ವಿದ್ವಾಂಸನೂ ಸೂಫಿಯೂ
ಒಬ್ಬ ವಿದ್ವಾಂಸ ಸೂಫಿಯೊಬ್ಬನಿಗೆ ಹೇಳಿದ, “ನಮ್ಮ ತಾರ್ಕಿಕ ಪ್ರಶ್ನೆಗಳು ನಿಮಗೆ ಅರ್ಥವೇ ಆಗುವುದಿಲ್ಲವೆಂಬುದಾಗಿ ನೀವು ಸೂಫಿಗಳು ಹೇಳುತ್ತೀರಿ. ಅಂಥ ಒಂದು ಪ್ರಶ್ನೆಯನ್ನು ನೀವು ಉದಾಹರಿಸಬಲ್ಲಿರಾ?”
ಸೂಫಿ ಹೇಳಿದ, “ಖಂಡಿತ. ಅದಕ್ಕೊಂದು ಉದಾಹರಣೆ ನನ್ನ ಹತ್ತಿರ ಇದೆ. ನಾನೊಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದೆ. ಆ ರೈಲು ಏಳು ಸುರಂಗಗಳ ಮೂಲಕ ಹಾದುಹೋಯಿತು. ಆ ವರೆಗೆ ರೈಲಿನಲ್ಲಿ ಪಯಣಿಸದೇ ಇದ್ದ ಹಳ್ಳಿಗಾಡಿನವನೊಬ್ಬ ನನ್ನ ಎದುರು ಕುಳಿತಿದ್ದ. ರೈಲು ಏಳು ಸುರಂಗಗಳನ್ನು ದಾಟಿದ ನಂತರ ಅವನು ನನ್ನ ಭುಜ ತಟ್ಟಿ ಹೇಳಿದ, ‘ಈ ರೈಲು ಪ್ರಯಾಣ ಬಲು ಸಂಕೀರ್ಣವಾದದ್ದು. ನನ್ನ ಕತ್ತೆಯ ಮೇಲೆ ಕುಳಿತು ಪ್ರಯಾಣ ಮಾಡಿದರೆ ನಾನು ಒಂದೇ ದಿನದಲ್ಲಿ ನನ್ನೂರನ್ನು ತಲುಪುತ್ತೇನೆ. ಈ ರೈಲು ನನ್ನ ಕತ್ತೆಗಿಂತ ವೇಗವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆಯಾದರೂ ಸೂರ್ಯ ಏಳು ಬಾರಿ ಮುಳುಗಿ ಏಳು ಬಾರಿ ಹುಟ್ಟಿದರೂ ನಾನಿನ್ನೂ ನನ್ನ ಮನೆ ಸೇರಿಲ್ಲವೇಕೆ?”
*****
[ಈ ಮೇಲಿನದ್ದು ‘ಸೂಫಿ ಕತೆಗಳು’ ಮಾಲಿಕೆಯ ಕೊನೆಯ ಕತೆ. ಇನ್ನು ಮುಂದೆ ಸೂಫಿ ಕತೆಗಳ ಒಂದು ಉಪವರ್ಗ ಎಂಬುದಾಗಿ ಪರಿಗಣಿಸಬಹುದಾದ ಮುಲ್ಲಾ ನಜ಼ರುದ್ದೀನ್ ಹೋಜನ ಕತೆಗಳನ್ನು ‘ನಜ಼ರುದ್ದೀನ್‌ನ ಕತೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುತ್ತೇನೆ. ೧೩ ನೆಯ ಶತಮಾನದಲ್ಲಿ ಇಂದಿನ ಟರ್ಕಿ ಪ್ರದೇಶದಲ್ಲಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶವೊಂದರಲ್ಲಿ ಜೀವಿಸಿದ್ದ ಸೂಫಿ ಈತ ಎಂಬ ನಂಬಿಕೆ ಇದೆ. ಶ್ರೀಸಾಮಾನ್ಯನ ದಾರ್ಶನಿಕ, ವಿವೇಕಿ ಎಂಬುದಾಗಿ ಈತನನ್ನು ಉಲ್ಲೇಖಿಸುವುದೂ ಉಂಟು. ಈತ ಪ್ರಧಾನ ಪಾತ್ರಧಾರಿಯಾಗಿರುವ ಕತೆಗಳು ಸಾವಿರಾರು ಇವೆಯೆಂದು ಹೇಳಲಾಗುತ್ತಿದೆ. ಈತನ ಬಹುತೇಕ ಕತೆಗಳು ವಿಡಂಬನಾತ್ಮಕವಾದವು, ಕೆಲವು ನವಿರಾದ ಹಾಸ್ಯಪ್ರಧಾನವಾದವು, ಕೆಲವು ಅವನನ್ನೇ ಮೂರ್ಖನಂತೆ ಬಿಂಬಿಸುವ ಕತೆಗಳು, ಕೆಲವು ಜಾಣ್ಮೆಯನ್ನು ಬಿಂಬಿಸುವ ಕತೆಗಳು, ಕೆಲವು ಆಧ್ಯಾತ್ಮಿಕ ಸಂದೇಶವುಳ್ಳವು. ತುಸು ಆಲೋಚಿಸಿದರೆ ಎಲ್ಲವೂ ಶ್ರೀಸಾಮಾನ್ಯನಿಗೆ ಏನನ್ನೋ ಬೋಧಿಸುವ ಉಳ್ಳವು ಎಂಬದು ನಿಮಗೇ ತಿಳಿಯುತ್ತದೆ. ಈ ಹಿಂದಿನಂತೆಯೇ ಪ್ರತೀ ವಾರ ೫ ಕತೆಗಳು ಪ್ರಕಟವಾಗುತ್ತವೆಯಾದರೂ ಈ ವಾರ ಮೂರನ್ನು ಮಾತ್ರ ಪ್ರಕಟಿಸುತ್ತಿದ್ದೇನೆ.]
‘ನಜ಼ರುದ್ದೀನ್‌ನ ಕತೆಗಳು’
೧. ಕಳೆದು ಹೋದ ಬೀಗದಕೈ
ತನ್ನ ಕೈತೋಟದಲ್ಲಿ ಮುಲ್ಲಾ ನಜ಼ರುದ್ದೀನ್ ಏನನ್ನೋ ಹುಡುಕುತ್ತಿದ್ದ. ಏನನ್ನು ಹುಡುಕುತ್ತಿರುವುದು ಎಂಬುದನ್ನು ಪಕ್ಕದ ಮನೆಯಾತ ವಿಚಾರಿಸಿದಾಗ ತನ್ನ ಮನೆಯ ಬೀಗದಕೈಯನ್ನು ಹುಡುಕುತ್ತಿರುವುದಾಗಿ ತಿಳಿಸಿದ.
ಪಕ್ಕದ ಮನೆಯಾತ ಕೇಳಿದ, “ಅದನ್ನು ಎಲ್ಲಿ ಬೀಳಿಸಿದೆ ಎಂಬುದೇನಾದರೂ ನೆನಪಿದೆಯೇ?”
ಮುಲ್ಲಾ ಉತ್ತರಿಸಿದ, “ಖಂಡಿತಾ ನೆನಪಿದೆ. ಅದನ್ನು ಬೀಳಿಸಿದ್ದು ನನ್ನ ಮನೆಯಲ್ಲಿಯೇ.”
ಗೊಂದಲಕ್ಕೀಡಾದ ಪಕ್ಕದ ಮನೆಯಾತ ವಿಚಾರಿಸಿದ, “ಅಂದ ಮೇಲೆ ಅದನ್ನು ಇಲ್ಲಿ ಹುಡುಕುತ್ತಿರುವುದೇಕೆ?”
ಮುಲ್ಲಾ ನಜ಼ರುದ್ದೀನ್ ಉತ್ತರಿಸಿದ, “ಏಕೆಂದರೆ ಇಲ್ಲಿ ಅಲ್ಲಿಗಿಂತ ಹೆಚ್ಚು ಬೆಳಕಿದೆ.”
*****
೨. ಕತ್ತೆಯ ಬಂಧುಗಳು
ಒಂದು ಬುಟ್ಟಿ ತುಂಬ ತರಕಾರಿಯನ್ನು ಕತ್ತೆಯ ಮೇಲೆ ಹೇರಿಕೊಂಡು ಮುಲ್ಲಾ ನಜ಼ರುದ್ದೀನ್ ಹೋಜ ಮಾರುಕಟ್ಟೆಗೆ ಹೋಗುತ್ತಿದ್ದ. ಅರ್ಧ ದಾರಿಯಲ್ಲಿ
ಕತ್ತೆ ಇದ್ದಕ್ಕಿದ್ದಂತೆ ನಿಂತುಬಿಟ್ಟಿತು. ಪುನಃ ಮುಂದಕ್ಕೆ ಚಲಿಸುವಂತೆ ಅದನ್ನು ಒಲಿಸಲು ಹೋಜ ಎಷ್ಟು ಪ್ರಯತ್ನಿಸಿದರೂ ಅದು ಅಲುಗಾಡಲಿಲ್ಲ. ಇದರಿಂದ ಹತಾಶನಾದ ಹೋಜನಿಗೆ ವಿಪರೀತ ಸಿಟ್ಟು ಬಂದಿತು. ಅವನು ಒಂದು ದೊಣ್ಣೆಯಿಂದ ಅದಕ್ಕೆ ಬಲವಾಗಿ ಹೊಡೆಯಲಾರಂಭಿಸಿದ. ಅದನ್ನು ನೋಡಲು ಅಲ್ಲಿ ಜನ ಒಟ್ಟು ಸೇರಿದರು.
