೧. ಕಪ್ಪೆಗಳು
ಕಪ್ಪೆಗಳ ಗುಂಪೊಂದು ಕಾಡಿನ ಮೂಲಕ ಎಲ್ಲಿಗೋ ಪಯಣಿಸುತ್ತಿದ್ದಾಗ ಅವುಗಳ ಪೈಕಿ ಎರಡು ಕಪ್ಪೆಗಳು ಒಂದು ಆಳವಾದ ಗುಂಡಿಯೊಳಕ್ಕೆ ಬಿದ್ದವು. ಉಳಿದ ಕಪ್ಪೆಗಳು ಗುಂಡಿಯ ಮೇಲೆ ಸುತ್ತಲೂ ನಿಂತು ಗುಂಡಿ ಎಷ್ಟು ಆಳವಿದೆ ಎಂಬುದನ್ನು ಅಂದಾಜಿಸಿದವು. ತದನಂತರ ಗುಂಡಿಯೊಳಕ್ಕೆ ಬಿದ್ದ ದುರದೃಷ್ಟವಂತ ಕಪ್ಪೆಗಳಿಗೆ ಅವು ಎಂದೆಂದಿಗೂ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಿದವು. ಆ ಎರಡು ಕಪ್ಪೆಗಳು ಈ ಹೇಳಿಕೆಯನ್ನು ನಿರ್ಲಕ್ಷಿಸಿ ಗುಂಡಿಯಿಂದ ಹೊರಕ್ಕೆ ಹಾರಲು ಪ್ರಯತ್ನಿಸತೊಡಗಿದವು.
ಆ ಗುಂಡಿಯೊಳಗೇ ಸಾಯುವುದು ಖಚಿತವಾದ್ದರಿಂದ ವೃಥಾ ಶ್ರಮ ಪಟ್ಟು ಹಾರುವುದನ್ನು ನಿಲ್ಲಿಸಿರೆಂದು ಮೇಲಿದ್ದ ಕಪ್ಪೆಗಳು ಮೇಲಿಂದ ಮೇಲೆ ಹೇಳಲಾರಂಭಿಸಿದವು. ಕೊನೆಗೆ ಒಂದು ಕಪ್ಪೆ ಅವುಗಳ ಮಾತಿಗೆ ಮನ್ನಣೆ ನೀಡಿ ಹಾರುವ ಪ್ರಯತ್ನ ನಿಲ್ಲಿಸಿತು. ತತ್ಪರಿಣಾಮವಾಗಿ ಅದು ಕೆಳಗೆ ಬಿದ್ದು ಸತ್ತು ಹೋಯಿತು.
ಇನ್ನೊಂದು ಕಪ್ಪೆ ತನ್ನೆಲ್ಲ ಶಕ್ತಿಯನ್ನೂ ಪ್ರಯೋಗಿಸಿ ಸಾಧ್ಯವಿರುವಷ್ಟೂ ಎತ್ತರಕ್ಕೆ ಹಾರುತ್ತಲೇ ಇತ್ತು. ಉಳಿದ ಕಪ್ಪೆಗಳು ಪುನಃ ಹಾರುವುದನ್ನು ನಿಲ್ಲಿಸಿ ಸಾವನ್ನು ಸ್ವೀಕರಿಸುವಂತೆ ಬೊಬ್ಬೆಹೊಡೆಯತೊಡಗಿದವು. ಆ ಕಪ್ಪೆ ಇನ್ನೂ ಹೆಚ್ಚಿನ ಶಕ್ತಿ ಪ್ರಯೋಗಿಸಿ ಹಾರತೊಡಗಿತು, ಕೊನೆಗೂ ಗುಂಡಿಯಿಂದ ಹೊರಕ್ಕೆ ಹಾರುವುದರಲ್ಲಿ ಯಶಸ್ವಿಯಾಯಿತು.
“ನೀನು ಹಾರುವುದನ್ನು ನಿಲ್ಲಿಸಲಿಲಲ್ಲವೇಕೆ? ನಾವು ಹೇಳಿದ್ದು ಕೇಳಿಸಲಿಲ್ಲವೇ?” ಎಂಬುದಾಗಿ ಕೇಳಿದವು ಉಳಿದ ಕಪ್ಪೆಗಳು.
ತಾನೊಂದು ಕಿವಿಡು ಕಪ್ಪೆ ಎಂಬುದನ್ನು ಅದು ಉಳಿದವಕ್ಕೆ ವಿವರಿಸಿತು. ಹಾರುವಂತೆ ತನ್ನನ್ನು ಉಳಿದ ಕಪ್ಪೆಗಳು ಪ್ರೋತ್ಸಾಹಿಸುತ್ತಿವೆ ಎಂಬುದಾಗಿ ಆ ಕಪ್ಪೆ ಆಲೋಚಿಸಿತ್ತಂತೆ!
