ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ, ಗಂಡ-ಅತ್ತೆ-ಮಾವರಿಂದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸೊಸೆಯ ಕೊಲೆ. ಕೊಲೆಗಾರರ ಮೇಲೆ ಪೋಲೀಸರು ವರದಕ್ಷಿಣೆ ಕೇಸು ದಾಖಲಿಸಿಕೊಂಡಿದ್ದಾರೆ ಎಂಬಂತಹ ಸುದ್ಧಿಗಳು ಈಗೊಂದು ಹತ್ತು ವರ್ಷಗಳ ಹಿಂದೆ ಮಾಮೂಲಿಯಾಗಿದ್ದವು. ಸೀಮೆಎಣ್ಣೆ ಮಾಫಿಯಾಗಳು ಮಾಡಿದ ಕೊಲೆಗಳು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಸರಕಾರ ಸೀಮೆಎಣ್ಣೆಯನ್ನು ಮುಕ್ತವಾಗಿ ಮಾರುವುದಕ್ಕೆ ನಿಷೇಧ ಹೇರಿದ್ದರಿಂದ ಅಂತೂ ಕೆಲವು ಜೀವಗಳಾದರೂ ಬದುಕಿರಬಹುದು. ಆದರೂ ಉನ್ನತ ಮಟ್ಟದಲ್ಲಿ ಸೀಮೆಎಣ್ಣೆಯ ಬಲುದೊಡ್ಡ ವ್ಯಾಪಾರವಿದೆ. ಹೊರದೇಶಗಳಿಂದ ಬರುವ ಹಡಗಿನ ಪೆಟ್ರೋಲ್ ತುಂಬಿದ ಕಂಟೈನರ್‍ಗಳಿಗೆ ಸೀಮೆಎಣ್ಣೆಯನ್ನು ಮಿಶ್ರಣ ಮಾಫಿಯಾಗಳೂ ಇವತ್ತೂ ಇವೆ. ಇರಲಿ, ಈ ವಾರದ ಸೀಮೆಎಣ್ಣೆಯ ಕಥೆಗೆ ಇದೂ ಪೂರಕವಾಗಿದ್ದರಿಂದ ಸೇರಿಸಬೇಕಾಯಿತು ಬಿಡಿ.
ಆಫ್ರಿಕಾವನ್ನು ಕಗ್ಗತ್ತಲ ಖಂಡವೆಂದು ಕರೆದರು. ಹೀಗೆ ಕರೆಯಲು ಅಲ್ಲಿ ದಟ್ಟಾರಣ್ಯಗಳೇ ಕಾರಣವಾಗಿರಬಹುದು ಅಥವಾ ನಿಧಾನಗತಿಯ ಅಭಿವೃದ್ಧಿಯ ನಡೆ ಇರಬಹುದು. ಅಂತೂ ಅಲ್ಲಿನ ಹಳ್ಳಿಗಾಡಿನಲ್ಲಿ ಸೀಮೆಎಣ್ಣೆಯ ಲಾಟೀನು ಮಾಮೂಲಾಗಿ ಬಳಸಲ್ಪಡುತ್ತಿದೆ. ಅದರಿಂದ ಬರುವ ಹೊಗೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಹಾನಿಕಾರಕ ಅಲ್ಲದೆ ಕೆಲವೊಂದು ಬಾರಿ ಬೆಂಕಿ ಅವಘಡಗಳು ಸಂಭವಿಸಿ ಪ್ರಾಣಹಾನಿಯಾಗಿದ್ದೂ ಉಂಟು. ಇದಕ್ಕೆ ಪರ್ಯಾಯವಾದ ಬೇರೆ ವ್ಯವಸ್ಥೆಯನ್ನು ಮಾಡಿದರೆ ಹೇಗೆ? ಆಗ ಸೀಮೆಎಣ್ಣೆಗೆ ಗುಡ್‍ಬೈ ಹೇಳಬಹುದು. ಇಂತದೊಂದು ಬದಲಾವಣೆಯ ಕುರಿತು ಬೆಳಕು ಚೆಲ್ಲುವ ಪ್ರಯತ್ನವಿದು.
