ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಆದಿವಾಸಿಗರು?!: ವಿಜಯಕುಮಾರ ಎಮ್. ಕುಟಕನಕೇರಿ

“ಜನಜೀವನವನ್ನು ಎಚ್ಚರಿಸುವ ದ್ವನಿ ಸಾಹಿತ್ಯದಿಂದ ಬರುತ್ತದೆ. ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ. ಕೃತವಿಧ್ಯರಾದ ಯುವಕರು ತಮ್ಮ ಆಕಾಂಕ್ಷೆಗಳನ್ನು ಬರೆದು ಓದಿ, ಮತ್ತೆ ಮತ್ತೆ ಹೇಳಿ ಹೇಳಿ, ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು” ರಾಷ್ಟ್ರಕವಿ ಕುವೆಂಪು ಅವರ ಲೇಖನಗಳ ಸಾಲುಗಳು ಅಭಿವೃದ್ಧಿಯ ಕೆಚ್ಚೆದೆಯನ್ನು ಹುಟ್ಟಿ ಹಾಕುತ್ತದೆ. ಜ್ಞಾನ ಮತ್ತು ಸಹಕಾರದಿಂದ  ಯುವಕರು ಆಧುನಿಕ ಜಗತ್ತಿನಲ್ಲಿ ಪರದೆಯ ಹಿಂದುಳಿದಿರುವ ಜನರನ್ನು ಬೆಳಕಿಗೆ ತರಬೇಕು. ಆದರೆ, ಅಂತಹ ಕಾರ್ಯ ಸಾಧನೆಗೆ ಯುವಕರು ಮುಂದಾಗದೆ, ತಮ್ಮನ್ನು ತಾವು ಪ್ರಗತಿಯನ್ನು ಹೊಂದುತ್ತಿದ್ದೇವೆ. ಆದರೆ, ನಮ್ಮಂತೆಯೆ ಜೀವನ ನಡೆಸುವ ಹಲವು ಸಮುದಾಯಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅವರನ್ನು ಈ ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಿತ್ತಿಲ್ಲ. 

ದೇಶದಲ್ಲಿ ಹಲವಾರು ವರ್ಷಗಳಿಂದ ಆದಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸದೆ, ನಾವು ಅವರಿಂದ  ಅನಾಥರಾಗಿ ಮುಂದುವರಿಯುತ್ತಿದ್ದೇವೆ. ಏಕೆಂದರೆ, ಆದಿವಾಸಿಗಳು ನಮಗಿಂತಲೂ ಮೊದಲು ಭೂಮಿಯ ಮೇಲೆ ವಾಸವಾಗಿದ್ದವರು. 

