ಹೆಣ್ಣಿನ ವಿವಿಧ ರೂಪಗಳನ್ನು ನಾವು ಕಾಣಬಹುದು. ಅದರಲ್ಲಿ ತಾಯಿಗೆ ಮೊದಲ ಸ್ಥಾನ . ಕಾರಣ ಅವಳೇ ಜನನಿ. ಹಡೆದವ್ವ. ಅವಳು ಒಂದು ಮಗುವನ್ನು ಹೆತ್ತು ಈ ಜಗತ್ತಿಗೆ ಪರಿಚಯಿಸಿದರೆ ಮಾತ್ರವೇ ನಾವು ಲೋಕ ನೋಡಬಹುದು. ನಂತರ ಅಕ್ಕ, ತಂಗಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಮಡದಿ, ಮಗಳು, ಗೆಳತಿ. ಆದರೆ ಹೆಣ್ಣನ್ನು ಪ್ರತಿಯೊಬ್ಬರೂ ತಾಯಿಯಾಗಿ ನೋಡುತ್ತಾರೆಯೇ? ತಮ್ಮ ಮನೆಯ ಅಕ್ಕನೋ ಇಲ್ಲವೇ ತಂಗಿಯಂತೆ ಸ್ವೀಕರಿಸುತ್ತಾರೆಯೇ? ಅವಳಿಗೆ ಗೌರವದ ಸ್ಥಾನ ನೀಡಲಾಗುತ್ತಿದೆಯೇ? ಮೋಹ, ಮೋಸ, ಕಾಮ, ಕಾಸಿನ ವ್ಯಾಮೋಹ, ತೀರದ ದಾಯ, ಬಯಕೆಗಳ ದಾಸರ ನಡುವೆ, ವಿಧಿಯಾಟದ ಇಕ್ಕಳದಡಿಯಲ್ಲಿ ಸಿಲುಕುವ ಹೆಣ್ಜೀವಗಳು ಎಷ್ಟಿಲ್ಲ ಹೇಳಿ??
ಹೆಣ್ಣು ಸೃಷ್ಟಿ. ಖಂಡಿತಾ. ಸಾಂಪ್ರದಾಯಿಕವಾಗಿ ಸಂಸ್ಕಾರ ಬದ್ಧವಾಗಿ ಮದುವೆಯಾಗಿ ಮಗುವನ್ನು ಹಡೆದರೆ ಎಲ್ಲರಿಗೂ ಆನಂದವಾಗುತ್ತದೆ. ಎಲ್ಲರೂ ತಾಯಿ ಮಗುವನ್ನು ನೋಡಿ ಮಾತನಾಡಿಸಲು ಬರುತ್ತಾರೆ. ಅದೊಂದು ಅನುಭೂತಿ. ಅನುಭವಿಸಿಯೇ ಪಡೆಯಬೇಕು. ಬಾಣಂತಿಯ ಆರೈಕೆ ಹೇಗಿರಬೇಕು? ಏನೆಲ್ಲ ತಿನ್ನಬೇಕು ಎಂದು ಸಲಹೆ ನೀಡುತ್ತಾರೆ. ಕರಿಕಾಳುಮೆಣಸಿನ ಕಷಾಯ, ಓಮದ ಸಾರು ಮಾಡಿ ಊಟ ಬಡಿಸುತ್ತಾರೆ. ಬಿಸಿಬಿಸಿ ಎಣ್ಣೆ ಸ್ನಾನ ಮಾಡಿಸಿ ಬಿಸಿ ಬಿಸಿ ಕಾಫಿ ಕುಡಿದು ಬೆಚ್ಚಗಿನ ರಗ್ಗು ಹೊದ್ದುಕೊಂಡು ಮಲಗಲು ಹೇಳುತ್ತಾರೆ. ಹಾಗೆಯೇ ಮಗುವಿಗೆ ಹೇಗೆ ಹಾಲೂಡಿಸಬೇಕು? ಅದರ ಆರೈಕೆ ಹೇಗೆ ಮಾಡಬೇಕು. ರಾತ್ರಿ ಪದೇ ಪದೇ ಏಳುವಾಗ ಉಚ್ಚೆ-ಕಕ್ಕ ಮಾಡಿಕೊಂಡು ಅಳುವಾಗ ತಾಳ್ಮೆಗೆಡದೆ ತನ್ನ ಸುಖ ನಿದಿರೆಗೆ ಭಂಗವಾಗುತ್ತಿದೆ ಎಂದು ಯೋಚಿಸದೇ ಹೆತ್ತ ತಾಯಿ ಜೊತೆಗೆ ಅಮ್ಮಮ್ಮ ( ಹಡೆದವಳ ತಾಯಿ ) ರಾತ್ರಿಯಲ್ಲಿ ನಡುನಡುವೆ ಎದ್ದು ಮಗುವಿನ ಆರೈಕೆಯಲ್ಲಿ ತೊಡಗಿರುತ್ತಾರೆ. ಬಾಣಂತಿಯ ಕೋಣೆ ಅದೊಂದು ಪುಟ್ಟ ಪ್ರಪಂಚ ಎಷ್ಟು ಸುಂದರವಲ್ಲವೇ.
