೧. ಮೊಳೆ
ಒಂದು ಮೊಳೆ ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸಂಭಾಷಣೆ ಇಂತಿದೆ:
ಮೊಳೆ: “ಅನೇಕ ವರ್ಷಗಳಿಂದ ಈ ಫಲಕಕ್ಕೆ ಅಂಟಿಕೊಂಡಿರುವ ನಾನು ಭವಿಷ್ಯದಲ್ಲಿ ನನಗೆ ಏನಾಗಬಹುದೆಂಬುದರ ಕುರಿತು ಅನೇಕ ಸಲ ಕುತೂಹಲದಿಂದ ಆಲೋಚಿಸಿದ್ದೇನೆ.”
ಮನುಷ್ಯ: “ನೀನು ಈಗ ಇರುವ ಸನ್ನಿವೇಶದಲ್ಲಿ ಅನೇಕ ಸಾಧ್ಯತೆಗಳು ಹುದುಗಿವೆ. ಯಾರಾದರು ಚಿಮುಟದಿಂದ ನಿನ್ನನ್ನು ಎಳೆದು ಹಾಕಬಹುದು, ನೀನಿರುವ ಫಲಕ ಸುಟ್ಟು ಹೋಗಬಹುದು, ನೀನಿರುವ ಫಲಕವನ್ನು ಹುಳು ತಿನ್ನಬಹುದು – ಹೀಗೆ ಅನೇಕ ಸಾಧ್ಯತೆಗಳಿವೆ.
ಮೊಳೆ: “ಇಂಥ ಮೂರ್ಖ ಪ್ರಶ್ನೆಗಳನ್ನು ಕೇಳಬಾರದೆಂಬ ವಿವೇಕ ನನ್ನಲ್ಲಿ ಇರಬೇಕಾಗಿತ್ತು! ಸಾಧ್ಯತೆಗಳು ಅನೇಕವಿರಲಿ, ಅವುಗಳ ಪೈಕಿ ಹೆಚ್ಚಿನವು ಅಸಂಭಾವ್ಯವಾದವು. ಅದೇನೇ ಇರಲಿ, ಯಾರಿಗೂ ತಮ್ಮ ಭವಿಷ್ಯ ತಿಳಿಯಲು ಸಾಧ್ಯವಿಲ್ಲ,”
ಇಂತು ಸಂಭಾಷಣೆಯನ್ನು ನಿಲ್ಲಿಸಿದ ಆ ಮೊಳೆ ತನ್ನನ್ನು ಹೆದರಿಸದೆಯೇ ಜಾಣತನದಿಂದ ಮಾತನಾಡಬಲ್ಲವರು ಯಾರಾದರೂ ಬರಬಹುದು ಎಂಬ ನಿರೀಕ್ಷೆಯಿಂದ ಕಾಯಲಾರಂಭಿಸಿತು.
*****
೨. ಮನುಷ್ಯ ಮತ್ತು ಹುಲಿ
ಹಸಿದ ಹುಲಿಯೊಂದು ಮನುಷ್ಯನೊಬ್ಬನ ಬೆನ್ನುಹತ್ತಿತ್ತು. ಹತಾಶೆಯಿಂದ ಆತ ಹಿಂದಕ್ಕೆ ತಿರುಗಿ ಹಲಿಗೆ ಮುಖಾಮುಖಿಯಾಠಗಿ ನಿಂತು ಕಿರುಚಿದ, “ನನ್ನನ್ನು ನನ್ನಷ್ಟಕ್ಕೆ ಹೋಗಲು ನೀನೇಕೆ ಬಿಡಬಾರದು?”
ಹುಲಿ ಉತ್ತರಿಸಿತು, “ನೀನು ಹಸಿವುಂಟುಮಾಡುವುದನ್ನು ನಿಲ್ಲಿಸಬಾರದೇಕೆ?”
*****
೩. ಘಾಝ್ನಾದ ಮಹಮದ್
ಒಂದು ದಿನ ಘಾಝ್ನಾದ ಮಹಮದ್ ತನ್ನ ಉದ್ಯಾನವನದಲ್ಲಿ ವಿಹಾರಾರ್ಥ ನಡೆಯುತ್ತಿದ್ದಾಗ ಪೊದೆಯೊಂದರ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಕುರುಡ ಫಕೀರನೊಬ್ಬನನ್ನು ಎಡವಿ ಮುಗ್ಗರಿಸಿದ.
ಫಕೀರನಿಗೆ ಎಚ್ಚರವಾಯಿತು. ತಕ್ಷಣ ಅವನು ಗಟ್ಟಿಯಾಗಿ ಕೂಗಿ ಕೇಳಿದ, “ಏ ಒಡ್ಡೊಡ್ಡಾದ ದಡ್ಡ! ನಿನಗೇನು ಕಣ್ಣುಗಳಿಲ್ಲವೇ? ಮನುಷ್ಯರನ್ನು ತುಳಿಯುತ್ತೀದ್ದೀಯಲ್ಲ?”
ಮಹಮದ್‌ನ ಜೊತೆಯಲ್ಲಿ ಇದ್ದ ಆಸ್ಥಾನಿಕನೊಬ್ಬ ಘರ್ಜಿಸಿದ, “ನಿನ್ನ ಕುರುಡುತನಕ್ಕೆ ತಕ್ಕಂತೆ ಇದೆ ನಿನ್ನ ದಡ್ಡತನ! ನೀನು ನೋಡಲಾರೆಯಾದ್ದರಿಂದ ಯಾರ ಮೇಲಾದರೂ ಅಜಾಗರೂಕತೆಯ ಆಪಾದನೆ ಹೊರಿಸುವ ಮುನ್ನ ಹೆಚ್ಚು ಜಾಗರೂಕತೆಯಿಂದಿರಬೇಕು.”
