ಸೂರ್ಯನ ಸುತ್ತುವ ಗ್ಲೋಬು ಮತ್ತು ನ್ಯೂಟನ್ನಿನ ಸೇಬು: ರೋಹಿತ್ ವಿ. ಸಾಗರ್

ಮೊನ್ನೆ ಹತ್ತಿರದ ಪ್ರಾಥಮಿಕ ಶಾಲೆಯೊಂದರ ಬಳಿ ಹೋಗುತ್ತಿದ್ದೆ, ಮೈದಾನದಲ್ಲಿ ‘ಸೂರ್ಯ’ ಎಂಬ ಫಲಕ ಹಿಡಿದ ಒಬ್ಬ ಹುಡುಗ ನಿಂತಿದ್ದ, ಆ ಶಾಲೆಯ ಮೇಷ್ಟ್ರು ಕೈಯಲ್ಲಿ ಒಂದು ಗ್ಲೋಬು ಹಿಡಿದು ಆ ಹುಡುಗನ ಸುತ್ತಾ ಸುತ್ತುತ್ತಿದ್ದರು ಉಳಿದವರು ಅವರಿಬ್ಬರನ್ನೇ ಬಾಯಿ ಕಳೆದುಕೊಂಡು ನೋಡುತ್ತಾ ನಿಂತಿದ್ದರು ನಾನೂ ಅವರನ್ನು ಸೇರಿಕೊಂಡೆ. ಅವರೇಕೆ ಹಾಗೆ ಮಾಡುತ್ತಿದ್ದಾರೆ ಎಂದು ಆ ಕ್ಷಣ ಅರ್ಥವಾಗಲಿಲ್ಲ, ಆಮೇಲೆ ವಿಷಯ ಹೊಳೆಯಿತು, ಗ್ರಹಗಳ  ಚಲನೆಯ ಬಗ್ಗೆ ಪಾಠ ಮಾಡಲು ಆ ಶಿಕ್ಷಕ ಈ ಚಟುವಟಿಕೆಯನ್ನು ಮಾಡಿಸುತ್ತಿದ್ದರು. 

ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಹುಟ್ಟುತ್ತಿರಬಹುದು ? ಈ ಸೂರ್ಯನನ್ನು ಸುತ್ತುವ ಗ್ಲೋಬಿಗೂ ಶೀರ್ಷಿಕೆಯಲ್ಲಿ ಹೇಳಿರುವ ನ್ಯೂಟನ್ನಿನ  ಸೇಬಿಗೂ ‘ಎತ್ತಣದೆತ್ತಣ ಸಂಬಂಧವಯ್ಯಾ…?' ಎಂದು. ನಮ್ಮ ದೊಡ್ಡವರು ಹೆಳಿದ್ದಾರಲ್ಲ ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರದ ಉಪ್ಪು ಎರೆಡೂ ಬೇರೆ ಬೇರೆ ಎನಿಸಿದರೂ ಅವುಗಳ ನಡುವೆ ಒಂದು ಅವಿನಾಭಾವ ಸಂಬಂಧವಿದೆ ಎಂದು, ನಿಮ್ಮ ನಾಲಿಗೆಯನ್ನೇ ಕೇಳಿ ನೋಡಿ ಅದೊಂದು ಬಿಚ್ಚಿಟ್ಟ ಸತ್ಯ, ಹಾಗೆಯೇ ಈ ಗ್ಲೋಬು ಮತ್ತು ಸೇಬುಗಳ ಸಂಬಂಧ.

