ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ – ಅಮರ ಕವಿ ಜಾನ್ ಕೀಟ್ಸ್: ನಾಗರೇಖಾ ಗಾಂವಕರ

ಅತಿ ಚಿಕ್ಕ ವಯಸ್ಸಿನಲ್ಲಿ, ಅತೀ ಕಡಿಮೆ ಅವಧಿಯಲ್ಲಿ ಅಪಾರ ಅದ್ವಿತೀಯ ಪ್ರಗಾಥ ಸಾಹಿತ್ಯವನ್ನು ರಚಿಸಿ ಜಾಗತಿಕ ಸಾರಸ್ವತ ಲೋಕದ ಧ್ರುವತಾರೆಯಂತೆ ಬೆಳಗಿದವನೆಂದರೆ ಜಾನ್ ಕೀಟ್ಸ್. ಅಕ್ಷರ ಜಗತ್ತಿನಲ್ಲಿ ಚಿಮ್ಮಿದ ಬೆಳಕಿನ ಸೂಡಿ ಕೀಟ್ಸ್. ಆತನ ಜೀವನದುದ್ದಕ್ಕೂ ಸಾವು ಸುಳಿಯುತ್ತಲೇ ಇತ್ತು. ಹೆತ್ತವರ, ಒಡಹುಟ್ಟಿದವರ, ಸಾವು ಆತನ ವಿಚಲಿತಗೊಳಿಸುತ್ತಲೇ ಇದ್ದರೂ ಸಾವಿನಲ್ಲೂ ಸೌಂದರ್ಯ ಕಂಡ ಕವಿ. ತನ್ನ ಗೋರಿ ವಾಕ್ಯವನ್ನು ತಾನೇ ಬರೆದಿಟ್ಟ ಧೀರ.

ವಿಲಿಯಂ ವಡ್ರ್ಸವರ್ಥ, ಎಸ್ ಟಿ. ಕೋಲ್ರಿಡ್ಜ್ ಇಂಗ್ಲೆಂಡಿನಲ್ಲಿ ರೋಮ್ಯಾಂಟಿಕ್ ಯುಗದ ಪ್ರವರ್ತಕರಾಗಿ “ಲಿರಿಕಲ್ ಬ್ಯಾಲಡ್” ಕೃತಿಯನ್ನು ಮೊದಲಿಗೆ ಪ್ರಕಟಿಸಿದರು. ಈ ರೋಮ್ಯಾಂಟಿಕ ಹಾದಿಯನ್ನು ಇನ್ನಷ್ಟು ಸಂಪನ್ನಗೊಳಿಸಿದವರು ಎರಡನೇ ಪೀಳಿಗೆಯ ಜಾನ್ ಕೀಟ್ಸ್, ಪಿ.ಬಿ.ಶೆಲ್ಲಿ ಮತ್ತು ಲಾರ್ಡ ಬೈರನ್. ತನ್ನ ಸಮಕಾಲೀನ ಸಂಗತಿಗಳನ್ನು ದೃಶ್ಯಕಾವ್ಯವಾಗಿಸಿದ ಕೀಟ್ಸ್ ಬದುಕನ್ನು ಅದರ ಎಲ್ಲ ಮುಖಗಳನ್ನು ಅಷ್ಟೇ ಪ್ರೀತಿಸಿದ್ದ. ಹಾಗೂ ತನ್ನ ಕಾವ್ಯಗಳಲ್ಲಿ ಜೀವನದ ಅನೂಹ್ಯ ಗತಿಯನ್ನು ಪರಿಶೋಧಿಸಿದ ಕವಿ ಕೀಟ್ಸ್ ಇಂಗ್ಲೀಷ ರೋಮ್ಯಾಂಟಿಕ್ ಕವಿಗಳಲ್ಲಿ ಮೊದಲ ಸಾಲಿಗೆ ನಿಲ್ಲುತ್ತಾನೆ.

