ಪೋಲಿಸ್ ಡಿಟೆಕ್ಟಿವ್ ಸೊಮರ್ಸೆಟ್ ಇನ್ನೊಂದು ವಾರದಲ್ಲಿ ನಿವೃತ್ತನಾಗಲಿದ್ದಾನೆ. ಅವನಿಗೆ ಆ ಊರು, ಆ ಕೆಲಸ ಸಾಕುಸಾಕಾಗಿಹೋಗಿದೆ. ಅವನ ಜಾಗಕ್ಕೆ ವರ್ಗಾವಣೆಯಾಗಿ ಬರುವ ಮಿಲ್ಸ್ ಅನ್ನುವ ಬಿಸಿರಕ್ತದ ಯುವಕನ ಜೊತೆ ಒಂದು ವಾರದ ಮಟ್ಟಿಗೆ ಕೆಲಸ ಮಾಡಬೇಕಾಗಿದೆ. ತದ್ವಿರುದ್ಧ ವ್ಯಕ್ತಿತ್ವದ ಇವರಿಬ್ಬರಿಗೂ ತಿಕ್ಕಾಟ ಶುರುವಾಗುತ್ತದೆ. ಅದೇ ವೇಳೆಯಲ್ಲಿ ಆ ಊರಿನಲ್ಲಿ ಒಂದು ಭೀಕರ ಕೊಲೆಯಾಗುತ್ತದೆ. ಅನುಭವೀ ಸೊಮರ್ಸೆಟ್ ಈ ಕೊಲೆ ಯಾರೋ ಆತುರದಲ್ಲಿ ಮಾಡಿದ್ದಲ್ಲ ಅಂತ ವಾದಿಸುತ್ತಾನೆ, ಆದರೆ ಮಿಲ್ಸ್ ಅವನ ಮಾತನ್ನು ಒಪ್ಪುವುದಿಲ್ಲ. ಅಷ್ಟರಲ್ಲೇ ಇನ್ನೊಂದು ಭಯಾನಕ ಕೊಲೆ ಸಂಭವಿಸುತ್ತದೆ. ಮೊದಮೊದಲಿಗೆ ಕೊಲೆಗಾರನ ಸುಳಿವೇ ಸಿಗುವುದಿಲ್ಲ, ನಂತರ ಸಿಗುವ ಸುಳಿವುಗಳು ಪೊಲೀಸರು ತನ್ನನ್ನು ಹುಡುಕಲಿ ಅನ್ನುವ ಉದ್ದೇಶದಿಂದ ಕೊಲೆಗಾರನೇ ಬಿಟ್ಟಿರುವುದು ಅಂತ ತಿಳಿಯುತ್ತದೆ. ಮಿಲ್ಸ್ ಈ ಕೊಲೆಗಾರ ಯಾವನೋ ತಲೆ ಕೆಟ್ಟವನು ಅಂತ ಮೂದಲಿಸಿದರೆ, ಸೊಮರ್ಸೆಟ್ ಈ ಕೊಲೆಗಳ ಸರಣಿ ನಿಲ್ಲುವಂಥದ್ದಲ್ಲ, ಈ ಕೇಸು ತುಂಬಾ ಜಟಿಲವಾಗುತ್ತದೆ ಅಂತ ಊಹಿಸುತ್ತಾನೆ. ಕೊಲೆಗಾರ ಆತುರದಲ್ಲಿ, ಆವೇಶದಲ್ಲಿ ಯಾವ ಕೊಲೆಗಳನ್ನೂ ಮಾಡುತ್ತಿಲ್ಲ. ಕಾದು, ಹೊಂಚುಹಾಕಿ, ಅತ್ಯಂತ ತಾಳ್ಮೆಯಿಂದ, ವ್ಯವಸ್ಥಿತವಾಗಿ ಕೊಲ್ಲುತ್ತಿರುವ ಆತನ ಹೆಸರು ಜಾನ್ ಡೋ ಅಂತ ಪತ್ತೆಯಾದರೂ, ಕೊಲೆಗಾರ ಇವರಿಗಿಂತ ಎರಡು ಹೆಜ್ಜೆ ಮುಂದಿರುತ್ತಾನೆ. ಅವನ ಪ್ಲಾನ್ ಒಟ್ಟು ಏಳು ಕೊಲೆ ಮಾಡುವುದು – ಒಂದೊಂದು “ಡೆಡ್ಲಿ ಸಿನ್” ಇರುವ ಏಳು ಜನರನ್ನು ಬರ್ಬರವಾಗಿ ಮುಗಿಸುವುದು. ಆದರೆ ಐದು ಕೊಲೆಗಳು ಬಯಲಿಗೆ ಬರುವಷ್ಟರಲ್ಲಿ ಜಾನ್ ಡೋ ತಾನಾಗಿಯೇ ಪೊಲೀಸರಿಗೆ ಶರಣಾಗುತ್ತಾನೆ. ಎಲ್ಲರಿಗೂ ಮೂಡುವ ಕೌತುಕ ಪ್ರಶ್ನೆ – ಇನ್ನೆರಡು ಕೊಲೆಗಳ ವಿಚಾರ ಏನು?