ಇತಿಹಾಸಕಾರರು ಹೇಳುವಂತೆ ಕ್ರಿ.ಪೂ ಆರನೇ ಶತಮಾನದಲ್ಲಿ ಅದರಲ್ಲೂ ಗ್ರೀಸ್ ಮುಂತಾದ ಭಾಗಗಳಲ್ಲಿ ಜನರು ಅತೀ ಕ್ರಿಯಾಶೀಲರೂ, ಚಿಂತನಾಶೀಲರೂ ಆಗಿದ್ದರು. ಅರಿಸ್ಟಾಟಲ್‍ರಂತಹ ಹಲವು ಗ್ರೀಕ್ ತತ್ವಜ್ಞಾನಿಗಳು ಪುರುಸೊತ್ತಿನ ಸಮಯದಲ್ಲಿ ಆಕಾಶವೀಕ್ಷಣೆ ಮಾಡಿ ಸೂರ್ಯ, ನಕ್ಷತ್ರ, ಚಂದ್ರ ಮುಂತಾದ ಕಣ್ಣಿಗೆ ಕಾಣುವ ಆಕಾಶ ಕಾಯಗಳ ಬಗ್ಗೆ ಮಾಹಿತಿ ಕಲೆಹಾಕುತ್ತಾ, ಚರ್ಚೆಗಳನ್ನು ನಡೆಸುತ್ತಿದ್ದರು. ಅವುಗಳ ಸಹಾಯದಿಂದ ‘ ಭೂಮಿಯೇ ಇಡೀ ವಿಶ್ವದ ಕೇಂದ್ರವಾಗಿದ್ದು, ವಿಶ್ವದ ಎಲ್ಲಾ ಕಾಯಗಳು ಭೂಮಿಯ ಸುತ್ತಾ ವೃತ್ತಾಕಾರದಲ್ಲಿ ಸುತ್ತುತ್ತಿರುತ್ತವೆ’ ಎಂದು ತಿರ್ಮಾನಿಸಿದ್ದರು. ಜೊತೆಗೆ ಟಾಲೆಮಿ ಎಂಬ ತತ್ವಜ್ಞಾನಿಯೊಬ್ಬ ಇದಕ್ಕೆ ವೈಜ್ಞಾನಿಕ ಪುಷ್ಠಿಗಳನ್ನೂ ನೀಡತೊಡಗಿದ್ದ, ಆದ್ದರಿಂದ ಅದನ್ನು ಟಾಲೆಮಿಯ ಭೂಕೇಂದ್ರ ಸಿದ್ಧಾಂತ ಎಂದು ಕರೆಯಲಾಗುತ್ತಿತ್ತು. ಈ ಸಿದ್ಧಾಂತಕ್ಕೆ ಅನಂತರ ಶುರುವಾದ ಕ್ರಿಶ್ಚಿಯನ್ ವಿಚಾರಧಾರೆಗಳು ಸಹ ಸ್ವರ್ಗ, ನರಕಗಳೆಂಬ ಊಹಾ ಲೋಕಗಳ ಸಿದ್ಧಾಂತಗಳನ್ನು ತಳುಕು ಹಾಕಿಬಿಟ್ಟವು. ಆಗ ಧಾರ್ಮಿಕ ವಿಚಾರಧಾರೆಗಳ ವ್ಯಾಪ್ತಿ ವಿಶಾಲವಾಗಿತ್ತು ಮತ್ತು ಅದೇ ಸಮಯದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ಜ್ಯೋತಿಷ್ಯಾಸ್ತ್ರಗಳೂ ಇದನ್ನೇ ಹೇಳುತ್ತಿದ್ದವು. ಆದ್ದರಿಂದ ಸಹಜವಾಗಿಯೇ ಈ ಭೂಕೇಂದ್ರ ಸಿದ್ಧಾಂತವನ್ನೇ ಜಗತ್ತಿನಾದ್ಯಂತ ಒಪ್ಪಿಕೊಳ್ಳಲಾಯಿತು. ಆದರೆ ಆ ಸಿದ್ಧಾಂತವನ್ನಿಟ್ಟುಕೊಂಡು ಗ್ರಹಗಳ ಚಲನೆಯ ಎಲ್ಲಾ ಮಜಲುಗಳನ್ನು ವಿವರಿಸುವುದು ತೀರಾ ಕಷ್ಟಸಾಧ್ಯವಾಗಿತ್ತು. ಕ್ರಿ.