ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಾಯಿಗೆ ತಿಳಿದಿದೆಯೇ? 
ನನ್ನ ಮಿತ್ರನೊಬ್ಬ ಒಂದು ದೇಶದ ಅಧ್ಯಕ್ಷರನ್ನು ಬೇಟಿ ಮಾಡಲು ಹೋಗಿದ್ದ.  ಆದ್ಯಕ್ಷರ ನಿವಾಸದ ಆವರಣದಲ್ಲಿ ಅವರು ಮಾತನಾಡುತ್ತಾ ಸುತ್ತಾಡುತ್ತಿದ್ದಾಗ ನೋಡಲು ಭಯಂಕರವಾಗಿದ್ದ ದೊಡ್ಡ ನಾಯಿಯೊಂದು ಅಲ್ಲಿಯೇ ಇದ್ದ ಒಬ್ಬ ಹಿಂದೂ ಗುರುವಿನ ಕೌಪೀನವನ್ನು ಕಚ್ಚಿ ಹರಿದದ್ದಲ್ಲದೆ ಜೋರಾಗಿ ಬೊಗಳುತ್ತಾ ಅವನನ್ನು ಒಂದು ಗೋಡೆಯ ಸಮೀಪಕ್ಕೆ ಅಟ್ಟಿಕೊಂಡು ಹೋಯಿತು. ಹುಲಿಗಳನ್ನು ತನ್ನ ನೋಟದಿಂದಲೇ ಪಳಗಿಸುವ ಸಾಮರ್ಥ್ಯ ಉಳ್ಳವನು ಎಂಬುದಾಗಿ ಖ್ಯಾತನಾಗಿದ್ದ ಆ ಗುರುವಿಗೆ ನಾಯಿಗಳನ್ನು ಆ ರೀತಿ ಪಳಗಿಸುವ ಸಾಮರ್ಥ್ಯವಿರಲಿಲ್ಲವಾದ್ದರಿಂದ ಏನಾದರೂ ಮಾಡುವಂತೆ ನನ್ನ ಸ್ನೇಹಿತನಿಗೆ ವಿನಂತಿಸಿಕೊಂಡನು.
ನನ್ನ ಸ್ನೇಹಿತ ಹೇಳಿದ, “ಬೊಗಳುವ ನಾಯಿ ಕಚ್ಚುವುದಿಲ್ಲ.”
ಗುರು ಉದ್ಗರಿಸಿದ, “ಅದು ನನಗೂ ಗೊತ್ತಿದೆ ನಿನಗೂ ಗೊತ್ತಿದೆ. ಆದರೆ, ನಾಯಿಗೆ ಗೊತ್ತಿದೆಯೇ?”

*****

೨. ಶತ್ರುವನ್ನು ಮೂರ್ಖರನ್ನಾಗಿಸುವುದು.
ನೂತನ ಪ್ರವೇಶಿ ಸೈನಿಕನೊಬ್ಬನನ್ನು ತರಬೇತುದಾರ ಕೇಳಿದ, “ಶತ್ರುವನ್ನು ಮೂರ್ಖರನ್ನಾಗಿಸುವುದು ಹೇಗೆಂಬುದಕ್ಕೆ ಒಂದು ಉದಾಹರಣೆ ಕೊಡು.”
ನೂತನ ಪ್ರವೇಶಿ ಉತ್ತರಿಸಿದ, “ನಿಮ್ಮ ಹತ್ತಿರ ಇದ್ದ ಮದ್ದುಗುಂಡಿನ ದಾಸ್ತಾನು ಮುಗಿದು ಹೋದರೆ ಅದು ಶತ್ರುಗಳಿಗೆ ತಿಳಿಯದಂತೆ ನೋಡಿಕೊಳ್ಳಿ — ಅದಕ್ಕೋಸ್ಕರ ಗುಂಡು ಹಾರಿಸುತ್ತಲೇ ಇರಿ.”

