ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಗತ್ತನ್ನು ಬದಲಾಯಿಸಿ
ಸೂಫಿ ಮುಮುಕ್ಷು ಬಯಾಝಿದ್‌ ತನ್ನ ಜೀವನಚರಿತ್ರೆಯಲ್ಲಿ ಇಂತು ಬರೆದಿದ್ದಾನೆ: ನಾನು ಚಿಕ್ಕವಯಸ್ಸಿನವನಾಗಿದ್ದಾಗ ನನ್ನ ಆಲೋಚನೆಗಳ, ದೇವರಿಗೆ ಮಾಡುತ್ತಿದ್ದ ಕೋರಿಕೆಗಳ, ಹಾಗೂ ಎಲ್ಲ ಪ್ರಾರ್ಥನೆಗಳ ತಿರುಳು “ಜಗತ್ತನ್ನು ಬದಲಿಸಲು ಅಗತ್ಯವಾದ ಶಕ್ತಿಯನ್ನು ನನಗೆ ಕೊಡು” ಎಂಬುದಾಗಿತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಏನೋ ಒಂದು ಲೋಪ ನನಗೆ ಗೋಚರಿಸುತ್ತಿತ್ತು. ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ. ಇಡೀ ಪ್ರಪಂಚವನ್ನೇ ಬದಲಿಸುವ ಹಂಬಲ ನನ್ನದಾಗಿತ್ತು. ತುಸು ಪಕ್ವವಾದ ನಂತರ ನನಗನ್ನಿಸುತ್ತಿತ್ತು – ಈ ಬಯಕೆ ತುಸು ಅತಿಯಾಯಿತು. ನನ್ನ ಜೀವನ ನನ್ನ ಕೈ ಮೀರಿ ಹೋಗುತ್ತಿದೆ. ನನ್ನ ಅರ್ಧ ಆಯುಷ್ಯವೇ ಮುಗಿದಿದ್ದರೂ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಬದಲಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅಂದ ಮೇಲೆ ಇಡೀ ಜಗತ್ತನ್ನೇ ಬದಲಿಸಬೇಕೆಂಬ ಬಯಕೆ ಅತಿಯಾಯಿತು. ಆದ್ದರಿಂದ ನಾನು ದೇವರಿಗೆ ಹೇಳಿದೆ, “ನನ್ನ ಕುಟುಂಬ ಸಾಕು. ನನ್ನ ಕುಟುಂಬವನ್ನು ನಾನು ಬದಲಿಸಲು ಅಗತ್ಯವಾದ ಶಕ್ತಿ ನೀಡು.” ನಾನು ಮುದುಕನಾದಾಗ ನನ್ನ ಕುಟುಂಬವನ್ನು ಬದಲಿಸ ಹೊರಟದ್ದೂ ಅತಿಯಾಯಿತು ಅನ್ನಿಸತೊಡಗಿತು. ಅವರನ್ನು ಬದಲಿಸಲು ನಾನು ಯಾರು? ನನ್ನನ್ನು ನಾನು ಬದಲಿಸಿದರೆ ಸಾಕು, ಆ ಸಾಧನೆಯೇ ಬಲು ದೊಡ್ಡ ಸಾಧನೆಯಾಗುತ್ತದೆ ಎಂಬ ಅರಿವು ಮೂಡಿತು. ತಕ್ಷಣ ದೇವರಲ್ಲಿ ಇಂತು ಪ್ರಾರ್ಥಿಸಿದೆ, “ಈಗ ನಾನು ಸರಿಯಾದ ನಿಲುವು ತಳೆದಿದ್ದೇನೆ. ಕನಿಷ್ಠಪಕ್ಷ ’ನನ್ನನ್ನು ನಾನು ಬದಲಿಸಿಕೊಳ್ಳಲು ಅವಕಾಶ ಕೊಡು.” ದೇವರು ಉತ್ತರಿಸಿದರು, “ಮಗೂ, ಈಗ ಸಮಯ ಉಳಿದಿಲ್ಲ. ಇದನ್ನು ನೀನು ಆರಂಭದಲ್ಲಿಯೇ ಕೇಳಬೇಕಿತ್ತು. ಆಗ ಅದನ್ನು ಮಾಡಬಹುದಾದ ಸಾಧ್ಯತೆ ಇತ್ತು.” 