ಪೂ 15ನೇ ಶತಮಾನದ ಸುಮಾರಿನಲ್ಲಿ ಪ್ರಾಯಶಃ ಪೋಲೆಂಡಿನವನಾದ ನಿಕೋಲಸ್ ಕೋಪರ್ನಿಕಸ್ ಎಂಬ ಸಾಧು, ಟಾಲೆಮಿಯ ಸಿದ್ಧಾಂತವನ್ನು ತಪ್ಪು ಎಂದು ಸಾಧಿಸುತ್ತಾನೆ. ಅವನು ‘ಭೂಮಿ ಮತ್ತು ಇನ್ನುಳಿದ ಎಲ್ಲಾ ಆಕಾಶಕಾಯಗಳೂ ಸೂರ್ಯನನ್ನು ವರ್ತುಲಾಕಾರದಲ್ಲಿ ಸುತ್ತುತ್ತವೆ’ ಎಂದು ವಾದಿಸಿದ್ದನಾದರೂ ಸಮಕಾಲಿನ ಜನರಿಂದ ಮತ್ತು ಆಗಿನ ನ್ಯಾಯಸ್ಥಾನಗಳಾಗಿದ್ದ ಚರ್ಚ್‍ಗಳಿಂದ ಈತ ವಾಗ್ದಂಡನೆಗೊಳಗಾಗಿ ಎಲ್ಲರ ಕ್ಷಮೆಯನ್ನೂ ಕೋರಿದ್ದ ಎಂದು ಹೇಳಲಾಗುತ್ತದೆ. ಅದೇನೋ ಹೇಳುತ್ತಾರಲ್ಲ ‘ಹುಲುಕಡ್ಡಿಯ ಆಸರೆ ಹಿಡಿದು ಪ್ರವಾಹಕ್ಕೆ ವಿರುದ್ದ ಈಜಿದಂತೆ’ ಎಂದು, ಹಾಗಾಗಿತ್ತು ಹೆಚ್ಚಿನ ಪುರಾವೆಗಳಿಲ್ಲದ ಕೋಪರ್ನಿಕಸ್‍ನ ವಾದ, ಅದೇ ಸಮಯದಲ್ಲಿ ಇಟಲಿಯಲ್ಲಿ ಗೆಲಿಲಿಯೋ ಗೆಲಿಲಿ ಎಂಬ ಖಗೋಳಶಾಸ್ತ್ರಜ್ಞ ತಾನೇ ಕಂಡುಹಿಡಿದ ದೂರದರ್ಶಕವನ್ನು ಬಳಸಿ ಕ್ರೋಢೀಕರಿಸಿದ ಮಾಹಿತಿಗಳಿಂದ ಕೋಪರ್ನಿಕಸ್‍ನ ಸಿದ್ಧಾಂತವನ್ನು ಎತ್ತಿ ಹಿಡಿದ, ಆದರೆ ಇವನ ಅದೃಷ್ಟ ನೆಟ್ಟಗಿರಲಿಲ್ಲ ; ಮೂಲತಃ ಹಠಮಾರಿಯಾಗಿದ್ದ ಈತ ದೂರದರ್ಶಕದಿಂದ ಸೂರ್ಯನನ್ನು ನೋಡಿ ನೋಡಿ ಕಣ್ಣು ಕಳೆದುಕೊಂಡ, ಅನಂತರ ಯಾರಿಗೂ ಜಗ್ಗದೆ ಈ ಸೂರ್ಯಕೇಂದ್ರ ಸಿದ್ಧಾಂತದ ವಾದ ಮಾಡಿ ‘ರಾಜದ್ರೋಹ’ ದ ಆರೋಪದ ಮೇಲೆ ಪ್ರಾಣವನ್ನೂ ಕಳೆದುಕೊಂಡ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಗೆಲಿಲಿಯೋ, ಕೋಪರ್ನಿಕಸ್‍ಗಿಂತ ಮುಂಚೆಯೇ ಸುಮಾರು 1000 ವರ್ಷಗಳ ಹಿಂದೆ ಭಾರತದ ಆರ್ಯಭಟ(ಕ್ರಿ.