ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ
ಸೂಫಿ ಮುಮುಕ್ಷು ಜುನ್ನೈದ್‌ನ ಹತ್ತಿರ ಅವನ ಶಿಷ್ಯನಾಗಲೋಸುಗ ಒಬ್ಬ ವ್ಯಕ್ತಿ ಬಂದನು. ಜುನ್ನೈದ್‌ ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿದ. ಪರಿಣಾಮವಾಗಿ ಆ ವ್ಯಕ್ತಿ ತುಸು ಅಸ್ಥಿರಮನಸ್ಕನಾದ, ಜುನ್ನೈದ್‌ ಏಕೆ ಇಷ್ಟು ಹೊತ್ತು ಮೌನವಾಗಿ ತನ್ನನ್ನು ದಿಟ್ಟಿಸಿ ನೋಡುತ್ತಿದ್ದಾನೆ ಎಂಬುದು ಅರ್ಥವಾಗದೆ. 
ಕೊನೆಗೊಮ್ಮ ಜುನ್ನೈದ್‌ ಹೇಳಿದ, “ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ.”
ಆ ವ್ಯಕ್ತಿ ಹೇಳಿದ, “ಅಂತಾದರೆ ನಾನು ಹಿಂಬಾಲಕನಾಗಿರಲೂ ಸಿದ್ಧನಿದ್ದೇನೆ.”
ಜುನ್ನೈದ್‌ ಹೇಳಿದ, “ಅದು ಇನ್ನೂ ಕಷ್ಟದ ಕೆಲಸ. ಇಲ್ಲಿ ಸುಲಭವಾದದ್ದು ಯಾವುದೆಂದರೆ ಗುರುವಾಗಿರುವುದು.”
ವ್ಯಕ್ತಿ ಹೇಳಿದ, “ಹಾಗಿದ್ದರೆ ನಾನು ಗುರುವಾಗಿರಲೂ ಸಿದ್ಧ.”
ಜುನ್ನೈದ್‌ ಲ್ಲಿದ್ದ ತನ್ನ ಶಿಷ್ಯರಿಗೂ ಹಿಂಬಾಲಕರಿಗೂ ಹೇಳಿದ, “ತಿಳಿವಳಿಕೆಯೇ ಇಲ್ಲದಿರುವಿಕೆಗೆ ಇದೊಂದು ನಿದರ್ಶನ. ಸುಲಭ ಅನ್ನುವುದಾದರೆ ವಿದ್ಯಾರ್ಥಿಯಾಗುವ ಮುನ್ನವೇ ಈತ ಗುರುವಾಗಲು ತವಕಿಸುತ್ತಿದ್ದಾನೆ.”

*****

೨. ಗುರುಗಳು ನನ್ನ ಹಣೆಗೆ ಮುತ್ತು ಕೊಟ್ಟರು!
ಸೂಫಿ ಮುಮುಕ್ಷು ಜುನ್ನೈದ್‌ನೂ ಹಿಂದೊಮ್ಮೆ ‘ಅನ್ವೇಷಕ’ನೇ ಆಗಿದ್ದ. ಆ ದಿನಗಳ ಅನುಭವಗಳ ಕುರಿತು ಅವನು ತನ್ನ ಶಿಷ್ಯರಿಗೆ ಹೇಳುತ್ತಿದ್ದ, “ನಾನು ನನ್ನ ಗುರುವನ್ನು ಮೊದಲನೇ ಸಲ ಭೇಟಿ ಮಾಡಿದಾಗ ಮೂರು ವರ್ಷ ಕಾಲ ಅವರು ನನ್ನತ್ತ ತಿರುಗಿ ನೋಡಲೇ ಇಲ್ಲ. ಆ ಅವಧಿಯಲ್ಲಿ ನಾನು ಬೆಳಗಿನಿಂದ ಸಂಜೆಯ ವರೆಗೆ ಅವರ ಸಮ್ಮುಖದಲ್ಲಿ ಕುಳಿತಿರುತ್ತಿದ್ದೆ. ಎಷ್ಟೋ ಜನ ಅವರನ್ನು ನೋಡಲೋಸುಗ ಬಂದು ಹೋಗುತ್ತಿದ್ದರು, ಅವರು ಅನೇಕರೊಂದಿಗೆ ಮಾತನಾಡುತ್ತಿದ್ದರು, ನನ್ನತ್ತ ಮಾತ್ರ ತಿರುಗಿಯೂ ನೋಡುತ್ತಿರಲಿಲ್ಲ, ನಾನು ಅಸ್ತಿತ್ವದಲ್ಲಿ ಇರಲೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ನಾನೂ ಪಟ್ಟುಬಿಡದೆ ಅಲ್ಲಿಯೇ ಇದ್ದೆ, ಏಕೆಂದರೆ ನನ್ನ ಸಮೀಪದಲ್ಲಿಯೇ ಅವರು ಇರುವಂತೆ ನನಗೆ ಭಾಸವಾಗುತ್ತಿತ್ತು, ಅವರ ಸಾನ್ನಿಧ್ಯದ ಸುಖಾನುಭವ ನನಗಾಗುತ್ತಿತ್ತು. ನಾನು ಅಲ್ಲಿಯೇ ಇದ್ದೆ — ವಾಸ್ತವವಾಗಿ ಅವರು ನನ್ನನ್ನು ಹೆಚ್ಚುಹೆಚ್ಚು ನಿರ್ಲಕ್ಷಿಸಿದಷ್ಟೂ ಇದರಲ್ಲೇನೋ ರಹಸ್ಯವಿದೆ ಎಂಬುದಾಗಿ ನನಗನ್ನಿಸುತ್ತಿತ್ತು.”

