೧. ಡ್ರ್ಯಾಗನ್ ಕೊಲ್ಲುವವ ಅಂದುಕೊಳ್ಳುತ್ತಿದ್ದವನ ಕತೆ
ತಾನೊಬ್ಬ ಡ್ರ್ಯಾಗನ್ ಬೇಟೆಗಾರ ಎಂಬುದಾಗಿ ಹೇಳಿಕೊಳ್ಳುತ್ತಿದ್ದವನೊಬ್ಬ ಡ್ರ್ಯಾಗನ್ ಹಿಡಿಯಲೋಸುಗ ಪರ್ವತ ಪ್ರದೇಶಕ್ಕೆ ಹೋದನು. ಪರ್ವತ ಶ್ರೇಣಿಯಲ್ಲೆಲ್ಲ ಡ್ರ್ಯಾಗನ್‌ಗಾಗಿ ಹುಡುಕಾಡತೊಡಗಿದ. ಕೊನೆಗೆ ಅತ್ಯಂತ ಎತ್ತರದ ಪರ್ವತವೊಂದರಲ್ಲಿ ಅತೀ ಎತ್ತರದಲ್ಲಿದ್ದ ಗುಹೆಯೊಂದರಲ್ಲಿ ಬೃಹತ್ ಗಾತ್ರದ ಡ್ರ್ಯಾಗನ್‌ನ ಘನೀಕೃತ ದೇಹವೊಂದನ್ನು ಆವಿಷ್ಕರಿಸಿದ. ಅದನ್ನು ಆತ ಬಾಗ್ದಾದ್‌ಗೆ ತಂದನು. ಅದನ್ನು ತಾನು ಕೊಂದದ್ದಾಗಿ ಘೋಷಿಸಿ ಅಲ್ಲಿನ ನದಿಯ ದಡದಲ್ಲಿ ಪ್ರದರ್ಶನಕ್ಕೆ ಇಟ್ಟನು. ಡ್ರ್ಯಾಗನ್ ಅನ್ನು ನೋಡಲು ನೂರುಗಟ್ಟಲೆ ಸಂಖ್ಯೆಯಲ್ಲಿ ಜನ ಬಂದರು.
ಬಾಗ್ದಾದ್‌ನ ಬಿಸಿ ವಾತಾವರಣ ಡ್ರ್ಯಾಗನ್‌ನ ದೇಹವನ್ನು ನಿಧಾನವಾಗಿ ಬಿಸಿ ಮಾಡಿದ್ದರಿಂದ ಅದು ಅಲುಗಾಡಲಾರಂಭಿಸಿತು, ನಿಧಾನವಾಗಿ ಚಳಿಗಾಲದ ದೀರ್ಘ ನಿದ್ದೆಯಿಂದ ಎದ್ದಿತು. ಜನ ಚೀರುತ್ತಾ ತೋಚಿದತ್ತ ಓಡಲಾರಂಭಿಸಿದರು. ಆ ಗೊಂದಲದಲ್ಲಿ ಅನೇಕರು ಕಾಲ್ತುಳಿತಕ್ಕೆ ಸಿಕ್ಕಿ ಸತ್ತರು. ಡ್ರ್ಯಾಗನ್ ಕೊಲ್ಲುವಾತ ಭಯಭೀತನಾಗಿ ಮರಗಟ್ಟಿದವನಂತೆ ಅಲುಗಾಡದೇ ನಿಂತಿದ್ದನು. ಡ್ರ್ಯಾಗನ್ ಅವನನ್ನು ಒಂದೇ ಗುಟುಕಿನಲ್ಲಿ ನುಂಗಿತು.
*****
೨. ನೀರಿನ ಬಟ್ಟಲಿನಲ್ಲಿ ಚಂದ್ರ
ಕೆರ್‌ಮ್ಯಾನ್‌ನ ಕವಿ ಆವ್ಹಾದಿ ಒಂದು ದಿನ ಒಂದು ಬಟ್ಟಲಿನಲ್ಲಿದ್ದ ನೀರನ್ನೇ ತನ್ನ ಮನೆಯ ಮುಖಮಂಟಪದಲ್ಲಿ ಬಗ್ಗಿ ನೋಡುತ್ತಾ ಕುಳಿತಿದ್ದ. ಆ ಮನೆಯ ಮುಂದಿನಿಂದಾಗಿ ಎಲ್ಲಿಗೋ ಹೋಗುತ್ತಿದ್ದ ಶಾಮ್ಸ್ ಎ-ತಬ್ರೀಜಿ ಕೇಳಿದ, “ನೀನೇನು ಮಾಡುತ್ತಿರುವೆ?”
