ಆಫೀಸಿನ ಗಾಜಿನಾಚೆ ಕಾಣುತ್ತಿದ್ದ ಸಂಜೆಯ ಬಣ್ಣದೋಕುಳಿ ಖುಷಿಯ ಬದಲು ಜಿಗುಪ್ಸೆ ಹುಟ್ಟಿಸಿತ್ತವನಿಗೆ. ಎಷ್ಟು ದಿನವೆಂದು ಹೀಗೆ ಹೊತ್ತುಗೊತ್ತಿಲ್ಲದಂತೆ ಗೇಯುವುದು ? ಒಂದು ದಿನವಾದರೂ ಹೊತ್ತಿಗೆ ಸರಿಯಾಗಿ ಮನೆ ತಲುಪಬೇಕೆಂಬ ಕನಸು ಕನಸಾಗೇ ಉಳಿದುದನ್ನು ಪ್ರತಿದಿನದ ಸೂರ್ಯಾಸ್ತ ಚುಚ್ಚಿ ಚುಚ್ಚಿ ನೆನಪಿಸಿದಂತನಿಸುತ್ತಿತ್ತು ಅವನಿಗೆ. ಕೆಂಪು, ಕೇಸರಿ, ಅರಿಷಿಣಗಳ ಬಣ್ಣ ಹೊದ್ದ ಮೋಡಗಳು ಒಂದೆಡೆ ಇರಲಾರದೇ ಮದುವೆ ಮನೆಯ ಸುಂದರಿಯರಂತೆ ಅತ್ತಿತ್ತ ಓಡಾಡುತ್ತಿದ್ದರೆ ಬೀಸುತ್ತಿದ್ದ ತಂಗಾಳಿ ಅಲ್ಲೇ ನಿಂತಿದ್ದ ಹೆಣ್ಣೊಬ್ಬಳ ಕೂದಲೊಂದಿಗೆ ಆಟವಾಡುತ್ತಿತ್ತು. ಮೋಡಗಳ ಮೆರವಣಿಗೆಯಿಂದ ಕೊಂಚ ಕೆಳಗೆ ಕತ್ತು ಹಾಯಿಸಿದವನಿಗೆ ದೂರದೂರದವರೆಗೂ ಹಲವಾಕಾರಾದ ಕಟ್ಟಡಗಳೇ ಕಂಡವು. ಕೆಳಗಿನಿಂದ ನೋಡುವವನಿಗೆ ಮುಗಿಲೆತ್ತರದ ಕಟ್ಟಡ ಎನಿಸಿದರೂ ಅಂತಹ ಎಷ್ಟೋ ಕಟ್ಟಡಗಳು ನೀಲಾಗಾಸದ ಛಾಯೆಯಡಿ ಕುಬ್ಜ. ತನ್ನ ಕಷ್ಟಗಳು ಹಾಗೇ ಅಲ್ಲವೇ ? ಹುಡುಕಿದರೆ ಹುಲ್ಲುಹಾಸಲ್ಲಿ ಕಳೆದ ಉಂಗುರವೂ ಸಿಗುತ್ತದಂತೆ. ಇನ್ನು ನನ್ನ ಕಷ್ಟಕ್ಕೆ ಪರಿಹಾರ ಸಿಗದೇನು ಎಂದನಿಸಿ ಹೊರಟನಾತ.
ಮೋಡಗಳೂ ನನ್ನಂತೆ ಪ್ರಿಯನ ಬರುವಿಕೆಗಾಗಿ ಸಿಂಗಾರಗೊಂಡಿರಬಹುದಾ ಎಂಬ ಆಲೋಚನೆ ಬಾರದ ಇನಿಯನ ಕಾದ ಪ್ರಿಯೆಯ ಮನದಲ್ಲಿ. ಮನೆಗೆ ಹೊರಡೋ ಗಡಿಬಿಡಿಯಲ್ಲಿದ್ದ ಮೇಕಪ್ ಮ್ಯಾನ್ ಸೂರ್ಯನನ್ನು ನಮಗೆ ಅಲಂಕಾರ ಮಾಡೇ ಹೋಗೆಂದು ಗೋಗರೆದ ಹೆಂಗಳೆಯರಿಗೆ ಕಾಟಾಚಾರಕ್ಕೆ ಬಣ್ಣ ಬಳಿದು ಸಾಗಬಹುದಿತ್ತಲ್ಲಾ ಅವನು ?