ಮೂರು ವರ್ಷಗಳು ಕಳೆದ ನಂತರ ಗುರುಗಳು ಅವನತ್ತ ಮೊದಲ ಸಲ ನೋಡಿದರು. ಅವನೀಗ ವಿದ್ಯಾರ್ಥಿಯಲ್ಲ ಶಿಷ್ಯ ಎಂಬುದನ್ನು ತಿಳಿಸಿದ ವಿಧಾನ ಅದಾಗಿತ್ತು. ವಿದ್ಯಾರ್ಥಿಯಾಗಿದ್ದಿದ್ದರೆ ಮೂರು ವರ್ಷ ಕಾಲ ಗುರುಗಳು ತನ್ನನ್ನು ನೋಡಲಿ ಅನ್ನುವುದಕ್ಕಾಗಿ ಕಾಯುತ್ತಿರಲಿಲ್ಲ. 

ತದನಂತರ ಇನ್ನೂ ಮೂರು ವರ್ಷಗಳು ಕಳೆಯಿತು. ಆ ಅವಧಿಯಲ್ಲಿ ಗುರುಗಳು ಪುನಃ ಅವನತ್ತ ನೋಡಲೇ ಇಲ್ಲ. ಮೂರು ವರ್ಷಗಳು ಕಳೆದ ನಂತರ ಗುರುಗಳು ಅವನತ್ತ ನೋಡಿ ಮುಗುಳ್ನಗೆ ಬೀರಿದರು. ಅವರ ಮುಗುಳ್ನಗು ಹೃದಯವನ್ನು ಚುಚ್ಚಿದಂತೆ ಜುನ್ನೈದ್‌ನಿಗೆ ಭಾಸವಾಯಿತು. ಅವರೇಕೆ ಮುಗುಳ್ನಗೆ ಬೀರಿದರು? ಕೇಳಲು ಜುನ್ನೈದ್‌ನಿಗೆ ಅವಕಾಶವನ್ನೇ ನೀಡಲಿಲ್ಲ ಗುರುಗಳು. ತಕ್ಷಣ ಅವರು ಇತರ ಶಿಷ್ಯರೊಂದಿಗೆ ಮಾತನಾಡಲಾರಂಭಿಸಿದರು.

ಇನ್ನೂ ಮೂರು ವರ್ಷಗಳು ಉರುಳಿದವು. ಕೊನೆಗೊಂದು ದಿನ ಗುರುಗಳು ಅವನನ್ನು ತಮ್ಮ ಸಮೀಪಕ್ಕೆ ಬರಲು ಹೇಳಿ ಅವನ ಹಣೆಗೆ ಮುತ್ತು ಕೊಟ್ಟು ಹೇಳಿದರು, “ಮಗೂ, ನೀನೀಗ ಸಿದ್ಧನಾಗಿರುವೆ. ಈಗ ನೀನು ಹೋಗು, ಸಂದೇಶವನ್ನು ಪ್ರಸಾರ ಮಾಡು.”
ಆದರೆ ಅವನಿಗೆ ಯಾವ ಸಂದೇಶವನ್ನೂ ನೇರವಾಗಿ ನೀಡಿಯೇ ಇರಲಿಲ್ಲ. 
ಒಂಭತ್ತು ವರ್ಷಗಳ ಕಾಲ ಅವನು ಅಲ್ಲಿ ಇದ್ದ. ಅವರು ನೀಡಿದ ಏಕೈಕ ಸಂದೇಶ – ಒಂದು ಸಲ ಅವನತ್ತ ನೋಡಿದ್ದು, ಒಂದು ಸಲ ನೋಡಿ ಮುಗುಳ್ನಗೆ ಬೀರಿದ್ದು, ಒಂದು ಸಲ ಹಣೆಗೆ ಮುತ್ತು ಕೊಟ್ಟದ್ದು!
ಆದರೂ ಗುರುಗಳು ಅವನು ಸಿದ್ಧನಾಗಿದ್ದಾನೆ ಅಂದ ಮೇಲೆ ಅವನು ಸಿದ್ಧನಾಗಿರಲೇ ಬೇಕು. ಕೃತಜ್ಞತಾಪೂರ್ವಕವಾಗಿ ಗುರುಗಳ ಪಾದ ಮುಟ್ಟಿ ನಮಸ್ಕರಿಸಿ ಅವನು ಅಲ್ಲಿಂದ ಹೊರಟನು.

