೧. ಸತ್ತ ಹಿರಿಯರಿಗೆ ಗೌರವ ಸೂಚಿಸುವುದು
ಚೀನೀ ಮಹಾಶಯನೊಬ್ಬ ತನ್ನ ಹಿರಿಯರ ಸಮಾಧಿಗಳ ಫಲಕಗಳ ಎದುರು ಹಣದ ನೋಟ್‌ಗಳನ್ನು ಸುಡುತ್ತಿರುವುದನ್ನು ಪಾಶ್ಚಾತ್ಯನೊಬ್ಬ ನೋಡಿ ಕೇಳಿದ, “ಕಾಗದದ ಹಣದ ಹೊಗೆಯಿಂದ ನಿಮ್ಮ ಹಿರಿಯರು ಹೇಗೆ ಲಾಭ ಪಡೆಯಲು ಸಾಧ್ಯ?” ಚೀನೀಯನು ಉತ್ತರಿಸಿದ, “ನೀವು ಸಮಾಧಿಯ ಮೇಲೆ ಹೂವುಗಳನ್ನು ಇಟ್ಟಾಗ ಮರಣಿಸಿದ ನಿಮ್ಮ ಹಿರಿಯರು ಹೇಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೋ ಅದೇ ರೀತಿ.”
*****
೨. ದಾವಾ ಹಾಕು, ಹಸಿವಿನಿಂದ ಸಾಯಿಸಬೇಡ
ರಾಜನೀತಿಜ್ಞ ಡೇನಿಯಲ್ ವೆಬ್‌ಸ್ಟರ್ ಕುರಿತಾದ ದಂತಕತೆ ಇದು. ಕಟುಕನೊಬ್ಬ ತನಗೆ ಬರಬೇಕಾಗಿದ್ದ ಸಾಲಕ್ಕಾಗಿ ಡೇನಿಯಲ್ ವೆಬ್‌ಸ್ಟರ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿದ್ದ. ಒಂದು ದಿನ ಆತ ರಸ್ತೆಯಲ್ಲಿ ಡೇನಿಯಲ್‌ಗೆ ಎದುರಾದಾಗ ತನ್ನಿಂದ ಮಾಂಸದ ಬೇಡಿಕೆ ಪಡೆಯಲು ಇತ್ತೀಚೆಗೆ ಏಕೆ ಬರುತ್ತಿಲ್ಲ ಎಂಬುದಾಗಿ ವಿಚಾರಿಸಿದ. ಹಾಲಿ ಪರಿಸ್ಥಿತಿಯಲ್ಲಿ ಡೇನಿಯಲ್ ತನ್ನೊಂದಿಗೆ ವ್ಯವಹರಿಸಲು ಇಷ್ಟಪಡದೇ ಇರಬಹುದು ಎಂಬ ಕಾರಣಕ್ಕಾಗಿ ಬರುತ್ತಿಲ್ಲ ಎಂಬುದಾಗಿ ತಿಳಿಸಿದ ಕಟುಕ. ಅದಕ್ಕೆ ಡೇನಿಯಲ್ ಪರಿಪೂರ್ಣ ಶಾಂತಚಿತ್ತತೆ ಪ್ರದರ್ಶಿಸುತ್ತ ಹೇಳಿದ, “ ಛೆ, ಛೆ. ನನ್ನ ಮೇಲೆ ಎಷ್ಟಾದರೂ ಮೊಕದ್ದಮೆಗಳನ್ನು ಹಾಕು. ಆದರೆ, ದೇವರ ಮೇಲಾಣೆ, ನನ್ನನ್ನು ಹಸಿವಿನಿಂದ ಸಾಯುವಂತೆ ಮಾಡಬೇಡ.”
*****
೩. ಮೊದಲನೆಯ ಭೋಜನ, ಮುಂದಿನ ಭೋಜನ?
“ಬಲು ಮುಖ್ಯವಾದ ಅಂತಿಮ ಭೋಜನದ ಲೋಹದ ಉಬ್ಬುಚಿತ್ರ” ಎಂಬುದಾಗಿ ತಾನೇ ಘೋಷಿಸಿದ ಕಲಾಕೃತಿಯೊಂದನ್ನು ಅಪರೂಪದ ವಸ್ತುಗಳ ಮಾರಾಟಗಾರ ಮಹಿಳಾ ಪ್ರವಾಸಿಯೊಬ್ಬಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಕೇಳುಗರನ್ನು ದಂಗುಬಡಿಸುವ ಪ್ರತಿಕ್ರಿಯೆ ಆಕೆಯದಾಗಿತ್ತು – “ಏನೇ ಆಗಲಿ, ಅಂತಿಮ ಭೋಜನದಲ್ಲಿ ಅಂತಹ ವಿಶೇಷತೆ ಏನಿದೆ? ನಿಮ್ಮ ಹತ್ತಿರ ಮೊದಲನೇ ಭೋಜನದ ಚಿತ್ರ ಇದ್ದಿದ್ದರೆ ಅದು ವಿಶೇಷ. ಅಂದ ಹಾಗೆ ಮುಂದಿನ ಭೋಜನ ಯಾವಾಗ?”