ಪೂ 5ನೇ ಶತಮಾನ) ಎಂಬುವವನು ತನ್ನ ಕೆಲವು ಗ್ರಂಥಗಳಲ್ಲಿ ಸೂರ್ಯಕೇಂದ್ರ ಸಿದ್ಧಾಂತದ ಬಗ್ಗೆ ವಿವರಿಸಿದ್ದಾನೆ. ಆದರೆ ಇದು ಬೆಳಕಿಗೆ ಬಂದದ್ದು ಮಾತ್ರ ತೀರಾ ಇತ್ತೀಚೆಗೆ. ಗೆಲಿಲಿಯೋನ ನಂತರದ ಕಾಲದಲ್ಲಿ ಟೈಕೊ ಬ್ರಾಹೆ ಎಂಬಾತ ಇದೇ ರೀತಿ ಅತೀ ನಿಖರವಾದ ಮಾಹಿತಿಗಳನ್ನು ಕಲೆಹಾಕಿದ, ಆ ಮಾಹಿತಿಗಳು ಕೋಪರ್ನಿಕಸ್‍ನ ಸಿದ್ಧಾಂತಗಳಿಗೆ ಪೂರಕವಾಗಿದ್ದವಾದರೂ ಆತ ಇವುಗಳನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಕೇವಲ ಮಾಹಿತಿ, ದಾಖಲೆಗಳ ಸಂಗ್ರಹ ಮಾಡುತ್ತ ತನ್ನ ಜೀವಮಾನವನ್ನೇ ಕಳೆದುಬಿಟ್ಟ. ಆದರೆ ಆತನ ಅತ್ಯಮೂಲ್ಯ ದಾಖಲೆಗಳು ಮತ್ತು ಮಾಹಿತಿಗಳನ್ನು ಉಪಯೋಗಿಸಿಕೊಂಡು ವಿವರವಾದ ಅಧ್ಯಯನದ ಮೂಲಕ ಅವನ ಶಿಷ್ಯ ಜೊಹಾನಸ್ ಕೆಪ್ಲರ್ ಎಂಬಾತ ಗ್ರಹೀಯ ಚಲನೆಯ ಬಗ್ಗೆ ಮೂರು ಮಹತ್ವದ ನಿಯಮಗಳನ್ನು ಜಗತ್ತಿನ ಮುಂದಿಡುತ್ತಾನೆ.

ಮೊದಲನೆಯದು, ಎಲ್ಲಾ ಗ್ರಹಗಳು ಸೂರ್ಯನ ಸುತ್ತಾ ಧೀರ್ಘವೃತ್ತಾಕಾರದಲ್ಲಿ ಸುತ್ತುತ್ತವೆ, ಹಾಗೂ ಆ ಧೀರ್ಘ ವೃತ್ತದ ಎರೆಡು ನಾಭಿ (ಫೋಕಸ್)ಗಳಲ್ಲಿ ಒಂದರಲ್ಲಿ ಸೂರ್ಯನಿರುತ್ತಾನೆ.

ಎರಡನೆಯದು, ಸೂರ್ಯನಿಂದ ಗ್ರಹವೊಂದಕ್ಕೆ ಎಳೆದ ಒಂದು ಊಹಾ ರೇಖೆಯು ಸಮಾನ ಸಮಯಾಂತರಗಳಲ್ಲಿ ಸಮಾನ ಪ್ರದೇಶ ವಿಸ್ತಾರಗಳನ್ನು ಕ್ರಮಿಸುತ್ತದೆ.

ಮೂರನೆಯದು, ಗ್ರಹವೊಂದು ಸೂರ್ಯನ ಸುತ್ತ ಒಂದು ಬಾರಿ ಸುತ್ತಲು ತೆಗೆದುಕೊಳ್ಳುವ ಸಮಯದ ವರ್ಗವು ಆ ಗ್ರಹದಿಂದ ಸೂರ್ಯನಿಗಿರುವ ಸರಾಸರಿ ದೂರದ ಘನ ಮೌಲ್ಯಕ್ಕೆ ನೇರ ಅನುಫಾತದಲ್ಲಿರುತ್ತದೆ.

ಇವನ್ನೆ ಇಂದಿಗೂ ನಾವು ಪ್ರಾಥಮಿಕ ಹಂತದಲ್ಲಿ ಓದುತ್ತಿರುವುದು, ಬಳಸುತ್ತಿರುವುದು. ಇಲ್ಲಿ ಕುತೂಹಲದ ವಿಷಯವೇನೆಂದರೆ ಕೆಪ್ಲರ್‍ಗೆ ಈ ಮೂರೂ ವಿಷಯಗಳು ಗೊತ್ತಾಯಿತಾದರೂ ಅವು ಏಕೆ ಹೀಗೆ ? ಎಂಬುದು ಮಾತ್ರ ತಿಳಿದಿರಲಿಲ್ಲ. ಅದಕ್ಕೆ ಉತ್ತರ ಹುಡುಕಿಕೊಟ್ಟವನೇ ನಮ್ಮ ಸೇಬು ಹಣ್ಣಿನ ನ್ಯೂಟನ್.