ಜುನ್ನೈದ್‌ ತನ್ನ ಶಿಷ್ಯರಿಗೆ ಇಂತು ಹೇಳುತ್ತಿದ್ದ: “ನಾನೊಬ್ಬ ವಿಚಿತ್ರ ಮನುಷ್ಯನನ್ನು ಭೇಟಿ ಮಾಡಿದ್ದೆ. ನನ್ನತ್ತ ಸರಿಯಾಗಿ ನೋಡದೆಯೇ ಒಂಭತ್ತು ವರ್ಷಗಳಲ್ಲಿ ಅವನು ನನ್ನನ್ನು ತಯಾರು ಮಾಡಿದ. ನನ್ನಲ್ಲಿ ಒಂದು ಬದಲಾವಣೆ ಆದಾಗ ಆತ ಸಂಕೇತದ ಮೂಲಕ ಸೂಚಿಸುತ್ತಿದ್ದ. ನಾನೊಬ್ಬ ಶಿಷ್ಯ, ಏನೇ ಆದರೂ ನಾನು ಅಲ್ಲಿಯೇ ಇರುತ್ತೇನೆ ಎಂಬುದು ಖಾತರಿ ಆದಾಗ ಆತ ನನ್ನನ್ನು ನೋಡಿದ. ಆ ನೋಟದ ಮೂಲಕ ಆತ ಪ್ರೀತಿಯ ಹೊಳೆಯನ್ನೇ ಹರಿಸಿದ……ಅದಕ್ಕಾಗಿ ನಾನು ಮೂರು ವರ್ಷಗಳಲ್ಲ, ಮೂರು ಜನ್ಮಗಳಷ್ಟು ಬೇಕಾದರೂ ಕಾಯಲು ಸಿದ್ಧನಿದ್ದೆ. ಅವನ ನೋಟದಲ್ಲಿ ಗಾಢವಾದ ಪ್ರೀತಿ, ಅನುಕಂಪ ತುಂಬಿತ್ತು. ಆಗ ನನಗಾದ ಆನಂದ ಅಷ್ಟಿಷ್ಟಲ್ಲ. ಹೊಸ ಅನುಭವದಲ್ಲಿ ಮಿಂದಂತಾಯಿತು. ನನಗೆ ಏನನ್ನೂ ಅವರು ಹೇಳದೇ ಇದ್ದರೂ……ಆ ಮೂರು ವರ್ಷಗಳಲ್ಲಿ ನನ್ನ ಮನಸ್ಸು ಕಾರ್ಯ ಮಾಡುವುದನ್ನೇ ನಿಲ್ಲಿಸಿತ್ತು. ನಾನು ಗುರುವನ್ನು, ಅವರ ಪ್ರತೀ ಅಂಗಸನ್ನೆಗಳನ್ನು ಏಕಾಗ್ರತೆಯಿಂದ ಗಮನಿಸುತ್ತಿದ್ದೆ. ನಿಧಾನವಾಗಿ, ಬಲು ನಿಧಾನವಾಗಿ ನಾನು ಆಲೋಚಿಸಲು ಏನೂ ಇಲ್ಲದಂತಾಯಿತು. ನಾನೇಕೆ ಅಲ್ಲಿ ಕುಳಿತಿದ್ದೇನೆ ಎಂಬುದೂ ನನಗೆ ಮರೆತು ಹೋಯಿತು — ಆ ದಿನ ಅವರು ನನ್ನನ್ನು ನೋಡಿದರು. ಆ ನೋಟದ ಉದ್ದೇಶ ನನಗೆ ಅರ್ಥವಾಯಿತು, ಬಹುದೊಡ್ಡ ಸಫಲತೆಯ ಅನುಭವವಾಯಿತು. ಮತ್ತೆ ಮೂರು ವರ್ಷಗಳು ಕಳೆದವು. ಆತ ಮುಗುಳ್ನಗೆ ಬೀರಿದಾಗ ಎಲ್ಲವೂ ಮುಗುಳ್ನಗೆ ಸೂಸಿದಂತಾಯಿತು – ಅದರ ಸ್ಪರ್ಷ ಬಲು ಮಿದುವಾಗಿತ್ತು, ಹೃದಯಾಂತರಾಳದಲ್ಲಿ ಅದು ನನ್ನನ್ನು ತಾಕಿತು. ಏನೋ ಬದಲಾವಣೆ ಆಗಿದೆಯೆಂಬುದು ತಿಳಿಯಿತಾದರೂ ಅದೇನೆಂಬುದು ಆಗ ಅರ್ಥವಾಗಿರಲಿಲ್ಲ. ನಾನು ಶಿಷ್ಯತ್ವದಿಂದ ಅನುಯಾಯಿಯ ಸ್ತರಕ್ಕೇರಿದ್ದೆ. ಅವನು ನನ್ನ ಹಣೆಗೆ ಮುತ್ತು ಕೊಟ್ಟ ದಿನ — ನಾನು ಗುರು ಸ್ಥಾನಕ್ಕೇರಿದ್ದೇನೆ ಎಂಬ ಪ್ರಮಾಣಪತ್ರಕ್ಕೊತ್ತಿದ ಮುದ್ರೆ ಅದಾಗಿತ್ತು. ಆ ಮುತ್ತೇ ಗುರುಗಳ ಅಂತಿಮ ಸಂದೇಶ. ಇದೆಲ್ಲ ನನಗೆ ಅರ್ಥವಾಗಲೂ ಇನ್ನೂ ಅನೇಕ ವರ್ಷಗಳು ಬೇಕಾಯಿತು.”

*****

೩. ಗುರುವಿನ ಹುಡುಕಾಟದಲ್ಲಿ
ಒಬ್ಬ ಯುವಕ ಒಳ್ಳೆಯ ಗುರುವನ್ನು ಹುಡುಕಲಾರಂಭಿಸಿದ. ಭೂಮಿಗೆ ಒಂದು ಸುತ್ತು ಹೋಗಬೇಕಾಗಿ ಬಂದರೂ ಸರಿಯೇ ಒಬ್ಬ ಗುರುವನ್ನು, ಒಬ್ಬ ನಿಜವಾದ ಗುರುವನ್ನು, ಒಬ್ಬ ಪರಿಪೂರ್ಣವಾದ ಗುರುವನ್ನು ಹುಡುಕಲು ಆತ ನಿರ್ಧರಿಸಿದ. 

