೧. ಮಂಗಗಳನ್ನು ಹಿಡಿಯುವುದು ಹೇಗೆ?
ಒಂದಾನೊಂದು ಕಾಲದಲ್ಲಿ ಚೆರಿ ಹಣ್ಣುಗಳನ್ನು ಬಲು ಇಷ್ಟಪಡುತ್ತಿದ್ದ ಮಂಗವೊಂದಿತ್ತು. ಒಂದು ದಿನ ಅದಕ್ಕೆ ರಸಭರಿತ ಚೆರಿ ಹಣ್ಣೊಂದು ಗೋಚರಿಸಿತು. ಆ ಹಣ್ಣನ್ನು ಪಡೆಯಲೋಸುಗ ಮಂಗ ಮರದಿಂದ ಇಳಿದು ಬಂದಿತು. ಆ ಹಣ್ಣು ಒಂದು ಶುಭ್ರವಾದ ಗಾಜಿನ ಸೀಸೆಯೊಳಗಿತ್ತು.
ವಿವಿಧ ರೀತಿಯಲ್ಲಿ ಪ್ರಯತ್ನಿಸಿದ ನಂತರ ಸೀಸೆಯ ಕತ್ತಿನೊಳಕ್ಕೆ ಕೈತೂರಿಸಿ ಹಣ್ಣನ್ನು ಹಿಡಿಯಬಹುದು ಎಂಬುದನ್ನು ಅದು ಪತ್ತೆಹಚ್ಚಿತು. ಅಂತೆಯೇ ಕೈತೂರಿಸಿ ಹಣ್ಣನ್ನು ಹಿಡಿದುಕೊಂಡಿತಾದರೂ ಮುಷ್ಟಿಯಲ್ಲಿ ಹಣ್ಣನ್ನು ಹಿಡಿದುಕೊಂಡಾಗ ಅದರ ಗಾತ್ರ ಸೀಸೆಯ ಕತ್ತಿನ ಗಾತ್ರಕ್ಕಿಂತ ಹೆಚ್ಚಾಗುವುದರಿಂದ ಹಣ್ಣುಸಹಿತವಾದ ಮುಷ್ಟಿಯನ್ನು ಸೀಸೆಯಿಂದ ಹೊರಕ್ಕೆಳೆದುಕೊಳ್ಳಲಾಗಲಿಲ್ಲ.
ಚೆರಿ ಹಣ್ಣನ್ನು ಒಬ್ಬ ಮಂಗಗಳ ಬೇಟೆಗಾರ ಉದ್ದೇಶಪೂರ್ವಾಗಿ ಸೀಸೆಯೊಳಗೆ ಇಟ್ಟಿದ್ದ. ಚೆರಿ ಹಣ್ಣನ್ನು ತೆಗೆದುಕೊಳ್ಳಲು ಮಂಗಗಳು ಏನು ಮಾಡುತ್ತವೆ ಎಂಬುದು ಅವನಿಗೆ ತಿಳಿದಿತ್ತು.
ನೋವಿನಿಂದ ಮಂಗ ಹೊರಡಿಸುತ್ತಿದ್ದ ದನಿ ಕೇಳಿದ ಬೇಟೆಗಾರ ಅಲ್ಲಿಗೆ ಬಂದನು. ಅವನನ್ನು ನೋಡಿದ ಮಂಗ ಓಡಿ ಹೋಗಲು ಪ್ರಯತ್ನಿಸಿತಾದರೂ ಅದರ ಪ್ರಕಾರ ಕೈ ಸೀಸೆಯಲ್ಲಿ ಸಿಕ್ಕಿಹಾಕಿಕೊಂಡದ್ದರಿಂದ ವೇಗವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಚೆರಿ ಹಣ್ಣು ತನ್ನ ಕೈನಲ್ಲೇ ಇದೆ ಎಂದು ಅದು ಈ ಪರಿಸ್ಥಿತಿಯಲ್ಲಿಯೂ ಆಲೋಚಿಸುತ್ತಿತ್ತು. ಬೇಟೆಗಾರ ಮಂಗವನ್ನು ಎತ್ತಿ ಹಿಡಿದು ಅದರ ತಲೆಗೆ ಬಲವಾಗಿ ಮೊಟಕಿದ. ತತ್ಪರಿಣಾಮವಾಗಿ ಮಂಗ ಹಣ್ಣು ಹಿಡಿದಿದ್ದ ಮುಷ್ಟಿಯನ್ನು ಸಡಲಿಸಿತು. ತಕ್ಷಣ ಅದು ಕೈಯನ್ನು ಸೀಸೆಯಿಂದ ಹೊರಕ್ಕೆಳೆದುಕೊಂಡಿತು. ಕೈ ಸೀಸೆಯಿಂದ ಹೊರಬಂದಿತಾದರೂ ಮಂಗ ಬಂಧಿಯಾಗಿತ್ತು. ಬೇಟೆಗಾರನಿಗೆ ಮಂಗದೊಂದಿಗೆ ಅವನ ಸೀಸೆಯೂ ಅದರೊಳಗಿದ್ದ ಚೆರಿ ಹಣ್ಣೂ ಸಿಕ್ಕಿತು.