ಅಸಾಮಾನ್ಯ, ಅಪ್ರತಿಮ ಭೌತಶಾಸ್ತ್ರಜ್ಞರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಅದ್ಭುತ ಪ್ರತಿಭಾವಂತ ಸರ್ ಐಸಾಕ್ ನ್ಯೂಟನ್. ಈ ನ್ಯೂಟನ್ ಜನಮಾನಸಕ್ಕೆ ಬಹಳ ಹತ್ತಿರದವನಾಗಿಬಿಟ್ಟಿದ್ದಾನೆ, ನಿಸರ್ಗ ರಹಸ್ಯಗಳನ್ನು ಬೇಧಿಸಿದ್ದವನಾದ್ದರಿಂದಲೋ ಅಥವಾ ಪಕ್ಕದಲ್ಲೇ ಬಿದ್ದ ಸೇಬುಹಣ್ಣನ್ನು ತಿನ್ನುವುದನ್ನು ಬಿಟ್ಟು ಅದು ಏಕೆ ಬಿತ್ತು ಎಂದು ತಲೆಕೆಡಿಸಿಕೊಂಡದ್ದಕ್ಕಾಗಿಯೋ ಗೊತಿಲ್ಲ…!

ಈ ನಮ್ಮ ನ್ಯೂಟನ್ ಮಹಾಶಯ ಒಮ್ಮೆ ಅಜ್ಜಿ ಮನೆಯ ಬಳಿಯಿದ್ದ ಸೇಬಿನ ತೋಟದಲ್ಲಿ ಕೂತಿದ್ದಾಗ ಮರದಿಂದ ಸೇಬು ಹಣ್ಣೊಂದು ಕೆಳಕ್ಕೆ ಬೀಳುತ್ತದೆ. ಯೋಚಿಸಿ ನಿಮ್ಮ ಹತ್ತಿರದಲ್ಲಿ ಒಂದು ಸೇಬು ಹಣ್ಣು ಬಿದ್ದರೆ ಏನು ಮಾಡುತ್ತೀರಿ ? ಹಸಿದಿದ್ದರೆ ಕ್ಷಣಾರ್ಧದಲ್ಲಿ ಅದು ನಿಮ್ಮ ಹೊಟ್ಟೆ ಸೇರುತ್ತದೆ, ಹಸಿವಿಲ್ಲದಿದ್ದರೆ ನಿಮ್ಮ ಜೇಬು ಸೇರಿರುತ್ತದೆ; ಹಸಿವಾದಾಗ ತಿನ್ನಲಿಕ್ಕೆಂದು. ಆದರೆ ಈತ ಏನು ಮಾಡಿದ ಗೊತ್ತೇ? ಅಜ್ಜಿ ಮನೆಯಾದ್ದರಿಂದ ಹೊಟ್ಟೆಯಲ್ಲಿ ಮತ್ತೆ ಜಾಗವಿಲ್ಲದಷ್ಟು ತಿಂದಿದ್ದ ಎನಿಸುತ್ತದೆ ಅದಕ್ಕೆ ಪುರುಸೊತ್ತಿನಲ್ಲಿ ‘ಅದು ಕೆಳಕ್ಕೇ ಏಕೆ ಬಿತ್ತು ? ಮೇಲಕ್ಕೆ ಏಕೆ ಹೋಗಲಿಲ್ಲ..?’ ಎಂದು ಯೋಚಿಸತೊಡಗುತ್ತಾನೆ.. ಹೀಗೆ ಬಂದ ವಿಚಾರಗಳನ್ನೆಲ್ಲ ಬಗೆದು ಅಗೆದು ಆ ಹಣ್ಣನ್ನು ಭೂಮಿಯೆಡೆಗೆ ಸೆಳೆದ ಒಂದು ಶಕ್ತಿಯನ್ನು ಪತ್ತೆಹಚ್ಚಿ ಬಿಡುತ್ತಾನೆ, ಆ ಶಕ್ತಿಯೇ ‘ಗುರುತ್ವಾಕರ್ಷಣ ಶಕ್ತಿ’. ಈ ಆವಿಷ್ಕಾರ ವೈಜ್ಞಾನಿಕ ಕ್ರಾಂತಿಯೊಂದಕ್ಕೆ ಮುನ್ನುಡಿಯಾಗಿಬಿಡುತ್ತದೆ. ಆ ಮೂಲಕ ಮನುಕುಲವನ್ನು ಆ ಸಮಯದಲ್ಲಿ ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ, ನಿಗೂಢತೆಗೆಳಿಗೆ ಉತ್ತರ ಸಿಗತೊಡಗುತ್ತವೆ. ನಾವು ಈಗ ಕಾಲೇಜಿನವರೆಗೆ ಓದುವ ಭೌತಶಾಸ್ತ್ರದಲ್ಲಿ ಮುಕ್ಕಾಲು ಭಾಗ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆ ಆವಿಷ್ಕಾರದ ಭಾಗಗಳೇ ಆಗಿವೆ. ಹೀಗೆ ಮಾತನಾಡುವಾಗ ನನ್ನ ಗೆಳೆಯರೊಬ್ಬರು ಹೇಳಿದ್ದರು ‘ಛೇ ಆ ನ್ಯೂಟನ್ ತೆಂಗಿನ ತೋಟದಲ್ಲಾದರೂ ಕೂರಬಾರದಿತ್ತೇ ಮಹರಾಯ, ಸೇಬಿನ ಬದಲು ತೆಂಗಿನಕಾಯಿ ತಲೆ ಮೇಲೆ ಬಿದ್ದಿದ್ದರೆ ಭೌತಶಾಸ್ತ್ರ ಓದುವುದೇ ತಪ್ಪುತ್ತಿತ್ತಲ್ಲಾ’ ಎಂದು. ಈ ಕಥೆಗಳು ಎಷ್ಟರಮಟ್ಟಿಗೆ ನಿಜವೆಂದು ಹೇಳುವುದು ತೀರಾ ಕಷ್ಟಕರ, ಬಾಯಿಂದ ಬಾಯಿಗೆ ಹರಿದು ಬಂದಿರಬಹುದು ಎಂದಿಟ್ಟುಕೊಳ್ಳೋಣ. ಆದರೆ ಪುರಾವೆಗಳ ಪ್ರಕಾರ ಹೇಳುವುದಾದರೆ ಭೂಮಿಯ ಸುತ್ತ ಚಂದ್ರನ ಚಲನೆಯನ್ನು ಗಮನಿಸಿದ ನ್ಯೂಟನ್, ಆ ಚಲನವಲನಗಳನ್ನು ಗಂಭೀರ ತಾರ್ಕಿಕ ಮತ್ತು ಗಣಿತೀಯ ಲೆಕ್ಕಾಚಾರಗಳ ಮುಖಾಂತರ ‘ಭೂಮಿ ಯಾವುದೋ ಒಂದು ಅಗೋಚರ ಬಲದಿಂದ ಚಂದ್ರನು ತನ್ನನ್ನು ಸುತ್ತುವಂತೆ ಮಾಡಿಕೊಂಡಿದೆ.’ ಎಂಬ ತಿರ್ಮಾನಕ್ಕೆ ಬರುತ್ತಾನೆ. ನಂತರ ಇದೇ ವಿಚಾರವನ್ನು ಸೂರ್ಯನನ್ನು ಸುತ್ತುವ ಕಾಯಗಳಿಗೂ ಅನ್ವಯಿಸಿ  ನೋಡುತ್ತಾನೆ. ಅವನ ಈ ಲೆಕ್ಕಾಚಾರಗಳು ಸರಿ ಎಂದು ಪರೀಕ್ಷಿಸಿಕೊಂಡ ನಂತರ ಅವನ ಈ ಫಲಿತಾಂಶಗಳನ್ನು ಸೇರಿಸಿ ತನ್ನ ‘ಸಾರ್ವತ್ರಿಕ  ಗುರುತ್ವಾಕರ್ಷಣಾ ನಿಯಮ’ವನ್ನು ಮಂಡಿಸುತ್ತಾನೆ. ಅದರ ಪ್ರಕಾರ ವಿಶ್ವದಲ್ಲಿ ದ್ರವ್ಯರಾಶಿ(ತೂಕವೆಂದು ಅಂದಾಜಿಸಿಕೊಳ್ಳಬಹುದಾದರೂ ತೂಕವಲ್ಲ) ಯನ್ನು ಹೊಂದಿರುವ ಪ್ರತಿಯೊಂದು ಕಾಯವು/ ವಸ್ತುವು, ದ್ರವ್ಯರಾಶಿಯನ್ನು ಹೊಂದಿರುವ ಪ್ರತೀ ಮತ್ತೊಂದು ಕಾಯ/ ವಸ್ತುವನ್ನು ‘ ಗುರುತ್ವಾಕರ್ಷಣ ಬಲ’ ದಿಂದ ಆಕರ್ಷಿಸುತ್ತದೆ ಹಾಗು ಆ ಬಲವು ಎರೆಡೂ ದ್ರವ್ಯರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿಯೂ ಹಾಗೂ ಅವುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ’. ಸರಳವಾಗಿ ‘ಅಂತರವನ್ನು ಬದಲಾಯಿಸದೆ, ವಸ್ತುಗಳ ದ್ರವ್ಯರಾಶಿ ಹೆಚ್ಚಾದರೆ ಗುರುತ್ವಬಲ ಹೆಚ್ಚಾಗುತ್ತದೆ ; ದ್ರವ್ಯರಾಶಿಗಳು ಬದಲಾಗದೆ ಅಂತರ ಹೆಚ್ಚಾದರೆ ಗುರುತ್ವಬಲ ಕಡಿಮೆಯಾಗುತ್ತದೆ’ ಎಂದು ಹೇಳಬಹುದು.

ಒಟ್ಟಾರೆ ವಿಶ್ವದಲ್ಲಿ ದ್ರವ್ಯರಾಶಿ ಇರುವ ವಸ್ತುಗಳು ಪರಸ್ಪರ ಒಂದನ್ನೊಂದು ಆಕರ್ಷಿಸುತ್ತವೆಯೆಂದರೆ ಇದಕ್ಕೆ ಕಾರಣ ಗುರುತ್ವಾಕರ್ಷಣ ಶಕ್ತಿ. ಮಹಿಳಾ ಕಾಲೇಜುಗಳ ಮುಂದೆ ಹುಡುಗರು ನಿಲ್ಲುತ್ತಾರಲ್ಲಾ…! ಖಂಡಿತವಾಗಿಯೂ ಆ ಆಕರ್ಷಣೆ ಗುರುತ್ವಾಕರ್ಷಣೆಯಲ್ಲ. ಆದರೂ ಆ ಗಂಡು ಮತ್ತು ಹೆಣ್ಣು ಶರೀರಗಳಿಗೂ ದ್ರವ್ಯರಾಶಿ ಇರುವುದರಿಂದ ಗುರುತ್ವಾಕರ್ಷಣೆ ಇರಬೇಕಲ್ಲವೇ ? ಹೌದಲ್ಲಾ… ನ್ಯೂಟನ್ ಇದರ ಬಗ್ಗೆ ಹೇಳಲಿಲ್ಲವೇ.. ಎಂದು ಯೋಚಿಸುತ್ತಿದ್ದೀರಾ, ಖಂಡಿತಾ ಹೇಳಿದ್ದಾನೆ ಅವರುಗಳ ಮಧ್ಯೆ, ನಮ್ಮ ನಿಮ್ಮೆಲ್ಲರ ಮಧ್ಯೆಯೂ ಗುರುತ್ವ ಬಲವಿದೆ ಆದರೆ ಅದರ ಪರಿಮಾಣ ತುಂಬಾ ಕಮ್ಮಿಯಾಗಿರುತ್ತದೆ. (ನಮ್ಮ ಕೈ ಮೇಲೆ ಸೊಳ್ಳೆ ಕೂತಾಗ ಭಾರವಾಗುತ್ತದಲ್ಲಾ ಅಷ್ಟು) ಆದ್ದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ. ಆದರೆ ಭೂಮಿಯ ದ್ರವ್ಯರಾಶಿಗೆ ಸರಿಸಮನಾದ ಗುರುತ್ವಬಲ ನಿಮ್ಮ ಜೊತೆ ಎಷ್ಟಿರುತ್ತದೆ ಗೊತ್ತೇ? ಜಾರಿ ಬಿದ್ದಾಗ ನೋವಾಗುತ್ತದಲ್ಲ ಅಷ್ಟು….! ಇನ್ನು ಮರದಲ್ಲಿರುವ ತೆಂಗಿನಕಾಯಿ ಮತ್ತು ಭೂಮಿಯ ಮಧ್ಯೆ ಗುರುತ್ವ ಬಲ ಎಷ್ಟಿರುತ್ತದೆ ಎಂದರೆ ಕಾಯಿ ಬೀಳುವಾಗ ಅದರಡಿಗೆ ನಿಂತಿದ್ದವರನ್ನು ಕೇಳಿನೋಡಿ.