ಅವನ ಹಳ್ಳಿಯ ಹೊರವಲಯದಲ್ಲಿ ಮರವೊಂದರ ಕೆಳಗೆ ಕುಳಿತುಕೊಂಡಿದ್ದ ವೃದ್ಧನೊಬ್ಬನನ್ನು, ಅವನು ಒಳ್ಳೆಯವನಂತೆ ಕಾಣುತ್ತಿದ್ದದ್ದರಿಂದ, ಭೇಟಿ ಮಾಡಿ ಕೇಳಿದ, “ನಿಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಈ ವಿಷಯದ ಕುರಿತು ಏನಾದರೂ ಕೇಳಿರುವಿರಾ —- ಅಂದ ಹಾಗೆ ನೀವೊಬ್ಬ ಅಲೆಮಾರಿಯಂತೆ ಕಾಣುತ್ತಿರುವಿರಿ ——”

ಆ ವೃದ್ಧ ಹೇಳಿದ, “ಹೌದು. ನಾನೊಬ್ಬ ಅಲೆಮಾರಿ. ನಾನು ಜಗತ್ತಿನಾದ್ಯಂತ ಸುತ್ತಾಡಿದ್ದೇನೆ.”
“ಹಾಗಿದ್ದರೆ ನೀವೇ ಸರಿಯಾದ ವ್ಯಕ್ತಿ. ನಾನು ಪರಿಪೂರ್ಣವಾದ ಗುರುವೊಬ್ಬನ ಶಿಷ್ಯನಾಗಲು ಇಚ್ಛಿಸುತ್ತೇನೆ. ನಾನು ಎಲ್ಲಿಗೆ ಹೋಗಬೇಕೆಂಬುದರ ಕುರಿತು ನೀವೇನಾದರೂ ಸಲಹೆ ನೀಡಬಲ್ಲಿರಾ?”
ವೃದ್ಧ ಅವನಿಗೆ ಕೆಲವು ವಿಳಾಸಗಳನ್ನು ಕೊಟ್ಟ. ವೃದ್ಧನಿಗೆ ಧನ್ಯವಾದಗಳನ್ನು ಅರ್ಪಿಸಿ ಆತ ಅಲ್ಲಿಂದ ಮುಂದಕ್ಕೆ ಪಯಣಿಸಿದ.

ಮೂವತ್ತು ವರ್ಷ ಕಾಲ ಆತ ಜಗತ್ತಿನಾದ್ಯಂತ ಅಲೆದಾಡಿದರೂ ಅವನ ನಿರೀಕ್ಷೆಗೆ ತಕ್ಕನಾದ ಒಬ್ಬ ವ್ಯಕ್ತಿಯೂ ಅವನಿಗೆ ಗೋಚರಿಸಲಿಲ್ಲ. ಉತ್ಸಾಹ ಕಳೆದುಕೊಂಡು ಬಲು ದುಃಖದಿಂದ ಅವನು ತನ್ನ ಹಳ್ಳಿಗೆ ಹಿಂದಿರುಗುತ್ತಿದ್ದಾಗ ಹೊರವಲಯದಲ್ಲಿ ಮರದ ಕೆಳಗೆ ಕುಳಿತಿದ್ದ ವೃದ್ಧನನ್ನು ನೋಡಿದ. ಅವನು ಈಗ ಹಣ್ಣುಹಣ್ಣು ಮುದುಕನಾಗಿದ್ದ. ಅವನನ್ನು ನೋಡಿದ ತಕ್ಷಣ ಅವನೇ ತನ್ನ ಗುರು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡಿತು! ಓಡಿಹೋಗಿ ಅವನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕೇಳಿದ, “ನೀವೇಕೆ ಆಗ ನನಗೆ ನೀವೇ ನನ್ನ ಗುರು ಎಂಬುದನ್ನು ತಿಳಿಸಲಿಲ್ಲ?”

