ಅದೊಂದು ದಿನ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿತ್ತು, ಹೋಗಿ ನೋಡುವಾಸೆ! ಏಕೆಂದರೆ ಕಬ್ಬು ಬಿತ್ತನೆಯ ಸಮಯದಲಿ ಖುಷಿಯಿಂದಲೇ ನಾನೊಂದಷ್ಟು ನಾಟಿ ಮಾಡಿದ್ದೆ. ಅದೇ ಪ್ರತಿ ದಿನದ ಕಾಯಕವಾದರೆ ಅದು ಈ ಮಟ್ಟದ ಖುಷಿ ಕೊಡಲಾರದು. ಆಗೊಮ್ಮೆ – ಈಗೊಮ್ಮೆ ಜಮೀನಿನ ಮುಖ ನೋಡಿ ಬರುವ ನಮ್ಮನ್ನು ಮರೆತು, ಉಳುವವರೇ ವಾರಸುದಾರರೆಂದು ಜಮೀನು ಎಲ್ಲಿ ತಪ್ಪು ತಿಳಿದೀತೆಂದು ಭಾವಿಸಿ ಅದರ ನಿಜವಾದ ವಾರಸುದಾರರು ನಾವೆಂದು ನೆನಪು ಮಾಡುವ ಸಲುವಾಗಿ ಹೋಗುವ ನಮ್ಮಂಥ ಮಧ್ಯಮವರ್ಗದ ಜನಗಳಿಗೆ ನಿತ್ಯದ ಕಾಯಕವಾಗಿ ಜಮೀನಿಗೆ ಹೋಗಲಾಗದು, ವರ್ಷಕ್ಕೊಮ್ಮೆ ಹೋಗದೆ ಇರಲೂ ಆಗದು. ಹಾಗಾಗಿ ಆ ಒಂದು ದಿನ ಜಮೀನಿನ ಬಳಿ ನಾನೂ ಹೋದೆ, ನಾ ನೆಟ್ಟ ಕೆಲ ಕಬ್ಬಿನ ಬಿತ್ತನೆಯಿಂದಲೇ ಇಡೀ ಫಸಲು ಚೆಂದವಾಗಿ ಬೆಳೆಯಲು ಕಾರಣವೆಂಬಂತೆ ಬೀಗಿ ನಡೆಯಲು ಮುಂದಾದ ನನ್ನ ನಡೆ ನನಗೇ ಒಳಗೊಳಗೇ ನಗು. ಆದರೂ ಖುಷಿ. ಪ್ರತೀ ಮನುಜನಲ್ಲೊಂದು ಮಗುವಿನ ಮನ ನೆಲೆ ನಿಂತಿರುತ್ತದೆ. ಅದು ಜೀವಂತಿಕೆಯ ಕುರುಹೂ ಹೌದು. ಹಾಗಾಗಿ ಆ ಸಹಜ ಪ್ರಕ್ರಿಯೆಗೆ ಮನದಲೇ ಆನಂದಿಸಿದ್ದೂ ಉಂಟು.
ಆ ಕಟಾವಿನ ಕೆಲಸ ಒಂದೇ ದಿನದಲ್ಲಿ ಮುಗಿಯುವಂತದ್ದಲ್ಲ, ಅದಕ್ಕೆ ಕೆಲ ದಿನಗಳೇ ಹಿಡಿಯುತ್ತವೆ. ಹಾಗಾಗಿ ನಡು-ನಡುವೆ ಹೋಗುವುದೂ ಬರುವುದೂ ನಡೆಯುತ್ತಿತ್ತು. ಆ ಜಮೀನಿನ ನೀರು ಹರಿವ ಜಾಗದ ತೆವರಿನಲ್ಲಿ ಕೂತು ನೀರಲ್ಲಿ ಕಾಲು ಇಳಿಬಿಟ್ಟು, ಜಮೀನಿನಲ್ಲಿ ಕಳೆ ನಾಶವಾಗಲೆಂದು ಆಗಾಗ ಸಿಂಪಡಿಸಿದ ಔಷಧಿಯಿಂದಲೂ ಜೀವವ ಕಾಪಿಟ್ಟುಕೊಂಡು ಬದುಕುಳಿದ ಪುಟಾಣಿ ಮೀನುಗಳ ಬಾಯಿಗೆ ನಮ್ಮ ಕಾಲುಗಳ ಆಹಾರವಾಗಿ ಕೊಟ್ಟು, ನಾ ತಂದ ಊಟವ ಸವಿಯಲು ಕುಳಿತಾಗ ಊಟದ ರುಚಿಯೇ ಹೆಚ್ಚಾಯಿತೆನ್ನಿ. ಕಾರಣ ಜಾಗದ ಮಹತ್ವವಲ್ಲದೇ ಬೇರೇನು! ಕಾಲಲಿ ಮೀನುಗಳ ಮೆದುವಾದ ಪುಳಕ ನೀಡುವ ಸ್ಪರ್ಶ, ಭೂ ಸ್ಪರ್ಶದಿಂದಲೇ ಪ್ರಸಾದದ ರುಚಿ ತಾಗಿ ಮನೆಯಲಿ ಸಿಗದ ಅದೆಂಥದೋ ಹೇಳಿ ಸುಖಿಸಲಾಗದ ರುಚಿ ಬೆರೆತ ಊಟದ ಸವಿ. ತಿಂದು ತೇಗಿದರೂ ಹಸಿವೆಯ ಮಹಾಪೂರ ಆವರಿಸಿ ಸಾಕೆಂಬ ಮಾತು ಅಲ್ಲಿಯವರೆಗೆ ಕಿವಿಯ ಮೇಲೆ ಬಿದ್ದ ಮತ್ತು ಬಾಯಿಂದ ಪಠಿಸಿದ ನೆನಪೇ ಇಲ್ಲದಂತೆ ತಿಂದಾಯಿತು, ಮೇಲೆದ್ದ ಮೇಲೆಯೇ ಉದರದ ಭಾರಕ್ಕೆ ತಂದ ಮತ್ತು ತಿಂದ ಪ್ರಮಾಣದ ಅರಿವಾಗಿದ್ದೆನ್ನಿ. ಹೀಗೆ ಪ್ರಮಾಣದ ಅರಿವಿಲ್ಲದೇ ತಿಂದದ್ದು ಇದೇನು ಮೊದಲಲ್ಲ, ಗೆಳತಿಯ ಮನೆಗೆ ನಾನು, ನನ್ನ ಮನೆಗೆ ಗೆಳತಿ ಪಾಳಿಯ ಮೇಲೆ ಹೋದಾಗ ಮಾಡಿದ್ದ ಅನ್ನ ಮುಗಿಯಿತು ಎಂದಾಗಲೇ ನಾವು ಜಪಿಸುತ್ತಿದ್ದುದು ಊಟ ಸಾಕೆಂದು. ಆ ನೆನಪೇ ಮಧುರ. ಡಯಟ್-ಲಿಮಿಟ್, ಕ್ಯಾಲೋರಿ ಮತ್ತು ಅದರ ಬರ್ನಿಂಗ್ ಈ ಯಾವ ಪಾರಿಭಾಷಿಕ ಪದಗಳ ಅರಿವೇ ಇಲ್ಲದೇ ತಿಂದುಂಡ, ಆ ಕಾರಣದಿಂದಲೇ ದುಂಡು- ದುಂಡಾದ ಕಾಲವಾದ ಕಾಲವದು.
ಸುತ್ತಲೂ ಸುತ್ತಿ ನಾ ನಾಟಿ ಮಾಡಿದ್ದ ಜಾಗದ ಕಬ್ಬನ್ನೇ ಪಡೆದು ಅದನ್ನು ನಾಟಿ ಮಾಡಿದ ಕಾರಣವೊಂದರಿಂದಲೇ ಅಷ್ಟುದ್ದ ಬೆಳೆದು ಮೈ ತುಂಬಾ ಸಿಹಿ ತುಂಬಿದ್ದರೂ ಬಾಗಿದ್ದ ಕಬ್ಬಿನಿಂದಲೂ ಬುದ್ಧಿ ಕಲಿಯದ ನಾನೆಂಬ ‘ನಾನು’ ನಾಟಿ ಮಾಡಿ, ಕಳೆ ಕಿತ್ತು, ನೀರು ಪೂರೈಸಿ, ಪೋಷಿಸಿ, ಗೊಬ್ಬರವೇ ಮೊದಲಾದ ಸವಲತ್ತುಗಳ ನೀಡಿ ತಾಯಿಯೇ ಆಗಿ ಪೋಷಿಸಿದವಳಂತೆ ಸಾಕು ತಾಯಿಯರೆಂಬ ಕೆಲಸದವರಿಂದಲೇ ಬೆಳೆದ ಕಬ್ಬನ್ನು ತಿಂದು, ತಿನಿಸಲು ತಂದು, ಬೀಗುತ್ತಲೇ ಇದ್ದೆ ನಾ ಬೆಳೆದದ್ದು ಎಂದು, ಹೀಗೆ ಕಬ್ಬು ಕಟಾವು ಪೂರ್ಣಗೊಳ್ಳುವವರೆಗೂ ಈ ಎಲ್ಲವೂ ಸಾಗುತ್ತಲೇ ಇತ್ತು.
