ಪ್ರಶಸ್ತಿ ಅಂಕಣ

ಸೂರ್ಯಾಸ್ತವನರಸುತ್ತ: ಪ್ರಶಸ್ತಿ ಪಿ.ಸಾಗರ

ಅಣಾ..ಣ  ಒಂದ್ನಿಮ್ಷ ನಿಲ್ಸಿ ಗಾಡಿನ ಅಂದ ಶ್ಯಾಂ. ಏನಾಯ್ತಪ ಅಂತ ಡ್ರೈವರ್ ಗಾಡಿ ನಿಲ್ಲಿಸ್ತಿದ್ದ ಹಾಗೆನೇ ಬಾಗಿಲು ತೆಗೆದು ಹೊರಗೋಡಿದ ಶ್ಯಾಂ. ಏನಾಯ್ತಪ ಅಂತ ಹಿಂದಿರೋರೆಲ್ಲಾ ನೋಡ್ತಾ ಇದ್ರೆ ಶ್ಯಾಂ ತನ್ನ ಕ್ಯಾಮೆರಾ ತೆಗೆದು ಸೂರ್ಯಾಸ್ತದ ಫೋಟೋ ತೆಗಿತಾ ಇದ್ದ. ಸೂರ್ಯ ಕಿತ್ತಳೆಯಂತೆ ಕೆಂಪಗಾಗಿ ಇನ್ನೇನು ಬೆಟ್ಟಗಳ ನಡುವೆ ಮುಳುಗಿ ಹೋಗುತ್ತಿದ್ದ. ಜಸ್ಟ್ ಮಿಸ್ಸಾಗಿಬಿಡುತ್ತಿದ್ದ ದೃಶ್ಯವನ್ನು ಸೆರೆಹಿಡಿದದ್ದರ ಖುಷಿಯಲ್ಲಿ ಶ್ಯಾಂ ಇದ್ರೆ ಏನಪ್ಪಾ ಯಾವತ್ತೂ ಜೀವಮಾನದಲ್ಲಿ ಸೂರ್ಯನನ್ನೇ ನೋಡದವ್ನ ತರ ಮಾಡ್ತಾನೆ ಇವ್ನು ಅಂತ ಗಾಡಿ ನಿಲ್ಸಿದ್ದರ ಬಗ್ಗೆ ಒಂದಿಬ್ಬರು ಬೈಕೊಳ್ತಾ ಇದ್ರು. ಹೌದು ಶ್ಯಾಂ ಇರೋದೇ ಹಾಗೆ. ಬೆಳಗಿನ ಸೂರ್ಯೋದಯ, ಮಧ್ಯಾಹ್ನದ ರಣಬಿಸಿಲಿನಲ್ಲಿ ಬೆನ್ನ ಹಿಂದೆ ಬಿದ್ದ ನೆರಳಲ್ಲಿ ಮೂಡಿರೋ ಆಕಾರಗಳು, ಹಣೆಯಿಂದ ಜಾರಿ ಬೀಳ್ತಿರೋ ಬೆವರಬಿಂದುಗಳು,ಸಂಜೆಯ ಸೂರ್ಯಾಸ್ತ, ಸೂರ್ಯನ ಹಿಂದೆ ಜೂಟಾಟ ಆಡ್ತಿರೋ ತರ ಮುಳುಗೋ ದಿಕ್ಕಿನತ್ತ ಹಾರ್ತಿರೋ ಹಕ್ಕಿಗಳ ಹಿಂಡು.. ಹೀಗೆ ಪ್ರತಿಯೊಂದರಲ್ಲೂ ಸೌಂದರ್ಯ ಹುಡುಕುವವ ಅವ. ಊಟ ತಿಂಡಿಗಳೇ ಸಿಗದ ಯಾವುದೋ ಕಗ್ಗಾಡಲ್ಲಿ ಬಿಟ್ಟರೂ ತನ್ನ ಕ್ಯಾಮೆರಾ ಒಂದಿದ್ದು ಬಿಟ್ಟರೆ ಅದರ ಬ್ಯಾಟರಿ ಖಾಲಿಯಾಗೋವರೆಗೂ ಒಬ್ಬಂಟಿಯಾಗಿಯೇ ಖುಷಿಯಾಗಿರಬಲ್ಲ ವಿಚಿತ್ರ ಆಸಾಮಿ ಅವ. ಆತನ ಪ್ರಕೃತಿ ಪ್ರೇಮ,ಜೀವನ ಪ್ರೀತಿಯನ್ನು ಅವನ ಬಾಯಲ್ಲೇ ಕೇಳಬೇಕು.