ಅವನ ಮನೆಯಲ್ಲಿ ಕಾಯುತ್ತಿದ್ದ ಜೀವಗಳ ನೆನಪಾಗಿ ಎಳೆಯುತ್ತಿದ್ದ ಕಾಲುಗಳನ್ನೂ, ಮಿಡಿಯುತ್ತಿದ್ದ ಹೃದಯವನ್ನೂ ಕಟ್ಟಿಹಾಕಿದ್ದ ವೃತ್ತಿಯೆಂಬ ಹೊಟ್ಟೆಪಾಡಿನ ಬಗ್ಗೆ ಮರುಕವುಕ್ಕಿತ್ತವಳಿಗೆ. ಪೇಲವದ ಬಿಳಿಗೆಲ್ಲ ಹೊಳೆವ ಬಂಗಾರದ ಲೇಪ ಕೊಟ್ಟ ಸೂರ್ಯನ ಕೈಚಳಕ ನೋಡುವುದೇ ಒಂದು ಖುಷಿ. ತಿಳಿ ಗುಲಾಬಿ ಬಣ್ಣದ ವಸ್ತ್ರ ತೊಟ್ಟ ಅವರಿಗಿಂತ ತಾನೂ ಏನೂ ಕಮ್ಮಿಯಿಲ್ಲವೆಂಬಂತೆ ಕೆಂಪಂಗಿ ತೊಟ್ಟ ಮುಗಿಲ ಸಾರಥಿಯ ನೋಡಿ ಇನ್ನೂ ಬಾರದ ತನ್ನಿನಿಯನ ನೆನಪು ಹೆಚ್ಚಾಯಿತವಳಿಗೆ. ಬರುವನೋ ಇಲ್ಲವೋ ಪ್ರಿಯ ಎಂಬ ಬೇಸರದಿಂದ ಕಣ್ಣಂಚಲ್ಲಿ ಮೂಡಿದ್ದ ನೀರಿನಲ್ಲಿ ಬಿದ್ದ ಬಿಂಬದ ಪ್ರತಿಫಲನದಂತೆ ಬಾನಲ್ಲೊಂದು ಬಣ್ಣದ ಹಾದಿ. ಮನೆಗೆ ಹೊರಟ ಸೂರ್ಯ ಮೋಡದ ಪರದೆ ಸರಿಸಿ ಏನೋ ಹೇಳಲು ಬಂದಿದ್ದು ಇವಳಿಗೇನಾ ? ಕಣ್ಣಂಚಿನ ನೀರು ಮೊಗದ ಬಣ್ಣವ ಅಳಿಸೋ ಮೊದಲೇ ಕರ್ಚೀಫಿನಲ್ಲಿ ಸೆರೆಹಿಡಿದ ಸುಂದರಿ ಆಗ ತಾನೇ ಮೂಡಿದ ಮಂದಹಾಸದೊಂದಿಗೆ ಮುಂದಡಿಯಿಟ್ಟಳು.
ಸೂರ್ಯಾಸ್ತವೆನ್ನೋದು ದಿನದ ಕೊನೆಯಲ್ಲ, ಸಂತಸದ ಆರಂಭವಷ್ಟೇ. ಗೂಡಿಗೆ ಮರಳೋ ಖುಷಿಯಲ್ಲಿ ಹಲವಾಕಾರದಲ್ಲಿ ಹಾರೋ ಹಕ್ಕಿಗಳ ಕಂಡಾಗ ಯಾವ ಬಂಧಕ್ಕೂ ಒಳಗಾಗದೇ ಮುನ್ನಡೆಯೋ ಸ್ಪೂರ್ತಿ ತುಂಬಿದ ಅವ ನೆನಪಾದ. ಬಂಧವೆಂದರೆ ಸಂಬಂಧಗಳ ಸಂಕೋಲೆಯಲ್ಲ. ಕಷ್ಟಗಳಲ್ಲಿ ಕಂಗೆಡದೆ, ಖುಷಿಯಲ್ಲಿ ಮರಹತ್ತದೇ ಆ ಭಾವಗಳ ಬಂಧನದಲ್ಲಿ ಬಂದಿಯಾಗದೇ ನಿರ್ಲಿಪ್ತನಾಗಿ ಮುನ್ನಡೆಯೋ ಪಾಟವದು. ತಾನಾಗದಿದ್ದುದು ನೀನಾದರೂ ಆಗೆಂಬ ಆಸೆಯಲ್ಲಿ ಪ್ರತಿಯೊಂದಕ್ಕೂ ಬೆನ್ನುತಟ್ಟುತ್ತಿದ್ದ ಅವಳು ನೆನಪಾದಳು. ಕಷ್ಟವೆಂಬುದು ಇದ್ದುದೇ ಬಾಳಲ್ಲಿ. ಕಷ್ಟಕ್ಕಂಜಿ ಮತ್ಯಾಕೆ ಕಷ್ಟಪಡುತ್ತಿ , ಆರಾಮಾಗಿದ್ದುಬಿಡೋ ಎನ್ನುತ್ತಿದ್ದ ಅವ. ಪ್ರಯತ್ನಿಸಿದ ಹೊರತು ತಟ್ಟೆಯಲ್ಲಿನ ಹೊತ್ತಿನ ತುತ್ತೂ ಹೊಟ್ಟೆ ತಲುಪದು ಮಗನೇ , ಸೋಲುವುದು ಸೋಲಲ್ಲ, ಸೋಲಿಗಂಜಿ ಪ್ರಯತ್ನಿಸದಿರುವುದೇ ಸೋಲೆಂದು ಪ್ರೋತ್ಸಾಯಿಸುತ್ತಿದ್ದಳು ಅವಳು. ಹಗಲೆಲ್ಲಾ ದುಡಿದು