ಉರ್ದು, ಅರೇಬಿಕ್ ಹಾಗೂ ಪರ್ಷಿಯನ್ ಗಜಲ್ ಕಾವ್ಯ ಮತ್ತು ಹಲವು ಪ್ರಕಾರದ ಸೂಫಿ ಕಾವ್ಯಗಳು ಮೂಲದಲ್ಲಿ ಪ್ರೇಮ ಕಾವ್ಯಗಳೇ. ಅನೇಕ ಸೂಫಿಗಳು ಬರೆದಿರುವುದು ಗಜಲ್ ಪ್ರಕಾರದಲ್ಲೇ. ಕೆಲವು ಸೂಫಿಗಳು ' ಮಸನವಿ ' ಅಂದರೆ ದ್ವಿಪದಿಯಂಥ ರಚನೆಗಳನ್ನು ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಸೂಫಿಯನ್ನು ಪ್ರೇಮ ಕಾವ್ಯ ಎಂದು ಅರ್ಥೈಸುವಲ್ಲಿ ಅವರ ಪ್ರೇಮದ ತೀವ್ರ ಒಡನಾಟವಿರುವುದು ಬೇರಾರ ಮೇಲು ಅಲ್ಲಾ ಅದು ಸ್ವತಃ ಅವರ ಆರಾಧ್ಯ ದೈವ ಅಲ್ಲಾಹನ ಮೇಲೆಯೇ . ಹೀಗೆ ಸೂಫಿಯಲ್ಲಿ ಅಲ್ಲಾಹನ ಬಗೆಗಿನ ಪ್ರೇಮವೇ ತುಂಬಿಕೊಂಡಿದೆ. ಅಲ್ಲಾಹನ ಕುರಿತ ತಮ್ಮ ಪ್ರೇಮವನ್ನು ವ್ಯಕ್ತಪಡಿಸಲು ಸೂಫಿಗಳು ಚಾಲ್ತಿಯಲ್ಲಿದ್ದ ಗಜಲ್ ಹಾಗೂ ಮಸನವಿಯನ್ನು ತಮ್ಮ ಕಾವ್ಯದಲ್ಲಿ ಬಳಸಬೇಕಾಯಿತು. ಸೂಫಿಗಳು ಈ ಬಗೆಯ ಪ್ರೀತಿಯನ್ನು ವ್ಯಕ್ತಪಡಿಸುವಾಗ ಮಾನವ ಸಂಭಂಧಿ ಪಾರಿಭಾಷಿಕ ಪದಗಳನ್ನೇ ಬಳಸಬೇಕಾದ ಅನಿವಾರ್ಯತೆ ಉಂಟಾಯಿತು ಕಾರಣ ಮನುಷ್ಯ ಜಾತಿಯ ಇತಿಮಿತಿಗಳು. ಅಲ್ಲಾಹನು ಗ್ರಹಿಕೆಗೆ ಮೀರಿದವನು ಅವನನ್ನು ಮಾನವನೊಂದಿಗೆ ಹೋಲಿಸುವಂತಿರಲಿಲ್ಲವಾದರೂ ಅಲ್ಲಾಹನನ್ನು ಮಾನವ ರೂಪದಲ್ಲಿ ಮೂರ್ತಿಕರಿಸಲಾಯಿತು ಎಲ್ಲಕ್ಕೂ ಈ ಮೇಲೆ ಹೇಳಿದಂತೆ ಮಾನವ ಇತಿಮಿತಿಗಳೇ ಕಾರಣವಾದವು.
ಮೊದಲೇ ಸೂಫಿಗಳು ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದರು. ಅಲ್ಲಾಹನ ಸ್ಮರನೆಯಲ್ಲಿ ತೊಡಗಿ ಆಧ್ಯಾತ್ಮದ ಕುರಿತು ಚಿಂತಿಸುತ್ತಾ ಕಾಲ ಕಳೆಯಬಯಸಿದವರು. ಸೂಫಿಗಳಿಗೂ ಮತ್ತು ಇಸ್ಲಾಂ'ನ ದೈವಶಾಸ್ತ್ರಜ್ಞರ ಅಲ್ಲಾಹನ ಪರಿಕಲ್ಪನೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಒಂದೆಡೆ ಸೂಫಿಗಳು ಅಲ್ಲಾಹನ ಪ್ರೇಮಕ್ಕೆ ಒತ್ತು ಕೊಟ್ಟರೆ, ದೈವಶಾಸ್ತ್ರಜ್ಞರ ಅಲ್ಲಾಹನ ಪರಿಕಲ್ಪನೆಗೆ ಭಯವೇ ಮೂಲ. ಕುರ್ಆನ್ ನಿಜಕ್ಕೂ ಅಲ್ಲಾಹ್'ನ ಬಗೆಗಿನ ಪ್ರೇಮ ಮತ್ತು ಭಯ ಇವೆರಡೂ ತರನಾದ ಸೂಕ್ತಿಗಳನ್ನೊಳಗೊಂಡಿದೆ. ಸುಪ್ರಸಿದ್ಧ ಮಹಿಳಾ ಸೂಫಿ " ರಾಬಿಯಾ ಬಸ್ರಿ " ಬಗೆಗಿನ ಒಂದು ಕಥೆ ಹೀಗಿದೆ. ಒಂದು ದಿನ ಕೈಯಲ್ಲಿ ನೀರು ತುಂಬಿದ ಬಕೇಟ್ ಮತ್ತು ಇನ್ನೊಂದು ಕೈಯಲ್ಲಿ ಪಂಜು ಹಿಡಿದುಕೊಂಡು ಹೊರಟಿದ್ದಳು. ಇವಳನ್ನು ನೋಡಿದ ಒಬ್ಬ ವ್ಯಕ್ತಿ ಯಾಕೆ ನೀರು ತುಂಬಿದ ಬಕೇಟು ಹಾಗೂ ಪಂಜು ಹಿಡಿದು ಹೊರಟಿದ್ದೀಯಾ ಎಂದು ಕೇಳುತ್ತಾನೆ. ಅದಕ್ಕೆ ಅವಳು ಉತ್ತರ ಎಂಬಂತೆ : ಜನಾ ನರಕದ ಬೆಂಕಿಯ ಭಯದಿಂದಾಗಿ ಅಲ್ಲಾಹನನ್ನು ಆರಾಧಿಸುವಂತಾಗಬಾರದೆಂದು ನಾನು ನರಕದ ಬೆಂಕಿಯನ್ನು ಈ ನೀರಿನಿಂದ ನಂದಿಸಬಯಸಿದ್ದೇನೆ, ಹಾಗೆ ಸ್ವರ್ಗದ ದುರಾಸೆಯಿಂದ ಜನ ಅಲ್ಲಾಹನನ್ನು ಆರಾಧಿಸುವಂತಾಗಬಾರದೆಂದು ನಾನು ಸ್ವರ್ಗಕ್ಕೆ ಬೆಂಕಿ ಹಚ್ಚಬೇಕೆಂದಿದ್ದೇನೆ ಎನ್ನುತ್ತಾಳೆ. ಅಲ್ಲಾಹ್'ನ ಬಗೆಗಿನ ಶುದ್ಧ ಪ್ರೀತಿಯಿಂದ ಮಾತ್ರ ಅವನನ್ನು ಆರಾಧಿಸಬೇಕೆ ವಿನಾ ಭಯಕ್ಕಾಗಿಯೋ ಮತ್ಯಾವುದಕ್ಕಾಗಿಯೋ ಅಲ್ಲ ಎನ್ನುವುದೇ ಸಂದೇಶವಾಗಿತ್ತು. ಇಸ್ಲಾಮಿಕ್ ನಾಗರೀಕತೆ ಅತ್ಯಂತ ಭವ್ಯವಾದದ್ದು ಅದು ತನ್ನೊಳಗೆ ಹಲವಾರು ಜೀವಸೆಲೆಗಳನ್ನು ಹೊಂದಿದೆ. ದುರದೃಷ್ಟವಶಾತ್ ಇಂದು ಮುಸಲ್ಮಾನರ ಒಂದು ಸಮೂಹ ಹಾಗೂ ಪಾಶ್ಚಾತ್ಯ ಶಕ್ತಿಗಳ ನಡುವಣ ರಾಜಕೀಯ ಕಲಹಗಳಿಂದಾಗಿ ಹಿಂಸೆ ಮತ್ತು ಭಯವನ್ನು ಇಸ್ಲಾಮಿನೊಡನೆ ತಳುಕು ಹಾಕುವ ಸ್ಥಿತಿ ಒದಗಿದೆ. ಈ ಒಂದೇ ಆಯಾಮದ ಗ್ರಹಿಕೆಯಿಂದ ಇಸ್ಲಾಮಿನ ಭವ್ಯ ಲೋಕವನ್ನು ಅರ್ಧೈಸುವಲ್ಲಿ ಭಾರೀ ಅನಾಹುತ ಉಂಟಾಗಿದೆ. ಪ್ರೋ. ಹಂಟಿಂಗ್ಟನ್ ರಂಥ ವಿದ್ವಾಂಸರು" ಕ್ಲಾಶ್ ಆಫ್ ಸಿವಿಲೈಜೇಶನ್ಸ " ಎನ್ನುವ ಪುಸ್ತಕದ ಮೂಲಕ ಒಂದೇ ಆಯಾಮದ ಇಸ್ಲಾಮನ್ನು ರೂಪಿಸಿ ಹಿಂಸೆ ಮತ್ತು ಭಯವನ್ನು ಸೃಷ್ಟಿಸುವ ಇಸ್ಲಾಮನ್ನು ಖಂಡನಾರ್ಹಗೊಳಿಸಿದ್ದಾರೆ. ಇಸ್ಲಾಮಿನ ಇತರ ಮಗ್ಗುಲಗಳ ಮೇಲೆ ಬೆಳಕು ಚೆಲ್ಲುವುದು ಅವಶ್ಯವಾಗಿದೆ ಹಾಗೆ ರಾಜಕೀಯ ಇಸ್ಲಾಂ ಗುಂಗಿನಿಂದ ನಾವು ಆಚೆಬರಬೇಕಿದೆ.
ಉತ್ತಮ ಲೇಖನ ಕೃಷ್ಣ
ಓದಿದೆ …. ಚೆನ್ನಾಗಿ ಬರೆದಿದ್ದೀರಿ