“ಬಟ್ಟಲಿನ ನೀರಿನಲ್ಲಿ ಚಂದ್ರನ ಕುರಿತು ಆಳವಾಗಿ ಆಲೋಚಿಸುತ್ತಿದ್ದೇನೆ.”
“ನಿನ್ನ ಕುತ್ತಿಗೆ ಮುರಿದಿಲ್ಲವಾದ್ದರಿಂದ ಆಕಾಶದಲ್ಲಿರುವ ಚಂದ್ರನನ್ನೇ ಏಕೆ ನೋಡುವುದಿಲ್ಲ?”
*****
೩. ಕತ್ತರಿಯೋ ಸೂಜಿಯೋ?
ಮಹಾನ್ ಸೂಫಿ ಮುಮುಕ್ಷು ಫರೀದ್‌ನನ್ನು ನೋಡಲು ಒಬ್ಬ ರಾಜ ಬಂದ. ಫರೀದ್‌ನಿಗಾಗಿ ಅವನೊಂದು ಉಡುಗೊರೆಯನ್ನೂ ತಂದಿದ್ದ: ಬಲು ಸುಂದರವಾದ ವಜ್ರ ಖಚಿತವಾದ ಚಿನ್ನದ ಕತ್ತರಿ – ಅತ್ಯಮೂಲ್ಯವೂ ಅಪರೂಪದ್ದೂ ಅದ್ವಿತೀಯವೂ ಆದ ಕತ್ತರಿ ಅದಾಗಿತ್ತು. ಫರೀದ್‌ನ ಪಾದಗಳಿಗೆ ನಮಿಸಿದ ನಂತರ ರಾಜ ಆ ಕತ್ತರಿಯನ್ನು ಅವನಿಗೆ ಅರ್ಪಿಸಿದ. ಫರೀದ್ ಕತ್ತರಿಯನ್ನು ತೆಗೆದುಕೊಂಡು ನೋಡಿ ರಾಜನಿಗೇ ಹಿಂದಿರುಗಿಸಿ ಹೇಳಿದ, “ರಾಜನೇ ನೀನು ಈ ಉಡುಗೊರೆಯನ್ನು ತಂದದ್ದಕ್ಕಾಗಿ ಧನ್ಯವಾದಗಳು. ಅದು ಬಲು ಸುಂದರವಾಗಿದ್ದರೂ ನನಗೆ ಅದು ಸಂಪೂರ್ಣ ಕೆಲಸಕ್ಕೆ ಬಾರದ ವಸ್ತು. ನೀನು ನನಗೊಂದು ಸೂಜಿಯನ್ನು ಕೊಟ್ಟರೆ ಉಪಯೋಗವಾದೀತು. ಕತ್ತರಿ ನನಗೆ ಬೇಡ, ಸೂಜಿಯೇ ಆದೀತು.”
ರಾಜ ಪ್ರತಿಕ್ರಿಯಿಸಿದ, “ನನಗೆ ಅರ್ಥವಾಗಲಿಲ್ಲ. ನಿಮಗೆ ಸೂಜಿ ಬೇಕೆಂದಾದರೆ ಕತ್ತರಿಯೂ ಬೇಕಾಗುತ್ತದೆ.”
ಫರೀದ್ ಹೇಳಿದ, “ನಾನು ರೂಪಕಗಳ ಪರಿಭಾಷೆಯಲ್ಲಿ ಮಾತನಾಡುತ್ತಿದ್ದೇನೆ. ಕತ್ತರಿ ನನಗೆ ಬೇಡ, ಏಕೆಂದರೆ ಅದು ವಸ್ತುಗಳನ್ನು ಕತ್ತರಿಸಿ ತುಂಡುಗಳನ್ನು ಬೇರ್ಪಡಿಸುತ್ತದೆ. ನನಗೆ ಸೂಜಿ ಬೇಕು, ಏಕೆಂದರೆ ಅದು ವಸ್ತುಗಳನ್ನು ಒಗ್ಗೂಡಿಸುತ್ತದೆ. ನಾನು ಬೋಧಿಸುತ್ತಿರುವುದೇ ಒಲವು ಅಥವ ಅಕ್ಕರೆ ಅಥವ ಮಮತೆಯನ್ನು, ಅರ್ಥಾತ್ ಒಗ್ಗೂಡಿಸುವುದನ್ನು, ಸೌಹಾರ್ದವನ್ನು, ಸಹಭಾಗಿತ್ವವನ್ನು, ಸಹಭೋಗಿತ್ವವನ್ನು. ಕತ್ತರಿ ನಿಷ್ಪ್ರಯೋಜಕ ವಸ್ತು, ಅದು ಕತ್ತರಿಸುತ್ತದೆ, ಸಂಬಂಧಗಳನ್ನು ಮುರಿಯುತ್ತದೆ. ಆದ್ದರಿಂದ ಮುಂದಿನ ಬಾರಿ ನೀನು ಬರುವಾಗ ಒಂದು ಸಾಧಾರಣ ಸೂಜಿ ತಂದರೆ ಸಾಕು.”
*****
೪. ನಿಮಗೇನು ಬೇಕು?
ಒಬ್ಬ ಸೂಫಿ ಮುಮುಕ್ಷು ಜೀವನದಾದ್ಯಂತ ಸಂತೋಷದಿಂದಲೇ ಇದ್ದ. ಅವನು ದುಃಖಿಸಿದ್ದನ್ನು ಯಾರೂ ನೋಡಿರಲೇ ಇಲ್ಲ. ಅವನು ಯಾವಾಗಲೂ ನಗುತ್ತಲೇ ಇರುತ್ತಿದ್ದ. ನಗುವೇ ಅವನ ರೂಪ ಧರಿಸಿದಂತಿತ್ತು, ಅವನ ಇಡೀ ಜೀವನವೇ ಒಂದು ನಗುವಿನ ಉತ್ಸವವಾಗಿತ್ತು. ವೃದ್ಧಾಪ್ಯದಲ್ಲಿ ಸಾವಿನ ಅಂಚಿನಲ್ಲಿದ್ದಾಗಲೂ ಸಾಯುವ ಪ್ರಕ್ರಿಯೆಯನ್ನೂ ಆಣಂದದಿಂದ ಅನುಭವಿಸುತ್ತಿದ್ದ, ಆಗಲೂ ಗಹಗಹಿಸಿ ನಗುತ್ತಿದ್ದ.
ಶಿಷ್ಯನೊಬ್ಬ ಕೇಳಿದ, “ನಮಗೆ ನೀವು ಒಂದು ಒಗಟಾಗಿದ್ದೀರಿ. ಈಗ ನೀವು ಸಾಯಿಉತ್ತಿದ್ದೀರಿ, ಆದರೂ ಏಕೆ ಹೀಗೆ ನಗುತ್ತಿದ್ದೀರಿ? ಸಾಯುವುದರಲ್ಲಿ ತಮಾಷೆ ಏನಿದೆ? ನಾವೆಲ್ಲ ದುಃಖಿಸುತ್ತಿದ್ದೇವೆ. ನಿಮ್ಮ ಜೀವನದುದ್ದಕ್ಕೂ ಒಮ್ಮೆಯೂ ನೀವು ದುಃಖಿಸಿದ್ದನ್ನು ನಾವು ನೋಡಿಯೇ ಇಲ್ಲ, ಏಕೆ ಎಂಬುದನ್ನು ನಿಮ್ಮಿಂದ ಕೇಳಿ ತಿಳಿಯಬೇಕೆಂಬುದಾಗಿ ಎಷ್ಟೋ ಸಲ ನಾವು ಅಂದುಕೊಂಡಿದ್ದುಂಟು. ಸಾವಿನೊಂದಿಗೆ ಮುಖಾಮುಖಿಯಾಗಿರುವಾಗಲಾದರೂ ಯಾರೇ ಆದರೂ ದುಃಖಿಸಬೇಕಲ್ಲವೇ? ನೀವಾದರೋ ಈಗಲೂ ನಗುತ್ತಿರುವುರಿ – ಇದು ನಿಮಗೆ ಹೇಗೆ ಸಾಧ್ಯವಾಗುತ್ತದೆ?”
