ಸರ್ಕಾರಿ ಮದ್ಯದಂಗಡಿಯಿ೦ದ ಕೈಯಲ್ಲಿ ಬಾಟಲಿ ಹಿಡಿದುಕೊಂಡು ಹೊರಬಿದ್ದಾಗ ಮಳೆರಾಯ ಕರುಣೆತೋರುತ್ತಾ ತನ್ನ ವಿರಾಟರೂಪದಿ೦ದ ಸೌಮ್ಯರೂಪಧಾರಿಯಾಗಿದ್ದ. ಕೆಲವರು ತಮ್ಮ ಬಾಟಲಿಗಳನ್ನು ರದ್ದಿಪೇಪರನಲ್ಲಿ ಸುತ್ತಿದ್ದರೆ, ಕೆಲವರು ತಮ್ಮ ಟವೇಲ್ ನಲ್ಲಿ ಬಚ್ಚಿಟ್ಟಿದ್ದರು, ಇವರಡೂ ದೊರಕದ ಹಲವರು, ತ೦ತಮ್ಮ ಲು೦ಗಿಗಳಲ್ಲಿ ಆಶ್ರಯ ಕೊಟ್ಟು ಸ್ಮಗ್ಲರ್ ಗಳ ತರ ಹೊರಹೋಗುತ್ತಿದ್ದರು. ಸುಮ್ಮನೆ ಕೈಯಲ್ಲಿ ಹಿಡಿದುಕೊ೦ಡು ಹೋಗಿದ್ದರೆ ಅಷ್ಟೇನೂ ಸ೦ಶಯ ಬರುತ್ತಿರಲಿಲ್ಲವೇನೋ , ಆದರೆ ಬಾಟಲಿಗಳಿಗೆ ನೋಡುಗರ ದೃಷ್ಟಿ ತಾಕಬಾರೆನ್ನುವ ನೈತಿಕ ಹೊಣೆಗಾರಿಕೆಯೋ ಇಲ್ಲಾ ಸಮಾಜದಲ್ಲಿ ತಮ್ಮ ಇಮೇಜ್ ಗೆ ಮಡಿವಂತಿಕೆ ಮನಸ್ಥಿತಿಯಿರುವವರ ಕೆಟ್ಟ ದೃಷ್ಟಿ ತಾಗಬಾರದೆನ್ನುವ ಭಯದಿ೦ದಲೋ , ಬಾಟಲಿಗಳನ್ನು ಕದ್ದುಮುಚ್ಚಿ ಕೊ೦ಡೊಯ್ಯುತ್ತ ನೋಡುವವರ ಕೂತೂಹಲವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು.
ಇ೦ತಹ ಪರಿಸ್ತಿತಿಯೊ೦ದು ಬರುತ್ತದೆಂದು ನನಗೆ ಸುಳಿವಿರಲಿಲ್ಲ, ಇಲ್ಲಾ೦ದ್ರೆ ಮುಂಚೆಯೇ ಲುಂಗಿ ಉಟ್ಟು ಬರುತ್ತಿದ್ದೆ ಅಥವಾ ಕೈಲೊಂದು ರದ್ದಿ ಪೇಪರ್ ಹಿಡಿಕೊಂಡು ಹೋಗುತ್ತಿದ್ದೆ . ಕೆಲವೊ೦ದು ವಿಪರ್ಯಾಸಗಳು ಯಾವ ಯಾವ ರೀತಿಯಲ್ಲಿ ಕಾಡುತ್ತವೆ ನೋಡಿ!!. ಅಷ್ಟು ಬೆಲೆ ತೆತ್ತು ಕೊ೦ಡ ಹೆಂಡದ ಬಾಟ್ಲಿಗಳನ್ನು ನಿರ್ದಯವಾಗಿ,ಅಮಾನುಷವಾಗಿ ಸಮಾಜದ ಕಣ್ಣಿಗೆ ಬೀಳದಂತೆ ಮನೆಗೆ ಸಾಗಿಸಬೇಕು. ಇ೦ತಹ ಕಟ್ಟಳೆಗಳನ್ನು ಧಿಕ್ಕರಿಸುವ ರೀತಿಯಲ್ಲಿ , ನಾನು ನನ್ನ ಬಾಟಲಿಯನ್ನು ನೋಡುಗರ ಕಣ್ಣು ಕುಕ್ಕುವ ರೀತಿಯಲ್ಲಿ ಹಿಡಿದು ಹೊರಟಿದ್ದೆ, ಆದರೆ ಜನರೆಲ್ಲ ಅವರವರ ಕೆಲಸಗಳಲ್ಲಿ ಮಗ್ನರಾಗಿದ್ದರಿ೦ದ , ಯಾರೂ ನನ್ನತ್ತ ನೋಡಿಲ್ಲವಾದ್ದರಿ೦ದ ನನಗೆ ಸ್ವಲ್ಪ ನಿರಾಶೆಯಾದರೂ, ಕೊನೆಗೆ ನನ್ನ ದುಃಖಕ್ಕೆ ಉಪಶಮನ ಮಾಡುವ ರೀತಿಯಲ್ಲಿ, ಬಿಳಿ ಶರ್ಟ ಮತ್ತು ಅದಕ್ಕಿ೦ತ ಬಿಳಿ ಲು೦ಗಿಯಲ್ಲಿದ್ದ, ರಾಜಕೀಯಕ್ಕೆ ಸ೦ಭ೦ದಿಸಿದ ವ್ಯಕ್ತಿಯೊ೦ದು ನನ್ನ ಮು೦ದೆ ಅಗತ್ಯಕ್ಕಿಂತ ಹೆಚ್ಚಾಗಿ ಮುಗುಳ್ನಗುತ್ತಾ, ನಾ ಹಿಡಿದ ಬಾಟಲಿಯನ್ನೇ ತದೇಕ ಚಿತ್ತದಿ೦ದ ನೋಡುತ್ತಾ ಹಾಜರಾಯಿತು. ನನಗೆ ಸ್ವಲ್ಪ ಸಮಾಧಾನವಾಗಿ, ಅದು ಯಾವ ಪ್ರಶ್ನೇ ಕೇಳುಬಹುದೆ೦ದು ಮೊದಲೇ ಮನಗ೦ಡು ಅದಕ್ಕೆ ಯಾವ ಉತ್ತರ ಕೊಡಬೇಕೆ೦ದು ನಿರ್ಧರಿಸಿ, ಅದರ ದೃಷ್ಟಿಯನ್ನು ನನ್ನ ಬಾಟಲಿಯಿ೦ದ ವಿಮೋಚನೆಗೊಳಿಸುವ ಪ್ರಯತ್ನದಲ್ಲಿ, ಅದರತ್ತ ದೃಷ್ಟಿಸಿ ನೋಡತೊಡಗಿದೆ
“ಏನು ಡಾಕ್ಟ್ರೆ , ನೀವಿಲ್ಲಿ !!? "
" ಇವತ್ತು ಸ್ವಲ್ಪ ಕೆಲಸ ಜಾಸ್ತಿ ಇತ್ತು, ತಲೆ ಗರ್ರಮ್ ಆಗಿತ್ತು, ಥಂಡಾ ಮಾಡ್ಕೋಳ್ಳೋಣಾ ಅಂತ …….."
