‘ಸೋಲು ಗೆದ್ದವನದ್ದು!’ ಕಾದಂಬರಿಯ ಒಂದು ಅಧ್ಯಾಯ: ಮಂಜು ಬನವಾಸೆ

ಅಮ್ಮ-ಅಪ್ಪ ಅದ್ಯಾರ ಕೈಕಾಲು ಹಿಡಿದು ದುಡ್ಡು ತಂದರೋ ಗೊತ್ತಿಲ್ಲ. ಫೀಸು ಎಷ್ಟೋ ಗೊತ್ತಿಲ್ಲ. ನನ್ನನ್ನು ಸಕಲೇಶಪುರದ ಗೌರ್ಮೆಂಟ್ ಪಿಯು ಕಾಲೇಜಿಗೆ ಅಡ್ಮಿಷನ್ ಮಾಡಿಸಲಾಗಿದೆ ಮತ್ತು ಮಡಿಕೆಯೊಂದಿಗೆ ನಾನೂ ಆಟ್ರ್ಸ್ ಫಸ್ಟ್ ಇಯರ್ ಪಿಯುಸಿಗೆ ಹೋಗುತ್ತಿದ್ದೇನೆ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ.

ಕಾಲೇಜಿನ ಮೊದಲ ದಿನ ಬಹುಶಃ ಅದು ಜುಲೈ 7ನೇ ತಾರೀಖಿರಬಹುದು ಎನ್ನಿಸುತ್ತದೆ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ನಮ್ಮ ಮನೆಗಳಂತೂ ಅಕ್ಷರಶಃ ಮಂಜಿನಲ್ಲಿ ಮುಳುಗಿ ಹೋಗಿದ್ದವು. ಮಳೆ ಸ್ವಲ್ಪ ಬಿಡುವು ನೀಡಿದಾಗ ಇದ್ದ ಒಂದು ಛತ್ರಿಯ ಆಶ್ರಯ ಪಡೆದುಕೊಂಡು ನಾನೂ, ಮಡಿಕೆಯೂ ಟೆಂಟ್‍ನಲ್ಲಿ ನೋಡಿದ್ದ ಸಿನಿಮಾಗಳಲ್ಲಿ ಹೀರೋಗಳು ಹಿಡಿದುಕೊಳ್ಳುವಂತೆ ಕೈಗಳಲ್ಲಿ ಒಂದೊಂದು ನೋಟ್‍ಬುಕ್ ಹಿಡಿದುಕೊಂಡು ಬೆಳಗ್ಗೆ ಏಳಕ್ಕೆಲ್ಲ ನಮ್ಮೂರಿನಿಂದ ಸಕಲೇಶಪುರಕ್ಕೆ ಹೊರಡುತ್ತಿದ್ದ ಬಸ್ ಹತ್ತಿದೆವು. ಮಳೆ ಧಾರಾಕಾರವಾಗಿ ಸುರಿಯುತ್ತಿದ್ದುದರಿಂದ ಬಸ್‍ನಲ್ಲಿ ನಾವೂ ಸೇರಿದಂತೆ ನಾಲ್ಕೈದು ಜನರಿದ್ದೆವು.

ಬಸ್ 8ಕ್ಕೆಲ್ಲ ಸಕಲೇಶಪುರದಲ್ಲಿ ನಮ್ಮನ್ನು ಇಳಿಸಿ ಹೊರಟು ಹೋಯಿತು. ಅವರಿವರನ್ನು ಕೇಳುತ್ತಾ ನಾವು ಸೇರಿದ್ದ, ಕ್ಷಮಿಸಿ ನಮ್ಮನ್ನು ಸೇರಿಸಿದ್ದ ಕಾಲೇಜು ಹುಡುಕಿಕೊಂಡು ಐದು ನಿಮಿಷದಲ್ಲಿ ಕಾಲೇಜು ಆವರಣ ತಲುಪಿದೆವು. ನಮ್ಮ ಕನಸಿನ ಕಾಲೇಜಿನ ಎಣಿಕೆಯಂತೇನೂ ಅಲ್ಲಿನ ಕಟ್ಟಡವಿರಲಿಲ್ಲ. ಯಾರೋ ಬ್ರಿಟಿಷ್ ಅಧಿಕಾರಿ ಹಿಂಗ್ಸ್ ಎನ್ನುವಾತ ಕಟ್ಟಿಸಿದ್ದು ಎನ್ನುವುದು ಅಲ್ಲಿದ್ದ ಬೋರ್ಡ್‍ನಿಂದ ತಿಳಿಯುತ್ತಿತ್ತು. ನಮ್ಮೂರಿನ ಸರ್ಕಾರಿ ಶಾಲೆಯ ಹೊಸ ಕಟ್ಟಡವೇ ಕಾಲೇಜಿಗಿಂತಾ ಚೆನ್ನಾಗಿದೆ ಎಂಬ ಮಡಿಕೆಯ ಅಭಿಪ್ರಾಯಕ್ಕೆ ನಾನು ಸಹಮತ ವ್ಯಕ್ತಪಡಿಸಿದೆ.