ಹಿಂಗೇ ಒಂದು ಸಂಜೆ. ಉದ್ಯಾನನಗರಿ ಬೆಂದಕಾಳೂರಲ್ಲಿ ಗೆಳೆಯನ ಮನೆ ಕಡೆ ಹೊರಟಿದ್ದ ಒಂದು ಸಂಜೆ. ಬಸ್ಸಲ್ಲಿ ತೂಕಡಿಸುತ್ತಿದ್ದವಗೆ ಹಾಗೇ ಎಡಕ್ಕಿದ್ದ ಕಿಟಕಿಯಿಂದ ಏನೋ ಕೆಂಪಗೆ ಕಂಡಂತಾಯ್ತು. ನೋಡಿದರೆ ಸೂರ್ಯಾಸ್ತದ ಸಮಯ. ಮೂರು, ನಾಲ್ಕಂತಸ್ತುಗಳ ಕಟ್ಟಡಗಳ ನಡುವೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮಿತ್ರ. ಬಸ್ಸು ಮುಂದೆ ಮುಂದೆ ಸಾಗುತ್ತಿದ್ದಂತೆ ಈಗ ಬಯಲು ಬಂದೀತು , ಮುಳುಗು ರವಿಯ ದರ್ಶನವಾದೀತೆಂಬ ನಿರೀಕ್ಷೆ. ಊಹೂಂ. ದಿನದ ಕೆಲಸ ಮುಗಿಸಿದ ಭಾನು  ದಿಗಂತದಾಚೆಗೆ ದಾಟಿಸೋ ಜಾರು ಬಂಡಿಯ ಉನ್ನತಿಯಿಂದ ಕೆಳ ಜಾರುತ್ತಿದ್ದ. ಬಸ್ಸ ಕಿಟಕಿಗಳಿಂದ ಭಾಸ್ಕರನ ದರ್ಶನ ನಿರೀಕ್ಷಿಸಿದ್ದೇ ಬಂತು. ಕತ್ತಲಾಗುತ್ತಾ ಬಂದರೂ ಆತನ ಮುಖ ದರ್ಶನ ದಕ್ಕಲಿಲ್ಲ. ಆಕೆಯ ಒಂದು ನೋಟಕ್ಕಾಗಿ, ನಗುವಿಗಾಗಿ ಕ್ಲಾಸ ತುಂಬೆಲ್ಲಾ ಆಕೆಯತ್ತಲೇ ದಿಟ್ಟಿಸುತ್ತಿದ್ದ ದಿನಗಳ ನೆನಪನ್ನೂ ಹಿರಣ್ಯಗರ್ಭನ ಬಣ್ಣಗಳಿಗಾಗಿ ಕನವರಿಸುತ್ತಿದ್ದ ಕ್ಯಾಮೆರಾ ಹೊತ್ತು ತಂದಿತು. ಕಟ್ಟಡಗಳ ದಟ್ಟಣೆಯಲ್ಲೇ ಮುಳುಗೋ ಹೊತ್ತಿನೊಂದಿಗೇ ಖಗನೂ ಕರಗಿ ಹೋಗಿದ್ದ. 