*****
೨. ಪಕ್ಷಿಗಳ ಸ್ಪರ್ಧೆ
ವಿಭಿನ್ನ ಪಕ್ಷಿ ಕುಲಗಳ ಪ್ರತಿನಿಧಿಗಳು ಯಾವ ಕುಲದ ಪಕ್ಷಿಗಳು ಅತೀ ಎತ್ತರಕ್ಕೆ ಹಾರಬಲ್ಲವು ಎಂಬುದನ್ನು ಪತ್ತೆಹಚ್ಚಲು ನಿರ್ಧರಿಸಿದವು. ತೀರ್ಪು ನೀಡಲು ಒಂದು ಸಮಿತಿಯನ್ನು ರಚಿಸಲಾಯಿತು. ಸ್ಪರ್ಧೆಗಳು ಆರಂಭವಾದವು. ಹದ್ದು ಒಂದನ್ನು ಬಿಟ್ಟು ಮಿಕ್ಕ ಪಕ್ಷಿಗಳು ಒಂದೊಂದಾಗಿ ಸೋಲನ್ನು ಒಪ್ಪಿಕೊಂಡು ಸ್ಪರ್ಧೆಯಿಂದ ಹಿದೆ ಸರಿದವು. ಹದ್ದು ಮಾತ್ರ ಅದರಿಂದ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಹಾರಿ ಉದ್ಗರಿಸಿತು, “ನೋಡಿ, ನಾನೀಗ ಗರಿಷ್ಠ ಎತ್ತರದಲ್ಲಿದ್ದೇನೆ, ಉಳಿದ ಎಲ್ಲ ಸ್ಪರ್ಧಿಗಳು ಬಲು ಕೆಳಗೇ ಇದ್ದಾರೆ.”
ಆ ಕ್ಷಣದಲ್ಲಿ ಹದ್ದಿಗೆ ತಿಳಿಯದಂತೆ ಅದರ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದ ಪುಟ್ಟ ಗುಬ್ಬಚ್ಚಿಯೊಂದು ತನ್ನ ಶಕ್ತಿಯನ್ನು ಒಂದಿನಿತೂ ವ್ಯಯಿಸದೇ ಇದ್ದದ್ದರಿಂದ ಹದ್ದಿನ ಬೆನ್ನಿನ ಮೇಲಿನಿಂದ ಇನ್ನೂ ಎತ್ತರಕ್ಕೆ ಹಾರಿತು.
ಗೆದ್ದವರು ಯಾರೆಂಬುದನ್ನು ತೀರ್ಮಾನಿಸಲು ತೀರ್ಪುಗಾರರ ಸಮಿತಿ ಸಭೆ ಸೇರಿತು. “ಗುಬ್ಬಚ್ಚಿಗೆ ಒಂದು ಬಹುಮಾನ ಅದರ ಜಾಣತನಕ್ಕಾಗಿ. ಸಾಧನೆಗಾಗಿ ಇರುವ ಬಹುಮಾನ ಹದ್ದಿಗೇ ಸಲ್ಲಬೇಕು. ಗುಬ್ಬಚ್ಚಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಎಲ್ಲರಿಗಿಂತ ಎತ್ತರ ಹಾರಿದ ಹದ್ದಿಗೆ ದೀರ್ಘ ಕಾಲ ಆಯಾಸವನ್ನು ತಡೆದುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಿದ್ದಕ್ಕಾಗಿ ಇನ್ನೂ ಒಂದು ವಿಶೇಷ ಬಹುಮಾನ!” ಎಂಬುದಾಗಿ ಘೋಷಿಸಿತು ಸಮಿತಿ.
