೧. ಹಂಡೆ ಸತ್ತಿದೆ
ಕೋಜಿಯಾ ಒಂದು ದಿನ ಕಂಚುಗಾರನಿಂದ ಹಂಡೆಯೊಂದನ್ನು ಎರವಲು ಪಡೆದು ಮನೆಗೆ ಒಯ್ದನು. ಮರುದಿನ ಅದರೊಳಗೆ ದುಂಡನೆಯ ಪುಟ್ಟ ಬೋಗುಣಿಯೊಂದನ್ನು ಹಾಕಿ ಹಿಂದಿರುಗಿಸಿದ. ಮಾಲಿಕ ಹಂಡೆಯೊಳಗಿದ್ದ ಪುಟ್ಟ ಬೋಗುಣಿಯನ್ನು ತೋರಿಸಿ ಕೇಳಿದ, “ಇದೇನು?”
ಅದನ್ನು ನೋಡಿದ ಕೋಜಿಯಾ ಉದ್ಗರಿಸಿದ, “ಇದೇನು? ಹಂಡೆ ಒಂದು ಮರಿ ಹಾಕಿದೆ!”. ಮಾಲಿಕ ಬೋಗುಣಿಯನ್ನೂ ಹಂಡೆಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡ.
ಇನ್ನೊಂದು ದಿನ ಕೋಜಿಯಾ ಪುನಃ ಹಂಡೆಯನ್ನು ಎರವಲು ಪಡೆದು ಮನೆಗೆ ಒಯ್ದ. ಐದು ದಿನಗಳಾದರೂ ಅದನ್ನು ಕೋಜಿಯಾ ಹಿಂದಿರುಗಿಸದೇ ಇದ್ದದ್ದರಿಂದ ಮಾಲಿಕ ಅವನ ಮನೆಗೇ ಹೋಗಿ ಬಾಗಿಲು ತಟ್ಟಿದ.
ಬಾಗಿಲು ತೆರೆದು ಮಾಲಿಕನನ್ನು ನೋಡಿ ಕೋಜಿಯಾ ಕೇಳಿದ, “ನಿನಗೇನು ಬೇಕು?”
ಮಾಲಿಕ ಹೇಳಿದ, “ಹಂಡೆ”
ಕೋಜಿಯಾ ಉದ್ಗರಿಸಿದ, “ಓ ಹಂಡೆಯೋ. ಕ್ಷಮಿಸು, ಅದು ಸತ್ತು ಹೋಯಿತು”
ಮಾಲಿಕ ಕೇಳಿದ, “ಅಯ್ಯಾ ಕೋಜಿಯಾ, ಹಂಡೆ ಸಾಯುತ್ತದೆಯೇ?”
ಕೋಜಿಯಾ ಉತ್ತರಿಸಿದ, “ಹಂಡೆ ಮರಿ ಹಾಕಿತು ಎಂಬುದಾಗಿ ಹೇಳಿದ್ದನ್ನು ನೀನು ನಂಬಿದೆ. ಅಂದ ಮೇಲೆ ಅದು ಸತ್ತಿತು ಅನ್ನುವುದನ್ನು ಏಕೆ ನಂಬುವುದಿಲ್ಲ?”