ರಾಜ್ಯದ ಬೇರೆ ಬೇರೆ ಭಾಗಗಳಾದ ಬಿಳಿಗಿರಿರಂಗನಬೆಟ್ಟದ ಸೋಲಿಗರು ಮತ್ತು ಗೋಳೂರು ಹಾಡಿಯ ಜೇನು ಕುರುಬರು, ಕಾಡು ಕುರುಬರು ಮತ್ತು ಎರವ ಜನಾಂಗದವರು ಇಂದಿಗೂ ತಮ್ಮ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.  ಆದರೆ, ಅವರ ಮೂಲಭೂತ  ಹಕ್ಕುಗಳನ್ನು ಪಡೆದುಕೊಳ್ಳುವ ಅವರಲ್ಲಿನ  ಉತ್ಸಾಹಕ್ಕೆ ಏನೂ ಕೊರತೆಯಿಲ್ಲ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಗೋಳೂರು ಹಾಡಿಯ ಆದಿವಾಸಿಗಳು ಪ್ರಾಚೀನ ಕಾಲದಿಂದಲೂ ತಮ್ಮ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳು ಇನ್ನೂ ಮರೀಚಿಕೆಯಾಗಿವೆ. ಇವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ. ಆದಿವಾಸಿಗಳು ಕಾಡಿನಲ್ಲೆ ವಾಸಿಸುತ್ತಿರಬಹುದು. ಆದರೆ, ಪ್ರಾಣಿಗಳನ್ನು ಬೇಟೆಯಾಡುತ್ತಾರೆ ವiತ್ತು ಅವುಗಳನ್ನು ಕಳ್ಳಸಾಗಣೆ ಮಾಡುತ್ತಾರೆಂದು ಅರಣ್ಯ ಇಲಾಖೆಯವರು ನಂಬಿರಬಹುದು. ಆದರೆ, ಆದಿವಾಸಿ ಸಮುದಾಯದವರು ಕಾಡಿನಲ್ಲಿ ವಾಸಿಸುವುದರಿಂದಲೆ, ಇವತ್ತು ಪ್ರಾಣಿಗಳು ಸೇರಿದಂತೆ ಅರಣ್ಯ ಸಂಪತ್ತು ಕಾಡುಗಳ್ಳರ ಹಿಂಸೆಗೆ ಬಲಿಯಾಗುವುದು ತಪ್ಪಿದೆ ಎಂಬುದನ್ನು ನಾವು ಮನನ ಮಾಡಿಕೊಳ್ಳಬೇಕಿದೆ. ಅರಣ್ಯವನ್ನು ಕಾಡುಗಳ್ಳರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು, ಕಾಡಿನ ಸಂಪತ್ತನ್ನು ಲೂಟಿ ಹೊಡೆಯುತ್ತಿರುವುದನ್ನು ತಡೆಯುವಲ್ಲಿ ಇಲಾಖೆಯವರು ಸತತವಾಗಿ ಶ್ರಮಿಸುತ್ತಿದ್ದಾರೆ. ಇದರಲ್ಲಿ ಆದಿವಾಸಿಗಳ ಪಾಲೂ ಇರಬಹುದು. ಹೇಗೆಂದರೆ, ಅವರು ಇವತ್ತಿನವರೆಗೂ ಕಾಡಿನಲ್ಲಿ ವಾಸಿಸುವುದರಿಂದ ಅಲ್ಲಿ ಹೆಚ್ಚಿನ ಉಲುವು ಉಂಟಾಗಿದೆ. ಆದಿವಾಸಿಗಳ ಭಯ ಕಾಡುಗಳ್ಳರಿಗೆ ಕಾಡುತ್ತದೆ. ಆದರೆ, ಆದಿವಾಸಿಗರನ್ನು ನೆಲೆ ಬಿಡಿಸುವ ನಮ್ಮ ಪ್ರಯತ್ನವನ್ನು ನಾವು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಆದಿವಾಸಿಗರು ಸಾಕಷ್ಟು ಭೂ ಪ್ರದೇಶ ಹೊಂದಿದ ಕಾಡಿನಲ್ಲೆ ವಾಸ ಮಾಡುತ್ತಿದ್ದಾರೆ. ಆದರೆ, ವ್ಯವಸಾಯ ಮಾಡಲು ಭೂಮಿ ಇಲ್ಲದೆ ಪರಿತಪಿಸುತ್ತಿದ್ದಾರೆ. ಕೃಷಿ ಭೂಮಿಯಿಂದ ವಂಚಿತರಾಗುತ್ತಿದ್ದಾರೆ. ವಾಸಿಸುವ ಮನೆಯ ಪಕ್ಕದ 10-15 ಗುಂಟೆ ಜಮೀನನ್ನು ಕೃಷಿ ಮಾಡಲು ಶುರುಮಾಡಿದರೆ, ಅರಣ್ಯ ಇಲಾಖೆಯವರು ತಡೆಯೊಡ್ಡುವ ಘಟನೆಗಳು ಜರುಗಬಹುದು. ಯಾಕೆಂದರೆ, ಅರಣ್ಯ ಇಲಾಖೆಗೆ ತನ್ನದೇ ಆದ ನಿಯಮಗಳಿರುತ್ತವೆ. 1984-85ರಲ್ಲಿ ಕಟ್ಟಿಕೊಂಡ “ಬುಡಕಟ್ಟು ಕೃಷಿಕರ ಸಂಘ”ದ ಮೂಲಕ ಹೋರಾಟ ನಡೆಸಿದ ಪರಿಣಾಮವಾಗಿ, ಸ್ವತಃ ಅರಣ್ಯ ಇಲಾಖೆಯವರೆ ಮುಂದಾಗಿ, 10-15 ಗುಂಟೆ ಜಮೀನನ್ನು ಪ್ರತಿ ಮನೆಗೂ ನೀಡಿದ್ದಾರೆ. ಆದರೆ, ಇಂದು ಮೇಲ್ವರ್ಗದವರು 100-150 ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿದ್ದಾರೆ. ಅಂತಹದರಲ್ಲಿ ಒಂದು ಕುಟುಂಬಕ್ಕೆ ತುಂಡು ಭೂಮಿಯನ್ನು ನೀಡಿರುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ಅರಣ್ಯ ಇಲಾಖೆ ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