ಆಫ್ರಿಕಾದ 1 ಕೋಟಿ 20 ಲಕ್ಷ ಜನರು ಇನ್ನೂ ವಿದ್ಯುತ್ ಎಂಬ ಮಾಯೆಯ ಮುಖವನ್ನೇ ನೋಡಿಲ್ಲ. 2 ಕೋಟಿ 50 ಲಕ್ಷ ಜನರಿಗೆ ವಿದ್ಯುತ್ ಎಂದರೆ ಹಿಂಗಾರು ಮಳೆಯಲ್ಲಿ ಮಿಂಚುವಂತೆ ಮಿಂಚುವ ಮಿಂಚು ಮಾತ್ರ. ದಿನದ 18-20 ತಾಸು ವಿದ್ಯುತ್ ಲಭ್ಯವಿಲ್ಲ. ಗುಣಮಟ್ಟದ ವಿದ್ಯುತ್ ಅಲಭ್ಯತೆ ಇವರಿಗೊಂದು ಶಾಪವೇ ಆಗಿದೆ. ಇದರಿಂದ ಈ ಜನ ಅನಿವಾರ್ಯವಾಗಿ ಲಾಟೀನ್ ಮೊರೆ ಹೋಗಿದ್ದಾರೆ. ಯುನೈಟೆಡ್ ಕಿಂಗ್‍ಡಮ್‍ನ ಒಂದು ಸಾಮಾಜಿಕ ಸಂಸ್ಥೆಯ ಹೆಸರು ಸೋಲಾರ್ ಏಡ್. ಇದನ್ನು ಸ್ಥಾಪಿಸಿದ್ದು, ಸೌರಫಲಕಗಳನ್ನು ಉತ್ಪಾದಿಸುವ ಸೋಲಾರ್ ಸೆಂಚುರಿ ಎಂಬ ಕಂಪನಿ. 2020ರ ಒಳಗಾಗಿ ಆಫ್ರಿಕಾದ ಹಳ್ಳಿಗಾಡಿನಿಂದ ಸೀಮೆಎಣ್ಣೆಯನ್ನು ತೊಲಗಿಸುವ ಪಣ ತೊಟ್ಟು ಕೆಲಸ ಮಾಡುತ್ತಿದೆ. ಇದುವರೆಗೂ 1 ಲಕ್ಷದ 70 ಸಾವಿರ ಸೌರಚಾಲಿತ ಲಾಟೀನುಗಳನ್ನು ಈ ಸಂಸ್ಥೆ ಆಫ್ರಿಕಾದ ಹಳ್ಳಿಗಾಡುಗಳಲ್ಲಿ ಹಂಚಿದೆ. ಸುಮಾರು 10 ಲಕ್ಷ ಜನ ಇದರ ನೇರ ಉಪಯೋಗವನ್ನು ಪಡೆಯುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ, ಪ್ರತಿ ಸೌರಚಾಲಿತ ಲಾಟೀನು ವರ್ಷಕ್ಕೆ 900 ರೂಪಾಯಿಗಳ ಉಳಿತಾಯ ಮಾಡುತ್ತದೆ. ಬರೀ ರೂಪಾಯಿಗಳ ಉಳಿತಾಯವಲ್ಲ! ಸೀಮೆಎಣ್ಣೆಯ ಉಳಿತಾಯವೆಂದರೆ, ವಾತಾವರಣಕ್ಕೆ ಸೇರುವ ಇಂಗಾಲದ ಉಳಿತಾಯವೂ ಹೌದು. ಒಟ್ಟಾರೆ ಮಾಲಿನ್ಯದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯೂ ಹೌದು. ಅಂದರೆ ಒಂದು ಸೌರ ಲಾಟೀನು ತನ್ನ ಜೀವಿತಾವಧಿಯಲ್ಲಿ 500 ಕೆ.ಜಿ. ಇಂಗಾಲಾಮ್ಲ ವಾತಾವರಣವನ್ನು ಸೇರುವುದನ್ನು ತಡೆಯುತ್ತದೆ. ಅಂದ ಹಾಗೆ ವಾತಾವರಣಕ್ಕೆ ಇಂಗಾಲವನ್ನು ಸೇರಿಸುವಲ್ಲಿ ಈ ಸೀಮೆ ಎಣ್ಣೆ ಲಾಟೀನುಗಳ ಪ್ರಮಾಣ ಶೇ.3ರಷ್ಟು. ಇದೀಗ ಆಫ್ರಿಕಾದಲ್ಲಿ ಈ ಸೌರಶಕ್ತಿಯ ಲಾಟೀನಿನ ಬೆಳಕನ್ನು ಬಳಸುವವರ ಪ್ರಮಾಣ 50 ಲಕ್ಷಕ್ಕೆ ಮುಟ್ಟಿದೆ.