ವೃದ್ಧ ಸೂಫಿ ಹೇಳಿದ, “ಅದು ಬಹಳ ಸುಲಭ. ನಾನು ನನ್ನ ಗುರುವನ್ನು ಕೇಳಿದ್ದೆ — ನನಗೆ ೧೭ ವರ್ಷ ವಯಸ್ಸಾಗಿದ್ದಾಗಲೇ ನಾನು ನನ್ನ ಗುರುವಿನ ಹತ್ತಿರ ಹೋಗಿದ್ದೆ. ಆಗಲೇ ನಾನು ಸಂಕಟ ಪಡುತ್ತಿದ್ದೆ. ನನ್ನ ಗುರು ಆಗ ೭೦ ವರ್ಷ ವಯಸ್ಸಿನ ವೃದ್ಧರು. ಒಂದು ಮರದ ಕೆಳಗೆ ಕುಳಿತುಕೊಂಡು ಯಾವ ಕಾರಣವೂ ಇಲ್ಲದೇ ನಗುತ್ತಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ನಗುವಂಥದ್ದು ಏನೂ ಆಗಿರಲಿಲ್ಲ. ಯಾರೂ ನಗೆ ಚಟಾಕಿಯನ್ನೂ ಹಾರಿಸಿರಲಿಲ್ಲ. ಆದರೂ ಹೊಟ್ಟೆಯನ್ನು ಅದುಮಿ ಹಿಡಿದುಕೊಂಡು ನಗುತ್ತಿದ್ದರು. ನಾನವರನ್ನು ಕೇಳಿದೆ, ‘ನಿಮಗೇನಾಗಿದೆ? ಹುಚ್ಚೇನೂ ಹಿಡಿದಿಲ್ಲವಲ್ಲ?’ ಅವರು ಹೇಳಿದರು, ‘ಹಿಂದೊಮ್ಮೆ ನಾನೂ ನಿನ್ನಂತೆಯೇ ಸಂಕಟ ಪಡುತ್ತಿದ್ದೆ. ಅಗ ನನಗೆ ಇದ್ದಕ್ಕಿದ್ದಂತೆ ಹೊಳೆಯಿತು – ಅದು ನನ್ನ ಆಯ್ಕೆ, ಅದು ನನ್ನ ಜೀವನ ಎಂಬ ಸತ್ಯ. ಅಂದಿನಿಂದ ಪ್ರತೀ ದಿನ ಬೆಳಗ್ಗೆ ಎದ್ದ ತಕ್ಷಣ ಮೊದಲು ನಾನು ತೀರ್ಮಾನಿಸುವುದು — ಎದ್ದ ನಂತರ ಕಣ್ಣು ತೆರೆಯುವ ಮುನ್ನ ನನಗೆ ನಾನೇ ಹೇಳಿಕೊಳ್ಳುತ್ತೇನೆ, ‘ಅಬ್ದುಲ್ಲ’ – ಅದು ಅವರ ಹೆಸರು — ‘ನಿನಗೇನು ಬೇಕು? ದುಃಖವೋ? ಆನಂದವೋ? ಇವತ್ತು ಯಾವುದನ್ನು ಆಯ್ಕೆ ಮಾಡುವೆ? ನಾನು ಯಾವಾಗಲೂ ಆನಂದವನ್ನೇ ಆಯ್ಕೆ ಮಾಡುತ್ತೇನೆ.”
