೧. ಭರವಸೆ, ಭಯ, ಜ್ಞಾನ
ಸೂಫಿ ಮುಮುಕ್ಷು ಹಸನ್ ಮರಣಶಯ್ಯೆಯಲ್ಲಿದ್ದಾಗ ಯಾರೋ ಒಬ್ಬ ಕೇಳಿದ, “ಹಸನ್ ನಿನ್ನ ಗುರು ಯಾರು?”
“ನೀನು ತುಂಬ ತಡಮಾಡಿ ಈ ಪ್ರಶ್ನೆ ಕೇಳಿರುವೆ. ಈಗ ಸಮಯವಿಲ್ಲ, ನಾನು ಸಾಯುತ್ತಿದ್ದೇನೆ.”
“ನೀನೊಂದು ಹೆಸರು ಮಾತ್ರ ಹೇಳಬೇಕಷ್ಟೆ. ನೀನಿನ್ನೂ ಬದುಕಿರುವೆ, ನೀನಿನ್ನೂ ಉಸಿರಾಡುತ್ತಿರುವೆ, ಆದ್ದರಿಂದ ಸುಲಭವಾಗಿ ನನಗೆ ನಿನ್ನ ಗುರುವಿನ ಹೆಸರು ಹೇಳಬಹುದು.”
“ಅದು ಅಷ್ಟು ಸುಲಭವಲ್ಲ. ಏಕೆಂದರೆ ನನಗೆ ಸಹಸ್ರಾರು ಗುರುಗಳಿದ್ದರು. ಅವರ ಹೆಸರುಗಳನ್ನು ಹೇಳಲು ನನಗೆ ಅನೇಕ ತಿಂಗಳುಗಳು, ಅಲ್ಲ, ವರ್ಷಗಳು ಬೇಕು. ಆದರೂ ನಿನಗೆ ಮೂರು ಗುರುಗಳ ಕುರಿತು ಖಂಡಿತ ಹೇಳುತ್ತೇನೆ.
ನನ್ನ ಮೊದಲನೇ ಗುರು ಒಬ್ಬ ಕಳ್ಳನಾಗಿದ್ದ. ಒಮ್ಮೆ ನಾನು ಮರುಭೂಮಿಯಲ್ಲಿ ದಾರಿ ತಪ್ಪಿ ಅಲೆದಲೆದು ಹಳ್ಳಯೊಂದನು ತಲುಪಿದಾಗ ಬಲು ತಡವಾಗಿತ್ತು. ಅರ್ಧ ರಾತ್ರಿಯೇ ಕಳೆದುಹೋಗಿತ್ತು. ಅಂಗಡಿಗಳು ಮುಚ್ಚಿದ್ದವು, ಪ್ರಯಾಣಿಕರ ಛತ್ರಗಳೂ ಮುಚ್ಚಿದ್ದವು. ರಸ್ತೆಯಲ್ಲಿ ಒಬ್ಬನೇ ಒಬ್ಬ ಮನುಷ್ಯನೂ ಇರಲಿಲ್ಲ. ಈ ಕುರಿತು ವಿಚಾರಿಸಲೋಸುಗ ಯಾರಾದರೂ ಗೋಚರಿಸಿಯಾರು ಎಂಬ ನಿರೀಕ್ಷೆಯೊಂದಿಗೆ ಹುಡುಕತೊಡಗಿದೆ. ಒಂದು ಮನೆಯ ಗೋಡೆಯಲ್ಲಿ ರಂಧ್ರ ಕೊರೆಯಲು ಪ್ರಯತ್ನಿಸುತ್ತಿದ್ದವನೊಬ್ಬ ಗೋಚರಿಸಿದ. ನಾನೆಲ್ಲಿ ತಂಗಬಹುದು ಎಂಬುದಾಗಿ ಅವನನ್ನು ಕೇಳಿದೆ. ಅವನು ಹೇಳಿದ, ‘ನಾನೊಬ್ಬ ಕಳ್ಳ. ನಿನ್ನ ಉಡುಪು ಮತ್ತು ತೇಜಸ್ಸು ನೋಡಿದರೆ ಒಬ್ಬ ಸೂಫಿ ಮುಮುಕ್ಷುವನಂತೆ ಕಾಣುತ್ತಿರುವೆ. ಈ ಹೊತ್ತಿನಲ್ಲ ತಂಗಲು ಯಾವದೇ ಸ್ಥಳ ಸಿಕ್ಕುವುದು ಕಷ್ಟ. ಆದರೂ ನೀನು ನನ್ನ ಮನೆಗೆ ಬರಬಹುದು, ಅಲ್ಲಿಯೇ ತಂಗಬಹುದು, ಒಬ್ಬ ಕಳ್ಳನ ಜೊತೆ ತಂಗಲು ಅಭ್ಯಂತರ ಇಲ್ಲ ಎಂಬುದಾದರೆ’ ಒಂದು ಕ್ಷಣ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ಗೊಂದಲಕ್ಕೀಡಾದೆ. ಸೂಫಿಯೊಬ್ಬನಿಗೆ ಒಬ್ಬ ಕಳ್ಳ ಭಯಪಡುತ್ತಿಲ್ಲ ಅನ್ನುವುದಾದರೆ ಸೂಫಿಯೊಬ್ಬ ಕಳ್ಳನಿಗೇಕೆ ಭಯಪಡಬೇಕು? ವಾಸ್ತವವಾಗಿ ಅವನು ನನಗೆ ಭಯಪಡಬೇಕಿತ್ತು. ಆದ್ದರಿಂದ ನಾನು ಅವನೊಂದಿಗೆ ಹೋಗಲು ಒಪ್ಪಿದೆ, ಹೋದೆ ಹಾಗೂ ಆ ಕಳ್ಳನೊಡನೆ ತಂಗಿದೆ. ಅವನ ಆತಿಥ್ಯ ಎಷ್ಟು ಚೆನ್ನಾಗಿತ್ತು ಅಂದರೆ ನಾನು ಅಲ್ಲಿ ಒಂದು ತಿಂಗಳ ಕಾಲ ತಂಗಿದೆ! ಪ್ರತೀ ರಾತ್ರಿ ಅವನು ಹೇಳುತ್ತಿದ್ದ, ‘ನಾನೀಗ ನನ್ನ ಕೆಲಸಕ್ಕೆ ಹೋಗುತ್ತೇನೆ. ನೀವು ವಿಶ್ರಾಂತಿ ತೆಗೆದುಕೊಳ್ಳಿ, ಪ್ರಾರ್ಥಿಸಿ, ನಿಮ್ಮ ಕೆಲಸ ಮಾಡಿ.’ ಅವನು ಹಿಂದಕ್ಕೆ ಬಂದಾಗ ನಾನು ಕೇಳುತ್ತಿದ್ದೆ, ‘ಏನಾದರೂ ಸಿಕ್ಕಿತೇ?’ ಅವನು ಉತ್ತರಿಸುತ್ತಿದ್ದ, ‘ಇಂದು ರಾತ್ರಿ ಏನೂ ಸಿಕ್ಕಲಿಲ್ಲ. ಪರವಾಗಿಲ್ಲ, ನಾಳೆ ಪುನಃ ಪ್ರಯತ್ನಿಸುತ್ತೇನೆ.’ ಅವನನ್ನು ಹತಾಶ ಸ್ಥಿತಿಯಲ್ಲಿ ಎಂದೂ ನೋಡಲಿಲ್ಲ. ಒಂದು ತಿಂಗಳ ಕಾಲ ಅವನು ಪ್ರತೀ ದಿನ ಬರಿಗೈನಲ್ಲಿ ಹಿಂದಿರುಗುತ್ತಿದ್ದನಾದರೂ ಸಂತೋಷವಾಗಿರುತ್ತಿದ್ದ. ಅವನು ಹೇಳುತ್ತಿದ್ದ, ‘ನಾಳೆ ಪುನಃ ಪ್ರಯತ್ನಿಸುತ್ತೇನೆ. ದೈವಕೃಪೆ ಇದ್ದರೆ ನಾಳೆ ಏನಾದರೂ ಸಿಕ್ಕುತ್ತದೆ. ನೀವೂ ನನಗೋಸ್ಕರ ಪ್ರಾರ್ಥಿಸಿ. ಕನಿಷ್ಠಪಕ್ಷ ಈ ಬಡವನಿಗೆ ಸಹಾಯ ಮಾಡು ಎಂಬುದಾಗಿ ನೀವು ದೇವರಿಗೆ ಹೇಳಬಹುದಲ್ಲ.’” ಹಸನ್ ತನ್ನ ವಿವರಣೆ ಮುಂದುವರಿಸಿದ, “ನಾನು ಅನೇಕ ವರ್ಷಗಳಿಂದ ಧ್ಯಾನ ಮಾಡುತ್ತಿದ್ದರೂ ಏನೂ ಆಗುತ್ತಿರಲಿಲ್ಲ, ಅನೇಕ ಸಲ ನಾನು ಹತಾಶನಾದದ್ದುಂಟು, ಇವೆಲ್ಲವೂ ನಿಷ್ಪ್ರಯೋಜಕ ಎಂಬುದಾಗಿಯೂ ಆಲೋಚಿಸಿ ಎಲ್ಲವನ್ನೂ ನಿಲ್ಲಿಸಿ ಬಿಡಬೇಕೆಂದು ಆಲೋಚಿಸಿದ್ದೂ ಉಂಟು. ದೇವರು ಎಂಬುದೇ ಇಲ್ಲ, ಈ ಪ್ರಾರ್ಥಿಸುವಿಕೆ ಎಂಬುದೇ ಹುಚ್ಚುತನ, ಧ್ಯಾನ ಎಂಬುದೇ ಸುಳ್ಳು — ಇಂತೆಲ್ಲಾ ಆಲೋಚಿಸುವಾಗ ಪ್ರತೀ ದಿನ ರಾತ್ರಿ ‘ನಾಳೆ ಪುನಃ ಪ್ರಯತ್ನಿಸುತ್ತೇನೆ. ದೈವಕೃಪೆ ಇದ್ದರೆ ನಾಳೆ ಏನಾದರೂ ಸಿಕ್ಕುತ್ತದೆ’ ಎಂಬುದಾಗಿ ಹೇಳುತ್ತಿದ್ದ ಕಳ್ಳನ ನೆನಪಾಗುತ್ತಿತ್ತು. ನಾನು ಇನ್ನೂ ಒಂದು ದಿನ ಪ್ರಯತ್ನಿಸುತ್ತಿದ್ದೆ. ಒಬ್ಬ ಕಳ್ಳನಿಗೇ ಅಷ್ಟೊಂದು ಭರವಸೆ ಇರಬೇಕಾದರೆ, ನಾನೂ ಅಷ್ಟೇ ಭರವಸೆ ಹಾಗೂ ವಿಶ್ವಾಸದಿಂದ ಕನಿಷ್ಠಪಕ್ಷ ಇನ್ನೂ ಒಂದು ದಿನವಾದರೂ ಪ್ರಯತ್ನಿಸಬಾರದೇಕೆ? ಇದು ಅನೇಕ ಬಾರಿ ಪುನರಾವರ್ತನೆ ಆಯಿತು. ಆ ಕಳ್ಳನ ನೆನಪು ಇನ್ನೂ ಒಂದು ದಿನ ಪ್ರಯತ್ನಿಸುವಂತೆ ನನ್ನನ್ನು ಪ್ರೇರೇಪಿಸುತ್ತಿತ್ತು. ಕೊನೆಗೂಂದು ದಿನ ಅದು ಜರಗಿತು, ಅದು ನಿಜವಾಗಿಯೂ ಜರಗಿತು! ನಾನು ಅವನಿಗೆ ಶಿರಬಾಗಿ ನಮಿಸಿದೆ. ನಾನು ಆ ಕಳ್ಳನಿಂದ, ಅವನ ಮನೆಯಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ಆ ದಿಕ್ಕಿನತ್ತ ಶಿರಬಾಗಿ ನಮಿಸಿದೆ. ಅವನೇ ನನ್ನ ಮೊದಲನೇ ಗುರು.
ಒಂದು ನಾಯಿ ನನ್ನ ಎರಡನೇ ಗುರು. ನನಗೆ ಬಲು ಬಾಯಾರಿಕೆ ಆಗಿತ್ತು. ಎಂದೇ ನಾನು ನದಿಯ ಕಡೆಗೆ ಹೋಗುತ್ತಿದ್ದೆ. ಆಗ ಒಂದು ನಾಯಿಯೂ ಅಲ್ಲಿಗೆ ಬಂದಿತು. ಅದಕ್ಕೂ ಬಾಯಾರಿಕೆ ಆಗಿತ್ತು. ಅದು ನದಿಯ ನೀರನ್ನು ನೋಡಿದಾಗ ಅಲ್ಲಿ ಇನ್ನೊಂದು ನಾಯಿ ಕಾಣಿಸಿತು. ಅದು ಅದರದೇ ಪ್ರತಿಬಿಂಬ ಎಂಬುದು ಅದಕ್ಕೆ ತಿಳಿದಿರಲಿಲ್ಲ. ಎಂದೇ ಅದಕ್ಕೆ ಭಯವಾಯಿತು. ಅದು ಬೊಗಳಿತು, ಇನ್ನೊಂದು ನಾಯಿಯೂ ಬೊಗಳಿತು. ಅದಕ್ಕೆ ನೀರು ಕುಡಿಯಲು ಹೆದರಿಕೆ ಆಗಿ ಹಿಂದಕ್ಕೆ ಹೋಗಲಾರಂಭಿಸಿತು. ಬಾಯಾರಿಕೆ ತೀವ್ರವಾಗಿದ್ದದ್ದರಿಂದ ಪುನಃ ನದಿಯ ಹತ್ತಿರ ಬಂದಿತು. ನೀರನ್ನು ನೋಡಿದಾಗ ಇನ್ನೊಂದು ನಾಯಿಯೂ ಕಾಣಿಸಿತು. ಬಲು ಬಾಯಾರಿಕೆ ಆಗಿದ್ದರಿಂದ ಧೈರ್ಯ ಮಾಡಿ ನೀರಿನೊಳಕ್ಕೆ ಹಾರಿತು, ಇನ್ನೊಂದು ನಾಯಿ ಮಾಯವಾದದ್ದನ್ನು ಗಮನಿಸಿತು. ನೀರು ಕುಡಿದ ನಂತರ ಈಜಿ ನದಿಯಿಂದ ಹೊರಬಂದು ಎಲ್ಲಿಗೋ ಹೋಯಿತು. ನಾನು ಇಡೀ ವಿದ್ಯಮಾನವನ್ನು ನೋಡುತ್ತಿದ್ದೆ. ದೇವರಿಂದ ನನಗೊಂದು ಸಂದೇಶ ಈ ಮುಖೇನ ಬಂದಿತೆಂಬುದು ನಾನು ತಿಳಿದೆ. ಎಷ್ಟೇ ಹೆದರಿಕೆ ಇದ್ದರೂ ನೀನು ಅಖಾಡದೊಳಕ್ಕೆ ಹಾರಲೇ ಬೇಕು.
