ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೂರಿ ಬೆ ಎಂಬಾತನ ಪುರಾತನ ಪೆಠಾರಿ

ಚಿಂತನಶೀಲ ನೂರಿ ಬೆ ಅಲ್ಬೇನಿಯಾದ ಒಬ್ಬ ಗೌರವಾನ್ವಿತ ನಿವಾಸಿ. ತನಗಿಂತ ಬಹಳಷ್ಟು ಚಿಕ್ಕವಳಾಗಿದ್ದವಳೊಬ್ಬಳನ್ನು ಅವನು ಮದುವೆಯಾಗಿದ್ದ. ಒಂದು ದಿನ ಅವನು ಮಾಮೂಲಿಗಿಂತ ಬೇಗನೆ ಮನೆಗೆ ಹಿಂದಿರುಗಿದಾಗ ಅವನ ಅತ್ಯಂತ ವಿಧೇಯ ಸೇವಕನೊಬ್ಬ ಓಡಿ ಬಂದು ಹೇಳಿದ, “ನಿಮ್ಮ ಹೆಂಡತಿ, ಅರ್ಥಾತ್ ನಮ್ಮ ಯಜಮಾನಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಅವರ ಕೊಠಡಿಯಲ್ಲಿ ಒಬ್ಬ ಮನುಷ್ಯ ಹಿಡಿಸಬಹುದಾದಷ್ಟು ದೊಡ್ಡ ಪೆಠಾರಿಯೊಂದಿದೆ. ಅದು ನಿಮ್ಮ ಅಜ್ಜಿಯದ್ದು. ನಿಜವಾಗಿ ಅದರಲ್ಲಿ ಕಸೂತಿ ಕೆಲಸ ಮಾಡಿದ ಪುರಾತನ ವಸ್ತ್ರಗಳಿರಬೇಕು. ಆದರೆ ಅದರಲ್ಲಿ ಇನ್ನೂ ಏನೋ ಹೆಚ್ಚಿನದ್ದು ಇದೆ ಎಂಬುದು ನನ್ನ ನಂಬಿಕೆ. ನಿಮ್ಮ ಅತ್ಯಂತ ಹಳೆಯ ವಿಶ್ವಾಸಾರ್ಹ ಸೇವಕ ನಾನಾಗಿದ್ದರೂ ಯಜಮಾನಿ ಆ ಪೆಠಾರಿಯೊಳಗೆ ಏನಿದೆ ಎಂಬುದನ್ನು ನೋಡಲು ಬಿಡುತ್ತಿಲ್ಲ.”
ನೂರಿ ತನ್ನ ಹೆಂಡತಿಯ ಕೊಠಡಿಗೆ ಹೋಗಿ ನೋಡಿದ. ಬೃಹತ್‌ ಗಾತ್ರದ ಮರದ ಪೆಟ್ಟಿಗೆಯೊಂದರ ಪಕ್ಕದಲ್ಲಿ ಆಕೆ ವಿಷಣ್ಣವದನಳಾಗಿ ಕುಳಿತಿದ್ದಳು. ಅವನು ಕೇಳಿದ, “ಆ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನು ನನಗೆ ತೋರಿಸುವೆಯಾ?”

ಅವಳು ಕೇಳಿದಳು, “ಏಕೆ ತೋರಿಸಬೇಕು? ಒಬ್ಬ ಸೇವಕ ಸಂಶಯ ಪಟ್ಟದ್ದಕ್ಕಾಗಿಯೋ ಅಥವ ನೀನು ನನ್ನನ್ನು ನಂಬದಿರುವುದಕ್ಕಾಗಿಯೋ?”
“ಒಳ ಅರ್ಥಗಳ ಅಥವ ಪ್ರಚ್ಛನ್ನ ಭಾವಗಳ ಕುರಿತು ಆಲೋಚಿಸದೆಯೇ ಪೆಟ್ಟಿಗೆಯ ಮುಚ್ಚಳ ತೆರೆದು ತೋರಿಸುವುದು ಸುಲಭವಲ್ಲವೇ?” ಕೇಳಿದ ನೂರಿ.
“ಅದು ಸಂಭವನೀಯ ಎಂಬುದಾಗಿ ನನಗನ್ನಿಸುತ್ತಿಲ್ಲ,” ಅವಳು ಹೇಳಿದಳು.
“ಅದಕ್ಕೆ ಬೀಗ ಹಾಕಿದೆಯೇ?”
“ಹೌದು.”