ಸೂಫಿ ಮುಮುಕ್ಷು ತನ್ನ ಶಿಷ್ಯರಿಗೆ ಹೇಳಿದರು, “ಯಾವುದೇ ದಿನ ನೀವು ಹೇಗಿರುತ್ತೀರಿ ಎಂಬುದು ನಿಮ್ಮ ಆಯ್ಕೆಯೇ ಆಗಿರುತ್ತದೆ. ಪರ್ಯತ್ನಿಸಿ ನೋಡಿ. ಬೆಳಗ್ಗೆ ಎದ್ದ ತಕ್ಷಣ ಮೊದಲು ನಿಮ್ಮನ್ನು ನೀವೇ ಕೇಳಿಕೊಳ್ಳಿ – ಇನ್ನೊಂದು ದಿನ ಬಂದಿದೆ! ಇವತ್ತು ಎಂಥ ದಿನ ಎಂಬುದಾಗಿ ಯೋಚಿಸುತ್ತಿರುವೆ? ದುಃಖದ್ದೋ ಆನಂದದ್ದೋ? ದುಃಖವನ್ನು ಯಾರು ತಾನೇ ಆಯ್ಕೆ ಮಾಡುತ್ತಾರೆ? ಏಕೆ? ಅದು ಅಸ್ವಾಭಾವಿಕವಾದದ್ದು. ದುಃಖಿಸುವುದರಲ್ಲಿ ಆನಂದ ಪಡುವವರು ಯಾರಾದರೂ ಇದ್ದಾರೆಯೇ? ಇದ್ದರೂ ಅವರು ಅನುಭವಿಸುವುದು ಆನಂದವನ್ನು, ದುಃಖವನ್ನಲ್ಲ.”
*****
೫. ನೀವೇಕೆ ಆನಂದವನ್ನು ಹೊರಗಿನ ಜಗತ್ತಿನಲ್ಲಿ ಹುಡುಕುತ್ತಿರುವಿರಿ?
(ಅ) ಒಂದು ದಿನ ಬೆಳ್ಳಂಬೆಳಗ್ಗೆ ಮಮುಕ್ಷು ಹಸನ್ ಸೂಫಿ ರಬಿ’ಆ ಅಲ್-ಅದವಿಯ್ಯಾಳನ್ನು ನೋಡಲು ಬಂದ. ರಬಿ’ಆ ತನ್ನ ಗುಡಿಸಿಲಿನ ಒಳಗೆ ಕುಳಿತಿದ್ದಳು. ಸೂರ್ಯೋದಯವಾಗುತ್ತಿತ್ತು, ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದವು, ತಂಗಾಳಿಗೆ ಮರಗಿಡಗಳು ನರ್ತಿಸುತ್ತಿದ್ದವು.
ಹಸನ್ ಹೊರಗಿನಿಂದಲೇ ಕೇಳಿದ, “ರಬಿ’ಆ ಒಳಗೇನು ಮಾಡುತ್ತಿರುವೆ? ಹೊರಗೆ ಬಾ! ಬಲು ಸುಂದರವಾದ ಮುಝವಿಗೆ ದೇವರು ಜನ್ಮ ನೀಡಿದ್ದಾನೆ. ನೀನು ಒಳಗೇನು ಮಾಡುತ್ತಿರುವೆ?”
ರಬಿ’ಆ ನಕ್ಕು ಹೇಳಿದಳು, “ಹಸನ್, ದೇವರು ಸೃಷ್ಟಿಸಿದ್ದು ಮಾತ್ರ ಹೊರಗಿದೆ, ದೇವರು ಒಳಗೇ ಇದ್ದಾನೆ. ನೀನೇಕೆ ಒಳಕ್ಕೆ ಬರಬಾರದು? ಇದೊಂದು ಸುಂದರವಾದ ಬೆಳಗಿನ ಜಾವ. ಆದರೂ ಈ ಸೌಂದರ್ಯ ಎಲ್ಲ ಮುಂಜಾನೆಗಳನ್ನು ಸೃಷ್ಟಿಸುವ ದೇವರ ಸೌಂದರ್ಯಕ್ಕೆ ಸಾಟಿಯಾಗುವುದಿಲ್ಲ. ನಿಜ, ಪಕ್ಷಿಗಳು ಬಲು ಚೆನ್ನಾಗಿ ಹಾಡುತ್ತಿವೆ, ಅದರೆ ದೇವರ ಹಾಡಿಗೆ ಅವುಗಳ ಹಾಡು ಸಾಟಿಯಾಗಲಾರದು. ಇವೆಲ್ಲ ಆಗುವುದು ನೀನು ಒಳಗಿದ್ದರೆ ಮಾತ್ರ. ನೀನೇ ಏಕೆ ಒಳಕ್ಕೆ ಬರಬಾರದು? ನಿನ್ನ ಹೊರಗಿನ ಕೆಲಸ ಇನ್ನೂ ನೀನು ಮುಗಿಸಿಲ್ಲವೇ? ನೀನು ಒಳಕ್ಕೆ ಬರಲು ಯಾವಾಗ ಸಾಧ್ಯವಾಗುತ್ತದೆ?