ಮರುಬಳಕೆಯ ಇಂಧನಗಳತ್ತ ಇಡೀ ಜಗತ್ತಿನ ದೃಷ್ಟಿ ನೆಟ್ಟಿದೆ. ಸೂರ್ಯಕಿರಣಗಳ ಹೆಚ್ಚು ಉಪಯೋಗ ಮಾಡಿಕೊಳ್ಳುವಂತಹ ಹೊಸ ತಂತ್ರಜ್ಞಾನದ ಸೌರಹಾಳೆಗಳ ಆವಿಷ್ಕಾರಗಳಾಗುತ್ತಿವೆ. ದುಬಾರಿಯಾಗಿ ಸಾಮಾನ್ಯರ ಕೈಗೆಟುಕದಂತೆ ಆಗಿದ್ದ ಸೌರೋಪಕರಣಗಳು ಹೊಸ-ಹೊಸ ಕಂಪನಿಗಳ ಪೈಪೋಟಿಯಿಂದ ಇದೀಗ ಜನಸಾಮಾನ್ಯರಿಗೂ ಲಭ್ಯವಾಗುವ ಲಕ್ಷಣಗಳು ಕಾಣುತ್ತಿವೆ. ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಅಪೂರ್ವ ಅವಕಾಶಗಳಿವೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಏನೂ ಘಟಿಸುತ್ತಿದೆ ಎಂಬುದನ್ನು ಕೊಂಚ ನೋಡೋಣ. ಸೌರಶಕ್ತಿ ಉಪಕರಣಗಳು ಭಾರತದ ಬಡವರಿಗೆ ಹೇಳಿ ಮಾಡಿಸಿದ್ದಲ್ಲವೆಂದ ಮಿಥ್ಯೆಯನ್ನು ಹರೀಶ್ ಹಂದೆಯಂತವರು ಹರಿದು ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರತಿಷ್ಟಿತ ಐ.ಐ.ಟಿಯ ಮತ್ತು ಮಸಚೂಟಾಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಹರೀಶ್ ಹಂದೆ ಮನಸ್ಸು ಮಾಡಿದ್ದರೆ, ಜಗತ್ತಿನ ಪ್ರತಿಷ್ಟಿತ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಸುಖ-ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಹೆಚ್ಚಿನ ಪದವಿಧರು ದೇಶ ತೊರೆಯುವಂತೆ ಇವರು ಭಾರತವನ್ನು ತೊರೆಯಲಿಲ್ಲ. ದೇಶಕ್ಕೆ, ಜನಕ್ಕೆ ಉಪಯೋಗವಾಗುವ, ಅಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಪಾರಿಸಾರಿಕವಾಗಿ ಮಹತ್ವವನ್ನು ಹೊಂದಿದ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿತ್ತು. ವಿದ್ಯುತ್ ವಿಷಯದಲ್ಲಿ ಭಾರತದ ಹಳ್ಳಿಗಳ ಸ್ಥಿತಿ ಆಫ್ರಿಕಾಕಿಂತ ಉತ್ತಮವೇನು ಆಗಿರಲಿಲ್ಲ. ಹೀಗೆ 1995ರಲ್ಲಿ ಸೌರಶಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು, ಸೆಲ್ಕೋ ಎಂಬ ಕಂಪನಿಯನ್ನು ನಿವೆಲೆ ವಿಲಿಯಮ್ಸ್ ಎಂಬುವರ ಜೊತೆಗೂಡಿ ಹುಟ್ಟು ಹಾಕಿದರು. ಐ.ಐ.ಟಿ. ಓದಿದ ವ್ಯಕ್ತಿಯೊಬ್ಬ ಆದರ್ಶಗಳನ್ನಿಟ್ಟುಕೊಂಡು ವ್ಯವಹಾರ ಮಾಡಿದರೆ ಅದರಲ್ಲಿ ಯಶ ಸಿಗಲು ಸಾಧ್ಯವೇ? ಇಂತದೊಂದು ಅನುಮಾನ ಹಂದೆಯ ಪರಿಚಿತರಿಗೆಲ್ಲಾ ಇತ್ತು. ಹಾಗೂ ಸೌರಶಕ್ತಿಯು ನಮ್ಮಂತ ಬಡರಾಷ್ಟ್ರದ ಜನರಿಗೆ ನಿಲುಕುವಂತದ್ದಲ್ಲ, ಅದೇನಿದ್ದರೂ ಸಿರಿವಂತರಿಗೆ ಮಾತ್ರ ಎಂಬ ಬಲವಾದ ನಂಬಿಕೆಯಿತು. ಇಲ್ಲಿನ ಅನಕ್ಷರಸ್ತ ಹಳ್ಳಿಗರಿಗೆ ಇದನ್ನು ನಿರ್ವಹಣೆ ಮಾಡುವುದೂ ಕೂಡ ಸಾಧ್ಯವಿಲ್ಲ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಇವೆಲ್ಲಾ ಸಾಮಾನ್ಯ ಸವಾಲುಗಳಲ್ಲ, ಎಂತಹ ಧೈರ್ಯವಂತನನ್ನೂ ಧೃತಿಗೆಡುವಂತೆ ಮಾಡುವಂತ ಸವಾಲುಗಳಿವು. ಹಂದೆಯವರು ಎದುರಿಸಿದ ಒಂದು ಘಟನೆಯನ್ನು ಇಲ್ಲಿ ವಿವರಿಸಿದರೆ, ಈ ಸೌರಶಕ್ತಿಯನ್ನು ಅಳವಡಿಸುವ ಇವರ ಉದ್ದೇಶವನ್ನು ಸರಳವಾಗಿ ಅರ್ಥೈಸಬಹುದು. ಕೆಲವು ವರ್ಷಗಳ ಹಿಂದೆ ಒಬ್ಬ ಮಹಿಳೆ ಗೂಡಂಗಡಿಯನ್ನು ನಡೆಸುತ್ತಿದ್ದಳು. ಅವಳಿಗೆ ಬೇಕಾದ ಬೆಳಕನ್ನು ಪಡೆಯುವುದಕ್ಕೆ ಆ ಮಹಿಳೆ ಸೀಮೆ ಎಣ್ಣೆಯ ದೀಪವನ್ನು ಬಳಸುತ್ತಿದ್ದಳು. ದಿನಕ್ಕೆ 15 ರೂಪಾಯಿಯಷ್ಟು ಮೊತ್ತದ ಸೀಮೆಎಣ್ಣೆ ಆ ಮಹಿಳೆಯ ಅಗತ್ಯವಾಗಿತ್ತು. ಸೌರಶಕ್ತಿಯ ಅಳವಡಿಸಿಕೊಂಡು ತಿಂಗಳಿಗೆ 300 ರೂಪಾಯಿಗಳ ಕಂತನ್ನು ತುಂಬುವುದು ಅವಳಿಗೆ ಸಾಧ್ಯವಾಗದ ಮಾತು. ಪ್ರತಿದಿನ 15 ರೂಪಾಯಿಗಳನ್ನು ಸೀಮೆಎಣ್ಣೆಗೆ ಖರ್ಚು ಮಾಡುವುದು ಆ ಮಹಿಳೆಗೆ ಸಮಸ್ಯೆಯಾಗಿರಲಿಲ್ಲ. ಇಂತಹ ಚಿಕ್ಕ-ಪುಟ್ಟ ಲೆಕ್ಕಾಚಾರಗಳನ್ನು ಗ್ರಹಿಸಿ, ಹಂದೆಯವರು ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಕ್ರಮಕ್ಕೆ ಮುಂದಾಗುತ್ತಾರೆ. ಪ್ರತಿ ತಿಂಗಳೂ ಆ ಮಹಿಳೆ ಹೀಗೆ 150 ರೂಪಾಯಿಗಳನ್ನು ಉಳಿತಾಯ ಮಾಡುವ ಲೆಕ್ಕಾಚಾರವನ್ನು ಕಲಿತದ್ದು ಕಡಿಮೆ ಸಾಧನೆಯಲ್ಲ. ಹಳ್ಳಿಗಳಲ್ಲಿರುವ ಚಿಕ್ಕ ಬ್ಯಾಂಕುಗಳ ಮೂಲಕ ಇದುವರೆಗೂ ಬೆಳಕನ್ನೇ ಕಾಣದ 1 ಲಕ್ಷ ಕುಟುಂಬಗಳಿಗೆ ಹಂದೆ ಕಂಪನಿ ಸೌರಶಕ್ತಿಯನ್ನು ಅಳವಡಿಸಿಕೊಟ್ಟಿದೆ. ಹಂದೆಯವರ ಇತ್ತೀಚಿನ ಒಂದು ಲೆಕ್ಕಾಚಾರ ಹೀಗಿದೆ. ಬಡಾತೀಬಡ ಕುಟುಂಬಗಳು, ಅಂದರೆ ತಿಂಗಳಿಗೆ ಅಂದಾಜು 1600 ರೂಪಾಯಿಗಳನ್ನು ದುಡಿಯುವ ಕುಟುಂಬ ಇವತ್ತು ಮೊಬೈಲ್ ಫೋನ್‍ಗಳನ್ನು ಹೊಂದಿದೆ. ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಲಾಗದ ಇವರು 5 ರೂಪಾಯಿಗಳನ್ನು ಕೊಟ್ಟು ಮೊಬೈಲ್ ರೀಚಾರ್ಜ್ ಮಾಡಿಸುತ್ತಾರೆ. ಮನೆ ಬೆಳಕಿಗೆ ಸೀಮೆಎಣ್ಣೆ ಮತ್ತು ಕ್ಯಾಂಡಲ್‍ಗಳಿಗಾಗಿ ತಿಂಗಳಿಗೆ 155 ರೂಪಾಯಿಗಳನ್ನು ವ್ಯಯಿಸುತ್ತಾರೆ, ಜೊತೆಗೆ ಮೊಬೈಲ್ ಚಾರ್ಜಿಗೆ ಅಂತ 40 ರೂಪಾಯಿಗಳು. ಸೌರಶಕ್ತಿಯ 4 ಚದರಡಿಯ ಸೌರ ಹಾಳೆಯೊಂದು ಇವರಿಗೆ ನಿರಂತರವಾಗಿ ವಿದ್ಯುತ್ ನೀಡಬಲ್ಲದು. ಈ ತರಹದ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ತಳಮೂಲದಿಂದ ಎದೆಗುಂದದೇ ಕೆಲಸ ಮಾಡಿದ ಹಂದೆಯವರಿಗೆ ಪ್ರತಿಷ್ಟಿತ ಮ್ಯಾಗ್ಸಸೆ ಪ್ರಶಸ್ತಿ ಹುಡುಕಿಕೊಂಡು ಬಂತು. ಇಡೀ ಜಗತ್ತಿನ ಸೂಕ್ಷ್ಮಜ್ಞರು ಇವತ್ತು ಹಂದೆಯವರ ಪುಟ್ಟ ಆರ್ಥಿಕ ಲೆಕ್ಕಾಚಾರವನ್ನು ಬೆರಗುಗಣ್ಣಿನಿಂದ ನೋಡುತ್ತಾರೆ.