ಮನುಷ್ಯನಿಗೆ ಒಂದಿಲ್ಲೊಂದು ತೊಂದರೆಗಳು ಎದುರಾಗವುದು ಸಹಜ. ಆರೋಗ್ಯ ತೊಂದರೆಗಳಿಗೆ ಸಂಬಂಧಪಟ್ಟಂತೆ, ಸಣ್ಣಪುಟ್ಟ ಖಾಯಿಲೆಗಳಿದ್ದರೆ ವನೌಷದಿಯ ಮೂಲಕ ಗುಣಪಡಿಸಕೊಳ್ಳುತ್ತಾರೆ. ದೊಡ್ಡ ಖಾಯಿಲೆಗಳು ಬಂದರೆ, ಸಮೀಪದ ಪಟ್ಟಣಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಹೊಗುತ್ತಾರೆ. ಕಾಡಿನಲ್ಲಿ ರಸ್ತೆಯ ಮೇಲಿನ ಸಂಚಾರಕ್ಕೆ ಮಿತಿ ನಿಗದಿಪಡಿಸಿದ್ದು ಬೆಳಿಗ್ಗೆ 6 ರಿಂದ ಸಾಯಂಕಾಲ 6 ರ ವರೆಗೆ ಮಾತ್ರ ಸಂಚರಿಸಬಹುದಾಗಿದೆ. ಒಮ್ಮೊಮ್ಮೆ ಯಾವುದೋ ವೈಯಕ್ತಿಕ ಕಾರಣ ಅಥವಾ ಆಸ್ಪತ್ರೆಗೆ ಹೋದ ಕಾರಣಕ್ಕಾಗಿ ತಡವಾಗಿ ಬರುವುದು ಸಹಜ. ಅರಣ್ಯ ಇಲಾಖೆಯವರು, ಅವರನ್ನು ಒಳಗೆ ಬಿಡದೆ ಗೇmಲ್ಲೆ ನಿಲ್ಲಿಸಿಬಿಡುತ್ತಾರೆ. ಅದನ್ನು ತಿಳಿದ ಗ್ರಾಮದ ಹಿರಿಕರು, ತಡರಾತ್ರಿಯಲ್ಲಾದರೂ ಹೋಗಿ ಬಿಡಿಸಿಕೊಂಡು ಬರುವ  ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿವೆ. ಇಲ್ಲಿ  ಯಾರನ್ನೂ ದೂರುತ್ತಿಲ್ಲ. ಏಕೆಂದರೆ, ಅರಣ್ಯ ಇಲಾಖೆಯವರು ತಮ್ಮದೇ ಆದ ಚೌಕಟ್ಟಿನ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ. ಆದರೆ, ಮಾನವೀಯತೆಯ ಆಧಾರದ ಮೇಲೆ ಯೋಚಿಸಿದರೆ. ಇಲಾಖೆಯವರ ಈ ಕ್ರಮವನ್ನು ಸಮರ್ಥಿಸಿಕೊಳ್ಳಬೇಕಿದೆ. 