*****

೩. ಭೋಜನ ಕೂಟ
ಹರಕು ಬಟ್ಟೆ ಧರಿಸಿದ್ದ ಬಡವನೊಬ್ಬ ಅರಮನೆಯ ಭೋಜನಕೂಟಕ್ಕೆ ಬಂದ. ಸಭ್ಯತೆಯನ್ನು ಉಲ್ಲಂಘಿಸಬಾರದೆಂಬ ಕಾರಣಕ್ಕಾಗಿ ಅವನನ್ನು ಒಳಹೋಗಲು ಬಿಟ್ಟರೂ ಊಟದ ಮೇಜಿನ ಕೊನೆಯಲ್ಲಿ ಅವನನ್ನು ಕೂರಿಸಿದರು. ಊಟಕ್ಕೆ ಬಡಿಸುವ ಪರಾತಗಳು ಅವನಿರುವಲ್ಲಿಗೆ ತಲಪುವ ವೇಳೆಗೆ ಹೆಚ್ಚುಕಮ್ಮಿ ಖಾಲಿ ಆಗಿರುತ್ತಿದ್ದವು. ಆದ್ದರಿಂದ ಆತ ಅಲ್ಲಿಂದ ಹೊರಟು ಹೋದ. ಒಬ್ಬ ಶ್ರೀಮಂತ ಮಿತ್ರನಿಂದ ಬೆಲೆಬಾಳುವ ನಿಲುವಂಗಿಯನ್ನೂ ಆಭರಣಗಳನ್ನೂ ಎರವಲು ಪಡೆದು ಧರಿಸಿಕೊಂಡು ಸ್ವಲ್ಪ ಸಮಯದ ನಂತರ ಭೋಜನಕೂಟದ ತಾಣಕ್ಕೆ ಪುನಃ ಬಂದ. ಈ ಸಲ ಅವನನ್ನು ತಕ್ಷಣವೇ ಬಲು ಗೌರವದಿಂದ ಊಟದ ಮೇಜಿನಲ್ಲಿ ಮೊಟ್ಟಮೊದಲನೆಯ ಆಸನದ ಸಮೀಪದಲ್ಲಿ ಕೂರಿಸಿ ಅವನಿದ್ದಲ್ಲಿಗೇ ಮೊದಲು ಊಟಕ್ಕೆ ಬಡಿಸುವ ಪರಾತಗಳನ್ನು ತರಲಾರಂಭಿಸಿದರು.

“ಓ, ಎಷ್ಟು ರುಚಿಯಾದ ತಿನಿಸುಗಳು ನನ್ನ ತಟ್ಟೆಯಲ್ಲಿವೆ,” ಎಂದು ಉದ್ಗರಿಸಿ, ‘ತಾನು ಒಂದು ಚಮಚೆ ಆಹಾರವನ್ನು ತನ್ನ ಉಡುಪಿಗೆ ಹಾಕುವುದು ನಂತರದ ಚಮಚೆಯ ಆಹಾರವನ್ನು ತಿನ್ನುವುದು’ ಮಾಡತೊಡಗಿದ. ಆತನ ಪಕ್ಕದಲ್ಲಿ ಕುಳಿತಿದ್ದ ಕುಲೀನನೊಬ್ಬ ಈ ಕೊಳಕು ವರ್ತನೆಯನ್ನು ನೋಡಿ ಮುಖ ಸಿಂಡರಿಸಿ ಕೇಳಿದ, “ಮಹಾಶಯ, ನಿಮ್ಮ ಇಷ್ಟು ಒಳ್ಳೆಯ ಉಡುಪಿಗೆ ಆಹಾರವನ್ನು ಏಕೆ ಮೆತ್ತುತ್ತಿದ್ದೀರಿ?”
ಆತ ಲೊಚಗುಟ್ಟುತ್ತಾ ಉತ್ತರಿಸಿದ, “ಈಗ ನನ್ನ ಉಡುಪು ಗಲೀಜಾಗಿ ನಿಮಗೆ ಕಾಣುತ್ತಿರುವುದಕ್ಕೆ ಕ್ಷಮಿಸಿ. ಈ ಉಡುಪಿನಿಂದಾಗಿ ನನಗೆ ಇಷ್ಟು ಒಳ್ಳೆಯ ತಿನಿಸುಗಳು ಸಿಕ್ಕಿವೆ. ಎಂದೇ, ಅದಕ್ಕೆ ಮೊದಲು ತಿನ್ನಿಸಬೇಕಾದದ್ದು ನ್ಯಾಯೋಚಿತವಲ್ಲವೇ?”

