ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ ಎಲೆಗಳು ಮಂಜಿನ ಹನಿಗಳ ಮುತ್ತಿನಾಭಿಷೇಕದಿಂದ ಪುಳಕಿತವಾಗಿ ತಂಗಾಳಿಗೆ ಮೈಯೊಡ್ಡಿ ಹಾಲು ಬೆಳದಿಂಗಳ ಹೀರುತ್ತಾ ಚಿನ್ನದಂತೆ ಹೊಳೆಯುತ್ತಿದ್ದವು. ಆಗಷ್ಟೇ ಮೂಡಿದ ಬೆಳ್ಳಿ, ಸೂರ್ಯನ ಒಡ್ಡೋಲಗಕ್ಕೆ ಮುನ್ನುಡಿ ಬರೆಯುತಿತ್ತು. ರಾತ್ರಿ ಪಾಳಿಯ ಕೊನೆಯ ಘಟ್ಟದಲ್ಲಿದ ಚಂದಿರ, ಸೂರ್ಯನಾಗಮನದ ನಿರೀಕ್ಷೆಯಲ್ಲಿ ಬೆಳ್ಳಿಯೊಂದಿಗೆ ಮಾತಿಗಿಳಿದಿದ್ದ . ಒಟ್ಟಾರೆ ಶರದೃತುವಿನಿಂದ ಆ ಜಾವದ ಘಳಿಗೆ ಭುವಿಯನ್ನು ಹೊಸ ಚೈತನ್ಯದ ಚಿಲುಮೆಯಾಗಿಸಿತ್ತು.
ಆದರೆ ಪ್ರಶಾಂತ ಸಂಪೂರ್ಣ ಬೆವತು ಹೋಗಿದ್ದ. ಮನೆಯೆದುರಿನ ಅಂಗಳದ ಕುರ್ಚಿಯಲ್ಲಿ ಆಕಾಶದತ್ತ ಮುಖ ಮಾಡಿ ಕುಳಿತ ಆತನ ಮುಖದ ಮೇಲೆಲ್ಲಾ ಈ ಆಹ್ಲಾದಕರ ಜಾವದಲ್ಲೂ, ಬೆವರು ಜಲಪಾತದಂತೆ ದುಮ್ಮುಕ್ಕುತ್ತಿತ್ತು. ಸಹಜ ಉಸಿರಾಟಕ್ಕೆ ತೊಂದರೆಯಾಗಿ ಎದುರುಸಿರು ಬಿಡುತ್ತಿದ್ದ. ಜಗವೆಲ್ಲ ಬೆಳಗಿನ ಜಾವದ ಸಿಹಿನಿದ್ದೆಯ ಮಂಪರಲ್ಲಿ ನಸುನಗುತ್ತಿದ್ದರೆ, ಪ್ರಶಾಂತ ಮಾತ್ರ ಭಯಾನಕ ಕನಸೊಂದರ ಸುಳಿಯಲ್ಲಿ ನಲುಗಿಹೋಗಿದ್ದ. ಆ ಕನಸಿನ ಭಯಕ್ಕೆ ಮನೆಯೊಳಗೇ ಇರಲಾರದೆ, ಸೀದಾ ಅಂಗಳಕ್ಕೆ ಬಂದು ಕುಳಿತುಕೊಂಡು ಸಾವರಿಸಿಕೊಳ್ಳಲು ಯತ್ನದಲ್ಲಿದ್ದ. ಇನ್ನೇನ್ನು ಕೊರಳಿಗೆ ಹಾಕಿದ್ದ ಆ ಉರುಳ ಹಗ್ಗವನ್ನು ಜೈಲಿನ ಆ ದೈತ್ಯ ಅಧಿಕಾರಿ ಎಳೆಯುವುದೊಂದೇ ಬಾಕಿ ಇತ್ತು. ರಾತ್ರಿ ಜಾರುವ ಆ ನುಸುಕಿನ ಹೊತ್ತಿನಲ್ಲಿ ಜೈಲಿನ ಅಧಿಕಾರಿಗಳು ಆತನನ್ನು ಎಬ್ಬಿಸಿ ಸ್ನಾನ ಮಾಡಿಸಿ, ಮರಣದ ವಸ್ತ್ರ ತೊಡಿಸಿ, ನೇಣುಗಂಭಕ್ಕೆ ಕರೆತಂದು, ಮುಖಕ್ಕೆ ಕಪ್ಪು ಮುಸುಕು ಹಾಕಿ, ಕೊರಳಿಗೆ ಉರುಳು ಹಗ್ಗ ತೊಡಿಸಿದ ಬಳಿಕ ಆ ದೈತ್ಯ ಅಧಿಕಾರಿ ಹಗ್ಗ ಎಳೆಯಲು ತನ್ನ ಮೇಲಾಧಿಕಾರಿಯ ಅಣತಿಗೆ ಕಾಯುತ್ತಿದ್ದ. ಇನ್ನೇನು ಗೋಡೆಯ ಗಡಿಯಾರವನ್ನೇ ದಿಟ್ಟಿಸುತ್ತಾ ಮುಹೂರ್ತಕ್ಕಾಗಿ ಕಾಯುತ್ತ ನಿಂತಿದ್ದ ಆ ಮೇಲಾಧಿಕಾರಿಯ ಬಾಯಿಂದ ಒಂದೇ ಒಂದು ಪದ ಹೊರಬರುವುದು ಬಾಕಿ ಇತ್ತು. ಅದೃಷ್ಟವಶಾತ್ ಪ್ರಶಾಂತನಿಗೆ ನಿದ್ದೆಯಿಂದ ಎಚ್ಚರಿಕೆಯಾಗಿತ್ತು.
ಜೀವನದಲ್ಲಿ ಹಿಂದೆಂದೂ ಕಾಣದ ಭಯಾನಕ ಕನಸದು. ಸಾವೆಂಬ ಸಾವನ್ನೇ ಎದುರಿಗೆ ನಿಲ್ಲಿಸಿದ ಕನಸದು. ಆತನಿಗೆ ಜೀವ ಗಂಟಲಿಗೆ ಬಂದು ಉಸಿರಾಟವೇ ನಿಂತು ಹೋದಂತಾಗಿತ್ತು. ಸ್ವಲ್ಪ ಹೊತ್ತು ಕುಳಿತು ಸಾವರಿಸಿಕೊಂಡ ಪ್ರಶಾಂತ ಅಂತರ ನಿಧಾನಾವಾಗಿ ಅಂಗಳದಲ್ಲೇ ಶತಪಥ ಹಾಕಲಾರಂಬಿಸಿ ಮನಸ್ಸನ್ನು ಒಂದಷ್ಟು ತಣ್ಣಗಾಗಿಸಲು ಯತ್ನಿಸಿದ. ಅದಾಗಲೇ ಚಂದಿರನ ಬೊಗಸೆಯಲ್ಲಿದ ಬೆಳದಿಂಗಳು ಖಾಲಿಯಾಗಿ, ಇತ್ತ ಪೂರ್ವದಲ್ಲಿ ಸೂರ್ಯನ ಒಡ್ಡೋಲಗ ಆರಂಭವಾಗಿತ್ತು. ಹತ್ತಿರದ ದೇವಸ್ಥಾನದ ಮೈಕಿನಲ್ಲಿ ಸುಪ್ರಭಾತ ಮೊಳಗಲಾರಂಭಿಸುತ್ತಿದ್ದಂತೆ, ಪ್ರಶಾಂತ ಮುಖ ತೊಳೆಯಲು ಬಾವಿಕಟ್ಟೆಯತ್ತ ಮುಖಮಾಡಿದ..
” ಏನ್ ಪ್ರಶಾಂತಣ್ಣ, ಇನ್ನು ಇಲ್ಲೇ ಇದ್ದೀರಾ ? ನಿಮಗಿನ್ನೂ ವಿಷಯ ಗೊತ್ತಾಗಿಲ್ವ ? ” ಬೆಳಿಗ್ಗೆ ಮನೆಗೆ ಪೇಪರ್ ಹಾಕಲು ಬಂದ ಪೇಪರ್ ಏಜೆಂಟ್ ಮಂಜುನಾಥ ಗಾಬರಿ ಬಿದ್ದವಂತೆ ಮನೆಯ ವರಾಂಡದಲ್ಲಿ ಟೀ ಕುಡಿಯುತ್ತ ಕುಳಿತಿದ್ದ ಪ್ರಶಾಂತನನ್ನು ಪ್ರಶ್ನಿಸಿದ. “ಯಾಕೆ ಏನಾಯಿತು ” ನಿನ್ನೆ ರಾತ್ರಿ ಬಿದ್ದ ಕನಸಿನಿಂದ ಮೊದಲೇ ವಿಚಲಿತನಾಗಿದ್ದ ಪ್ರಶಾಂತ ಇನ್ನಷ್ಟು ಗಾಬರಿಗೊಂಡು ಕೇಳಿದ.