ಅವತ್ತಿಡೀ ದಿನ ಮನಸ್ಸಿಗ್ಯಾಕೋ ಕಸಿವಿಸಿ. ಜೀವಮಾನದಲ್ಲೆಂದೂ ಸೂರ್ಯಾಸ್ತವನ್ನೇ ನೋಡಿದವನಲ್ಲವೆಂದಲ್ಲ. ಆದರೆ ಇತ್ತೀಚೆಗ್ಯಾಕೋ ಸೂರ್ಯನ ಭೇಟಿ ಅಪರೂಪವಾಗಿತ್ತು. ಸೂರ್ಯ ಹುಟ್ಟೋ ಮುಂಚೆ ಎದ್ದು ದ್ವಾದಶಾದಿತ್ಯರ ನಾಮಸ್ಮರಣೆ ಮಾಡುತ್ತಾ ಮಾಡುತ್ತಿದ್ದ ಸೂರ್ಯ ನಮಸ್ಕಾರ, ಸೂರ್ಯ ವಿಲೋಮ, ಚಂದ್ರ ವಿಲೋಮದ ಪ್ರಾಣಾಯಾಮಗಳು ಬಿಟ್ಟು ಹೋಗಿ ದಿನಾ ಏಳುವುದೇ ಸೂರ್ಯನೆದ್ದು ತಿಂಡಿ ತಿನ್ನುವ ಹೊತ್ತಿಗಾಗಿರುತ್ತಿತ್ತು. ಇನ್ನು ಸೂರ್ಯ ಮುಳುಗೋ ಮುಂಚೆ ಮನೆಗೆ ಮರಳಿದ ದಾಖಲೆಯೇ ಇಲ್ಲ. ಹೀಗೆ ಸೂರ್ಯಾಸ್ತವನ್ನೇ ಮರೆತಂದಾಗಿದ್ದ ಶ್ಯಾಮನಿಗೆ ಟ್ರಿಪ್ಪಿನಲ್ಲಿ ಕಂಡ ಸೂರ್ಯಾಸ್ತದ ದೃಶ್ಯ ಅಷ್ಟು ಚೆನ್ನಾಗಿ ಕಂಡಂತಾಗಿದ್ದು ಅಚ್ಚರಿಯೇನಲ್ಲ.  