“ಸೆವೆನ್” ಚಿತ್ರ ಥ್ರಿಲ್ಲರ್ ಅಂದ ಮಾತ್ರಕ್ಕೆ ಇಲ್ಲಿ ವೇಗದ ನಿರೂಪಣೆ ಇಲ್ಲ, ಅಥವಾ ಸದಾಕಾಲ ಬೆಚ್ಚಿಬೀಳಿಸುವುದರಲ್ಲೇ ಮಗ್ನವಾಗಿರುವುದಿಲ್ಲ. ನಮ್ಮಲ್ಲಿ ಈ ಚಿತ್ರ ಉಂಟುಮಾಡುವ ಭಯ ಯಾರೋ “ಭ್ಯಾ” ಎಂದು ಹೆದರಿಸುವ ರೀತಿಯದ್ದಲ್ಲ, ಅದು ನಮ್ಮೊಳಗೇ ಸುಪ್ತವಾಗಿರುವ ಆಂತರಿಕ ಭಯಗಳನ್ನು ಬಡಿದೆಬ್ಬಿಸುವಂಥದ್ದು. ಚಿತ್ರದಲ್ಲಿನ ಪಾತ್ರಧಾರಿಗಳ ಆಯ್ಕೆ ಮತ್ತು ಅವರ ಅಭಿನಯ ಅಮೋಘ. ಸೊಮರ್ಸೆಟ್ ಆಗಿ ಮಾರ್ಗನ್ ಫ್ರೀಮನ್, ಮಿಲ್ಸ್ ಆಗಿ ಬ್ರಾಡ್ ಪಿಟ್, ಜಾನ್ ಡೋ ಆಗಿ ಕೆವಿನ್ ಸ್ಪೇಸಿ ತಮ್ಮ ವೃತ್ತಿಜೀವನ ಅತ್ಯಂತ ಶ್ರೇಷ್ಠ ಅಭಿನಯಗಳಲ್ಲೊಂದನ್ನು ನೀಡಿದ್ದಾರೆ. ಇದು ನಿರ್ದೇಶಕ ಡೇವಿಡ್ ಫಿನ್ಚೆರ್ ಅವರ ಅತ್ಯುತ್ತಮ ಚಿತ್ರವೂ ಹೌದು!
ಈ ಚಿತ್ರ ಅದ್ಭುತವಾಗಿ ಮೂಡಿಬರಲು ಅಷ್ಟೇ ಮುಖ್ಯವಾದದ್ದು ಚಿತ್ರೀಕರಿಸಿರುವ ಸ್ಥಳಗಳು ಮತ್ತು ಲೈಟಿಂಗ್! ಚಿತ್ರ ತಾನು ಹೇಳಲು ಹೊರಟಿರುವ ಕಥೆಯ ಮೂಡಿಗೆ ಬಹುಬೇಗ ನಮ್ಮನ್ನು ಕರೆದೊಯ್ಯುತ್ತದೆ. ಈ ಕಥೆ ನಡೆಯುತ್ತಿರುವ ಊರ ಹೆಸರಿನ ಪ್ರಸ್ತಾಪ ಎಲ್ಲೂ ಆಗಲ್ಲ. ಇದು ಹದಗೆಟ್ಟಿರುವ ಯಾವುದೋ ಒಂದು ಊರು ಅಷ್ಟೇ. ಇದು ಇಂದಿನ ಕಾಲವಾ, ಮುಂಬರುವ ಘೋರ ಭವಿಷ್ಯವಾ ಗೊತ್ತಾಗಲ್ಲ. ಬಹುಪಾಲು ದೃಶ್ಯಗಳಲ್ಲಿನ ಜಾಗಗಳನ್ನು ಗಮನಿಸಿ. ಕೊಳಕಾದ ರಸ್ತೆಗಳು, ಗೌವ್ವೆನುವಂಥ ಕತ್ತಲುಕತ್ತಲು