“ಪ್ರಶಾಂತಣ್ಣ ನಮ್ ಸುರೇಶಣ್ಣ ನಿನ್ನೆ ರಾತ್ರಿ ನೇಣು ಹಾಕೊಂಡ್ರು. ಬೆಳಿಗ್ಗೆ ಮನೆಯಲ್ಲಿ ದೊಡ್ಡ ಗಲಾಟೆ. ಪೇಪರ್ ಹಾಕೂಕ್ ಹ್ವಾದವ ಈಗಷ್ಟೇ ಹೆಣ ನೋಡ್ಕೊಂಡ್ ಬಂದೆ. ನಂಗಂತೂ ಕೈಕಾಲೆ ಆಡ್ತಾ ಇಲ್ಲ. ” ಮಂಜುನಾಥ ಹೇಳುತ್ತಿದ್ದ ಒಂದೊಂದೇ ಮಾತು ಬರಸಿಡಿಲಿನಂತೆ ಪ್ರಶಾಂತ ಮನಸ್ಸಿನ ಮೇಲೆ ದಾಳಿಯುಡುತಿತ್ತು. ಕುಳಿತಲ್ಲೇ ಅದುರಿಹೋದ ಆತನ ಇಡೀ ದೇಹಕ್ಕೆ ಮತ್ತೆ ಬೆವರಿನ ಅಭಿಷೇಕವಾಗಿತ್ತು.
” ನಾ ಆಗ್ಲೇ ಹೇಳ್ದೆ. ನಿನ್ ಮೊಬೈಲಿಗೆ ಯಾರೋ ಒಂದೇ ಸಮನೆ ಫೋನ್ ಮಾಡ್ತಾ ಇದ್ದಾರೆ ಅಂತ. ಬಾವಿ ಕಟ್ಟೆಯಲ್ಲಿ ಇದ್ದ ನೀನು ಕಿವಿ ಮೇಲೆ ಹಾಕೋಂಡ್ಲ್ ಇಲ್ಲ. ಯಾರೋ ಈ ವಿಷ್ಯ ಹೇಳೋಕೆ ಫೋನ್ ಮಾಡಿರಬೇಕಿತ್ತು ನೋಡೋ ” ಅಂತ ಅಲ್ಲೇ ಬಾವಿ ಕಟ್ಟೆಯಲ್ಲಿ ಪಾತ್ರ ತೊಳೆಯುತ್ತಿದ್ದ ಆತನ ಅಮ್ಮ ನುಡಿಯುತ್ತಾ “ಮಂಜು ಯಾಕಂತೆ ನೇಣು ಹಾಕೊಂಡಿದ್ದು, ಒಳ್ಳೆ ಹುಡ್ಗ ಕಣೋ ಅವನು, ಮೊನ್ನೆ ತಾನೇ ನಮ್ಮನೆಗೆ ಬಂದು ಹೋಗಿದ್ದ,ಪಾಪ, ” ಅಂತ ಪೇಪರ್ ಮಂಜುನಾಥನ್ನ ಪ್ರಶ್ನಿಸಿದರು. “ಗೊತ್ತಿಲ್ಲ ಅಮ್ಮ. ಪಾಪ ಒಳ್ಳೆ ಮನುಷ್ಯ. ಪಾಪ ಊರಿಗೆ ಒಳ್ಳೆ ಕೆಲ್ಸ ಮಾಡಿದ್ರು. ಛೆ ಅನ್ಯಾಯ ” ಅಂತ ಹೇಳಿ ಆತ ಪೇಪರ್ ಹಾಕಿ ತೆರಳಿದ.
ರಾತ್ರಿ ತನಗೆ ಉರುಳು ಬೀಳುವ ಕನಸು ಕಂಡಿದ್ದ ಪ್ರಶಾಂತ ಈಗ ತನ್ನ ಗೆಳೆಯ ಉರುಳು ಹಾಕಿಕೊಂಡ ವಿಷಯ ಕೇಳಿ ದಿಗ್ಬ್ರಾಂತನಾಗಿದ್ದ. ಬಾವಿಕಟ್ಟೆಯಲ್ಲಿದ್ದ ಅಮ್ಮನ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದಯೇ ತನ್ನ ರೂಮಿಗೆ ಓಡಿ ಬಂದವ ಒಂದೇ ಸಮನೆ ದುಃಖ ಭಯ ಹತಾಶೆಯ ಸುಳಿಯಲ್ಲಿ ಸಿಲುಕಿದವಂತೆ ಜೋರಾಗಿ ಅಳತೊಡಗುತ್ತಾನೆ. ಮೊನ್ನೆಯಷ್ಟೇ ಮನೆಗೆ ಬಂದಿದ್ದ ಸುರೇಶನ ಮಾತುಗಳು ಕಿವಿಯ ಧ್ವನಿಪಟಲದ ಮೇಲೆ ನಿರಂತರ ದಾಳಿ ಮಾಡಲಾರಂಭಿಸಿದವು. “ನೋಡು ಪರಿಸ್ಥಿತಿ ಕುತ್ತಿಗೆ ತನಕ ಬಂದಿದೆ. ನಾಳೆ ಸಂಜೆ ಒಳಗಡೆ ಏನಾದರೂ ಮಾಡಿಲ್ಲ ಅಂದ್ರೆ, ನನ್ನನ್ನು ಅವ್ರು ಕೊಂದೆ ಬಿಡ್ತಾರೆ. ” ಹಾಗಂತ ಸುರೇಶ ಹೇಳಿದ ಮಾತು ಮತ್ತೆ ಮತ್ತೆ ಆತನನ್ನು ಇರಿಯತೊಡಗಿತು. ” ಏಯ್ ಪ್ರಶಾಂತ ಬೇಗ ಬಾರಾ, ಸುರೇಶನ ಮನೆಗೆ ಹೋಗೋಣ. ಪಾಪ ಅವನ್ ಅಪ್ಪ ನರಸಿಂಹನ ಸಮಾಧಾನ ಮಾಡೋಕೆ ಯಾರು ಇಲ್ಲ ಅಂತೇ, ಬೇಗ ಬನ್ನಿ ಅಂತ ಹಾಲ್ ಡೇರಿ ಮ್ಯಾನೇಜರ್ ಮಹಾಬಲ ಫೋನ್ ಮಾಡಿದ್ದ, ಬೇಗ ಹೊರಟು ಬಾ ” ತಂದೆಯ ಕರೆಗೆ ರೂಮಿನಿಂದ ಹೊರಬಂದ ಪ್ರಶಾಂತ ತನ್ನ ಕಾರಲ್ಲಿ ತಂದೆಯನ್ನು ಕೂರಿಸಿಕೊಂಡು ಸುರೇಶನ ಮನೆಯತ್ತ ತೆರಳಿದ. ಆಗಷ್ಟೇ ಅರಳಿನಿಂತ ಸೂರ್ಯನ ಕಿರಣಗಳು ಪ್ರಶಾಂತನ ಕಣ್ಣಾಲಿಗಳಲ್ಲಿ ಹನಿಯುಕ್ಕುತ್ತಿದ್ದ ನೀರುಗಳಿಗೆ ಸಾಂತ್ವನ ಹೇಳಿತ್ತಿದ್ದವು.