"ಅದಕ್ಕೆ ನೀವ್ಯಾಕೆ ಇಲ್ಲಿವರೇಗೂ ಬರ್ಬೇಕಿತ್ತು ? ಒಂದು ಫೋನ್ ಮಾಡಿದ್ರೆ ನಾನೆ ಈ ವ್ಯವಸ್ಠೆ ಮಾಡುತ್ತಿದ್ದೆ"
" ನಾನೇನು ರೆಗುಲರ್ ಗಿರಾಕಿ ಅಲ್ಲ, ನನ್ನ ಕೆಲಸಕ್ಕೆ ನಾನೇ ಬಂದ್ರೆ ಅದ್ರಲ್ಲಿ ತಪ್ಪೇನಿಲ್ಲ" ನಾನು ಬಂದಿದ್ದಕ್ಕೆ ಸಮರ್ಥನೆ ಕೊಡುತ್ತಾ ಹೇಳಿದೆ
"ನಾಳೆ ಜಿಲ್ಲಾ ಕಾರ್ಯಕರ್ತರ ಸಮ್ಮೇಳನ ಇದೆ, ಅದಕ್ಕೆ ಸ್ವಲ್ಪ ವ್ಯವಸ್ಥೆ ಮಾಡಬೇಕು" ಅವನು, ತಾನು ಬಂದಿದ್ದಕ್ಕೆ ಸಮರ್ಥನೆ ಕೊಡುತ್ತಾ, ತನ್ನ ರಾಜಕೀಯ ಚಟುವಟಿಕೆಗಳ ನಿದರ್ಶನ ಕೊಟ್ಟ. ಉಭಯ ಕುಶಲೋಪರಿಗಳ ನಂತರ ನನ್ನನ್ನು ನನ್ನ ಪಾಡಿಗೆ ಬಿಡುತ್ತಾ, ಸ್ಟೇಷನ್ ಅಲ್ಲಿ ರೈಲು ನಿಂತಿರುವಾಗ ಗಡಿಬಿಡಿಯಲ್ಲಿ ಟಿಕೇಟ್ ಕೊಳ್ಳಲು ಹೋಗುವವರ ತರ ಸರತಿಯಲ್ಲಿ ಹೋಗಿ ನಿಂತ. ಬಣ್ಣ ಬಣ್ಣದ , ಬಣ್ಣ ಮಾಸಿದ ಲುಂಗಿಗಳ ನಡುವೆ ಶುಭ್ರ ನಿರ್ಮಾ ಬಿಳಿ ಲುಂಗಿಯೊಂದು ಸೇರಿಕೊಂಡು, ಬೇರೆ ಲುಂಗಿಗಳಿಗೆ ಸ್ವಲ್ಪ ಕೀಳರಿಮೆ ಮಾಡಿತು.
ದೇವಾದಿದೇವತೆಗಳ ಕಾಲದಿಂದಲೂ, ರಾಜಾಧಿರಾಜರ ಕಾಲದಿಂದಲೂ, ಮೊಹಮ್ಮದ್-ಜಿಸಸ್ ರ ಕಾಲದಿಂದಲೂ, ಬ್ರಿಟಷರ ಕಾಲದಿಂದಲೂ……ಹೀಗೆ ಮನುಷ್ಯನಿಗೆ ಅತಿಯಾದ ತಿಳುವಳಿಕೆ ಬಂದು , ತಾನೇ ಹೆಣೆದ ಒತ್ತಡಗಳ ಬಲೆಯಿಂದ ಹೊರಬರಲು ಸೋಮರಸವೆನ್ನುವ ಅಮೃತದ ಅಭಿರುಚಿ ಬೆಳೆಸಿಕೊಂಡಿದ್ದು, ಮುಂದೆ ಯಾವ ಒತ್ತಡಗಳಿಲ್ಲದಿದ್ದರೂ, ಅದು ನೀಡುವ ಹಿತವಾದ ಅನುಭವಗಳ ಬಯಕೆಗೆ ಕುಡಿಯತೊಡಗಿದ್ದು, ಗೊತ್ತಿಲ್ಲದೇ ಅದರ ದಾಸನಾಗಿ, ಅದರ ಚಟಕ್ಕೆ ತನ್ನನ್ನೇ ಅರ್ಪಿಸಿಕೊಂಡಿದ್ದು, ಹೀಗೆ ಹೆಂಡದ ಬಗ್ಗೆ ಲೇಖನ ಬರೆಯಲು ಹೇಳಿದರೆ ಏನೇನು ಬರೆಯಬಹುದು , ಯಾವ ಯಾವ ಪಾಯಿಂಟ್ ಹಾಕಿ ಕುಡಿತದ ಬಗ್ಗೆ ಕರಳು ಹಿಂಡುವ ಸನ್ನಿವೇಶ ಚಿತ್ರಿಸಬಹುದು ಹಾಗೂ ಅದಕ್ಕೆ ಬೇಕಾದ ಉದಾಹರಣೆಗೆ 'ದೇವದಾಸ್' ಪಾತ್ರಧಾರಿಯನ್ನು ಹೇಗೆ ಬಳಸಿಕೊಳ್ಳಬಹುದು…..ಮುಂತಾದುವಗಳು, ಕಾರನ್ನು ಓಡಿಸುವಾಗ, ನಾನು ಬೇಡವೆಂದರೂ ನನ್ನ ಯೋಚನಾಲಹರಿಯಲ್ಲಿ ಯಕ್ಷಗಾನದ ಹಿಮ್ಮೇಳದಂತೆ ಧ್ವನಿಸತೊಡಗಿದವು.