ಆ ವೃದ್ಧ ಹೇಳಿದ, “ಅದು ಅದಕ್ಕೆ ತಕ್ಕ ಸಮಯವಾಗಿರಲಿಲ್ಲ. ನಿನ್ನಿಂದ ನನ್ನನ್ನು ಗುರುತಿಸಲು ಆಗ ಸಾಧ್ಯವಾಗಿರಲಿಲ್ಲ. ನಿನಗೆ ಅನುಭವದ ಆವಶ್ಯಕತೆ ಇತ್ತು. ಜಗತ್ತಿನಾದ್ಯಂತ ಸುತ್ತಾಡಿದ್ದರಿಂದ ನಿನಗೆ ಕೆಲವು ತಿಳಿವಳಿಕೆಗಳು ಲಭ್ಯವಾಗಿವೆ, ನೀನು ಅಪೇಕ್ಷಿತ ಮಟ್ಟಕ್ಕೆ ಪಕ್ವವಾಗಿರುವೆ. ಎಂದೇ ನೀನೀಗ ಸರಿಯಾಗಿ ನೋಡಬಲ್ಲೆ. ಕಳೆದ ಸಲ ನೀನು ನನ್ನನ್ನು ಭೇಟಿ ಮಾಡಿದಾಗ ನೀನು ನನ್ನನ್ನು ನಿಜವಾಗಿ ನೋಡಿರಲಿಲ್ಲ. ನನ್ನನ್ನು ಗುರುತಿಸುವುದರಲ್ಲಿ ನೀನು ವಿಫಲನಾಗಿದ್ದೆ. ನೀನು ಗುರುಗಳ ವಿಳಾಸಗಳನ್ನು ಕೇಳಿದ್ದೆ. ಅದರ ಅರ್ಥ ನೀನು ನನ್ನನ್ನು ಆಗ ಕಂಡಿರಲಿಲ್ಲ, ನನ್ನ ಇರುವಿಕೆಯ ಅನುಭವ ನಿನಗೆ ಆಗಿರಲಿಲ್ಲ, ಗುರುವಿನ ಇರುವಿಕೆಯ ಕಂಪನ್ನು ನೀನು ಗ್ರಹಿಸಲೇ ಇಲ್ಲ. ನೀನಾಗ ಸಂಪೂರ್ಣ ಕುರುಡನಾಗಿದ್ದೆ. ಆದ್ದರಿಂದ ನಾನು ನಿನಗೆ ಅನುಭವ ಆಗಲಿ ಎಂಬುದಕ್ಕೋಸ್ಕರ ಕೆಲವು ನಕಲಿ ವಿಳಾಸಗಳನ್ನು ಕೊಟ್ಟಿದ್ದೆ. ಕೆಲವೊಮ್ಮೆ ಒಬ್ಬನಿಗೆ ತಪ್ಪು ಮಾಹಿತಿ ಕೊಡುವುದೂ ಒಳ್ಳೆಯದೇ, ಏಕೆಂದರೆ ಅದರಿಂದಾಗಿ ಅವನು ಕಲಿಯುತ್ತಾನೆ. ನಾನು ಕಳೆದ ಮೂವತ್ತು ವರ್ಷಗಳಿಂದ ನಿನಗಾಗಿ ಕಾಯುತ್ತಿದ್ದೇನೆ, ಈ ಮರವನ್ನು ಬಿಟ್ಟು ಬೇರೆಡೆಗೆ ಹೋಗಲಿಲ್ಲ.”
ವಾಸ್ತವವಾಗಿ ಅವನೀಗ ಯುವಕನಾಗಿರಲಿಲ್ಲ, ಅವನಿಗೂ ವಯಸ್ಸಾಗಿತ್ತು. ಅಲ್ಲಿದ್ದ ಮರವನ್ನು ನೋಡಿದಾಗ ಅವನಿಗೆ ಆಶ್ಚರ್ಯವಾಯಿತು. ಏಕೆಂದರೆ, ಅವನಿಗೆ ಆ ಮರ ಯಾವಾಗಲೂ ಕನಸಿನಲ್ಲಿ ಕಾಣಿಸುತ್ತಿತ್ತು, ಆ ಮರದ ಕೆಳಗೆ ತನ್ನ ಗುರು ಗೋಚರಿಸುತ್ತಾನೆ ಎಂಬುದಾಗಿ ಅನ್ನಿಸುತ್ತಿತ್ತು. ಹಿಂದಿನ ಸಲ ಅವನು ಆ ಮರವನ್ನು ಗಮನಿಸಿಯೇ ಇರಲಿಲ್ಲ. ಮರ ಅಲ್ಲಿತ್ತು, ಗುರುವೂ ಅಲ್ಲಿದ್ದರು, ಎಲ್ಲವೂ ಸಿದ್ಧವಾಗಿತ್ತಾದರೂ ಅವನೇ ಸಿದ್ಧವಾಗಿರಲಿಲ್ಲ!