ಪ್ರಶಾಂತ ನ ತಂದೆ ಕೃಷ್ಣಪ್ಪ ಕಿಣಿ ಮತ್ತು ಸುರೇಶನ ತಂದೆ ನರಸಿಂಹ ಪೈ ಗಳು ದೂರದ ಸಂಬಂಧಿಗಳು, ಹಾಗೇನೇ ಬಾಲ ಸ್ನೇಹಿತರು, ಜೊತೆಗೆ ಇಬ್ಬರೂ ವ್ಯವಹಾರಸ್ಥರು. ಕೃಷ್ಣಪ್ಪ ಕಿಣಿಗಳದ್ದು ಇಡೀ ಚಕ್ರಪುರ ಊರಿಗೆ ದೊಡ್ಡ ಜಿನಸಿ ಅಂಗಡಿಯಾದರೆ, ಊರಲ್ಲಿದ್ದ ಏಕೈಕ ಹೋಟೆಲ್ ನರಸಿಂಹ ಪೈ ಗಳದ್ದು ಸಹಜವಾಗಿ ಇಬ್ಬರಿಗೂ ಊರಲ್ಲಿ ಒಳ್ಳೆಯ ಗೌರವ ಮನೆಮಾಡಿತ್ತು. ಪೈಗಳು ರಾಜಕೀಯ ಅಂತ ಒಂದಷ್ಟು ಓಡಾಡಿಕೊಂಡಿದ್ದು,ಒಂದು ಬಾರಿ ಗ್ರಾಮಪಂಚಾಯತ್ ಅಧ್ಯಕ್ಷ ಸಹ ಆಗಿದ್ದರೆ, ಇತ್ತ ಕಿಣಿಗಳು ಧಾರ್ಮಿಕ ಚಟುವಟಿಕೆಗಲ್ಲಿ ತಮ್ಮನ್ನು ಹೆಚ್ಚಾಗಿ ಗುರುತಿಸಿ ಕೊಂಡಿದ್ದರು. ಪೈಗಳಿಗೆ ಮೂರು ಮಕ್ಕಳು. ಅದರಲ್ಲಿ ದೊಡ್ಡ ಮಗ ಬೆಂಗಳೂರಿನಲ್ಲಿ ತನ್ನದೆಯಾದ ಕಂಪನಿ ನೆಡೆಸುತ್ತಿದ್ದರೆ, ಕಿರಿಯವಳಾದ ಮಗಳ ಗಂಡನಿಗೆ ಕೊಂಕಣ ರೈಲ್ವೆಯಲ್ಲಿ ಕೆಲಸ, ಸುರೇಶ ಮದ್ಯದವ. ಇತ್ತ ಕಿಣಿಯವರಿಗೆ ಒಬ್ಬನೇ ಮಗ. ಪ್ರಶಾಂತ ಮತ್ತು ಸುರೇಶ ಇಬ್ಬರದ್ದು ಒಂದೇ ವಯಸ್ಸು. ಎರಡು ಕುಟುಂಬಗಳು ಆತ್ಮೀಯವಾಗಿದ್ದರಿಂದ ಸಹಜವಾಗಿಯೇ ಇವರಿಬ್ಬರದ್ದು ಸ್ನೇಹ ಒಂದಷ್ಟು ಗಾಢ ವಾಗಿತ್ತು. ಅದೇನೋ ಇಬ್ಬರಿಗೂ ಓದು ಅಷ್ಟಾಗಿ ರುಚಿಸಲಿಲ್ಲ, ಅಂತೂ ಇಂತೂ ಡಿಗ್ರಿ ಮುಗಿಸಿದ ಮೇಲೆ ಇಬ್ಬರು ತಮ್ಮ ತಮ್ಮ ಮನೆಗಳಲ್ಲಿ ಬಿಸಿನೆಸ್,ಮಾಡ್ತೀವಿ ಅಂತ ಹಠ ಹಿಡಿದಿದ್ದರು. ಸುರೇಶ ಸ್ವಲ್ಪ ಚುರುಕು. ಡಿಗ್ರಿ ಮುಗಿಸಿ ತಂದೆ ಕೊಟ್ಟ ಹಣದಿಂದ ಒಂದೊಳ್ಳೆ ಕಂಪನಿಯ ಡೀಲರ್ ಶಿಪ್ ನ್ನು ಇಡೀ ಜಿಲ್ಲಾಮಟ್ಟಕೆ ತಗೆದುಕೊಂಡು, ಅದನ್ನು ಚೆನ್ನಾಗಿ ನೆಡೆಸಿಕೊಂಡು ಹೋದ. ಬಿಸಿನೆಸ್ ಅವನ ಕೈ ಹಿಡಿದಿತ್ತು. ದೊಡ್ಡಮಟ್ಟಕ್ಕೆ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಜೀವನದಲ್ಲಿ ಗುರಿ ತಲುಪಿದ್ದ. ದೂರದ ಸಂಬಂಧಿಯೊಬ್ಬರ ಮಗಳನ್ನೇ ಪೈಗಳು ಸುರೇಶನಿಗೆ ಮದುವೆ ಮಾಡಿಸಿದ್ದರು. ತಂದೆಯಂತೆ ಮಗನೂ ರಾಜಕೀಯದಲ್ಲಿ ಕೈಯಾಡಿಸಿ ತಾಲೂಕ್ ಪಂಚಾಯತ್ ಸದಸ್ಯ ಸಹ ಆಗಿದ್ದ.
ಆದರೆ ಪ್ರಶಾಂತನದ್ದು ಉಲ್ಟಾ ಬದುಕು. ಎಲ್ಲೂ ಒಂದೆಡೆ ನೆಲೆ ನಿಲ್ಲಲಾಗದ ತ್ರಿಶಂಕು ಸ್ವರ್ಗ. ವಯಸ್ಸು ನೆಲವತ್ತು ದಾಟಿದರೂ, ಇನ್ನು ಜೀವನಕ್ಕೊಂದು ಭದ್ರ ತಳಪಾಯ ಹಾಕಿಕೊಳ್ಳಲಾಗದ ಅಸಹಾಯಕತೆ. ಒಬ್ಬನೇ ಮಗನೆಂಬ ಕಾರಣಕ್ಕೆ ಅಪ್ಪ ಅಮ್ಮನ ಮುದ್ದು ಈತನ ಬದುಕಿಗೆ ಮಾರಕವಾಗಿತ್ತು. ಅಪ್ಪ ಕೊಟ್ಟ ದುಡ್ಡನ್ನೆಲ್ಲಾ ಆ ಬಿಸಿನೆಸ್ ಈ ಬಿಸಿನೆಸ್ ಅಂತ ಹಾಳು ಮಾಡಿದನೇ ಹೊರತು ಗಳಿಸಲಿಲ್ಲ. ಆತ ಯಾವ ವ್ಯವಹಾರಕ್ಕೂ ಕೈ ಹಾಕಿದರೂ ಅದರಲ್ಲಿ ಒಂದು ಪೈಸೆ ಲಾಭ ಹುಟ್ಟುತ್ತಿರಲಿಲ್ಲ. ವರ್ಷ ನಲವತ್ತಾದರೂ ಇನ್ನು ಮದುವೆಯಾಗಿಲ್ಲ. ದುಡಿಮೆ ಇದ್ದರೆ ತಾನೇ ಹೆಣ್ಣು ಕೊಡಲು ಯಾರಾದರೂ ಮುಂದೆ ಬರುವುದು ?. ಆದರೆ ಕಳೆದ ಎರಡು ಮೂರೂ ವರ್ಷ ದಿಂದ ಆರಂಭಿಸಿದ ಸರಕಾರೀ ಗುತ್ತಿಗೆದಾರಿ ವ್ಯವಹಾರ ಸ್ವಲ್ಪ ಕೈ ಹಿಡಿದಂತೆ ಕಾಣಿಸುತ್ತಿತು. ತಾಲೂಕ್ ಪಂಚಾಯತ್ ಸದಸ್ಯನಾದ ಮೇಲೆ ಸುರೇಶನ್ ಸ್ವಲ್ಪ ಮುತುವರ್ಜಿ ವಹಿಸಿ ಒಂದೆರಡು ಕಾಂಟ್ರಾಕ್ಟ್ ನೀಡಿದ್ದ. ಅದು ಸ್ವಲ್ಪ ಕೈಹಿಡಿದಂತೆ ಕಾಣಿಸಿ ಕಿಣಿ ಗಳ ಮನಸ್ಸಿನಲ್ಲಿ ನೆಮ್ಮದಿಯ ಗೆರೆಗಳನ್ನು ಮೂಡಿಸಿತ್ತು.
ಪ್ರಶಾಂತನ ಜೀವನ ಬೀದಿಗೆ ಬಿಟ್ಟ ಬಸವನಂತೆ, ಲಂಗು ಲಗಾಮು ಇಲ್ಲದ್ದು. ಒಂದಷ್ಟು ಪುಂಡ ಪೋಕರಿಗಳ ದಂಡಿನೊಂದಿಗೆ ಜೂಜು, ಕ್ರಿಕೆಟ್ ಬೆಟ್ಟಿಂಗ್, ಕೋಳಿಅಂಕ,ಕುಡಿತ, ಹುಡುಗಿಯರ ಸಹವಾಸ ಅಂತೆಲ್ಲ ದುಡಿದುದ್ದನ್ನೆಲ್ಲ ನೀರಿನಂತೆ ಖರ್ಚು ಮಾಡುತ್ತಿದ್ದ. ಪ್ರಶಾಂತ ಲೀಲೆಗಳು ಜಗದ್ಜಾಹಿರಾವಾಗಿದ್ದರೂ ಆತನ ತಂದೆ ತಾಯಿ ಮಾತ್ರ ಒಬ್ಬನೇ ಮಗ ಅನ್ನೋ ಮಮತೆಯಿಂದ ಎಲ್ಲವನ್ನು ಸಹಿಸಿ ಕೊಂಡಿದ್ದರು. ಆದರೆ ಇತ್ತೀಚಿಗೆ ಅವರ ನೆಮ್ಮದಿ ಕೆಡಿಸಿದ್ದು ನಯನಎಂಬ ಹೆಂಗಸು.