ಕುಡಿತದ ಬಗ್ಗೆ ಹೀಗೆ ಕೆಟ್ಟ-ಕೆಟ್ಟ ಯೋಚನೆಗಳ ನಡುವೆ ಥಟ್ಟನೆ ನಾ ಕೊಂಡ ವಿಸ್ಕಿ ಜೊತೆ ಏನನ್ನು ಎಷ್ಟರ ಪ್ರಮಾಣದಲ್ಲಿ ಬೆರೆಸಿದರೆ ರುಚಿಯಾಗಿರುತ್ತದೆ, ಅದರ ಜೊತೆಗೆ ಸಾಥ ನೀಡಲು ಯಾವ ಯಾವ ಕುರುಕುರು ಖಾದ್ಯಗಳು ಕೊಳ್ಳಬೇಕೆಂಬುದರ ಚಿಂತೆ ಕಾಡತೊಡಗಿತು. ಬರೀ ಕೋಳಿಯನ್ನು ತಂದು , ಮಸಾಲೆ ಮರೆತರೆ ? ಇಲ್ಲಾ ಅತ್ಯಾಧುನಿಕ ಮೊಬೈಲ್ ತೊಗೊಂಡು ಇಂಟರ್ನೆಟ್ ಹಾಕಿಸದಿದ್ದರೆ ? ಕಾರನ್ನು ಸೈಡಿಗಾಕಿ, ವಿಸ್ಕಿ ಜೊತೆ ಯಾವುದು ಚೆನ್ನಾಗಿರುತ್ತೆ ಅನ್ನುವ ಪ್ರಶ್ನೆಗೆ ಅನೇಕ ಮಹಾನುಭಾವರು 'ನೀರು' ಅಂತ, ತಮ್ಮ ಅನುಭವಗಳ ಸಾರದಿಂದ ಅನೇಕಾನೇಕ ಇಂಟರ್ನೆಟ್ಟಿನ ವೇದಿಕೆಗಳಲ್ಲಿ , ಈ ದಿವ್ಯಜ್ಞಾನವನ್ನು ಅಜರಾಮರವಾಗಿ ಬರೆದಿಟ್ಟುದು ಕಂಡು, ಅವರ ಪರ ಗೌರವ ಭಾವ ಉಕ್ಕಿಬಂದು, ಹರುಷದಿಂದ ಕಾರನ್ನು ಮತ್ತೇ ಮನೆಯ ದಾರಿಯತ್ತ ಬಿಡತೊಡಗಿದೆ. ಇನ್ನು 'ಉಪ್ಪಿನಕಾಯಿ' ಎಂಬ ಸಾರ್ವತ್ರಿಕ ಹೆಂಡದ ಸಾಥಿ, ಮನೆಯಲ್ಲಿರುವ ಖಾತ್ರಿಯಿಂದ, ಕಾರನ್ನು ಬೇರೆಲ್ಲೂ ನಿಲ್ಲಿಸದೇ ಮನೆಯವರೆಗೆ ಕೊಂಡೊಯ್ದೆ.