ಅದೇ ಕಾಳಜಿ ತೋರಿಸುವ, ಹೊಗಳುವ ಹುಡುಗನನ್ನು ಪ್ರೀತಿಸಿ, ಅವನೇ ಸರ್ವಸ್ವ ಎಂದು ಭಾವಿಸಿ ಅವನಿಗಾಗಿ ಎಲ್ಲವನ್ನೂ ಕೊಡಲು ಹಿಂದು ಮುಂದು ಯೋಚಿಸದೇ ಇರುವ ಹೆಣ್ಮಕ್ಕಳು ಒಂದು ದಿನ ಗರ್ಭಿಣಿ ಎಂದು ಅರಿತಾಗ ಆಕಾಶ ಕಳಚಿ ಬಿದ್ದವರಂತೆ ಕುಳಿತುಬಿಡುತ್ತಾರೆ. ದಿಗ್ಭ್ರಮೆಗೊಳಗಾಗುತ್ತಾರೆ. ಆಗ ಜೊತೆಯಲ್ಲಿ ನಿಂತು “ಈ ಪಿಂಡವ ತೆಗೆಸು ಎಂದು” ಸಲಹೆ ನೀಡುವವನು ಅದೇ ಪ್ರಿಯತಮ. ಆಗ ಅವಳಿಗೆ “ಅದೇ ಸರಿ” ಎಂದೆನಿಸಿ ವೈದ್ಯರು ಕೇಳಿದಷ್ಟು ಹಣ ನೀಡಿ ಪಾಪದ ಮೇಲೆ ಇನ್ನೊಂದು ಪಾಪದ ಕೃತ್ಯವನ್ನು ಎಸಗಿ ಬಿಡುತ್ತಾಳೆ. ಜಗತ್ತೇ ನೋಡದ ಭ್ರೂಣವೊಂದು ಕರಗಿಹೋಗುತ್ತದೆ. ಲಬ್ ಡಬ್ ಎಂದು ಎದೆಬಡಿತದಿಂದ ತನ್ನ ಅಸ್ತಿತ್ವ ಕಾಣಲು ಹೊರಟ ಭ್ರೂಣವೊಂದು ರಕ್ತದುಂಡೆಯಾಗಿ ನೀರಿನಲ್ಲಿ ತೊಳೆದುಹೋಗುತ್ತದೆ. ಮುಂದಿನ ಪರಿಣಾಮ ಅರಿವಾಗುವುದೇ ಇಲ್ಲ. ಇವಳೆಂತಹ ಸೃಷ್ಟಿ. ನೀವೇ ಯೋಚಿಸಿ.