ಮಳೆ ಬಿಟ್ಟು, ಬಿಟ್ಟು ಸುರಿಯುತ್ತಿತ್ತು. ಒಂಭತ್ತು ಗಂಟೆಗೆ ಕಾಲೇಜು ಆರಂಭವಾಗಬೇಕಿದ್ದರೂ ನಾವೂ ಸೇರಿದಂತೆ ಎಂಟ್ಹತ್ತು ಮಂದಿ ವಿದ್ಯಾರ್ಥಿಗಳು ಮಾತ್ರವೇ ಕಾರಿಡಾರಿನ ಕಂಬಗಳಿಗೆ ಒರಗಿಕೊಂಡು ನಿಂತಿದ್ದೆವು. ಎಲ್ಲರ ಮುಖದಲ್ಲಿಯೂ ಮೊದಲ ದಿನ ಕಾಲೇಜು ಮೆಟ್ಟಿಲು ಹತ್ತಿದ ಸಂಭ್ರಮ. ನನ್ನಲ್ಲಂತೂ ಕಾಲೇಜು ಅಂದ ಮೇಲೆ ಈವರೆಗೂ ಇದ್ದ ಗಣಿತದ ಮೇಷ್ಟ್ರು ಕಾಟ, ಪ್ರಶ್ನೆ, ಕೋಲಿನೇಟು, ಹೋಂ ವರ್ಕ್‍ಗಳ ಕಾಟವಿಲ್ಲದ ಸ್ವಚ್ಛಂದದ ಬದುಕು ಗಳಿಸಿಕೊಂಡೆ ಎಂಬ ಭಾವನೆ ಬಲವಾಗಿ ಬೇರೂರಿತ್ತು. 

ಬೇಕಿದ್ದರೆ ಕ್ಲಾಸ್ ಅಟೆಂಡ್ ಮಾಡಬಹುದು. ಇಲ್ಲ ಊರೆಲ್ಲ ಸುತ್ತಾಡಿ, ಸಿನಿಮಾ ನೋಡಿ ಮನೆಗೆ ವಾಪಸ್ ಬಸ್ ಹತ್ತುವುದು. ಅದಕ್ಕೆ ಬಸ್‍ಪಾಸ್ ಕೊಡ್ತಾರೆ. ದಿನಾಲು ದುಡ್ಡು ಕೊಡೋಹಂಗಿಲ್ಲ ಎಂದೆಲ್ಲ ಮನಸ್ಸಿನಲ್ಲೇ ಮಂಡಿಗೆ ತಿಂದು ಖುಷಿ ಪಡುತ್ತಿದ್ದೆ. ಆದರೆ ಮಡಿಕೆಗೆ ಅದನ್ನೆಲ್ಲ ಹೇಳಲು ಧೈರ್ಯವಾಗಲಿಲ್ಲ. ಅವನ ಮನಸ್ಸು ಮತ್ತೆಲ್ಲೋ ಹಾರಾಡುತ್ತಿತ್ತು ಎನ್ನುವುದು ಅವನು ಪಕ್ಕದಲ್ಲಿದ್ದ ನನ್ನ ಬಳಿ ಮಾತಾಡದೇ ನಿಂತಿದ್ದಾಗಲೇ ನನಗೆ ಅರ್ಥವಾಗಿತ್ತು.
ಜೀಪೆÇಂದು ಬುರು ಬುರು ಎಂದು ಸದ್ದು ಮಾಡುತ್ತಾ ನಮ್ಮ ಕಾಲೇಜು ಹಾದಿಯ ಕೆಸರುಮಯವಾದ ಏರು ಹಾದಿಯಲ್ಲಿ ಅತ್ತಿತ್ತ ಎಳೆದಾಡುತ್ತಾ ಗೇಟಿನೊಳಗೆ ಬಂದ ಕೂಡಲೇ ಮಡಿಕೆ ನನ್ನೊಂದಿಗೆ ಮಾತನಾಡಲು ಶುರು ಮಾಡಿದ. ‘ಏನಮ್ಮ ಮತ್ತೆ ಹೆಂಗನ್ನಿಸ್ತಿದೆ ಕಾಲೇಜು?' ಎಂದು ನನ್ನ ಮುಖ ನೋಡಿದ.

‘ಯಾಕೆ ತಿಕ್ಲಾ?' ಅಂತ ನಾನು ಗುರಾಯಿಸಿದೆ. ಅಷ್ಟರಲ್ಲಿ ಜೀಪಿನಿಂದ ಕೆಂಪು ಬಣ್ಣದ ಚೂಡಿಧಾರ ಧರಿಸಿಕೊಂಡು, ಮುಖದಲ್ಲಿ ನಗು ತುಂಬಿಕೊಂಡ ಲತಾ ಕೆಳಗಿಳಿದು ಕಾರಿಡಾರಿನ ಕಡೆಗೆ ನಡೆದುಬರಲಾರಂಭಿಸಿದಳು. 

