ಡಿಜಿಟಲ್ ತಂತ್ರಜ್ಞಾನವನ್ನು ಬಗಲಲ್ಲಿಟ್ಟುಕೊಂಡು ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ತಾಣಗಳು ವಿಶ್ವವನ್ನೇ ಅಂಗೈಯಲ್ಲಿ ತಂದು ಕೂರಿಸಿವೆ. ಎಲ್ಲ ಕ್ಷೇತ್ರಗಳ ವಿದ್ಯಮಾನ ಮತ್ತು ದೈನಂದಿನ ಬದುಕಿನ ಪುಟ-ಪುಟಗಳು ಮುಕ್ತವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ಇಷ್ಟೇ ಅಲ್ಲದೇ, ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲೂ ಇವು ಹಿಂಜರಿಯುವುದಿಲ್ಲ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡುವ ಉದಾರ ಗುಣ ಸೈಬರ್ ಕ್ರಾಂತಿಯ ಬೆನ್ನೆಲುಬು. ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಂದಿಗೆ ಹೇಳಿ ಮಾಡಿಸಿದಂತಿರುವ ಈ ಸಾಮಾಜಿಕ ತಾಣಗಳು, ಜನರ ನಡುವೆ ಪ್ರಭಾವೀ ಮಾಧ್ಯಮವಾಗಿ ಬೆಳೆದು ನಿಂತಿದೆ.
ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ತರುವಲ್ಲಿ ಇಂತಹ ಡಿಜಿಟಲ್ ಆಂದೋಲನಗಳು ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆ. ಆದರೆ ಜನರ ಮುಂದೆ ಹೊಸ ರೀತಿಯಲ್ಲಿ ಬೇಡಿಕೆ, ಅಹವಾಲುಗಳನ್ನು ಮುಂದಿಡಲು ಇದೊಂದು ಸೂಕ್ತ ವೇದಿಕೆಯಾಗಿ ಮಾರ್ಪಡುತ್ತಿದೆ. ಫೇಸ್ ಬುಕ್, ಟ್ವಿಟರ್ ಮೊದಲಾದೆಡೆ ಇದಕ್ಕಾಗಿಯೇ ನಾಯಿಕೊಡೆಯಂತೆ ಖಾತೆಗಳು ದೃಶ್ಯವಾಗುತ್ತವೆ. ಕಡಿಮೆ ವೆಚ್ಚದಲ್ಲಿ, ಎಲ್ಲಿ-ಯಾವಾಗ ಬೇಕಾದರೂ ಅಭಿಪ್ರಾಯ ಹಂಚಿಕೊಳ್ಳಬಹುದಾದರೂ, ಮೇಲ್ನೋಟಕ್ಕೆ ನಾಟಕೀಯವಾಗಿ ಕಾಣದೇ ಇರದು. ಹಿಂದಿನ ಪತ್ರ ವ್ಯವಹಾರದಲ್ಲಿದ್ದ ಕೌತುಕತೆ ಮಿಂಚಂಚೆಯಲ್ಲಿ ಕಾಣುವುದು ಅಸಾಧ್ಯ. ಹಾಗೆಯೇ ಈ ಸೈಬರ್ ಕ್ರಾಂತಿ ಕೂಡ. ಮುಖಂಡರ ಹೆಸರಿನಲ್ಲಿ ಯಾರೋ ನಿರ್ವಹಿಸುವ ಆಂದೋಲನಗಳು ಎಷ್ಟೋ ಸಾರಿ ಜನರಿಗೆ ತಪ್ಪು ಮಾಹಿತಿ ನೀಡುವುದೂ ಉಂಟು. ಇಲ್ಲಿ ನಡೆಯುವ ಚಟುವಟಿಕೆಗಳಿಗೆ ಮನ್ನಣೆ ದೊರೆಯುವ ಖಾತರಿಯೂ ಇಲ್ಲ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ನಮ್ಮಲ್ಲೂ ಚುನಾವಣೆ ಸಮೀಪಿಸುತ್ತಿದ್ದಂತೆ ಅನೇಕ ರಾಜಕೀಯ ನಾಯಕರ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೆರೆದುಕೊಂಡವು. ತಮಾಷೆಯೆಂದರೆ ಕೆಲವರಿಗೆ ಅದರ ಬಳಕೆ ಹೇಗೆಂಬುದೇ ಗೊತ್ತಿರಲಿಲ್ಲ. ಕಾಲ ಬದಲಾಗಿದೆ. ಇಂತಹ ಸಾಮಾಜಿಕ ತಾಣಗಳಲ್ಲಿ ಜನರು ಹೆಚ್ಚು ತೊಡಗಿಸಿಕೊಳ್ಳುವುದರಿಂದ, ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು ಅವರಿಗೆ ಅನಿವಾರ್ಯ ಮಾರ್ಗವಾಗಿತ್ತೆಂದರೂ ತಪ್ಪಿಲ್ಲ. ಆದರೆ ಎಷ್ಟೋ ಸಾರಿ, ಸಣ್ಣ ಪ್ರಮಾದವೂ ಪೇಚಿಗೆ ಸಿಲುಕಿಸುತ್ತದೆ.
ಏಕಾಏಕಿ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಜನ ವಿರೋಧಿ ಹೇಳಿಕೆಗಳು ಜಾಲತಾಣಗಳ ಮುಖೇನ ಬಿತ್ತರವಾದಲ್ಲಿ, ಮತ್ತೊಂದು ಆಂದೋಲನಕ್ಕೆ ಎಡೆಮಾಡಿ ಕೊಟ್ಟೀತು. ವ್ಯಕ್ತಿ, ಸಂಘಟನೆಗಳ ಕುರಿತು ವಿನಾಕಾರಣ ಸೈಬರ್ ಕ್ರಾಂತಿ ನಡೆಸಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ಕಲ್ಪಿಸುವುದು ಸ್ವಾಸ್ಥ ಸಮಾಜದ ಲಕ್ಷಣವಲ್ಲ. ಸೈಬರ್ ಕ್ರಾಂತಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆಯೇ ವಿನಹಃ ಮತ್ತೇನೂ ಅಲ್ಲ. ಇಲ್ಲಿ ಹಿತಶತ್ರುಗಳ ಜೊತೆ ಸೆಣಸಾಡಬೇಕಾಗುತ್ತದೆ. ಇಷ್ಟಕ್ಕೂ ಇದು ತಂತ್ರಜ್ಞಾನದ ತಪ್ಪಲ್ಲ. ತ್ವರಿತ ಸಂಪರ್ಕ, ಸಂವಹನ ಕಲ್ಪಿಸಲಿರುವ ಸೈಬರ್ ಇಂದು ಅಪರಾಧ, ಮಾನ ಹರಾಜು, ಅತಿರೇಕದ ನಡತೆಗಳಿಗೆ ಗುರಿಯಾಗಿದೆ.
·
ಚೆನ್ನಾಗಿದೆ.. ಉತ್ತಮ ಓಘದಲ್ಲಿ ಸಾಗುತ್ತಿದ್ದ ಲೇಖನ ಅರ್ಧದಲ್ಲೇ ಕೊನೆಗೊಂಡತೆನಿಸಿತು.. 🙁