ಸ್ತ್ರೀತ್ವದ ನೆಲೆ ಬೆಲೆ: ನಾಗರೇಖಾ ಗಾಂವಕರ

nagarekha

ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ?ಅದು ಆತನ ದೈಹಿಕ ಬಯಕೆ ಮಾತ್ರವೇ ಅಥವಾ ಮಾನಸಿಕ ಬೌದ್ಧಿಕ ಚಿಂತನೆಗಳಿಗೂ ಅನ್ವಯಿಸುತ್ತದೆಯೇ ಎಂದೆಲ್ಲಾ ಚಿಂತಿಸಿದರೆ ಮೂಡುವ ಉತ್ತರ ಸ್ಪಷ್ಟ. ಹೆಣ್ಣಿನ ಸಂವೇದನೆಗಳು ತಳಮೂಲದಲ್ಲಿ ಪಲ್ಲವಿಸುತ್ತವೆ. ಆಕೆ ವಿಸ್ತಾರಕ್ಕಿಂತ ವಿಶಾಲಕ್ಕಿಂತ ತನ್ನ ನೆಲೆಯಲ್ಲಿ ನೆಲದಲ್ಲಿ  ಆಳಕ್ಕಿಳಿದು ಬೇರೂರಲು ಬಯಸುತ್ತಾಳೆ. ಗಂಡಿನ ವಿಶಾಲ ಪ್ರಪಂಚದೆದುರು ಆಕೆ ಸಂಕುಚಿತವೆನಿಸಿದರೂ ಸ್ತ್ರೀ ಮೂಲವನ್ನು ಗಂಡು ಸಂಪೂರ್ಣ ಅರಿಯಲಾರ. 

ಸ್ತ್ರೀ ಪ್ರಕೃತಿ. ಸೌಂದರ್ಯದ ಖನಿ. ಜೀವ ನೀಡುವ ಜಾತೆ, ನಿರ್ಜಿವವನ್ನು ತನ್ನೊಳಗೆ ಸೆಳೆದುಕೊಂಡು ಮುಕ್ತಿ ನೀಡುವ ಚೈತನ್ಯದಾತೆ. ಪ್ರಕೃತಿ ಭಾವುಕತೆಗೆ ಇನ್ನೊಂದು ಹೆಸರು. ಅದಲ್ಲದೇ ಪ್ರಕೃತಿ ಕಠೋರತೆಯನ್ನು ಕರಗಿಸಿ ಆಹ್ಲಾದ ನೀಡುತ್ತದೆ. ಹೆಣ್ಣು ಆ ಕೈಕಂರ್ಯದಲ್ಲಿ ಆಸಕ್ತಳೂ ಕೂಡ. ತನ್ನಿಂದಾಗುವ ತನ್ನ ಪಾಲಿಗಿರುವ ಕೆಲಸ ಮುತುವರ್ಜಿಯಿಂದ, ಹುರುಪಿಂದ ಮಾಡುವ ಹೆಣ್ಣು ಅವಮಾನವನ್ನೂ, ಅನ್ಯಾಯವನ್ನೂ ಅದೇ ಮುತುವಜಿಯಿಂದ ಸಹಿಸುತ್ತಾ ಪುರುಷನ ಬದುಕನ್ನು ಸಹ್ಯವಾಗಿಸುತ್ತಾಳೆ. ಪುರುಷನದು ತತ್ವಶಾಸ್ತ್ರ ಅಥವಾ ತತ್ವಜ್ಞಾನಿಯ ಪೋಸು. ಆಹ್ಲಾದತೆಯಲ್ಲಿ ಕಠೋರತೆಯನ್ನು ಕಾಣಬಯಸುತ್ತಾನೆ. ತತ್ವಶಾಸ್ತ್ರದಂತೆ  ಪ್ರಕೃತಿಯ ರಹಸ್ಯಗಳನ್ನು ಭೇಧಿಸುವ ಅದರಲ್ಲಿಯ ಸತ್ವವನ್ನು ಹೊರತೆಗೆದು ತನ್ನದೇ ಸಮರ್ಥನೀಯ ವ್ಯಾಖ್ಯಾನ ನೀಡುವ ಜಿಜ್ಞಾಸು. ತನ್ನ ವರ್ತುಲದೊಳಗೆ ತಾನೆ ಶ್ರೇಷ್ಟ ಎಂಬ ನ್ಯಾಯಾಲಯವನ್ನು ನಿರ್ಮಿಸಿ ಹೆಣ್ಣನ್ನು ಅಸಹಾಯಕಿ ಎಂಬ ತೀರ್ಪು ನೀಡುವ ನ್ಯಾಯಾಧೀಶ. ಆದರೆ ಇದು ಮೇಲ್ಪದರದ ಜ್ಞಾನ ಪಡೆದ ಪುರುಷನ ವ್ಯಾಖ್ಯಾನವಷ್ಟೇ. ತತ್ವಜ್ಞಾನಿಗೆ ಪ್ರಕೃತಿಯ ಮೂಲ ಅರಿವು ಅನಿವಾರ್ಯ. ಅದರಲ್ಲಾತ ಸಂಪೂರ್ಣ ತೊಡಗಿಸಿಕೊಂಡಾಗಲೇ ಅದರ ಆಳ ಅಗಲಗಳ ತಿಳಿವು ಮೂಡಲು ಸಾಧ್ಯ. 