*****
೨. ದೈತ್ಯ ರಾಕ್ಷಸನೂ ಸೂಫಿಯೂ
ಸೂಫಿ ಗುರುವೊಬ್ಬ ನಿರ್ಜನ ಪರ್ವತ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಎದುರಾದ ದೈತ್ಯ ರಾಕ್ಷಸನೊಬ್ಬ ಅವನನ್ನು ನಾಶ ಮಾಡುವುದಾಗಿ ಹೇಳಿದ. ಗುರು ಹೇಳಿದ, “ಬಹಳ ಒಳ್ಳೆಯದು. ನೀನು ಪ್ರಯತ್ನಿಸಲು ನನ್ನದೇನೂ ಆಭ್ಯಂತರವಿಲ್ಲ. ಆದರೆ ನಾನು ನಿನ್ನನ್ನು ಸೋಲಿಸುತ್ತೇನೆ, ಏಕೆಂದರೆ ನೀನು ಆಲೋಚಿಸಿದ್ದಕ್ಕಿಂತ ಅನೇಕ ರೀತಿಯಲ್ಲಿ ನಾನು ಬಲಿಷ್ಠನಾಗಿದ್ದೇನೆ.”
“ಹುಚ್ಚುಮಾತು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತನಾದ ಸೂಫಿ ಗುರು ನೀನು. ನಾನು ನನ್ನ ಪಶುಸದೃಶ ಶಕ್ತಿಯನ್ನು ಅವಲಂಬಿಸಿರುವವನು, ಗಾತ್ರದಲ್ಲಿ ನಿನಗಿಂತ ೩೦ ಪಟ್ಟು ದೊಡ್ಡವನು. ಎಂದೇ, ನೀನು ನನ್ನನ್ನು ಸೋಲಿಸಲಾರೆ.”
“ಬಲ ಪ್ರದರ್ಶನ ಮಾಡುವ ಇಚ್ಛೆ ನಿನಗಿದ್ದರೆ,” ಸೂಫಿ ಒಂದು ಸಣ್ಣ ಕಲ್ಲನ್ನು ಹೆಕ್ಕಿ ಕೊಡುತ್ತಾ ಹೇಳಿದ, “ಈ ಕಲ್ಲನ್ನು ತೆಗೆದುಕೋ. ಅದನ್ನು ಹಿಸುಕಿ ದ್ರವ ಬರಿಸು ನೋಡೋಣ.”
ಎಷ್ಟು ಬಲ ಪ್ರಯೋಗ ಮಾಡಿದರೂ ದೈತ್ಯ ರಾಕ್ಷಸನಿಗೆ ಅಂತು ಮಾಡಲು ಸಾಧ್ಯವಾಗಲಿಲ್ಲ. “ಅಸಾಧ್ಯ. ಈ ಕಲ್ಲಿನಲ್ಲಿ ಒಂದಿನಿತೂ ನೀರಿಲ್ಲ. ಇದೆ ಎಂದಾದರೆ ನೀನೇ ತೋರಿಸು,” ಅಂದನಾತ.
ಮಬ್ಬು ಬೆಳಕಿನಲ್ಲಿ ಸೂಫಿ ಗುರು ಒಂದು ಮೊಟ್ಟೆಯನ್ನು ತನ್ನ ಕಿಸೆಯಿಂದಲೂ ಕಲ್ಲನ್ನು ದೈತ್ಯನಿಂದಲೂ ತೆಗೆದುಕೊಂಡು ಎರಡನ್ನೂ ದೈತ್ಯನ ಕೈ ಮೇಲೆ ಹಿಡಿದು ಹಿಸುಕಿದ. ಇದರಿಂದ ದೈತ್ಯ ಪ್ರಭಾವಿತನಾದ. ಇದೇ ರೀತಿ ಜನ ಅನೇಕ ಬಾರಿ ತಮಗೆ ಅರ್ಥವಾಗದ್ದರಿಂದ ಪ್ರಭಾವಿತರಾಗುತ್ತಾರೆ, ಅಂಥವುಗಳಿಗೆ ಅಗತ್ಯಕ್ಕಿಂತ ಹೆಚ್ಚು ಬೆಲೆ ಕಟ್ಟುತ್ತಾರೆ, ತಮ್ಮ ನಿಜವಾದ ಹಿತಾಸಕ್ತಿಗೆ ಅದು ವಿರುದ್ಧವಾಗಿದೆ ಎಂಬುದನ್ನು ತಿಳಿಯದೆ.