*****

೪. ಆನಂದದಲ್ಲಿ ಕಳೆದುಹೋಗು
ಒಬ್ಬ ಸೂಫಿ ಮುಮುಕ್ಷುವಿನ ಜೀವನ ಎಷ್ಟು ಒಲವು ಹಾಗು ಆನಂದಭರಿತವಾಗಿತ್ತು ಅಂದರೆ ಆತನ ಇಡೀ ಜೀವನವೇ ನಗು, ಸಂಗೀತ, ನೃತ್ಯ ಇವುಗಳ ಹಿತಕರ ಮಿಶ್ರಣವಾಗಿತ್ತು. ಇಂತಿದ್ದ ಸೂಫಿ ಮುಮುಕ್ಷುವಿನ ಕುರಿತು ದೇವರಿಗೆ ವಿಶೇಷ ಆಸಕ್ತಿ ಮೂಡಿತಂತೆ. ಏಕೆಂದರೆ ಆತ ಎಂದೂ ಏನನ್ನೂ ದೇವರಿಂದ ಕೇಳಿರಲಿಲ್ಲ, ಎಂದೂ ದೇವರಿಗೆ ಪ್ರಾರ್ಥನೆ ಸಲ್ಲಿಸಿರಲೇ ಇಲ್ಲ. ಅವನ ಜೀವನವೇ ಒಂದು ಪ್ರಾರ್ಥನೆಯಂತಿದ್ದದ್ದರಿಂದ ಪ್ರತ್ಯೇಕವಾಗಿ ಪ್ರಾರ್ಥಿಸುವ ಆವಶ್ಯಕತೆಯೇ ಇರಲಿಲ್ಲ. ಅವನು ಎಂದೂ ಮಸೀದಿಗೆ ಹೋಗುತ್ತಿರಲಿಲ್ಲ, ಎಂದೂ ದೇವರ ಹೆಸರನ್ನೂ ಹೇಳುತ್ತಿರಲಿಲ್ಲ; ಏಕೆಂದರೆ ಅವನ ಇರುವಿಕೆಯೇ ದೇವರ ಇರುವಿಕೆಗೆ ಪುರಾವೆಯಂತಿತ್ತು. ದೇವರಿದ್ದಾನೆಯೇ ಇಲ್ಲವೇ ಎಂಬುದಾಗಿ ಯಾರಾದರೂ ಆತನನ್ನು ಕೇಳಿದರೆ ಅವನು ನಕ್ಕುಬಿಡುತ್ತಿದ್ದ — ಆ ನಗುವು ದೇವರು ಇದ್ದಾನೆ ಎಂಬುದರ ಸೂಚಕವೂ ಆಗಿರಲಿಲ್ಲ, ಇಲ್ಲ ಎಂಬುದರ ಸೂಚಕವೂ ಆಗಿರಲಿಲ್ಲ. 
ಈ ವಿಚಿತ್ರ ಮುಮುಕ್ಷುವಿನ ಕುರಿತಾಗಿ ಆಸಕ್ತಿ ಉಂಟಾಗಿ ದೇವರೇ ಅವನ ಹತ್ತಿರ ಬಂದು ಕೇಳಿದ, “ನನಗೆ ನಿನ್ನನ್ನು ನೋಡಿ ಬಹಳ ಸಂತೋಷವಾಗಿದೆ, ಏಕೆಂದರೆ ಎಲ್ಲರೂ ನಿನ್ನಂತೆಯೇ ಇರಬೇಕೆಂಬುದು ನನ್ನ ಇಚ್ಛೆ. ಒಂದು ಗಂಟೆ ಕಾಲ ಪ್ರಾರ್ಥನೆ ಮಾಡಿ ತದನಂತರದ ೨೩ ಗಂಟೆ ಕಾಲ ಅದಕ್ಕೆ ವಿರುದ್ಧವಾಗಿ ವರ್ತಿಸಬೇಕೆಂದು ನಾನು ಬಯಸುವುದಿಲ್ಲ, ಮಸೀದಿಯನ್ನು ಪ್ರವೇಶಿಸುವಾಗ ಎಲ್ಲರೂ ಭಕ್ತರೂ ಶ್ರದ್ಧಾವಂತರೂ ಆಗಿ ಅಲ್ಲಿಂದ ಹೊರಬಂದ ತಕ್ಷಣ ಮೊದಲಿನಂತೆಯೇ ಕೋಪಿಷ್ಟರೂ, ಅಸೂಯೆ ಪಡುವವರೂ, ವ್ಯಾಕುಲಿಗಳೂ, ಹಿಂಸಾಪರರೂ ಆಗಬೇಕೆಂಬುದೂ ನನ್ನ ಇಚ್ಛೆಯಲ್ಲ. ನಾನು ನಿನ್ನನ್ನು ಬಹುಕಾಲದಿಂದ ಗಮನಿಸುತ್ತಿದ್ದೇನೆ, ಮೆಚ್ಚಿದ್ದೇನೆ. ಎಲ್ಲರೂ ಇರಬೇಕಾದದ್ದೇ ಹೀಗೆ – ನೀನೇ ಪ್ರಾರ್ಥನೆ ಆಗಿರುವೆ. ಇಲ್ಲಿಯ ವರೆಗೆ ನೀನು ಯಾರೊಂದಿಗೂ ವಾದ ಮಾಡಿಲ್ಲ, ಒಂದು ಸಲವೂ ನನ್ನ ಹೆಸರನ್ನು ಹೇಳಿಲ್ಲ. ವಾಸ್ತವವಾಗಿ ಇವೆಲ್ಲವೂ ಅನವಶ್ಯಕವಾದವು. ನೀನಾದರೋ ನಿಜವಾಗಿ ಜೀವಿಸುತ್ತಿರುವೆ, ಎಲ್ಲರನ್ನೂ ಪ್ರೀತಿಸುತ್ತಿರುವೆ, ನೀನು ಸದಾ ಹರ್ಷಚಿತ್ತನಾಗಿರುವುದರಿಂದ ಬೇರೆ ಭಾಷೆಯೇ ಬೇಕಿಲ್ಲ; ನಿನ್ನ ಇರುವಿಕೆಯೇ ನನ್ನ ಅಸ್ತಿತ್ವಕ್ಕೆ ಪುರಾವೆ. ನಾನು ನಿನ್ನನ್ನು ಆಶೀರ್ವದಿಸಲು ಇಚ್ಛಿಸುತ್ತೇನೆ. ನೀನು ಏನು ಬೇಕಾದರೂ ಕೇಳಬಹುದು.”

“ಆದರೆ ನನಗೇನೂ ಬೇಡವಲ್ಲ! ನಾನು ಸಂತೋಷವಾಗಿದ್ದೇನೆ, ಇದಕ್ಕಿಂತ ಹೆಚ್ಚಿನದೇನನ್ನೂ ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಕ್ಷಮಿಸು, ನಾನೇನನ್ನೂ ಕೇಳುವುದಿಲ್ಲ, ಏಕೆಂದರೆ ನನಗೆ ಬೇರೆ ಯಾವುದರ ಆವಶ್ಯಕತೆಯೂ ಇಲ್ಲ. ನೀನು ಉದಾರ ಹೃದಯಿ, ನೀನು ಪ್ರೇಮಮಯಿ, ನೀನು ಕಾರುಣ್ಯಮಯಿ, ಆದರೂ ನಾನು ತುಸು ಹೆಚ್ಚೇ ತುಂಬಿದವನು, ನನ್ನೊಳಗೆ ಇನ್ನೇನನ್ನೂ ತುಂಬಿಸಲು ಸ್ಥಳವೇ ಇಲ್ಲ. ನೀನು ನನ್ನನ್ನು ಕ್ಷಮಿಸಲೇ ಬೇಕು, ನಾನೇನನ್ನೂ ಕೇಳಲಾರೆ.”

“ನೀನೇನನ್ನೂ ಕೇಳುವುದಿಲ್ಲ ಎಂಬುದನ್ನು ನಾನು ಊಹಿಸಿದ್ದೆ. ಆದರೆ ನಿನಗಾಗಿ ಏನನ್ನೂ ನೀನು ಕೇಳದೇ ಇದ್ದರೂ ಬೇರೆಯವರಿಗಾಗಿ ನೀನು ಏನನ್ನಾದರೂ ಕೇಳಬಹುದಲ್ಲ? ಸಂಕಷ್ಟದಲ್ಲಿ ಇರುವವರು, ರೋಗಗ್ರಸ್ತರು, ಕೃತಜ್ಞತೆ ಸಲ್ಲಿಸಬಹುದಾದಂಥದ್ದು ಏನೂ ಇಲ್ಲದವರು ಕೋಟಿಗಟ್ಟಲೆ ಮಂದಿ ಇದ್ದಾರಲ್ಲ,
ಅವರಿಗಾಗಿ ಏನನ್ನಾದರೂ ಕೇಳಬಹುದು. ಪವಾಡಗಳನ್ನು ಮಾಡುವ ಸಾಮರ್ಥ್ಯವನ್ನು ನಿನಗೆ ಕೊಡಬಲ್ಲೆ, ಅದರಿಂದ ಆ ಎಲ್ಲರ ಜೀವನವನ್ನೇ ಬದಲಿಸಬಹುದು.”