ಹೌದು. ಸೂರ್ಯಾಸ್ತಕ್ಕೆ ಅದರದೇ ಆದ ಚೆಲುವಿದೆ. ಆಗುಂಬೆ, ಕೊಡಚಾದ್ರಿ , ಕುಮಾರ ಪರ್ವತಕ್ಕೇ ಹೋಗಬೇಕಿಂದಿಲ್ಲ. ಮೇಕೆದಾಟು, ಮಾರಿಕಣಿವೆಯ ಹತ್ತಿರ ಹೋಗಬೇಕೆಂದೂ ಇಲ್ಲ. ಸೂರ್ಯಾಸ್ತ ಕಾಣಿಸುವಷ್ಟೆತ್ತರದ ಟೆರೇಸೊಂದಿದ್ದರೆ, ಮನೆ ಸುತ್ತ ಗಿಜಿಗೊಟ್ಟೋ ಕಟ್ಟಡಗಳ ಬದಲು  ನಭ  ಕಾಣೋ ಬಯಲೊಂದಿದ್ದರೆ ಅದೇ ಸೂರ್ಯಾಸ್ತ ವೀಕ್ಷಣೆಗೆ ಪ್ರಸಕ್ತ ಸ್ಥಳ. ಹಳದಿ ಸೂರ್ಯ, ಕಿತ್ತಳೆಯಾಗಿ , ಕೆಂಪಾಗೋ ಒಂದು ಹದಿನೈದಿಪ್ಪತ್ತು ನಿಮಿಷಗಳ ಚೆಲುವಿದೆಯಲ್ಲಾ. ಅದನ್ನು ನೋಡದವರಿಗೆ ವರ್ಣಿಸುವುದು ಸ್ವಲ್ಪ ಕಷ್ಟವೇ. ಶ್ಯಾಮನ ಸೂರ್ಯಾಸ್ತ ವೀಕ್ಷಣೆಗೂ ಕೆರೆಗಳಿಗೂ ಅದೇನೋ ನಂಟು. ಹೈದರಾಬಾದಿನ ಬಂಡೆಗಳ ನಾಡಲ್ಲಿ ಆತನಿಗೆ ಸಖತ್ ಇಷ್ಟವಾಗುತ್ತಿದ್ದುದು ದಿನಾ ಸಂಜೆ ಕಾಣ ಸಿಗುತ್ತಿದ್ದ ಸೂರ್ಯಾಸ್ತ. ಕೆರೆಯ ಕಡೆ ಮುಖ ಮಾಡಿದ್ದ ತನ್ನ ರೂಮಿನ ಬಾಲ್ಕನಿಗೆ ಬಂದು ಅಮ್ಮ, ಅಜ್ಜಿ.. ಹೀಗೆ ಊರಿಂದ ದೂರಾಗಿದ್ದ ತನಗೆ ಇಷ್ಟವಾದವರಿಗೆ ಫೋನ್ ಮಾಡಿದರೆ ಸೂರ್ಯ ಮುಳುಗುವವರೆಗೂ ಅತ್ತಲಿಂದ ಕದಲುತ್ತಿರಲಿಲ್ಲ. ಭೂಮಾತೆಯ ಕಷ್ಟಗಳಿಗೆಲ್ಲಾ ಕಿವಿಯಾಗಿ ಹಗಲೆಲ್ಲಾ ಜಗವ ಸಂಚರಿಸಿದ ಸೂರ್ಯನಿಗೆ ಸಂಜೆಯಾಗುತ್ತಿದ್ದಂತೆಯೇ ಅರೆಕ್ಷಣದ ವಿಶ್ರಾಂತಿಯಿಲ್ಲ. ಧಗೆಗೆ ಬಳಲಿದ ಮಗನಿಗೆ ಗೆಳೆಯ ಮುಗಿಲು ಆಗಾಗ ಮೋಡಗಳ ಕೊಡೆ ಹಿಡಿಯುತ್ತಿದ್ದ. ಮೋಡಗಳಿಗೂ ಸೂರ್ಯನ ಧಗೆ ಸಹಿಸಲಾಗದೇ ಕ್ಷಣಮಾತ್ರದಲ್ಲಿ ಕರಗಿ ಹೋದರೆ ಮತ್ತೆ ಸೂರ್ಯನ ಕಾರ್ಯ ಶುರು. ಸಂಜೆಯ ಹೊತ್ತಿಗೆ ಶಶಿಯ ಬಳಗದ  ಅಶ್ವಿನಿ, ಭರಣಿ , ರೋಹಿಣಿ ಮುಂತಾದ ಅಪ್ಸರೆಯರೆಲ್ಲಾ ಬಂದು ತೆರೆಯ ಮರೆಯಲ್ಲಿ ಇಣುಕುತ್ತಾ  ಸೂರ್ಯನ ಸೌಂದರ್ಯವನ್ನು ಹೊಗಳುತ್ತಿದ್ದರೆ ಇನ್ನೂ ಮೂಡದ ಶಶಿ ಅಲ್ಲೇ ಮರೆಯಲ್ಲಿ ಹಣುಕುತ್ತಾ ಸೂರ್ಯ ಯಾವಾಗ ಅಂಗಣದಿಂದ ಹೊರಬಂದು ತನಗೆ ಜಾಗ ಕೊಡುತ್ತಾನೋ ಅಂತ ಹೊಟ್ಟೆ ಕಿಚ್ಚಿನಿಂದ ಕಾಯುತ್ತಿದ್ದ. ಅಪ್ಸರೆಯರ ಹೊಗಳುವಿಕೆಗಳು, ಕದ್ದ ನೋಟಗಳು ಗಮನಕ್ಕೆ ಬಂದು ನಾಚಿ ನೀರಾಗತೊಡಗಿದ್ದ. ಆತನ ಬಂಗಾರ ವರ್ಣ ನಾಚಿಕೆಯಿಂದ ಕೆಂಪಾಗತೊಡಗಿತ್ತು. ಸೂರ್ಯ ನಾಚಿದನೆಂದರೆ ಅವನೊಬ್ಬನೇ ಅಲ್ಲ, ಸುತ್ತಲ ಮುಗಿಲೂ ಅವನ ಪ್ರತಿಬಿಂಬದಂತೆಯೇ ಕೆಂಪಾಗುತ್ತಿತ್ತು. ಕೆಲ ನಿಮಿಷಗಳಲ್ಲಿ ಮುಗಿಲಿಗೆ ಮುಗಿಲೇ ಮದುವೆಯ ದಿನ ಹಾಸಿದ ಕೆಂಪು ರತ್ನಗಂಬಳಿಯಂತೆ ಕಾಣುತ್ತಿತ್ತು. ನಾಚು ನಾಚುತ್ತಲೇ ಇದ್ದ ಸೂರ್ಯನಿಗೆ ಹೊತ್ತಿನ ಅರಿವಾಗಿ ಮರೆಯಲ್ಲೇ ಇನ್ನೂ ಸಾಗದೇ ಇರುವ ತನಗೆ ಶಾಪ ಹಾಕುತ್ತಿರೋ ಶಶಿಯ ನೆನಪಾಗಿ ನಗು ಬಂದ ಹಾಗನ್ನಿಸುತ್ತಿತ್ತು. ಇಡೀ ದಿನ ಭೂಮಿಯನ್ನೆಲ್ಲಾ ಸುತ್ತುತ್ತಿದ್ದ ಆತ ಕೆಲ ನಿಮಿಷಗಳಲ್ಲೇ ದಿಗಂತದಾಚೆಯ ಬಂಡೆಗಳ ಮರೆಯಲ್ಲಿ ಜಾರಿ ಬಿಡುತ್ತಿದ್ದ. ದಿನಾ ರವಿ ಈ ಪರಿ ನಾಚುವುದ ನೋಡೋದೆಂದರೆ ಶ್ಯಾಮನಿಗೆ ಅದೇನೋ ಖುಷಿ. ಬಂಡೆಗಳ ನಾಡಲ್ಲಿ ದಿನಾ ಸೆಖೆಯಲ್ಲಿ ಬೆಂದಿದ್ದರೂ ಸೂರ್ಯಾಸ್ತದ ಸಮಯದಲ್ಲಿ ಬೀಸುತ್ತಿದ್ದ ತಂಗಾಳಿ, ಹಾರುತ್ತಿದ್ದ ಬಾನಾಡಿಗಳು, ಎದುರಿಗಿದ್ದ ಕೆರೆಯಲ್ಲಿ ಮೂಡುತ್ತಿದ್ದ ಪ್ರತಿಸೂರ್ಯನೋ ಎಂಬತಹ ಸೂರ್ಯನ ಬಿಂಬ.. ಇವೆಲ್ಲಾ ಸೂರ್ಯಾಸ್ತದ ಸೊಬಗನ್ನು ಇನ್ನೂ ಹೆಚ್ಚಿಸುತ್ತಿದ್ದವು.

