ಸೊಕ್ಕಿನ ಕೋಗಿಲೆ: ಚೇತನ್ ಕೆ ಹೊನ್ನವಿಲೆ

 

ಅವಳು ಇದ್ದದ್ದು ಹಾಗೆ!!

ಸೊಕ್ಕಿನ ಕೋಗಿಲೆ ಹಾಗೆ!!

ಆ ಕೋಗಿಲೆಯ ಕಂಠಕ್ಕೆ ತೂಗದ ತಲೆಗಳಿಲ್ಲ,

ಮಣಿಯದ ಮನಗಳಿಲ್ಲ.

 

ಹೆಸರು ಪೂರ್ವಿ!!  ಮನೆಯವರು ಪ್ರೀತಿಯಿಂದ ಇಟ್ಟ ಹೆಸರು.

ಹಾಡೋದಕ್ಕೆ ಅಂತಲೇ ಹುಟ್ಟಿದವಳು. 

ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ!! ತೊಯ್ದ ಆತ್ಮಗಳನ್ನ!!

ಆ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು ಹಾತೊರೆಯುವರು.

ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ , ಹೃದಯ ಕಿತ್ತು ಬಂದಂತೆ.

ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ.

ಕೊರಳಿನ ಮಾಧುರ್ಯ!! ಹೆಣ್ಣಿನ ಸೌಂಧರ್ಯದ!! ಜೊತೆ ಬೆರೆತು, ಅಮಲಿನ ಅಲೆಗಳನ್ನು ಸೃಷ್ಟಿಸುತ್ತಿತ್ತು.

ಹುಟ್ಟು ಒಮ್ಮೆಯಾದರೆ ಸಾವು ಸಾವಿರ ಬಾರಿ.

ತನ್ನ ಹಾಡಿನ ಉಚ್ಛ ಸ್ಥಾಯಿಯಲ್ಲಿ ಹಾಡುವಾಗಲೆಲ್ಲಾ, ಸಾವಿನ ಮನೆಯ ಕಾಲಿಂಗ್ ಬೆಲ್ ಬಡಿದು ಬರುತ್ತಿದ್ದಳು. ಅಂತಹಾ!! ಮೇರು ಪ್ರತಿಭೆ ಅವಳದು.

 

ಜನಪ್ರಿಯತೆಯ ಕೊಬ್ಬು ತಲೆಗೇರಿದೆ ಎಂದು ಮೂದಲಿಸಿದರು ಓರಗೆಯವರು.

ಆರಾಧಿಸುವ ಅಭಿಮಾನಿಗಳು ಪ್ರೀತಿಯಿಂದ 'ಸೊಕ್ಕಿನ ಕೋಗಿಲೆ'  ಅಂತಲೇ ಕರೆದರು.

 

' ನಾನು!! ನಾನಾಗಿಯೇ ಇರಬೇಕೆಂದರೆ, ಸ್ವಲ್ಪ ಅಹಮ್ಮು ಮೈಗೂಡಿಸಿಕೊಳ್ಳಬೇಕು.

ವಿಧೇಯತೆಯ ಕೂಸಾದರೆ, ಅಭಿಮಾನದ ಅಲೆಯಲ್ಲಿ ಕೊಚ್ಚಿಹೋಗಬೇಕಾಗುತ್ತದೆ.' ಎಂಬುದು ಪೂರ್ವಿ ಕೊಡುತ್ತಿದ್ದ ಕಿವಿಮಾತು.

 

ಸಂಗೀತದ ಸಾಂಗತ್ಯದ ಜೊತೆಗೆ ಅವಳದ್ದು ಒಂಟಿ ಜೀವನ.

ತನ್ನ ಒಂಟಿತನವನ್ನೊಮ್ಮೆ  ಪ್ರಶ್ನಿಸಿಕೊಳ್ಳುತ್ತಾ ಬರೆದಳು –

' ನಾಲ್ಕು ಗೋಡೆಗಳ ನಡುವೆ!! ನಾನು ಒಬ್ಬಂಟಿ ಅಂತನ್ನಿಸುವುದಿಲ್ಲ.

ಮನೆಯ ಮಹಡಿ ಹತ್ತಿ, ಸುತ್ತಿ  ನೋಡಿದರೆ… ನಾನೊಬ್ಬಳು ಒಂಟಿ!! ಹೌದು ಅನ್ಸತ್ತೆ .

ನನ್ನ ಕಣ್ಣಿಗೆ ಕಾಣುವ ಈ ಅಗಾಧ ಪ್ರಪಂಚ!!  ಗುಂಪುಕಟ್ಟಿರುವ ಒಬ್ಬಂಟಿಗಳ ಬೀಡು ಅನ್ಸತ್ತೆ.

ಸುಮ್ಮನಿದ್ದಾಗಲು, ನಾ ಸುಮ್ಮನಿದ್ದೇನೆ ಅನ್ನಿಸೋದಿಲ್ಲ.

ಎಲ್ಲರ ಜೊತೆ ಕೂಗು ಹಾಕಿ!! ಹರಟುವಾಗ, ಒಂದೊಂದು ಮಾತುಗಳಲ್ಲಿ,

ಒಬ್ಬೊಬ್ಬರೂ ಒಂಟಿತನದ ಜೊತೆಗೆ ಜಿದ್ದಿಗೆ ಬಿದ್ದು ಹೋರಾಡುವರು ಅನ್ಸತ್ತೆ.

ಬಹಶಃ ಕಾಲದ ಜೊತೆಗೆ ಅನಾವರಣಕೊಳ್ಳುತ್ತಾ ಹೋಗೋದು ನಮ್ಮ ಒಂಟಿತನ. '

 

ಸಂಗೀತದ ಜೊತೆಗೆ ಅವಳದ್ದು, ಮೊದಲ ಮದುವೆಯಾಗಿ ಹೋಗಿತ್ತು.

ಸಂಗೀತದ ತೀವ್ರತೆಯನ್ನು ಅನುಭವಿಸಿದವಳಿಗೆ,

ಸಂಬಂಧಗಳಲ್ಲಿಯೂ ಅಂತಹುದೇ ಉತ್ಕಟತೆಯ ಹೆಬ್ಬಯಕೆ.