“ಬೀಗದ ಕೈ ಎಲ್ಲಿದೆ?”
ಅದನ್ನು ಅವಳು ಎತ್ತಿ ಹಿಡಿದು ತೋರಿಸುತ್ತಾ ಹೇಳಿದಳೂ, “ಸೇವಕನನ್ನು ಕೆಲಸದಿಂದ ತೆಗೆದು ಹಾಕಿದರೆ ಇದನ್ನು ಕೊಡುತ್ತೇನೆ.”
ಸೇವಕನನ್ನು ಕೆಲಸದಿಂದ ಅವನು ತೆಗೆದು ಹಾಕಿದ. ಹೆಂಡತಿ ಬೀಗದ ಕೈಯನ್ನು ಅವನಿಗೆ ಕೊಟ್ಟು ಹೊರಗೆ ಹೋದಳು. ಅವಳು ಮನಸ್ಸು ಪ್ರಕ್ಷುಬ್ಧವಾಗಿದ್ದದ್ದು ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ನೂರಿ ಬೆ ಸುದೀರ್ಘ ಕಾಲ ಆಲೋಚಿಸುತ್ತಿದ್ದ. ಆ ನಂತರ ಅವನು ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕರೆಯಿಸಿದ. ಅದನ್ನು ತೆರೆಯದೆಯೇ ರಾತ್ರಿಯ ವೇಳೆ ಅದನ್ನು ಎಲ್ಲರೂ ಸೇರಿ ಹೊತ್ತೊಯ್ದು ತೋಟದ ಮೂಲೆಯೊಂದರಲ್ಲಿ ಹೂಳಿದರು.
ಆ ವಿಷಯದ ಕುರಿತಾಗಿ ಮುಂದೆಂದೂ ಯಾರೂ ಏನೂ ಹೇಳಲೇ ಇಲ್ಲ.

*****

೨. ಉಯಿಲಿನ ಮೂಲಕ ನೀಡಿದ ಆಸ್ತಿ

ಒಬ್ಬಾತ ತನ್ನ ಮನೆಯಿಂದ ಬಲು ದೂರದ ಊರಿನಲ್ಲಿ ವಿಧಿವಶನಾದ. ಅವನ ಉಯಿಲಿನಲ್ಲ ಆಸ್ತಿ ವಿಲೇವಾರಿಗೆ ಸಂಬಂಧಿಸಿದಂತೆ ಇಂತು ಬರೆದಿತ್ತು: 
“ಜಮೀನು ಇರುವ ಸ್ಥಳದಲ್ಲಿನ ಸಮುದಾಯವು ತಮಗೆ ಇಷ್ಟವಾದದ್ದನ್ನು ತೆಗೆದುಕೊಳ್ಳಲಿ, ಮತ್ತು ತಮಗೆ ಇಷ್ಟವಾದದ್ದನ್ನು ವಿನಯ ಸಂಪನ್ನನಾದ ಆರಿಫ್‌ಗೆ ನೀಡಲಿ.”
ಆ ಸನ್ನಿವೇಶದಲ್ಲಿ ಆರಿಫ್‌ ಬಹಳ ಚಿಕ್ಕ ವಯಸ್ಸಿನವನಾಗಿದ್ದದ್ದರಿಂದ ಪ್ರಭಾವ ಬೀರುವ ವಿಷಯಕ್ಕೆ ಸಂಬಂಧಿಸದಂತೆ ಸಮುದಾಯದಲ್ಲಿ ಕೊನೆಯ ಸ್ಥಾನದಲ್ಲಿದ್ದ. ಆದ್ದರಿಂದ ಹಿರಿಯರು ಜಮೀನಿನಲ್ಲಿ ತಮಗೆ ಇಷ್ಟವಾದ ಭಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಯಾರಿಗೂ ಬೇಡದ ಕೆಲಸಕ್ಕೆ ಬಾರದ ಭಾಗವನ್ನು ಮಾತ್ರ ಆರಿಫ್‌ಗೆ ಬಿಟ್ಟುಕೊಟ್ಟರು. 
ವರ್ಷಗಳು ಉರುಳಿದವು. ಆರಿಫ್‌ ಬೆಳೆದು ದೊಡ್ಡವನಾದ, ಬಲಶಾಲಿಯಾದ, ವಿವೇಕಿಯಾದ. ಸಮುದಾಯದ ಹಿರಿಯರ ಹತ್ತಿರ ಹೋಗಿ ತನ್ನ ಪಾಲಿನ ಪಿತ್ರಾರ್ಜಿತ ಸ್ವತ್ತಿಗೆ ಬೇಡಿಕೆ ಸಲ್ಲಿಸಿದ. “ಉಯಿಲಿನ ಪ್ರಕಾರ ನಿನಗೇನು ಸಲ್ಲಬೇಕೋ ಅದನ್ನು ನಿನಗೆ ಕೊಟ್ಟಿದ್ದೇವೆ,” ಎಂಬುದಾಗಿ ಹೇಳಿದರು ಹಿರಿಯರು. ತಾವು ಅನ್ಯಾಯವಾಗಿ ಏನನನ್ನೂ ತೆಗೆದುಕೊಂಡಿಲ್ಲ ಅನ್ನುವುದು ಅವರ ನಂಬಿಕೆಯಾಗಿತ್ತು. ಏಕೆಂದರೆ ‘ತಮಗೆ ಇಷ್ಟವಾದ್ದನ್ನು ತೆಗೆದುಕೊಳ್ಳಲಿ’ ಎಂಬುದಾಗಿ ಉಯಿಲಿನಲ್ಲಿ ಹೇಳಿತ್ತು!