ನಿಜ ಹೇಳುತ್ತೇನೆ, ಅದುವರೆಗೂ ಯಾವೊಬ್ಬ ಹುಡುಗಿಯೊಂದಿಗೂ ಸಲುಗೆ ಬೆಳೆಸಿಕೊಳ್ಳಲು ಹೋಗದ ನನಗೇ ಅವಳನ್ನು ನೋಡಿ ಒಂದು ಕ್ಷಣ ಎದೆಯೊಳಗಿನ ವೀಣೆ ತಾನಾಗೇ ಸ್ವರ ಮೀಟಲಾರಂಭಿಸಿತು. ಅಷ್ಟು ಸುಂದರವಾಗಿ ಕಾಣಿಸುತ್ತಿದ್ದಳು.

ಮಡಿಕೆ ಉಸಿರಾಡುವುದನ್ನೇ ನಿಲ್ಲಿಸಿದವನಂತೆ ಅವಕ್ಕಾಗಿ ನಿಂತ. ಸುಮ್ಮನೆ ನಮ್ಮೆಡೆಗೊಮ್ಮೆ ತುಂಟ ನೋಟ ನೋಡಿದ ಲತಾ ನಮ್ಮ ಹಿಂದಿದ್ದ ನಾಲ್ಕೈದು ಹುಡುಗಿಯರ ಗುಂಪಿನೆಡೆಗೆ ನಡೆದು ಹೋದಳು. ನಾನೂ, ಮಡಿಕೆಯೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.

ನಾನೇ ಮೌನ ಮುರಿದು, ‘ಸೂಪರ್ ಕಣ್ತಿದಾಳೋ' ಅಂದೆ. 
‘ಹಂಗ್ ನೋಡಿದ್ರೆ ಸಾಯಿಸ್ಬಿಡ್ತೀನಿ ನಿನ್ನ' ಎಂದು ದೊಡ್ಡಯ್ಯ ಮುಖ ಗಂಟಿಕ್ಕಿಕೊಂಡು ವಾರ್ನ್ ಮಾಡಿದ. ನಾನು ಗಂಭೀರವಾಗಿ ತಗೆದುಕೊಳ್ಳಲಿಲ್ಲ.

ಮುಂದೆ ನಾವೆಲ್ಲ ಒಂದೇ ತರಗತಿಯಲ್ಲಿ ಸೇರಿದೆವು. ಕಾಲೇಜು ಜೀವನ ನಾನಂದುಕೊಂಡಂತಲ್ಲ ಎನ್ನುವುದು ಮೊದಲ ದಿನವೇ ನನಗೆ ಅರ್ಥವಾಯಿತು. ಮೊದಲ ದಿನ ತಮಾಷೆಯಾಗಿಯೇ ಪಾಠ ಶುರುಮಾಡಿದ ನಮ್ಮ ಕನ್ನಡ ಮೇಷ್ಟ್ರು ತಿರುಪತಿಗೌಡ್ರು ನನ್ನ ಕಣ್ಣಿಗೆ ಅದ್ಯಾಕೆ ಕೈಲಾಗದವರಂತೆ ಕಂಡರೋ ಗೊತ್ತಿಲ್ಲ. ಅವರು ಪಾಠ ಮಾಡುತ್ತಿರುವಾಗ ಅತ್ತ ಗಮನ ಕೊಡುವುದು ಬಿಟ್ಟು, ‘ಮಡಿಕೆ ಲತಾ ನನ್ನೇ ನೋಡ್ತಾವ್ಳೆ. ನಿಂಗೆ ಬೇಜಾರಾಗ್ತಿಲ್ವೇನೋ?' ಎಂದು ಚುಡಾಯಿಸುತ್ತಿದ್ದೆ.

ನಿಂತಲ್ಲಿಂದಲೇ ತಮ್ಮ ಕೈಲಿದ್ದ ಸೀಮೆಸುಣ್ಣ ತೆಗೆದು ನನ್ನತ್ತ ಗುರಿಯಿಟ್ಟು ಬೀಸಿದ ತಿರುಪತಿಗೌಡರು, ‘ಏಯ್… ಗೂಬೆ… ನೀನೇ ಎದ್ದು ನಿಲ್ಲೋ' ಎಂದು ಗಡುಸಾದ ಧ್ವನಿಯಲ್ಲಿ ಕೂಗುತ್ತಾ ನನ್ನತ್ತ ಬೆರಳು ತೋರಿಸಿದರು.

ಗಾಬರಿಯಿಂದ ಎದ್ದು ನಿಂತೆ. ‘ಯಾವೂರೋ ನಿಂದು?' ಎಂದು ಪ್ರಶ್ನೆ ಹಾಕಿದರು.
‘ವಣಗೂರು ಸಾರ್' ಅಂದೆ.