“ನೀನು ಇಷ್ಟು ಒತ್ತಾಯ ಮಾಡುವುದಾದರೆ ನಾನು ನಿನ್ನ ಉಡುಗೊರೆಗಳನ್ನು ಒಂದು ಷರತ್ತಿಗೆ ಒಳಪಟ್ಟು ಸ್ವೀಕರಿಸುತ್ತೇನೆ.”
“ಏನು ಷರತ್ತು? ನೀನು ನಿಜವಾಗಿಯೂ ವಿಚಿತ್ರ ಮನುಷ್ಯ. ನಿನ್ನ ಷರತ್ತೇನು?”
“ನನ್ನದು ಒಂದೇ ಒಂದು ಷರತ್ತು – ನಿನ್ನಿಂದ ನನ್ನ ಮೂಲಕ ಏನು ನಡೆಯುತ್ತಿದೆ ಎಂಬುದರ ಅರಿವು ನನಗೆ ಆಗಬಾರದು. ಅದು ನನ್ನ ಬೆನ್ನಹಿಂದೆ ಜರಗಬೇಕು. ಅದು ನನ್ನ ನೆರಳಿನ ಮೂಲಕ ಆಗಬೇಕು, ನನ್ನ ಮೂಲಕವಲ್ಲ. ನಾನು ಹೋಗುತ್ತಿರುವಾಗ ನನ್ನ ನೆರಳು ಒಂದು ಒಣ ಮರದ ಮೇಲೆ ಬಿದ್ದರೆ ಅದು ಪುನಃ ಜೀವಂತವಾಗಿ ಫಲಪುಷ್ಪಭರಿತವಾಗಬೇಕು – ಅದರೆ ಅದರ ಅರಿವು ನನಗಾಗಬಾರದು, ಏಕೆಂದರೆ ಈಗ ನಾನಿರುವ ಸ್ತರದಿಂದ ಕೆಳಕ್ಕೆ ಬೀಳಲು ನಾನು ಇಚ್ಛಿಸುವುದಿಲ್ಲ. ಅಕಸ್ಮಾತ್ ಅದು ನನಗೆ ತಿಳಿದರೆ – ಅದು ನಾನು ಅಥವ ದೇವರು ನನ್ನ ಮುಖೇನ ಮಾಡಿದ್ದು ಎಂಬುದು ತಿಳಿದರೆ – ಅದು ಬಲು ಅಪಾಯಕಾರಿ. ಎಂದೇ ಈ ಷರತ್ತು – ಒಬ್ಬ ಕುರುಡನ ಕುರುಡುತನ ಹೋಗಲಿ, ಆದರೆ ಅದು ನನ್ನಿಂದಾದದ್ದು ಎಂಬುದು ಅವನಿಗೂ ತಿಳಿಯಬಾರದು, ನನಗೂ ತಿಳಿಯಬಾರದು. ನನ್ನ ಬೆನ್ನಹಿಂದೆ ನನ್ನ ನೆರಳು ಎಲ್ಲ ಪವಾಡಗಳನ್ನು ಮಾಡಲಿ. ನೀನು ನನ್ನ ಈ ಷರತ್ತನ್ನು ಒಪ್ಪಿಕೊಳ್ಳುವುದಾದರೆ ಮಾತ್ರ, ನೆನಪಿರಲಿ ನನಗೇನೂ ತಿಳಿಯಕೂಡದು — ಏಕೆಂದರೆ ಈಗ ನಾನು ಸಂತೋಷವಾಗಿದ್ದೇನೆ, ಆನಂದವಾಗಿದ್ದೇನೆ. ಪುನಃ ನನ್ನನ್ನು ಸಂಕಷ್ಟಭರಿತ ಜಗತ್ತಿಗೆ ಎಳೆದು ಹಾಕಬೇಡ. ಪುನಃ ‘ನಾನು’ ಆಗುವಂತೆ ಮಾಡಬೇಡ.”

ದೇವರು ಅವನಿಗೆ ಹೇಳಿದರು, “ನೀನು ವಿಚಿತ್ರ ವ್ಯಕ್ತಿ ಮಾತ್ರವಲ್ಲ, ಅದ್ವಿತೀಯನೂ ಅಪೂರ್ವವಾದವನೂ ಆಗಿರುವೆ. ನೀನು ಇಚ್ಛಿಸುವಂತೆಯೇ ಆಗಲಿ. ನಿನ್ನ ಸುತ್ತಲೂ ನಿನ್ನಿಂದಾಗಿ ಆಗುವ ಒಳಿತುಗಳು ಯಾವುವೂ ನಿನಗೆ ಎಂದಿಗೂ ತಿಳಿಯುವುದಿಲ್ಲ. ನೀನು ಹೋದೆಡೆಯೆಲ್ಲ ಪವಾಡಗಳು ಜರಗುತ್ತವೆ. ಅವು ನಿನ್ನಿಂದಾಗಿ ಆದವುಗಳು ಎಂಬುದು ನಿನಗೇ ಆಗಲಿ ಜನರಿಗೇ ಆಗಲಿ ತಿಳಿಯುವುದಿಲ್ಲ. ನಿನ್ನ ಷರತ್ತನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ.”