ದೈತ್ಯ ಹೇಳಿದ, “ಈ ವಿದ್ಯಮಾನದ ಕುರಿತು ನಾನು ಆಲೋಚಿಸ ಬೇಕು. ನನ್ನ ಗುಹೆಗೆ ಬನ್ನಿ. ಇಂದು ರಾತ್ರಿ ನಾನು ನಿಮ್ಮನ್ನು ಸತ್ಕರಿಸುತ್ತೇನೆ.”
ದೈತ್ಯನೊಂದಿಗೆ ಸೂಫಿ ಅವನ ಬೃಹತ್ತಾದ ಗುಹೆಗೆ ಹೋದ. ದೈತ್ಯ ಕೊಲೆಮಾಡಿದ ಸಹಸ್ರಾರು ಯಾತ್ರಿಕರ ಸಾಮಾನುಗಳು ಆ ಗುಹೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದೊಂದು ಅಲ್ಲಾವುದ್ದೀನನ ಗುಹೆಯಂತಿತ್ತು. “ಇಲ್ಲಿ ನನ್ನ ಹತ್ತಿರ ಮಲಗಿ ನಿದ್ರಿಸಿ, ಬೆಳಗ್ಗೆ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸೋಣ” ಅಂದವನೇ ಆ ದೈತ್ಯ ಅಲ್ಲಿಯೇ ಮಲಗಿ ತಕ್ಷಣವೇ ಗಾಢ ನಿದ್ದೆಗೆ ಜಾರಿದ.
ನಂಬಿಕೆದ್ರೋಹದ ಸಾಧ್ಯತೆ ಇದೆ ಎಂಬುದಾಗಿ ಒಳದನಿ ಸೂಚಿಸಿದ್ದರಿಂದ ಸೂಫಿ ಎದ್ದು ಹಾಸಿಗೆಯಲ್ಲಿಯೇ ತಾನಿರುವ ಭ್ರಮೆ ಮೂಡಿಸುವ ವ್ಯವಸ್ಥೆ ಮಾಡಿ ತುಸು ದೂರದಲ್ಲಿ ಅಡಗಿ ಕುಳಿತ.
ಸೂಫಿ ಅಡಗಿ ಕುಳಿತ ನಂತರ ಕೆಲವೇ ಕ್ಷಣಗಳಲ್ಲಿ ದೈತ್ಯ ಮೇಲೆದ್ದ. ತನ್ನ ಒಂದು ಕೈನಿಂದ ಮರದ ದೊಡ್ಡ ಕಾಂಡವೊಂದನ್ನು ತೆಗೆದುಕೊಂಡು ಅದರಿಂದ ಸೂಫಿ ಮಲಗಿದ್ದಂತೆ ಕಾಣುತ್ತಿದ್ದಲ್ಲಿಗೆ ಏಳು ಬಾರಿ ಬಲವಾಗಿ ಬಡಿದ. ಆನಂತರ ಪುನಃ ಮಲಗಿ ನಿದ್ದೆ ಮಾಡಿದ. ಸೂಫಿ ಗುರು ತನ್ನ ಹಾಸಿಗೆಯಲ್ಲಿ ಪುನಃ ಮಲಗಿ ದೈತ್ಯನನ್ನು ಎಬ್ಬಿಸಿ ಹೇಳಿದ, “ಓ ದೈತ್ಯನೇ, ನಿನ್ನ ಈ ಗುಹೆ ಆರಾಮದಾಯಕವಾಗಿದೆಯಾದರೂ ಸೊಳ್ಳೆಗಳು ನನಗೆ ಏಳು ಬಾರಿ ಕಚ್ಚಿವೆ. ಈ ಕುರಿತು ನೀನು ಏನಾದರೂ ಮಾಡಲೇಬೇಕು.”