ವಾತಾವರಣ, ಸೊಮರ್ಸೆಟ್ ಒಬ್ಬನೇ ವಾಸವಾಗಿರುವ ನಿರ್ಜೀವವೆನಿಸುವ ಮನೆ, ಸದಾಕಾಲ ಧೋ ಎಂದು ಸುರಿಯುತ್ತಿರುವ ಮಳೆ – ಈ ಊರು ಸರಿಯಾದ ಬಿಸಿಲು ಕಂಡು ಎಷ್ಟು ದಿನಗಳಾದವೋ ಅನ್ನುವಂಥ ನಿರಾಶಾಭಾವನೆಗೆ ನಮ್ಮನ್ನು ದೂಡುತ್ತವೆ. ಮಿಲ್ಸ್ ಮನೆ ಒಂದು ಸಬ್ವೇ ಹತ್ತಿರವಿದ್ದು ಪ್ರತೀ ಅರ್ಧ ಗಂಟೆಗೆ ಕಂಪನ ಅನುಭವಿಸುತ್ತಿರುತ್ತಾರೆ. ಪೋಲೀಸರ ಆಫೀಸಿನ ಮೇಜುಗಳ ಮೇಲಿರುವ ರಾಶಿ ರಾಶಿ ಫೈಲುಗಳು ಈ ಊರಿನಲ್ಲಿ ಹೆಚ್ಚಾಗಿರುವ ಅಪರಾಧಗಳು, ಜನರಲ್ಲಿ ನಶಿಸಿಹೋಗುತ್ತಿರುವ ನೈತಿಕತೆ ಎಲ್ಲವಕ್ಕೂ ನಿದರ್ಶನದಂತಿವೆ.
ಇಡೀ ಚಿತ್ರದಲ್ಲಿ ಬೆಳಕು ಹೆಚ್ಚಾಗಿರುವ ಸೀನುಗಳೇ ಕಡಿಮೆ. ಸೊಮರ್ಸೆಟ್ ಮಿಲ್ಸ್ ಮನೆಗೆ ಡಿನ್ನರಿಗೆ ಬರುವುದು ಅವುಗಳಲ್ಲಿ ಒಂದು. ಮಿಲ್ಸ್ ಮತ್ತು ಸೊಮರ್ಸೆಟ್ ನಡುವಿನ ಟೆನ್ಶನ್ ಕಮ್ಮಿಯಾಗುವ ಸನ್ನಿವೇಶ ಅದು. ತಮ್ಮ ಬಿಗಿಯಾದ ವ್ಯಕ್ತಿತ್ವದಿಂದ, ಈ ಕೊಲೆ ಕೇಸುಗಳ ಒತ್ತಡದಿಂದ ಹೊರಬಂದು ನಿರಾಳವಾಗಿ ನಗುತ್ತಾ ಮಾತಾಡುತ್ತಾರೆ. ಸಬ್ವೇಯ ಕಂಪನಗಳಿದ್ದರೂ, ತಿಳಿಯಾದ ವಾತಾವರಣ ಪ್ರಕಾಶಮಾನ ಅನಿಸುತ್ತದೆ. ಚಿತ್ರದ ಕಡೆಯಲ್ಲಿ ಮಾತ್ರ ನಾವು ನಿಜವಾಗಿಯೂ ಸೂರ್ಯನ ಕಿರಣಗಳನ್ನು ಕಾಣುವುದು. ಅದೂ ಪ್ರಖರವಾಗಿ. ಕತ್ತಲೆ ಮುಗಿಯಿತು, ಇನ್ನೇನು ಬೆಳಕಿನ ಆರಂಭ ಅನ್ನುವ ಸಂಕೇತ. ಆದರೆ ನಿಜಕ್ಕೂ ಸಿಗುವುದು ಬೆಳಕಾ, ಅದರ ಭ್ರಮೆಯಾ?