‘ನಿಮ್ಮೂರಲ್ಲಿ ಕಾಯೋಕೆ ದನ ಶಾರ್ಟೇಜಿದಾವೇನೋ? ಹಂಗಿದ್ರೆ ಹೇಳು ನಮ್ಮನೇಲಿ ನಾಕು ಎಮ್ಮೆ ಇದಾವೆ ಕಳುಹಿಸ್ತೀನಿ ಕಾದು ಕಟ್ಟುವಂತೆ… ಕತ್ತೆ ತಂದು. ಇದು ಮಾವುನ್ ಮನೆ ಅಲ್ಲ. ಕ್ಲಾಸಲ್ಲಿ ಕೂರಂಗಿದ್ರೆ ತಿಕಾಬಾಯಿ ಮುಚ್ಕಂಡ್ ಕೂತ್ಕ. ಇಲ್ಲಾಂದ್ರೆ ಒದ್ದು ಓಡುಸ್ತೀನಿ… ಹಲ್ಕಾ ತಂದು…' ಎಂದು ಒಂದೇ ಸಮನೆ ಭೋರ್ಗರೆದ ತಿರುಪತಿಗೌಡ್ರ ಬೈಗುಳ ಕೇಳಿ ಇಡೀ ತರಗತಿ ನಗುತ್ತಿದ್ದರೆ ನನಗೆ ನೆಲಕ್ಕೆ ಇಳಿದು ಹೋದ ಅನುಭವ.

ಅಂದು ಆದ ಅವಮಾನದ ತೀವ್ರತೆ ಎಷ್ಟಿತ್ತೆಂದರೆ ಮುಂದಿನ ಎರಡು ವರ್ಷ ನಾನು ಒಮ್ಮೆಯೂ ಲತಾ ಇರಲಿ, ಯಾವ ಹುಡುಗಿಯತ್ತಲೂ ಕತ್ತೆತ್ತಿ ನೋಡುವ ಧೈರ್ಯ ಮಾಡಲಿಲ್ಲ. ಆದರೆ ಬರು ಬರುತ್ತಾ ಕನ್ನಡ ಮೇಷ್ಟ್ರು ನನ್ನ ಅಚ್ಚುಮೆಚ್ಚಿನ ಲೆಕ್ಚರರ್ ಆದರು. ನಾನು ಅವರ ಪಾಲಿನ ಮೆಚ್ಚಿನ ಶಿಷ್ಯನಾದೆ. ನನ್ನಲ್ಲಿ ಕನ್ನಡ, ಸಾಹಿತ್ಯ, ಬರಹದ ಬಗ್ಗೆ ಆಸಕ್ತಿ ಬೆಳೆಸಿದ್ದೇ ತಿರುಪತಿಗೌಡರು. ಈಗಲೂ ಆಗೀಗ ಫೋನ್ ಮಾಡಿ ಅವರನ್ನು ಮಾತಾಡಿಸುವ ಅಭ್ಯಾಸ ಇರಿಸಿಕೊಂಡಿದ್ದೇನೆ. ನನ್ನ ಮೊದಲ ಕಾಲೇಜು ತರಗತಿಯನ್ನು ಅವರು ಎಂದೋ ಮರೆತಿದ್ದಾರೆ. ಆದರೆ ನಾನು ಮರೆತಿಲ್ಲ. ಈಗಲೂ ಕಾಲೇಜಿನ ಮೊದಲ ದಿನ ನೆನಪಾದಾಗಲೆಲ್ಲ ನನ್ನಲ್ಲೇ ನೆನೆದು ನಗುತ್ತಿರುತ್ತೇನೆ.

ಬೆಳಗ್ಗೆ 9ಕ್ಕೆ ಕ್ಲಾಸ್ ಆರಂಭವಾದರೆ 12ಕ್ಕೆಲ್ಲ ಮುಗಿಯುತ್ತಿತ್ತು. ಮೊದಲಿನಿಂದಲೂ ಕ್ರಿಕೆಟ್ ಹುಚ್ಚಿಗೆ ಬಿದ್ದಿದ್ದ ನನಗೆ ಕಾಲೇಜಿನಲ್ಲಿ ಅಂತಹದ್ದೇ ಎಂಟ್ಹತ್ತು ಹುಡುಗರು ಜೊತೆಯಾಗಿದ್ದರು. ಹೀಗಾಗಿ ನಾನೂ, ಮಡಿಕೆ ಕ್ಲಾಸ್ ರೂಮಿನಲ್ಲಿ ಒಟ್ಟಿಗೇ ಕೂರುತ್ತಿದ್ದರೂ ಆಚೆ ಬಂದ ಮೇಲೆ ನಾನು ಬ್ಯಾಟು, ವಿಕೆಟ್ ಹಿಡಿದು ಬೇರಾಗುತ್ತಿದ್ದೆ. ಅವನು ಏನಾದರೂ ಆಡಿಕೊಳ್ಳಲಿ ಎಂದು ನಾನು ದಿನಕ್ಕೆರಡು ಮ್ಯಾಚ್ ಮುಗಿಸಿಯೇ ಬಸ್‍ಸ್ಟ್ಯಾಂಡಿನ ಕಡೆಗೆ ಹೋಗುತ್ತಿದ್ದೆ. ಮಡಿಕೆ ನನಗಾಗಿ ಕಾಯುತ್ತಿರುತ್ತಿದ್ದ. ನಮ್ಮ ರೂಟಿನಿಂದ ಬರುತ್ತಿದ್ದ ಎಲ್ಲ ಹುಡುಗ, ಹುಡುಗಿಯರೂ 3 ಗಂಟೆಗೆ ಬರುತ್ತಿದ್ದ ಹೊಂಗಡಹಳ್ಳ ಎಕ್ಸ್‍ಪ್ರೆಸ್ ಹತ್ತಿ ಮನೆ ಸೇರುತ್ತಿದ್ದೆವು. ದಿನಾಲು ಬಸ್ ಬಂದ ತಕ್ಷಣ ನೂಕುನುಗ್ಗಲಿನಲ್ಲಿಯೂ ನಾನು ಹೆಂಗಾದರೂ ಮಾಡಿ ಸೀಟು ಹಿಡಿದು ಬಿಡುತ್ತಿದ್ದೆ. ಮಡಿಕೆ ನಿಂತು ಬರಲಿಕ್ಕೇ ಇಷ್ಟ ಪಡುತ್ತಿದ್ದ. ಆದರೂ ನಾನು ಒಂದೊಂದು ದಿನ ಬಲವಂತ ಮಾಡಿ ಅವನನ್ನು ಎಳೆದು ತಂದು ನನ್ನ ಪಕ್ಕ ಕೂರಿಸಿಕೊಳ್ಳುತ್ತಿದ್ದೆ. ಯಾಕೋ ಮಡಿಕೆ ಮೊದಲ ಪಿಯುಸಿ ಕೊನೆಯ ಹೊತ್ತಿಗೆಲ್ಲ ನನ್ನೊಂದಿಗೆ ಜಾಸ್ತಿ ಸಮಯ ಕಳೆಯಲು ಬರುತ್ತಲೇ ಇರಲಿಲ್ಲ. ನನಗೂ ಹೊಸ ಗೆಳೆಯರು ಸಿಕ್ಕಿದ್ದರಿಂದ ನಾನೂ ಅವನನ್ನು ಮೊದಲಿನಷ್ಟು ಹಚ್ಚಿಕೊಳ್ಳುತ್ತಿರಲಿಲ್ಲ. 