(ಆ) ಒಂದು ದಿನ ಸಂಜೆ ತನ್ನ ಗುಡಿಸಿಲಿನ ಮುಂದಿನ ರಸ್ತೆಯಲ್ಲಿ ರಬಿ’ಆ ಏನನ್ನೋ ಹುಡುಕುತ್ತಿರುವುದನ್ನು ಜೆಲವು ಮಂದಿ ನೋಡಿದರು.
ಪಾಪ ವೃದ್ಧೆ ಏನನ್ನೋ ಹುಡುಕುತ್ತಿದ್ದಾಳೆ ಅಂದುಕೊಂಡು ಅವರು ಅವಳನ್ನು ಕೇಳಿದರು, “ಏನು ವಿಷಯ? ಏನನ್ನು ಹುಡುಕುತ್ತಿರುವೆ?”
“ನನ್ನ ಸೂಜಿ ಕಳೆದುಹೋಗಿದೆ,” ಅಂದಳು ಅವಳು. ಅವರೂ ಅವಳಿಗೆ ಹುಡುಕಲು ನೆರವಾದರು.
ಆ ಸಂದರ್ಭದಲ್ಲಿ ಯಾರೋ ಒಬ್ಬ ಕೇಳಿದ, “ರಬಿ’ಆ ರಸ್ತೆ ಬಲು ದೊಡ್ಡದು, ಕತ್ತಲಾಗುತ್ತಿದೆ, ಇನ್ನು ತುಸು ಸಮಯವಾದ ನಂತರ ಬೆಳಕೂ ಇರುವುದಿಲ್ಲ, ಸೂಜಿಯಾದರೋ ಬಲು ಸಣ್ಣ ವಸ್ತು, ಅದು ಎಲ್ಲಿ ಬಿದ್ದಿತೆಂಬುದನ್ನು ನಿಖರವಾಗಿ ಹೇಳದೇ ಇದ್ದರೆ ಹುಡುಕುವುದು ಬಲು ಕಷ್ಟ.”
ರಬಿ’ಆ ಹೇಳಿದಳು, “ಅದನ್ನು ಕೇಳ ಬೇಡ. ಆ ಪ್ರಶ್ನೆಯನ್ನು ಮಾತ್ರ ಕೇಳಲೇ ಬೇಡ. ನನಗೆ ಸಹಾಯ ಮಾಡುವ ಮನಸ್ಸು ನಿನಗಿದ್ದರೆ ಸಹಾಯ ಮಾಡು, ಇಲ್ಲದಿದ್ದರೆ ಬೇಡ. ಆದರೆ ಆ ಪ್ರಶ್ನೆಯನ್ನು ಮಾತ್ರ ಕೇಳ ಬೇಡ.”
ಹುಡುಕುತ್ತಿದ್ದವರೆಲ್ಲರೂ ಹುಡುಕುವುದನ್ನು ನಿಲ್ಲಿಸಿ ಕೇಳಿದರು, “ಏನಾಗಿದೆ ನಿನಗೆ? ನಾವೇಕೆ ಆ ಪ್ರಶ್ನೆ ಕೇಳಬಾರದು? ಅದು ಎಲ್ಲಿ ಬಿದ್ದಿತೆಂಬುದನ್ನು ನೀನು ಹೇಳದೇ ಇದ್ದರೆ ನಾವು ನಿನಗೆ ಸಹಾಯ ಮಾಡುವುದಾದರೂ ಹೇಗೆ?”
ಅವಳು ಹೇಳಿದಳು, “ಸೂಜಿ ನನ್ನ ಮನೆಯೊಳಗೆ ಬಿದ್ದಿತ್ತು.”