ಕೀಟ್ಸ್ ಜನಿಸಿದ್ದು 1795ರ ಅಕ್ಟೋಬರ 31ರಂದು ಲಂಡನ್ನಿನ ಮೂರಗೇಟ್ ಎಂಬಲ್ಲಿ. ತಂದೆ ಥಾಮಸ್ ಕೀಟ್ಸ್ ಮತ್ತು ಫ್ರಾನ್ಸಸ್ ಜೆನ್ನಿಂಗ್ಸ್‍ರ ಸುಖ ಸಂಸಾರದಲ್ಲಿ ಜಾರ್ಜ ಕೀಟ್ಸ್ , ಥಾಮಸ್ ಕೀಟ್ಸ್ , ಮತ್ತು ಎಡ್ವರ್ಡ ಕೀಟ್ಸ್ ಎಂಬ ಮೂವರು ಸಹೋದರರು ಹಾಗೂ ಫ್ರಾನ್ಸ್‍ಸ್ ಮೇರಿ ಎಂಬ ಸಹೋದರಿಗೆ ಹಿರಿಯಣ್ಣನಾಗಿ ಹುಟ್ಟಿದ ಜಾನ್ ಕೀಟ್ಸ್.ಕೊನೆಯ ಸಹೋದರ ಎಡ್ವರ್ಡ ಎಳವೆಯಲ್ಲೆ ಮರಣ ಹೊಂದಿದ.

ಕೀಟ್ಸ್‍ನ ಬದುಕಿನ ಪ್ರಾರಂಭದ ದಿನಗಳು ಪ್ರೀತಿ ಹಾಗೂ ನೆಮ್ಮದಿಯಿಂದಲೇ ಕೂಡಿದ್ದವು. 1803ರಲ್ಲಿ ಕೀಟ್ಸ್ ಎನಪೀಲ್ಡ್‍ನ ಜಾನ್ ಕ್ಲಾಕ್ರ್ಸ ಶಾಲೆಗೆ ಸೇರಿಸಲ್ಪಟ್ಟ್. ಕೌಟಂಬಿಕ ವಾತಾವರಣವಿದ್ದ ಆ ಶಾಲೆಯಲ್ಲಿ ಕೀಟ್ಸ್‍ಗೆ ಸ್ನೇಹಿತನಾದ ಹೆಡ್ ಮಾಸ್ಟರ್ ಪುತ್ರ ಚಾಲ್ರ್ಸ ಕೌಡೆನ್ ಕ್ಲಾರ್ಕ ರಿನೆಸಾನ್ಸ್ ಸಾಹಿತ್ಯದಲ್ಲಿ ಕೀಟ್ಸ್‍ನಲ್ಲಿ ಒಲವನ್ನು ಮೂಡಿಸಿದ. ಅಲ್ಲಿಯೇ ಕೀಟ್ಸ್ Spenser ನ ‘Faerie Queen’ ಓದಿದ. ಅದೇ ಮೊದಲ ಬಾರಿ ಕೀಟ್ಸ್ ಸಾಹಿತ್ಯದೆಡೆಗೆ ಹಠಾತ್ತಾಗಿ ಆಕರ್ಷಿಸಲ್ಪಟ್ಟ್. ಆತನ ಕಾವ್ಯದ ಒಳಹರಿವನ್ನು ಉದ್ದೀಪಿಸಿದ ಕೃತಿ Faerie Queen’.