 

'ನಾವು ಯಾರಿಗೆ ಜಾಸ್ತಿ ಅರ್ಥ ಆಗಬೇಕೋ!! , ಸಾಧ್ಯ ಆದಷ್ಟು ಅವರನ್ನ ನಮ್ಮೊಳಗೆ ಬಿಟ್ಟುಕೊಳ್ಳಬೇಕು.

ಎದೆಯ ಬಾಗಿಲಲ್ಲೇ ನಿಂತು!!  ಮಾತಾಡಿಸಿ ಕಳಿಸುವುದಾದರೆ .. ಆ ಕರ್ಮಕ್ಕೆ!! ಸಂಬಂಧ ಯಾಕ್ ಬೇಕು.?

ಆ ಸಂಬಂಧಕ್ಕೊಂದು ವ್ಯರ್ಥ ಹೆಸರೇಕೆ ಬೇಕು.

ಏನೇ ಇದ್ದರೂ!!… ಎಲ್ಲದು ತೀವ್ರವಾಗಿರಬೇಕು.

ಹಚ್ಚಿಕೊಂಡರೂ ಅದು ಸಿಕ್ಕಾಪಟ್ಟೆ!!

ಪ್ರೇಮ ಅಂದ್ರೆ ಉತ್ಕಟಪ್ರೇಮ. ಚೂರು-ಪಾರು  ಇಲ್ಲ'  ಎನ್ನುವಳು.

 

 

 

ಅದೊಂದು ದೊಡ್ಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.

ಸೆಲೆಬ್ರಿಟಿ!! ಆಕರ್ಷಣೆಗಾಗಿ ಪೂರ್ವಿಯನ್ನು ಆಹ್ವಾನಿಸಲಾಯ್ತು.

 

ಕೂತಲ್ಲಿ!! ನಿಂತಲ್ಲಿ!! ಹಲ್ಲು ಕಿರಿಯುವುದರಿಂದ,

ತುಟಿಯ ಸ್ನಾಯುಗಳು ಬಿಗಿಯುತ್ತವೇ ಎಂದು ಅರಿತಿದ್ದವಳು,

ಚೈತನ್ಯವಿಲ್ಲದ ನಗುವನ್ನು ತೋರುವ ಬದಲು, ಬಾಯೊಳಗೆ ಅದುಮಿದ್ದಳು.

ಅಭಿಮಾನಿಗಳ ಪ್ರೀತಿಯ ಮೇರೆಗೆ, ಎರಡು ಸಾಲು ಹಾಡನ್ನೂ ಹಾಡಿದಳು.

ದೊಡ್ಡತನದ ದೊಡ್ಡ ಸಮಾರಂಭದಲ್ಲಿ, ಅವಳ ಧ್ವನಿ ಜೀವವಾಯುವಿನಂತೆ ಪ್ರವಹಿಸಿತು. 

 

 

ಕಾರ್ಯಕ್ರಮದ ಕೊನೆಯಲ್ಲಿ, ಸಂಘಟಕನೊಬ್ಬ ಕಟುವಾಗಿ ನುಡಿದ –

' ನಿಮಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ದುಡ್ಡು ಕೊಡುವುದಲ್ಲದೇ,

ನಗುವುದಕ್ಕೂ ಹೆಚ್ಚಿನ ಹಣವನ್ನೇನಾದರೂ ಕೊಡಬೇಕೆ ..? ' ಎಂದ.

ಎಲ್ಲರ ಮುಂದೆ ಅವನ ಕಪಾಳಕ್ಕೊಂದು ಕೊಟ್ಟು,

ಮನೆಗೆ ಬಂದು ಹಾಸಿಗೆಯ ಮೇಲೆ ಮಕಾಡೆ ಬಿದ್ದಳು.

 

 

ಮಣ್ಣಿನ ಬಣ್ಣದ ಬೈಂಡ್ ಮಾಡಿದ್ದ, ತನ್ನ ಡೈರಿಯನ್ನು ತೆಗೆದು ಬರೆಯುತ್ತಾ ಹೋದಳು

'ಎಲ್ಲರೂ ಬೆರಳು ಮಾಡುವಂತೆ,  ನಿಜವಾಗಿಯೂ ನಾನು ಬದಲಾಗುತ್ತಲೇ ಇದ್ದೇನಾ..?

ಕಾಲದ ಜೊತೆ 'ಜನಗಳು' ಬದಲಾಗ್ತಾರಾ ಅಥವಾ!!

ಕಾಲದ ಜೊತೆ ಬದಲಾಗೋದು ಆ 'ಜನಗಳ' ಮೇಲಿನ ನಮ್ಮ ಅಭಿಪ್ರಾಯ ಮಾತ್ರಾನಾ..?

ಬದಲಾದ ನಮ್ಮತನದ ಜೊತೆಗೆ ಸರಿ ಹೊಂದದ, ಸಮೂಹವನ್ನೇ ಧಿಕ್ಕರಿಸುತ್ತೇವಾ..?

ಗೊತ್ತಿಲ್ಲ!!

ಇಲ್ಲ!! ನಾನು ಬದಲಾಗಿಲ್ಲ!!

ನನ್ನೊಳಗಿರುವ 'ತುಂಟತನ' ಈಗಲೂ ಹಾಗೆಯೇ ಇದೆ.

ಸ್ಕೂಲ್ ಬಸ್ ಹತ್ತುವಾಗ, ಅಮ್ಮನ ಕೈ ಬಿಡುವ ಪುಟ್ಟ ಮಕ್ಕಳನ್ನು ನೋಡಿ ಆನಂದಿಸಿದ್ದೇನೆ.

ರಸ್ತೆ ಬದಿಯಲ್ಲಿ ಶಾಯರಿ ಹೇಳುತ್ತಾ ಗೋಲ್-ಗುಪ್ಪ ಮಾರುವ,

ಆ ಹುಡುಗನ ಕೈಯಿಂದ ಪಡೆದ ಗೋಲ್-ಗುಪ್ಪವನ್ನು,

ಈಗಲೂ ಬಾಯಿ ತುಂಬಿಕೊಂಡು ಆಸ್ವಾಧಿಸಿದ್ದೇನೆ.

ನಾನು ನಗಬಲ್ಲೆ!!

ನಾನು ಹರಟಬಲ್ಲೆ!!

ನಾನು ಪ್ರೀತಿಸಬಲ್ಲೆ!!