ಸರ್ಕಾರ “ಭ್ರೂಣ ಪತ್ತೆ ಶಿಕ್ಷಾರ್ಹ ಅಪರಾಧ” ಎಂಬ ಕಾನೂನು ಜಾರಿಗೆ ಮಾಡಿದರೂ ದೇಶದ ಕೆಲವು ಭಾಗಗಳಲ್ಲಿ ಹೆಣ್ಣುಭ್ರೂಣ ಪತ್ತೆ ಮಾಡಿ ಅದನ್ನು ಹತ್ಯೆ ಮಾಡಲು ವೈದ್ಯರಿಗೆ ಹಣ ಕೊಡುವ ಜನರು ಇನ್ನೂ ನಮ್ಮ ನಡುವೆಯೇ ಇದ್ದಾರೆ. ಅಲ್ಲೊಂದು ಸೃಷ್ಟಿಯ ಕೊಲೆ ಸದ್ದಿಲ್ಲದೇ ನಡೆದಿರುತ್ತದೆ. ಬಿಳಿಕೋಟು ಧರಿಸಿದ ವೈದ್ಯರ ಬಟ್ಟೆ ಮೇಲೆ ಹೆಣ್ಣು ಭ್ರೂಣದ ಹತ್ಯೆಯ ರಕ್ತದ ಕಲೆಗಳು ಅಚ್ಚಾಗಿ ಹೋಗುತ್ತವೆ. ಏನೂ ನಡೆದಿಲ್ಲವೆಂಬಂತೆ ಒರೆಸಿಕೊಂಡು , ಸ್ವಲ್ಪವೂ ಪಾಪ ಪ್ರಜ್ಞೆಯಿಲ್ಲದೇ ಮೈಕೊಡವಿಕೊಂಡು ಹಣವನ್ನು ಜೇಬಿಗಿಳಿಸಿಕೊಳ್ಳುತ್ತಾರೆ. “ಗಂಡು ಮಕ್ಕಳಿಲ್ಲ, ಹಡೆದ ಕೊನೆಯದೂ ಹೆಣ್ಣಾಯ್ತಲ್ಲ, ನಮ್ಮ ಆಸ್ತಿಗೆ ವಾರೀಸುದಾರನಿಲ್ಲದಂತಾಗುತ್ತದೆ. ಅಯ್ಯೋ ನನಗೆ ಸತ್ತರೆ ಮೋಕ್ಷ ಕೊಡಿಸಲು ಗಂಡು ಮಗನಿಲ್ಲವೇ. ಶವಕ್ಕೆ ಅಗ್ನಿ ಸ್ಪರ್ಶ ಮಾಡಲು ಪುತ್ರರತ್ನನಿಲ್ಲವೇ..??” ಎಂದೆಲ್ಲ ಯೋಚಿಸಿ ಹೆಣ್ಣು ಹೆತ್ತ ಹೆಂಡತಿಯನ್ನೇ ಸಾಯಿಸುವ ನೀಚ ಮನಸ್ಸಿನ ಗಂಡ ಮತ್ತು ಆತನ ಮನೆಯವರು ನಮ್ಮ ನಡುವೆಯೇ ಇದ್ದಾರೆ. ಸೃಷ್ಟಿಯ ಮೇಲಾಗುವ ದೌರ್ಜನ್ಯ ,ಹಿಂಸೆ ,ಕೊಲೆ ಸರಿಯೇ? ನೀವೇ ಯೋಚಿಸಿ.
ಮೋಸದ ಜಾಲಕ್ಕೆ ಸಿಲುಕಿ ಜಾರಿಣಿಯಾಗಿ ಕತ್ತಲಾ ಕೋಣಿಯಲ್ಲಿ ತನಗಿಷ್ಟವಿಲ್ಲದಿದ್ದರೂ ಮೈಮಾರಿಕೊಂಡು ಅವರು ಕೊಡುವ ಚಿತ್ರ ವಿಚಿತ್ರ ಹಿಂಸೆಗೆ ಕಾಮುಕನ ಸಿಗರೇಟಿನ ಕಿಡಿಗೆ ಅಲ್ಲಲ್ಲಿ ಮೈಸುಟ್ಟು ಕೊಂಡು ನೋವು ತಿನ್ನಲಾಗದೇ ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುವ ಹೆಣ್ಮಕ್ಕಳೂ ಇದ್ದಾರೆ. ಅದೇ ರೀತಿ ಹಣಕ್ಕಾಗಿಯೇ ಮೈಮಾರಿಕೊಂಡು ಬಡತನದ ಬೇಗೆಯನ್ನು ನೀಗಿಸಲು ಹೊರಡುವವರಿದ್ದಾರೆ. ಯಾವಾಗಲೋ ತಪ್ಪು ಎಂದೆನಿಸಿ ಆ ವೃತ್ತಿಯನ್ನು ಬಿಟ್ಟು ಉದ್ಯೋಗ ಹುಡುಕಲು ಹೋದರೂ ಅಲ್ಲಿಯೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಧೈರ್ಯದಿಂದ ಎದುರಿಸಲು ಶಕ್ತಳಾಗದೇ, ಅಲ್ಲಿನ ಜನರ ಅವ್ಯಾಚ ಶಬ್ಧಗಳಿಗೆ ಎದೆ ಒಡೆದುಕೊಂಡು ಎಲ್ಲವನ್ನೂ ಅನುಭವಿಸಿ ಮನ ನೊಂದುಕೊಂಡು ಮತ್ತೆ ಅದೇ ವೃತ್ತಿಗೆ ಕತ್ತಲಾ ಕೋಣೆಗೆ ಸೇರುವ ಹೆಣ್ಮಕ್ಕಳಿದ್ದಾರೆ. ಇಲ್ಲ ಈ ಪ್ರಪ.ಮಚದ ಕ್ರೂರ ಜನರು ಬದುಕಲು ಬಿಡುತ್ತಿಲ್ಲವಲ್ಲ ಎಂದು ಮನನೊಂದು ಸಾಯುವವರೂ ಇದ್ದಾರೆ. ಕರುಣಾಜನಕ ಸೃಷ್ಟಿಯ ಇನ್ನೊಂದು ರೂಪ. ಕಾಮುಕರ ಕೈಗೆ ಸಿಲುಕುವ ಹೆಣ್ಣು ಕರ್ಕಾಟಕದ ಕೈಗೆ ಸಿಲುಕಿದಂತೆ.