ನನ್ನಿಂದ ದೂರ ಹೋದಷ್ಟೂ ಮಡಿಕೆ ಲತಾಳ ಕಡೆಗೆ ವಾಲುತ್ತಿದ್ದ ಎನ್ನುವುದು ನನಗೆ ಗೊತ್ತಾಗಿದ್ದು, ಅದೊಂದು ದಿನ ನಾನು ಕ್ರಿಕೆಟ್ ಮುಗಿಸಿ ಬರುವವರೆಗೂ ಮಡಿಕೆ ನನಗಾಗಿ ಕಾಲೇಜಿನ ಹತ್ತಿರವೇ ಕಾದು ಕುಳಿತು ಹೃದಯ ಬಿಚ್ಚಿ ಮಾತನಾಡಿದಾಗಲೇ.

ಕಾಲೇಜಿನ ಹಿಂದಿನ ಉದ್ಯಾನದಲ್ಲಿ ಹಾಕಿದ್ದ ಕಲ್ಲು ಬೆಂಚಿನ ಮೇಲೆ ಮಂಕಾಗಿ ಕುಳಿತಿದ್ದ ಮಡಿಕೆ, ನಾನು ಹತ್ತಿರ ಹೋಗುತ್ತಲೇ ‘ಡೀಪಿ… ಲತುಂಗೆ ಮದ್ವೆ ಅಂತೋ' ಎಂದು ದೀನನಾಗಿ ಹೇಳಿದ. ಅವನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು.

‘ಅದಕ್ಕೆ ನೀನ್ಯಾಕೋ ಅಳ್ತಿದ್ದೀಯಾ?' ನಾನು ಅಚ್ಚರಿಯಿಂದ ಪ್ರಶ್ನಿಸಿದೆ.
‘ಲವ್ ಮಾಡ್ತಿದ್ದೀವಿ ಕಣೋ… ಅವಳ್ನ ಬಿಟ್ಟಿರೋಕೆ ಆಗೋದಿಲ್ಲ. ಈಗ ಅಪ್ಪ ಹೊಡಿತಾರೆ ಅಂತ ನೆಪ ಹೇಳ್ಕೊಂಡು ನನ್ನ ಮರ್ತು ಬಿಡು ಅಂತ ಹೇಳೋಕೆ ಶುರು ಮಾಡಿದ್ದಾಳೆ… ಏನ್ಮಾಡ್ಲೋ ನಾನು ಡೀಪಿ…' ಮಡಿಕೆ ನನ್ನ ಭುಜದ ಮೇಲೆ ತಲೆಯಿಟ್ಟು ಅಳಲಾರಂಭಿಸಿದ.

ಆ ಸಮಯಕ್ಕೆ ನನಗೆ ಬರಸಿಡಿಲು ಬಡಿದಂತಾಯಿತು. ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುವವರ ಮಕ್ಕಳು ನಾವು. ನಮಗೇ ತಿನ್ನೋಕೆ ಅನ್ನ ಇಲ್ಲ. ಒಂದು ವೇಳೆ ದೊಡ್ಡಯ್ಯ-ಲತಾ ಪ್ರೇಮ ಪ್ರಕರಣ ಗೊತ್ತಾಗಿ ಶಂಭೇಗೌಡರು ಕೋಪ ಮಾಡಿಕೊಂಡರೆ ದೊಡ್ಡಯ್ಯನ ಮನೆಯವರು ಬದುಕುವುದೇ ಕಷ್ಟವಿತ್ತು. ಅಲ್ಲಿ ಅಂತಸ್ತಿನ ಜೊತೆಗೆ ಜಾತಿಯ ಅಂತರ ಭಾರೀ ದೊಡ್ಡದಿತ್ತು. ಏನು ಮಾತಾಡಬೇಕೋ ತಿಳಿಯದೇ ಮಡಿಕೆಯ ತಲೆ ಸವರಿಸಿದ ನಾನು ಒಳಗೇ ನಡುಗಿ ಹೋಗಿದ್ದೆ.