ಈ ನಯನ ಊರ ಶಾಲೆ ಹತ್ತಿರದ ಸ್ಟೇಷನರಿ ಅಂಗಡಿಯ ವಿನಯನ ಹೆಂಡತಿ. ಪೆನ್ನು, ಪುಸ್ತಕ, ಪೆನ್ಸಿಲ್ ಅಂತ ಪುಟ್ಟದೊಂದು ಅಂಗಡಿ ಇಟ್ಟುಕೊಂಡು ಜೀವನವನ್ನು ಆರು ಮೂರರ ಮಧ್ಯ ಗಂಟು ಹಾಕಿ ಕುಳಿತುಕೊಂಡಿದ್ದ ವಿನಯನ ಬದುಕಿಗೆ ಬಿರುಗಾಳಿಯಾಗಿ ಬಂದವಳು ಅವಳು. ಪುಟ್ಟ ಅಂಗಡಿಯ ಪಾಪದ ಹುಡುಗನಿಗೆ ಸುತ್ತ ಮುತ್ತಲಿನ ಊರಿನ ಯಾರು ಹೆಣ್ಣು ಕೊಡಲು ಮುಂದೆ ಬಾರದಿದ್ದಾಗ ವಿನಯನ ತಂದೆ ತನ್ನ ಮಗನಿಗೆ ಘಟ್ಟದ ಮೇಲಿನ ಹುಡುಗಿಯನ್ನು ತಂದುಕೊಂಡಿದ್ದರು. ಕರಾವಳಿಯ ಹುಡುಗರು ಘಟ್ಟದ ಮೇಲಿನ ಹುಡುಗಿ ಅಂದ್ರೆ ಸ್ವಲ್ಪ ಮೂಗು ಮುರಿಯುವುದು ಜಾಸ್ತಿ. ಆದ್ರೆ ನಯನ ನೋಡೋಕ್ಕೆ ಚಂದ ಇದ್ದಿದ್ದರಿಂದ ಮತ್ತು ಇಲ್ಲಿ ತನಗೆ ಯಾರು ಹೆಣ್ಣು ಕೊಡೋಲ್ಲ ಅನ್ನೋದು ಖಚಿತವಾಗಿದ್ದರಿಂದ ವಿನಯ ಮದುವೆಗೆ ಒಪ್ಪಿದ್ದ. ಇಷ್ಟಕ್ಕೂ ಆಕೆ ಚುರುಕಿನ ಹುಡುಗಿ. ಊರಲ್ಲಿ ಅಪ್ಪನ ತರಕಾರಿ ಅಂಗಡಿಯಲ್ಲಿ ವ್ಯವಹರಿಸಿದ ಅನುಭವ ಇದ್ದ ಆಕೆ ಇಲ್ಲಿ ವಿನಯನ ಸ್ಟೇಷನರಿ ಅಂಗಡಿಯ ಗಲ್ಲಕ್ಕೆ ಕೈ ಹಾಕಲು ತಡ ಮಾಡಲಿಲ್ಲ. ಕೆಲವೇ ದಿನಗಳಲ್ಲಿ ಬರೀ ಸ್ಟೇಷನರಿ ಅಂಗಡಿಯಾಗಿದ್ದ ಅದು ಸೂಪರ್ ಮಾರ್ಕೆಟ್ ಆಯಿತು. ಎಲೆಟ್ರಿಕಲ್ ಸಾಮಾನು, ಮೊಬೈಲ್ ಸಾಮಾನುಗಳು, ಐಸ್ ಕ್ರೀಮ್ ಮತ್ತು ಬೇಕರಿ ಸಾಮಾನುಗಳು ಅಂಗಡಿಯನ್ನು ತುಂಬಿ ಕೊಂಡಿತು. ನಯನಾಳ ನಗುಮೊಗದ ಗ್ರಾಹಕಸ್ನೇಹಿ ನೆಡವಳಿಕೆಗಳು ಸಹಜವಾಗಿಯೇ ಗಲ್ಲ ಪೆಟ್ಟಿಗೆಯನ್ನು ತುಂಬಿಸಿತು. ವಿನಯ ಅಂಗಡಿಯನ್ನು ಹೆಂಡಿತಿಗೆ ವಹಿಸಿ ಸಣ್ಣಗೆ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರ ಶುರುಹಚ್ಚಿಕೊಂಡಿದ್ದ. ಮಹತ್ವಾಕಾಂಕ್ಷೆಯ ನಯನ ಅಷ್ಟಕ್ಕೇ ತೃಪ್ತಲಾಗಲಿಲ್ಲ. ಊರಲ್ಲಿ ಮಹಿಳಾ ಮಂಡಲಕ್ಕೆ ಕಾಲಿಟ್ಟು ಒಂದೇ ವರ್ಷಕ್ಕೆ ಕಾರ್ಯದರ್ಶಿಯಾದಳು. ಮಹಿಳೆಯರಿಗೆ ಅದು ಇದು ಅಂತ ಒಂದಷ್ಟು ಕಾರ್ಯಕ್ರಮಮಾಡಿ ಗ್ರಾಮಪಂಚಾಯತ್ ಚುನಾವಣೆ ಗೆಲ್ಲುವಷ್ಟು ಜನಮನ್ನಗೆ ಪಡೆದಿದ್ದಳು. ಚುನಾವಣೆ ಗೆದ್ದವಳಿಗೆ ಅದೃಷ್ಟ ಕೈಹಿಡಿದಿತ್ತು. ಮೀಸಲಾತಿ ಲಾಭದಿಂದ ಅಧ್ಯಕ್ಷಗಿರಿಯು ಇವಳ ಸೆರಗು ಸೇರಿತ್ತು.
ಎಷ್ಟೋ ದೊಡ್ಡ ದೊಡ್ಡ ಬಲೆಗಳನ್ನು ದಾಟಿ ಬಂದ ಮೀನೊಂದು ಚಿಕ್ಕ ಗಾಳಕ್ಕೆ ಸಿಕ್ಕಿ ಹಾಕಿಕೊಂಡಂತೆ, ಘಟಾನುಘಟಿಗಳ ಬಲೆಯಿಂದ ನಯವಾಗಿ ತಪ್ಪಿಸಿಕೊಂಡಿದ್ದ ನಯನ ಈ ಪ್ರಶಾಂತನ ಬಲೆಗೆ ಬಿದ್ದು ಬಿಟ್ಟಿದ್ದಳು. ಹೇಳಿ ಕೇಳಿ ಈಕೆ ಗ್ರಾಮಪಂಚಾಯತ್ ಅಧ್ಯಕ್ಷೆ, ತನ್ನ ಯಾವುದೇ ಕಾಮಾಗಾರಿ ಬಿಲ್ಲು ಪಾಸು ಮಾಡಿಕೊಳ್ಳಲು ಅವಳ ಸಹಿ ಅಗತ್ಯ. ಈ ನೆಪದಲ್ಲಿ, ಆಕೆಗೆ ಹತ್ತಿರವಾದ. ಎಷ್ಟರ ಮಟ್ಟಿಗೆ ಅಂದರೆ, ಆಕೆಯ ಎಲ್ಲಾ ಸಭೆ ಸಮಾರಂಭಗಳಿಗೆ ಈತನದ್ದೇ ಡ್ರಾಪ್ ಅಂಡ್ ಪಿಕಪ್ ಸೇವೆ. ಮೊದಲು ಗುಸು ಗುಸು ಅಂತಿದ್ದದ್ದು ಈಗ ಊರಲ್ಲಲ್ಲೆಲ್ಲಾ ಟಾಮ್ ಟಾಮ್ ಆಗಿದೆ. ಊರೆಲ್ಲಾ ಇವರ ವಿಷಯ ಮಾತಾಡಿಕೊಳ್ಳುತ್ತಿದ್ದರೂ, ಇವರಿಬ್ಬರು ತಮಗೆ ಯಾವುದೇ ಸಂಬಂಧ ಇಲ್ಲವೆನ್ನುವಂತೆ ಓಡಾಡಿಕೊಂಡಿದ್ದರು. ಬಡಪಾಯಿ ವಿನಯ ಈ ವಿಷಯ ಕೆದುಕಲು ಹೋದಾಗಲ್ಲೆಲ್ಲ ನಯನ ತನ್ನ ಬುದ್ದಿವಂತಿಕೆಯಿಂದ ಆತನನ್ನು ತಣ್ಣಗಾಗಿಸುತ್ತಿದ್ದಳು. ಇತ್ತ ಮನೆಯವರು ಈ ವಿಷಯ ಇಟ್ಟುಕೊಂಡು ಕಿರಿಕಿರಿ ಮಾಡಿದಾಗಲ್ಲೆಲ್ಲಾ “ಆಕೆ ನನ್ನ ಕಾಂಟ್ರಾಕ್ಟ್ ಬಿಸಿನೆಸ್ ಗೆ ಸಹಾಯ ಮಾಡ್ತಾ ಇದ್ದಾಳೆ ಅದಕ್ಕೆ ಸ್ವಲ್ಪ ಜಾಸ್ತಿ ಅವಳ ಜೊತೆ ಓಡಾಡಿಕೊಂಡಿದ್ದೇನೆ ಹೊರತು ನೀವೆಲ್ಲ ಅಂದುಕೊಂಡಹಾಗೆ ಅಲ್ಲ. ಈ ವಿಷಯಕ್ಕೆ ನೀವು ತಲೆ ಹಾಕಬೇಡಿ. ನನಗೂ ಜವಾಬ್ದಾರಿ ಇದೆ “ಅಂತ ಪ್ರಶಾಂತ ತನ್ನ ತಂದೆ ತಾಯಿಗಳ ಬಾಯಿ ಮುಚ್ಚಿಸಿದ್ದ.