ನನ್ನನ್ನು ಅರಗಿಸಿಕೊಳ್ಳುವನಿಗೆ ನನ್ನ ಹೆಣ್ತನವನ್ನು ಧಾರೆ ಎರೆಯಬಲ್ಲೇ…"

 

ಪೂರ್ವಿ!! ಕೆಲಕಾಲ ಸಾರ್ವಜನಿಕ ಸಮಾರಂಭದಲ್ಲಿ, ಅತಿಥಿಯಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದಳು.

 

 

************* ೧ ************

 

 

ಸಾವಿರಾರು ಜನರು, ಸೇರಿದ್ದ ಬಹುದೊಡ್ಡ ಸಂಗೀತ ಸಮಾರಂಭ.

ಅಲ್ಲಿ ಪೂರ್ವಿ!! ಸಾಧಾರಣ ಶ್ರೋತೃ.

ವೇದಿಕೆಯ ಮೇಲೆ, ಎಲ್ಲಾ ಸಂಗೀತ ಸಾಧನಗಳನ್ನು ಭಾರಿಸುವುದನ್ನು ಕ್ಷಣಕಾಲ ಮುಗುಮ್ಮಾಗಿಸಿದರು.

ಎರಡು ಕ್ಷಣ ನಿಶ್ಯಬ್ದ. ಆ ನಿಶ್ಯಬ್ದವನ್ನು ಬೇಧಿಸಿಕೊಂಡು ಬಂದದ್ದು ಕೊಳಲಿನ ಸದ್ದು.

ಉಸಿರು-ಬೆರಳುಗಳ ಕೊಳಲಿನ ಜಾದುವಿಗೆ,

ಪೂರ್ವಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡಳು.

 

ಕೆಲವು ಸದ್ದುಗಳೇ ಹಾಗೆ. ಎಲ್ಲಿ ಅನಾಹುತ ಸೃಷ್ಟಿಸುತ್ತವೇ ಎಂಬುದರ ಅಂದಾಜು ನುಡಿಸುವವನಿಗೇ ತಿಳಿದಿರುವುದಿಲ್ಲ.  ಕೊಳಲು ನುಡಿಸಿದವನ ಹೆಸರು, ಹರಿಯೋದಯ ಮಿತ್ರ!!

ಚಿಗುರು ಮೀಸೆಯ ಯುವಕ.

ಮಿತ್ರ!! ಪೂರ್ವಿಯ ಕಂಠದ ಆರಾಧಕನೂ ಹೌದು.

ಅವಳ ಅಹಮ್ಮಿನ ಬಗ್ಗೆ ತಿಳಿದವನಿಗೆ, ಸ್ವಲ್ಪ ಮಟ್ಟಿನ ನಿರ್ಲಕ್ಷ್ಯದ ಭಾವನೆ ಇತ್ತು.

 

 

ಪೂರ್ವಿ!! ಮಿತ್ರನಿಗಿಂತ ಎರಡು ವರ್ಷ ಹಿರಿಯವಳು.

ಆದರೂ ಕಲೆಯ ನೆಲೆಯಲ್ಲಿ ಇಬ್ಬರ ಸ್ನೇಹವು ಕುದುರಿತು.

 

 

ಪೂರ್ವಿಯ ಸಂಘಕ್ಕೆ ಹಾತೊರೆಯುತ್ತಿದ್ದ,

ಬಹಳಷ್ಟು ಗಂಡಸರ ನಡುವೆ,

ಕೊಳಲಿನ ಮಾಂತ್ರಿಕ ಮಿತ್ರ!! ಕೊಂಚ ಬೇರೆಯಾಗಿ ನಿಂತ.

ಅವಳು ಸೋತಳು.

ಯಾವುದಕ್ಕೆ ಎಂಬ ಪ್ರಶ್ನೆಗೆ ಅವಳಲ್ಲಿಯೇ ಉತ್ತರವಿಲ್ಲ.

ಅಗಾಧ ಬಾಹು ಹೊತ್ತಿದ್ದ!!  ಅವನ ಸೌಂಧರ್ಯಕ್ಕಾ..?

ಮಂತ್ರ ಮುಗ್ಧವಾಗಿಸುವ ಅವನ ಕೊಳಲಿನ  ವಳ್ಳೆಗಾ..?

ಅಥವಾ  ಸೋತಿದ್ದು 'ತನ್ನ ಬಗೆಗಿದ್ದ ಅವನ ನಿರ್ಲಕ್ಷ್ಯಕ್ಕಾ…?

 

ಮಿತ್ರ ಹಸನ್ಮುಖಿ!!.

ಜೀವನದ ಬಗೆಗಿನ ಅವನ ನಿಲುವು ಪೂರ್ವಿಯದ್ದಕ್ಕಿಂತ ವಿಭಿನ್ನ!! ಪೂರ್ವಿಗೆ ಕಲೆಯೇ ಜೀವನ. 

ಮಿತ್ರನಿಗೆ ಕೊಳಲು ಜೀವನದ ಒಂದು ಭಾಗ.

 

ಒಂಟಿತನವನ್ನು ಅಪ್ಪಿ ಬೆಳೆದ ಪೂರ್ವಿಗೆ,

ಬದಲಾಗುವ ಜನಗಳ ನಡುವಳಿಕೆ ರೇಜಿಗೆ ತರಿಸುತ್ತಿತ್ತು.

ಮಿತ್ರ!! ಸಂಘಜೀವಿ.

 

 

ಇಬ್ಬರಲ್ಲಿಯೂ ಪ್ರೇಮಾಂಕುರವಾಯಿತು.

 

ಯಾರಿಗೂ ಕಾಣದ ಪೂರ್ವಿಯ ಅಸಹಾಯಕತೆ!!

ಅವಳ ಚಂಚಲತೆ!!

ಪ್ರೀತಿಯ ಉತ್ಕಟತೆ!!

ಮಿತ್ರನಿಗೆ ಕಾಣಿಸುತ್ತಿತ್ತು.

ಹೊರ ಪ್ರಪಂಚಕ್ಕೆ ಕುಡಿದ ಕುದುರೆಯಂತೆ, ಅನಿಸುವ ಪೂರ್ವಿ,

ಮಿತ್ರನ ಪ್ರೀತಿಯ ಬಾಹುಗಳಡಿಯಲ್ಲಿ ಎಳೆ ಮಗುವಿನಂತಾದಳು. 