‘ಅವಳ್ನ ಕರ್ಕೊಂಡು ದೂರ ಹೋಗ್ಬುಡ್ಲಾ ಮಡಿಕೆ.' ನಾನು ಧೈರ್ಯ ಮಾಡಿ ಸಲಹೆ ನೀಡಿದೆ. ನೆಟ್ಟಗೆ 18 ವರ್ಷ ತಲುಪದ ಇಬ್ಬರಿಗೆ ನಾನು ಎಂಥ ಕೆಟ್ಟ ಸಲಹೆ ನೀಡಿದ್ದೆ ಎಂದು ನನಗೆ ಈಗ ಅನ್ನಿಸುತ್ತದೆ.
ಆದರೆ ನನಗಿಂತಲೂ ಪ್ರಬುದ್ಧನಾಗಿದ್ದ ಮಡಿಕೆ ‘ಅದೆಲ್ಲ ಆಗೋಲ್ಲ ಡೀಪಿ… ಎಷ್ಟು ಕನಸು ಕಂಡಿದ್ವಿ ಗೊತ್ತಾ? ನಾನು ಓದಿ, ಡಿಗ್ರಿ ಮಾಡಿ, ಕೆಲ್ಸಕ್ಕೆ ಸೇರಿ, ಗೌರ್ಮೆಂಟ್ ಆಫೀಸರ್ರಾಗಿ ಅವರಪ್ಪನ ಮುಂದೆ ಜೀಪಲ್ಲೋಗಿ ಇಳಿದು ಅವಳನ್ನ ಮದ್ವೆ ಮಾಡಿಕೊಡಿ ಅಂತ ಕೇಳ್ಬೇಕು ಅನ್ನೋಳು… ಈವತ್ತು ಇನ್ನೊಂದ್ಸಾರಿ ಮಾತಾಡಿಸ್ಬೇಡ. ನಮ್ಮಪ್ಪ ನಿನ್ ಜೊತೆ ಮಾತಾಡಿರೋದು ಗೊತ್ತಾದ್ರೆ ನನ್ನ ಸಾಯಿಸ್ಬಿಡ್ತಾರೆ ಅಂದೋದ್ಲು ಕಣೋ' ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.

ಒತ್ತಡದಿಂದಾಗಿ ನನಗೆ ತಲೆ ನೋಯಲಾರಂಭಿಸಿತು.
‘ಹೋಗ್ಲಿ ಬಿಡೋ… ಅವಳು ಚೆನ್ನಾಗಿರ್ಲಿ… ಡೀಪಿ… ನಾನು ಲೇಟಾಗಿ ಬರ್ತೀನಿ ಮನೆಗೆ' ಅನ್ನುತ್ತಾ ಕಣ್ಣೀರು ಒರೆಸಿಕೊಂಡ ಮಡಿಕೆ ನನ್ನನ್ನೊಮ್ಮೆ ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಟ್ಟ.
‘ಬೇಡ ಕಣೋ ಮಡಿಕೆ… ನೀನು ನನ್ ಜೊತೆನೇ ಬಾ. ಬೇಕಿದ್ರೆ ನಾನು ಸಂಜೆ ತಂಕ ನಿನ್ ಜೊತೆನೇ ಇರ್ತಿನಿ' ಎಂದು ಪಟ್ಟು ಹಿಡಿದೆ.

ನನ್ನ ಕೈಗೆ ಅವನ ನೋಟ್‍ಬುಕ್ ಕೊಟ್ಟ ದೊಡ್ಡಯ್ಯ ಮಾತಾಡದೇ ನಡೆಯಲಾರಂಭಿಸಿದ. ನಾನು ನಿಂತು ನೋಡುತ್ತಿರುವಾಗಲೇ ಅವನು ಕಾಲೇಜು ಗೇಟು ದಾಟಿದ. ಒಮ್ಮೆ ಹಿಂದಿರುಗಿ ನೋಡಿ ನನ್ನತ್ತ ಕೈ ಬೀಸಿದ. ನಾನು ಅಳಲಾರಂಭಿಸಿದೆ. ಅಂದು ನಾನು ಅನುಭವಿಸಿದ ಸಂಕಟ, ಹಾಕಿದ ಕಣ್ಣೀರು… ನಾನಷ್ಟೆ ಅರ್ಥ ಮಾಡಿಕೊಳ್ಳಬಲ್ಲೆ. 