ಇನ್ನೊಂದು ಬಾರಿ ಆಕ್ರಮಣ ಮಾಡಲು ಪ್ರಯತ್ನಿಸದೇ ಇರುವಷ್ಟು ಆಘಾತ ಇದರಿಂದ ದೈತ್ಯನಿಗೆ ಆಯಿತು. ದೈತ್ಯ ರಾಕ್ಷಸನೊಬ್ಬ ಬೃಹತ್ ಗಾತ್ರದ ಮರದ ಕಾಂಡದಿಂದ ತನ್ನೆಲ್ಲ ಶಕ್ತಿಯನ್ನೂ ಪ್ರಯೋಗಿಸಿ ಏಳು ಬಾರಿ ಹೊಡೆದರೂ ಸೂಫಿ ಸಾಯಲಿಲ್ಲ ಅನ್ನುವುದಾದರೆ ——.
ಬೆಳಗ್ಗೆ ಎದ್ದ ನಂತರ ಒಂದು ಇಡೀ ಎತ್ತಿನ ಚರ್ಮದಿಂದ ಮಾಡಿದ ಚೀಲವನ್ನು ಸೂಫಿಯತ್ತ ಎಸೆದು ದೈತ್ಯ ಆಜ್ಞಾಪಿಸಿದ, “ಬೆಳಗಿನ ಉಪಾಹಾರಕ್ಕೆ ವಹಾ ಮಾಡಲೋಸುಗ ನೀರು ತೆಗೆದುಕೊಂಡು ಬಾ.”
ಚರ್ಮದ ಚೀಲವನ್ನು ಎತ್ತಿಕೊಳ್ಳುವುದಕ್ಕೆ ಬದಲಾಗಿ (ಬಲು ಭಾರದ ಆ ಚೀಲವನ್ನು ಎತ್ತಲಾಗುತ್ತಿರಲಿಲ್ಲ ಅನ್ನುವುದು ಬೇರೆ ವಿಷಯ) ಸೂಫಿ ಗುರು ಹತ್ತಿರದಲ್ಲಿದ್ದ ತೊರೆಯ ಸಮೀಪಕ್ಕೆ ಹೋಗಿ ಅಲ್ಲಿಂದ ಗುಹೆಯತ್ತ ಒಂದು ಪುಟ್ಟ ಕಾಲುವೆ ತೋಡಲಾರಂಭಿಸಿದ.
ತುಸು ಸಮಯದ ನಂತರ ದಾಹ ಅತಿಯಾದದ್ದರಿಂದ ಕೇಳಿದ, “ನೀನೇಕೆ ನೀರು ತರುತ್ತಿಲ್ಲ?”
“ತಾಳ್ಮೆ ಇರಲಿ ಮಿತ್ರಾ, ತಾಳ್ಮೆ. ನಿನ್ನ ಗುಹೆಯ ಪ್ರವೇಶ ದ್ವಾರದಲ್ಲಿ ಸದಾ ತಾಜಾ ನೀರು ಸಿಗುವಂತೆ ಮಾಡಲು ನಾನೊಂದು ಶಾಶ್ವತ ಕಾಲುವೆ ನಿರ್ಮಿಸುತ್ತಿದ್ದೇನೆ. ಮುಂದೆ ನೀನು ಎಂದೆಂದಿಗೂ ಚರ್ಮದ ಚೀಲದಲ್ಲಿ ನೀರು ಹೊರಬೇಕಾಗುವುದೇ ಇಲ್ಲ.”
ದೈತ್ಯನಿಗೆ ವಿಪರೀತ ಬಾಯಾರಿಕೆ ಆಗಿದ್ದದ್ದರಿಂದ ಕಾಯುವಷ್ಟು ತಾಳ್ಮೆ ಇರಲಿಲ್ಲ. ಅವನು ತಾನೇ ಚರ್ಮದ ಚೀಲವನ್ನು ತೆಗದುಕೊಂಡು ತೊರೆಗೆ ಹೋಗಿ ನೀರು ತಂದು ಚಹಾ ಮಾಡಿ ಅನೇಕ ಗ್ಯಾಲನ್‌ಗಳಷ್ಟು ಚಹಾ ಕುಡಿದ. ತತ್ಪರಿಣಾಮವಾಗಿ ಅವನ ಆಲೋಚನಾ ಸಾಮರ್ಥ್ಯ ತುಸು ಸುಧಾರಿಸಿತು. ಎಂದೇ ಆತ ಕೇಳಿದ, “ನೀನು ಬಲು ಶಕ್ತಿಶಾಲಿಯಾಗಿರುವುದರಿಂದ — ನಿನ್ನ ಶಕ್ತಿ ಎಷ್ಟೆಂಬುದನ್ನು ಈಗಾಗಲೇ ತೋರಿಸಿರುವೆ — ಕಾಲುವೆಯನ್ನು ಅಂಗುಲ ಅಂಗುಲದಷ್ಟೇ ತೋಡುವ ಬದಲು ವೇಗವಾಗಿ ಏಕೆ ತೋಡಬಾರದು?”