ಅವರ ಪೈಕಿ ಒಬ್ಬ ಕೇಳಿದ, “ಆ ಬಡಪ್ರಾಣಿಗೇಕೆ ಹೊಡೆಯುತ್ತಿರುವೆ?”
“ಅದಕ್ಕೆ ಹೊಡೆಯುವುದನ್ನು ತಕ್ಷಣ ನಿಲ್ಲಿದು,” ಆಜ್ಞಾಪಿಸಿದ ಇನ್ನೊಬ್ಬ.
“ನೀನೆಷ್ಟು ಕ್ರೂರಿ,” ಅಂದ ಮಗದೊಬ್ಬ.
ಹೋಜ ಹೊಡೆಯುವುದನ್ನು ನಿಲ್ಲಿಸಿ ಮೆಚ್ಚುಗೆಯ ದೃಷ್ಟಿಯಿಂದ ಕತ್ತೆಯನ್ನು ನೋಡುತ್ತ ಹೇಳಿದ, “ನಿನ್ನ ರಕ್ಷಣಗೆ ಧಾವಿಸಿ ಬರಲು ಇಷ್ಟೊಂದು ಬಂಧುಗಳು ನಿನಗಿದ್ದಾರೆ ಎಂಬುದು ಮೊದಲೇ ತಿಳಿದಿದ್ದಿದ್ದರೆ ನಾನು ನಿನಗೆ ಹೊಡೆಯುತ್ತಲೇ ಇರಲಿಲ್ಲ. ‘ದೊಡ್ಡಬಾಯಿ’ಯ ಅನೇಕರಿರುವ ದೊಡ್ಡ ಕುಟುಂಬದಿಂದ ನೀನು ಬಂದಿರುವೆ ಎಂಬುದು ಈಗ ನನಗೆ ತಿಳಿಯಿತು.”
ಇದರಿಂದ ಕುಪಿತರಾದ ಟೀಕೆ ಮಾಡಿದವರು ಅಲ್ಲಿಂದ ಹೊರಟು ಹೋದರು, ಹೋಜ ತನಗೆ ತಿಳಿದಂತೆ ತನ್ನ ಕತ್ತೆಯನ್ನು ನಿಭಾಯಿಸಿಕೊಳ್ಳಲಿ ಎಂಬುದಾಗಿ ಮನಸ್ಸಿನಲ್ಲಿ ಅಂದುಕೊಂಡು ಉಳಿದವರೂ ತೆರಳಿದರು.
*****
೩. ಮೌಲಾನಿಗೆ ಹಾಲು
ಅದೊಂದು ದಿನ ಮುಲ್ಲಾ ನಜ಼ರುದ್ದೀನ್ ಎಲ್ಲಿಗೋ ಹೋಗುತ್ತಿದ್ದಾಗ ಹಾಲಿನ ಒಂದು ದೊಡ್ಡ ಕ್ಯಾನನ್ನು ಹೊತ್ತುಕೊಂಡ ಒಬ್ಬಾತನನ್ನು ಸಂಧಿಸಿದ. ಆತ ಮುಲ್ಲಾನಿಗೆ ನಮಸ್ಕರಿಸಿ ಹೇಳಿದ, “ಮುಲ್ಲಾಜೀ, ನನಗೊಂದು ಸಮಸ್ಯೆ ಇದೆ. ಅದಕ್ಕೊಂದು ಪರಿಹಾರ ಸೂಚಿಸುವಿರಾ?” ಹಾಲಿನ ಕ್ಯಾನನ್ನೇ ನೋಡುತ್ತಿದ್ದ ಮುಲ್ಲಾ ಬಲು ಸಂತೋಷದಿಂದಲೇ ಆತನ ಸಮಸ್ಯೆಯನ್ನು ಕೇಳಲು ಸಮ್ಮತಿಸಿದ.