*****

೨. ಸೂರ್ಯ ಮತ್ತು ಗುಹೆ
ಒಂದು ದಿನ ಸೂರ್ಯನೂ ಗುಹೆಯೂ ಸಂಭಾಷಿಸುತ್ತಿದ್ದವು. ’ಅಂಧಕಾರ’, ’ಅತೀ ಥಂಡಿ’ – ಈ ಪರಿಕಲ್ಪನೆಗಳು ಸೂರ್ಯನಿಗೆ ಅರ್ಥವಾಗಲಿಲ್ಲ. ’ಬೆಳಕು’, ’ಪ್ರಕಾಶಮಾನವಾದ’ ಈ ಪರಿಕಲ್ಪನೆಗಳು ಗುಹೆಗೆ ಅರ್ಥವಾಗಲಿಲ್ಲ. ಅರ್ಥಮಾಡಿಕೊಳ್ಳಲೋಸುಗ ಸೂರ್ಯನು ಗುಹೆಗೆ, ಗುಹೆಯು ಸೂರ್ಯನಲ್ಲಿಗೆ ಭೇಟಿ ನೀಡಲು ತೀರ್ಮಾನಿಸಿದವು. ಮೊದಲು ಗುಹೆಯು ಸೂರ್ಯನಲ್ಲಿಗೆ ಭೇಟಿ ನೀಡಿ ಉದ್ಗರಿಸಿತು, “ ಆಹಾ, ಹೀಗೋ ವಿಷಯ. ಇದು ಅದ್ಭತಕ್ಕೂ ಮಿಗಿಲಾದದ್ದು. ಈಗ ನೀನು ನಾನು ನೆಲೆಸಿರುವ ತಾಣಕ್ಕೆ ನೀನು ಬಂದು ನೋಡು.” ಸೂರ್ಯ ಗುಹೆಗೆ ಭೇಟಿ ನೀಡಿ ಉದ್ಗರಿಸಿತು, “ಛೇ, ನನಗೇನೂ ವ್ಯತ್ಯಾಸ ಕಾಣುತ್ತಿಲ್ಲ.”

*****

೩. ಕನಸು
ಸಂತ ಚಿಶ್ಟಿಯನ್ನು ಭೇಟಿ ಮಾಡಲು ಒಬ್ಬ ಬಂದ. ಕೊರಾನು ಜ್ಞಾನ ಪ್ರದರ್ಶಿಸಿ ಸಂತನನ್ನು ಚರ್ಚೆಯಲ್ಲಿ ಸೋಲಿಸುವ ಇರಾದೆ ಈ ಭೇಟಿಗಾರನಿಗೆ ಇತ್ತು. ಆದಾಗ್ಯೂ ಆತ ಒಳಕ್ಕೆ ಪ್ರವೇಶಿಸಿದ ಕೂಡಲೆ ಸಂತ ಚಿಶ್ಟಿ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟರು. ಯೂಸುಫ್ ಮತ್ತು ತನಗೆ ಬಿದ್ದಿದ್ದ ಕನಸುಗಳ ಕುರಿತು ಕೊರಾನು ಪ್ರಕಾರ ವಿವರಣೆ ನೀಡಿದರು. ಇದ್ದಕ್ಕಿದ್ದಂತೆ ಅವರು ಭೇಟಿಗಾರನತ್ತ ತಿರುಗಿ ತನಗೆ ಬಿದ್ದ ಒಂದು ಕನಸನ್ನು ಹೇಳಿದರೆ ನೀವು ಕೊರಾನು ಪ್ರಕಾರ ಅರ್ಥೈಸಬಲ್ಲಿರಾ ಎಂಬುದಾಗಿ ಕೇಳಿದರು. ಭೇಟಿಗಾರ ಅನುಮತಿಸಿದ ನಂತರ ತನಗೆ ಬಿದ್ದಿದ್ದ ಕನಸನ್ನು ತಿಳಿಸಿದರು. ಆ ಕನಸಿನಲ್ಲಿ ತಾವಿಬ್ಬರೂ ಇದ್ದುದಾಗಿ ತಿಳಿಸಿ ನಡೆದ ವಿದ್ಯಮಾನವನ್ನು ಇಂತು ವರ್ಣಿಸಿದರು: “ನಿಮ್ಮ ಕೈ ಜೇನು ತುಂಬಿದ್ದ ಜಾಡಿಯಲ್ಲಿಯೂ ನನ್ನ ಕೈ ಮಲ ತುಂಬಿದ್ದ ಪಾತ್ರೆಯಲ್ಲಿಯೂ ಮುಳುಗಿತ್ತು.”
ಆ ತಕ್ಷಣ ಮಧ್ಯಪ್ರವೇಶಿಸಿದ ಭೇಟಿಗಾರ ಆ ಕನಸನ್ನು ಅರ್ಥೈಸಿದ, “ಅರ್ಥ ಸುಸ್ಪಷ್ಟ! ನೀವು ತಪ್ಪು ದಾರಿಯಲ್ಲಿ ಸಾಗುತ್ತಿದ್ದೀರಿ. ನಾನಾದರೋ ನೈತಿಕವಾಗಿ ಸರಿಯಾದ ರೀತಿಯಲ್ಲಿ ಜೀವಿಸುತ್ತಿದ್ದೇನೆ.”
ಸಂತ ಛಿಶ್ಟಿ ಹೇಳಿದರು, “ಕನಸು ಅಲ್ಲಿಗೇ ಮುಗಿಯುವುದಿಲ್ಲ.”
“ಮುಂದೇನಾಯಿತು ಹೇಳಿ,” ಭೇಟಿಗಾರ ವಿನಂತಿಸಿದ.
ಸಂತರು ತಮ್ಮ ಕನಸಿನ ವರ್ಣನೆ ಮುಂದುವರಿಸಿದರು, “ನೀವು ನನ್ನ ಕೈ ನೆಕ್ಕುತ್ತಿದ್ದಿರಿ, ನಾನು ನಿಮ್ಮ ಕೈ ನೆಕ್ಕುತ್ತಿದ್ದೆ.”

*****

೪. ಹೆರಾಟ್‌ನ ಪ್ರಾಜ್ಞನೊಬ್ಬನ ಕತೆ
ಘಾಝ್ನದ ಸುಲ್ತಾನ ಮಹಮದ್‌ನ ಆಳ್ವಿಕೆಯ ಅವಧಿಯಲ್ಲಿ ಹೈದರ್ ಆಲಿ ಜಾನ್‌ ಎಂಬ ಹೆಸರಿನವನೊಬ್ಬನಿದ್ದ. ಸುಲ್ತಾನನ ಆಶ್ರಯ ಹೈದರ್‌ಗೆ ಲಭ್ಯವಾಗಬೇಕು ಎಂಬ ಬಯಕೆಯಿಂದ ಅವನ ತಂದೆ ಇಸ್ಕಂದರ್‌ ಖಾನ್ ಅಂದಿನ ಖ್ಯಾತ ಜ್ಞಾನಿಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕತೆಯನ್ನು ಅವನು ಅಧ್ಯಯನ ಮಾಡಲು ವ್ಯವಸ್ಥೆ ಮಾಡಿದ. 
ಸೂಫಿ ಶಾಲೆಗಳಲ್ಲಿ ಕಲಿಸುವ ಅನೇಕ ಆಧ್ಯಾತ್ಮ ಸಂಬಂಧಿತ ವ್ಯಾಯಾಮಗಳು ಹಾಗೂ ಆಧ್ಯಾತ್ಮಿಕ ಶ್ಲೋಕಗಳನ್ನು ಕಂಠಸ್ಥ ಮಾಡಿಕೊಂಡು ವ್ಯಾಖ್ಯಾನಿಸುವುದರಲ್ಲಿ ಹೈದರ್‌ ಆಲಿ ಪ್ರಭುತ್ವ ಸಾಧಿಸಿದ ನಂತರ ಇಸ್ಕಂದರ್‌ ಖಾನ್ ಅವನನ್ನು ಸುಲ್ತಾನ ಮಹಮದ್‌ನ ಸಮ್ಮುಖಕ್ಕೆ ಕರೆದುಕೊಂಡು ಹೋಗಿ ಹೇಳಿದ, “ಮಹಮದ್ ಸುಲ್ತಾನ ಶ್ರೇಷ್ಠರೇ, ನೀವು ಜ್ಞಾನದ ಪೋಷಕರೆಂಬುದು ತಿಳಿದಿರುವುದರಿಂದ ನನ್ನ ದೊಡ್ಡ ಮತ್ತು ಬಲು ಬುದ್ಧಿವಂತ ಮಗನಿಗೆ ತಮ್ಮ ಆಸ್ಥಾನದಲ್ಲಿ ಉತ್ತಮ ಹುದ್ದೆ ದೊರೆತೀತು ಎಂಬ ಆಸೆಯಿಂದ ಸೂಫಿ ವಿಧಿವಿಧಾನಗಳಲ್ಲಿ ವಿಶೇಷ ತರಬೇತಿ ಕೊಡಿಸಿದ್ದೇನೆ.”
ಸುಲ್ತಾನ ಅವನತ್ತ ತಲೆ ಎತ್ತಿ ಸಹ ನೋಡದೆಯೇ, “ಇನ್ನು ಒಂದು ವರ್ಷ ಕಳೆದ ನಂತರ ಅವನನ್ನು ಕರೆದುಕೊಂಡು ಬಾ.” 

