ಸುಧಾಕರ ಹಾಗು ಸ್ವಾತಿ ರಾತ್ರೋರಾತ್ರಿ ಊರು ಬಿಟ್ಟು ಹೊರಟು ಹೋದರು. ಇಬ್ಬರದು ಮೂರು ವರ್ಷಗಳ ಪ್ರೇಮ್ ಕಹಾನಿ ಆಗಿದ್ದರಿಂದ ಸೆಳತ ಹೆಚ್ಚಿಗೆಯೆ ಇತ್ತು. ಸುಧಾಕರ, ಆಟೊ ಓಡಿಸಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡುತಿದ್ದ. ಅದ್ಹೇಗೊ ಇಬ್ಬರ ನಡುವೆ ಪ್ರೇಮಾಂಕುರವಾಗಿಬಿಟ್ಟಿತ್ತು. ಸುಧಾಕರನ ತಾಯಿ ಜಲಜಮ್ಮನಿಗೆ, ಗಂಡ ತೀರಿ ಹೋದಾಗಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿತ್ತು. ಬಡತನವೊ, ಅಥವ ಮನೆಯ ಯಜಮಾನನಿಲ್ಲವೆಂಬ ಕಾರಣಕೋ, ಸುಧಾಕರನಿಗೆ ವಿದ್ಯೆ ಅಷ್ಟೊಂದು ತಲೆಗೆ ಹೋಗಲಿಲ್ಲ. ಕಾಲಕಳದಂತೆ ಓದಬೇಕೆಂಬ ಹಂಬಲವು ಕಡಿಮೆಯಾಯಿತು. ತಾಯಿಗೆ ವಯಸ್ಸಾಗುತ್ತಿದೆ ಎಂದು ಅರಿತು ಬಾಡಿಗೆ ಆಟೊ ಓಡಿಸಲು ಪ್ರಾರಂಬಿಸಿದ. ಹೀಗೆ ಒಂದೆರಡು ಭಾರಿ ಆಟೊ ಹತ್ತಿ ಕಾಲೇಜಿಗೆ ಹೋಗುವಾಗ ಪರಿಚಯಳಾದ ಸ್ವಾತಿ, ಮುಂದೆ ಅದೇ ಸ್ನೇಹ ಪ್ರೇಮಕ್ಕೆ ತಿರುಗಿ, ಸ್ವಾತಿ ಪ್ರಿಯತಮೆಯಾಗಿ ಬಡ್ತಿ ಪಡೆದಳು. ಇಬ್ಬರಿಗು ಮದುವೆಯ ಅವಸರವೇನು ಇಲ್ಲದಿದ್ದರು ಓಡಿ ಹೋಗುವಂತಹ ಪರಿಸ್ತಿತಿ ಬಂದೊದಗಿತ್ತು.
ಒಂದು ದಿನ ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ ನಾರಯಣಭಟ್ಟರು, ” ಸ್ವಾತಿ ನಾಳೆ ಪ್ರೀ ಇದ್ದಿಯಲ್ಲ?, ಇಲ್ಲದಿದ್ದರೆ ಬಿಡುವು ಮಾಡಿಕೊ. ಆ ಸೀತಾಭಟ್ಟರು, ನಿಮ್ಮ ಮಗಳನ್ನು, ನನ್ನ ಮಗನಿಗೆ ಕೊಟ್ಟು ಮದುವೆ ಮಾಡಿಬಿಡಿ, ಎಂದು ಒಂದೆ ಸಮನೆ ಅವಸರ ಮಾಡತ್ತಿದ್ದಾರೆ. ಹುಡುಗ ಒಳ್ಳೆಯವನು, ಈ ಸಂಬಂಧ ತಪ್ಪಿ ಹೋದರೆ, ಮುಂದೆ ಸಿಗುವುದು ಕಷ್ಟ. ಅದಕ್ಕೆ ಅವರನ್ನು ಬರಹೇಳಿದ್ದೇನೆ. ಬಂದು ನೋಡಿಕೊಂಡು ಹೋಗುತ್ತಾರೆ. ಅಲಂಕಾರ ಮಾಡಿಕೊಂಡು ಮನೇಲೆ ಇರು”. ಅವರ ಮಾತನ್ನು ಕೇಳಿದ ಮರುಕ್ಷಣವೆ ಸ್ವಾತಿಯ ಹೃದಯ ಒಂದು ಕ್ಷಣ ನಿಂತಂತಾಯ್ತು.