ಈ ನಡುವೆ ಆಗಾಗ ಜಮೀನಿನ ಬಳಿ ಬಂದು ಹೋಗುವ ಖುಷಿಯಲ್ಲಿದ್ದ ನನಗೆ ಕಬ್ಬು ಕಟಾವು ಮಾಡಲು ಬಂದ ಗುಂಪು ಆಂಧ್ರದಿಂದ ಬಂದಿರುವುದಾಗಿ, ಅವರ ಕೆಲಸ ಕಬ್ಬು ಕಟಾವಿನ ಆರು ತಿಂಗಳು ಹೀಗೇ ಜಮೀನಿನ ಮೇಲೆ ಗುಳೇ ಹೋಗುತ್ತಾರೆಂಬುದು ತಿಳಿಯಿತು. ಇಡೀ ಕುಟುಂಬವೇ ಜೊತೆಯಾಗಿ ದುಡಿಯುವ ಅವರ ಜೀವನಶೈಲಿಯೇ ಬಹು ವಿಭಿನ್ನ. ನಾಲ್ಕೈದು ಪಾತ್ರೆ, ರೊಟ್ಟಿ ಸುಡಲು ಕಬ್ಬಿಣದ ಹೆಂಚು, ನೀರು ತುಂಬಿಡಲು ಉದ್ದ ಕತ್ತಿನ ಕೊಡ, ಒಂದೆರಡು ಜೊತೆ ಬಟ್ಟೆ, ಶೆಡ್ಡು ಮಾಡಿಕೊಳ್ಳಲು ಪ್ಲಾಸ್ಟಿಕ್, ಕಬ್ಬು ಕತ್ತರಿಸಲು ಬಹು ದೊಡ್ಡ ಬಾಯಿಯ ಆಯುಧ ಇಷ್ಟೇ ಇವರ ಆಸ್ತಿ. ಈ ಆಸ್ತಿಯನ್ನು ಕಟಾವು ಮಾಡುವ ಜಮೀನಿನ ಆಜುಬಾಜಿನಲ್ಲೇ ಸಮತಟ್ಟಾದ ನೆಲವನ್ನು ಆಯ್ಕೆ ಮಾಡಿಕೊಂಡು ತಾತ್ಕಾಲಿಕವಾಗಿ ಹಾಕಿದ ಗುಡಿಸಲಿನಲ್ಲಿಟ್ಟು ಈ ಜಮೀನಿನ ಕಟಾವಿನ ಕೆಲಸ ಮುಗಿಯುತ್ತಿದ್ದಂತೇ ಬೇರೆ ಜಮೀನಿನಲ್ಲಿ ಮತ್ತೆ ತಮ್ಮ ಮನದ ಮನೆಯ ನಿರ್ಮಾಣ.
ಅವರು ಬೆಂಕಿಯ ಕಾವಿಗೆ ಗುಡಿಸಲು ಸುಡುವುದರಿಂದ ಆ ಗುಡಿಸಲಿನಲ್ಲೆ ಅಡುಗೆ ಮಾಡುವುದಿಲ್ಲ. ಗುಡಿಸಲು ನಿಂತು ಪ್ರವೇಶ ಮಾಡುವಂತಿರುವುದಿಲ್ಲ, ಬದಲಿಗೆ ಬಗ್ಗಿ-ಕುಗ್ಗಿ ಒಳ ಹೋಗಬೇಕಾಗುತ್ತದೆ. ಆ ತುಸುವಷ್ಟೇ ಎತ್ತರದ ಗುಡಿಸಲು ಮಲಗಲು ಮಾತ್ರವೇ ಅವಕಾಶವೀಯುತ್ತದೆ. ಅಡುಗೆಯೇನಿದ್ದರೂ ಹೊರಗೆ ಮೂರು ಕಲ್ಲುಗಳ ಜೋಡಿಸಿ, ಆಯ್ದು ತಂದ ಪುಳ್ಳೆಗಳಿಂದ ಒಲೆ ಹೊತ್ತಿಸಿದ ಆ ಹೆಣ್ಣುಮಕ್ಕಳು ನಿಜವಾಗಿಯೂ ಗಾಳಿಯ ರಭಸಕ್ಕೆ ತೂರುವ ಬೆಂಕಿಯ ಬಂಧಿಸಿ ಹಸಿ-ಒಣ ಸೌದೆಗಳ ಹೊತ್ತಿಸಿ ಮಸಿ ಮೂತಿಯ ಸೀತೆಯರಂತೆಯೇ ಕಂಗೊಳಿಸುವ ಮಾತೆಯರು. ಆ ಮಾತೆಯರ ಮುಖದಲಿ ಅದೆಂತಹ ಮಂದಹಾಸ! ಅಡುಗೆಯ ಮಾಡುವ ಮತ್ತು ಆಡುವ ಮಕ್ಕಳ ಅಲ್ಲಿಯೇ ಆಡಲು ಬಿಟ್ಟು, ಕಾಡುವ ಕೂಸನೂ ಅಲ್ಲಿಯೇ ಮಲಗಿಸಿ ಪ್ರಕೃತಿಯ ಕೂಸಾದ ನಮಗೆ ಕಾವಲು ಪ್ರಕೃತಿಯೇ ಎಂದು ನಂಬಿ ಆ ಪ್ರಕೃತಿಯ ಮಡಿಲಲಿ ಮಕ್ಕಳನಿಟ್ಟು ಕಬ್ಬು ಕತ್ತರಿಸಿ ರಾಶಿ ಹಾಕುತ್ತಿರುವ ಗಂಡನಿಗೆ ಕಬ್ಬು ಕಂತೆ ಕಟ್ಟುವ ಮೂಲಕ ನೆರವಾಗಲು ಧಾವಿಸುವ ಆ ಮಾತೆಯರ ಆತ್ಮವಿಶ್ವಾಸಕೆ ಶರಣೆನ್ನದೇ ಇರಲಾಗದು.