“ಸೆವೆನ್” ಚಿತ್ರವನ್ನು ನಮ್ಮ ದೇಶದಲ್ಲಿ ಯಥಾವತ್ತಾಗಿ ರಿಮೇಕ್ ಮಾಡಿಲ್ಲ ಅನಿಸುತ್ತದೆ. ಆದರೆ ಅದರ ನಿರೂಪಣಾ ತಂತ್ರ ಮತ್ತು ಥೀಮ್ ಇಂದ ಪ್ರೇರಿತಗೊಂಡ ಎರಡು ಚಿತ್ರಗಳು ಬಂದಿವೆ. ಮೊದಲನೆಯದು ತಮಿಳಿನ ವಿಕ್ರಮ್ ಅಭಿನಯದ “ಅನ್ನಿಯನ್”. “ಸೆವೆನ್ ಡೆಡ್ಲಿ ಸಿನ್ಸ್” ಬದಲು ಇಲ್ಲಿ “ಗರುಡ ಪುರಾಣ” ಬಳಸಿಕೊಳ್ಳಲಾಗಿದೆ. ಅನ್ನಿಯನ್ ತಮಿಳಿನಲ್ಲಿ ಮೆಚ್ಚುವ ಆರ್ಭಟ ನಟನೆಯ ಅಬ್ಬರದ ಮಸಾಲೆ ಚಿತ್ರವಾಗಿ ಹೊರಹೊಮ್ಮಿತೇ ಹೊರತು, ಸೆವೆನ್ ಚಿತ್ರದಲ್ಲಿದ್ದ ಸೂಕ್ಷ್ಮತೆಗಳು ಇದರಲ್ಲಿ ಇರಲಿಲ್ಲ. ಆ ನಿಟ್ಟಿನಲ್ಲಿ ನೋಡಿದರೆ ಹಿಂದಿಯಲ್ಲಿ ಬಂದ ಸುಶ್ಮಿತಾ ಸೇನ್ ಅಭಿನಯದ “ಸಮಯ್” ಈ ಚಿತ್ರದ ನಿಕಟ ಸಂಬಂಧಿ ಎಂದು ಹೇಳಬಹುದು. ಥ್ರಿಲ್ಲರ್ ಜೊತೆಜೊತೆಯಲ್ಲೇ ನೈಜ ಕೌಟುಂಬಿಕ ಚಿತ್ರಣ, ಅತಿರೇಕವಿಲ್ಲದ ಅಭಿನಯ, ಬೆಚ್ಚಿಬೀಳಿಸುವ ಕ್ಲೈಮಾಕ್ಸ್ ಎಲ್ಲಾ ಆ ಚಿತ್ರದಲ್ಲಿದ್ದವು. ತಮಗೆ ಸಿಗಬೇಕಾದಷ್ಟು ಮನ್ನಣೆ ಪಡೆದುಕೊಳ್ಳದ ಸಿನಿಮಾಗಳ ಸಾಲಲ್ಲಿ “ಸಮಯ್” ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
“ಸಮಯ್” ಮೊದಲ ಸಲ ನೋಡಿದ್ದಾಗ ಚಿತ್ರ ಬಹುಮಟ್ಟಿಗೆ ಇಷ್ಟವಾಗಿದ್ದರೂ ಎಂಡಿಂಗ್ ಅಷ್ಟು ಹಿಡಿಸಿರಲಿಲ್ಲ. ಸುಮಾರು ದಿನಗಳಾದ ಮೇಲೆ ಅರೆ, ಇದೇ ಚಿತ್ರದ ಜೀವಾಳ ಆಲ್ವಾ ಅಂತ ಅರಿವಾಗಿತ್ತು. “ಸೆವೆನ್” ಉಂಟುಮಾಡಿದ ಪರಿಣಾಮ ಅದಕ್ಕಿಂತಲೂ ಹೆಚ್ಚಿನದು. ಈಗಲೂ ನನಗೆ ಎತ್ತರೆತ್ತರದ ಹೈ ಟೆನ್ಶನ್ ಎಲೆಕ್ಟ್ರಿಕ್ ಟವರ್ ನೋಡಿದರೆ, ಕಿತ್ತಳೆ ಬಣ್ಣದ ಪ್ಯಾಂಟ್ ಶರ್ಟ್ ನೋಡಿದರೆ “ಜಾನ್ ಡೋ” ನೆನಪಾಗುತ್ತಾನೆ!
*****
ಇದೇ ಸ್ವಾರಸ್ಯ..!!
ಮೊನ್ನೆ ಮೊನ್ನೆ ಅದನ್ನು ಭಟ್ಟೀ ಇಳೀಸಿರುವೆ..
ನೊಡಲು ಭಾಕೀ ಇದೆ..
ನಿಮ್ಮ ಬರ್ಹ ಓದೀ ನೊಡಬೇಕೂನಿಸುತ್ತಿದೆ
ಶುಭವಾಗಲೀ
\|/
ಚಿತ್ರ ವಿಮರ್ಶೆ ಚೆನ್ನಾಗಿದೆ……