ಪ್ರಶಾಂತ, ನಯನ ಮತ್ತು ಸುರೇಶ, ಈ ಮೂವರ ಬದುಕಿಗೆ ವಿಭಿನ್ನವಾಗಿ ತಿರುವು ನೀಡಿದ್ದು ಚಕ್ರಪುರ – ಬಸ್ರಿಕಟ್ಟೆ ಸೇತುವೆ. ತಾಲೋಕು ಕೇಂದ್ರದಿಂದ ಚಕ್ರಪುರಕ್ಕೆ ಬರಬೇಕಾದರೆ ಏಳೆಂಟು ಊರುಗಳನ್ನು ಸುತ್ತುಹಾಕಿ ಹದಿನೈದು ಕಿಲೋಮೀಟರ್ ಸಂಚರಿಸಬೇಕು. ಒಂದುವೇಳೆ ಬಸ್ರಿಕಟ್ಟೆ ಮತ್ತು ಚಕ್ರಪುರದ ನಡುವೆ ಹರಿಯುವ ಚಕ್ರ ನದಿಗೆ ಸೇತುವೆ ಕಟ್ಟಿದರೆ ತಾಲೂಕು ಕೇಂದ್ರ ತಲುಪಲು ಬರಿ ನಾಲ್ಕು ಕಿಲೋ ಮೀಟರ್ ಸಾಕು. ಆದ್ದರಿಂದ ಕಳೆದ ನಾಲ್ಕೈದು ದಶಕಗಳಿಂದ ಸೇತುವೆಗಾಗಿ ಬೇಡಿಕೆ ಹೋರಾಟ ನೆಡೆದಿತ್ತು. ಆದರೆ ಯಾವಾಗ ಸುರೇಶ ತಾಲೂಕ ಪಂಚಾಯತ್ ಸದಸ್ಯನಾದನೋ ಆವಾಗ ಮತ್ತೆ ಸೇತುವೆ ವಿಷಯಕ್ಕೆ ಚಾಲನೆ ಬಂತು. ಶಾಸಕ, ಮಂತ್ರಿಗಳ ಮಟ್ಟದಲ್ಲಿ ಎಲ್ಲರ ಕೈಕಾಲು ಹಿಡಿದು ತನ್ನೂರಿಗೆ ಸೇತುವೆ ಮಂಜೂರು ಮಾಡಿಕೊಂಡು ಬಂದು ಊರಿನ ಪಾಲಿಗೆ ಹೀರೋ ಆಗಿದ್ದ. ಸುಮಾರು ಮೂರೂ ಕೋಟಿ ಅಂದಾಜಿನ ಯೋಜನೆ. ಇದು ನಯನಾಳ ನಿದ್ದೆ ಕೆಡಿಸಿತ್ತು. ಆಕೆ ಈ ಕಾಮಗಾರಿಯ ಗುತ್ತಿಗೆ ತಗೆದುಕೊಳ್ಳುವಂತೆ ಪ್ರಶಾಂತನ ಬೆನ್ನು ಬಿದ್ದಳು. ಆದರೆ ಪ್ರಶಾಂತ, ನಾನು ಚಿಕ್ಕ ಗುತ್ತಿಗೆದಾರ, ಇಷ್ಟು ದೊಡ್ಡ ಕಾಂಟ್ರಾಕ್ಟ್ ನನಗೆ ಸಿಗುವುದು ಕಷ್ಟ, ಒಂದು ವೇಳೆ ಸಿಕ್ಕರೂ ಅದಕ್ಕೆ ಬೇಕಾದ ಹಣಕಾಸು ಒದಗಿಸುವುದು ಅಸಾಧ್ಯ.ಅಂತೆಲ್ಲಾ ರಾಗ ಎಳೆದಿದ್ದ. ಆದರೆ ಛಲ ಬಿಡದ ನಯನ ಹಣಕಾಸು ಹೇಗೋ ನೋಡಿಕೊಂಡರಾಯಿತು, ಮೊದಲು ಕಾಂಟ್ರಾಕ್ಟ್ ತಗೊಳ್ಳಿ, ಹೇಗೂ ಇದರ ಪೂರ್ತಿ ಉಸ್ತುವಾರಿ ನಿನ್ನ ಗೆಳೆಯ ಸುರೇಶರದ್ದು. ಅವರು ಮನಸ್ಸು ಮಾಡಿದರೆ ಟೆಂಡರಲ್ಲಿ ಕಾಂಟ್ರಾಕ್ಟ್ ನಿಮಗೆ ಸಿಗುವ ಹಾಗೆ ಮಾಡ್ತಾರೆ. ಒಮ್ಮೆ ಇಂತಹ ಕಾಂಟ್ರಾಕ್ಟ್ ಸಿಕ್ಕರೆ ಲೈಫ್ ಸೆಟ್ಲ್ ಆದಂಗೆ ” ಅಂತ ಪ್ರಶಾಂತನ್ನು ಒಪ್ಪಿಸಿದಳು.
ಮೊದಲು ಸುರೇಶ ಒಪ್ಪಲಿಲ್ಲ. ” ಇದು ದೊಡ್ಡ್ ಪ್ರಾಜೆಕ್ಟ್, ನಿನ್ ಕೈಲಿ ಆಗೋಲ್ಲ. ಅದಕ್ಕೆ ಜಾಸ್ತಿ ಬಂಡವಾಳ ಬೇಕಾಗುತ್ತೆ. ಅದೆಲ್ಲ ನಿನ್ ಕೈಲಿ ಹೇಗೆ ಸಾಧ್ಯ ” ಅಂತ ಆತ ಪ್ರಶಾಂತನ ಬೇಡಿಕೆಯನ್ನು ನಿರಾಕರಿಸಿದ್ದ.
“ಇಲ್ಲಾ, ಸುರೇಶ, ನಾನ್ ಮಾಡ್ತೇನೆ. ಬಂಡವಾಳಕ್ಕೆ ವ್ಯವಸ್ಥೆ ಆಗುತ್ತೆ. ಜೀವನದಲ್ಲಿ ನೆಲೆ ಕಾಣದೆ ಒದ್ದಾಡ್ತಾ ಇದ್ದೀನಿ, ಕಾಂಟ್ರಾಕ್ಟ್ ಕೊಡ್ಸು, ಸೆಟ್ಟಾಗಿಬಿಡ್ತೀನಿ. ಫ್ರೆಂಡ್ ಆಗಿ ಇಲ್ಲಿ ತನಕ ನಿನ್ ಹತ್ತಿರ ಏನನ್ನೂ ಕೇಳಿಲ್ಲಿ. ಇದನ್ನು ಭಿಕ್ಷೆ ತರ ಕೊಡು. ಕೆಲಸವನ್ನು ಮಾಡ್ತೀನಿ, ನಾನೂ ಬದ್ಕೊಳ್ತಿನಿ. ” ಗೆಳೆಯ ಪ್ರಶಾಂತ ದೈನ್ಯೇತೆಯ ಮಾತುಗಳಿಗೆ ಸುರೇಶ ತಲೆಬಾಗಲೇ ಬೇಕಾಯಿತು. ಹೇಗೋ ಕಷ್ಟಪಟ್ಟು, ಒಂದಷ್ಟು ಜನರ ವಿರೋಧದ ನಡುವೆ ಸೇತುವೆಯ ಗುತ್ತಿಗೆ ಪ್ರಶಾಂತನಿಗೆ ಸಿಗುವ ಹಾಗೆ ಸುರೇಶ ನೋಡಿಕೊಂಡಿದ್ದ, ಜೊತೆಗೆ ಸೇತುವೆ ಗುತ್ತಿಗೆ ಯಲ್ಲಿ ಅಕ್ರಮ ಅಂತ ಒಂದಷ್ಟು ಪತ್ರಿಕೆಗಳಿಗೆ ಆತ ಆಹಾರ ಬೇರೆ ಆಗಿದ್ದ.