ಈ ಕುರಿತಾದ ಚರ್ಚೆ ನಡೆಯುತ್ತಿರುವಾಗ ಗಂಭೀರ ಮುಖ-ಭಾವದ, ಗಮನ ಸೆಳೆಯುವ ವ್ಯಕ್ತಿತ್ವ ಉಳ್ಳ ಅಪರಿಚಿತನೊಬ್ಬ ಅವರ ನಡುವೆ ಕಾಣಿಸಿಕೊಂಡ. ಅವನು ಹೇಳಿದ, “ನೀವು ನಿಮ್ಮದಾಗಿಸಿಕೊಳ್ಳಬೇಕು ಎಂಬುದಾಗಿ ಬಯಸುವಂಥದ್ದನ್ನು ಆರಿಫ್‌ಗೆ ಕೊಡಬೇಕು, ಅವನು ಅದರ ಪೂರ್ಣ ಲಾಭ ಪಡೆಯುವಂತಾಗಬೇಕು – ಇದು ಆ ಉಯಿಲಿನ  ಅರ್ಥ.” ಅತಿಮಾನುಷ ಅನ್ನಬಹುದಾಗಿದ್ದ ಅಪರಿಚಿತ ಇಂತು ವಿವರಿಸಿದ: “ತನ್ನ ಆಸ್ತಿಯನ್ನು ಸಂರಕ್ಷಿಸುವ ಸ್ಥಿತಿಯಲ್ಲಿ ಇಲ್ಲದಿರುವಾಗ ಉಯಿಲುಗಾರ ಸತ್ತ. ಆಗ ಅವನೇನಾದರೂ ಆರಿಫ್‌ ಆಸ್ತಿಯನ್ನು ಪಡೆಯುವವನು ಎಂಬುದಾಗಿ ನೇರವಾಗಿ ಬರೆದಿದ್ದರೆ ಸಮುದಾಯದವರು ಆಸ್ತಿಯನ್ನು ಕಬಳಿಸುವ ಸಾಧ್ಯತೆ ಇತ್ತು. ಕನಿಷ್ಠಪಕ್ಷ ಅದರಿಂದ ಸಮುದಾಯದಲ್ಲಿ ಮತಭೇದ ಅಥವ ಅಂತಃಕಲಹ ಉಂಟಾಗುತ್ತಿತ್ತು. ಆ ಅಸ್ತಿಯನ್ನು ನೀವು ನಿಮ್ಮ ಸ್ವಂತದ್ದು ಎಂಬುದಾಗಿ ಪರಿಗಣಿಸುವಂತಾದರೆ ಅದನ್ನು ನೀವು ಬಹಳ ಜಾಗರೂಕತೆಯಿಂದ ಸಂರಕ್ಷಿಸುವಿರಿ ಎಂಬುದು ಆತನಿಗೆ ತಿಳಿದಿತ್ತು. ಆದ್ದರಿಂದ ಆಸ್ತಿಯ ಸಂರಕ್ಷಣೆಯೂ ಆಗಿ ಯುಕ್ತ ಸಮಯದಲ್ಲಿ ಅದು ನ್ಯಾಯಯುತ ವಾರಸುದಾರನಿಗೆ ಸೇರುವಂತಾಗಲಿ ಎಂಬ ಉದ್ದೇಶದಿಂದ ಆತ ಬಲು ಜಾಗರೂಕತೆಯಿಂದ ಈ ರೀತಿಯಲ್ಲಿ ಉಯಿಲನ್ನು ಬರೆದ. ನ್ಯಾಯಯುತ ವಾರಸುದಾರನಿಗೆ ಆಸ್ತಿ ಸೇರಬೇಕಾದ ಕಾಲ ಈಗ ಬಂದಿದೆ.”
ಸಮುದಾಯದವರಿಗೆ ಉಯಿಲಿನ ನಿಜ ಉದ್ದೇಶದ ಅರಿವು ಇಂತು ಮೂಡಿದ್ದರಿಂದ ಅವರು ಆಸ್ತಿಯನ್ನು ಹಿಂದಿರುಗಿಸಿದರು.