ಸಮಾಜ ಆಕೆಯನ್ನು ಅಬಲೆ ದುರ್ಬಲೆ ಪದಗಳಿಂದ ಮುಕ್ತಗೊಳಿಸದೆ ಇಂದಿಗೂ  ಹುಟ್ಟುತ್ತಲೇ ಕಟ್ಟಲೆಗಳ ಬೇಡಿಯನ್ನು ತೋಡಿಸುತ್ತಲೇ ಹೋಗಿ ಆಕೆ ಅಸಹಾಯಕಳು ಎಂಬ ಲೆಬೆಲ್‍ನ್ನು ತಾನಾಗಿಯೇ ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ಇನ್ನು ನೈತಿಕತೆಯ ವಿಚಾರಗಳು ಹೆಣ್ಣಿಗೆ ಮಾತ್ರ ಎಂಬ ಚಿಂತನೆಯಲ್ಲಿ ಹುರುಳಿಲ್ಲ. ತಾಯಿ ಮೊದಲ ಗುರು ಎಂಬ ಹೆಗ್ಗಳಿಕೆ ಇಷ್ಟವೇ ಆದರೂ ಮಕ್ಕಳ ನೆಪ ಮಾಡಿ ಆಕೆಯ ವ್ಯಕ್ತಿತ್ವವನ್ನು ಹೆತ್ತ ಕುಡಿಗಳೆದುರು ಶ್ರೇಷ್ಟ ಮಾಡಿ  ಅವಳ ಆಕಾಂಕ್ಷೆಗಳಿಗೆ ಬೇಲಿ ಹಾಕುವ ತಂತ್ರಗಳು ಸುಸ್ಪಷ್ಟ. ಇಂತಹ ಪ್ರಯತ್ನಗಳು ಇಂದಿನ ಕಾಲಕ್ಕೆ ಅಪ್ರಶ್ತುತ ಎಂದೆನಿಸುತ್ತದೆ. 

ಹಿಂದೆಲ್ಲಾ ಅಜ್ಜಿಯಂದಿರು  ಹೇಳುತ್ತಿದ್ದರು “ಹೆಣ್ಣು ಮಡಿಕೆ ಇದ್ದಂಗೆ, ಗಂಡು ತಾಮ್ರದ ಗಡಿಗೆ ಇದ್ದ ಹಾಗೆ. ಮಡಿಕೆ ಒಮ್ಮೆ ಒಡೆದ್ರೇ ಹೋಯ್ತು. ಅದೇ ತಾಮ್ರದ ಗಡಿಗೆ ಜಜ್ಜಿದರೂ ಮತ್ತೆ ರಿಪೇರಿ ಮಾಡಿಸ್ಬೋದು ಅಂತಾ”ಎಂತಹ ವಿಚಿತ್ರ ಅಂದ್ರೆ ಪುರುಷ ಸಮಾಜ ಕಟ್ಟಿಕೊಟ್ಟ  ಈ ರೀತಿ ರಿವಾಜುಗಳನ್ನು ಕಾಯಲಿರುವ ಮಹಿಳಾ ಕಾವಲುಗಾರ್ತಿಯರು ನಾವೇ ಎಂಬಂತೆ  ಪದೇ ಪದೇ ಆದೇ ಮಾತು ಹೇಳುತ್ತಿದ್ದರು. ಹೆಣ್ಣಾಗಿ ಹುಟ್ಟಿರುವುದೇ ಪ್ರಾರಬ್ಧ ಎಂದು ಅಣಕಿಸಿದಂತೆ. ಆದರೆ ಇಂದು  ಕಾಲ ಬದಲಾದಂತೆ ವ್ಯಕ್ತಿಸ್ವಾತಂತ್ರ್ಯದ ಮಜಲುಗಳು ಬದಲಾಗಿವೆ. 