*****
೨. ಭವ್ಯವಾದ ನೀಳ ಮೇಲಂಗಿ
ಒಂದು ದಿನ ಸನ್ಮಾನ್ಯ ಕೋಜಿಯಾ ವಿವಾಹ ಸಮಾರಂಭವೊಂದಕ್ಕೆ ಹೋದ. ಅವನು ಧರಿಸಿದ್ದ ಶೋಚನೀಯ ಸ್ಥಿತಿಯಲ್ಲಿ ಇದ್ದ ಹಳೆಯ ಉಡುಪನ್ನು ಗಮನಿಸಿದ ಅತಿಥೇಯ ಕೋಜಿಯಾನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ. ತನ್ನನ್ನು ಸತ್ಕರಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದನ್ನು ಮನಗಂಡ ಕೋಜಿಯಾ ಬಲು ವೇಗವಾಗಿ ತನ್ನ ಮನೆಗೆ ತೆರಳಿ ಭವ್ಯವಾದ ನೀಳ ನಿಲುವಂಗಿಯನ್ನು ಧರಿಸಿ ಸಮಾರಂಭಕ್ಕೆ ಹಿಂದಿರುಗಿದ. ಅವನು ಸಭಾಂಗಣವನ್ನು ಪ್ರವೇಶಿಸಿದ ತಕ್ಷಣವೇ ಅತಿಥೇಯ ಮಹಾಶಯ ಅವನನ್ನು ಬಲು ಗೌರವದಿಂದ “ಸನ್ಮಾನ್ಯ ಕೋಜಿಯಾರವರಿಗೆ ಸ್ವಾಗತ, ಸುಸ್ವಾಗತ” ಅನ್ನುತ್ತಾ ಸ್ವಾಗತಿಸಿ ಕರೆದೊಯ್ದು ಭೋಜನ ಮಾಡುವ ಮೇಜಿನ ಅಗ್ರಸ್ಥಾನದಲ್ಲಿ ಕುಳ್ಳಿರಿಸಿ “ಘನತೆವೆತ್ತ ಕೋಜಿಯಾರವರು ಭೋಜನ ಸ್ವೀಕರಿಸಬೇಕು” ಎಂಬುದಾಗಿ ವಿನಂತಿಸಿದನು. ತಕ್ಷಣವೇ ತನ್ನ ಭವ್ಯವಾದ ನೀಳ ನಿಲುವಂಗಿಯ ತುಪ್ಪಳದಿಂದ ಮಾಡಿದ್ದ ಅಂಚುಪಟ್ಟಿಯನ್ನು ಮೇಲೆತ್ತಿ ಹಿಡಿದು ಹೇಳಿದ, “ ಸುಸ್ವಾಗತ, ನನ್ನ ನಿಲುವಂಗಿಯೇ. ಘನತೆವೆತ್ತ ನಿಲುವಂಗಿಯೇ ಭೊಜನವನ್ನು ಸ್ವೀಕರಿಸಿ!”
ಆಶ್ಚರ್ಯಚಕಿತನಾದ ಅತಿಥೇಯ ಕೇಳಿದ, “ ಏನು ಇದರ ಅರ್ಥ?”
ಕೋಜಿಯಾ ಉತ್ತರಿಸಿದ, “ನೀವು ಗೌರವ ಸಲ್ಲಿಸಿದ್ದು ನನ್ನ ನಿಲುವಂಗಿಗೆ ಎಂಬುದು ಖಾತರಿ. ಆದ್ದರಿಂದ ಅದೂ ಸ್ವಲ್ಪ ಆಹಾರ ಸೇವಿಸಲಿ!”
*****
೩. ನಂಬಿಕೆಯ ಪ್ರಶ್ನೆ
ಒಂದು ದಿನ ಒಬ್ಬಾತ ಕೋಜಿಯಾನ ಮನೆಗೆ ಬಂದು ಅವನ ಕತ್ತೆಯನ್ನು ತನಗೆ ಎರವಲು ನೀಡುವಂತೆ ಕೋರಿದ.
ಕೋಜಿಯಾ ಹೇಳಿದ, “ಕತ್ತೆ ಮನೆಯಲ್ಲಿಲ್ಲ.”
ಆ ವೇಳೆಗೆ ಸರಿಯಾಗಿ ಒಳಗಿದ್ದ ಕತ್ತೆ ಅರಚಲಾರಂಭಿಸಿತು
ಬಂದಾತ ಹೇಳಿದ, “ಸನ್ಮಾನ್ಯ ಕೋಜಿಯಾರವರೇ ಕತ್ತೆ ಮನೆಯಲಿಲ್ಲ ಎಂಬುದಾಗಿ ನೀವು ಹೇಳುತ್ತಿದ್ದೀರಿ, ಒಳಗಿನಿಂದ ಕತ್ತೆಯ ಅರಚುವಿಕೆ ಕೇಳಿಸುತ್ತಿದೆ.”