ಅಜ್ಞಾತವಾದದ್ದರೊಳಕ್ಕೆ ಧುಮ್ಮಿಕ್ಕುವ ಮೊದಲು ನನಗೂ ನಾಯಿಯಂತೆ ಹೆದರಿಕೆ ಆಗುತ್ತಿತ್ತು. ಧುಮ್ಮಿಕ್ಕಲೋ ಬೇಡವೋ ಎಂಬ ಶಂಕೆ ಕಾಡಲಾರಂಬಿಸುತ್ತಿತ್ತು. ನಾಯಿಯಂತೆ ನಾನೂ ಹಿಂದಕ್ಕೂ ಮುಂದಕ್ಕೂ ತೊನೆದಾಡುತ್ತಿದ್ದೆ. ಆಗ ನಾಯಿಯ ನೆನಪಾಗುತ್ತಿತ್ತು. ನಾಯಿ ತನ್ನ ಭಯವನ್ನು ನಿಭಾಯಿಸಲು ಸಮರ್ಥವಾಗಿದ್ದರೆ ಅದು ನನಗೇಕೆ ಸಾಧ್ಯವಿಲ್ಲ? ಒಂದು ದಿನ ನಾನು ಅಜ್ಞಾತದೊಳಕ್ಕೆ ಧುಮಿಕಿಯೇ ಬಟ್ಟೆ. ನಾನೇ ಮಾಯವಾದೆ, ಅಜ್ಞಾತವು ಹಿಂದೆ ಉಳಿಯಿತು. ಎಂದೇ ನಾಯಿ ನನ್ನ ಎರಡನೇ ಗುರು.
ಒಂದು ಪುಟ್ಟ ಮಗು ನನ್ನ ಮೂರನೇ ಗುರು. ಒಮ್ಮೆ ನಾನು ಒಂದು ಪಟ್ಟಣವನ್ನು ಪ್ರವೇಶಿಸಿದಾಗ ಮಗುವೊಂದು ಉರಿಯುತ್ತಿರುವ ಮೋಂಬತ್ತಿಯನ್ನು ಅದು ಆರದಂತೆ ಒಂದು ಕೈ ಅಡ್ಡ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿದೆ. ಮಸೀದಿಯಲ್ಲಿ ಇಡಲು ಅದನ್ನು ಆ ಮಗು ಒಯ್ಯುತ್ತಿತ್ತು.
ನಾನು ಮಗುವನ್ನು ಕೇಳಿದೆ, ‘ಈ ಮೋಂಬತ್ತಿಯನ್ನು ನೀನೇ ಉರಿಸಿ ತರುತ್ತಿರುವೆಯಾ?’
‘ಹೌದು.’
ನಾನು ತಮಾಷೆಗಾಗಿ ಕೇಳಿದೆ, ‘ಈ ಬೆಳಕು ಎಲ್ಲಿಂದ ಬಂದಿತೆಂಬುದನ್ನು ಹೇಳಬಲ್ಲೆಯಾ? ಮೋಂಬತ್ತಿ ಉರಿಯದೇ ಇದ್ದಾಗ ಬೆಳಕು ಇರಲಿಲ್ಲ, ಉರಿಸಿದಾಗ ಬೆಳಕು ಬಂದಿತು. ನೀನೇ ಮೋಂಬತ್ತಿಯನ್ನು ಉರಿಸಿದ್ದರಿಂದ ಬೆಳಕು ಬರುವುದನ್ನು ನೀನು ನೋಡಿರಬೇಕು. ಅಂದ ಮೇಲೆ ಬೆಳಕು ಎಲ್ಲಿಂದ ಬಂದಿತೆಂಬುದನ್ನು ಹೇಳು ನೋಡೋಣ.’
ಮಗು ನಕ್ಕು ಮೋಂಬತ್ತಿಯನ್ನು ಆರಿಸಿ ಹೇಳಿತು, ‘ಮೋಂಬತ್ತಿ ಆರಿಸಿದಾಗ ಬೇಳಕು ಹೋಗುವುದನ್ನು ನೀನು ನೋಡಿದೆಯಲ್ಲವೇ? ಅದು ಎಲ್ಲಿಗೆ ಹೋಯಿತೆಂಬುದನ್ನು ಹೇಳು ನೋಡೋಣ.’
ಆ ಕ್ಷಣದಲ್ಲಿ ನನ್ನ ಅಹಂಕಾರ, ಗರ್ವ, ಯಾವುದನ್ನು ಜ್ಞಾನ ಅಂದುಕೊಂಡಿದ್ದೆನೋ ಅದು ಸಂಪೂರ್ಣವಾಗಿ ನಾಶವಾಯಿತು. ಆ ಕ್ಷಣದಲ್ಲಿ ನನ್ನ ಮೂರ್ಖತನದ ಅರಿವೂ ಆಯಿತು. ಆ ನಂತರ ನನ್ನ ‘ತಿಳಿದಿರುವಿಕೆ’ಯನ್ನು ಸಂಪೂರ್ಣವಾಗಿ ಪರಿತ್ಯಜಿಸಿದೆ.”
*****
೨. ಬಡವನ ಗುಡಿಸಲು
ಒಬ್ಬ ಬಡ, ಬಲು ಬಡ ಸೌದೆ ಕಡಿಯುವವ ಕಾಡಿನ ಅಂಚಿನಲ್ಲಿದ್ದ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದ. ಅವನು ಹಾಗೂ ಅವನ ಹೆಂಡತಿ ಮಲಗಲು ಸಾಕಾಗುವಷ್ಟು ಸ್ಥಳಾವಕಾಶ ಮಾತ್ರವಿದ್ದ ಗುಡಿಸಲು ಅದಾಗಿತ್ತು, ಅಷ್ಟು ಚಿಕ್ಕದಾಗಿತ್ತು ಆ ಗುಡಿಸಲು.
ಒಂದು ದಿನ ಜೋರಾಗಿ ಮಳೆ ಸುರಿಯುತ್ತಿದ್ದ ಕಗ್ಗತ್ತಲಿನ ರಾತ್ರಿ ವೇಳೆಯಲ್ಲಿ ಯಾರೋ ಬಾಗಿಲು ತಟ್ಟಿದರು. ಹೆಂಡತಿ ಬಾಗಿಲಿನ ಸಮೀಪದಲ್ಲಿ ಮಲಗಿದ್ದಳು. ಎಂದೇ, ಗಂಡ ಹೆಂಡತಿಗೆ ಹೇಳಿದ, “ಬಾಗಿಲು ತೆರೆ. ಮಳೆ ಜೋರಾಗಿ ಬರುತ್ತಿರುವುದರಿಂದ ಆ ಮನುಷ್ಯನಿಗೆ ದಾರಿ ತಪ್ಪಿರಬೇಕು. ಕಗ್ಗತ್ತಲ ರಾತ್ರಿ, ಅಪಾಯಕಾರೀ ವನ್ಯಮೃಗಗಳು ಹೆಚ್ಚು ಇರುವ ಸ್ಥಳ ಇದು. ಬೇಗನೆ ಬಾಗಿಲು ತೆರೆ.”
“ಇಲ್ಲಿ ಇನ್ನೊಬ್ಬರಿಗೆ ಜಾಗವೇ ಇಲ್ಲವಲ್ಲ”
“ಯಾವಾಗಲೂ ಜಾಗದ ಕೊರತೆ ಇರುವ ರಾಜನ ಅರಮನೆ ಇದಲ್ಲವಲ್ಲ. ಇದೊಬ್ಬ ಬಡವನ ಗುಡಿಸಲು. ಇಬ್ಬರು ಆರಾಮವಾಗಿ ಮಲಗಬಹುದು, ಮೂವರು ಆರಾಮವಾಗಿ ಕುಳಿತುಕೊಳ್ಳಬಹುದು. ನಾವು ಜಾಗ ಸೃಷ್ಟಿಸೋಣ. ಸುಮ್ಮನೆ ಬಾಗಿಲು ತೆರೆ.”