“ಅಪ್ಪಾ, ನನ್ನ ಮದುವೆಗೆ ಈಗಲೇ ಏನಿದೆ ಅವಸರ? ಅವರು ಇಲ್ಲದಿದ್ದರೆ ಮತ್ತೊಬ್ಬರು, ಹುಡುಗರ ಸಂಖ್ಯೆಗೇನು ಕಡಿಮಿಯೆ? ನಾನು ಈ ಮದುವೆಗೆ ಒಪ್ಪಲ್ಲ. ನನಗೆ ಇಷ್ಟವಿಲ್ಲ”. ಎಂದಳು ಸ್ವಾತಿ.
ಮೋದಲೆ ಕೋಪಿಷ್ಟರಾಗಿದ್ದ ಭಟ್ಟರಿಗೆ ಪಿತ್ತ ನಿತ್ತಿಗೇರಿದಂತಾಯಿತು. ಸಿಟ್ಟಿನಲ್ಲಿ ಪ್ರೀತಿಯ ಮಗಳಿಗೆ ನಾಲ್ಕು ಮಾತು ಬೈದುಬಿಟ್ಟರು. ಅಪ್ಪನ ಬೈಗುಳನ್ನು ಕೇಳಿ, ಅಳುತ್ತಾ ರೋಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟಳು. ಕೆಲಹೊತ್ತಿನ ನಂತರ, ಭಟ್ಟರಿಗೆ, ಅಯ್ಯೋ ಮಗಳಿಗೆ ಬೈದುಬಿಟ್ಟೆನಲ್ಲ, ಎಂದು ಕೊರೆಯಲಾರಂಭಿಸಿತು.
ತಾಯಿ ಪದ್ಮಾವತಿಯವರು ಎಷ್ಟೆ ಕರೆದರು ಬಾಗಿಲು ತೆರೆಯಲಿಲ್ಲ ಸ್ವಾತಿ. ರೂಮಿನೊಳಗೆ ಹೋದ ಸ್ವಾತಿ, ಅಪ್ಪನ ಮಾತಗಳನ್ನೆ ಮೆಲುಕು ಹಾಕಿದಳು. ಅವಳಪ್ಪ ಎಂಥ ಹಠಮಾರಿ ಎಂದು ಅವಳಿಗೆ ಗೊತ್ತಿತ್ತು. ಅಂದುಕೊಂಡದ್ದನ್ನು ಮಾಡದೆ ಬಿಡುವವರಲ್ಲ ಎಂದು ಮತ್ತಷ್ಟು ಚಿಂತಾಕ್ರಾಂತಳಾದಳು. ತಟ್ಟನೆ ನೆನಪಿಗೆ ಬಂದದ್ದು ಸುಧಾಕರ, ಅಳುತ್ತಲೆ ಅವನಿಗೆ ಎಲ್ಲವನ್ನು ವಿವರಿಸಿದಳು. ಅವನು ” ಹೆದರಬೇಡ, ನಾನಿದ್ದೀನಿ ನಿನ್ನ ಜೊತೆ. ನನಗೆ ಸ್ವಲ್ಪ ಟೈಮ್ ಕೊಡು, ಯೋಚನೆ ಮಾಡಿ ಹೇಳುತ್ತೇನೆ” ಎಂದ. ಸ್ವಾತಿಗೆ ಸ್ವಲ್ಪ ಧರ್ಯ ಬಂದಂತಾಯಿತು. ಅವನ ಕರೆಗೆ ಕಾಯುತ್ತ ಕುಳಿತಳು. ನೂರೆಂಟು ಯೋಚನೆಗಳ ಸರಮಾಲೆ. ಸುಮ್ಮನೆ ಕೊರಲಾಗಲಿಲ್ಲ. ಹೆದರಿಕೆ,ದುಃಖ, ಸಂಕಟ ಎಲ್ಲವು ಒಟ್ಟಿಗೆ ಆಗುತ್ತಿದೆ. ಮೊಬೈಲಿನೆಡೆಗೆ ನೋಡುತ್ತಾ ಕುಳಿತಿದ್ದಳು, ತಟ್ಟನೆ ಸುಧಾಕರನೆ ಕರೆ ಬಂತು. ಸಮಾದಾನವಾಯ್ತು. ಫೋನಿನಿಂದ ಸುಧಾಕರನ ತತ್ಪರ ಧ್ವನಿ ಹೊರಹೊಮ್ಮಿತು.