*****

೫. ನೀನು ನೀನೇ ಆಗಿರಲಿಲ್ಲವೇಕೆ?
ಹಸ್ಸಿದ್‌ನ ಮುಮುಕ್ಷು ಜೂಸಿಯಾ ಮರಣಶಯ್ಯೆಯಲ್ಲಿದ್ದ. ಇದ್ದಕ್ಕಿದ್ದಂತೆ ಆತ ಅಳಲಾರಂಭಿಸಿದ. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು, ಅವನು ನಡುಗುತ್ತಿದ್ದ.
ಯಾರೋ ಕೇಳಿದರು, “ಏನು ವಿಷಯ? ಏಕೆ ನಡುಗುತ್ತಿರುವೆ?”

ಅವನು ವಿವರಿಸಿದ, “ನಾನು ಒಂದು ನಿರ್ದಿಷ್ಟ ಕಾರಣಕ್ಕಾಗಿ ನಡುಗುತ್ತಿದ್ದೇನೆ. ಇದು ನನ್ನ ಜೀವನದ ಅಂತಿಮ ಕ್ಷಣ, ನಾನು ಸಾಯುತ್ತಿದ್ದೇನೆ. ಸಧ್ಯದಲ್ಲಿಯೇ ನಾನು ದೇವರಿಗೆ ಮುಖಾಮುಖಿಯಾಗುತ್ತೇನೆ. ಅವನು ನನ್ನನ್ನು ಖಂಡಿತವಾಗಿ ‘ನೀನೇಕೆ ಮೋಸೆಸ್‌ ಆಗಿರಲಿಲ್ಲ’ ಎಂಬುದಾಗಿ ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ನಾನು ಹೇಳುತ್ತೇನೆ, ‘ಮಹಾಪ್ರಭು ಏಕೆಂದರೆ ನೀವು ನನಗೆ ಮೋಸೆಸ್‌ನ ಗುಣಲಕ್ಷಣಗಳನ್ನು ಕೊಟ್ಟಿರಲಿಲ್ಲ’; ಏನೂ ಸಮಸ್ಯೆ ಉದ್ಭವಿಸುವುದೇ ಇಲ್ಲ. ಅವನು ನನ್ನನ್ನು ‘ನೀನೇಕೆ ರಬ್ಬಿಅಕಿಬಾ ಆಗಿರಲಿಲ್ಲ ’ ಎಂಬುದಾಗಿಯೂ ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ನಾನು ಹೇಳುತ್ತೇನೆ, ‘ಮಹಾಪ್ರಭು ಏಕೆಂದರೆ ನೀವು ನನಗೆ ರಬ್ಬಿಅಕಿಬಾ ‌ನ ಗುಣಲಕ್ಷಣಗಳನ್ನು ಕೊಟ್ಟಿರಲಿಲ್ಲ.’ ನಾನು ನಡುಗುತ್ತಿರುವುದು ಏಕೆಂದರೆ, ಒಂದು ವೇಳೆ ಅವನು ‘ಜೂಸಿಯಾ ನೀನೇಕೆ ಜೂಸಿಯಾ ಆಗಿರಲಿಲ್ಲ’ ಎಂಬುದಾಗಿ ಕೇಳಿದರೆ ನನ್ನ ಹತ್ತಿರ ಉತ್ತರವೇ ಇಲ್ಲ. ಆಗ ನಾನು ನಾಚಿಕೆಯಿಂದ ತಲೆ ತಗ್ಗಿಸಲೇ ಬೇಕಾಗುತ್ತದೆ. ಅದಕ್ಕಾಗಿ ನಾನು ನಡುಗುತ್ತಿದ್ದೇನೆ, ಅಳುತ್ತಿದ್ದೇನೆ. ನನ್ನ ಜೀವಿತಾವಧಿಯಲ್ಲಿ ನಾನು ಮೋಸೆಸ್‌ನಂತೆಯೋ ರಬ್ಬಿ ಅಕಿಬಾನಂತೆಯೋ ಬೇರೆ ಯಾರಂತೆಯೋ ಆಗಲು ಪ್ರಯತ್ನಿಸುತ್ತಿದ್ದೆ. ಆದರೆ ದೇವರು ನಾನು ಜೂಸಿಯಾನಂತೆ ಇರಬೇಕೆಂಬುದ್ದಾಗಿ ಇಚ್ಛಿಸಿದ್ದನೇ ವಿನಾ ಇನ್ನಾರಂತೆಯೋ ಅಲ್ಲ. ಈಗ ನನಗೆ ಭಯವಾಗುತ್ತಿದೆ, ಎಂದೇ ನಡುಗುತ್ತಿದ್ದೇನೆ. ದೇವರು ಆ ಪ್ರಶ್ನೆ ಕೇಳಿದರೆ ನಾನೇನು ಉತ್ತರ ಕೊಡಲು ಸಾಧ್ಯ? ‘ನೀನೇಕೆ ಜೂಸಿಯಾ ಆಗಿರಲಿಲ್ಲ? ಜೂಸಿಯಾ ಆಗಿರಲು ಬೇಕಾಗಿದ್ದ ಎಲ್ಲ ಗುಣಲಕ್ಷಣಗಳನ್ನೂ ನಿನಗೆ ಕೊಟ್ಟಿದ್ದೆ. ಅದನ್ನೇಕೆ ನೀನು ಗಮನಿಸಲಿಲ್ಲ?’ ಬೇರೆಯವರನ್ನು ಅನುಕರಿಸುವ ಭರಾಟೆಯಲ್ಲಿ ನಾನು ನಾಗಿರಲು ಸಿಕ್ಕಿದ್ದ ಅವಕಾಶ ಕಳೆದುಕೊಂಡೆ.”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x