ಅಮೃತದ ಒಂದೊಂದು ಹನಿಗಳು ನಾಲೆಗೆ ಮೇಲೆ ಬಿದ್ದು, ಮಿದುಳಿಗೆ ಪ್ರಭಾವ ಮಾಡತೊಡಗಿದಾಗ, ಶನಿವಾರದ ಒತ್ತಡಗಳೆಲ್ಲ ಒಂದೊಂದಾಗಿ ಮಾಯವಾಗಿ, ಶಾರೀರಿಕ ಆಯಾಸ ಕಡಿಮೆಯಾಗಿ ಮನಸ್ಸು ಉನ್ಮಾದದಲ್ಲಿ ತೇಲಾಡತೊಡಗಿ, ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದಾಗ, ಅಡುಗೆ ಮನೆಯಿಂದ , ನಮ್ಮ ಮನೆಕೆಲಸದವಳಾದ ನಾಗಮ್ಮನ ಧ್ವನಿ ಅಲಾರಾಂ ಟೋನ್ ತರ ತೀಕ್ಷ್ಣವಾಗಿ ಕೇಳುತ್ತಿತ್ತು.
" ನಮ್ಮ ಕಥೆ ಗೊತ್ತಿಲ್ಲಾ ನಿಮಗ, ಭಾಳ ಕಷ್ಟಪಟ್ಟವಳು ನಾನು, ನಮ್ಮದು ಡೈವರ್ಶನ್ ಗೆ ಹೋಗಿತ್ತು!! ಆಮೇಲಿಂದ ನಮ್ಮವರು ಕುಡಿಯೋದು ಬಿಟ್ಟಿದ್ದು."
“ಡೈವರ್ಶನ್ ??!” ನನ್ನ ಹೆಂಡತಿ ಕುತೂಹಲದಿಂದ ಪ್ರಶ್ನಿಸಿದಳು.
“ ಅದ ಪೋಲಿಸಿಗೆ ಕಂಪ್ಲೇಟು ಕೊಟ್ಟು, ಕೋರ್ಟನ್ಯಾಗ ಗಂಡಾಹೆಂಡ್ತಿ ಬೇರೆ ಬೇರೆ ಮಾಡ್ತಾರಲ್ಲ…. ಡೈವರ್ಶನ್! ಅಲ್ಲಿ ಮಟಾ ಹೋಗಿತ್ತು. ಮನ್ಯಾಗಿಂದು ಒಂದು ಗಿಂಜು ಬಂಗಾರ ಬಿಡಲಿಲ್ಲ, ಕೊನೆಗೆ ತಾಳಿಗೆ ಕೈಹಾಕಿದ ನೋಡ್ರಿ, ನಂಗೂ ಸಾಕಾಗಿ ಹೋಗಿತ್ತು, ಡೈವರ್ಶನ್ ಆದ್ರ ಆಗ್ಲಿ, ಇವನ್ಜೊತೆ ಒಂದು ನಿಮಿಷ ನಿಲ್ಲೋದಿಲ್ಲ ಅಂತ ದ್ಯಾವ್ರ ಮ್ಯಾಲ ಭಾರ ಹಾಕಿ, ಪೋಲಿಸ್ ಸ್ಟೇಷನ್ ದಾರಿ ಹಿಡಿದೇ ಬಿಟ್ಟೆ, ಆಮ್ಯಾಲ ಇವ್ರು ದಾರಿಗ ಬಂದಿದ್ದು. ನಮ್ಮ ಡಾಕ್ಟ್ರಿಗೆ ಏನ ಆಗೈತಿ, ಒಳ್ಲೆ ಚಟ ಶುರುಮಾಡ್ಕೋಂಡಿದಾರಲ್ಲ, ಈಗ ಬಿಡಿಸ್ರಿ, ಇಲ್ಲಾಂದ್ರ………..” ನಾಗಮ್ಮ ವಾಕ್ಯ ಮುಗಿಸುವ ಮುಂಚೆ, ನನಗೂ ನಾಗಮ್ಮನ ಡೈವರ್ಶನ್ ಕಥೆಯ ಕುತೂಹಲ ತಾಳಲಾಗದೇ ಅಡುಗೆ ಮನೆಯಲ್ಲಿದ್ದೆ. ನಾಗಮ್ಮನ ಕೈಲಿ ನಾ ನಿನ್ನೆ ತಂದಿದ್ದ ದುಬಾರಿ ವಿಸ್ಕಿ ಬಾಟಲಿ ಇತ್ತು. ಅವಳು ಅದನ್ನು ಹಿಡಿದಿದ್ದು ನೋಡಿದ್ರೆ, ಅವಳಿಗೆ ಅದರ ಮೇಲೆ ಸ್ವಲ್ಪವೂ ಗೌರವ ಇರದ ಹಾಗೆ ಕಾಣುತ್ತಿತ್ತು.