“ಏನಾಯ್ತನಂತೆ. ಪಾಪ ಒಳ್ಳೆ ಹುಡ್ಗ. ಊರಿಗೆ ತುಂಬಾ ಬೇಕಾದವ. ಈ ತರ ಅನ್ಯಾಯ ಮಾಡ್ಕೊಳ್ಳಬಾರದಾಗಿತ್ತು ” ಪ್ರಶಾಂತನ ಅಮ್ಮ ಸುರೇಶನ ಶವ ಸಂಸ್ಕಾರ ಮಾಡಿ ಬಂದ ತಂದೆ ಮಗನಲ್ಲಿ ಕೇಳಿದರು. ” ಸರಿಯಾಗಿ ಗೊತ್ತಿಲ್ಲ ಕಣೆ. ಒಬ್ಬೊಬ್ಬರು ಒಂದೊಂದು ತರ ಮಾತಾಡಿಕೊಳ್ತ್ತಾರೆ. ಏನ್ ಮಾಡೋದು, ಚಿನ್ನದಂಥ ಜೀವವೊಂದು ಹೋಯ್ತು ” ಕಿಣಿಯವರು ವಿಷಾದದಿಂದ ನುಡಿದು ಸ್ನಾನ ಮಾಡಲು ಬಾವಿಕಟ್ಟೆಯತ್ತ ನೆಡೆದರು. ಪ್ರಶಾಂತ ಇನ್ನೂ ಶಾಕಿನಿಂದ ಹೊರಬಂದಿರಲಿಲ್ಲ. “ವಿಷಯ ಕುತ್ತಿಗೆಗೆ ಬಂದಿದ್ದರೂ ಸುರೇಶ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ದುಡ್ಡಿನ ವಿಷಯದಲ್ಲಿ ಇಷ್ಟು ಬೇಗನೆ ಆತುರಕ್ಕೆ ಬೀಳಬಾರದಾಗಿತ್ತು, ಪಾಪ ನಂಗೋಸ್ಕರ ಜೀವ ಕಳೆದುಕೊಂಡ ” ಹಾಗಂತ ತನ್ನಲ್ಲೇ ಅಪರಾಧಿ ಮನೋಭಾವ ಮೂಡಿ ಅಂಗಳದಲ್ಲೇ ಕೂತು ಜೋರಾಗಿ ಅಳತೊಡಗಿದ. ಅಪ್ಪ ಅಮ್ಮ ಎಷ್ಟೇ ಸಂತೈಸಿದರು ಆತನ ಅಳು ನಿಲ್ಲಲಿಲ್ಲ.. ನಡು ನೆತ್ತಿಯ ಮೇಲಿದ್ದ ಸೂರ್ಯ ಯಾವುದೇ ಕರುಣೆಯಿಲ್ಲದೆ ಇಳೆಯ ಸುಡುತ್ತಿದ್ದ.
ಆರಂಭದಲ್ಲಿ ಸೇತುವೆ ಕಾಮಗಾರಿ ಚುರುಕಾಗಿಯೇ ನೆಡೆದಿದ್ದತು. ತನ್ನ ಕೈಯಲ್ಲಿದ್ದ ಮತ್ತು ತಂದೆ ಕೊಟ್ಟ ಸ್ವಲ್ಪ ಹಣವನ್ನು ಬಳಸಿಕೊಂಡು ಮತ್ತು ಸುರೇಶನ ಸಹಾಯದಿಂದ ಒಂದಷ್ಟು ಮೆಟೀರಿಯಲ್ ಸರಬುದಾರರ ಹತ್ತಿರ ಕ್ರೆಡಿಟ್ ಗೆ ವಸ್ತುಗಳನ್ನು ತೆಗೆದುಕೊಂಡು ಪ್ರಶಾಂತ ಸೇತುವೆ ಕಾಮಗಾರಿ ನೆಡೆಸುತ್ತಿದ್ದ. ಮಾರ್ಚ್ ತಿಂಗಳು ಮುಗಿಯುವ ಹೊತ್ತಿಗೆ ಸೇತುವೆ ನಿರ್ಮಾಣ ಶೇಕಡಾ ಮೂವತ್ತರಷ್ಟು ಮುಗಿದಿದ್ದು,ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕರು ಮತ್ತು ಸಂಸದರು, ಮಳೆಗಾಲ ಹತ್ತಿರವಿದ್ದರಿಂದ ಬೇಗನೆ ಕಳಸ ಮುಗಿಸುವಂತೆ ಒತ್ತಾಯಿಸಿದ್ದು ಅಲ್ಲದೆ, ಬಿಲ್ಲುಗಳನ್ನು ಬೇಗನೆ ಬಿಡುಗಡೆ ಮಾಡುವಂತೆ ಅಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರಿಂದಾಗಿ ಪ್ರಶಾಂತನಿಗೆ ಒತ್ತಡ ಜಾಸ್ತಿ ಆಯಿತು. ಇನ್ನು ಒಂದೂವರೆ ತಿಂಗಳಲ್ಲಿ ಉಳಿದ ಶೇಕಡಾ ಎಪ್ಪತ್ತರಷ್ಟು ಕಾಮಗಾರಿಯನ್ನು ಮುಗಿಸುವ ಅನಿವಾರ್ಯತೆ ಅವನ ಮೇಲಿದ್ದು. ಹೆಚ್ಚು ಕಡಿಮೆ ಒಂದೂವರೆ ಕೋಟಿಯಷ್ಟು ಹಣ ಬೇಕಾಗಿತ್ತು.
“ಅಲ್ಲಾ ಕಣೋ ಪ್ರಶಾಂತ. ನಿನಗೆ ನಾನು ಆವಾಗಲೇ ಹೇಳಿದ್ದೆ, ಇದು ನಿನ್ನ ಕೈಲಿ ಆಗೋಲ್ಲ ಅಂತ, ಮಾಡ್ತೀನಿ ಅಂದೇ, ಈಗ ನೋಡಿದ್ರೆ ದುಡ್ಡಿಲ್ಲ ಅಂತಿದ್ಯ. ಹಿಂಗ್ ಮಾಡಿದ್ರೆ ಹೆಂಗೋ. ನೀನು ಬ್ಲಾಕ್ ಲಿಸ್ಟ್ ಆಗ್ತೀಯಾ, ನನಗೂ ಬ್ಯಾಡ ನೇಮ್. ನನಗೆ ಗೊತ್ತಿಲ್ಲ ಹೇಗಾದ್ರು ಮಾಡಿ ಸೇತುವೆಯ ಕೆಲಸ ಮುಗ್ಸಿಬಿಡು. ” ಅಸಹಾಯಕನಾಗಿ ತನ್ನ ಮುಂದೆ ಕುಳಿತಿದ್ದ ಪ್ರಶಾಂತನಿಗೆ ಸುರೇಶ ತಾಕೀತು ಮಾಡಿದ್ದ.
“ಇಲ್ಲ ಸುರೇಶ, ಹೆಂಗೋ ಒಂದೈವತ್ತು ಲಕ್ಷ ಅಡ್ಜಸ್ಟ್ ಮಾಡಬಹುದು, ಇನ್ನು ಒಂದು ಕೋಟಿ ಶಾರ್ಟ್ ಆಗುತ್ತೆ. ನೀನೆ ದಿಕ್ಕು ನಂಗೆ. ಹೆಂಗು ಕೆಲಸ ಮುಗಿದ ವಾರದೊಳಗೆ ಬಿಲ್ಲು ಪಾಸು ಆಗುತ್ತೆ ಅಂತಿದ್ದೀಯಾ, ಎಲ್ಲಾದರೂ ಬಡ್ಡಿ ಮೇಲೆ ಸಾಲ ಕೊಡ್ಸು. ನಾನು ಮನೆ ಮತ್ತು ಅಂಗಡಿ ಜಾಗದ ಮೇಲೆ ಸಾಲಕ್ಕೆ ಅಪ್ಲೈ ಮಾಡಿದ್ದೀನಿ. ಸಾಲಾನೋ, ಬಿಲ್ಲೋ ಯಾವುದೋ ಒಂದು ಬಂದ ಕೂಡ್ಲೇ ಹಣ ವಾಪಾಸು ಕೊಟ್ಟುಬಿಡ್ತೀನಿ. ಅದ್ಯಾರೋ ಬೆಂಗಳೂರಿನಲ್ಲಿ ನಮ್ಮ ಎಮ್ಮೆಲ್ಲೆ ಬಾವಮೈದ ನರಹರಿ ಅಂತ ಇದ್ದಾರಂತಲ್ಲ, ವಾರದ ಲೆಕ್ಕದಲ್ಲಿ ಬಡ್ಡಿ ಮೇಲೆ ಸಾಲ ಕೊಡ್ತಾರಂತಲ್ಲ, ಕೊಡ್ಸಬೀಡು, ವಾರ ವಾರ ಬಡ್ಡಿ ಕಟ್ಕೊಂಡು ಹೋಗ್ತೀನಿ ಪ್ಲೀಸ್, ನೀನೆ ನಂಗೆ ಈಗ ದೇವರು. ನೀನ್ ಕೈ ಬಿಟ್ರ್ ನಂಗೆ ಕೆರೆ ಬಾವೀನೆ ಗತಿ ” ಪ್ರಶಾಂತನ ಕಣ್ಣೀರು ಫಲಿಸಿಯಿತು. ಒಂದು ಕೋಟಿ ರೂಪಾಯಿ ವಾರದ ಬಡ್ಡಿ ಲೆಕ್ಕದಲ್ಲಿ ಸುರೇಶನ ಜಾಮಿನ ಮೇಲೆ ನರಹರಿ ನೀಡಿದ್ದರು.