ಆದರೆ ಕೀಟ್ಸ್ ಬರಿಯ ಒಂಬತ್ತು ವರ್ಷದವನಾಗಿದ್ದಾಗ ತಂದೆಯನ್ನು ಕಳೆದುಕೊಂಡ. ಕುದುರೆ ಲಾಯದಲ್ಲಿ ಮ್ಯಾನೇಜರ ಆಗಿದ್ದ ತಂದೆ ಥಾಮಸ್ ಕೀಟ್ಸ್ 1804ರಲ್ಲಿ ಕೀಟ್ಸ್ ಮತ್ತು ಜಾರ್ಜರನ್ನು ನೋಡಿ ಬರಲು ಶಾಲೆಗೆ ಬಂದವ ಮರಳಿ ಹೋಗುವಾಗ ಕುದುರೆಯ ಮೇಲಿಂದ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು, ಮರಣಿಸಿದ. ಅಲ್ಲಿಯವರೆಗೆ ಅವರ ಬದುಕು ಸುಂದರ ಸಂಸಾರ, ನೆಮ್ಮದಿ ತಾಣ ಎಲ್ಲವೂ ಆಗಿತ್ತು. ಅಲ್ಲಿಂದಲೇ ಬಾಳಿನ ಗೋಳು ಪ್ರಾರಂಭವಾದವು. ಪತಿಯ ಮರಣದ ನಂತರ ಎರಡೇ ತಿಂಗಳಲ್ಲಿ ತಾಯಿ ಫ್ರಾನ್ಸ್‍ಸ್ ಹತಾಶೆಯ ಹಾದಿಯಲ್ಲಿಯೇ ವಿವೇಚನೆಯಿಲ್ಲದೇ ಬ್ಯಾಂಕ್ ಕ್ಲರ್ಕ ಆಗಿದ್ದ ವಿಲಿಯಂ ರೌಲಿಂಗ ಎಂಬ ಅಯೋಗ್ಯನನ್ನು ವಿವಾಹವಾದಳು. ಆದರೆ ಕೆಲವೇ ದಿನಗಳಲ್ಲಿ ಆ ವಿವಾಹ ಕೊನೆಗೊಂಡಿತು. ಆದರೆ ಮೊದಲ ಪತಿ ಗಳಿಸಿದ ಆಸ್ತಿಯನ್ನು ಆಕೆ ಕಳೆದುಕೊಂಡಳು.ಕೀಟ್ಸ್ ಮತ್ತು ಆತನ ಇಬ್ಬರೂ ಸಹೋದರರು, ಮತ್ತು ಸಹೋದರಿ ತಮ್ಮ ಅಜ್ಜಿ ಅಲೈಸ್ ಜೆನ್ನಿಂಗ್‍ಳ ಸುಪರ್ದಿಗೆ ಬಂದವು. ಆದರೆ ತಾಯಿಯ ಎರಡನೇ ವಿವಾಹ ಮುರಿದುಬಿದ್ದಿದ್ದರಿಂದ ಆಕೆಯೂ ಇವರ ಜೊತೆಯಾದಳು.ಆದರೆ ದುರಾದೃಷ್ಟಕ್ಕೆ ಆಕೆ 1810ರಲ್ಲಿ ಕೀಟ್ಸ್‍ನಿಗೆ ಬರಿಯ ಹದಿನೈದು ವರ್ಷವಾದಾಗ ಕ್ಷಯರೋಗಕ್ಕೆ ಬಲಿಯಾದಳು. ಆಕೆಯ ಆರೈಕೆಯಲ್ಲಿ ಕೀಟ್ಸ್ ಕೂಡಾ ಕಾಯಿಲೆಯನ್ನು ಬಳುವಳಿಯಾಗಿ ಪಡೆದ. ಆದರೆ ಆ ವಯಸ್ಸಿಗೆ ಕಾಣಿಸಿಕೊಳ್ಳದ ಕಾಯಿಲೆ ನಂತರ ಹತ್ತು ವರ್ಷಗಳಲ್ಲಿ ತನ್ನ ಕರಾಳ ಹಸ್ತವನ್ನು ಮುಂದೆ ಚಾಚಿತ್ತು.