ಹೆಂಡತಿ ಬಾಗಿಲು ತೆರೆದಳು. ಹೊರಗಿದ್ದವ ಒಳಬಂದ. ಅವನನ್ನು ಒಳಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ. ಎಲ್ಲರೂ ಕುಳಿತು ಹರಟೆ ಹೊಡೆದರು, ಕತೆಗಳನ್ನು ಹೇಳಿದರು. ಮಲಗಲು ಸ್ಥಳಾವಕಾಶವಿಲ್ಲದ್ದರಿಂದ ನಿದ್ದೆ ಮಾಡುವಂತಿರಲಿಲ್ಲ, ಆದ್ದರಿಂದ ರಾತ್ರಿಯನ್ನು ಹೇಗಾದರೂ ಸವೆಸಬೇಕಿತ್ತು. ಅಷ್ಟರಲ್ಲಿ ಪುನಃ ಯಾರೋ ಬಾಗಿಲು ತಟ್ಟಿದರು.
ಹೊಸದಾಗಿ ಬಂದವ ಬಾಗಿಲಿನ ಹತ್ತಿರ ಕುಳಿತಿದ್ದ. ಸೌದೆ ಕಡಿಯುವವ ಅವನಿಗೆ ಹೇಳಿದ, “ಬಾಗಿಲು ತೆರೆ ಗೆಳೆಯ. ಯಾರೋ ದಾರಿ ತಪ್ಪಿ ಬಂದಿರುವಂತಿದೆ.”
ಅವನು ಹೇಳಿದ, “ನೀನೊಬ್ಬ ವಿಚಿತ್ರ ಮನುಷ್ಯ. ಇಲ್ಲಿ ಇನ್ನೊಬ್ಬರಿಗೆ ಸ್ಥಳವೇ ಇಲ್ಲವಲ್ಲ.”
“ನೀನು ಬಾಗಿಲು ತಟ್ಟಿದಾಗ ಇದೇ ವಾದವನ್ನು ನನ್ನ ಹೆಂಡತಿಯೂ ಮಾಡಿದ್ದಳು. ಅವಳ ವಾದವನ್ನು ನಾನು ಒಪ್ಪಿಕೊಂಡಿದ್ದಿದ್ದರೆ ನೀನು ಕಾಡಿನ ಯಾವುದಾರೂ ಕಾಡುಪ್ರಾಣಿಗೆ ಆಹಾರವಾಗಿರುತ್ತಿದ್ದೆ. ನೀನೇ ಒಬ್ಬ ವಿಚಿತ್ರ ಮನುಷ್ಯ. ಏಕೆಂದರೆ ನಾವೀಗ ಕುಳಿತುಕೋಡು ರಾತ್ರಿ ಸವೆಸುತ್ತಿರುವುದು ನಿನ್ನಿಂದಾಗಿ ಎಂಬುದೇ ನಿನಗೆ ಅರ್ಥವಾದಂತಿಲ್ಲ. ಸುದೀರ್ಘ ದಿನದ ನಂತರ ನನಗೆ ಬಲು ಆಯಾಸವಾಗಿದೆ. ನಾನೊಬ್ಬ ಸೌದೆ ಕಡಿಯುವವ — ಇಡೀ ದಿನ ನಾನು ಕಾಡಿನಲ್ಲಿ ಸೌದೆ ಕಡಿದು ತಂದು ಅದನ್ನು ಮಾರುಕಟ್ಟೆಯಲ್ಲಿ ಮಾರುತ್ತೇನೆ. ಅದರಿಂದ ಬರುವ ಹಣದಿಂದ ಬಲು ಕಷ್ಟದಿಂದ ಒಪ್ಪೊತ್ತು ಊಟಮಾಡಬಹುದು. ಬಾಗಿಲು ತೆರೆ. ಇದು ನಿನ್ನ ಗುಡಿಸಲು ಅಲ್ಲ. ಮೂರು ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದಾದ ಇಲ್ಲಿ ತುಸು ಒತ್ತೊತ್ತಾಗಿ ಕುಳಿತರೆ ಸ್ವಲ್ಪ ಕಷ್ಟವಾದರೂ ನಾಲ್ಕು ಮಂದಿ ಕುಳಿತುಕೊಳ್ಳಬಹುದು. ನಾವು ಸ್ಥಳಾವಕಾಶ ಸೃಷ್ಟಿಸೋಣ.”
ಇಷ್ಟವಿಲ್ಲದಿದ್ದರೂ ಆತ ಬಾಗಿಲು ತೆರೆಯಲೇ ಬೇಕಾಯಿತು. ಹೊರಗಿದ್ದವನು ಒಳಬಂದು ಕೃತಜ್ಞತೆಗಳನ್ನು ತಿಳಿಸಿದ. ಅವರೆಲ್ಲರೂ ಒತ್ತೊತ್ತಾಗಿ ಕುಳಿತಿದ್ದರು. ಇನ್ನು ಒಂದು ಅಂಗುಲ ಸ್ಥಳವೂ ಖಾಲಿ ಇರಲಿಲ್ಲ. ಆಗ ಇದ್ದಕ್ಕಿದ್ದಂತೆ ಬಾಗಿಲು ಬಡಿದ ಶಬ್ದವಾಯಿತಾದರೂ ಅದು ಮನುಷ್ಯರು ಬಾಗಿಲು ತಟ್ಟುವ ಶಬ್ದದಂತಿರಲಿಲ್ಲ! ಸೌದೆ ಕಡಿಯುವವನನ್ನು ಹೊರತುಪಡಿಸಿ ಉಳಿದ ಮೂವರೂ ಮೌನವಾಗಿದ್ದರಾದರೂ ಬಾಗಿಲು ತೆರೆಯಲು ಸೌದೆಕಡಿಯುವವ ಹೇಳಿಯಾನು ಎಂಬ ಭಯ ಅವರಿಗಿತ್ತು. ಅವನು ಅವರು ಅಂದುಕೊಂಡಂತೆಯೇ ಹೇಳಿದ, “ಬಾಗಿಲು ತೆಗೆಯಿರಿ. ಯಾರು ಬಾಗಿಲು ತಟ್ಟುತ್ತಿರುವುದೆಂಬುದು ನನಗೆ ತಿಳಿದಿದೆ. ಅದು ನನ್ನ ಕತ್ತೆ. ಈ ವಿಶಾಲ ಜಗತ್ತಿನಲ್ಲಿ ಇರುವ ನನ್ನ ಏಕೈಕ ಮಿತ್ರ. ನಾನು ಸೌದೆಯನ್ನು ತರುವುದು ಆ ಕತ್ತೆಯ ನೆರವಿನಿಂದ. ಅದು ಹೊರಗಿರುವುದೇ? ತುಂಬಾ ಮಳೆ ಬರುತ್ತಿದೆ. ಬಾಗಿಲು ತೆರೆಯಿರಿ.”
ಉಳಿದವರೆಲ್ಲರೂ ಇದನ್ನು ವಿರೋಧಿಸಿ ಕೇಳಿದರು, “ಇದು ಅತಿಯಾಯಿತು. ಕತ್ತೆ ಒಳಗೆ ಬಂದರೆ ನಿಲ್ಲುವುದಾದರೂ ಎಲ್ಲಿ?”
ಸೌದೆ ಕಡಿಯುವವ ಹೇಳಿದ, “ನಿಮಗೆ ಅರ್ಥವಾಗುತ್ತಿಲ್ಲ. ಇದು ಒಬ್ಬ ಬಡವನ ಗುಡಿಸಲು. ಎಂದೇ ಇಲ್ಲಿ ಬೇಕಾದಷ್ಟು ಸ್ಥಳಾವಕಾಶವಿದೆ. ಈಗ ನಾವು ಕುಳಿತಿದ್ದೇವೆ. ಕತ್ತೆ ಒಳಗೆ ಬಂದಾಗ ನಾವೆಲ್ಲರೂ ಎದ್ದು ನಿಲ್ಲಬೇಕು. ಕತ್ತೆಯನ್ನು ಮಧ್ಯದಲ್ಲಿ ನಿಲ್ಲಿಸಿ ನಾವೆಲ್ಲರೂ ಅದರ ಸುತ್ತ ನಿಂತರೆ ಅದಕ್ಕೆ ಹಿತಕರ ಅನುಭವವೂ ಆಗುತ್ತದೆ.