ಅವನು ಕಣ್ಣಿಂದ ಮರೆಯಾದಾಗ ಅವನ ನೋಟ್‍ಬುಕ್ ಅರಳಿಸಿದೆ. ಒಳಗಿನ ಹಾಳೆಗಳಲ್ಲಿ ಮುತ್ತು ಪೋಣಿಸಿದಂತಹ ಅಕ್ಷರಗಳಲ್ಲಿ ಬರೆದಿದ್ದ ‘ಲತಾ ನನ್ನ ಜೀವ.' ಕೊನೆಯ ಪುಟ ತಿರುಗಿಸಿದೆ. ಹೃದಯ ಮತ್ತಷ್ಟು ಭಾರವಾಯಿತು.

ಮರೆವಿನೂರಿನ ರಾಜನೇ ನಿನಗಿದೋ ನನ್ನ ರಣವೀಳ್ಯ…
ತಾಖತ್ತಿದ್ದರೆ ನನ್ನೆದೆ, ಮೆದುಳುಗಳ ಮೇಲೆ ದಂಡೆತ್ತಿ ಬಾ.
ಸವಿ ನೆನಪ ಸೈನಿಕರ ಬಿಟ್ಟು ನಿನ್ನ ಹುಟ್ಟಡಗಿಸುತ್ತೇನೆಂದು ನಾನು ಘರ್ಜಿಸುತ್ತಿಲ್ಲ.
ನಾನೇ ನಿಂತು ಕೋಟೆ ಬಾಗಿಲು ತೆಗೆದು ಸ್ವಾಗತಿಸುತ್ತೇನೆ.
ಹೃದಯದ ಓವೆ, ಕೋವೆಗಳಲ್ಲಿ ಬಚ್ಚಿಟ್ಟ 
ಬೆಚ್ಚನೆ ನೆನಪುಗಳ ನಾನೇ ಬಿಚ್ಚಿಡುತ್ತೇನೆ.
ಹನಿ ರಕ್ತದ ಕಲೆಯೂ ಉಳಿಯದಂತೆ 
ಕೊಂದು, ತಿಂದು, ತೇಗಿ, ಕುಣಿದು ನಿನ್ನ ಸಾಮ್ರಾಜ್ಯ ವಿಸ್ತರಿಸಿಬಿಡು…
ನೆನಪುಗಳು ಸಿಹಿ ಕಳೆದುಕೊಂಡಿಲ್ಲ…
ಆದರೆ ಅವಳ ಖುಷಿಪಡಿಸಬೇಕಾದ ತುರ್ತಿದೆ…
ಮರೆವಿನೂರಿನ ರಾಜನೇ… ಬಾ ನಿನಗಿದೋ ತುಂಬು ಹೃದಯದ ಆಹ್ವಾನ…
-ಅವಳ ಚಂದಿರ

ಹೀಗಂತ ಒಂದು ಕವನವನ್ನು ಕೊನೆಯದಾಗಿ ಗೀಚಿದ್ದ ದೊಡ್ಡಯ್ಯ ನನ್ನ ಹೃದಯದಲ್ಲಿ ಮತ್ತಷ್ಟು ದೊಡ್ಡವನಾದ.
ನನ್ನ ಎಣಿಕೆಯಂತೆ ದೊಡ್ಡಯ್ಯ ಅಂದು ಮನೆಗೆ ಬಂದಿರಲಿಲ್ಲ. ಅವರಮ್ಮ ಕೇಳಿದಾಗ ಅವನು ಮಧ್ಯಾಹ್ನ ನನಗೆ ಸಿಗಲಿಲ್ಲವೆಂದು ಸುಳ್ಳು ಹೇಳಿದೆ. ಮರು ದಿನ ಶಂಭೇಗೌಡ್ರು ಮಗಳು ಲತಮ್ಮನ ಮದುವೆ ಗೊತ್ತಾಗಿದೆ. ಚಿಕ್ಕಮಗಳೂರಿನ ಕಡೆಯ ಪ್ಲಾಂಟರ್ ಒಬ್ಬರು ಮದುವೆಯಾಗುತ್ತಿದ್ದಾರೆ ಎನ್ನುವುದು ಅಪ್ಪ-ಅಮ್ಮ ರಾತ್ರಿ ಊಟದ ವೇಳೆ ಮಾತಾಡುತ್ತಿದ್ದಾಗ ಕೇಳಿಸಿಕೊಂಡೆ.

ಮೂರು ದಿನವಾದರೂ ಮಡಿಕೆ ಕಾಲೇಜಿಗೂ ಬಾರದೆ, ಮನೆಗೂ ಹೋಗದೇ ನಾಪತ್ತೆಯಾಗಿದ್ದು ನನಗೆ ಭಯವುಂಟು ಮಾಡಿತ್ತು. ಎಲ್ಲಿಯಾದರೂ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾನಾ ಅಂತ ಯೋಚಿಸಿ ನನ್ನೊಳಗೇ ಬೆದರುತ್ತಿದ್ದೆ. ನ್ಯೂಸ್ ಪೇಪರ್‍ಗಳನ್ನು ತಿರುವಿ ಹಾಕಿ ಎಲ್ಲಿಯಾದರೂ ಅಪರಿಚಿತ ಶವ ಪತ್ತೆಯಾಗಿದ್ದಾವಾ ಎಂದು ಹುಡುಕುತ್ತಿದ್ದೆ.