ಬಂಡೆಗಳ ಹೈದರಾಬಾದು ಬಿಟ್ಟು ಬೆಂಗಳೂರಿಗೆ ಬಂದಾಗಲೂ ಕೆರೆಯ ಪಕ್ಕದ ರೂಮೇ ಸಿಗಬೇಕೇ ? ಇಲ್ಲಿ ಗಗನಕ್ಕೇರಿದ ರೆಂಟಿನ ಮಧ್ಯೆಯೂ ಸೂರ್ಯಾಸ್ತದ ಸೊಬಗೊಂದೇ ಖುಷಿ ಕೊಡುತ್ತಿದ್ದುದು. ಸಂಜೆಯಾಗುತ್ತಿದ್ದಂತೆಯೇ ಟೆರೇಸು ಹತ್ತಿ ಮುಳುಗು ರವಿಯನ್ನ, ಕೆರೆಯಲ್ಲಿ ಪ್ರತಿಬಿಂಬಿಸುತ್ತಿದ್ದ ಆ ದಡದ ಕಟ್ಟಡಗಳನ್ನು ನೋಡೋದೆಂದರೆ ಏನೋ ಖುಷಿ. ಸೂರ್ಯಾಸ್ತವನ್ನು ನೋಡನೋಡುತ್ತಲೇ ಸೂರ್ಯನ ಬಗ್ಗೆ ಹೆಚ್ಚೆಚ್ಚು ತಿಳಿಯುವ ಕುತೂಹಲ ಹೆಚ್ಚುತ್ತಿತ್ತು. ಹನುಮನಿಗೆ ಕಂಡಂತೆ ಸೂರ್ಯ ಬರೀ ಬೆಳಕಿನ ಉಂಡೆಯಲ್ಲವೆಂಬುದು ಗೊತ್ತಿದ್ದರೂ ಸೂರ್ಯಾಸ್ತ ಹೇಗಾಗುತ್ತೆಂದು ತಿಳಿಯುವ ಕುತೂಹಲ ಕೆರಳುತ್ತಿತ್ತು. ಭೂಮಿಗಿಂತ ೧೦೯ ಪಟ್ಟು ದೊಡ್ಡದಾದ, ೩,೩೦,೦೦೦ ಪಟ್ಟು ಹೆಚ್ಚು ತೂಕದ ಕಾಯನಾದ ಸೂರ್ಯನ ಬಗ್ಗೆ ಮಾಹಿತಿ ಕಲೆ ಹಾಕಿದಷ್ಟೂ ಅದು ಮುಗಿಯುತ್ತಿರಲಿಲ್ಲ. ಸೌರ ಜ್ವಾಲೆಗಳು, ಕೆಂಪು ದೈತ್ಯರ ಗುಂಪಿಗೆ ಸೇರಿದ ಸೂರ್ಯ, ಆಕಾಶಗಂಗೆ, ನೀಹಾರಿಕೆಗಳು,ನಭೋಮಂಡಲದಲ್ಲಿರುವ ಈ ತರಹದ ಎಷ್ಟೋ ಸೂರ್ಯಂದಿರು.. ಹೀಗೆ ಪ್ರತಿದಿನವೂ ಹೊಸ ಹೊಸ ಹೊಳಹುಗಳಲ್ಲಿ ಕಳೆದುಹೋಗುತ್ತಿದ್ದ. ಕ್ರಮೇಣ ಕೆಲಸ ಹೆಚ್ಚುತ್ತೆಚ್ಚುತ್ತಾ ಸೂರ್ಯಾಸ್ತ ಮರೆಯಾಗುತ್ತಾ ಹೋದರೂ ಸೂರ್ಯನ ಸುತ್ತ ಸುತ್ತೋ ಭೂಮಿ ನೆನಪಾದಾಗೆಲ್ಲಾ ಸೂರ್ಯಾಸ್ತಕ್ಕೆ ತಹ ತಹಿಸುತ್ತಿದ್ದ ತನ್ನ ನೆನಪಾಗುತ್ತಿತ್ತು. ಮೈಮುರಿಯುವಂತಹ, ಕಣ್ಣುರಿಯುವಂತಹ ಕೆಲಸ ಇದ್ದರೂ ಸೂರ್ಯಾಸ್ತ ನೋಡುವುದಕ್ಕಾಗಿ ಕಾಯುತ್ತಿದ್ದ ಆತನಿಗೆ ಆಫೀಸುಗಳ ಜಂಗುಳಿಯಲ್ಲಿ ಸೂರ್ಯನಿರಲಿ ಬಾನೇ ಕಾಣುತ್ತಿರಲಿಲ್ಲ. ಚಂದ್ರನ ದರ್ಶನವೇ ಮನೆಗೆ ಬಂದು ಮಧ್ಯರಾತ್ರಿಯ ವೇಳೆಗಾಗುತ್ತಿದ್ದ ಸಂದರ್ಭಗಳಲ್ಲಿ ಸೂರ್ಯನ ಕಾಣುವಿಕೆಯ ಆಸೆ ಕಾಡೇ ಕಾಡುತ್ತಿತ್ತು.  ಎಲ್ಲೇ ಹೊರಗಡೆ ಹೋದರೂ ಸಂಜೆ ಮುಳುಗುತ್ತಾ ಬಂದಂತೆ ಸೂರ್ಯಾಸ್ತಕ್ಕೆ ಕಾಯುತ್ತಿದ್ದ ಆತನ ಪರಿ ಹುಚ್ಚುತನದಂತೆ ಕಾಣುತ್ತಿತ್ತೇ ಹೊರತು ಅದರ ಹಿಂದಿನ ತಹತಹ, ಆ ಮುಳುಗುವಿಕೆಯ ಹಿಂದೆ ಉದಯಿಸುತ್ತಿದ್ದ ಈತನ ಕಲ್ಪನಾ ಲಹರಿಯ ಬಗೆಗೆ ಅಂದಾಜಿರಲಿಲ್ಲ. ಇಂದೂ ಆ ಶ್ಯಾಮ ಯಾವುದೋ ಕಗ್ಗಾಡೊಂದರ ಮೂಲೆಯಲ್ಲಿದ್ದಾನೆ ಸೂರ್ಯನ ಬಗ್ಗೆ ಅರಿಯಲು. ಕೆಲಕ್ಕೊಂದಿಷ್ಟು ದಿನ ರಜಾ ಜಡಿದು ತನ್ನ ಧೂಳು ಹಿಡಿದ ಕ್ಯಾಮೆರಾ ನೇತಾಕಿಕೊಂಡು ಒಂದು ಆದಿವಾಸಿಗಳ ನಾಡಲ್ಲಿ ಸೂರ್ಯನ ಬಗೆಗಿರೋ ನಂಬಿಕೆಗಳ, ಆಚರಣೆಗಳ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡೋ ತಯಾರಿಯಲ್ಲಿದ್ದಾನೆ…. ಡಾಕ್ಯುಮೆಂಟರಿ ಎಲ್ಲಿಯವೆರೆಗೆ ಬಂತು ಅಂದಿರಾ ?ಈಗ  ಆತನ ಬ್ಯಾಟರಿ ಖಾಲಿಯಾಗಿದೆ ಅನಿಸುತ್ತೆ. ನಿನ್ನೆ ರಾತ್ರೆ ಬಂದ ಕರೆಯೇ ಕಡೆಯದು. ಆತ ಮರಳಿದಾಗ ಆತನ ಬಾಯಲ್ಲೇ ಆ ಆದಿವಾಸಿಗಳ ನಾಡ ಕತೆ ಕೇಳೋಣಂತೆ.. ಅಲ್ಲಿಯವರೆಗೆ ಶುಭದಿನ.. 