*****

೩. ಕ್ಷೌರಿಕನೂ ಬಿಳಿಯ ಕೂದಲುಗಳೂ

ಒಬ್ಬ ಗಡ್ಡಧಾರಿ ಕ್ಷೌರಿಕನ ಅಂಗಡಿಗೆ ಹೋಗಿ ಪ್ರಧಾನ ಕ್ಷೌರಿಕನಿಗೆ ಹೇಳಿದ, “ನಾನು ನನ್ನ ಮನೆಗೆ ಒಬ್ಬ ಹೊಸ ಹೆಂಡತಿಯನ್ನು ಕರೆತರುವವನಿದ್ದೇನೆ. ನನ್ನ ಗಡ್ಡದಲ್ಲಿ ಇರುವ ಬಿಳಿಯ ಕೂದಲುಗಳನ್ನು ನೀನು ಕತ್ತರಿಸಬೇಕು.” ಪ್ರಧಾನ ಕ್ಷೌರಿಕ ಕತ್ತರಿ ತೆಗೆದುಕೊಂಡು ದಾಡಿಯನ್ನು ಪೂರ್ಣವಾಗಿ ಕತ್ತರಿಸಿ ಆ ಮನುಷ್ಯನ ಮುಂದೆ ಇಟ್ಟು ಹೇಳಿದ, “ನನಗೆ ಅದಕ್ಕೆ ಸಮಯವಿಲ್ಲ. ಬಿಳಿಯ ಕೂದಲುಗಳನ್ನು ನೀನೇ ಇದರಿಂದ ಹೆಕ್ಕಿ ತೆಗೆದುಕೊ.”