ಪ್ರತಿ ವರ್ಷ ಸರಕಾರದಿಂದ ಪ್ರತೀ ತಾಲ್ಲೂಕಿಗೂ ಇಂತಿಷ್ಟು ಎಂದು ನಿಗದಿ ಮಾಡಿ ಕ್ಷೇತ್ರವಾರು ವಿಂಗಡಿಸಿ ಸೌರದೀಪಗಳನ್ನು ಉಚಿತವಾಗಿ ಹಂಚಲಾಗುತ್ತದೆ. ಹೀಗಿರುವ ಯೋಜನೆಯನ್ವಯ ಬರುವ 25-30 ಸೌರ ದೀಪಗಳು ಇಡೀ ತಾಲ್ಲೂಕಿನಾದ್ಯಂತ ಹಂಚಿಹೋಗುತ್ತವೆ. ಅವುಗಳ ನಿರ್ವಹಣೆ ಮಾಡುವುದು ಸರಬರಾಜು ಮಾಡಿದ ಕಂಪನಿಗಳಿಗೆ ಕಷ್ಟ. ನಮ್ಮ ಊರಿನ ಗ್ರಾಮ ಅರಣ್ಯ ಸಮಿತಿಗೆ ನಾನೇ ಅಧ್ಯಕ್ಷ. ಹೋದ ಬಾರಿ ಸರಕಾರದಿಂದ ಎಸ್.ಸಿ &ಎಸ್.ಟಿ ವರ್ಗಕ್ಕೆ ಕೊಡಲ್ಪಡುವ 28 ಸೌರ ವಿದ್ಯುತ್ ದೀಪಗಳನ್ನೂ ನಮ್ಮ ಊರಿಗೆ ಕೊಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿದೆ. ಹೀಗೆ ಮಾಡಿದಲ್ಲಿ ನಿರ್ವಹಣೆ ಸುಲಭವಾಗುತ್ತದೆ ಹಾಗೂ ಸೌರದೀಪಗಳು ಹೆಚ್ಚು ಬಾಳಿಕೆ ಬರುತ್ತದೆ ಎಂಬುದು ನನ್ನ ವಾದ. ಅಂತೂ ನನ್ನ ಮನವಿಗೆ ಓಗೊಟ್ಟ ಇಲಾಖೆ ಎಲ್ಲಾ ಸೌರದೀಪಗಳನ್ನು ನಮ್ಮ ಊರಿನ 28 ಮನೆಗಳಿಗೆ ನೀಡಿತು. ನಮ್ಮ ಗ್ರಾಮ ಅರಣ್ಯ ಸಮಿತಿವತಿಯಿಂದಲೇ ಸೌರ ದೀಪಗಳನ್ನು ನೀಡಲಾಯಿತು. ಆ 28 ಮನೆಗಳಿಗೀಗ ಪವರ್‍ಕಟ್‍ನ ಶಾಪವಿಲ್ಲ. ನೀಡಿದ ಎಲ್ಲಾ ಸೌರದೀಪಗಳು ಹಂದೆ ಕಂಪನಿಯ ಸೆಲ್ಕೋ ಸೌರದೀಪಗಳು. ಪ್ರತಿವರ್ಷ ಬಂದು ನಿರ್ವಹಣೆ ಕೆಲಸವನ್ನೂ ಮಾಡುತ್ತಾರೆ.