ಹಿರಿಯ ತಲೆಮಾರಿನ ಜನರ ಪ್ರಕಾರ, ನಮ್ಮನ್ನು ಕಾಡಿನಿಂದ ದೂರ ಮಾಡಬೇಡಿ ಎಂದಾದರೆ, ಯುವತಲೆಮಾರಿನ ಯುವ ಜನರು ಶಿಕ್ಷಣ ಪಡೆಯಬೇಕು ಮತ್ತು ಸರ್ಕಾರಿ ಉದ್ಯೋಗಸ್ಥರಾಗಬೇಕೆಂಬ ಆಸೆ ಅವರಲ್ಲಿದೆ. ಸರಿಯಾದ ಸಾರಿಗೆ ವ್ಯವಸ್ಥೆ ಮತ್ತು ಶಾಲೆಗಳಿಲ್ಲದಿರುವುದರಿಂದ ಶಿಕ್ಷಣದಲ್ಲಿ ಕುಂಠಿತವಾಗಿದೆ. ಎಂಜಿನೀಯರ ಮತ್ತು ಡಾಕ್ಟರ ಆಗಬೇಕೆನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ, ಇಲ್ಲಿ ಅಂತಹ ಆಸೆಗಳಿಗೆ ಇನ್ನೂ ಮನ್ನಣೆ ದೊರೆಯುತ್ತಿಲ್ಲ. ಇಲ್ಲಿಯವರು ಇಂತಹ ಬಹುದೊಡ್ಡ ಕನಸುಗಳನ್ನು ಹೊತ್ತು ದಿನೆ ದಿನೆ ನಿರಾಸೆ ಅನುಭವಿಸುತ್ತಿದ್ದಾರೆ. ಯಾವುದೇ ಪತ್ರಿಕೆಗಳ ಸಂಪರ್ಕ ಹೊಂದಿಲ್ಲದಿರುವುದರಿಂದ ಸಮಕಾಲೀನ ವಿದ್ಯಮಾನಗಳ ಕುರಿತ ಜ್ಞಾನಕ್ಕಾಗಿ ಹೆಣಗಾಡುವಂತಾಗಿದೆ. ಅವರು ವಾಸಿಸುವ ಮನೆಗಳನ್ನು ನೋಡಿದರೆ, ಇಂತಹ ಐಷಾರಾಮಿ ಜಗತ್ತಿನಲ್ಲಿ ಶೌಚಾಲಯಕ್ಕೆ ಬಳಸುವಷ್ಟು ಜಾಗದಲ್ಲಿ ತಮ್ಮ ಪುಟ್ಟ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿಯೇ ಜಗತ್ತನ್ನು ಕಾಣುವ ಕನಸನ್ನು ಹೊತ್ತಿದ್ದಾರೆ. ಮನೆಯಲ್ಲಿ 3-4 ಕುಳಿತರೆ ಸಾಕು, ಮನೆ ತುಂಬಿ ಹೋಗುತ್ತದೆ. ಇನ್ನು ಯಾರಾದರೂ ಹೊರಗಿನವರು ಬಂದರೆ, ಹೊರಗಡೆಯೆ ನಿಂತು ಮಾತನಾಡಿ ಕಳಿಸುತ್ತಾರೆ. ಮತ್ತು  ಸರ್ಕಾರ  ಇಲ್ಲಿಯವರೆಗೂ ಮತದಾನದ ಹಕ್ಕು ನೀಡಿಲ್ಲ. ಸಂವಿಧಾನದ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಯೂ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಅರ್ಹತೆಯಿದೆ. ಮೂಲಭೂತ ಸೌಕರ್ಯಗಳಡಿ ನಿರ್ಮಿಸಲಾದ ಆಶ್ರಮಶಾಲೆ ಮತ್ತು ಕೇರಳ ಆಶ್ರಮ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ನಿರಂತರವಾದ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದಾರೆ. ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ದೇಶದಲ್ಲೆಲ್ಲ ಉನ್ನತ ಮಟ್ಟದ ಶಿಕ್ಷಣದಿಂದ ಪ್ರತಿ ದಿನದಿಂದ ದಿನಕ್ಕೆ ಪೈಪೋಟಿ ತಾರಕಕ್ಕೇರುತ್ತಿದೆ. ಇಂತಹ ಸ್ಫರ್ಧಾತ್ಮಕ ಜಗತ್ತಿನಲ್ಲಿ, ಇನ್ನೂ ಕೆಳಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದರೆ, ನಮ್ಮ ದೇಶದ ಆಡಳಿತ ವ್ಯವಸ್ಥೆಯು ಅವಲೋಕನ ಮಾಡಿಕೊಳ್ಳಬೇಕಿದೆ. ದೇಶ ಮುಂದುವರಿದರೂ ಇನ್ನೂ ಗಡ್ಡೆ-ಗೆಣಸುಗಳನ್ನು ತಿಂದುಕೊಂಡು ಬದುಕುವ ಸ್ಥಿತಿಯಲ್ಲೇ ಇದ್ದಾರೆ. ಅವರಿಗಿರುವ ತುಂಡು ಭೂಮಿಯಲ್ಲೆ ಭತ್ತ, ರಾಗಿ, ಶುಂಠಿ, ತೆವಟಿಗೆ ಗೆಣಸು, ಕಾಫಿ ಮತ್ತು ಶುಂಠಿಯಂತಹ ಬೆಳೆಗಳನ್ನು ಸುಮಾರು 30 ವರ್ಷಗಳಿಂದ ಬೆಳೆಯುತ್ತಿದ್ದಾರೆ. ಇದ್ದುದರಲ್ಲಿಯೆ ನೆಮ್ಮದಿ ಬದುಕು. ಆ ತುಂಡು ಭೂಮಿಯಿಂದ ಕೃಷಿಯ ಮೇಲಿನ ಉತ್ಸಾಹ ಮಾತ್ರ ಕುಗ್ಗಿಲ್ಲ. ಪ್ರತಿದಿನ ಆ ತುಂಡು ಭೂಮಿಯಲ್ಲಿ ಬೆವರು ಸುರಿಸುತ್ತಿದ್ದಾರೆ. ಕುಟುಂಬಸ್ಥರಲ್ಲಿ ಕೆಲವರು ಕೃಷಿಯನ್ನು ನಡೆಸಿಕೊಂಡು ಹೋಗುತ್ತಾರೆ, ಉಳಿದವರು ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ, ಒಂದು ದಿನಕ್ಕೆ 150-200 ರೂ ಗಳನ್ನು ಸಂಪಾದಿಸಿಕೊಂಡು ಜೀವನ ನಡೆಸುತಿದ್ದಾರೆ. ಮತ್ತೆ ಕೆಲವರು ಕೇರಳ ಮತ್ತು ಕೊಡಗು ಪಟ್ಟಣಗಳಿಗೆ ವಲಸೆ ಹೋಗಿ ದುಡಿದು, ಹಣ ಸಂಪಾದಿಸಿಕೊಂಡು ತಮ್ಮ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಛಲವಂತೂ ನಿಜಕ್ಕೂ ಆಶ್ಚರ್ಯ. 