ಗುರು ಉತ್ತರಿಸಿದರು, “ಏಕೆಂದರೆ, ನಿಜವಾಗಿ ಮೌಲ್ಯಯುತವಾದದ್ದನ್ನು ಕನಿಷ್ಠ ಶ್ರಮ ಹಾಕದೆ ಸಮರ್ಪಕವಾಗಿ ಮಾಡಲಾಗುವುದಿಲ್ಲ. ಪ್ರತಿಯೊಂದಕ್ಕೂ ಎಷ್ಟು ಕನಿಷ್ಠ ಶ್ರಮ ಹಾಕಬೇಕೆಂಬುದಕ್ಕೆ ಅದರದ್ದೇ ಆದ ಮಿತಿಯೊಂದು ಇರುತ್ತದೆ. ನಾನು ಈ ಕಾಲುವೆ ತೋಡಲು ಎಷ್ಟು ಕನಿಷ್ಠ ಶ್ರಮ ಹಾಕಬೇಕೋ ಅಷ್ಟನ್ನು ಮಾತ್ರ ಹಾಕುತ್ತಿದ್ದೇನೆ. ಅಷ್ಟೇ ಅಲ್ಲದೆ, ನೀನೆಂಥವನು ಅಂದರೆ ಅಭ್ಯಾಸ ಬಲದಿಂದ ಯಾವಾಗಲೂ ಆ ಎತ್ತಿನ ಚರ್ಮದ ಚೀಲವನ್ನೇ ಉಪಯೋಗಿಸುವೆ ಎಂಬುದೂ ನನಗೆ ತಿಳಿದಿದೆ.”
*****
೩. ಪ್ರತಿಜ್ಞೆ
ಮಾನಸಿಕ ಪ್ರಕ್ಷುಬ್ಧತೆಯಿಂದ ಬಳಲುತ್ತಿದ್ದವನೊಬ್ಬ ಅವನ ಎಲ್ಲ ಸಮಸ್ಯೆಗಳು ಪರಿಹಾರವಾದರೆ ತನ್ನ ಮನೆಯನ್ನು ಮಾರಿ ದೊರೆತ ಹಣವನ್ನು ಬಡವರಿಗೆ ಕೊಡುವುದಾಗಿ ಪ್ರತಿಜ್ಞೆ ಮಾಡಿದ.
ಮುಂದೊಮ್ಮೆ ಈ ಮಾತು ಉಳಿಸಿಕೊಳ್ಳಬೇಕಾದ ಕಾಲ ಬಂದಿತೆಂಬ ಅರಿವು ಅವನಿಗಾಯಿತು. ಅಷ್ಟೊಂದು ಹಣವನ್ನು ಕೊಡಲು ಅವನಿಗೆ ಇಷ್ಟವಿರಲಿಲ್ಲ. ಈ ಸಂಕಟದಿಂದ ಪಾರಾಗಲು ಅವನೊಂದು ಮಾರ್ಗ ಕಂಡುಕೊಂಡ.
ಹತ್ತು ಸಾವಿರ ಬೆಳ್ಳಿಯ ನಾಣ್ಯ ಕೊಟ್ಟು ಬೆಕ್ಕೊಂದನ್ನು ಖರೀದಿಸುವವರಿಗೆ ಅದರೊಂದಿಗೆ ಒಂದು ಬೆಳ್ಳಿಯ ನಾಣ್ಯಕ್ಕೆ ಮನೆಯನ್ನು ಮಾರಾಟ ಮಾಡುವುದಾಗಿ ಘೋಷಿಸಿದ.
ಯಾರೋ ಒಬ್ಬ ಬೆಕ್ಕನ್ನೂ ಮನೆಯನ್ನೂ ನಿಗದಿತ ಬೆಲೆಗೆ ಕೊಂಡುಕೊಂಡ. ಮಾರಿದಾತ ಒಂದು ಬೆಳ್ಳಿಯ ನಾಣ್ಯವನ್ನು ಅಲ್ಲಿದ್ದ ಒಬ್ಬ ಬಡವನಿಗೆ ಕೊಟ್ಟು ಉಳಿದ ಹತ್ತು ಸಾವಿರ ಬೆಳ್ಳಿಯ ನಾಣ್ಯವನ್ನು ಜೇಬಿಗಿಳಿಸಿದ.