ಸ್ತ್ರೀ ಸಂವೇದನೆಯನ್ನು,ಮನಸ್ಸಿನ ವ್ಯಾಪಾರವನ್ನು ಸಹಜವಾಗಿ ಲೋಕ ತಿರಸ್ಕಾರದಿಂದಲೇ ನೋಡುತ್ತದೆ. ಆಕೆಯದು ವಾಸ್ತವಕ್ಕಿಂತ ಕಲ್ಪನೆಯ ಜಗತ್ತು ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ನಿಜದ ಅರ್ಥದಲ್ಲಿ ಅದೇ ಬದುಕಿನ ಹುರುಪು ಆಕೆಗೆ. ಆಕೆ ಗೃಹಿಣಿಯಾಗಿ ಮಕ್ಕಳ ಲಾಲನೆ ಪಾಲನೆಯೊಂದಿಗೆ ಸಂಸಾರದ ಹೊರೆ ಹೊತ್ತು ಸವೆಯುತ್ತಾ ನರಳುವ ನಾಲ್ಕು ಗೋಡೆಗಳಿಗೆ ಸೀಮಿತವಾದ ಕಾಲದಲ್ಲಿ ಕನಸಿನ ಕಲ್ಪನೆಯ ಜಗತ್ತು ಆಕೆಯನ್ನು ಶ್ರೀಮಂತಗೊಳಿಸಿದವು. ಬದುಕಿನ ಆಸೆಯನ್ನು ಹೆಚ್ಚಿಸಿರಬಹುದು. ಹಾಗಾಗೇ ಹೆಣ್ಣು ಸಹಜವಾಗಿ ಭಾವಪ್ರಪಂಚದಲ್ಲಿ ಮಿಂದೇಳುವುದನ್ನು ಬಯಸುತ್ತಾಳೆ. ತನ್ನ ಸುತ್ತಲಿನ ಪರಿಸರವನ್ನು ಪ್ರೀತಿಸುತ್ತಾಳೆ. ಎಲ್ಲರೊಂದಿಗೆ ಬೆರೆತು ಬದುಕುವ ಹಂಬಲದಲ್ಲಿ ಹೆಚ್ಚಿನ ಆಸೆ ಅವಳದು

ಆದಾಗ್ಯೂಹೆಣ್ಣಿನ ಸಂರಚನೆ ದೈಹಿಕವಾಗಿ ಮಾನಸಿಕವಾಗಿ ಭಿನ್ನವಾದರೂ ಆಕೆಯೊಳಗೊಬ್ಬ ಪುರುಷನಿರುವುದು ಅಷ್ಟೇ ಸತ್ಯ. ಆಕೆ ಮಮತಾಮಯಿ. ಅಂತಃಕರುಣಿ ಕೋಮಲೆ ಹೀಗೆಲ್ಲ ಬಣ್ಣಿಸಲಾಗಿದ್ದರೂ ಕುಸುಮ ಕೋಮಲೆಯೂ ಕೂಡ ವಜ್ರದಂತೆ ಕಠಿಣ ಕಠೋರವೂ ಆಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹಾಗೆಂದು ಆ ಸಮರ್ಥನೆಗೆ ವೇದ ಪುರಾಣದ ಸ್ತ್ರೀ ಪಾತ್ರಗಳ ಉದಾಹರಣೆಯೇ ಬೇಕಿಲ್ಲ. ಸಾಮಾನ್ಯ ಸ್ತ್ರೀಯ ಅನುಭವ ಸಾರಗಳೇ ಸಾಕು ಅವುಗಳ ಸಿದ್ಧಪಡಿಸಲು. ಜಾನಪದ ಸಾಹಿತ್ಯದ ಹಿರಿದಿಮ್ಮಿಯ ಪಾತ್ರದ ಅರಿವಿದ್ದವರೂ ಆ  ಕೋಮಲೆ ಹೇಗೆ ಕಠೋರ ಕಾಳಿಯಾದಳು ಎಂಬುದನ್ನು ಅರಿತಿರಬಹುದು. ಅವಳಿಗೆ ಗೊತ್ತಿಲ್ಲದೇ ಅವಳ ಒಳಗೊಳಗೆ ಪ್ರೀತಿಸುತ್ತಿದ್ದ ಮನೆಗೆಲಸದವ ತನ್ನ ಪತಿಯ ಹತ್ಯೆಗೈದಾಗ  ಚಂಡಿಯಾದ ಆಕೆ ಹೇಗೆ ಆತನ ರುಂಡ ಚೆಂಡಾಡಿದ ಕಥೆ ಆಕೆಯ ಸ್ತ್ರೀತ್ವದ ನೆಲೆಯೊಳಗೆ ಗುಪ್ತವಾದ ಬಲಕ್ಕೆ ಸಾಕ್ಷಿ. ಸ್ತ್ರೀಯೊಳಗಿನ ಆತ್ಮ ಬಲ ಅವಿಚ್ಛಿನ್ನ. 