ಆಧುನಿಕ ಜಗತ್ತಿನಲ್ಲಿ ಪ್ರೀತಿಯಿಂದ ಅನೇಕ ತೊಂದರೆಗಳನ್ನು ಮನೆಯವರು ತಂದುಕೊಳ್ಳುತ್ತಿದ್ದಾರೆ. ಈ ಸಮಾಜದಲ್ಲಿ ಪ್ರೀತಿ ಎಂದರೆ, ಮೋಸ ಎನ್ನುವ ಹುಚ್ಚು ಕಲ್ಪನೆಗೆ ಜನರು ಮೊರೆ ಹೋಗುತ್ತಿದ್ದಾರೆ. ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆಯಾಗಬೇಕೆಂದುಕೊಳ್ಳುವಷ್ಟರಲ್ಲಿ, ವರದಕ್ಷಿಣೆ ಮತ್ತು ಜಾತಿಯತೆಯನ್ನು ಮುಂದಿರಿಸಿ ಇಲ್ಲದ ಸಲ್ಲದ ನೆಪಗಳನ್ನು ಒಡ್ಡಿ ಸಂಬಂದವನ್ನು ಮುರಿದುಬಿಡುತ್ತಾರೆ. ಇದರಿಂದ ಪ್ರೇಮಿಗಳು ಪಶ್ಚಾತಾಪ ಪಟ್ಟುಕೊಂಡು, ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಕುಟುಂಬವನ್ನು ತೊರೆದು ಹೋಗುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಆದರೆ, ಈ ಆದಿವಾಸಿಗಳಲ್ಲಿ ಮದುವೆ ಆಗುವುದೇ ಕಡಿಮೆ. ಒಬ್ಬ ಹುಡುಗ ಹುಡುಗಿ ಇಷಪ್ಟಟ್ಟರೇ ಮುಗಿಯಿತು. ತಂದೆ-ತಾಯಿಗೆ ವಿಷಯವನ್ನು ತಿಳಿಸಬೇಕೆಂದೇನಿಲ್ಲ. ಅವರಿಬ್ಬರು ಇಷ್ಟಪಟ್ಟು ಒಂದೆರಡು  ದಿನ ಹೊರ ಹೋಗಿ ಬಂದರೆ, ಮದುವೆ ಆಯಿತೆಂದೇ ಅರ್ಥ. ಹುಡುಗ-ಹುಡುಗಿಗೆ ಜೇನು ತಿನ್ನಿಸಿದರೆ ಅದನ್ನು ಮದುವೆ ಆಯಿತು ಎಂದು ಒಪ್ಪಿಕೊಳ್ಳುತ್ತಾರೆ. ಅವರಿಬ್ಬರು ಎಂತಹವರೇ ಆಗಿರಲಿ, ಕೋಮುವಾದ, ದ್ವೇಷ ಮತ್ತು ಹೊಡೆದಾಟಕ್ಕೆ ಮುಂದಾಗದೆ, ಒಪ್ಪಿಕೊಳ್ಳುವ ಪ್ರಕ್ರಿಯೆ ನಿಜಕ್ಕೂ ಗಮನಾರ್ಹ.  ಅವರಲ್ಲಿ ಶೋಷಣೆ ಮಾಡುವ ವರದಕ್ಷಿಣೆ ಪದ್ಧತಿಗೆ ಜಾಗವೇ ಇಲ್ಲ. ಗಂಡ ಸತ್ತರೆ ಮರು ಮದುವೆ ಆಗಲು ಈ ಸಮುದಾಯದಲ್ಲಿ ಅವಕಾಶ ಇದೆ. ನಾವು ಆದಿವಾಸಿಗಳನ್ನು ಬೇಟಿ ಮಾಡಿದಾಗ, ಇಷ್ಟೆಲ್ಲಾ ಸಂಗತಿಯನ್ನು ಯಾವುದೇ ಮುಚ್ಚುಮರೆಯಿಲ್ಲದೇ ನೋವಿನಿಂದ ತೋಡಿಕೊಂಡರು.