*****
೪. ತಾಂತ್ರಿಕ!
ಮುಂಬೈ ಬೃಹತ್ ಮಾರುಕಟ್ಟೆ ರಸ್ತೆ, ಭಿಂಡಿ ಬಾಝಾರ್‌ನಲ್ಲಿ ನಡೆದ ವಿದ್ಯಮಾನ ಇದು. ರಸ್ತೆಯ ಬದಿಯಲ್ಲಿ ಕುಳಿತಿದ್ದ ಒಬ್ಬ ಮುದುಕನಿಂದ ಅನತಿ ದೂರದಲ್ಲಿ ಒಂದು ಬಸ್ಸು ಬಂದು ನಿಂತಿತು. ಸತ್ಯವನ್ನು ಅನ್ವೇಷಿಸಲೇಬೇಕು ಎಂಬುದಾಗಿ ಪಣತೊಟ್ಟಂತಿದ್ದ ಪಾಶ್ಚಾತ್ಯರ ಗುಂಪೊಂದು ಅದರಿಂದ ಇಳಿದು ಆ ಮುದುಕನನ್ನು ಸುತ್ತುವರಿಯಿತು. ಕೆಲವರು ಅವನ ಫೋಟೋ ತೆಗೆದರು, ಕೆಲವರು ಭಾವೋದ್ವೇಗದಿಂದ ಒಂದೇಸಮನೆ ಬಡಬಡಿಸಲಾರಂಭಿಸಿದರು. ಒಬ್ಬಳು ಅವನೊಂದಿಗೆ ಸಂಭಾಷಿಸಲು ಪ್ರಯತ್ನಿಸಿದಳು. ಅವಳನ್ನು ದುರುಗುಟ್ಟಿ ನೋಡುವುದು ಮಾತ್ರ ಅವನ ಪ್ರತಿಕ್ರಿಯೆಯಾಗಿತ್ತು. ಅವಳು ಮಾರ್ಗದರ್ಶಿಯೊಂದಿಗೆ ಹೇಳಿದಳು, “ಎಷ್ಟು ಒಳ್ಳೆಯ ಮುದುಕ; ಇವನು ನಿಜವಾಗಿಯೂ ಒಬ್ಬ ಜೀವಂತ ಸಂತನಾಗಿರಬೇಕು. ಇವನೊಬ್ಬ ಸಂತನೇ?”
ಸುಳ್ಳು ಹೇಳಲು ಇಚ್ಛಿಸದ ಭಾರತೀಯ ಮಾರ್ಗದರ್ಶಿ ಅವರನ್ನು ಸಂತೋಷಪಡಿಸಲೋಸುಗ ಹಾಸ್ಯಭರಿತ ಧ್ವನಿಯಲ್ಲಿ ಹೇಳಿದ, “ಮ್ಯಾಡಮ್, ಅವನು ಸಂತನಿರಬಹುದಾದರೂ ನಮಗೆ ಅವನೊಬ್ಬ ಈ ಪ್ರದೇಶದಲ್ಲಿ ಇರುವ ಅತ್ಯಾಚಾರೀ ಮನುಷ್ಯ.”
ಅವಳು ತಕ್ಷಣ ಪ್ರತಿಕ್ರಿಯಿಸಿದಳು, “ಓ, ಆ ಕುರಿತು ನಾನು ಕೇಳಿದ್ದೇನೆ. ಅದು ಅವರ ಮತಕ್ಕೆ ಸಂಬಂಧಿಸಿದ ವಿಷಯ. ಅವನೊಬ್ಬ ತಾಂತ್ರಿಕನಿರಬೇಕು ಎಂಬುದಾಗಿ ಊಹಿಸುತ್ತೇನೆ!”
*****
೫. ನೀವೇ ಏಕೆ ಪಾದರಕ್ಷೆ ತಯಾರಿಸಬಾರದು?
ಅಂಗಡಿಯೊಂದರ ಒಳಹೋಗಿ ಅಂಗಡಿಯವನನ್ನು ಒಬ್ಬ ಕೇಳಿದ, “ನಿಮ್ಮಲ್ಲಿ ಹದಮಾಡಿದ ಚರ್ಮ ಇದೆಯೇ?”
ಅಂಗಡಿಯವ ಉತ್ತರಿಸಿದ, “ಇದೆ.”
“ಮೊಳೆಗಳು?”
“ಇವೆ.”
“ದಾರ?”
“ಇದೆ.”
“ಸೂಜಿ?”
“ಇದೆ.”
“ಅಂದಮೇಲೆ ನೀವೆ ಏಕೆ ಪಾದರಕ್ಷೆ ತಯಾರಿಸಬಾರದು?”
*****