ಜೋರುಮಾತಿನ ನಡುವೆ ಕೆಲಸದಲ್ಲಿ ತಲ್ಲೀನರಾದ ಅವರ ಖುಷಿಯ ಮತ್ತು ವೇಗದ ಕೆಲಸ ದಂಗು ಬಡಿಯುವಂತೆ ಮಾಡಿತು. ಮಕ್ಕಳು ಅಲ್ಲಿಯೇ ಆಡುತ್ತಿದ್ದರು, ಮೂರ್ನಾಲ್ಕು ಕುಟುಂಬಗಳು ಜೊತೆಯಾಗೇ ಇರುವಾಗ ಅವರ ಮಕ್ಕಳೆಲ್ಲಾ ಕೂಡಿ ಆಡುತ್ತಿವೆ, ಆದರೆ ಕಾಡುವ ಕೈಗೂಸು ಕಾಣಲಿಲ್ಲ. ನನಗೇ ಗಾಬರಿಯಾಗಿ ಕೇಳಿದೆ ಕೂಸು ಎಲ್ಲಿ? ಎಂದು. ಅವರಲ್ಲಿ ಒಬ್ಬಾಕೆ ಕೈ ತೋರುತ್ತಲೇ ಹೇಳಿದಳು ಮರದ ಕೆಳಗೆ ಮಲಗಿದೆ ಎಂದು. ನಾನತ್ತ ನೋಡಿದೆ ಗಾಬರಿಯಾಯ್ತು ಸುಮ್ಮನೇ ದಡಬಡನೆ ತೆವರ ಮೇಲೆ ಓಡಿದೆ. ಕಾರಣ ಬಡಕಲಾದರೂ ದೊಡ್ಡ ಹಲ್ಲುಗಳ ತೋರುತ್ತಾ ಆಕಳಿಸುತ್ತಲೇ ನಿಧಾನಗತಿಯ ಹೆಜ್ಜೆಯಿಡುತ್ತಿದ್ದ ಕರಿಯ ನಾಯಿಯ ಕಂಡು.
ಆಕಸ್ಮಿಕವಾಗಿ ಕಚ್ಚಿದರೆ ಪಾಪ ಇವರಿರುವ ಈ ಸ್ಥಿತಿಯಲ್ಲಿ ಆಸ್ಪತ್ರೆ, ಹದಿನಾಲ್ಕು ಇಂಜೆಕ್ಷನ್……. ಹೀಗೆ ತಲೆಯಲಿ ನೂರು ಮಾತುಗಳು ಗುನುಗುತ್ತಿದ್ದವು, ನಾನು ಹೋಗುವ ಮೊದಲೇ ಆ ಕರಿಯ ನಾಯಿ ಮಗುವಿಗೆ ಬಾಯಿ ಹಾಕಿದರೆ ಎಂದುಕೊಳ್ಳುತ್ತಾ ಚೈ, ಚೈ ಎನ್ನುತ್ತಲೇ ಓಡುತ್ತಾ ಆ ನಾಲ್ಕು ತಾಯಿಯರ ಗುಂಪಿನ ಕಡೆ ನೋಟವ ಹೊರಳಿಸುತ್ತಲೇ ದಾಪುಗಾಲಿಡುತ್ತಿದ್ದೆ. ಆದರೆ ನಗುಮೊಗದ ಜೋರು-ಜೋರು ಮಾತುಗಳಲೇ ಕೆಲಸದಲಿ ತಲ್ಲೀನರಾದ ಅವರ ನೋಟ ನನ್ನೆಡೆಗೆ ಒಮ್ಮೆಯೂ ಹೊರಳಲಿಲ್ಲ. ಆದರೆ ನಾನು ಸೋತೆ ನಾ ಹೋಗುವ ಮೊದಲೇ ನಾಯಿ ಆ ಮಗುವ ತಲುಪಿ ಆಗಿತ್ತು. ಗಾಬರಿಗೊಂಡೆ ಆದರೆ ಆ ನಾಯಿ ಮಗುವನೊಮ್ಮೆ ಮೂಸಿ ಮಗುವಿನ ಹೊಟ್ಟೆಯ ಬಳಿಯೇ ತಲೆಯನಿಟ್ಟು ಮಲಗಿತು. ಜೋರಾಗಿ ಉಸಿರು ಬಿಟ್ಟೆ, ಹಿಂತಿರುಗಿ ನೋಡಿದೆ! ನಮ್ಮ ಗದ್ದೆಯ ಕುಶಲೋಪರಿಯ ವಾರಸುದಾರ ನಗುತ್ತಾ ಹೇಳಿದರು ಮಗಾ ಅದು ಅವರ ಸಾಕು ನಾಯಿ ಎಂದು.!
ಮಗು ಬಹುಶಃ ಏಳೆಂಟು ತಿಂಗಳಿರಬಹುದು, ಕಬ್ಬಿನ ಗದ್ದೆಯ ನಡುವಿದ್ದ ಮರದ ಬುಡದಲಿ ಮಲಗಿಸಿ ಆಕಾಶ- ಭೂತಾಯಿಯರನೇ ಕಾವಲಿಗಿರಿಸಿ ಹೋದ ಆ ತಾಯಿಯ ನಂಬಿಕೆ ಉಳಿಸಲೆಂಬಂತೆ ಆ ನಾಯಿ ಕಾವಲಾಯಿತು ಎಂದೆನಿಸಿತು. ಮಗುವಿಗೆ ಎಳೆ ಬಿಸಿಲ ತೋರಿಸಿ ಕೆಲ ಕ್ಷಣಗಳಲೇ ಜೋಪಾನವಾಗಿ ಒಳ ಮನೆಯಲಿ ಮಲಗಿಸಿ, ಕಾಲ-ಕಾಲಕ್ಕೆ ತಾಯಿಗೆ ಪೌಷ್ಟಿಕ ಆಹಾರವ ನೀಡಿ ಆ ಮುಖೇನ ಮಗುವ ಪುಷ್ಟಿಗೊಳಿಸುವ ಕಾಯಕದಲಿ ನಿರತವಾದ ಇಡೀ ಕುಟುಂಬ, ಹೊಲಿಗೆ ಒತ್ತಿ ಮಗುವ ಚರ್ಮ ಎಲ್ಲಿ ಬಾಡುವುದೆಂದು ಕಾಳಜಿ ಮಾಡಿದುದ ನಾ ಬಲ್ಲೆ, ಅಂತೆಯೇ ಮಗುವಿನ ತುಟಿ ಕಪ್ಪಾಗಬಾರದೆಂದು ಹಾಲುಣಿಸಿದ ಮರುಕ್ಷಣವೇ ಕೆಂಪುಬಟ್ಟೆಯಲೇ ತುಟಿಯ ಒರೆಸಿ, ಜೊತೆಗೆ ಪಕ್ಕದ ಮನೆಯ ಕಾಂಪೌಂಡಿನಲ್ಲಿ ಬೆಳೆದ ದಾಳಿಂಬೆಯ ಹೂಗಳ ಕಿತ್ತು ಅದರ ರಸವ ಮಗುವಿನ ತುಟಿಗೆ ಹಚ್ಚಿ ಮಗುವಿನ ತುಟಿಯ ಕೆಂಪು ಎಂದೂ ಮಾಸದೆಂದು ಖುಷಿ ಪಟ್ಟು ದೃಷ್ಟಿ ಆಗಬಾರದೆಂದು ಮಗುವ ಕಾಳಜಿ ಮಾಡಿ ನಿಧಿಯಂತೆ ಬಚ್ಚಿಟ್ಟಿದ್ದೂ ಉಂಟು. ಸೊಳ್ಳೆ ಕಚ್ಚಿ ಗಂದೆಯಾದ ದಿನ ಕಚ್ಚಿದ ಸೊಳ್ಳೆಗಳಿಗೆ ಬೈಗುಳಗಳಿಂದಲೇ ಕಚ್ಚಿದ್ದುಂಟು. ಮಗು ಅತ್ತಿದ್ದಕ್ಕೆ ಮಗುವನ್ನು ನೋಡಿ ಹೋದವರ ಕಣ್ ದೃಷ್ಟಿ ಸರಿಯಿಲ್ಲವೆಂದು ಶಪಿಸಿದ್ದೂ ಉಂಟು. ಮೈ ಹೊಳಪಿನಿಂದ ಕಂಗೊಳಿಸಲೆಂದು ಎಣ್ಣೆ ಹಚ್ಚಿದ್ದೂ ಹಚ್ಚಿದ್ದೆ, ಹಲವು ನಮೂನೆಯ ಕಂಪೆನಿ ಬ್ರಾಂಡುಗಳ ಬೆನ್ನೇರಿ ಮಗುವಿನ ಪಾಲನೆ ಮಾಡಿದ್ದೂ ಮಾಡಿದ್ದೇ. ಆದರೆ ಇದಾವ ಗೋಜಿಗೂ ಹೋಗದೆ, ತಲೆ ಕೆಡಿಸಿಕೊಳ್ಳದೆ ನಿರಾತಂಕವಾಗಿ ಮಗುವಿಗೆ ಅತ್ಯಗತ್ಯವಾಗಿ ಬೇಕಾದ ಎದೆಹಾಲನುಣಿಸಿ ಮುದ್ದಾದ ಮಗುವಿಗೆ ಪ್ರೀತಿಯ ಧಾರೆಯಾಗಿ ಸಿಹಿಮುತ್ತನಿಟ್ಟು ತನ್ನ ಕಾಯಕದಲಿ ನಿರತಳಾದ ಆಕೆ ಪ್ರಪಂಚದ ಜಾಹಿರಾತುಗಳ ಗೋಜಿಗೆ ನಮ್ಮಂತೆ ಎಂದೂ ತಲೆ ಕೆಡಿಸಿಕೊಂಡವಳಲ್ಲ.
ಅವರ ಸಹಜ ಜೀವನವೇ ನಮಗೆ ವಿಸ್ಮಯದ ಆಗರವಾಗಿತ್ತೆಂಬುದು ಸತ್ಯ. ಮನೆಗೆ ಹೋದ ಬಹುಕಾಲ ಅವರ ಜೀವನ ನನ್ನ ಮನ ಕಲಕಿದ್ದುಂಟು. ನಾ ಕೊಡುವ ಊಟ, ಅವರ ಮಕ್ಕಳಿಗೆ ಕೊಡುವ ತಿಂಡಿ-ತಿನಿಸು ಆ ದಿನದ ಹಸಿವ ನೀಗಿಸುತ್ತಿತ್ತೇ ಹೊರತು ಜೀವನ ನೀಗಬೇಕಾದವರು ಅವರೇ ಎಂಬುದು ಸತ್ಯ. ಈ ನಡುವೆ ಮನ ಮಿಡಿಯಿತು ಜೀವನಪೂರ್ತಿ ಸಲಹಲಾಗದು, ಹಾಗಂತ ಪಂಚವಾರ್ಷಿಕ ಯೋಜನೆಯೂ ನನ್ನಿಂದಾಗದು. ಕಡೆಯ ಪಕ್ಷ ನನ್ನ ಕಣ್ಣೆದುರು ಇರುವವರೆಗೆ ಖುಷಿಯಾಗಿಡುವ ಕೆಲದಿನಗಳ ಯೋಜನೆ ಹಾಕಿಕೊಂಡ ನಾನು ಪ್ರತಿನಿತ್ಯ ಹೋಗುವ, ಹೋಗಲಾಗದಿದ್ದಾಗ ತಲಪಿಸಬೇಕಾದ ಪರಿಕರಗಳ ತಲಪಿಸುವ ಕಾಯಕದಲಿ ನಿರತಳಾದೆ. ಅದೇ ಆ ಮಕ್ಕಳಿಗೆ ಸಾಂತಾಕ್ಲಾಸ್ ಧರೆಗಿಳಿದು ಬಂದು ಬೇಕಾದ್ದನ್ನೆಲ್ಲಾ ನೀಡಿದನೆಂಬ ತೃಪ್ತಭಾವ ಆ ಎಳೆಯ ಕಂಗಳಲಿ. ಆ ಹೊಳೆವ ಒಂದಿಷ್ಟೂ ಕಲ್ಮಶದ ನೆರಳು ಸೋಂಕದ ಆ ಎಳೆಯ ಮನಗಳ ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಯಾರಿಗಾದರೂ ಹಾಗೆಯೇ ಅನಿಸುವುದು ಸಹಜ.