ಈಗ ಗುರುತ್ವ ಬಲದ ಬಗ್ಗೆ ನಿಮಗೊಂದು ಅಂದಾಜು ಸಿಕ್ಕಿದೆ ಅಂದುಕೊಳ್ಳೋಣ. ಇಂತಹ ಬಲದ ಪರಿಣಾಮದಿಂದಲೇ ಚಂದ್ರ ಭೂಮಿಯನ್ನು, ಭೂಮಿ ಸೂರ್ಯನನ್ನು ಸುತ್ತುತ್ತಿರುವುದು ಹಾಗೆಯೇ ಉಳಿದ ಗ್ರಹಗಳು ಧೂಮ ಕೇತುಗಳು ಸೂರ್ಯನನ್ನು ಸುತ್ತುತ್ತಿರುವುದು ಸೂರ್ಯನ ಅಗಾಧ ಗುರುತ್ವ ಬಲಕ್ಕೆ ಎಲ್ಲಾ ಗ್ರಹಗಳೂ ಒಳಪಟ್ಟು ನಮ್ಮ ಸೌರವ್ಯೂಹವನ್ನು ರಚಿಸಿವೆ. ಇನ್ನು ಕೆಲವು ಗ್ರಹಗಲು ತಮ್ಮ ಬಲ ತೋರಿಸಲು ಕೆಲವು ಉಪಗ್ರಹಗಳು  ತಮ್ಮನ್ನು ಸುತ್ತುವಂತೆ ಮಾಡಿಕೊಂಡಿವೆ. ಸಣ್ಣ ಸಣ್ಣ ಕಣಗಳಿಂದ ದೈತ್ಯ ಕಾಯಗಳವರೆಗೂ ಸಾರ್ವತ್ರಿಕವಾಗಿ ಗುರುತ್ವ ನಿಯಮ ಅನ್ವಯವಾಗುತ್ತದೆ. ಇವೆಲ್ಲವನ್ನೂ ನ್ಯೂಟನ್ ತನ್ನ ‘ನೈಸರ್ಗಿಕ ತತ್ವಶಾಸ್ತ್ರದ ಗಣಿತೀಯ ನಿಯಮಗಳು’ ಎಂಬ ಗ್ರಂಥದಲ್ಲಿ ಬರೆದಿದ್ದಾನೆ. ಸಂಕ್ಷಿಪ್ತವಾಗಿ ಅದನ್ನು ‘ಪ್ರಿನ್ಸಿಪಿಯಾ’ ಎಂದೂ ಕರೆಯುತ್ತಾರೆ. ಹೀಗೆ ಒಂದು ಸೇಬುಹಣ್ಣಿನ ಕಥೆ ವಿಶ್ವದ ರೂಪ ರಚನೆಯ ನಿಗೂಢತೆಯನ್ನು ಬಯಲಿಗೆಳೆದಿದೆ ಎಂದರೆ ತಪ್ಪಾಗಲಾರದೇನೋ…! ಈ ಗುರುತ್ವಾಕರ್ಷಣ ಶಕ್ತಿ ನಮ್ಮ ನಿಜ ಜೀವನದಲ್ಲಿ ಹೇಗೆಲ್ಲಾ ಆಟವಾಡುತ್ತದೆ ಎಂಬುದನ್ನ ತಿಳಿದುಕೊಳ್ಳೋಣ, ಮುಂದಿನ ಲೇಖನದಲ್ಲಿ .

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x