ಉಳಿದವರು ಉದ್ಗರಿಸಿದರು, “ನಿನ್ನ ಗುಡಿಸಿಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ಕಾಡಿನಲ್ಲಿ ಕಳೆದುಹೋಗುವದೇ ಒಳ್ಳೆಯದೇನೋ!”
ಮನೆಯ ಮಾಲಿಕನೇ ಬಾಗಿಲು ತರೆಯುವಂತೆ ಹೇಳಿದ್ದರಿಂದ ಬೇರೇನೂ ದಾರಿ ಕಾಣದೆ ಅವರು ಬಾಗಿಲನ್ನು ತೆರೆದರು. ಕತ್ತೆ ಒಳ ಬಂದಿತು. ಅದರ ಮೈನಿಂದ ನೀರು ತೊಟ್ಟಿಕ್ಕುತ್ತಿತ್ತು. ಅದನ್ನು ಮಧ್ಯದಲ್ಲಿ ನಿಲ್ಲಿಸಿ ಎಲ್ಲರೂ ಅದರ ಸುತ್ತ ನಿಲ್ಲುವಂತೆ ಹೇಳಿದ ಸೌದೆ ಕಡಿಯುವವ. ತದನಂತರ ಅವನು ಹೇಳಿದ, “ನಿಮಗೆ ಇದು ಅರ್ಥವಾಗುವುದಿಲ್ಲ. ನನ್ನ ಕತ್ತೆಯದ್ದು ದಾರ್ಶನಿಕ ಮನಸ್ಸು. ನೀವು ಏನು ಬೇಕಾದರೂ ಅದರ ಸಮ್ಮುಖದಲ್ಲಿ ಹೇಳಬಹುದು, ಅದು ಎಂದೂ ಸಮಚಿತ್ತತೆಯನ್ನು ಕಳೆದುಕೊಳ್ಳುವುದೇ ಇಲ್ಲ. ಅದು ಯಾವಾಗಲೂ ನೀವು ಹೇಳುವುದನ್ನೆಲ್ಲ ಮೌನವಾಗಿ ಕೇಳಿಸಿಕೊಳ್ಳುತ್ತದೆ.”
*****
೩. ಅವರ್ಣನಿಯ ಜೀವನ ಸಾಗಿಸುತ್ತಿದ್ದವ
ಬಲು ಹಿಂದೆ ಮೋಜುದ್ ಎಂಬ ಹೆಸರಿನ ವ್ಯಕ್ತಿಯೊಬ್ಬನಿದ್ದ. ಅವನು ಒಂದು ಚಿಕ್ಕ ಪಟ್ಟಣದಲ್ಲಿ ಕೆಳಸ್ತರದ ಅಧಿಕಾರಿ ಹುದ್ದೆಯೊಂದನ್ನು ಗಿಟ್ಟಿಸಿಕೊಂಡಿದ್ದ. ತೂಕ ಮತ್ತು ಅಳತೆಗಳ ಪರೀಕ್ಷಾಧಿಕಾರಿಯಾಗಿ ಅವನು ತನ್ನ ವೃತ್ತಿಜೀವನವನ್ನು ಕಳೆಯುವ ಎಲ್ಲ ಲಕ್ಷಣಗಳೂ ನಿಚ್ಚಳವಾಗಿ ಗೋಚರಿಸುತ್ತಿದ್ದವು.
ಒಂದು ದಿನ ಅವನು ತನ್ನ ಮನೆಯ ಸಮೀಪದಲ್ಲಿ ಇದ್ದ ಪುರಾತನ ಕಟ್ಟಡದ ಹೂದೋಟಗಳ ಮೂಲಕ ಎಲ್ಲಿಗೋ ಹೋಗುತ್ತಿದ್ದಾಗ ಮಿರಮಿರನೆ ಹೊಳೆಯುತ್ತಿದ್ದ ನಿಲುವಂಗಿ ಧರಿಸಿದ್ದ ಖಿದೃ, ಸೂಫಿಗಳ ನಿಗೂಢ ಮಾರ್ಗದರ್ಶಿ ಖಿದೃ, ಪ್ರತ್ಯಕ್ಷನಾಗಿ “ನೀನು ಉಜ್ವಲ ಭವಿಷ್ಯವಿರುವವ! ನಿನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇನ್ನು ಮೂರು ದಿನಗಳ ನಂತರ ನದೀತಟದಲ್ಲಿ ನನ್ನನ್ನು ಕಾಣು.” ಎಂಬುದಾಗಿ ಹೇಳಿ ಅದೃಶ್ಯನಾದ.
ಮೋಜುದ್ ತನ್ನ ಮೇಲಧಿಕಾರಿಯ ಹತ್ತಿರ ಹೋಗಿ ಬಲು ಆವೇಶದಿಂದ ತಾನು ಕೆಲಸ ಬಿಡಲೇಬೇಕಾಗಿದೆ ಎಂಬುದಾಗಿ ಹೇಳಿದ. ಈ ಸುದ್ದಿ ಬಲು ಬೇಗನೆ ಪಟ್ಟಣದಾದ್ಯಂತ ಹರಡಿತು. ಎಲ್ಲರೂ ತಮ್ಮತಮ್ಮೊಳಗೇ ಮಾತನಾಡಿಕೊಂಡರು, “ಪಾಪ ಮೋಜುದ್! ಅವನಿಗೆ ಹುಚ್ಚು ಹಿಡಿದಿದೆ.” ಆ ಕೆಲಸ ಮಾಡಲು ಬಹು ಮಂದಿ ಕಾತುರರಾಗಿದ್ದ ಕಾರಣ ಎಲ್ಲರೂ ಬಲು ಬೇಗನೆ ಅವನನ್ನು ಮರೆತೇ ಬಿಟ್ಟರು.
ನಿಗದಿತ ದಿನದಂದು ಮೋಜುದ್ ಖಿದೃನನ್ನು ಭೇಟಿಯಾದ. ಅವನು ಹೇಳಿದ, “ನಿನ್ನ ಬಟ್ಟೆಗಳನ್ನು ಹರಿದು ಹಾಕಿ ನದಿಗೆ ಹಾರು. ಪ್ರಾಯಶಃ ಯಾರಾದರೂ ನಿನ್ನನ್ನು ರಕ್ಷಿಸಿಯಾರು.”
ತನಗೆ ಹುಚ್ಚೇನಾದರೂ ಹಿಡಿದಿದೆಯೇ ಎಂಬ ಸಂಶಯ ಕ್ಷಣಕಾಲ ಮೋಜುದ್‌ನ ಮನಸ್ಸಿನಲ್ಲಿ ಮೂಡಿದರೂ ಆತ ಖಿದೃ ಹೇಳಿದಂತೆಯೇ ಮಾಡಿದ. ಅವನು ಈಜು ಬಲ್ಲವನಾದ್ದರಿಂದ ಮುಳುಗಲಿಲ್ಲವಾದರೂ ಬಹು ದೂರ ತೇಲಿಕೊಂಡು ಹೋದ. ಕೊನೆಗೆ ಒಬ್ಬ ಬೆಸ್ತ ಅವನನ್ನು ತನ್ನ ದೋಣಿಯೊಳಕ್ಕೆ ಎಳೆದು ಹಾಕಿಕೊಂಡು ಹೇಳಿದ, “ಮೂರ್ಖ, ನೀರಿನ ಹರಿವಿನ ಸೆಳೆತ ತೀವ್ರವಾಗಿದೆ. ನೀನೇನು ಮಾಡಲು ಪ್ರಯತ್ನಿಸುತ್ತಿರುವೆ?” “ನನಗೆ ನಿಜವಾಗಿಯೂ ಗೊತ್ತಿಲ್ಲ,” ಎಂಬುದಾಗಿ ಉತ್ತರಿಸಿದ ಮೋಜುದ್. ಬೆಸ್ತ ಹೇಳಿದ, “ನೀನೊಬ್ಬ ಹುಚ್ಚ. ಆದರೂ ಅಲ್ಲಿ ಕಾಣುತ್ತಿರುವ ನನ್ನ ಜೊಂಡಿನ ಗುಡಿಸಲಿಗೆ ನಿನ್ನನ್ನು ಕರೆದೊಯ್ಯುತ್ತೇನೆ. ನಿನಗಾಗಿ ನಾನೇನು ಮಾಡಬಹುದು ಎಂಬುದನ್ನು ಆನಂತರ ಆಲೋಚಿಸೋಣ.