ತುಸು ನಿರಾಸೆಯಾದರೂ ಸಂಪೂರ್ಣ ಹತಾಶನಾಗದೆ ಇಸ್ಕಂದರ್‌ ಖಾನ್‌ ಮಗನನ್ನು ಹಿಂದಿದ್ದ ಮಹಾನ್‌ ಸೂಫೀ ಸಂತರ ಕೃತಿಗಳನ್ನು ಅಭ್ಯಸಿಸಲೂ ಪ್ರಾಚೀನ ಗುರುಗಳ ಸಮಾಧಿಗಳಿಗೆ ಭೇಟಿ ನೀಡಲೂ ಕಳುಹಿಸಿದ. ಮುಂದಿನ ವರ್ಷ ಇಂದಿನದ್ದಕ್ಕಿಂತ ಹೆಚ್ಚು ಸಿದ್ಧತೆಯೊಂದಿಗೆ ಸುಲ್ತಾನನ್ನು ಕಾಣುವ ಇರಾದೆ ಅವನದಾಗಿತ್ತು.
ಒಂದು ವರ್ಷದ ನಂತರ ಅವನು ಹೈದರ್‌ನನ್ನು ಸುಲ್ತಾನನ ಆಸ್ಥಾನಕ್ಕೆ ಕರೆದೊಯ್ದು ಹೇಳಿದ, “ಮಹಾಪ್ರಭು, ನನ್ನ ಮಗ ಸುದೀರ್ಘ ಕಾಲ ತ್ರಾಸದಾಯಕವಾದ ಯಾತ್ರೆಗಳನ್ನು ಮಾಡಿ ಸೂಫಿ ಇತಿಹಾಸ ಹಾಗೂ ಶಾಸ್ತ್ರೀಯವಾದ ಆಧ್ಯಾತ್ಮಿಕ ವ್ಯಾಯಾಮಗಳಲ್ಲಿ ಈಗ ಹಿಂದಿಗಿಂತಲೂ ಹೆಚ್ಚು ಜ್ಞಾನ ಗಳಿಸಿದ್ದಾನೆ. ನಿಮ್ಮ ಆಸ್ಥಾನದ ಒಂದು ಸಂಪತ್ತು ಎಂಬುದಾಗಿ ಪರಿಗಣಿಸುವಷ್ಟು ಅರ್ಹತೆ ಅವನದ್ದು ಎಂಬುದನ್ನು ಸಾಬೀತು ಪಡಿಸಲೋಸುಗ ಅವನನ್ನು ಪರೀಕ್ಷಿಸಿ.”
ಒಂದಿನಿತೂ ಹಿಂದುಮುಂದು ನೋಡದೆ ಸುಲ್ತಾನ ಹೇಳಿದ, “ಇನ್ನೊಂದು ವರ್ಷ ಕಳೆದ ನಂತರ ಬಾ!”

ಮುಂದಿನ ೧೨ ತಿಂಗಳುಗಳಲ್ಲಿ ಹೈದರ್‌ ಆಲಿ ಅಮುದಾರ್ಯಾ ನದಿಯನ್ನು ದಾಟಿ ಬುಕಾರಾ, ಸಮರ್‌ಖಂಡ್‌, ಕ್ವಾಸರ್‌-ಐ-ಆರಿಫಿನ್‌, ತಾಶ್ಕೆಂಟ್, ದುಶಾಂಬೆ, ಟರ್ಕಿಸ್ತಾನ್‌ಗಳಲ್ಲಿ ಇರುವ ಸೂಫಿ ಸಂತರುಗಳ ಸಮಾಧಿಗಳಿಗೆ ಭೇಟಿ ನೀಡಿದ. ಆಸ್ಥಾನಕ್ಕೆ ಹಿಂದಿರುಗಿದಾಗ, ಸುಲ್ತಾನ ಒಮ್ಮೆ ಅವನತ್ತ ದೃಷ್ಟಿ ಹಾಯಿಸಿ ಹೇಳಿದ, “ಒಂದು ವರ್ಷ ಕಳೆದ ನಂತರ ಅವನು ಬರಲಿ!” 