ದಣಿದ ಸೂರ್ಯನಿಗೆ ನೆರಳ ವಿಶ್ರಾಂತಿ ಕೊಡೋದು ಮೋಡ. ಸಂಜೆಯಾಗುತ್ತಿದ್ದಂತೇ ಆ ಮೋಡಕ್ಕೆ ಬಣ್ಣಬಣ್ಣದ ಸೀರೆ ತಂದುಕೊಟ್ಟು, ಅದನ್ನೂ ಉಡು, ಇದನ್ನೂ ಉಡು ಎಂದು ದುಂಬಾಲುಬೀಳುವ ಸೂರ್ಯನ ಕಂಡ ಕೆಳ ಮನೆಯ ಗಿಡಗಳೆಲ್ಲಾ ದಿನವೂ ನಕ್ಕಾವು .ದಿನಾ ಹೀಗೆ ದುಂದು ಮಾಡಿದರೆ ಹೇಗೆ ? ಎಂದು ಹುಸಿಗೋಪ ತೋರುವ ಅವಳೆದುರು ಏನು ಹೇಳಲೂ ತಿಳಿಯದೇ ತಣ್ಣಗಾಗುವ ಸೂರ್ಯ. ಇವತ್ತಿಗೆ ಇದಾಯಿತಲ್ಲ, ನಾಳೆಗೆ ಮತ್ತೆ ಬೇರೆ ತರಬೇಡ, ಇಂದುಡದ ಸೀರೆಯನ್ನೇ ನಾಳೆಯುಡುತ್ತೇನೆ ಸರಿಯಾ ಎಂಬ ರಾಜಿಯ ಹಿಂದೆ ಸೂರ್ಯ ಎಂದೂ ಬದಲಾಗಲಾರನೆಂಬ ಸತ್ಯ ಅವಳಿಗೂ ತಿಳಿದಿದ್ದೇ.
ಸೂರ್ಯನಿಗೇ ಅಡ್ಡಬಂದೆಯಲ್ಲೋ, ನಿನ್ನ ಹಿಂದೆ ಕಾಣುತ್ತಿಹ ಅವನ ಪರದೆಯ ಮೇಲೆ ನಿನ್ನ ಚಿತ್ತಾರವ ನೋಡೋದು ಎಷ್ಟು ಚೆಂದ ಎಂದುಲಿದ ಹಕ್ಕಿಯ ಮಾತಿಗೆ ನಕ್ಕಿತೊಂದು ಮರದ ಕೊಂಬೆ. ಇಲ್ಲಿಂದ ನಾನಡ್ಡವೆಂಬೋ ನೀನು ಒಂದಿನಿತು ಸರಿದು ನೋಡು. ಮತ್ತೊಂದು ಕೋನದಲ್ಲಿ ಇನ್ಯಾರೋ ಅಡ್ಡಬರಬಹುದು. ಯಾರ ಅಡ್ಡವಿಲ್ಲದೆಯೇ ರವಿ ಪರಿಪೂರ್ಣನಾಗೂ ಕಾಣಬಹುದು. ಜಗದ ಬೆಳಕಿನೊಡೆಯನ ಮರೆಮಾಡುವೆನೆಂಬ ಮಾತು ಕಣ್ಣುಮುಚ್ಚಿಕೊಂಡು ಜಗವೆಲ್ಲಾ ಕತ್ತಲು ಎಂದಂತೇ ಮಗುವೇ ಎಂದಿತಾ ಮರ. ಹೌದಲ್ಲಾ ಎಂದೆನಿಸಿ ನಾಚಿದ ಹಕ್ಕಿ ಮನೆಯತ್ತ ಹಾರತೊಡಗಿದಾಗ ದಾರಿಯಲ್ಲೆದುರಾದ ತರುಣ ತರುಣಿಯರು ಕಂಡರು. ಇಬ್ಬರ ಮೊಗದಲ್ಲೂ ಮುಸ್ಸಂಜೆಯ ರವಿಯ ಪರಿಯ ಕೆಂಪು. ಮೋಡಗಳ ಮರೆಯಿಂದ ಕೊನೆಗೂ ಹೊರಬಂದ ಸೂರ್ಯನಿಂದ ಮನೆಗೆ ಹೊರಡೋ ದಾರಿ ಕಂಡ ಹಕ್ಕಿಯ ಪರಿ ಸಂತೋಷ ಇಬ್ಬರಲ್ಲೂ. ಸೂರ್ಯಾಸ್ತವೆಂಬುದದು ಹೊತ್ತ ಕೊನೆಯೇ ? ಅಲ್ಲ.ಅದು ದಿನದಿ ಕಾಡಿದ ನೋವುಗಳ ಕೆಲಕ್ಷಣವಾದರೂ ಮರೆಸೋ ಸಂತಸದ ಲೇಪವಲ್ಲವೇ ಎಂಬ ಭಾವ ತುಂಬಿದ ಹಕ್ಕಿ ಮುಂದೆ ಹಾರಿತು.
*****