ಆಗಸದಲ್ಲಿ ಮುಂಗಾರಿನ ಮೋಡಗಳು ಕಪ್ಪು ಕಟ್ಟುವ ಹೊತ್ತಿಗೆ ಸೇತುವೆ ತಲೆ ಎತ್ತಿ ನಿಂತಿತ್ತು. ಮೊದಲ ಮಳೆಯ ಮಣ್ಣಿನ ಸುಗಂಧ ಉರೆಲ್ಲಾ ಪಸರಿಸುವ ಘಳಿಗೆಯಲ್ಲೇ ಸೇತುವೆಯ ಉದ್ಘಾಟನೆ ನೆಡೆದು ಹೋಗಿತ್ತು. ಊರ ಜನರ ಸಂಭ್ರಮಕ್ಕೆ ಪಾರೆ ಇರಲಿಲ್ಲ. ಸುರೇಶ ಮತ್ತು ಪ್ರಶಾಂತರ ಫ್ಲೆಕ್ಸ್ ಗಳು ಸೇತುವೆಯ ಸುತ್ತ ಮುತ್ತ ಮುಂಗಾರಿನ ಮೋಡಗಳಿಗೆ ಸವಾಲು ಹಾಕುವಂತೆ ಎದೆಯೇರಿಸಿ ವಿಜೃಂಬಿಸುತ್ತಿದ್ದವು. ಆದರೆ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ. ಮುಂಗಾರು ಮಳೆಯೇನೋ ಟೈಮ್ ಟೇಬಲಿನಂತೆ ಸುರಿಯತೊಡಗಿತು, ಆದರೆ ಸೇತುವೆ ಕಾಮಗಾರಿಯ ಉಳಿದ ಎರಡು ಕೋಟಿ ಬಿಲ್ಲಿಗೆ ಮಾತ್ರ ಬರಗಾಲದ ಬಿಸಿಗಾಳಿ ಬೀಸುತ್ತಿತ್ತು. ಅಧಿಕಾರಿಗಳ ವರ್ಗಾವಣೆವೆಂಬ ಕಾರಣದಿಂದ ವಿಳಂಬ ಗೊಂಡ ಬಿಲ್ಲು, ರಾಜ್ಯದಲ್ಲಿ ಅತೀವೃಷ್ಟಿಯಿಂದ ಬೊಕ್ಕಸ ಖಾಲಿಯಾಗಿದೆ ಅನ್ನುವ ತನಕ ನಾಲ್ಕು ತಿಂಗಳು ಪ್ರಶಾಂತನ ಕೈ ಸೇರಲೇ ಇಲ್ಲ. ಇಲ್ಲಿ ವಾರ ವಾರ ಸಾಲಕ್ಕೆ ಬಡ್ಡಿ ಕಟ್ಟಿ ಆತ ಹೈರಾಣಾಗಿದ್ದ. ಕಳೆದ ಎರಡು ತಿಂಗಳಿಂದ ಅದನ್ನು ಕಟ್ಟಲಾಗದೆ ನಿಲ್ಲಿಸಿದ್ದ. ಇದರಿಂದಾಗಿ ಸುರೇಶನ ಮೇಲೆ ಇನ್ನಿಲ್ಲದ ಒತ್ತಡ ಬಂದಿತ್ತು. ಮೊದಲೇ ನರಹರಿ ರೌಡಿ ಹಿನ್ನಲೆಯವನು, ದೊಡ್ಡ ಮೊತ್ತ ಬೇರೆ ಬಿಟ್ಟಾನಾ. ಸುರೇಶನಿಗೆ ಇನ್ನಿಲ್ಲದ ಕಿರುಕುಳ ನೀಡಲಾರಂಭಿಸಿದ. ನರಹರಿಯ ಹುಡುಗರು ದಿನಾ ಆತನ ಆಫೀಸಿಗೆ ಬಂದು ರಗಳೆ ಕೊಡಲು ಆರಂಭಿಸಿದರು.ಇತ್ತ ಪ್ರಶಾಂತ ಸಹ ಬಿಲ್ಲು ಬರದೇ ತಾನೇನು ಮಾಡಲಾಗುವುದಿಲ್ಲ ಅಂತ ಅಸಹಾಯಕತೆಯಿಂದ ಕೈ ಎತ್ತಿದ್ದ.
” ಇಲ್ಲ ಸುರೇಶ, ಬಿಲ್ಲು ಪಾಸಾಗದೆ ಏನು ಮಾಡೋಕೆ ಆಗೋಲ್ಲ, ಬಿಲ್ ಬಂದ್ ಮೇಲೆ ಬಡ್ಡಿ ಅಸಲು ಎರಡು ಕೊಡ್ತೇನೆ, ಸ್ವಲ್ಪ ಮ್ಯಾನೇಜ್ ಮಾಡೋ ” ಆತ್ಮಹತ್ಯೆಗೆ ಮುನ್ನ ದಿನ ಮನೆಗೆ ಬಂದಿದ್ದ ಸುರೇಶನೆದುರು ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ. “ಇಲ್ಲ ಪ್ರಶಾಂತ, ಅವರು ನನಗೆ ಚಿತ್ರ ಹಿಂಸೆ ಕೊಡ್ತಾ ಇದ್ದಾರೆ. ನಿನಗೆ ಗೊತ್ತಲ್ಲ ಅವರ ಬ್ಯಾಕ್ ಗ್ರೌಂಡ್,. ಕೊಲೆ ಮಾಡುಕು ಹೇಸೋಲ್ಲ. ದುಡ್ಡು ನಾನ್ ಕೊಡ್ಸಿರೋದ್ರಿಂದ,ದಿನಾ ಆಫೀಸ್ ಮುಂದೆ ಬಂದು ರಿವಾಲ್ವರ್ ತೋರಿಸಿ ವಾರ್ನಿಂಗ್ ಮಾಡ್ತಿದ್ದಾರೆ. ಜೊತೆಗೆ ಮೆಟೀರಿಯಲ್ ಸುಪ್ಪ್ಲೆಯೆರ್ ರಂಗಸ್ವಾಮಿಗೆ ಇಪ್ಪತೈದು ಲಕ್ಷ ಬೇರೆ ಬಾಕಿ ಇಟ್ಟುಕೊಂಡಿದ್ಯಾ, ಅವನಿಗೂ ನರಹರಿ ಕಡೆಯಿಂದ ಸಾಲ ಕೊಡ್ಸಿದ್ದೆ. ಅದು ಬೇರೆ ತೆಲೆಗೆ ಬಂದಿದೆ. ಏನಾದರೂ ಮಾಡೋ. ಇಲ್ಲ ಅಂದ್ರೆ ಉಳಿಗಾಲ ಇಲ್ಲ ಕಣೋ ” ಅಂತ ಸುರೇಶ ಅಕ್ಷರಶ: ಅತ್ತಿದ್ದ. “ನನಗೆ ಎಲ್ಲಾ ಅರ್ಥ ಆಗುತ್ತೆ, ಆದ್ರೆ ಏನ್ ಮಾಡ್ಲಿ ಬಿಲ್ಲು ಇಷ್ಟು ಲೇಟಾಗುತ್ತೆ ಅಂತ ಕನಸಲ್ಲೂ ಎಣಿಸಿರಲಿಲ್ಲ. ಇವರ ಬಡ್ಡಿ ಕಟ್ಟೋಕೆ ಬೇರೆ ಕಡೆ ಸಾಲ ಮಾಡಿದ್ದೆ. ಆ ಸಾಲ ಸಹ ಈಗ ನನ್ನ ಕುತ್ತಿಗೆಗೂ ಬಂದಿದೆ. ಮೊನ್ನೆ ಆ ಚೀಫ್ ಇಂಜಿನಿಯರ್ ಗೆ ಕೈಗೆ ಸ್ವಲ್ಪ ಬಿಸಿ ಮಾಡಿ ಬಂದಿದ್ದೆ, ಒಂದ್ ವಾರದಲ್ಲಿ ಬಿಲ್ಲು ಪಾಸ್ ಆಗೋ ಹಾಗೆ ಮಾಡ್ತೀನಿ ಅಂದಿದ್ದಾನೆ. ಒಂದ್ ವಾರ ಮ್ಯಾನೇಜ್ ಮಾಡು ಪ್ಲೀಸ್ ಎಲ್ಲ ಸಾರಿ ಆಗುತ್ತೆ ” ಅಂತ ಪ್ರಶಾಂತ ಹೇಳಿದ ಮಾತುಗಳು ಸುರೇಶನನ್ನು ಸಮಾಧಾನಗೊಳಿಸಲಿಲ್ಲ, ಒಂದೂ ಮಾತಾಡದೇ ಅಂದು ಎದ್ದು ಹೋಗಿದ್ದ. ಅದಾದ ಮರುದಿನ ರಾತ್ರಿ ನೇಣಿಗೆ ಶರಣಾಗಿದ್ದ. ಈ ಅಂತರದಲ್ಲಿ ನರಹರಿ ಕಡೆಯವರು ಸುರೇಶನ ಆಫೀಸಿಗೆ ನುಗ್ಗಿ, ಆತನಿಗೆ ಹೊಡೆದು, ಆಫೀಸಿನ ಪೀಠೋಪಕರಣಗಳನ್ನು ನಾಶ ಮಾಡಿ ರಸ್ತೆಗೆ ಎಸೆದು ಹೋಗಿದ್ದದ್ದನ್ನು ಊರು ಆತನ ಸಾವಿನ ನಂತರ ಪಿಸುಗುಡಲಾರಂಭಿಸಿತ್ತು.