ಸೌರದೀಪಗಳು ಹಾಗೂ ಸೌರಚಾಲಿತ ವಾಹನಗಳ ಯುಗ ಆರಂಭಗೊಂಡಿದೆ. ನಿಸಾನ್, ಫೋರ್ಡ್ ಮುಂತಾದ ಕಂಪನಿಗಳು ತಮ್ಮ ಕಾರ್ಖಾನೆ ಮತ್ತು ಕಚೇರಿಗಳನ್ನು ಸೌರಮಯ ಮಾಡಲು ಹೊರಟಿದ್ದಾರೆ. ಅಮೆರಿಕದ ಕ್ಲೌಡ್‍ಸ್ಟಾರ್ ಎಂಬ ಸೌರ ಕಂಪನಿಯು ಒಂದು ವಿನೂತನ ಪ್ರಯತ್ನ ಮಾಡಿ, ಯಶಸ್ವಿಯಾಗಿದೆ. ಇದೊಂದು ಪರಸ್ಪರ ಸಹಕಾರಿ ತತ್ವದಡಿಯಲ್ಲಿ ಕೆಲಸ ಮಾಡಿದಂತೆ. ಆಸಕ್ತರು ತಮ್ಮ ಮನೆಯ ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಳ್ಳುವುದು, ಹಾಗೂ ಯಾರಿಗೆ ಸೌರಫಲಕಗಳನ್ನು ಅಳವಡಿಸಿಕೊಳ್ಳಲು ತಕ್ಕ ವಿನ್ಯಾಸಗಳಿಲ್ಲವೋ ಅವರು ಇವರಿಂದ ಸೌರವಿದ್ಯುತ್ ಪಡೆಯುವುದು. ಇದಕ್ಕೆ ಹಣ ಪಾವತಿ ಮಾಡುವುದು. ಈ ಸಹಕಾರಿ ತತ್ವದ ಮಾದರಿಯಲ್ಲಿ ಪ್ರಾರಂಭಿಸಿದ ಕಂಪನಿಗೆ ಪೂರಕ ಪ್ರತಿಕ್ರಿಯೆ ಸಿಕ್ಕಿದ್ದು, ಆಸಕ್ತರಿಂದ ಮೂಲ ಬಂಡವಾಳವಾಗಿ 3.5 ಲಕ್ಷ ಡಾಲರ್ ಹಣ ಹರಿದು ಬಂದಿದೆ.
ಈಗ ಒಂದು ಹತ್ತು ವರ್ಷಗಳ ಹಿಂದೆ ಸ್ಥಿರ ದೂರವಾಣಿ ಸಂಪರ್ಕದ ಅಸ್ತಿತ್ವವನ್ನೇ ಅಳಿಸಿ ಹಾಕಬಲ್ಲ ಮೊಬೈಲ್‍ಗಳ ಶಕೆ ಶುರುವಾಗುವುದೆಂದು ಯಾರೂ ಎಣಿಸಿರಲಿಲ್ಲ. ಇದೇ ಮಾದರಿಯಲ್ಲಿ ಸೌರ ಹಾಳೆಗಳು ಈಗಿನ ಸಾಂಪ್ರಾದಾಯಿಕ ಶಕ್ತಿಯ ಮೂಲಗಳಾದ ಜಲ, ಅಣು, ಶಾಖೋತ್ಪನ್ನಗಳ ಅಸ್ತಿತ್ವವನ್ನೇ ಅಳಿಸಿ ಹಾಕಬಹುದಾದ ಸಾಧ್ಯತೆಗಳಿವೆಯಾದರೂ, ಬಂಡವಾಳಶಾಹಿಗಳ ಕ್ಷಣಿಕ ಲಾಭದ ಹಪಹಪಿಕೆಯತನದಿಂದಾಗಿ ಸೌರಶಕ್ತಿಯ ಪ್ರಾಬಲ್ಯ ಮರೆಯಾಗಬಹುದು. ಅಥವಾ ಮನೆಯ ಮೇಲೆ ಬೀಳುವ ಬಿಸಿಲಿಗೂ ತೆರಿಗೆ ಹಾಕುವ ದಿನ ಬರಬಹುದು. ಕಾದು ನೋಡೋಣ.
****