ಆತ ಹೇಳಿದ, “ಬೆಳಗ್ಗೆ ನಿದ್ದೆಯಿಂದ ಎದ್ದಾಗ ಅಮಲೇರಿದ ಭಾವನೆ ಉಂಟಾಗುತ್ತದೆ. ತಲೆಸುತ್ತಿನ ಜೊತೆಗೆ ಮದ್ಯಪಾನದ ಪರಿಣಾಮದ ಶೇಷ ಉಳಿದಂತೆಯೂ ಭಾಸವಾಗುತ್ತದೆ. ಇಂತೇಕೆ ಆಗುತ್ತದೆ ಎಂಬುದೇ ತಿಳಿಯುತ್ತಿಲ್ಲ.”
ಮುಲ್ಲಾ ಪ್ರತಿಕ್ರಿಯಿಸಿದ, “ಹಂ…! ನಿಜವಾಗಿಯೂ ಇದೊಂದು ಗಂಭೀರ ಸಮಸ್ಯೆ. ಆಲೋಚಿಸಬೇಕಾದ ವಿಷಯ. ರಾತ್ರಿ ಮಲಗುವ ಮುನ್ನ ಸಾಮಾನ್ಯವಾಗಿ ನೀನು ಏನನ್ನು ತಿನ್ನುವೆ ಅಥವ ಕುಡಿಯುವೆ?”
“ಒಂದು ದೊಡ್ಡ ಲೋಟದಲ್ಲಿ ಹಾಲು ಕುಡಿಯುತ್ತೇನೆ.”
“ಹಾಂ! ನಿನ್ನ ಸಮಸ್ಯೆಯ ಮೂಲ ತಿಳಿಯಿತು. ನೀನು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲು ಮತ್ತು ಬರಿಸುತ್ತಿದೆ.”
ಸುಲಭವಾಗಿ ನಂಬಿ ಮೋಸಹೋಗುವ ಆತ ಕೇಳಿದ, “ಅದು ಹೇಗೆ ಮುಲ್ಲಾಜಿ?”
ಮುಲ್ಲಾ ವಿವರಿಸಿದ, “ನೀನು ನಿದ್ದೆ ಮಾಡುವ ಮುನ್ನ ಹಾಲು ಕುಡಿಯುತ್ತಿರುವೆ. ನಿದ್ದೆ ಮಾಡುವಾಗ ನೀನು ಹಾಸಿಗೆಯಲ್ಲಿ ಹೊರಳಾಡುತ್ತೀಯ. ಆಗ ಹಾಲು ಕಡೆಯಲ್ಪಟ್ಟು ಬೆಣ್ಣೆಯಾಗುತ್ತದೆ. ಆ ಬೆಣ್ಣೆ ಪುನಃ ಕಡೆಯಲ್ಪಟ್ಟು ಕೊಬ್ಬು ಆಗುತ್ತದೆ. ಕೊಬ್ಬನ್ನು ಕಡೆದಾಗ ಸಕ್ಕರೆ ಆಗುತ್ತದೆ. ಆ ಸಕ್ಕರೆ ಕಡೆಯಲ್ಪಟ್ಟು ಮದ್ಯವಾಗುತ್ತದೆ. ಇಂತು ನೀನು ಬೆಳಗ್ಗೆ ಏಳುವ ವೇಳೆಗೆ ಅಂತಿಮವಾಗಿ ನಿನ್ನ ಹೊಟ್ಟೆಯಲ್ಲಿ ಮದ್ಯ ಇರುತ್ತದೆ. ಆದ್ದರಿಂದ ನಿನಗೆ ಈ ಎಲ್ಲ ತೊಂದರೆಗಳು ಆಗುತ್ತಿವೆ.”
ಚತುರ ಮುಲ್ಲಾ ಹೇಳಿದ, “ನಿನ್ನ ಸಮಸ್ಯೆಯನ್ನು ಪರಿಹರಿಸುವುದು ಬಲು ಸುಲಭ. ಹಾಲು ಕುಡಿಯಬೇಡ! ಅದನ್ನು ನನಗೆ ಕೊಡು.” ಇಂತು ಹೇಳಿದ ಮುಲ್ಲಾ ಅವನಿಂದ ಹಾಲಿನ ಕ್ಯಾನನ್ನು ತೆಗೆದುಕೊಂಡು ಅಲ್ಲಿಂದ ಹೊರಟುಹೋದ.
ಆ ಬಡಪಾಯಿ ಅಲ್ಲಿಯೇ ದಿಗ್ಭ್ರಾಂತನಾಗಿ ನಿಂತೇ ಇದ್ದ.
*****