ಅದೊಂದು ದಿನ ಸಂಜೆ ಜಮೀನಿನ ಬಳಿ ಹೋಗುತ್ತಿರುವಾಗ ನಮ್ಮ ಜಮೀನಿನ ಕೊಂಚ ದೂರದಲೇ ಉದ್ದಕ್ಕೂ ಭುವಿಯ ಅಗೆದು ಗರ್ಭಕ್ಕೆ ಬಣ್ಣ-ಬಣ್ಣದ ಪ್ಲಾಸ್ಟಿಕ್ ಪೈಪುಗಳೆಂಬ ಕರುಳುಗಳ ಒಳಸೇರಿಸಿ ಮತ್ತೆ ಮುಚ್ಚುವ ಕಾಯಕದಲಿ ನಿರತರಾದ ಕುಟುಂಬ ಕಾಣಿಸಿತು. ಇಬ್ಬರು ಬೆತ್ತದಂತೆ ಒಣಕಲು ದೇಹದ ಪುರುಷರು ಭುವಿಯ ಅಗೆದು ಮಣ್ಣುತುಂಬಿ ಅದನ್ನು ತಮ್ಮ ಶ್ರೀಮತಿಯರ ಕೈಗಿತ್ತರೆ ಅವರು ಅದನ್ನು ಪಡೆದು ಹೊರಹಾಕುವ ಕಾಯಕದಲಿ ನಿರತ. ಅಷ್ಟು ಆಳಕ್ಕೆ ಇಳಿದಿದ್ದರು. ಆ ಪುರುಷರು ಬೇಕಾದಷ್ಟು ಅಗೆದ ನಂತರ ಮತ್ತೆ ಮುಂದಿನ ಭಾಗಕ್ಕೆ ಅಗೆಯಲು ಬರುವರು. ಆಗ ಮಣ್ಣು ಎತ್ತಿ ಸುರಿಯುವ ಕಾಯಕ ಇರದು. ಕಾರಣ ಅವರು ಅಗೆಯುತ್ತಿರುವ ಭುವಿ ಆಳದಲ್ಲಲ್ಲ ಹಾಗಾಗಿ ಅವರ ಪತಿಯರ ಜೊತೆಗೂಡಿ ಆ ಹೆಣ್ಣುಮಕ್ಕಳು ತಾವೂ ಮೇಲ್ಪದರ ಅಗೆಯಲು ತೊಡಗುವರು. ಅರೆಕ್ಷಣ ವ್ಯರ್ಥಗೊಳಿಸದ ಅವರ ಕಾಯಕನಿಷ್ಠೆ ಎಲ್ಲರಿಗೂ ಮಾದರಿ. ಅವರ ಜೊತೆಗೆ ವಯಸ್ಸಾದ ತಂದೆ ತಾಯಿಯರೂ ಇರುವರು. ಅವರು ಒಂದಷ್ಟು ನಿಧಾನಗತಿಯ ಕಾಯಕದಲಿ ನಿರತರಾಗಿರುವರು. ಅವರಿಗೂ ಗೊತ್ತು ಸುಮ್ಮನಿರುವುದಕಿಂತ ಏನಾದರೂ ಮಾಡುವುದು ಲೇಸು ಎಂದು. ಅಲ್ಲಿ ಅಜ್ಜಿ ಕುಳಿತಿದ್ದರು ತಾತ ತಾನೂ ಅಗೆಯುವ ಕಾಯಕದಲೇ ನಿರತ, ತಿರುತಿರುಗಿ ನೋಡಿದೆ. ಅಜ್ಜಿ ಮಡಿಲಲಿ ಏನೋ ನೋಡುತ್ತಿದ್ದರು. ಬಹುಶಃ ಸೊಪ್ಪು ಬಿಡಿಸುತಿರಬೇಕೆಂದು ಮನೆಯ ಕಡೆ ದೃಷ್ಟಿ ಇರಿಸಿದೆ.