*****

೪. ಯಾರು ಮೂರ್ಖರು?
ಅಷ್ಟೇನೂ ತೀಕ್ಷಮತಿಗಳಲ್ಲದ ಇಬ್ಬರು ದೋಣಿಯೊಂದನ್ನು ಬಾಡಿಗೆಗೆ ಪಡೆದು ಮೀನು ಹಿಡಿಯಲು ಹೋದರು. ತುಂಬ ಚೆನ್ನಾಗಿರುವ ಮೀನುಗಳನ್ನೂ ಹಿಡಿದರು. ಮನೆಗೆ ಹಿಂದಿರುಗುತ್ತಿರುವಾಗ ಒಬ್ಬ ಇನ್ನೊಬ್ಬನನ್ನು ಕೇಳಿದ, “ಮೀನು ಹಿಡಿಯುವ ಆ ಅದ್ಭುತ ತಾಣಕ್ಕೆ ನಾವು ಪುನಃ ಹೋಗುವುದು ಹೇಗೆ?” ಇನ್ನೊಬ್ಬ ಉತ್ತರಿಸಿದ, “ಆ ಕುರಿತು ನಾನಾಗಲೇ ಆಲೋಚಿಸಿದ್ದೆ. ಸೀಮೆಸುಣ್ಣದಿಂದ ನಾನು ದೋಣಿಯ ಮೇಲೆ ಒಂದು ಗುರುತು ಮಾಡಿದ್ದೇನೆ.” ಮೊದಲನೆಯವ ಅಬ್ಬರಿಸಿದ, “ನೀನೊಬ್ಬ ಮುಠ್ಠಾಳ!. ಅದರಿಂದೇನೂ ಪ್ರಯೋಜನವಿಲ್ಲ. ಮುಂದಿನ ಸಲ ಅವರು ನಮಗೆ ಬೇರೆ ದೋಣಿಯನ್ನು ಕೊಟ್ಟರೆ?”

*****

೫. ಡ್ರಮ್‌ನ ಒಳಗೇನಿದೆ?
ಇಡೀ ದಿನವನ್ನು ಡ್ರಮ್‌ ಬಾರಿಸುತ್ತಾ ಕಳೆಯುತ್ತಿದ್ದ ಪುಟ್ಟ ಹುಡುಗನೊಬ್ಬನಿದ್ದ. ಡ್ರಮ್‌ ಬಾರಿಸುತ್ತಿದ್ದ ಪ್ರತೀ ಕ್ಷಣವನ್ನೂ ಆತ ಆನಂದದಿಂದ ಆಸ್ವಾದಿಸುತ್ತಿದ್ದ. ಯಾರು ಏನೇ ಮಾಡಲಿ, ಏನೇ ಹೇಳಲಿ ಅವನು ಡ್ರಮ್‌ ಬಾರಿಸುವುದನ್ನು ನಿಲ್ಲಿಸುತ್ತಿರಲಿಲ್ಲ. ಈ ಹುಡುಗನನ್ನು ನಿಯಂತ್ರಿಸಲು ಏನಾದರೂ ಮಾಡಿ ಎಂಬುದಾಗಿ ನೆರೆಹೊರೆಯವರು ತಮ್ಮನ್ನು ತಾವು ಸೂಫಿಗಳು ಎಂದು ಕರೆದುಕೊಳ್ಳುತ್ತಿದ್ದ ಅನೇಕರನ್ನೂ ಇತರರನ್ನೂ ವಿನಂತಿಸಿದರು. ತನ್ನನ್ನು ತಾನು ಸೂಫಿ ಅಂದುಕೊಳ್ಳಿತ್ತಿದ್ದವನೊಬ್ಬ “ನೀನು ಇದೇ ರೀತಿ ಇಷ್ಟೊಂದು ಗದ್ದಲ ಮಾಡುತ್ತಿದ್ದರೆ ನಿನ್ನ ಕಿವಿತಮಟೆಯಲ್ಲಿ ತೂತು ಮಾಡುತ್ತೇನೆ” ಎಂಬುದಾಗಿ ಹೆದರಿಸಿದ. ಆ ಹುಡುಗ ವಿಜ್ಞಾನಿ ಅಥವ ಪಂಡಿತ ಆಗಿರದೇ ಇದ್ದದ್ದರಿಂದ ಈ ಬೆದರಿಕೆ ಅವನಿಗೆ ಅರ್ಥವಾಗಲೇ ಇಲ್ಲ. 