ಫಕೀರ ಹೇಳಿದ, “ಒಬ್ಬ ಸುಲ್ತಾನನನ್ನು ನಾನು ಠೀಕೆ ಮಾಡಬಾರದು ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ, ನಿಮ್ಮ ಜ್ಞಾನ ಆಳವಾಗಿಲ್ಲದಿರುವ ವಿಷಯದ ಅರಿವು ನಿಮಗೆ ಆಗಬೇಕಿದೆ.”
ತಾನು ಒಬ್ಬ ರಾಜನ ಎದುರು ನಿಂತಿರುವ ವಿಷಯ ಕುರುಡನಿಗೆ ತಿಳಿದಿದೆ ಎಂಬ ಅಂಶವೇ ಮಹಮದ್‌ನ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡಿತು. ಅವನು ಕೇಳಿದ, “ಎಲೈ ಫಕೀರನೇ, ಒಬ್ಬ ರಾಜ ನಿನ್ನ ಬೈಗುಳನ್ನು ಏಕೆ ಕೇಳಬೇಕು?”
ಫಕೀರ ಹೇಳಿದ, “ಕರಾರುವಾಕ್ಕಾಗಿ ಹೇಳುವುದಾದರೆ ಯಾವುದೇ ವರ್ಗದ ಜನ ಅವರಿಗೆ ತಕ್ಕುದಾದ ಠೀಕೆಯಿಂದ ರಕ್ಷಿಸಲ್ಪಟ್ಟಿದ್ದರೆ ಅದೇ ಅವರ ಅವನತಿಗೆ ಕಾರಣವಾಗುತ್ತದೆ. ಉಜ್ಜಿ ಒಪ್ಪಮಾಡಿದ ಲೋಹ ಮಾತ್ರ ಹೊಳೆಯುತ್ತದೆ, ಮಸೆಗಲ್ಲಿಗೆ ಉಜ್ಜಿದ ಚಾಕು ಮಾತ್ರ ಅತ್ಯುತ್ತಮವಾಗಿ ಕತ್ತರಿಸುತ್ತದೆ, ಕಸರತ್ತು ಮಾಡಿದ ಕೈ ಮಾತ್ರ ಭಾರವನ್ನು ಎತ್ತುತ್ತದೆ.”
*****
೪. ನಿಮಗೇನು ಬೇಕಾಗಬಹುದು?
ಒಬ್ಬ ಬೆಡುಇನ್ ಹೆಗಲ ಮೇಲೆ ತೊಗಲಿನ ನೀರಿನ ಚೀಲ ಹೊತ್ತುಕೊಂಡು ತನ್ನ ನಾಯಿಯೊಂದಿಗೆ ಕರುಣಾಜನಕವಾಗಿ ಅಳುತ್ತಾ ಮರುಭೂಮಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ.
ಅಳುತ್ತಿರುವುದು ಏಕೆಂದು ಯಾರೋ ಕೇಳಿದಾಗ ಹೇಳಿದ, “ಏಕೆಂದರೆ, ನನ್ನ ನಾಯಿ ದಾಹದಿಂದ ಸಾಯುತ್ತಿದೆ.”
“ಹಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಏಕೆ ಕೊಡುತ್ತಿಲ್ಲ?” ಎಂಬುದಾಗಿ ಮರುಪ್ರಶ್ನೆ ಹಾಕಿದಾಗ, ಬೆಡುಇನ್ ಉತ್ತರಿಸಿದ, “ಏಕೆಂದರೆ, ನನಗೇ ನೀರು ಬೇಕಾಗಬಹುದು.”
*****
೫. ಸೂಫಿಗಳ ಪ್ರಾರ್ಥನೆ
ಮೊದಲನೆಯ ಸಲ ‘ಅಲ್ಲಾ ಹು ಅಕ್ಬರ್’ ಅಂದಾಗ ಅವರು ಜಗತ್ತನ್ನೂ ಅದರ ನಿವಾಸಿಗಳನ್ನೂ ಮರೆಯುತ್ತಾರೆ.
ಎರಡನೆಯ ಸಲ ‘ಅಲ್ಲಾ ಹು ಅಕ್ಬರ್’ ಅಂದಾಗ ಅವರು ಮುಂದಿನದ್ದನ್ನು/ಪರಲೋಕವನ್ನು ಮರೆಯುತ್ತಾರೆ.
ಮೂರನೆಯ ಸಲ ‘ಅಲ್ಲಾ ಹು ಅಕ್ಬರ್’ ಅಂದಾಗ ಅವರು ದೇವರ ಹೊರತಾಗಿ ಮಿಕ್ಕ ಎಲ್ಲ ಆಲೋಚನೆಗಳನ್ನೂ ತಮ್ಮ ಹೃದಯದಿಂದ ಹೊರಹಾಕುತ್ತಾರೆ.
ನಾಲ್ಕನೆಯ ಸಲ ‘ಅಲ್ಲಾ ಹು ಅಕ್ಬರ್’ ಅಂದಾಗ ಅವರು ತಮ್ಮನ್ನು ತಾವೇ ಮರೆಯುತ್ತಾರೆ.
*****