ಮರುದಿನ ಕಾರಣಾಂತರಗಳಿಂದ ಆ ಕುಟುಂಬಗಳನ್ನು ನೋಡಲಾಗಲಿಲ್ಲ. ನಂತರದ ದಿನ ಜಮೀನಿನ ಬಳಿ ಬರುವ ವೇಳೆಗೆ ಭೂಮಿಯ ಅಗೆವ ಕಾಯಕದ ಮಂದಿ ನಮ್ಮ ಜಮೀನಿನ ಬಳಿಯೇ ಬಂದು ಅಗೆಯುತ್ತಿದ್ದರು. ಕಬ್ಬು ಕಟಾವು ಮಾಡುವ ಕೆಲಸ ನಾಳೆ ಕೊನೆಯಾಗುವುದಿತ್ತು. ಹಾಗಾಗಿ ಆ ದಿನ ಅವರ ಮಕ್ಕಳಿಗೊಂದಿಷ್ಟು ತಿನಿಸು ಕೊಟ್ಟು ಆ ಕುಟುಂಬಗಳ ಬೇಡಿಕೆಯಂತೆ ಒಂದೆರಡು ಕೋಳಿಗಳನ್ನು ಕೊಟ್ಟು ಬಂದೆವು. ಬರುವ ನಡುವೆ ಅಗೆಯುತ್ತಿದ್ದ ಕುಟುಂಬದ ಅಜ್ಜಿಯ ಮಡಿಲಲ್ಲಿ ಮಗು ಮಲಗಿದಾಗ ಆ ಮಗುವ ಬೇಲಿಯ ಬಳಿ ಹೊಂಗೆಯ ಮರದ ರೆಂಬೆಗೆ ಸೀರೆಯಲಿ ಜೋಕಾಲಿ ಮಾಡಿ ತೂಗಿ ಹಾಕಿದ ಅಜ್ಜಿ ತಾನೂ ಕೆಲಸಕ್ಕೆ ಮುಂದಾದಳು ಆಗಲೇ ತಿಳಿದದ್ದು, ನಿನ್ನೆ ಆಕೆಯ ಮಡಿಲಲ್ಲಿದ್ದದ್ದು ಸೊಪ್ಪಲ್ಲ ಬದಲಿಗೆ ಅಷ್ಟೇ ಮೃದುವಾದ ಮಗು ಎಂದು..
ಅವರಿಗೂ ಊಟ ಹಾಕಿದ್ದರೆ ಚೆಂದವಿತ್ತೆಂದು ಮನದಲೇ ಮರುಗುತ್ತಿದ್ದ ನನಗೆ ಜಮೀನಿನ ಕುಶಲೋಪರಿಯ ಒಡೆಯ ಹೇಳಿದ ಮಗಾ ಕಬ್ಬು ಕಡಿಯೋ ಆಳುಗಳೂ, ಭೂಮಿ ಅಗೆಯೋ ಆಳುಗಳೂ ಕೂಡಿ ಊಟ ಮಾಡುತ್ತಿದ್ದರು ಎಂದಾಗ ತೃಪ್ತಭಾವ ನನ್ನ ಅಣು ಅಣುವನ್ನೂ ಆವರಿಸಿತು. ಜೊತೆಗೆ ಹಂಚಿ ತಿನ್ನುವ ಅವರ ಗುಣವೂ ಮೆಚ್ಚಾಯಿತು. ಆದರೆ ಕಡೆಯ ದಿನ ಅವರನ್ನು ನೋಡಲಾಗಲಿಲ್ಲ ಆದರೂ ಇದ್ದಷ್ಟು ದಿನ ನನ್ನ ಮನ ಒಪ್ಪುವಂತೆ ನೋಡಿಕೊಂಡಿದ್ದರ ಬಗ್ಗೆ ತೃಪ್ತಿ ಇತ್ತು. ಒಂದೆರಡು ದಿನ ಬಿಟ್ಟು ಖಾಲಿ ಜಮೀನಿನ ಬಳಿ ಹೋದ ನನಗೆ ಆ ಮಕ್ಕಳ ಆಟದ ದನಿ ಮತ್ತು ಆ ಕುಟುಂಬಗಳ ಜೋರು ಮಾತು ಕೇಳದೇ ಖಾಲಿ ಖಾಲಿ ಎನಿಸಿತು. ಜಮೀನಿನ ಕುಶಲೋಪರಿಯ ವಾರಸುದಾರನಿಗೆ ನನ್ನ ಮನದ ಬೇಸರವ ಹೇಳುತ್ತಲೇ ಭೂಮಿ ಅಗೆಯುತ್ತಿದ್ದವರು ಕಣ್ಣಿಗೂ ಕಾಣದಷ್ಟು ದೂರ ಹೋಗಿದ್ದರು. ಅವರೆಲ್ಲಿ? ಎಂದು ಕೇಳಿದೆ ಆತ ಅವರು ಆಗಲೇ ಬಹಳ ಮುಂದೆ ಹೋದರೆಂದೂ ಅವರ ಎರಡು ತಿಂಗಳ ಮಗು ಸತ್ತುಹೋಯಿತೆಂದೂ ಇಲ್ಲೇ ಹೂತರೆಂದು ನಮ್ಮ ಜಮೀನಿನ ಬಲಮೂಲೆಯ ತುದಿಯ ಜಾಗವ ತೋರಿದ! ಅವರು ಪ್ಲಾಸ್ಟಿಕ್ ಪೈಪು ಹೂಳಲು ತೆಗೆದ ಗುಂಡಿಯ ಪಕ್ಕದಲೇ ಮತ್ತೊಂದು ಗುಂಡಿಯ ತೆಗೆದು ಹೂತಿದ್ದರು. ಆ ಭೂಮಿ ಮತ್ತೆ ಗರ್ಭ ಧರಿಸಿದಂತೆ ಕೊಟ್ಟೆಯಲಿ ಮಗುವ ತುಂಬಿಕೊಂಡಿದ್ದುದು ಉಬ್ಬಿದ ಭುವಿಯ ಮಡಿಲಲೇ ಕಾಣುತ್ತಿತ್ತು. ನಾನೇ ಜೋಪಾನ ಮಾಡುವುದಾಗಿ ಭುವಿ ಆ ಮಗುವ ದತ್ತು ಪಡೆದು ತನ್ನ ಗರ್ಭದಲಿರಿಸಿಕೊಂಡಳೋ ಎನಿಸಿತು.