ಕೋಜಿಯಾ ಹೇಳಿದ, “ಎಂಥ ವಿಚಿತ್ರ ಮನುಷ್ಯ ನೀನು! ಕತ್ತೆಯನ್ನು ನೀನು ನಂಬುತ್ತಿರುವೆ, ನರೆತ ಗಡ್ಡದ ನನ್ನಂಥವನ ಮಾತನ್ನು ನಂಬುತ್ತಿಲ್ಲ!”
*****
೪. ಕೋಜಿಯಾನ ದೊಗಲೆ ನಿಲುವಂಗಿ
ಕೋಜಿಯಾನ ಹೆಂಡತಿ ಅವನ ದೊಗಲೆ ನಿಲುವಂಗಿಯನ್ನು ಒಗೆದು ಒಣಗಿಸಲೋಸುಗ ಅದನ್ನು ಅಲ್ಲಿಯೇ ಇದ್ದ ಮರದಲ್ಲಿ ಒಂದು ದಿನ ತೂಗುಬಿಟ್ಟಳು. ಹೊರಗೆಲ್ಲಿಗೋ ಹೊರಟಿದ್ದ ಕೋಜಿಯಾನಿಗೆ ಅದು ಮರದ ಮೇಲೆ ಒಬ್ಬ ಮನುಷ್ಯ ಕೈಗಳನ್ನು ಅಗಲಕ್ಕೆ ಚಾಚಿಕೊಂಡು ನಿಂತಿರುವಂತೆ ಕಂಡಿತು. ಕೋಜಿಯಾ ತಕ್ಷಣ ತನ್ನ ಹೆಂಡತಿಯನ್ನು ಕರೆದು ಹೇಳಿದ, “ಬೇಗ ಹೋಗಿ ನನ್ನ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಬಾ.” ಅವನ ಹೆಂಡತಿ ಅಂತೆಯೇ ಮಾಡಿದಳು. ಕೋಜಿಯಾ ದೊಗಲೆ ನಿಲುವಂಗಿಗೆ ಚುಚ್ಚುವಂತೆ ಒಂದು ಬಾಣ ಬಿಟ್ಟು ಅದನ್ನು ನೆಲಕ್ಕೆ ಬೀಳಿಸಿದ. ತದನಂತರ ಒಳಬಂದು ಬಾಗಿಲನ್ನ ಭದ್ರವಾಗಿ ಹಾಕಿ ಮಲಗಿ ನಿದ್ದೆ ಮಾಡಿದ. ಮಾರನೆಯ ದಿನ ಬೆಳಗ್ಗೆ ಅವನು ಹೊರಬಂದಾಗ ತನ್ನ ದೊಗಲೆ ನಿಲುವಂಗಿಗೆ ತಾನೇ ಬಾಣ ಹೊಡೆದು ಬೀಳಿಸಿದ ವಿಷಯ ಅವನ ಅರಿವಿಗೆ ಬಂದಿತು. ಆ ತಕ್ಷಣ ನೆಲದಲ್ಲಿ ಕುಳಿತು ಅವನು ಜೋರಾಗಿ ಹೇಳಿದ, “ಓ ದೇವರೇ ನಿನಗೆ ಧನ್ಯವಾದಗಳು. ಆ ಅಂಗಿಯೊಳಗೆ ನಾನೇನಾದರೂ ಇದ್ದಿದ್ದರೆ ಖಂಡಿತ ಸಾಯುತ್ತಿದ್ದೆ.”