ಆ ವರ್ಷ ಹೈದರ್‌ ಆಲಿ ಮೆಕ್ಕಾಕ್ಕೆ ತೀರ್ಥಯಾತ್ರೆ ಮಾಡಿದ. ತದನಂತರ ಅವನು ಭಾರತ ಮತ್ತು ಪರ್ಶಿಯಾಗಳಿಗೆ ಭೇಟಿ ನೀಡಿ ಅಪರೂಪದ ಗ್ರಂಥಗಳನ್ನು ಪರಿಶೀಲಿಸಿದ. ಆ ಕಾಲದಲ್ಲಿ ಆ ಸ್ಥಳಗಳಲ್ಲಿ ಇದ್ದ ಮಹಾನ್‌ ದರವೇಶಿಗಳನ್ನು ಕಂಡು ತನ್ನ ನಮನಗಳನ್ನು ಸಲ್ಲಿಸುವುದನ್ನೂ ಮರೆಯಲಿಲ್ಲ.
ಘಾಝ್ನಾಕ್ಕೆ ಹಿಂದಿರುಗಿದ ಹೈದರ್‌ನಿಗೆ ಸುಲ್ತಾನ ಮಹಮದ್‌ ಹೇಳಿದ, “ಈಗ ಒಬ್ಬ ಗುರುವನ್ನು ಆಯ್ಕೆ ಮಾಡು. ಅವರು ನಿನ್ನನ್ನು ಶಿಷ್ಯನಾಗಿ ಸ್ವೀಕರಿಸಿದರೆ ಒಂದು ವರ್ಷ ಕಳೆದ ನಂತರ ಬಾ!”
ಒಂದು ವರ್ಷ ಕಳೆಯಿತು. ಇಸ್ಕಂದರ್‌ ಖಾನ್‌ ಮಗನನ್ನು ಆಸ್ಥಾನಕ್ಕೆ ಕರೆದೊಯ್ಯಲು ತಯಾರಿ ಮಾಡಿಕೊಂಡನಾದರೂ ಹೈದರ್‌ ಆಲಿ ಸುಲ್ತಾನನನ್ನು ಭೇಟಿ ಮಾಡಲು ಆಸಕ್ತನಾಗಿರಲಿಲ್ಲ. ಹೆರಾಟ್‌ನಲ್ಲಿದ್ದ ತನ್ನ ಗುರುವಿನ ಪಾದಗಳ ಸಮೀಪದಲ್ಲಿ ಆತ ಕುಳಿತ. ಅವನ ತಂದೆ ಏನೇ ಹೇಳಿದರೂ ಅವನು ಅಲ್ಲಿಂದ ಕದಲಿಲ್ಲ.
“ನನ್ನ ಹಣ ಹಾಗೂ ಸಮಯವನ್ನು ಹಾಳುಮಾಡಿಕೊಂಡೆ. ಸುಲ್ತಾನ ಮಹಮದ್‌ ನೀಡಿದ ಪರೀಕ್ಷೆಗಳಲ್ಲಿ ನನ್ನ ಮಗ ಉತ್ತೀರ್ಣನಾಗಲಿಲ್ಲ,” ಎಂಬುದಾಗಿ ಇಸ್ಕಂದರ್‌ ಖಾನ್‌ ತನ್ನ ಕುಟುಂಬದವರೊಂದಿಗೂ ಮಿತ್ರರೊಂದಿಗೂ ಹೇಳಿಕೊಂಡು ಗೋಳಾಡಿದ. ಹೈದರ್‌ ಆಲಿಯ ಒಳಿತಿಗಾಗಿ ತಾನು ಹಾಕಿಕೊಂಡಿದ್ದ ಮಹಾನ್ ಯೋಜನೆಗಳನ್ನು ಕೈಬಿಟ್ಟು ಅವನನ್ನು ಅವನ ಗುರುವಿನ ಹತ್ತಿರ ಇರಲು ಬಿಟ್ಟುಬಿಡಲು ತೀರ್ಮಾನಿಸಿದ.