ದೌರ್ಜನ್ಯಗಳನ್ನೂ,ಸ್ತ್ರೀ ಪುರುಷ ಪಕ್ಷಪಾತವನ್ನೂ  ಬದಿಗಿಟ್ಟು ಸೂಕ್ಷ್ಮ ಶುದ್ಧ ಮನಸ್ಸಿನ ತುಲನೆ ಮಾಡಿದಾಗಲೇ ಸ್ತ್ರೀಯ ಅನನ್ಯತೆಯ ಅರಿವಾಗಲು ಸಾಧ್ಯವೇನೋ?ಜನಾಪವಾದವನ್ನು ದೂರಮಾಡಿಕೊಳ್ಳುವುದಕ್ಕಾಗಿ ಶ್ರೀ ರಾಮ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಲಕ್ಷಣನಿಗೆ ಹೇಳಲಾಗಿ ಅಣ್ಣನ ಆಜ್ಞೆಯನ್ನು ಪರಿಪಾಲಿಸುವ ಲಕ್ಷ್ಮಣ ಆಕೆಯನ್ನು ಕಾಡಿಗೆ ಕರೆತಂದು ವಿಷಯವನ್ನು  ಹೇಳಲಾಗದೇ ಹೇಳುತ್ತಾನೆ. ಆ ಸಮಯದ ಆಕೆಯ ಅಭಿವ್ಯಕ್ತಿ ಸ್ತ್ರೀ ರೂಪಣವೆಂಬಂತೆ ಕವಿ ಲಕ್ಮೀಶ ತನ್ನ ಜೈಮಿನಿ ಭಾರತದಲ್ಲಿ ಬರೆದಿದ್ದಾನೆ.
 
“ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ
ದೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿಲ್ಲಿರಲ್ಬೇಡ ನೀನು” ಎಂದು ಸೀತೆ ನುಡಿಯುತ್ತಾಳೆ. 

ಆದರೆ ಹೆಣ್ಣಾಗಿ ಹುಟ್ಟಿದಕ್ಕೋಸ್ಕರ ಗಂಡು ಸಂತತಿ ಹೇಗೆ ದಬ್ಬಳಿಕೆಯ ಮಾಡುತ್ತಿದೆ ಎಂಬ ವೈಂಗ್ಯ ಆ ದನಿಯಲ್ಲಿದೆ. ಪ್ರತಿಭಟನೆಯಿದೆ. ಪುರುಷನಾದವ ಹೆಣ್ಣನ್ನು ಹೇಗೆ ಬೇಕಾದರೂ ಕುಣಿಸಬಹುದು ಆಕೆಯನ್ನು ತನ್ನಸ್ವಾರ್ಥ ಸಾಧನೆಗೆ  ಬೇಕಾದಂತೆ ಬಳಸಬಹುದು ಎಂಬುದಕ್ಕೆ ರಾಮಾಯಣದ ಈ ಒಂದು ಉದಾಹರಣೆ ಸಾಕು. ಮರ್ಯಾದಾ ಪುರುಷೋತ್ತಮನೆಂದು ಹೆಸರಾದ ಅಂತಹ ರಾಮನ ಬುದ್ದಿಯೇ ಇಷ್ಟಿರುವಾಗ ಯಕಶ್ಚಿತ್ತ ಪುರುಷರ ಮಟ್ಟ ಎಷ್ಟಿರಬಹುದು. ಎಂಬುದನ್ನು ಇಂದಿನ ವಿದ್ಯಾವಂತ  ಸ್ತ್ರೀ ಲೋಕ ವಿಶ್ಲೇಷಿಸದೆ ಇರದು. 

 -ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Mmshaik
Mmshaik
7 years ago

ಗಾಂವಕರ ಮೇಡಂ

ಉತ್ತಮ ಲೇಖನ..ಸತ್ವ ಪೂರ್ಣ ಹಾಗೂ ಪ್ರಮಾಣಿಕ.ಧನ್ಯವಾದಗಳು.

1
0
Would love your thoughts, please comment.x
()
x