ವೈರುಧ್ಯಗಳ ನಡುವೆ ಅವರನ್ನು ಬಂಧಿಸಿದ್ದು,

ಕಲೆಯಿಂದ ಪ್ರಾರಂಭಗೊಂಡ ಪ್ರೀತಿ. 

 

ಅವರು ಬೆರೆತರು.

ಸಂಗೀತದ ನೊಗಕ್ಕೆ ಹೆಗಲು ಕೊಟ್ಟು ದೇಶ-ವಿದೇಶಗಳನ್ನು ಸುತ್ತಿದರು.

ಕಲಾರಸಿಕರ ಸಂಗೀತದಾಹವನ್ನು ತಣಿಸಿದರು.

ಅವನ ಕೊಳಲಿಗೆ,  ಅವಳ ಕಂಠದ ಉಬ್ಬುತಗ್ಗುಗಳು  ನರ್ತಿಸುತ್ತಿದ್ದವು.

 

ಅವರು ಬೆರೆತರು.

ಪ್ರಪಂಚದ ಅಣತಿಗಳನ್ನು ಗಾಳಿಗೆ ತೂರಿದರು.

ಹಾರ ಬದಲಿಸಿದರು.

 

ಅವಳು ತೋಳಿನಿಂದ ಬಾಚಿಕೊಂಡು, ಎದೆಯ ಮೇಲೆ ಕಿವಿ ಇಟ್ಟು, ಪಿಸುಗುಟ್ಟಿದಳು –

' ಕೊನೆವರೆಗೂ ಈ ಹುಚ್ಚಿಯನ್ನ ಹಿಂಗೇ ಪ್ರೀತಿಸ್ತೀನಿ ಅಂತ ಆಶ್ವಾಸನೆ ಕೊಡು'

 

' ನಿನ್ನ ಹೆಸರಿಗೆ, ನನ್ನ ಶ್ವಾಸವನ್ನೇ ಮುಡಿಪಿಟ್ಟಿದ್ದೇನೆ.' ಅಂದ ಹಣೆಯ ಮೇಲೆ ಮುತ್ತಿಡುತ್ತಾ.

 

" you completed me!!" ಅಂದಳು.

 

"ಹೌ..ದಾ..?  i need you completely " ಎನ್ನುತ್ತಾ ಅಪ್ಪುಗೆಯನ್ನು ಬಿಗಿ ಮಾಡಿದ.

 

" ನನಗೆ ಸಿಟ್ಟು!!! ಮೂಗಿನ ತುದಿನಲ್ಲೇ ಇರತ್ತೆ. " ಮೂಗನ್ನೇ ಎದೆಗೆ ತೀಡುತ್ತಾ ಹೇಳಿದಳು. 

 

" ನಾನು ತುಂಬಾ ಇಷ್ಟ ಪಟ್ಟಿದ್ದು, ನಿನ್ನ ಆ ತುದಿ ಬಾಗಿದ ಮೂಗನ್ನೇ ಪೂರ್ವಿ!! ಅದನ್ನ ನನಗೆ ಬಿಟ್ಟುಬಿಡು.ನಾನು ನೋಡಿಕೊಳ್ತೇನೆ." ಎಂದ .

 

ಪೂರ್ವಿ ನಾಚುತ್ತಾ ನುಡಿದಳು –

" ಅದು ಹಾಗಲ್ಲ!! ನಾನು ಪಾಪಿ-ಕೋಪಿ ಕಣೋ!! ಜೀವನ ಪೂರ್ತಿ ಆಗುವಷ್ಟು 'ಸಾರಿ' ಈಗಲೇ ಕೇಳಿ ಬಿಡ್ತೇನೆ. ಮುಂದೆ ಅದನ್ನ expect ಮಾಡಬಾರದು. ಆಯ್ತಾ …? " 

ಒಂದಿಂಚು ಮುಖ ಮುಂದಕ್ಕೆ ಬಂದಿತ್ತು.

 

ಆಯ್ತೆಂದು ತಲೆಯಾಡಿಸುತ್ತಾ!! ಹೇಳಿದ – 

"ಮುದ್ದು ಮುಖಕ್ಕೆ ಪೆದ್ದುತನ ತುಂಬಾ ಒಪ್ಪುತ್ತೆ!! ಅದನ್ನ ಒಂದು ಕ್ಷಣ ಹಾಗೆ ಇಟ್ಕೋ!! ಪದೆ ಪದೆ ಸಿಗಲ್ಲ ನನಗದು. ಕಣ್ತುಂಬಿಸಿಕೊಳ್ತೇನೆ."

 

ಮುಖದ ಮೇಲಿನ ನಾಚಿಕೆಯನ್ನು ಅವನ ಎದೆಯೊಳಗೆ ಅಡಗಿಸುತ್ತಾ ಅಪ್ಪಿದಳು. 

ಉಸಿರ ಬಿಸಿಗೆ, ಅವರ ಎದೆ ಬಲೂನಿನಂತಾಗಿ ಆಗಸದಲ್ಲಿ ತೇಲುತ್ತಿತ್ತು.

 

ಪ್ರೀತಿಯಿಂದ ತಂದ ವಜ್ರದುಂಗರವನ್ನು ಹಿಡಿದು, ಮಂಡಿ ಮೇಲೆ ಕುಳಿತು –

"ಪೂರ್ವಿ!! ನನ್ನ ಬಾಳಸಂಗಾತಿ ಆಗೋದಕ್ಕೆ ನೀನು ಒಪ್ತೀಯ ?" ಕೇಳಿದ.

 

" ಇಲ್ಲಾ!! ನಾನು ನಿನ್ನ ಆತ್ಮಸಂಗಾತಿ!!

ನಿನ್ನ ಗೆಳತಿ!!

ನನ್ನ ದಿಕ್ಕು ತಪ್ಪಿದ ದೋಣಿ, ಹುಟ್ಟು ಹಾಕದೆ ತೀರ ಸೇರುತ್ತಿದೆ, ಅಂತ ಅನ್ನಿಸ್ತಾ ಇದೆ.

ಇದು ನಿಜಾನ!! " – ಅವಳ ಕಣ್ಣುಗಳು ಹನಿಗೂಡುತ್ತಿದ್ದವು.