ಟಿಪ್ಪಣಿ: 
೧)ಸೂರ್ಯ ನಮಸ್ಕಾರದಲ್ಲಿ ಬಳಕೆಯಾಗುವ ಸೂರ್ಯನ ಹನ್ನೆರಡು ಹೆಸರುಗಳು: ಮಿತ್ರ, ರವಿ, ಸೂರ್ಯ, ಭಾನು, ಖಗ, ಪೃಷ್ಣ, ಹಿರಣ್ಯಗರ್ಭ, ಮಾರೀಚ, ಆದಿತ್ಯ, ಸವಿತೃ,  ಅರ್ಕ, ಭಾಸ್ಕರ
೨)ದ್ವಾದಶಾದಿತ್ಯರು:ಧಾತ, ಆರ್ಯಮ, ಮಿತ್ರ, ವರುಣ, ಇಂದ್ರ, ವಿವಸ್ವನ್, ತ್ವಷ್ಟ, ವಿಷ್ಣು, ಅಂಶುಮಾನ್, ಭಗ, ಪುಷ್ಯ, ಪರ್ಜನ್ಯ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಸೂರ್ಯಾಸ್ತವನರಸುತ್ತ: ಪ್ರಶಸ್ತಿ ಪಿ.ಸಾಗರ