*****
೫. ಸ್ವರ್ಗದ ಹಣ್ಣು
ಹಿಂದೊಂದು ಕಾಲದಲ್ಲಿ ಸ್ವರ್ಗದ ಹಣ್ಣಿನ ಕುರಿತು ಕೇಳಿದಾಕೆ ಒಬ್ಬಳು ಇದ್ದಳು. ಅದನ್ನು ಪಡೆಯಬೇಕೆಂಬ ಬಯಕೆ ಅವಳಲ್ಲಿ ಮೂಡಿತ್ತು. ಸಬರ್ ಎಂಬ ಫಕೀರನನ್ನು ಆಕೆ ಕೇಳಿದಳು, “ಸ್ವರ್ಗದ ಹಣ್ಣು ನನಗೆ ಎಲ್ಲಿ ಸಿಕ್ಕೀತು? ಏಕೆಂದರೆ ಅದು ಸಿಕ್ಕಿದ ತಕ್ಷಣ ನಾನು ಜ್ಞಾನಿಯಾಗುತ್ತೇನೆ.” ಆ ಫಕೀರ ಹೇಳಿದ, “ನೀನು ನನ್ನೊಂದಿಗೆ ಅಧ್ಯಯನ ಮಾಡುವುದು ಅತ್ಯುತ್ತಮ. ಅಂತು ಮಾಡಲು ಸಾಧ್ಯವಿಲ್ಲದಿದ್ದರೆ ದೃಢನಿಶ್ಚಯದಿಂದ, ಕೆಲವೊಮ್ಮೆ ವಿಶ್ರಾಂತಿ ಇಲ್ಲದೆಯೇ ಈ ಭೂಮಂಡಲದಾದ್ಯಂತ ಪಯಣಿಸಬೇಕು.” ಅವಳು ಅವನನ್ನು ಬಿಟ್ಟು ಬೇರೆ ಮಾರ್ಗದರ್ಶಕರನ್ನು ಹುಡುಕಿಕೊಂಡು ಹೊರಟಳು. ವಿವೇಕಿ ಆರಿಫ್, ಮಹಾಪ್ರಾಜ್ಞ ಹಕೀಮ್, ಹುಚ್ಚ ಮ್ಯಾಝಪ್, ವಿಜ್ಞಾನಿ ಅಲೀಮ್ ಇವರೇ ಮೊದಲಾಗಿ ಇನ್ನೂ ಅನೇಕರನ್ನು ಭೇಟಿ ಮಾಡಿದಳು. ಈ ಹುಡುಕಾಟದಲ್ಲಿ ೩೦ ವರ್ಷಗಳನ್ನು ಕಳೆದಳು. ಕೊನೆಯಲ್ಲಿ ಒಂದು ದಿನ ಆಕೆ ತೋಟವೊಂದನ್ನು ಪ್ರವೇಶಿಸಿದಳು. ಅಲ್ಲಿತ್ತು ಸ್ವರ್ಗದ ಮರ. ಅದರ ಕೊಂಬೆಗಳಿಂದ ಸ್ವರ್ಗದ ಹಣ್ಣುಗಳು ನೇತಾಡುತ್ತಿದ್ದವು. ಆಕೆ ಮೊದಲು ಭೇಟಿ ಮಾಡಿದ ಫಕೀರ ಸಬರ್ ಆ ಮರದ ಪಕ್ಕದಲ್ಲಿ ನಿಂತಿದ್ದ. ಅವಳು ಕೇಳಿದಳು, “ಮೊದಲ ಸಲ ಭೇಟಿಯಾದಾಗ ’ನಾನೇ ಆ ಮರದ ಸಂರಕ್ಷಕ’ ಎಂಬ ವಿಷಯವನ್ನು ನನಗೇಕೆ ಹೇಳಲಿಲ್ಲ?”
ಅವನು ಉತ್ತರಿಸಿದ, “ಏಕೆಂದರೆ ನೀನು ಅದನ್ನು ನಂಬುತ್ತಿರಲಿಲ್ಲ. ಅಷ್ಟೇ ಅಲ್ಲದೆ ಈ ಮರ ೩೦ ವರ್ಷ ೩೦ ದಿನಗಳಿಗೆ ಒಂದು ಸಲ ಮಾತ್ರ ಫಲ ನೀಡುತ್ತದೆ.”
*****