ಇಡೀ ದೇಶಕ್ಕೆ ಮಾದರಿಯಾಗಬೇಕಿರುವ ಇಂತಹ ಅಧ್ಬುತ ಸಂಪ್ರದಾಯವನ್ನೊಳಗೊಂಡ  ಸಮುದಾಯದ ಸಂಸ್ಕøತಿಯು, ಕಗ್ಗತಲೆಯ ಒಡಲಾಳದಲ್ಲಿದೆ. ಇಂತಹ ಸಂಸ್ಕøತಿಗೆ ಮಾನ್ಯತೆ ಒದಗಿಸಬೇಕಿದೆ. ಅವರನ್ನು ಬೆಳಕಿಗೆ ತರುವ ಯತ್ನವನ್ನು ಸರ್ಕಾರ ಬಹು ನಿರಿಕ್ಷೆಯಿಂದ ಮಾಡಬೇಕಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಹಕ್ಕಿದೆ. ಅದಕ್ಕಾಗಿ ಅವರಿಗೆ ಮೂಲಭೂತ ಹಕ್ಕಗಳನ್ನು ಒದಗಿಸುವುದು ನಮ್ಮ ನಡೆಯಾಗಬೇಕಿದೆ. 

ದೇಶದಲ್ಲಿ ಅಭಿವೃದ್ದಿ ಎಂಬುದು ನಂಬಿಕೆಯಾಗಿಯೇ ಉಳಿದಿದೆ. ಆ ನಂಬಿಕೆ ನಿಜಾನಾ? ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಆದರೆ, ಆದಿವಾಸಿಗರನ್ನು ಮಾತ್ರ ಅಭಿವೃದ್ದಿಯಾಗಿಸುವ ಮುನ್ಸೂಚನೆಯನ್ನು ಯಾವುದೇ ಸರ್ಕಾರ ಮಾಡುತ್ತಿಲ್ಲ. ಪ್ರಧಾನಿ ಮೋದಿಯವರು ಹಲವಾರು ಯೋಜನೆಗಳನ್ನು ದೇಶದ ಅಭಿವೃದ್ದಿಗಾಗಿ ಜಾರಿಗೆ ತಂದಿದ್ದಾರೆ. ಅವುಗಳಿಗಿಂತ ಮೊದಲು ಆದಿವಾಸಿಗರ ಜೀವನೋಪಾಯವನ್ನು ಅಭಿವೃದ್ದಿ ಪಡಿಸಿ, ವ್ಯವಸ್ಥಿತವಾದ ನೆಲೆಯನ್ನು ಒದಗಿಸುವುದು ಸರ್ಕಾರದ ಹೊಣೆಯಾಗಿದೆ.

-ವಿಜಯಕುಮಾರ ಎಮ್. ಕುಟಕನಕೇರಿ

                              


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x