ಲೋಕವೂ ಕ್ರಮೇಣ ಇಂತಹ ಅಸಭ್ಯ ಅಸಹ್ಯದ ತಾಣವಾಗುತ್ತಿರುವುದು ವಿಪರ್ಯಾಸ. ನಿಜಕ್ಕೂ ಶಿಕ್ಷಿತ ಸಮುದಾಯವೇ ಲೋಕಕ್ಕೆ ಜ್ಷಾನದ ಸವಿ ಉಣಬಡಿಸ ಹೊರಟಿರುವ ಸುಜ್ಷಾನಿಗಳೇ ಇಂದು ಇಂತಹ ವೈವಸ್ಥೆಯನ್ನು ನಿರ್ಮಾಣ ಮಾಡುತ್ತಿರುವುದು ಅಷ್ಟೇ ಅನಾಗರಿಕತೆಯ ಸಂಕೇತ. ಸಾಹಿತ್ಯ ಸೇವೆಗೆ ಹೊರಟಿರುವ ಎಷ್ಟೋ ಪ್ರತಿಭಾವಂತರು ಆ ಪರಿಸ್ಥಿತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗಗಳ ರೂಪಿಸಿಕೊಳ್ಳಬೇಕಾಗುತ್ತದೆ. ಶೋಷಣೆಗೆ ಒಳಗಾಗುವುವುದು ಕೂಡಾ ಅಪರಾಧವೇ. ಆದಾಗ್ಯೂ ಕಾಣುವ ಪ್ರಮುಖ ಸಂಗತಿ ಎಂದರೆ ಸ್ತ್ರೀ ದೇಹ ಎಂದ ಕೂಡಲೇ ಅಲ್ಲಿ ದೇಹ ವಾಸನೆಯೇ ಮುಖ್ಯವಾಗಿ ಗಣಿಸಲ್ಪಡುವುದು

ಆ ಮೂಲದಲ್ಲಿಯೇ ವಿಶ್ಲೇಷಿಸುತ್ತಾ ಹೋದರೆ ಆಧುನಿಕರಣದ ಇಂದಿನ ಜಗತ್ತಿನಲ್ಲೂ ಹೆಣ್ಣು ಶರೀರ ಬರೀಯ ಭೋಗದ ಒಂದು ಮಾದ್ಯಮವಾಗಿಯೇ ಹೆಚ್ಚು ಹೆಚ್ಚು ದಮನಿಸಲ್ಪಡುತ್ತಿದೆ. ಸಮೂಹ ಮಾಧ್ಯಮಗಳಲ್ಲಿ ಜಾಹೀರಾತುಗಳಲ್ಲಿ ಆಕೆಯ ದೇಹಸಿರಿಯನ್ನು ಸರಕಾಗಿ ಬಳಸಿ ಅದನ್ನು ವೈಭವೀಕರಿಸಿ ತೋರಿಸುವುದು,ವ್ಯಾಪಾರೀಕರಣದ ಉದ್ಧೇಶಕ್ಕೆ ಆಕೆಯ ದೇಹ ಸಂವೇದನೆ ಸತ್ತ ನಿರ್ಜೀವ ವಸ್ತುವಂತೆ ಉಪಯೋಗಿಸುವುದು. ಆಮೀಷಕ್ಕೊಳಗಾದ ಹೆಣ್ಣು ಕೂಡಾ ತನ್ನ ಮಾರಿಕೊಂಡಿರುವುದು ಪುರುಷ ವ್ಯವಸ್ಥೆಯ ಅಟ್ಟಹಾಸಕ್ಕೆ ಕೈಗನ್ನಡಿ. ಸ್ತ್ರೀ ದೇಹವೆಂಬುದು ಭೋಗಲಾಲಸೆಯ ದೃಷ್ಟಿಯಿಂದ ವ್ಯಾಪಾರೀಕರಣದ ಸರಕಂತೆ ಬಳಸುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಆಕೆಯ ದೇಹ ಭಾಗಗಳ ಛೇದನ ನಡೆಯುತ್ತದೆ. ಆಕೆಯ ದೈಹಿಕ ಬಯಕೆಗಳ ನಿಯಂತ್ರಿಸಲು ಬಾಲ್ಯದಲ್ಲಿಯೇ ಜನನಾಂಗ ಛೇದನದಂತಹ ಕೆಟ್ಟ ಕ್ರೂರ ಆಚರಣೆಗಳು ನಮ್ಮ ಭಾರತದಲ್ಲೂ ಇದೆಯೆಂಬುದು ಅರಗಿಸಿಕೊಳ್ಳಲಾಗದ ಸಂಗತಿ. ಹೆಣ್ಣು ಎಂದೊಡನೆ ಬರೀಯ ಕಾಮ ವಾಂಛೆಗೆ ಸಾಧನದಂತೆ ಕಂಡುಬರುವುದು ವಿಕೃತ ಸಮಾಜದ ಮಾನಸಿಕ ಅಸಂತುಲಿತತೆ.