ಹೈದರ್‌ ಆಲಿ ತನ್ನ ಆಸ್ಥಾನದಲ್ಲಿ ಹಾಜರಾಗಬೇಕಾದ ದಿನ ಕಳೆದ ನಂತರ ಸುಲ್ತಾನ ತನ್ನ ಆಸ್ಥಾನಿಕರಿಗೆ ಹೇಳಿದ, “ಹೆರಾಟ್‌ಗೆ ಪ್ರಯಾಣ ಮಾಡಲು ಸಿದ್ಧರಾಗಿ. ಆ ನಗರದಲ್ಲಿ ನಾನು ಭೇಟಿ ಮಾಡಲೇ ಬೇಕಾದವರೊಬ್ಬರು ಇದ್ದಾರೆ.”
ಡೋಲು ಕಹಳೆಗಳ ವಾದ್ಯಗೋಷ್ಟಿಯೊಂದಿಗೆ ಸುಲ್ತಾನ ಮಹಮದ್‌ನ ಪರಿವಾರ ಹೆರಾಟ್‌ ನಗರವನ್ನು ಪ್ರವೇಶಿಸಿದಾಗ ಹೈದರ್‌ ಆಲಿ ಮತ್ತು ಅವನ ಗುರು ಸಮೀಪದಲ್ಲಿಯೇ ಇದ್ದ ಉದ್ಯಾನವನದಲ್ಲಿನ ಆಶ್ರಯತಾಣದಲ್ಲಿ ಕುಳಿತಿದ್ದರು. ಸುಲ್ತಾನ ಮಹಮದ್‌ ಮತ್ತು ಆಸ್ಥಾನಿಕ ಅಯಾಝ್‌ ತಮ್ಮ ಪಾದರಕ್ಷೆಗಳನ್ನು ಗೌರವಸೂಚಕವಾಗಿ ಕಳಚಿ ಇಟ್ಟು ಆಶ್ರಯತಾಣಕ್ಕೆ ಬಂದರು.

“ಸುಲ್ತಾನ ಮಹಮದ್‌ ಅವರಿಗೆ ಸುಸ್ವಾಗತ,” ಎಂಬುದಾಗಿ ಸ್ವಾತಿಸಿದ ಸೂಫಿ ಗುರುಗಳು ಹೈದರ್‌ ಆಲಿಯನ್ನು ತೋರಿಸುತ್ತಾ ಹೇಳಿದರು, “ನಿಮ್ಮ ಆಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ ಏನೂ ಆಗಿರದಿದ್ದ ವ್ಯಕ್ತಿಯೇ ಈತ. ಆದರೀಗ ಆತ ರಾಜನೇ ಭೇಟಿ ಮಾಡಲು ಬರುವಷ್ಟರ ಮಟ್ಟಿಗೆ ಯೋಗ್ಯನಾಗಿದ್ದಾನೆ. ಅವನನ್ನು ನೀವು ಸೂಫಿ ಸಮಾಲೋಚಕನಾಗಿ ಇಟ್ಟುಕೊಳ್ಳಬಹುದು, ಏಕೆಂದರೆ ಅವನೀಗ ಅದಕ್ಕೆ ಸಿದ್ಧನಾಗಿದ್ದಾನೆ!”