ಗೋರಿ, ಮಹಲುಗಳ ಒಂದು ದಿನವೂ ಕಾಣದೇ ಆಲ್ಲೇ ಹೂತಿಟ್ಟು ತಾನು ಮುಂದೆ ಮುಂದೆ ಹೋದ ತಾಯಿಯ ಮನದ ಬೇಗುದಿ ಇಂದಿಗೂ ಕಾಡುತಿದೆ. ಅಜ್ಜಿಯ ಮಡಿಲಲ್ಲಿದ್ದದ್ದು ಸೊಪ್ಪು ಎಂಬ ಭಾವವೇ ಉಳಿದಿದ್ದರೆ ಎಷ್ಟು ಚೆಂದವಿತ್ತು ಎನಿಸುತ್ತಿದೆ.
‘ಆಡಿ ಬಾ ನನ ಕಂದ ಅಂಗಾಲ ತೊಳೆದೇನು, ತೆಂಗೀನಕಾಯಿ ಎಳನೀರ ತಕ್ಕೊಂಡು ನಿನ ಬಂಗಾರ ಮೋರೆ ತೊಳೆದೇನು’ ಎಂದು ಜನಪದ ತಾಯೊಬ್ಬಳು ಹೇಳಿದ್ದು ನನ್ನ ಕಿವಿಯಲಿನ್ನೂ ಗುಂಯ್ ಗುಡುತಲಿದೆ. ‘ಕೂಸು ಇದ್ದ ಮನಿಗೆ ಬೀಸಣಿಗೆ ಯಾತಾಕೆ? ಕೂಸು ಕಂದಯ್ಯ ಒಳ ಹೊರಗ ಆಡಿದರೆ ಬೀಸಣಿಗೆ ಗಾಳಿ ಸುಳಿದಾವ’ ಎಂಬ ಜನಪದ ತ್ರಿಪದಿಯೂ ನೆನಪಾಗಿ ಕಾಡುತ್ತದೆ. ‘ಬೀದಿ ಮಕ್ಕಳು ಬೆಳದೊ; ಕೋಣೆ ಮಕ್ಕಳು ಕೊಳೆತೊ’ ಎಂಬ ಜನಪದ ಗಾದೆ ನನ್ನ ಎದೆಗೆ ಈಟಿಯಂತೆ ತಾಗಿ ಹಿಂಸೆ ನೀಡುತ್ತದೆ. ಇದೊಂದು ಕಟು ವ್ಯಂಗ್ಯವಾಗಿ ನನ್ನ ಅನುಭವಕ್ಕೆ ಉತ್ತರಿಸಲಾಗದ ಪ್ರಶ್ನೆಯಾಗಿ ಕರುಳನ್ನು ಕಿವುಚುತ್ತದೆ. ಬಡತನ ಮತ್ತು ದಾರಿದ್ರ್ಯಗಳಿಂದಾಗಿ ಯಾವ ಸುಮಧುರ ಭಾವವನ್ನಾಗಲೀ ಸುಕುಮಾರ ಸುಂದರತೆಯನ್ನಾಗಲೀ ವ್ಯಕ್ತಪಡಿಸಲೂ ಅವಕಾಶವೀಯದ ಸಂಕೀರ್ಣತೆ ನಮ್ಮ ಈ ಬದುಕಿನಲ್ಲಿದೆ. ಉಳ್ಳವರಿಗೆ ಸ್ವರ್ಗ ; ಇಲ್ಲದವರಿಗೆ ನರಕ ಎಂಬುದು ಎಂದಿಗೂ ತ್ರಿಕಾಲ ಸತ್ಯವೆಂಬುದು ಅರಿವಾಗಿ ಮನಸ್ಸು ಚಡಪಡಿಸುತ್ತದೆ. ಅದಕ್ಕೇ ಇರಬೇಕು: ಈ ಜಗತ್ತಿನ ಎಲ್ಲರಿಗೂ ಮೈ ಮುಚ್ಚುವಷ್ಟು ಬಟ್ಟೆ ಲಭಿಸುವ ತನಕ ನಾನೂ ಅರೆಬೆತ್ತಲೆಯಾಗಿಯೇ ಇರುವೆ ಎಂಬ ಕಠೋರವ್ರತವನ್ನು ಮಹಾತ್ಮ ಕೈಗೊಂಡು ಕೊನೆವರೆಗೆ ಆಚರಿಸಿದ್ದು!
-ಸುಂದರಿ. ಡಿ
ಸೂಗಸಾದ ಬರಹ..