ಹೆಣ್ಣು ಸೃಷ್ಟಿ, ಹೆಣ್ಣು ಪ್ರಕೃತಿ ಎಂದು ಈ ಸುಂದರ ಪ್ರಕೃತಿಗೆ ಹೋಲಿಸಿದ್ದಾರೆ ಹಿರಿಯರು. ಪ್ರಕೃತಿಯ ಒಡಲನ್ನೇ ಅಗೆದು ಮಾರುವ ಭೂಮಾಫಿಯಾ, ಕಾಡು ಕಡಿಯುವುದರಿಂದ ಆಗುವ ಮರಗಳ ಮಾರಣ ಹೋಮ, ಅದರ ಪ್ರತಿಫಲವೇ ಪ್ರಕೃತಿವಿಕೋಪ, ಅನಾವೃಷ್ಠಿ ಇಲ್ಲವೇ ಅತಿಯಾಗಿ ಮಳೆ ಸುರಿಯುವುದು. ನೆರೆ, ಸಿಡಿಲು, ಗುಡುಗು, ಬಿರುಗಾಳಿ, ಚಂಡಮಾರುತ ತ್ಸುನಾಮಿ ಅಂತಹ ರಕ್ಕಸ ಅಲೆಗಳ ಅಬ್ಬರ ಜನರ ಮರಣ ಮೃದಂಗ ರುದ್ರತಾಂಡವ ನರ್ತನ.ಮುಗಿಲು ಮುಟ್ಟುವ ಆಕ್ರಂದನ.
ನೀವು ಗಮನಿಸಿ ಸ್ನೇಹಿತರೇ, ಪ್ರಕೃತಿ ಮಾತೆಯು ಸಹ ಒಂದು ಹಂತದ ತನಕ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಆದರೆ ಅಸಾಧ್ಯ ಎಂದೆನಿಸಿದಾಗ ಒಮ್ಮೆ ಮೈ ಕೊಡವಿ ಎದ್ದರೂ ಮನುಜನ ವಿನಾಶ ಕಟ್ಟಿಟ್ಟಬುತ್ತಿ. ಹಾಗೆಯೇ ಹೆಣ್ಣು ಕೂಡ. ಅತಿಯಾದ ಸಹನೆ ನಮ್ಮ ಅಸ್ತಿತ್ವಕ್ಕೆ ದಕ್ಕೆ ತರುತ್ತದೆ. ಸಹಿಸಲಾಗದಿದ್ದಾಗ ಸಿಡಿದೇಳಲೇಬೇಕು. ಧೈರ್ಯವಾಗಿರಬೇಕು. ಮೋಹ-ಮೋಸದ ಜಾಲಕ್ಕೆ ಸಿಲುಕಬಾರದು. ಮೈಯೆಲ್ಲ ಕಣ್ಣಾಗಿರಿಸಿಕೊಂಡಿರಬೇಕು. ಎಚ್ಚರಿಕೆಯಿಂದ ಇರಬೇಕು. ಗಂಡು ಮಾತ್ರವೇ ಸರ್ವಸ್ವ ಎನ್ನುವವರಿಗೂ ತಕ್ಕ ಉತ್ತರ ಕೊಡಬೇಕು.
–ಸಿಂಧು ಭಾರ್ಗವ್. ಬೆಂಗಳೂರು
ಧನ್ಯವಾದಗಳು💐 ಸರ್. ಎಲ್ಲರೂ ಓದಬೇಕಾಗಿ ಕೋರಿಕೆ