ಮೋಜುದ್ ಒಬ್ಬ ವಿದ್ಯಾವಂತ ಎಂಬುದು ಬೆಸ್ತನಿಗೆ ತಿಳಿಯಿತು. ಅವನು ಮೋಜುದ್‌ನಿಂದ ಓದಲೂ ಬರೆಯಲೂ ಕಲಿತನು. ಮೋಜುದ್ ಬೆಸ್ತನಿಗೆ ಅವನ ಕೆಲಸದಲ್ಲಿ ನೆರವಾಗುತ್ತಲೂ ಇದ್ದ. ಪ್ರತಿಫಲ ರೂಪದಲ್ಲಿ ಮೋಜುದ್‌ನಿಗೆ ಆಹಾರ ಸಿಕ್ಕುತ್ತಿತ್ತು. ಇಂತು ಕೆಲವು ತಿಂಗಳುಗಳು ಕಳೆದಾಗ ಹಾಸಿಗೆಯಲ್ಲಿ ಮಲಗಿದ್ದ ಮೋಜುದ್‌ನ ಕಾಲುಗಳ ಸಮೀಪದಲ್ಲಿ ಖಿದೃ ಪ್ರತ್ಯಕ್ಷನಾಗಿ ಹೇಳಿದ, “ಈಗಲೇ ಎದ್ದೇಳು. ಬೆಸ್ತನನ್ನು ಬಿಟ್ಟು ಹೊರಡು. ನಿನಗೆ ಅಗತ್ಯವಾದದ್ದನ್ನೆಲ್ಲ ಒದಗಿಸಲಾಗುತ್ತದೆ.”
ಮೋಜುದ್ ತಕ್ಷಣವೇ ಬೆಸ್ತನ ದಿರಿಸಿನಲ್ಲಿಯೇ ಆ ಗುಡಿಸಲನ್ನು ಪರಿತ್ಯಜಿಸಿ ಹೊರಟ. ಅಲ್ಲಿಇಲ್ಲಿ ಸುತ್ತಾಡುತ್ತಾ ಹೆದ್ದಾರಿಯೊಂದಕ್ಕೆ ಬಂದ. ಮುಂಜಾನೆಯ ಸಮಯದಲ್ಲಿ ಕತ್ತೆಯೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ರೈತನೊಬ್ಬನನ್ನು ನೋಡಿದ. “ನೀನು ಕೆಲಸ ಹುಡುಕುತ್ತಿರುವಿಯೇನು? ಏಕೆ ಕೇಳುತ್ತಿದ್ದೇನೆಂದರೆ ಮಾರುಕಟ್ಟೆಯಿಂದ ಕೆಲವು ಸರಕನ್ನು ತರಲು ಸಹಾಯ ಮಾಡಲು ನನಗೆ ಒಬ್ಬನ ಆವಶ್ಯಕತೆ ಇದೆ,” ಕೇಳಿದ ರೈತ. ಮೋಜುದ್ ರೈತನೊಂದಿಗೆ ಹೋದದ್ದಷ್ಟೇ ಅಲ್ಲದೆ, ರೈತನ ಸಹಾಯಕನಾಗಿ ಎರಡು ವರ್ಷ ಕಾಲ ಕೆಲಸ ಮಾಡಿದ. ಆ ಅವಧಿಯಲ್ಲಿ ಬೇಸಾಯದ ಕುರಿತು ಬಹಳಷ್ಟನ್ನು ಕಲಿತನಾದರೂ ಬೇರೇನನ್ನೂ ಕಲಿಯಲಿಲ್ಲ.
ಒಂದು ಅಪರಾಹ್ನ ಮೋಜುದ್ ಉಣ್ಣೆಯ ಹೊರೆಗಳನ್ನು ಸಿದ್ಧಪಡಿಸುತ್ತಿದ್ದಾಗ ಖಿದೃ ಪ್ರತ್ಯಕ್ಷನಾಗಿ ಹೇಳಿದ, “ಈ ಕೆಲಸ ಬಿಟ್ಟು ಹೊರಡು. ಮೋಸುಲ್ ನಗರಕ್ಕೆ ಹೋಗು. ನಿನ್ನ ಉಳಿತಾಯದ ಹಣ ಹೂಡಿಕೆ ಮಾಡಿ ಚರ್ಮದ ವ್ಯಾಪಾರಿಯಾಗು.”
ಅವನು ಹೇಳಿದಂತೆ ಮಾಡಿದ ಮೋಜುದ್.
ಮೋಜುದ್ ಮೋಸುಲ್ ನಗರದಲ್ಲಿ ಮೂರು ವರ್ಷ ಕಾಲ ಚರ್ಮದ ವ್ಯಾಪಾರಿಯಾಗಿದ್ದ. ಈ ಅವಧಿಯಲ್ಲಿ ಖಿದೃ ಅವನಿಗೆ ಕಾಣಿಸಿಕೊಳ್ಳಲೇ ಇಲ್ಲ. ಈ ವ್ಯಾಪಾರದಿಂದ ಅವನು ಗಣನೀಯ ಪರಿಮಾಣದಲ್ಲಿ ಹಣ ಉಳಿತಾಯ ಮಾಡಿದ್ದ. ಎಂದೇ ಒಂದು ಮನೆ ಕೊಂಡುಕೊಳ್ಳುವ ಕುರಿತು ಆಲೋಚಿಸುತ್ತಿದ್ದ. ಆಗ ಖಿದೃ ಕಾಣಿಸಿಕೊಂಡು ಹೇಳಿದ, “ನಿನ್ನ ಉಳಿತಾಯದ ಹಣ ನನಗೆ ಕೊಟ್ಟು ಈ ನಗರ ಬಿಟ್ಟು ಬಹು ದೂರದಲ್ಲಿರುವ ಸಮರ್‌ಕಂಡ್‌ಗೆ ಹೋಗಿ ಅಲ್ಲಿ ಒಬ್ಬ ದಿನಸಿ ವ್ಯಾಪರಿಯ ಹತ್ತಿರ ಕೆಲಸ ಮಾಡು.”
ಅವನು ಹೇಳಿದಂತೆ ಮಾಡಿದ ಮೋಜುದ್.
ಜ್ಞಾನೋದಯವಾದ ಕುರುಹುಗಳು ತದನಂತರ ಅವನಲ್ಲಿ ಸಂಶಯಾತೀತವಾಗಿ ಗೋಚರಿಸಲಾರಂಭಿಸಿದವು. ರೋಗಗಳನ್ನು ಅವನು ವಾಸಿ ಮಾಡುತ್ತಿದ್ದ. ಸಮಯವಿದ್ದಾಗಲೆಲ್ಲ ದಿನಾಸಿ ವ್ಯಾಪರಿಗೆ ಸಹಾಯ ಮಾಡುತ್ತಿದ್ದ. ನಿಸರ್ಗದ ನಿಗೂಢತೆಗಳ ಕುರಿತಾದ ಅವನ ಜ್ಞಾನ ಸಮಯ ಕಳೆದಂತೆಲ್ಲ ಗಾಢವಾವಾಗುತ್ತಿತ್ತು.