ಅವರು ಕೇಳಿದರು, “ನಿನಗೇನಾದರೂ ಹುಚ್ಚು ಹಿಡಿದಿದೆಯೇ? ಸೂಜಿ ಮನೆಯೊಳಗೆ ಬಿದ್ದಿದ್ದರೆ ಇಲ್ಲಿ ಏಕೆ ಅದನ್ನು ಹುಡುಕುತ್ತಿರುವೆ?”
ಅವಳು ಹೇಳಿದಳು, “ಏಕೆಂದರೆ, ಮನೆಯೊಳಗೆ ಬೆಳಕಿಲ್ಲ.”
ಯಾರೋ ಒಬ್ಬ ಹೇಳಿದ, “ಇಲ್ಲಿ ಬೆಳಕಿದ್ದರೂ ಸೂಜಿ ಇಲ್ಲಿ ಬೀಳಲಿಲ್ಲವಾದರೆ ಅದು ನಮಗೆ ಇಲ್ಲಿ ಸಿಕ್ಕುವುದಾದರೂ ಹೇಗೆ? ಮನೆಯೊಳಗೆ ಬೆಳಕು ತಂದು ಅಲ್ಲಿಯೇ ಸೂಜಿ ಹುಡುಕುವುದು ಸರಿಯಾದ ವಿಧಾನ ಅಲ್ಲವೇ?”
ರಬಿ’ಆ ನಕ್ಕಳು, “ನೀವೆಲ್ಲರೂ ಇಂಥ ಸಣ್ಣ ವಿಷಯಗಳಿಗೆ ಸಂಬಂಧಿಸಿದಂತೆ ಜಾಣರು. ನಿಮ್ಮ ಅಂತರಂಗದ ಬಾಳನ್ನು ಬಾಳಲು ಈ ಬುದ್ಧಿಶಕ್ತಿಯನ್ನು ಯಾವಾಗ ಉಪಯೋಗಿಸುವಿರಿ? ನೀವೆಲ್ಲರೂ ಹೊರಗೆ ಹುಡುಕುವುದನ್ನು ನಾನು ನೋಡಿದ್ದೇನೆ. ಸ್ವಾನುಭವದಿಂದ ನನಗೆ ಬಲು ಚೆನ್ನಾಗಿ ತಿಳಿದಿದೆ, ನೀವೇನನ್ನು ಹೊರಗೆ ಹುಡುಕುತ್ತಿರುವಿರೋ ಅದು ಒಳಗೆ ಕಳೆದುಹೋಗಿದೆ. ಆದರೂ ನೀವು ಅದನ್ನು ಹೊರಗೆ ಹುಡುಕುತ್ತಿರುವಿರಿ. ಏಕೆಂದರೆ ನಿಮ್ಮ ತರ್ಕದ ಪ್ರಕಾರ ಹೊರಗೆ ಬೆಳಕು ಇರುವುದರಿಂದ ಹೊರಗೆ ಇರುವುದನ್ನು ನಿಮ್ಮ ಕಣ್ಣುಗಳು ನೋಡುವುದು ಸಾಧ್ಯ, ಕೈಗಳು ಮುಟ್ಟುವುದು ಸಾಧ್ಯ — ಆದ್ದರಿಂದ ಹೊರಗೇ ಹುಡುಕುತ್ತಿರುವಿರಿ. ನೀವು ನಿಜವಾಗಿಯೂ ಬುದ್ಧಿವಂತರಾಗಿದ್ದರೆ ನಿಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ಆಲೋಚಿಸಿ. ಆನಂದವನ್ನು, ಸಂತುಷ್ಟಿಯನ್ನು ಹೊರ ಜಗತ್ತಿನಲ್ಲಿ ಏಕೆ ಹುಡುಕುತ್ತಿರುವಿರಿ? ನೀವು ಅದನ್ನು ಕಳೆದುಕೊಂಡದ್ದು ಹೊರಜಗತ್ತಿನಲ್ಲಿಯೋ?”
ಅವರೆಲ್ಲರೂ ದಿಗ್ಭ್ರಾಂತರಾಗಿ ನೋಡುತ್ತಿದ್ದರು, ರಬಿ’ಆ ನಗುತ್ತಾ ಗುಡಿಸಿಲಿನೊಳಕ್ಕೆ ಹೋದಳು.
*****