*****
೪. ಯಾರದು?
ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಬಾಗಿಲು ತಟ್ಟಿದ. “ಯಾರದು?” ಒಳಗಿನಿಂದ ಅವಳು ಕೇಳಿದಳು.
ಪ್ರೇಮಿ ಉತ್ತರಿಸಿದ, “ನಾನು.”
“ಇಲ್ಲಿಂದ ಹೊರಟು ಹೋಗು. ಈ ಮನೆಯಲ್ಲಿ ನಾನು ಹಾಗೂ ನೀನು ಇಬ್ಬರಿಗೂ ಸ್ಥಳಾವಕಾಶವಿಲ್ಲ,”
ತಿರಸ್ಕೃತ ಪ್ರೇಮಿ ನಿರ್ಜನ ಪ್ರದೇಶಕ್ಕೆ ತೆರಳಿದ. ಅಲ್ಲಿ ಅವನು ಸುದೀರ್ಘ ಕಾಲ ಪ್ರಾರ್ಥನೆ ಮಾಡುವುದರೊಂದಿಗೆ ತನ್ನ ಪ್ರೇಯಸಿ ಹೇಳಿದ ಮಾತುಗಳ ಕುರಿತು ಗಾಢವಾಗಿ ಆಲೋಚನೆ ಮಾಡಿದ. ಕೊನೆಗೊಂದು ದಿನ ಪುನಃ ಪ್ರೇಯಸಿಯ ಮನೆಗೆ ಬಂದು ಬಾಗಿಲು ತಟ್ಟಿದ.
“ಯಾರದು?” ಒಳಗಿನಿಂದ ಅವಳು ಕೇಳಿದಳು.
ಪ್ರೇಮಿ ಉತ್ತರಿಸಿದ, “ಅದು ನೀನು.”
ತಕ್ಷಣವೇ ಅವಳು ಬಾಗಿಲು ತೆರೆದಳು.
*****
೫. ದೇವರ ಕೈನಲ್ಲಿ
ಏನೂ ಕೆಲಸ ಮಾಡದೆ ಸುಮ್ಮನೆ ಕುಳಿತುಕೊಂಡಿರುತ್ತಿದ್ದ ಜನರ ಗುಂಪೊಂದನ್ನು ಒಂದು ದಿನ ಕಲೀಫ ಓಮರ್ ಭೇಟಿ ಮಾಡಿದ. ಅವರು ಯಾರು ಎಂಬುದನ್ನಾತ ವಿಚಾರಿಸಿದ.
ಅವರು ಉತ್ತರಿಸಿದರು, “ನಾವು ದೇವರನ್ನು ನಂಬುವವರು. ಅವನಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಎಂದೇ ನಾವು ನಮ್ಮ ವ್ಯವಹಾರಗಳನ್ನು ಅವನ ಕೈಗೊಪ್ಪಿಸಿದ್ದೇವೆ.”
ಅದನ್ನು ಕೇಳಿದ ಅವರಿಗೆ ಕಲೀಫ ಮಾತಿನ ಏಟು ನೀಡಿದ, “ನಿಜವಾಗಿ ನಿಮಗೆ ದೇವರಲ್ಲಿ ನಂಬಿಕೆ ಇಲ್ಲ. ನೀವು ಕೇವಲ ಬಿಟ್ಟಿ ಕೂಳು ತಿನ್ನುವವರು, ಇತರರ ಶ್ರಮದ ಫಲವನ್ನು ಭೋಗಿಸುವ ಪರಾವಲಂಬೀ ಜೀವಿಗಳು! ದೇವರನ್ನು ನಿಜವಾಗಿ ನಂಬುವವರು ಮೊದಲು ಶ್ರಮಪಟ್ಟು ಭೂಮಿಯಲ್ಲಿ ಬೀಜ ಬಿತ್ತನೆ ಮಾಡುತ್ತಾರೆ. ತದನಂತರ ಅವರ ವ್ಯವಹಾರವನ್ನು ದೇವರಿಗೆ, ಅರ್ಥಾತ್ ಸಕಲ ಜೀವ ಪೋಷಕನಿಗೊಪ್ಪಿಸಿತ್ತಾರೆ.”
*****