*****

೫. ದೇವರತ್ತ ಹೋಗುವ ದಾರಿ ಒಳಮುಖವಾಗಿದೆ
ಒಬ್ಬ ಹಸುವೊಂದನ್ನು ಖರೀದಿಸಿದ. ಅವನಿಗೆ ಹಸುಗಳನ್ನು ನಿಭಾಯಿಸುವುದು ಹೇಗೆಂಬುದು ತಿಳಿದಿರಲಿಲ್ಲ. ಹಸುವಿನ ಕೊಂಬುಗಳನ್ನು ಹಿಡಿದು ಅದನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿದ್ದ. ಹಸು ಪ್ರತಿಭಟಿಸುತ್ತಿತ್ತು. ಈ ಕಸುಬಿಗೆ ಅವನು ಹೊಸಬ ಎಂಬುದು ಸುಸ್ಪಷ್ಟವಾಗಿ ಗೋಚರಿಸುತ್ತಿತ್ತು. ತನ್ನ ಹಿಂದಿನ ಮಾಲಿಕನ ಹತ್ತಿರ, ಅರ್ಥಾತ್ ತನ್ನ ಮನೆಗೆ ಹೋಗಲು ಹಸು ಪ್ರಯತ್ನಿಸುತ್ತಿತ್ತು.
ಇದನ್ನು ವೀಕ್ಷಿಸುತ್ತಿದ್ದ ಸೂಫಿ ಮುಮುಕ್ಷುವೊಬ್ಬ ಹೇಳಿದ, “ನೀನು ಈ ಕಸುಬಿಗೆ ಹೊಸಬನಿರಬೇಕು. ಹಸುಗಳನ್ನು ನಿಭಾಯಿಸುವುದು ಹೇಗೆಂಬುದು ನಿನಗೆ ತಿಳಿದಿಲ್ಲ. ನೀನು ಸರಿಯಾದ ವಿಧಾನ ಅನುಸರಿಸುತ್ತಿಲ್ಲ.”
ಆ ಮನುಷ್ಯ ಉತ್ತರಿಸಿದ, “ನಾನೇನು ಮಾಡಲಿ, ನಾನು ಅಷ್ಟು ಬಲಿಷ್ಠನಲ್ಲ. ಹಸು ನನಗಿಂತ ಬಲಿಷ್ಠವಾಗಿದೆ, ಅದು ನನ್ನನ್ನು ತನ್ನೊಂದಿಗೆ ಎಳೆದೊಯ್ಯುತ್ತಿದೆ.”
ಸೂಫಿ ಮುಮುಕ್ಷು ಅವನಿಗೆ ತುಸು ತಾಜಾ ಹಸಿರು ಹುಲ್ಲನ್ನು ಕೊಟ್ಟು ಹೇಳಿದ, “ಕೊಂಬುಗಳನ್ನು ಬಿಡು. ಈ ಹುಲ್ಲನ್ನು ಅದಕ್ಕೆ ತೋರಿಸು. ಅದು ಹುಲ್ಲನ್ನು ತಿನ್ನಲು ಬಂದಾಗ ನೀನು ನಿನ್ನ ಮನೆಯತ್ತ ತುಸು ಜರುಗು. ಅದು ಹುಲ್ಲನ್ನು ತಿನ್ನಲೋಸುಗ ನಿನ್ನತ್ತ ಪುನಃ ಬರುತ್ತದೆ. ಆಗ ನೀನು ಪುನಃ ನಿನ್ನ ಮನೆಯತ್ತ ತುಸು ಜರುಗು. ಈ ರೀತಿಯಲ್ಲಿ ಅದಕ್ಕೆ ಹುಲ್ಲನ್ನು ತೋರಿಸುತ್ತಾ ನಿನ್ನ ಮನೆಯತ್ತ  ನೀನು ನಡೆ. ಹುಲ್ಲನ್ನು ತಿನ್ನುವ ಅವಕಾಶ ಮಾತ್ರ ನೀಡಬೇಡ. ಅದು ಹುಲ್ಲಿನ ಆಸೆಯಿಂದ ನಿನ್ನನ್ನು ಹಿಂಬಾಲಿಸಿ ನಿನ್ನ ಮನೆಗೆ ಬರುತ್ತದೆ.”
ಈ ತಂತ್ರ ಯಶಸ್ವಿಯಾಯಿತು. ಒಂದೆರಡು ಹೆಜ್ಜೆ ಮುಂದಿಟ್ಟರೆ ಎಟುಕುವಷ್ಟು ದೂರದಲ್ಲಿ ತಾಜಾ ಹಸಿರು ಹುಲ್ಲು ಸದಾ ಗೋಚರಿಸುತ್ತಿದ್ದದ್ದರಿಂದ ಆ ಹಸು ತನ್ನ ಹಿಂದಿನ ಮನೆಯನ್ನೂ ಮಾಲಿಕನನ್ನೂ ಮರೆತು ಹುಲ್ಲನ್ನು ಹಿಡಿದುಕೊಂಡಿದ್ದವನನ್ನು ಹಿಂಬಾಲಿಸಿ ಹೊಸ ಮಾಲಿಕನ ಮನೆಯ ಕೊಟ್ಟಿಗೆಯೊಳಕ್ಕೆ ಹೋಗಿ ಅಲ್ಲಿ ಬಂಧಿಸಲ್ಪಟ್ಟಿತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x