ಅದೇ ವರ್ಷ ಕೀಟ್ಸ್ ಕ್ಲಾಕ್ರ್ಸ ಶಾಲೆ ಬಿಟ್ಟು ಜೆನ್ನಿಂಗ್ ಕುಟುಂಬಕ್ಕೆ ಹತ್ತಿರದವನೂ ನೆರೆಯವನೂ ಆದ ಥಾಮಸ್ ಹ್ಯಾಮಂಡ್ ಎಂಬ ಸರ್ಜನ್‍ನಲ್ಲಿ ಅಪ್ರೈಂಟಿಸ್ ಕಲಿಯತೊಡಗಿದ. ವೈದ್ಯನಾಗಬೇಕೆಂಬ ಆದಮ್ಯ ಆಸೆ ಇದ್ದರೂ ತದ ನಂತರ ಆತನ ಆಸಕ್ತಿ ಕ್ರಮೇಣ ಸಾಹಿತ್ಯದ ಕಡೆ ಒಲಿಯುತ್ತಲೂ ತನ್ನ ವೈದ್ಯಕೀಯ ವೃತ್ತಿಯನ್ನೆ ತ್ಯಜಿಸಿ ಕಾವ್ಯ ಮಾರ್ಗಿಯಾದ ಕೀಟ್ಸ್. ಸ್ಪೆನ್ಸರ್, ಜಾನ್ ಮಿಲ್ಟನ್, ವಡ್ರ್ಸವರ್ಥ ಮುಂತಾದ ಕವಿಗಳಿಂದ ಪ್ರಭಾವಿತನಾದ. ತನ್ನ 19ನೇ ವಯಸ್ಸಿಗೆ ಮೊದಲ ಕಾವ್ಯ “an imitation of spenser” ಬರೆದ. ಹಣಕಾಸಿನ ಬಿಕ್ಕಟ್ಟು ಜೀವನದ ಸಮಸ್ಯೆಗಳ ಮಧ್ಯೆ ತೊಳಲಾಡುತ್ತಿದ್ದ ಕವಿಗೆ ಕಾವ್ಯ ಜೀವನಪ್ರೇಮವನ್ನು ಕೊಟ್ಟಿತ್ತು. ಅದನ್ನು ಕುರಿತು ಸಹೋದರ ಜಾರ್ಜಗೆ ಹೀಗೆ ಬರೆಯುತ್ತಾನೆ. “Feared that he should never be a poet and i was not he would destroy himself” . ಕೀಟ್ಸ್ ಬಹುವಾಗಿ ಪ್ರೀತಿಸುತ್ತಿದ್ದ ಕಿರಿಯ ಸಹೋದರ ಥಾಮಸ್ ಕೂಡಾ ಕ್ಷಯರೋಗಕ್ಕೆ ಬಲಿಯಾಗಿ ನರಳಿ ಮರಣಿಸಿದ. ಆತನ ಆರೈಕೆ ಮಾಡುತ್ತ ಕೀಟ್ಸ್ ಕೂಡಾ ಅದೇ ಕಾಯಿಲೆಯಿಂದ ನರಳತೊಡಗಿದ. ಸಾವು ಮತ್ತು ನಶ್ವರತೆಯ ಸಂದಿಗ್ಧ ಸಂಕಷ್ಟದಲ್ಲಿ ತೊಳಲಾಡುತ್ತ, ಬದುಕಿನ ಸವಾಲುಗಳ ಎದುರಿಸಲಾಗದಂತಹ ದುಸ್ತರ, ದುರಂತಮಯ ಸಂಘರ್ಷದ ಕಾಲದಲ್ಲಿಯೇ ಕೀಟ್ಸ್‍ನ ಅತ್ಯುತ್ಕøಷ್ಟ ಕಾವ್ಯ ರಚನೆಗಳು ಮೂಡಿಬಂದವು. ಸಾವಿನ ಪ್ರಲಾಪವನ್ನು ಕಂಡು ತತ್ವಜ್ಞಾನಿಯಾದ ಕೀಟ್ಸ್, ಅದನ್ನು ಸೈರಿಸುವುದೇ ಸಕಾರಾತ್ಮಕ ಸಾಮಥ್ರ್ಯವೆಂದು ಕರೆಯುತ್ತಾನೆ. ಸಣ್ಣ ದೇಹದ, ಐದು ಅಡಿ ಎತ್ತರದ ಕೀಟ್ಸ್ ಬಲಿಷ್ಟ ದೇಹಿಯಾಗಿರಲಿಲ್ಲ. ತನ್ನ ಅಲ್ಪಾವಧಿ ಜೀವನದ Ode on a Grecian Urn, Ode to Nightingale, Hyperion, La Belle Dam Sans Mercy,The Eve of St. Agnes, Ode to Autumn, Esabella ಮುಂತಾದ ಪ್ರಗಾಥಗಳನ್ನು ಕಾವ್ಯಗಳನ್ನು ರಚಿಸಿದ ಕೀಟ್ಸ್ ಬಗ್ಗೆ ಟಿ.ಎಸ್ ಇಲಿಯಟ್ ಹೀಗೆ ಹೇಳುತ್ತಾನೆ. “Letters the best any poet has ever written” ಆದರೆ ಕೀಟ್ಸ್ ಬದುಕಿರುವವರೆಗೂ ಆತನ ಕಾವ್ಯಕ್ಕೆ ಒಳ್ಳೆಯ ಸ್ಪಂದನೆ ಸಿಗಲಿಲ್ಲ. ಟೀಕೆ ವಿಮರ್ಶೆಗಳಿಗೆ ಯುವ ಮನಸ್ಸು ಜೀವ ನರಳಿತ್ತು.

ಆತನ ಬದುಕಿನ ಸಣ್ಣಸಣ್ಣ ಸಂಗತಿಗಳನ್ನು ನವಿರಾಗಿಯೇ ಆಸ್ವಾದಿಸಿದ ಕವಿ ತನ್ನ ಪ್ರಗಾಥ “Ode on a Grecian Urn,”ನಲ್ಲಿ ಹೇಳಿದ “Beauty is truth, truth is beauty,- That is all, you know on earth, And all ye need to know” ಈ ಮಾತು ಜಗತ್ಪ್ರಸಿದ್ಧವಾಗಿದೆ.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x