 

ಉಂಗುರವನ್ನು ಬೆರಳಿಗೆ ತೊಡಿಸಿ, ಪುನಃ ಅಪ್ಪಿಕೊಂಡು ಹೇಳಿದ –

"ತೀರಕ್ಕೆ ಯಾಕ್ ಬರ್ತೀಯ..ಪೂರ್ವಿ?

ನಿನ್ನ ದಿಕ್ಕು ತಪ್ಪಿದ  ದೋಣಿನಲ್ಲಿ ನಂಗೂ ಸ್ವಲ್ಪ ಜಾಗ ಕೊಡು.

ನೀನು ಹೇಳಿದ ಕಡೆಗೆ, ಹುಟ್ಟು ಹಾಕ್ತೇನೆ.

ಕೊನೆವರೆಗೂ ಒಟ್ಟಿಗೆ ಇರಬೇಕು ಅಂತ ಇರೋದು ಬೇಡ.

ಒಟ್ಟಿಗೆ ಜೀವಿಸೋಣ.

ಯಾರಿಗೋ ಆದರ್ಶ!! ಮತ್ಯಾರಿಗೋ ಮಾದರಿಯಾಗಿ ಬದುಕೋದು ಬೇಡ.

ನಮಗೋಸ್ಕರ ಬದುಕೋಣ.

ಸತ್ತ ಮೇಲೆ ಹಿಂಬಾಲಿಸುವ ಸಾಧನೆಯ ಬಂಗಾರದ ಹೆಜ್ಜೆ ಗುರುತುಗಳಿಗಿಂತ,

ನಾವು ಇರುವವರೆಗೂ ನೆರಳು ಕೊಡುವ ಪುಟ್ಟ ಗುಡಿಸಲು ಕಟ್ಟಿಕೊಳ್ಳೋಣ…" ಎಂದ.

 

ವಸಂತಗಳು ಉರುಳಿದವು.

ಸಮಯದ ಜೊತೆಗೆ ಅವರು ಒಬ್ಬರಿಗೊಬ್ಬರು ಅರ್ಥವಾಗಬೇಕಾಗಿರುವುದೇನು ಉಳಿದಿರಲಿಲ್ಲ.

ಅವರು ಅವರಂತೆಯೇ ಒಬ್ಬರನ್ನೊಬ್ಬರು ಒಪ್ಪಿದ್ದರು.

ನಂಬಿಕೆಗಳೇ ಹಾಗೆ!!  ಬಲವಾಗಿ ಬೇರೂರಿದ ಮೇಲೆ ಮುಗಿಯಿತು.

ಅಲ್ಲಿ ಕಾರಣಗಳು ಮತ್ತು ವಿವರಣೆಗಳಿಗೆ ಕಿವಿಗಳು ಕಿವುಡಾಗಿ ಬಿಡುತ್ತವೆ. 

ಅವರು ನಾಡಿ ಮಿಡಿತದ ಅಣತಿಗೆ ಸ್ಪಂದಿಸುವಷ್ಟು ಬೆರೆತರು.

ಸಂಭ್ರಮಿಸಿದರು.

 

 

 

*********** 3 **********

 

 

 

ಮಿತ್ರ!! ತನ್ನ ಕೈಯನ್ನೊಮ್ಮೆ ಹಿಸುಕಿಕೊಂಡ.

 

 

' ಅವಳ ಹಠಮಾರಿತನ, ಮಿತಿ ಮೀರಿತ್ತು.

ಅದು ನಮ್ಮಿಬ್ಬರ ನಡುವಿದ್ದಾಗ ಸಹಿಸಿಕೊಂಡಿದ್ದೆ.

ಆದರೆ ಸಹ ಕಲಾವಿದರನ್ನು ವೇದಿಕೆಯ ಮೇಲೆಯೇ, ಅಪಮಾನಿಸುವ ಅವಳ ನಡುವಳಿಕೆ ನನ್ನ ಸಹನೆಯನ್ನು ಕೆಡಿಸಿ ಬಿಟ್ಟಿತು.

ಭಾವನೆಗಳ ಹಂಗಿನಲ್ಲಿ ಬಚ್ಚಿಟ್ಟುಕೊಂಡು, ಜಗತ್ತನ್ನೇ ತುಚ್ಚವಾಗಿ ಕಾಣುವುದೇ!!..?

ಆದರೂ…ಛೇ!! ನಾ ಹಾಗೆ ಮಾಡಬಾರದಿತ್ತು.

ಅದೂ ಕೂಡ!! ಅದೇ ವೇದಿಕೆಯ ಮೇಲೆ, ಸಾವಿರಾರು ಜನಗಳ ಸಮ್ಮುಖದಲ್ಲಿ!!

ಅವಳು ಹೇಗೆ ಅನ್ನೋದು ನನಗೆ ಗೊತ್ತಿತ್ತಲ್ಲವೇ..? "

 

ಮಿತ್ರ!! ಕೆನ್ನೆ ಸವರಿಕೊಂಡು,

ತನ್ನ ಬಲಗೈಯ ಕಡೆಗೆ ವಿಷಾದದ ನೋಟ ಬೀರಿದ.

 

ಪೂರ್ವಿ!! ಶಾಂತ ಸಾಗರದ ಒಡಲಲಿ ಅವಿತಿರುವ ಚಂಡಮಾರುತ ಅನ್ನುವುದು ಗೊತ್ತಿದ್ದೂ,

ಒಂದು ಕ್ಷಣ ಸೈರಣೆ ಕಳೆದುಕೊಂಡಿದ್ದ.

ಹಿಂದಕ್ಕೆ ಹೋದ ಅಲೆ ಬರುವುದು ತಡವಾದರೆ,

ಅಪ್ಪಳಿಸುವಂತೆ ಬರುತ್ತದೆ ಎಂದು ಅರಿತಿದ್ದವನು,

ಎದೆಯನ್ನು ಬಂಡೆಯಾಗಿಸಿಕೊಂಡು ಕಾಯುತ್ತಿದ್ದ.

ಆ ಅಲೆ ತಿರುಗಿ ಬರಲೇ ಇಲ್ಲ.

 

 

ಪೂರ್ವಿ!!  ತನ್ನ ಡೈರಿಯ ಪುಟಗಳನ್ನು ತಿರುಗಿಸುತ್ತಾ ಹೋದಳು.