*****
೩. ಕೋಡುಗಲ್ಲು
ಹುಲಿಯಂದು ಅಟ್ಟಿಸಿಕೊಂಡು ಬಂದದ್ದರಿಂದ ಒಬ್ಬ ಕೋಡುಗಲ್ಲಿನ ಅಂಚಿನಿಂದ ಕೆಳಕ್ಕೆ ಬಿದ್ದ. ಬೀಳುತ್ತಿರುವಾಗ ಅದೃಷ್ಟವಶಾತ್ ಕೈಗೆ ಸಿಕ್ಕಿದ ಕೊಂಬೆಯೊಂದನ್ನು ಹಿಡಿದು ನೇತಾಡತೊಡಗಿದ. ಅವನಿಂದ ೬ ಅಡಿ ದೂರದಲ್ಲಿ ಮೇಲೆ ಹುಲಿ ಘರ್ಜಿಸುತ್ತಾ ನಿಂತಿತ್ತು. ಕೆಳಗೆ ೧೦೦ ಅಡಿ ದೂರದಲ್ಲಿ ತುಂಬ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಬಂಡೆಗಳಿಗೆ ಪ್ರಕ್ಷುಬ್ದ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದವು. ಅವನು ಹಿಡಿದುಕೊಂಡಿದ್ದ ಕೊಂಬೆಯ ಬುಡವನ್ನು ಎರಡು ಇಲಿಗಳು ಒಂದೇ ಸಮನೆ ಕಡಿಯುತ್ತಿದ್ದದ್ದನ್ನು ಗಮನಿಸಿ ಆತ ಭಯಭೀತನಾದ. ತನ್ನ ಅವಸಾನ ಕಾಲ ಸಮೀಪಿಸುತ್ತಿದೆಯೆಂದು ಭಾವಿಸಿದ ಆತ ಜೋರಾಗಿ ಕಿರುಚಿದ, “ಓ ದೇವರೇ, ನನ್ನನ್ನು ರಕ್ಷಿಸು.”
ತಕ್ಷಣ ಅಶರೀರವಾಣಿಯೊಂದು ಕೇಳಿಸಿತು, “ ಖಂಡಿತ ರಕ್ಷಿಸುತ್ತೇನೆ. ಆದರೆ ಅದಕ್ಕೂ ಮುನ್ನ ಆ ಕೊಂಬೆಯನ್ನು ಬಿಟ್ಟುಬಿಡು.”
*****
೪. ನಾಲ್ಕು ಮಂದಿ ಮತ್ತು ದುಭಾಷಿ
ಬೇರೆ ಬೇರೆ ದೇಶಗಳ ನಾಲ್ಕು ಮಂದಿ. ಒಂದೆಡೆ ಸೇರಿದ್ದಾಗ ಅವರಿಗೆ ಹಣದ ಒಂದು ನಾಣ್ಯ ಸಿಕ್ಕಿತು.
ಅವರ ಪೈಕಿ ಪರ್ಶಿಯಾದವ ಹೇಳಿದ, “ಈ ಹಣದಿಂದ ನಾನು ’ಅಂಗೂರ’ ಕೊಂಡುಕೊಳ್ಳುತ್ತೇನೆ.”
ಅರೇಬಿಯಾದವ ಹೇಳಿದ, “ಬೇಡ, ಏಕೆಂದರೆ ನನಗೆ ಇನಾಬ್ ಬೇಕು.”
ಟರ್ಕಿಯವ ಹೇಳಿದ, “ನನಗೆ ಇನಾಬ್ ಬೇಡ, ಅಝಮ್ ಬೇಕು.”
ಗ್ರೀಸಿನವ ಹೇಳಿದ, “ನನಗೆ ಸ್ಟಫಿಲ್ ಬೇಕು.”
ಪ್ರತಿಯೊಬ್ಬನಿಗೂ ಇನ್ನೊಬ್ಬ ಏನನ್ನು ಬೇಕು ಅಂದದ್ದು ಅರ್ಥವಾಗದ್ದರಿಂದ ಅವರ ನಡುವೆ ಜಗಳ ಶುರುವಾಯಿತು. ಅವರಲ್ಲಿ ಇದ್ದದ್ದು ಮಾಹಿತಿಯೇ ವಿನಾ ಜ್ಞಾನವಲ್ಲ.
ಅಲ್ಲಿ ಯಾರಾದರೊಬ್ಬ ವಿವೇಕಿ ಇದ್ದಿದ್ದರೆ ಇಂತು ಹೇಳಿ ಅವರನ್ನೆಲ್ಲ ಒಗ್ಗೂಡಿಸುತ್ತಿದ್ದ: “ನಿಮ್ಮ ಹಣದ ಈ ಒಂದು ನಾಣ್ಯದಿಂದ ನಾನು ನಿಮ್ಮೆಲ್ಲರ ಆವಶ್ಯಕತೆಗಳನ್ನು ಪೂರೈಸಬಲ್ಲೆ. ನಿಜವಾಗಿ ನೀವು ನನ್ನನ್ನು ನಂಬುವಿರಾದರೆ ನಿಮ್ಮ ಒಂದು ನಾಣ್ಯ ನಾಲ್ಕಾಗುತ್ತದೆ; ವೈಷಮ್ಯದಿಂದ ಇರುವ ನಾಲ್ಕು ಒಗ್ಗೂಡಿ ಒಂದಾಗುತ್ತದೆ.”