"ಡೈವರ್ಶನ್ ಅಲ್ಲ ನಾಗಮ್ಮ, ಅದು ಡಿವೋರ್ಸ್ " ನಾನು ಗಂಟಲು ಸರಿಪಡಿಸಿಕೊಳ್ಳುತ್ತಾ ಹೇಳಿದೆ.
" ಸರಿ ಹೋತು ನೋಡಿ. ಇಷ್ಟು ದಿವ್ಸಾ ಬರೋಬರಿ ಇದ್ದೋರಿಗೆ ಅದ್ಯಾರ ದೃಷ್ಟಿ ಬಿತ್ತೋ . ಭಾಳ ಕೆಟ್ಟದ್ದು ಇದು, ಈಗ ಸುಖಾ ಕೋಡ್ಬಹುದು, ನಾಳೆ ಅದರ ಚಟ ಅಂಟಿದ್ರ ಮುಗಿತು. ಎಂತೆಂತಾ ಮನೆತನಗಳನ್ನ, ಮನುಷ್ಯರನ್ನ ಹಾಳು ಮಾಡೈತಿ ಇದು. ನಾಗಮ್ಮ ಹಿಂಗ ಹೇಳಾಕತ್ತಾಳ ಅಂತ ತಪ್ಪು ತಿಳ್ಕೋಬೇಡ್ರಿ, ನಂಗ ಅನುಭವ ಆಗೈತಿ, ಅದಕ್ಕ ಹೇಳಾಕತ್ತೀನಿ" ಕಾಳಜಿ ಭರಿತ ಧ್ವನಿಯಲ್ಲಿ ಹೇಳಿದಳು. ನಾನು ಅವಳ ಕೈಯಲ್ಲಿಂದ ಬಾಟಲಿಯನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತಾ
"ನಮ್ಮದು ಹುಣ್ಣಿಮಿಗೆ ಒಮ್ಮೆ ಇಲ್ಲಾ ಅಮವಾಸೆಗೊಮ್ಮೆ ಕುಡಿಯೋ ಪ್ರೋಗ್ರಾಂ, ನಿನ್ನೆ ಆಸ್ಪತ್ರೆಯಲ್ಲಿ ಸಾಕಾಗಿ ಹೋಗಿತ್ತು. ಅದಕ್ಕೆ ತಂದಿದ್ದು. ನಾ ಹಂಗ ದಿನಾಲೂ ಕುಡಿಯೋಕ ಬಿಡಬೇಕಲ್ಲ ನನ್ನ ಹೆಂಡತಿ. ಅದೂ ಎರಡು ಮಕ್ಳಾದ ಮೇಲೆ ಡೈವರ್ಶನ್ ಗ ಹೋದ್ರ ಜನಾ ಏನ ಅನ್ಕೋತಾರ? " ನಗುತ್ತಾ ಕೇಳಿದೆ, ಅದಕ್ಕವಳು ಜೋರಾಗಿ ನಗುತ್ತಾ "ನೀವು ಭಾಳ ಚಂದ ಮಜಾಕ್ ಮಾಡ್ತೀರಿ, ನಾ ಹೆದರಿ ಬಿಟ್ಟಿದ್ದೆ" ಅನ್ನುವಾಗ, ಹೆಂಡತಿಯೂ ನಮ್ಮ ಸಾಮೂಹಿಕ ನಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಳು.
*****