“ಹಲೋ ಸ್ವಾತಿ, ಈಗ ನಾನು ಹೇಳಿದ ಹಾಗೆ ಮಾಡು, ನಿನ್ನ ಬಟ್ಟೆ-ಬರೆಯನ್ನೆಲ್ಲ ಪ್ಯಾಕ್ ಮಾಡಿಕೊ, ಈ ಊರು ಬಿಟ್ಟು ಹೋಗಿಬಿಡೋಣ”. ಅವನ ಮಾತನ್ನು ಕೇಳಿ ಸ್ವಾತಿಯ ಕೈಕಾಲುಗಳು ನಡುಗಲಾರಂಭಿಸಿದವು. “ಏಯ್, ಎನ್ ಹೇಳ್ತಾ ಇದಿಯಾ? ಎಲ್ಲರನ್ನ ಬಿಟ್ಟು ಹೋಗೋದು ಅಂದ್ರೆ ಹೇಗೆ, ನನ್ನ ಕೈಲಿ ಆಗಲ್ಲ”. ಎಂದು ಬಿಕ್ಕಿ ಬಿಕ್ಕಿ ಅತ್ತಳು. ಸುಧಾಕರ ಅವಳನ್ನು ಸಮಾಧಾನ ಮಾಡಿ,”ನಿನ್ನ ಅಪ್ಪ ಎಂಥ ಹಠಮಾರಿ ಅಂತ ನಿನಗೆ ಗೊತ್ತು. ಈಗ ನಾವು ಓಡಿ ಹೋಗದಿದ್ದರೆ ನಮ್ಮಿಬ್ಬರನ್ನು ದೂರ ಮಾಡಿಬಿಡುತ್ತಾರೆ. ಇದೊಂದೆ ನಮ್ಮ ಮುಂದೆ ಇರೊ ದಾರಿ”. ಅವನ ಮಾತು ಹೌದೆನಿಸಿ. ” ಆಯ್ತು ಬರ್ತೀನಿ”. ಎಂದಳು. ಸಧಾಕರ, ಅವಳಿಗೆ ಹನ್ನೆರಡು ಗಂಟೆಗೆ ಸರಿಯಾಗಿ ಮನೆಯಿಂದ ಸ್ವಲ್ಪ ದೂರದಲ್ಲಿರೊ ದೇವಸ್ತಾನಕ್ಕೆ ಬರಲು ಹೇಳಿ ಫೋನ್ ಕಟ್ ಮಾಡಿದ.
ಹನ್ನೆರಡು ಗಂಟೆಯಾಯಿತು. ಸ್ವಾತಿ ಎದೆಬಡಿತ ಜೋರಾಗುತ್ತಲೆ ಇತ್ತು. ಒಂದು ಕ್ಷಣ ಅಪ್ಪ-ಅಮ್ಮನ ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತಳು. ಹೃದಯವನ್ನು ಕಲ್ಲು ಮಾಡಿಕೊಂಡು, ಮನೆಯ ಬಾಗಿಲನ್ನು ನಿಧಾನವಾಗಿ ತೆರೆದು, ಇನ್ನು ಮುಂದೆ ಈ ಬಾಗಿಲು ತನ್ನ ಪಾಲಿಗೆ ಮುಚ್ಚಿದಂತೆ ಎಂದುಕೊಂಡು ಗೊರಟೇಬಿಟ್ಟಳು. ಕೊನೆಗೂ ಸುಧಾಕರನ ಸೆಳತಕ್ಕೆ ವಶವಾಗಿಯೇ ಬಿಟ್ಟಳು.
-ಕಿರಣ್. ವ್ಹಿ, ಧಾರವಾಡ