ಏಕೆಂದರೆ, ಇಂಥ ವಿವೇಕಿಗೆ ತಿಳಿದಿರುತ್ತಿತ್ತು ಈ ನಾಲ್ವರೂ ತಮ್ಮ ತಮ್ಮ ಭಾಷೆಗಳಲ್ಲಿ ಹೇಳಿದ್ದು ಒಂದೇ ವಸ್ತುವನ್ನು ಅನ್ನುವ ಸತ್ಯ. ಎಲ್ಲರೂ ಬಯಸಿದ್ದು – ದ್ರಾಕ್ಷಿ
*****
೫. ನಾಲ್ಕು ಪಟ್ಟಣಗಳು
ನಾಲ್ಕು ಪಟ್ಟಣಗಳು ಇದ್ದವು. ಪ್ರತೀ ಪಟ್ಟಣದಲ್ಲಿಯೂ ಜನ ಹಸಿವಿನಿಂದ ಸಾಯುತ್ತಿದ್ದರು. ಪ್ರತೀ ಪಟ್ಟಣದಲ್ಲಿಯೂ ಬೀಜಗಳು ತುಂಬಿದ್ದ ಒಂದು ಚೀಲವಿತ್ತು.
ಒಂದನೆಯ ಪಟ್ಟಣದಲ್ಲಿ ಬೀಜಗಳಿಂದ ಏನು ಉಪಯೋಗ ಎಂಬುದು ಯಾರಿಗೂ ತಿಳಿದಿರಲಿಲ್ಲ. ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ಯಾರಿಗೂ ತಿಳಿದಿರಲಿಲ್ಲ. ಎಂದೇ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದರು.
ಎರಡನೇ ಪಟ್ಟಣದಲ್ಲಿ ಒಬ್ಬನಿಗೆ ಬೀಜಗಳಿಂದ ಏನು ಉಪಯೋಗ ಹಾಗೂ ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ತಿಳಿದಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಏನೂ ಮಾಡಲಿಲ್ಲ. ಎಂದೇ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದರು.
ಮೂರನೇ ಪಟ್ಟಣದಲ್ಲಿ ಬೀಜಗಳಿಂದ ಏನು ಉಪಯೋಗ ಹಾಗೂ ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ಒಬ್ಬನಿಗೆ ತಿಳಿದಿತ್ತು. ತನ್ನನ್ನು ರಾಜ ಎಂಬುದಾಗಿ ಎಲ್ಲರೂ ಒಪ್ಪಿಕೊಳ್ಳುವಂತಿದ್ದರೆ ಮಾತ್ರ ಬೀಜ ಬಿತ್ತನೆ ಮಾಡುವುದಾಗಿ ತಿಳಿಸಿದ. ಎಲ್ಲರೂ ಒಪ್ಪಿಕೊಂಡರು. ತತ್ಪರಿಣಾಮವಾಗಿ ಎಲ್ಲರಿಗೂ ತಿನ್ನಲು ಸಿಕ್ಕಿತಾದರೂ ಒಬ್ಬನ ಆಳ್ವಿಕೆಗೆ ಒಳಪಡಬೇಕಾಯಿತು.
ನಾಲ್ಕನೇ ಪಟ್ಟಣದಲ್ಲಿ ಬೀಜಗಳಿಂದ ಏನು ಉಪಯೋಗ ಹಾಗೂ ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ಒಬ್ಬನಿಗೆ ತಿಳಿದಿತ್ತು. ಅವನು ಬೀಜಗಳನ್ನು ಬಿತ್ತನೆ ಮಾಡಿದ್ದು ಮಾತ್ರವಲ್ಲದೆ ತೋಟಗಾರಿಕೆಯ ಕಲೆಯನ್ನು ಎಲ್ಲರಿಗೂ ಕಲಿಸಿದನು. ತತ್ಪರಿಣಾಮವಾಗಿ ಎಲ್ಲರೂ ಶಶಕ್ತರಾದರು, ಎಲ್ಲರಿಗೂ ತಿನ್ನಲು ಸಿಕ್ಕಿತು, ಎಲ್ಲರೂ ಸ್ವತಂತ್ರರಾಗಿಯೇ ಇದ್ದರು.
*****
ಕಥೆಗಳು ತುಂಬ ಚೆನ್ನಾಗಿವೆ , ಅದರಲ್ಲಿಯೂ ಮೊದಲ ಕಪ್ಪೆಗಳು ಕಥೆ ಇಂದಿನ ಯುವ ಸಮುದಾಯಕ್ಕೆ ಹೇಳಿ ಮಾಡಿದಂತಿದೆ.
ಸೂಫಿ ಕಥೆ ಹೇಳಿದಕ್ಕೆ ಧನ್ಯವಾದಗಳು
ಸುಕೇಶ್