ಧರ್ಮಗುರುಗಳೂ ದಾರ್ಶನಿಕರೂ ಇತರರೂ ಅವನನ್ನು ಭೇಟಿ ಮಾಡಲು ಬರಲಾರಂಭಿಸಿದರು. ಒಮ್ಮೆ ಅವರ ಪೈಕಿ ಒಬ್ಬರು ಕೇಳಿದರು, “ನೀವು ಯಾರ ಮಾರ್ಗದರ್ಶನದಲ್ಲಿ ಅಧ್ಯಯಿಸಿದಿರಿ?”
ಮೋಜುದ್ ಉತ್ತರಿಸಿದ, “ಅದನ್ನು ಹೇಳುವುದು ಬಲು ಕಷ್ಟ.”
ಅವನ ಶಿಷ್ಯರು ಕೇಳಿದರು, “ನಿಮ್ಮ ವೃತ್ತಿಜೀವನವನ್ನು ಹೇಗೆ ಆರಂಭಿಸಿದರಿ?”
“ಒಬ್ಬ ಕೆಳಸ್ತರದ ಅಧಿಕಾರಿಯಾಗಿ.”
“ರಾಗದ್ವೇಷಗಳನ್ನು ಸ್ವತಃ ದಮನ ಮಾಡುವುದಕ್ಕೆ ಸಮಯವನ್ನು ಮೀಸಲಾಗಿಡಲೋಸುಗ ಅದನ್ನು ಬಿಟ್ಟುಬಿಟ್ಟಿರಾ?”
“ಹಾಗೇನಿಲ್ಲ. ಅದನ್ನು ಸುಮ್ಮನೆ ಬಿಟ್ಟುಬಿಟ್ಟೆ ಅಷ್ಟೆ.”
ಅವನ ಜೀವನಚರಿತ್ರೆಯನ್ನು ಬರೆಯುವ ಸಲುವಾಗಿ ಕೆಲವು ಮಂದಿ ಅವನನ್ನು ಸಂಪರ್ಕಿಸಿದರು.
ಅವರು ಕೇಳಿದರು, “ನಿಮ್ಮ ಜೀವನದಲ್ಲಿ ಹಿಂದೆ ನೀವೇನಾಗಿದ್ದಿರಿ?”
“ನಾನು ಒಂದು ನದಿಗೆ ಹಾರಿದೆ, ಬೆಸ್ತನಾದೆ, ತದನಂತರ ಮಧ್ಯರಾತ್ರಿಯಲ್ಲಿ ಅವನ ಜೊಂಡಿನ ಗುಡಿಸಲಿನಿಂದ ಹೊರನಡೆದೆ. ತದನಂತರ ನಾನೊಬ್ಬ ಕೃಷಿಕಾರ್ಮಿಕನಾದೆ. ಉಣ್ಣೆಯ ಹೊರೆ ಸಿದ್ಧಪಡಿಸುತ್ತಿದ್ದಾಗ ನಾನು ಬದಲಾದೆ, ಮೋಸುಲ್‌ಗೆ ಹೋಗಿ ಚರ್ಮದ ವ್ಯಾಪಾರಿ ಆದೆ. ಅಲ್ಲಿ ನಾನು ಹಣ ಉಳಿತಾಯ ಮಾಡಿದೆನಾದರೂ ಅದನ್ನು ಕೊಟ್ಟುಬಿಟ್ಟೆ. ತದನಂತರ ಸಮರ್‌ಕಂಡ್‌ಗೆ ನಡೆದುಕೊಂಡು ಹೋಗಿ ಒಬ್ಬ ದಿನಸಿ ವ್ಯಾಪಾರಿಯ ಹತ್ತಿರ ಕೆಲಸಮಾಡಿದೆ. ಈಗ ನಾನು ಇಲ್ಲಿ ಹೀಗಿದ್ದೇನೆ.”
“ಆದರೆ ನಿಮ್ಮ ಈ ವಿವರಿಸಲಾಗದ ವರ್ತನೆ ನಿಮಗಿರುವ ವಿಶೇಷ ಸಾಮರ್ಥ್ಯದ ಮೇಲಾಗಲೀ ಅದ್ಭುತ ಜ್ಞಾನದ ಮೇಲಾಗಲೀ ಬೆಳಕು ಬೀರುವುದಿಲ್ಲ,” ಅಂದರು ಜೀವನಚರಿತ್ರೆ ಬರೆಯುವವರು.
“ಅದು ನಿಜ,” ಒಪ್ಪಿಗೆ ಸೂಚಿಸಿದ ಮೋಜುದ್.
ಈ ಪ್ರಕಾರ ಜೀವನಚರಿತ್ರೆಕಾರರು ಮೋಜುದ್‌ನ ಕುರಿತಾಗಿ ಒಂದು ಅದ್ಭುತವಾದ ರೋಮಾಂಚನಕಾರಿಯಾದ ಕತೆ ರಚಿಸಿದರು: ಏಕೆಂದರೆ ಎಲ್ಲ ಸಂತರ ಕುರಿತಾಗಿ ಅವರದೇ ಆದ ವಿಶಿಷ್ಟ ಕತೆ ಇರಬೇಕು, ಅದು ಕೇಳುವವನ ‘ಹಸಿವನ್ನು’ ತಣಿಸುವಂತಿರಬೇಕೇ ವಿನಾ ಜೀವನದ ನೈಜತೆಗಳನ್ನು ಆಧರಿಸಿರಬೇಕೆಂದೇನೂ ಇಲ್ಲ.
ಅಂದಹಾಗೆ, ಖಿದೃನ ಹತ್ತಿರ ನೇರವಾಗಿ ಮಾತನಾಡಲು ಯಾರಿಗೂ ಅವಕಾಶ ನಿಢುವುದಿಲ್ಲ. ಈ ಕಾರಣಕ್ಕಾಗಿ ಈ ಕತೆ ನಿಜವಲ್ಲ ಅನ್ನಲಡ್ಡಿಯಿಲ್ಲ. ಇದು ಜೀವನದ ಒಂದು ನೈಜ ನಿರೂಪಣೆ. ಇದು ಮಹಾನ್ ಸೂಫಿಯೊಬ್ಬನ ನಿಜವಾದ ಜೀವನ.
*****
೪. ಮನಸ್ಸಿನ ಪ್ರಮುಖ ಚಮತ್ಕಾರ
ಹಿಂದೊಮ್ಮೆ ಗಾರುಡಿಗ ಕುರುಬನೊಬ್ಬನಿದ್ದ. ಅವನ ಹತ್ತಿರ ಬಹಳ ಕುರಿಗಳಿದ್ದವು. ಅವನು ಬಲು ಶ್ರೀಮಂತನೂ ಆಗಿದ್ದ. ಸಾವಿರಾರು ಕುರಿಗಳಿದ್ದರೂ ಅವನು ಮಹಾ ಜಿಪುಣನಾಗಿದ್ದ. ಎಂದೇ ಅನೇಕ ಕೆಲಸದಾಳುಗಳನ್ನೇ ಆಗಲಿ, ಕಾವಲುಗಾರರನ್ನೇ ಆಗಲಿ ಇಟ್ಟುಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ. ಯಾರಿಗೂ ಸಂಬಳ ಕೊಡಲು ಅವನು ಸಿದ್ಧನಿರಲಿಲ್ಲ. ಹೀಗಿದ್ದರೂ ಕುರಿಗಳನ್ನು ಕಳೆದುಕೊಳ್ಳಲೂ ತೋಳಗಳು ಕುರಿಗಳನ್ನು ತಿಂದುಹಾಕುವದಕ್ಕೆ ಅವಕಾಶ ನೀಡಲೂ ಅವನಿಗೆ ಇಷ್ಟವಿರಲಿಲ್ಲ. ಅಷ್ಟೂ ಕುರಿಗಳನ್ನು ಜಾಗರೂಕತೆಯಿಂದ ಅವನೊಬ್ಬನೇ ಸಂರಕ್ಷಿಸುವುದೂ ಬಲು ಕಷ್ಟವಾಗುತ್ತಿತ್ತು.