ತಮ್ಮನ್ನು ಅಗಲಿದ ನಾಯಕ ಸುರೇಶನಿಗೆ ಶೃದ್ಧಾಂಜಲಿ ಸಲ್ಲಿಸಲು ಸುತ್ತಲಿನ ನಾಲ್ಕೈದು ಊರಿನ ಜನ ಸೇರಿದ್ದರು. ವೇದಿಕೆಯಲ್ಲಿ ಸಂಸದರು ಶಾಸಕರು ಮುಂತಾದ ಮುಖಂಡರ ಜೂತೆ ನಯನಳು ಸಹ ಕುಳಿತ್ತಿದ್ದಳು. ಸಭಿಕರ ಸಾಲಲ್ಲಿ ಮುಂದೆ ಕುಳಿತಿದ್ದ ಪ್ರಶಾಂತ ಮಾತ್ರ ವೇದಿಕೆಯಲ್ಲಿ ಹಾಕಿದ್ದ ಸುರೇಶನ ದೊಡ್ಡ ಫೋಟವನ್ನೇ ತದೇಕಚಿತ್ತದಿಂದ ವಿಷಾದಭಾವದಿಂದ ನೋಡುತ್ತಿದ್ದ. ತನ್ನ ಸ್ವಾರ್ಥಕ್ಕಾಗಿ ಗೆಳೆಯನ್ನು ಬಲಿ ಕೊಟ್ಟೆನಲ್ಲಯೆಂಬ ವಿಷಾದವಿದ್ದರೂ, ಅಪರಾಧಿ ಮನೋಭಾವ ಆತನ ಮುಖದಲ್ಲಿಇದ್ದಂತಿರಲಿಲ್ಲ, ವೇದಿಕೆಯಲ್ಲಿದ್ದವರಿಂದ ಸುರೇಶನ ಗುಣಗಾನ ಜೋರಾಗಿ ನೆಡೆಯುತ್ತಿತ್ತು. ಆ ಸಮಯದಲ್ಲೇ ಪ್ರಶಾಂತ ಮೊಬೈಲ್ ಗೆ ಒಂದು ಕರೆ ಬಂತು, ಹಾಗೆ ಸಭೆಯಿಂದ ಸ್ವಲ್ಪ ದೂರಬಂದು ಫೋನ್ ನೋಡಿದರೆ ಚೀಫ್ ಇಂಜಿನಿಯರದ್ದು ಕರೆ . ” ಪ್ರಶಾಂತವರೇ ನಿಮ್ ಬಿಲ್ ಎರಡು ಕೋಟಿ ಪಾಸಾಗಿದೆ. ಈಗ ನಮ್ ಅಕೌಂಟೆಂಟ್ ಚೆಕ್ ನ ಬ್ಯಾಂಕಿಗೆ ತಕೊಂಡ್ ಹೋದ. ಇನ್ನ ಅರ್ಧ ಗಂಟೆಯಲ್ಲಿ ನಿಮ್ ಅಕೌಂಟ್ಗೆ ಅಮೌಂಟ್ ಬರುತ್ತೆ. ನಾಳೆ ನನ್ ಕಮಿಷನ್ ಮೂರೂ ಪರ್ಸೆಂಟ್ ಕ್ಯಾಶ್ ಕೊಟ್ಟುಬಿಡಿ ” ಅಂತ ಮರಳುಗಾಡಿನ ಓಯಸಿಸ್ ನಂತೆ ಸಂಭ್ರಮದ ವರ್ಷದಾರೆ ಹರಿಸಿದ್ದ ಇಂಜಿನಿಯರ್ ಗೆ ಧನ್ಯವಾದ ಹೇಳಿ ಕಾಲ್ ಮುಗಿಸುವ ಹೊತ್ತಿಗೆ ಬೇಕಾಗಿದ್ದ ಬ್ಯಾಂಕಿನ ಮೆಸೇಜ್ ಮೊಬೈಲ್ಗೆ ಬಂದು ಬಿಟ್ಟಿತ್ತು. ಕಿರು ನೆಗೆಯೊಂದು ಪ್ರಶಾಂತನ ಮುಖದಲ್ಲಿ ಮಿಂಚಿಮನೆಮಾಡಿತ್ತು. ಹಿಂತಿರುಗಿ ಬಂದು ತನ್ನ ಸೀಟಿನಲ್ಲಿ ಕುಳಿತ ಆತ ಬ್ಯಾಂಕಿನ ಆ ಮೆಸೇಜ್ ನ್ನು ನಯನಳಿಗೆ ಫಾರ್ವರ್ಡ್ ಮಾಡಿ ವೇದಿಕೆಯಲ್ಲಿರುವ ಅವಳಿಗೆ ಕಣ್ಣಲ್ಲೇ ಮೆಸೇಜ್ ಓದುವಂತೆ ಸೂಚಿಸುತ್ತಾನೆ. ಮೆಸೇಜ್ ಓದಿದ ಆಕೆ ಕಳ್ಳ ನಗೆ ನಕ್ಕು ಆತನೆಡೆಗೆ ನೋಡಿ ಹುಬ್ಬು ಹಾರಿಸುತ್ತಾಳೆ. ವೇದಿಕೆಯಲ್ಲಿರುವ ಸುರೇಶನ ಫೋಟೋ ಇವರಿಬ್ಬರ ಹಾವಬಾವಗಳನ್ನು ನೋಡಿ ಅಳುತ್ತಿರುವಂತೆ ಭಾಸವಾಗಿತ್ತು.
” ಏನೋ ಮಂಜ್ನಾಥ, ಪೇಪರಲ್ಲಿ ಏನಾದರೂ ವಿಶೇಷ ಇದೆಯಾ ? ” ನಿನ್ನೆ ರಾತ್ರಿ ಸುರಿದಿದ್ದ ಭಾರಿ ಮಳೆಗೆ ಬಿದ್ದು ಹೋಗಿದ್ದ, ಹೊಸ ಸೇತುವೆಯ ಮೇಲಿನ ಬೀದಿ ದೀಪವನ್ನು ಸರಿಮಾಡುತ್ತಿದ್ದ ಎಲೆಕ್ಟ್ರಿಷಿಯನ್ ರಾಮಣ್ಣ, ಪೇಪರ್ ಹಾಕಲು ತೆರಳುತ್ತಿದ್ದ ಮಂಜುನಾಥನನ್ನು ಕೇಳಿದ. ” ಪೇಪರಿನಲ್ಲಿ ಎಂತ ಇಲ್ಲ ರಾಮಣ್ಣ, ಆದ್ರೆ ನಮ್ಮೂರಿದೊಂದ್ ದೊಡ್ಡ್ ಫ್ಲಾಶ್ ನ್ಯೂಸ್ ಇದೆ, ನಿನ್ನೆ ರಾತ್ರಿಯಿಂದ ನಮ್ಮ ಪ್ರಶಾಂತ್ ಕಿಣಿ ಮತ್ತ್ ಪಂಚಾಯಿತ್ ಪ್ರೆಸಿಡೆಂಟ್ ನಯನ ಕಾಣ್ಸ್ತ ಇಲ್ಲ ಅಂತೇ, ಇಬ್ರು ಜೂಟ್ ಆಗಿದ್ದಾರೆ !. ನನಗೆ ಮೊದ್ಲೇ ಅವರ ಮೇಲೆ ಅನುಮಾನ ಇತ್ತು ಕಾಣ ” ಅಂದ ಮಂಜುನಾಥನ ಮಾತಿಗೆ, ಆಗೇ ತಾನೇ ಮೋಡಗಳ ಜೊತೆ ಗುದ್ದಾಡಿ ಹೊರ ಬಂದಿದ್ದ ಸೂರ್ಯ ಪ್ರಯಾಸದ ನಗು ಬೀರಿದ್ದ.
-ಸತೀಶ್ ಶೆಟ್ಟಿ ವಕ್ವಾಡಿ.
ಬಹಳ ಚೆನ್ನಾಗಿ ಬರೆದಿದ್ದೀರಿ. ನೈಜ ದೃಶ್ಯ ಕಣ್ಣ ಮುಂದೆ ಬಂದಂತಾಯಿತು 🙏
,ವಾಸ್ತವ ಜೀವನದ ಮಜಲನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಸರಾಗವಾಗಿ ಓದಿ ಸ್ಕೊಂಡು ಹೋಯ್ತು.
ಸರಾಗವಾಗಿ ಓದಿ ಸ್ಕೊಂಡು ಹೋಯ್ತು. ನೈಜ ಕತೆ ಓದಿದ ಅನುಭವಾಯ್ತು
Dear sir,
Good job. Namma suttala vaastava sthithiyanna kannige kattidante barediruviri.namma oorinalle nadediruva ghataneyante bhasavayitu. Really a great dedication is needed to get viewers attention. Good one.
Ravi