ಮದುವೆಯ ನಂತರದ ಸಂಭ್ರಮದ ದಿನಗಳಲ್ಲಿ ಬರೆದಿದ್ದ

' happily married ' ಎಂಬ ಕೊನೆಯ ಸಾಲುಗಳಾಚೆ ಏನನ್ನೂ ಬರೆದಿರಲಿಲ್ಲ.

 

ನಾಲ್ಕು ವಸಂತಗಳು ಸರಿದಿದ್ದವು.

ಆ ಕೊನೆಯ ಸಾಲಿನ ಮೇಲೆ ಪುನಃ ತಿದ್ದಿದಳು.

ತಿದ್ದುತ್ತಲೇ ಹೋದಳು. ಹಾಳೆಯು ಹರಿದು ಹೋಯಿತು.

ನಡುಗುತ್ತಿದ್ದ ಕೈಗಳಿಂದ, ಒದ್ದೆಯಾದ ಕಣ್ಗಳನ್ನು ಒರೆಸಿಕೊಂಡು, ಬರೆಯುತ್ತಾ ಹೋದಳು.

 

"  ಸಾಲಿನಿಂದ ಸಾಲಿಗೆ ಸಂಬಂಧವೇ ಇಲ್ಲದೆ ಸೋಲುತ್ತಾ ಸಾಗುವ ಸಾವಿನ ಸೊಲ್ಲುಗಳಿವು.

ಥೇಟು ನನ್ನ ರೀತಿ.

ಮನಸ್ಸು ಅಜಾಗೃತವಾಗಿದ್ದಾಗಲೂ ಮೂಡುವ vibration ಗಳು.

ಅಂದುಕೊಳ್ಳುವ ಮನಸ್ಸಿಗೂ, ಉರುಳುವ ನಾಲಗೆಗೂ ಹಗ್ಗ ಜಗ್ಗಾಟ ಇರತ್ತಲ್ಲಾ ಹಂಗೆ.

 

ಅಷ್ಟು ಜನಗಳ ಮುಂದೆ ನನಗೆ ಹೊಡೆದಿದ್ದಕ್ಕೆ  ನಿನ್ನ ಮೇಲೆ ಕೋಪ ಇಲ್ಲ ಮಿತ್ರ!!.

ಅದೇ  ಕ್ಷಣದಲ್ಲಿ, ನಿನಗೆ ನಾ ತಿರುಗಿಸಿ ಹೊಡೆದಾಗಲೇ, ಕೋಪ ಕರಗಿ ಹೋಯ್ತು.

 

ನಿನ್ನ ಜೊತೆ ಬದುಕುವ ಯೋಗ್ಯತೆ, ನನಗಿಲ್ಲ ಕಣೋ.

ಜೀವನ ಅಂದ್ರೆ, ಉದ್ದಕ್ಕೂ… ಎಲ್ಲರಿಗೂ ಸುಳಿವುಗಳನ್ನು ಕೊಡುತ್ತಾ…

ತಮ್ಮನ್ನು ಬಿಡಿಸುವಂತೆ ಗೋಗರೆಯುವ ಒಂದು ಒಗಟು!! ಅಂತಾರೆ.

ನನಗದು ಬೇರೆಯವರು ಬಿಡಿಸೋದು ಇಷ್ಟ ಇಲ್ಲ.

ನನಗೆ ಎಲ್ಲರ ರೀತಿ ಇರೋದಕ್ಕಾಗಲ್ಲ!!

ನಾನ್ಯಾಕೆ ಹೀಗೆ..? ಅನ್ನೋದು ನನಗೂ ಗೊತ್ತಿಲ್ಲ.

ಬಹುಷಃ ನನ್ನ ಜೊತೆ ಬೆರೆಯುವುದಕ್ಕಿಂತ,

ಗುರುತಿಸಿಕೊಳ್ಳೋದಕ್ಕೆ ಹಾತೊರೆಯುವ ಸಮೂಹ ಸೃಷ್ಟಿ ಆಗ್ತಾ ಇದ್ದಂತೆ,

ನಾನು ಎಲ್ಲರನ್ನೂ ಅನುಮಾನದಿಂದ ನೋಡೋದಕ್ಕೆ ಪ್ರಾರಂಭಿಸಿದೆ.

ಅಲ್ಲಿಂದಲೇ ನನ್ನ ಭಾವಜಗತ್ತು ಏಕಾಂತವಾಗಿ ವಿಕಾರವಾಗೋದಕ್ಕೆ ಪ್ರಾರಂಭ ಆಗಿದ್ದು. 

ಅಂಥ ಸಂಧರ್ಭದಲ್ಲಿ ನೀನು ಸಿಕ್ಕಿದೆ. ನೀನೆ ಪ್ರಪಂಚ ಆಗಿ ಬಿಟ್ಟೆ.

 

 

ಕೆಲವರಿಗೆ!! ಎಲ್ಲರ ಕಣ್ಣಲ್ಲೂ…..

ತಾವು ಒಳ್ಳೆಯವಾರಿಗಿಯೇ ಉಳಿಯೋ ಹವ್ಯಾಸ ಇರತ್ತೆ.

ಆತ್ಮವಂಚನೆ ಆದರೂ ಸರಿ!! ಒಳ್ಳೆಯವರಾಗಿಯೇ ಉಳಿದು ಬಿಡ್ತಾರೆ.

ಆದರೆ ನನ್ನಿಂದ ಅದು ಸಾಧ್ಯ ಇಲ್ಲ.

ಬಹುಷಃ ನಿನ್ನ ಕಣ್ಣಲ್ಲಿ ಮಾತ್ರ ಒಳ್ಳೆಯವಳಾಗಿ ಉಳಿಬೇಕು ಅನ್ಸತ್ತೆ ಅಷ್ಟೆ.

 

ಭಾವನೆಗಳು ಒತ್ತರಿಸಿಕೊಂಡು ಬರದೆ!! ಹಾಡಿದ್ದೆಲ್ಲಾ!!…

ಅಕ್ಷರ ಕಲಿವ ಮಕ್ಕಳು ಗೀಚಿದ ರೇಖೆಗಳಂತೆ!! ತುದಿಗಳು ಕೂಡುವುದಿಲ್ಲ.