  1. Yavagalu hechaagi Chandrana bagge lekhanagalanna baritare, modala baari suryana mele lekhana odi khushi aaytu….

  2. ಚೆನ್ನಾಗಿದೆ ಲೇಖನ…."ದಿನಕರ"ಅಂತ ಕೂಡ ಕರೀತಾರೆ.ಸೂರಪ್ಪನನ್ನು

  3. ಧನ್ಯವಾದಗಳು ಸುಮನ್ ಅಕ್ಕಾ 🙂 ಧನ್ಯವಾದ ಅಮರ್ ದೀಪ್.. ಅದೊಂದು ಮರ್ತು ಹೋಯ್ತು ನೋಡಿ 🙂

  4. ಲೇಖನ ತುಂಬಾ ಚನ್ನಾಗಿ ಮೂಡಿಬಂದಿದ್ದು, ಉದ್ಯೋಗದ ಭರದಲ್ಲಿ ತೆರೆಮರೆಗೆ ಸರಿದಿದ್ದ ನನ್ನ ಹವ್ಯಾಸವನ್ನು ನೆನಪಿಸಿತು. ತಮ್ಮ ಈ-ಮೇಲ್ ಐಡಿ ತಿಳಿಸಿದರೆ ಮುಸ್ಸಂಜೆ ಹೊತ್ತಲ್ಲಿ ನಾನು ಸೆರೆಹಿಡಿದ ಸೂರ್ಯನ ಕೆಲವು ಫೋಟೋಗಳನ್ನು ಕಳುಹಿಸುವೆ.

Leave a Reply

Your email address will not be published. Required fields are marked *