ಹೆಣ್ಣು ಎಂದಾಕ್ಷಣ ಉದ್ಭವಿಸುವ ಪರಿಕಲ್ಪನೆಯಲ್ಲಿ ಬದಲಾವಣೆ ಆಗಬೇಕಾದ ಅಗತ್ಯವಿದೆ. ಯಾಕೆಂದರೆ ಸಂಪ್ರದಾಯಶೀಲ ಭಾರತದಲ್ಲಿ ಸ್ತ್ರೀತ್ವವನ್ನು ದೇಹದೊಂದಿಗೆ ಬೆಸೆದುಕೊಂಡ ಜೈವಿಕ ಲಿಂಗದ ಪರಿಕಲ್ಪನೆಯಲ್ಲಿಯೇ ಗೃಹಿಸುವ ಪರಿಪಾಟವಿದೆ. ಲಿಂಗ ಮತ್ತು ಲಿಂಗತ್ವ ಎರಡೂ ಭಿನ್ನ ವಿಚಾರಗಳೇ ಆದರೂ ಭಾರತದಲ್ಲಿ ಅವು ಏಕರೂಪದಲ್ಲೇ ಪರಿಗಣಿಸಲ್ಪಡುತ್ತವೆ, ದೈಹಿಕ ಅಬಲತೆ ಮತ್ತು ಅತ್ಯಾಚಾರದ ಹಿನ್ನಲೆಯಲ್ಲಿ ಅನುಲಕ್ಷಿಸಿದಾಗ ಸ್ತ್ರೀ ಎಂದರೆ ಬರೀಯ ಗರ್ಭಕೋಶ ಎಂಬ ಕ್ಷುಲಕ ಸಾರ್ವತ್ರಿಕ ಭಾವನೆ ಸಾಮಾಜೀಕರಣದ ನೆಲೆಯಲ್ಲಿ ಗುರುತಿಸಲ್ಪಟ್ಟಿರುವುದು ದೊಡ್ಡ ವಿಪರ್ಯಾಸ ಮತ್ತು ದೌರ್ಜನ್ಯದ ಸಂಕೇತವೂ ಹೌದು. ಹೆಣ್ಣು ಈ ಹಿನ್ನೆಲೆಯಲ್ಲಿಯೇ ಪರಿಗಣಿಸಲ್ಪಟುತ್ತಾ ದೌರ್ಜನ್ಯಕ್ಕೆ ಒಳಗಾಗುತ್ತ ಇರುವುದಕ್ಕೆ ಇದೇ ಕಾರಣ. ಹಾಗಾಗೇ ಭಾರತದಲ್ಲಿ ಸ್ತ್ರೀ ಭೌತಿಕತೆಗೆ ಸಮಾಜ ನಿರ್ದಿಷ್ಟ ಕಟ್ಟುಪಾಡು, ವಿಶಿಷ್ಟ ಕಾರ್ಯಸೂಚಿಗಳ ಹೆಣೆದು ಒಪ್ಪ ಓರಣಗೊಳಿಸಿದೆ.

ಇದು ಬದಲಾಗಬೇಕಾದ ಅಗತ್ಯ ಇಂದಿನ ಜರೂರು. ಹೆಣ್ಣು ಆಕೆಯ ದೇಹ ಒಡತಿ ಆಕೆಯೇ. ಅದರ ಅದಿಪತ್ಯ ವಹಿಸುವ ಅಧಿಕಾರ ಅವಳದೇ ಎಂಬ ಧೊರಣೆ ಬೆಳೆಯಬೇಕಾಗಿದೆ. . ಇದರರ್ಥ ಹೆಣ್ಣು ಮತ್ತು ಗಂಡು ಎರಡೂ ಒಂದೇ ಎಂಬ ಸಮಾನ ಮನೋಧರ್ಮ ಸಾಮಾಜಿಕ ಜೀವನದಲ್ಲಿ ಆ ಪರಿಪಾಲನೆ ಬರಬೇಕಾಗಿದೆ. ಸ್ತ್ರೀ ಎಂದರೆ ಬರೀಯ ದೇಹವಲ್ಲ. ವ್ಯಕ್ತಿತ್ವ ಎಂಬ ಸತ್ಯ ಅರಿವಾಗಬೇಕಾಗಿದೆ. ಹಾಗೂ ಆ ಗೃಹಿಕೆ ಬಂದಾಗಲೇ ಭಾರತದಲ್ಲಿ ಹೆಣ್ಣಿನ ಧ್ವನಿ ಸ್ಪಷ್ಟಗೊಳ್ಳಬಹುದು. ಅಲ್ಲೂ ಕೂಡಾ ಮಹಿಳಾ ಮಣಿಗಳೇ ಸಕಾರಣ ಬದ್ಧರಾಗಿ ಸಹಕಾರ ತೋರುವುದು ಮತ್ತದಕ್ಕೆ ಪುರುಷನ ಸಹಮತವೂ ಅತೀ ಅಗತ್ಯ.
– ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x