ಒಂದು ವಾರದವರೆಗೂ ನಮ್ಮ ಎಡಬಲಗಳಲ್ಲಿದ್ದ ಅವನ ತಂದೆ-ತಾಯಿ ಹಾಗೂ ಅಜ್ಜ-ಅಜ್ಜಿಯ ಮನೆಯಲ್ಲಿ ಅವನನ್ನು ನೆನೆದು ಅಳುವುದು ಕೇಳಿಸುತ್ತಿತ್ತು. ನಾನು ಏನೂ ಗೊತ್ತಿಲ್ಲದವನಂತೆ ಬೆಳಗ್ಗೆ ಎದ್ದ ತಕ್ಷಣ ಅವನ ಮನೆ ಬಾಗಿಲು ಬಡಿದು ‘ದೊಡ್ಡಯ್ಯ ಬಂದ್ನಾ?' ಅಂತ ಕೇಳುತ್ತಿದ್ದೆ.

ಒಂದು ತಿಂಗಳು ಕಳೆದ ನಂತರ ಅವನ ಮನೆಯವರು ಯಸಳೂರಿಗೆ ಹೋಗಿ ಪೋಲೀಸ್ ಸ್ಟೇಷನ್ನಲ್ಲಿ ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಕಂಪ್ಲೆಂಟ್ ರಿಜಿಸ್ಟರ್ ಮಾಡಿ ಬಂದರು. ನಾಲ್ಕೈದು ತಿಂಗಳ ನಂತರ ಅವರೂ ದೊಡ್ಡಯ್ಯನ ದಾರಿ ಕಾಯುವುದನ್ನು ಬಿಟ್ಟು ಬಿಟ್ಟರು.

ಕೊನೆಗೊಂದು ದಿನ ಮಡಿಕೆಯ ಅಪ್ಪ ಮರೊಡ್ಡ ಮಡಿಕೇರಿಯಲ್ಲಿನ ತೋಟವೊಂದರಲ್ಲಿ ರೈಟರ್ ಕೆಲಸ ಗಿಟ್ಟಿಸಿದ್ದೇನೆ ಎಂದು ಹೇಳಿಕೊಂಡು ಮನೆ ಖಾಲಿ ಮಾಡಿಕೊಂಡು ಹೆಂಡತಿಯೊಂದಿಗೆ ಹೊರಟು ಹೋದರು. ಒಂದು ವಾರದ ನಂತರ ಅವನ ಅಜ್ಜಿ-ತಾತಾ ಸಹ ಇದ್ದೊಬ್ಬ ಮಗ ಹೋಗಿ ನೋವಲ್ಲಿದ್ದಾರೆ. ಈಗ ನಾವು ಜೊತೇಲಿರಬೇಕು ಎಂದು ತಮ್ಮ ಹಳೆಯ ವೈಮನಸ್ಯ ತೊರೆದು, ಲೈನುಮನೆ ಖಾಲಿ ಮಾಡಿ ಮಡಿಕೇರಿಗೆ ಹೋದರು.

ಹೀಗೆ ನನ್ನ ಬದುಕಿನಿಂದ ಮರೆಯಾದ ಮಡಿಕೆ ಮಾತ್ರ ಆಗಾಗ್ಗೆ ನೆನಪಾಗುತ್ತಲೇ ಇದ್ದ. ಆದರೆ, ಎಲ್ಲಿ ಅಂತ ಅವನನ್ನು ಹುಡುಕಲಿ. ನನ್ನ ಅಂತರಾತ್ಮ ಮಾತ್ರ ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ. ಎಲ್ಲಿಯಾದರೂ ಬದುಕಿದ್ದಾನೆ. ಒಂದಲ್ಲ ಒಂದು ದಿನ ಸಿಕ್ಕಿ ಅದೇ ಹಳೆ ಪ್ರೀತಿಯಿಂದ ನನ್ನನ್ನು ಡೀಪಿ… ಅಂತ ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟು ಕಣ್ಣೀರು ಹಾಕುತ್ತಾನೆ ಎನ್ನುವ ಭರವಸೆ ಇದ್ದೇ ಇತ್ತು. ಹಾಗೆ ದಿನಗಳುರುಳುತ್ತಲೇ ನನ್ನ ಸೆಕೆಂಡ್ ಪಿಯುಸಿ ಓದು ಮುಗಿದಿತ್ತು.

ಈ ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ:
ಪ್ರಜೋದಯ ಪ್ರಕಾಶನ
ಗಂಧದ ಕೋಠಿ ಹಿಂಭಾಗ, ಗೋಕುಲ್ ಹೋಟೆಲ್ ರಸ್ತೆ,
ಕೆ.ಆರ್.ಪುರಂ, ಹಾಸನ-573201
prajodayaprakashana@gmail.com
ಮೊಬೈಲ್: 8792276742

www.facebook.com/prajodayaprakashana

ಆನ್ ಲೈನ್ ನಲ್ಲಿ ಕೊಳ್ಳಲು: www.payumoney.com/store/buy/prajodayaprakashana

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x