ಶೃತಿಗಳು ಸೇರೋದಿಲ್ಲ.

ನೀ!! ನನ್ನೊಳಗಿನ ಧನಿ ಕಣೋ!!

ನನ್ನ ಕಂಠದಿಂದ ಹೊಮ್ಮುತ್ತಿದ್ದ  ತರಂಗಗಳು, ನಿನ್ನ ಮೆಚ್ಚಿಸಬೇಕು ಅಂತಲೇ!!

ನನಗಾಗಲಿ… ನನ್ನ ಕಂಠಕ್ಕಾಗಲಿ….

ಯಾವತ್ತೂ ತರತರದ ಕಾಂಪ್ಲಿಮೆಂಟುಗಳನ್ನ,

ಈ ಪ್ರಪಂಚದಿಂದ ನಿರೀಕ್ಷಿಸಲೇ ಇಲ್ಲ.

ಆ ಕ್ಷಣದ ಅನುಭವ!!

ಆ ಕ್ಷಣದ ನಿನ್ನ ಖುಷಿ!!

ಹಾಡುವಾಗ ಅದರ ಜೊತೆಗಿನ … ನನ್ನ ಸಂವಾದ!! ಸ್ಪಂದನೆ!!

ಎಲ್ಲಕ್ಕಿಂತ ಹೆಚ್ಚಾಗಿ,

ನಾನು ಕಾಣ ಬಯಸುವಾ… ಕಾಣುವಾ ಆ ನಿನ್ನ ಮೆಚ್ಚುಗೆಯ ಅಹಮ್ಮಿನ ನೋಟ.

ನನಗ್ಗೊತ್ತು!! ನಾನು ಅಂದ್ರೆ ನಿನಗೆ ಪ್ರಾಣ ಅಂತ.

ಪ್ರತಿ ಸಾರಿಯೂ ನನ್ನ ಪರ  ವಹಿಸಿಕೊಂಡು ಬರ್ತೀಯ.

ತಪ್ಪು ನನ್ನದೇ ಇದ್ರೂ, ನನಗಾಗಿ ಎಲ್ಲರ ಜೊತೆ ಹೋರಾಡ್ತೀಯ.

ಈ ಸಾರಿ ಮಾತ್ರ ಯಾಕೋ!! ಹೊಡೆದೆ..?

ಸಾಕು!! ಮಿತ್ರ!! ಇನ್ನು ನಾ ನಿನಗೆ ಕಷ್ಟ ಕೊಡಲ್ಲ.

ನನ್ನ ಮರೆತು ಹೋಗೋದಕ್ಕೆ, ನನ್ನ ಬಗ್ಗೆ ಸ್ವಲ್ಪ ತಿರಸ್ಕಾರ ಭಾವನೆ ಬೆಳೆಸಿಕೊ.

ಇಲ್ಲಾ ಅಂದ್ರೆ ನನ್ನ ನೆನಪಲ್ಲೇ ಸತ್ತು ಹೋಗ್ತೀಯ.

ಒಮ್ಮೆ ತಿರಸ್ಕಾರ!! ಭಾವನೆ ಮೂಡಿತು ಅಂದ್ರೆ,

ಆ ತಿರಸ್ಕೃತಳ ಅಸ್ತಿತ್ವ, ಯಾವ ರೂಪದಲ್ಲಿ ಇದ್ದರೂ… ಅದು ಗೌಣ!!

 

ಆಟದಲ್ಲಿ ಗೆಲ್ಲಬೇಕು ಅಂತ ಇದ್ರೆ,

ಮುಗಿಯುವ ಕೊನೆ ಕ್ಷಣದವರೆಗೂ, ಕ್ರೀಡಾ ಸ್ಪೂರ್ತಿ ಬಿಡದೆ ಆಡಬೇಕು.

ಕೈಚೆಲ್ಲಿ!!, ಮೈದಾನವನ್ನೇ ಬಿಟ್ಟು ಹೊರನಡೆದರೆ,

ಅಲ್ಲಿ ಸೋಲು ಗೆಲುವಿಗಿಂತ ಹೆಚ್ಚಾಗಿ ಕಾಡುವುದು,

ನಮ್ಮ ಫಲಾಯನವಾದಿ attitude.

ಅದರ ವಿಷಾದ ಮಾತ್ರ, ಎಲ್ಲಿವರೆಗೂ ನನ್ನ ಕಾಡುತ್ತೋ ಗೊತ್ತಿಲ್ಲ.

 

 

ನನ್ನ ಕ್ಷಮಿಸಿ ಬಿಡು ಮಿತ್ರ!!

ನಿನಗೆ, ಹಂಗ್ ಹೊಡೀ ಬಾರದಿತ್ತು ಕಣೋ!!.

ನೀ ಯಾಕ್ ಹೊಡಿಬೇಕಿತ್ತು..?

ನನ್ನ ಮೂಗಿಗೆ, ನಿನ್ನ ಮೇಲೆ ತುಂಬಾ ಕೋಪ ಬರ್ತಿದೆ.

ನಿನಗೆ 'ಸಾರಿ' ಹೇಳೋದಕ್ಕೆ ಅವಕಾಶ ಕೊಡಬಾರದು ಅನ್ನೋ ಹಠದಲ್ಲಿ!! ನುಂಗಿ ಬಿಟ್ಟೆ..

ಈಗ ನನಗೆ ಬದುಕಬೇಕು ಅಂತ ಅನ್ನಿಸ್ತಾ ಇದೆ."

 

ಇದ್ದಕ್ಕಿದ್ದಂತೆ ಬಾಯಿಂದ ಉಕ್ಕಿ ಬಂದ ರಕ್ತ, ಅಕ್ಷರಗಳನ್ನು 

ಕೆಡಿಸುತ್ತಾ…, ಬರೆಯುತ್ತಿದ್ದ ಹಾಳೆಯ ಮೇಲೆ ಚೆಲ್ಲಿತು.

ಪೂರ್ವಿ!! ಹಾಸಿಗೆಯ ಮೇಲೆ ಹೊರಳಿದಳು.

ಪುಡಿಯಾಗಿದ್ದ ಉಂಗುರುದ ವಜ್ರದ ಹರಳುಗಳು ,

ಅವಳ ಕರುಳನ್ನು ಕತ್ತರಿಸಲು ಪ್ರಾರಂಭಿಸಿದ್ದವು.