ಈ ಸಂಕಷ್ಟದಿಂದ ಪಾರಾಗಲು ಅವನೊಂದು ಉಪಾಯ ಮಾಡಿದ. ಅವನೊಬ್ಬ ಗಾರುಡಿಗನೂ ಆಗಿದ್ದದ್ದರಿಂದ ಮೊದಲು ಕುರಿಗಳನ್ನು ಸಂಮೋಹನಗೊಳಿಸಿದ. ತದನಂತರ ಕೆಲವು ಕುರಿಗಳನ್ನು ಒಂದೆಡೆ ಕಲೆಹಾಕಿ ಪ್ರತೀ ಕುರಿಗೂ ಹೇಳಿದ, “ನೀನು ಕುರಿಯಲ್ಲ. ನೀನು ಹುಲಿ ಆದ್ದರಿಂದ ನಿನ್ನನ್ನು ಯಾರೂ ಕೊಲ್ಲುವುದಿಲ್ಲ. ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬೇಡ. ನೀನು ಕುರಿಯಂತೆ ಭಯಪಡಲೇಬೇಡ.” ಕೆಲವಕ್ಕೆ ಹೇಳಿದ, “ನೀನು ಸಿಂಹ —-” ಇನ್ನು ಕೆಲವಕ್ಕೆ ಹೇಳಿದ, “ನೀನು ಮಾನವ —-”
ಕುರಿಗಳು ಸಂಮೋಹನಕ್ಕೆ ಒಳಗಾಗಿದ್ದದ್ದರಿಂದ ಅದನ್ನು ನಂಬಿದವು. ಪ್ರತೀ ದಿನ ಕುರುಬ ಕೆಲವು ಕುರಿಗಳನ್ನು ಮಾಸಕ್ಕಾಗಿ ಕೊಲ್ಲುತ್ತಿದ್ದ. ಅದನ್ನು ನೋಡುತ್ತಿದ್ದ ಕುರಿಗಳು ಆಲೋಚಿಸುತ್ತಿದ್ದವು, “ನಾವು ಕುರಿಗಳಲ್ಲ, ಹುಲಿಗಳು/ಸಿಂಹಗಳು/ಮಾನವರು. ಎಂದೇ ನಮ್ಮನ್ನು ಅವನು ಕೊಲ್ಲುವುದಿಲ್ಲ. ಅವನು ಕೊಲ್ಲುವುದು ಕುರಿಗಳನ್ನು ಮಾತ್ರ, ನಮ್ಮನ್ನಲ್ಲ.” ಪ್ರತೀ ದಿನ ಕೆಲವು ಕುರಿಗಳನ್ನು ಕುರುಬ ಕೊಲ್ಲುವುದು ಕಾಣುತ್ತಿದ್ದರೂ ಎಲ್ಲ ಕುರಿಗಳೂ ಅದನ್ನು ನಿರ್ಲಕ್ಷಿಸಿದವು. ಕುರುಬನ ಕಾಯಕ ನಿರಾತಂಕವಾಗಿ ಮುಂದುವರಿಯಿತು.
(ನಾವೇನಲ್ಲವೋ ಅದೇ ನಾವು ಎಂಬ ಆಲೋಚನೆಯನ್ನು ಬಿತ್ತಿ ತದನಂತರ ನಾವು ಈಗಾಗಲೇ ಅದಾಗಿದ್ದೇವೆ ಎಂಬ ಭ್ರಮೆ ಮೂಡಿಸುವುದು – ಹೇಗಿದೆ ಮನಸ್ಸಿನ ಚಮತ್ಕಾರ?)
*****
೫. ಉಂಗುರದ ಕತೆ
ಪರ್ಶಿಯಾದ ರಾಜನೊಬ್ಬ ಹಾಕಿಕೊಳ್ಳುತ್ತಿದ್ದ ಉಂಗುರದಲ್ಲಿ ಅತ್ಯಮೂಲ್ಯವಾದ ಒಂದು ಹರಳು ಇತ್ತು. ಒಂದು ದಿನ ಅವನು ತನಗೆ ಪ್ರಿಯರಾಗಿದ್ದ ಆಸ್ಥಾನಿಕರ ಜೊತೆಯಲ್ಲಿ ಶಿರಾಝ್ ಸಮೀಪದಲ್ಲಿ ಇದ್ದ ಮುಸಲ್ಲ ಎಂಬ ಹೆಸರಿನ ಮಸೀದಿಗೆ ಹೋದ. ಆ ಮಸೀದಿಯ ಗುಮ್ಮಟದ ಮೇಲೆ ಆ ವಿಶಿಷ್ಟ ಉಂಗುರವನ್ನು ನೇತು ಹಾಕುವಂತೆ ತನ್ನ ನೌಕರರಿಗೆ ಆಜ್ಞಾಪಿಸಿದ. “ಆ ಉಂಗುರದ ಮೂಲಕ ಯಾರು ಬಾಣ ಬಿಟ್ಟು ತೂರಿಸಬಲ್ಲರೋ ಅವರ ಸ್ವತ್ತಾಗುತ್ತದೆ ಅದು,” ಎಂಬುದಾಗಿ ತದನಂತರ ಘೋಷಿಸಿದ. ೪೦೦ ಕ್ಕಿಂತ ಹೆಚ್ಚು ಬಿಲ್ಗಾರರು ಉಂಗುರದ ಮೂಲಕ ಬಾಣಬಿಡಲೋಸುಗ ಸಾಲಾಗಿ ನಿಂತರಾದರೂ ಸ್ಪರ್ಧೆಯಲ್ಲಿ ಅವರು ವಿಫಲರಾದರು. ಪಕ್ಕದ ಕಟ್ಟಡದ ಛಾವಣಿಯ ಮೇಲೆ ಒಬ್ಬ ಹುಡುಗ ಬಿಲ್ಗಾರಿಕೆಯ ಕುಶಲತೆಗಳನ್ನು ಅಭ್ಯಾಸ ಮಾಡುತ್ತಿದ್ದ. ಅದೃಷ್ಟವಶಾತ್ ಅವನು ಬಿಟ್ಟ ಒಂದು ಬಾಣ ಉಂಗುರದ ಮೂಲಕ ತೂರಿ ಹೋಯಿತು.
ರಾಜನು ತಾನು ಘೋಷಿಸಿದ್ದಂತೆ ಉಂಗುರವನ್ನು ಹುಡುಗನಿಗೆ ಕೊಟ್ಟನು. ಆಸ್ಥಾನಿಕರೂ ಅವನಿಗೆ ಅನೇಕ ಉಡುಗೊರೆಗಳನ್ನು ಕೊಟ್ಟರು. ಎಲ್ಲ ಉಡುಗೊರೆಗಳನ್ನೂ ಸ್ವೀಕರಿಸಿದ ನಂತರ ಆ ಹುಡುಗ ತನ್ನ ಬಿಲ್ಲುಬಾಣಗಳನ್ನು ಸುಟ್ಟುಹಾಕಿದನು. ಅಂತೇಕೆ ಮಾಡಿದ್ದು ಎಂಬುದನ್ನು ರಾಜನು ವಿಚಾರಿಸಿದಾಗ ಅವನು ಉತ್ತರಿಸಿದ, “ಮೊದಲನೆಯ ಗೌರವಯುತ ಖ್ಯಾತಿ ಬದಲಾಗದೇ ಉಳಿಯಲಿ ಎಂಬ ಕಾರಣಕ್ಕಾಗಿ.”
*****