ಎರಡನೆಯವ ಹೇಳಿದ, “ಡ್ರಮ್‌ ಬಾರಿಸುವುದು ಒಂದು ಪವಿತ್ರ ಕಾರ್ಯವಾದದ್ದರಿಂದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅದನ್ನು ಬಾರಿಸಬೇಕು.” ಆ ಹುಡುಗನ ನೆರೆಹೊರೆಯವರೆಲ್ಲರಿಗೂ ಕಿವಿಗೆ ಹಾಕಿಕೊಳ್ಳಲು ತಕ್ಕುದಾದ ಬೆಣೆಗಳನ್ನು ವಿತರಿಸಿದ ಮೂರನೆಯವ. ಆ ಹುಡುಗನಿಗೆ ಚಿತ್ತಾಕರ್ಷಕವಾದ ಪುಸ್ತಕವೊಂದನ್ನು ಕೊಟ್ಟ ನಾಲ್ಕನೆಯವನು. ಐದನೆಯವನಾದರೋ, ಜೈವಿಕ ಹಿನ್ನುಣಿಸುವಿಕೆ (biofeedback) ತಂತ್ರದಿಂದ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬುದರ ವಿವರಣೆ ಇರುವ ಪುಸ್ತಕಗಳನ್ನು ನೆರೆಹೊರೆಯವರಿಗೆ ವಿತರಿಸಿದ. ಆರನೆಯವನು ಹುಡುಗನನ್ನು ಶಾಂತಮನಸ್ಕನನ್ನಾಗಿಸಲೋಸುಗ ಧ್ಯಾನಮಾಡುವ ಹಂತಗಳನ್ನು ಅವನಿಗೆ ಪರಿಚಯಿಸಿದ. ಅಷ್ಟೇ ಅಲ್ಲ, ನಾವು ವಾಸ್ತವಿಕತೆ ಅಂದುಕೊಂಡಿರುವುದೆಲ್ಲವೂ ಹೇಗೆ ನಮ್ಮ ಕಲ್ಪನೆ ಎಂಬುದನ್ನೂ ವಿವರಿಸಿದ. ಎಲ್ಲ ಹುಸಿಮದ್ದುಗಳಂತೆ (placebos) ಈ ಪ್ರತಿಯೊದು ಪರಿಹಾರವೂ ಮೊದಮೊದಲು ಅಪೇಕ್ಷಿತ ಫಲಿತಾಂಶ ನೀಡಿದಂತೆ ಗೋಚರಿಸಿದರೂ ಸ್ವಲ್ಪ ಕಾಲಾನಂತರ ನಿಷ್ಪ್ರಯೋಜಕವಾದವು.

ಕಟ್ಟಕಡೆಗೆ ಅಲ್ಲಿಗೆ ಬಂದ ಒಬ್ಬ ನಿಜವಾದ ಸೂಫಿ ಪರಿಸ್ಥಿತಿಯನ್ನು ಅವಲೋಕಿಸಿದ. ತದನಂತರ ಹುಡುಗನ ಕೈಗೆ ಸುತ್ತಿಗೆ ಹಾಗೂ ಉಳಿ ಕೊಟ್ಟು ಹೇಳಿದ, “ಈ ಡ್ರಮ್‌ನ ಒಳಗೆ ಏನಿರಬಹುದು?”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x