-ಚೇತನ್ ಕೆ ಹೊನ್ನವಿಲೆ 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Raghunandan K
11 years ago

 
ಕಥೆ ಇಷ್ಟವಾಯಿತು, ಅಂತ್ಯದ ಅನುಕಂಪಕ್ಕೆ ಸಾವು ಬೇಕಿತ್ತಾ..??
 
ಜೀವನ ಅಂದ್ರೆ, ಉದ್ದಕ್ಕೂಎಲ್ಲರಿಗೂ ಸುಳಿವುಗಳನ್ನು ಕೊಡುತ್ತಾ… ತಮ್ಮನ್ನು ಬಿಡಿಸುವಂತೆ ಗೋಗರೆಯುವ ಒಂದು ಒಗಟು!! 
ನಾನು!! ನಾನಾಗಿಯೇ ಇರಬೇಕೆಂದರೆ, ಸ್ವಲ್ಪ ಅಹಮ್ಮು ಮೈಗೂಡಿಸಿಕೊಳ್ಳಬೇಕುವಿಧೇಯತೆಯ ಕೂಸಾದರೆ, ಅಭಿಮಾನದ ಅಲೆಯಲ್ಲಿ ಕೊಚ್ಚಿಹೋಗಬೇಕಾಗುತ್ತದೆ. – ಎನ್ನುವಂತಹ ಸಾಲುಗಳಿಗೆ ಸೋತಿದ್ದೇನೆ.


ಇಷ್ಟವಾಗುವ ಓದು ನೀಡಿದ್ದಕ್ಕೆ ಧನ್ಯವಾದ.
 

chethan
11 years ago
Reply to  Raghunandan K

ಕಥೆ ಪ್ರಾರಂಭವಾಗಿದ್ದೇ , ಸಾವಿನೊಂದಿಗೆ!! ಅದನ್ನು ಜಸ್ಟಿಫೈ ಮಾಡೋದ್ರಲ್ಲಿ ತಪ್ಪಾಗಿರಬಹುದು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

PARTHASARATHY N
PARTHASARATHY N
11 years ago

ಚೆನ್ನಾಗಿದೆ !

mamatha keelar
mamatha keelar
11 years ago

ಚನ್ನಾಗಿದೆ

ಶ್ರೀವತ್ಸ ಕಂಚೀಮನೆ.

ತುಂಬಾನೇ ಇಷ್ಟವಾಯಿತು…

Sandhya Bhat
11 years ago

 
ಕೆಲವರಿಗೆ!! ಎಲ್ಲರ ಕಣ್ಣಲ್ಲೂ…..
ತಾವು ಒಳ್ಳೆಯವಾರಿಗಿಯೇ ಉಳಿಯೋ ಹವ್ಯಾಸ ಇರತ್ತೆ.
ಆತ್ಮವಂಚನೆ ಆದರೂ ಸರಿ!! ಒಳ್ಳೆಯವರಾಗಿಯೇ ಉಳಿದು ಬಿಡ್ತಾರೆ.
Loved the Lines… Awesome Story…  
ಹಮ್ಮು ಬಿಮ್ಮುಗಳ ನಡುವೆ ನರಳಿದ್ದು ಕೊಳಲು … ಕೊರಳು …ಮತ್ತೂ  ಇವೆರಡೂ ಬಂಧಿಸಿದ್ದ ಪ್ರೀತಿ … 

chethan
11 years ago
Reply to  Sandhya Bhat

ಕೊರಳಿಗೆ  ಮಿಡಿದ ಕೊಳಲು!! ಕೊಳಲಿಗೆ ಮಡಿದ ಕೊರಳು!! ಕೊಳಲು ಕೊರಳುಗಳಿಗೆ ಮಣಿದ ಓದುಗರು.. ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ..

Shashank Ballur
Shashank Ballur
11 years ago

The story was going all well till a sudden turn which took place just to make the story reach its destiny. The story shouldn't have started with death at the first place. Stories should be written with a free flow of thoughts with an intention to convey to the readers an idea/thought/message/moral from the author's side. But it is sad to know that this beautifully narrated story was told only to reach the death of one of its characters.
Coming to the other aspects of the story, your hold over the language is simply awesome. Two characters coming together with nothing in common apart from art tells us there are no set boundaries for love. You have the ability to get into the shoes of the characters and think, which is highly appreciable.
To conclude, we love everything about the story, provided we didn't want an end at the start. Hope you will get me right. Thank you for the story.

chethan
11 years ago

ಪಾತ್ರ  ತೆರೆದುಕೊಳ್ಳುವ  ಓಘದಲ್ಲಿ  ಅದರ ಮೇಲೆ ಪ್ರೀತಿ ಹೆಚ್ಚಾಗಿ , ಹಚ್ಚಿಕೊಂಡು ಉಳಿಸಿಕೊಳ್ಳಬೇಕು ಅಂದುಕೊಂಡರೂ…, ಮೊದಲೇ ನಿರ್ಧರಿತವಾಗಿದ್ದ ಡೆಸ್ಟಿನಿ ಬಿಟ್ಟು ಕೊಡುವುದೇ ಇಲ್ಲ.  ಪರಿಸ್ಥಿತಿ ಕೈ ಮೀರಿದಂತೆ ಅನಿಸತ್ತೆ.  ಇಂತಹ ಪ್ರತಿಸ್ಪಂದನೆಗಳು ಕೊಂಚ ಆಲೋಚನೆಗೆ ಹಚ್ಚುತವೆ …,
– ಧನ್ಯವಾದಗಳು ಶಶಿ

chethan
11 years ago

ಇಷ್ಟ ಪಟ್ಟು ಲೈಕಿಸಿದ ಮತ್ತು ಕಾಮೆಂಟ್ ಮೂಲಕ ಮೆಚ್ಚುಗೆ ತಿಳಿಸಿದ ಎಲ್ಲರಿಗೂ ನನ್ನ್ ಪ್ರೀತಿ ಪೂರ್ವಕ ಥ್ಯಾಂಕ್ಸುಗಳು 🙂

Prashanth
Prashanth
8 years ago

Good one Chethan 🙂 Kept me holding tight till the end

11
0
Would love your thoughts, please comment.x
()
x