*****

೪. ಫಕೀರನೂ ಹಣವೂ

ಫಕೀರನೊಬ್ಬ ಮೌನವಾಗಿ ಪ್ರಾರ್ಥಿಸುತ್ತಿದ್ದ. ಫಕೀರನ ಭಕ್ತಿ ಹಾಗೂ ಶ್ರದ್ಧೆಯನ್ನು ಗಮನಿಸುತ್ತಿದ್ದ ಶ್ರೀಮಂತ ವ್ಯಾಪಾರಿಯೊಬ್ಬ ಅವನನ್ನು ಬಹುವಾಗಿ ಮೆಚ್ಚಿದ. ಅವನು ಫಕೀರನಿಗೆ ಚಿನ್ನದ ನಾಣ್ಯಗಳಿದ್ದ ಥೈಲಿಯೊಂದನ್ನು ಕೊಡುಗೆಯಾಗಿ ನೀಡಲಿಚ್ಛಿಸಿ ಹೇಳಿದ, “ಇದನ್ನು ದಯವಿಟ್ಟು ಸ್ವೀಕರಿಸಿ. ದೇವರ ಸಲುವಾಗಿ ಇದನ್ನು ವ್ಯಯಿಸುವಿರೆಂಬುದು ನನಗೆ ತಿಳಿದಿದೆ.” 
ಫಕೀರ ಉತ್ತರಿಸಿದ, “ಒಂದು ಕ್ಷಣ ತಡೆಯಿರಿ. ನಿಮ್ಮ ಹಣವನ್ನು ತೆಗೆದುಕೊಳ್ಳುವುದು ನ್ಯಾಯಸಮ್ಮತವಾಗುತ್ತದೋ ಇಲ್ಲವೋ ಎಂಬುದರ ಕುರಿತು ನನಗೆ ಸಂಶಯವಿದೆ. ನೀವು ಭಾರೀ ಶ್ರೀಮಂತರೇನು? ನಿಮ್ಮ ಮನೆಯಲ್ಲಿ ತುಂಬಾ ಹಣವಿದೆಯೇನು?”

“ಖಂಡಿತ ಇದೆ. ಕನಿಷ್ಠ ಪಕ್ಷ ಒಂದು ಸಾವಿರ ಚಿನ್ನದ ನಾಣ್ಯಗಳು ಮನೆಯಲ್ಲಿದೆ,” ಗರ್ವದಿಂದ ಉತ್ತರಿಸಿದ ವ್ಯಾಪಾರಿ.
“ನಿಮಗೆ ಇನ್ನೂ ಒಂದು ಸಾವಿರ ಚಿನ್ನದ ನಾಣ್ಯಗಳು ಬೇಕೇನು?” ಕೇಳಿದ ಫಕೀರ.
“ಬೇಡವೆಂದು ಹೇಳಲಾರೆ. ಹೆಚ್ಚುಹೆಚ್ಚು ಹಣ ಸಂಪಾದಿಸಲೋಸುಗ ನಾನು ಪ್ರತೀ ದಿನ ಕಷ್ಟಪಟ್ಟು ಕೆಲಸ ಮಾಡುತ್ತೇನೆ.”
“ಮತ್ತೂ ಒಂದು ಸಾವಿರ ಚಿನ್ನದ ನಾಣ್ಯಗಳು ಸಿಕ್ಕಿದರೆ ಆದೀತು ಎಂಬ ಆಸೆಯಿದೆಯೇ?”
“ಇದೆ. ನಾನು ಹೆಚ್ಚುಹೆಚ್ಚು ಹಣ ಸಂಪಾದಿಸುವಂತಾಗಲಿ ಎಂಬುದಾಗಿ ಪ್ರತೀ ದಿನ ಪ್ರಾರ್ಥಿಸುತ್ತೇನೆ.”
ಫಕೀರ ಹಣದ ಥೈಲಿಯನ್ನು ವ್ಯಾಪಾರಿಯತ್ತ ಹಿಂದಕ್ಕೆ ತಳ್ಳಿ ಹೇಳಿದ, “ದಯವಿಟ್ಟು ಕ್ಷಮಿಸಿ. ನಿಮ್ಮ ಚಿನ್ನವನ್ನು ನಾನು ಸ್ವೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಶ್ರೀಮಂತನೊಬ್ಬ ಬಡವನಿಂದ ಹಣ ತೆಗೆದುಕೊಳ್ಳ ಕೂಡದು.”

“ನಿನ್ನನ್ನು ನೀನು ಶ್ರೀಮಂತ ಎಂಬುದಾಗಿಯೂ ನನ್ನನ್ನು ಬಡವ ಎಂಬುದಾಗಿಯೂ ಹೇಗೆ ಪರಿಗಣಿಸುತ್ತೀ?”
ಫಕೀರ ಉತ್ತರಿಸಿದ, “ದೇವರು ನನ್ನತ್ತ ಏನನ್ನು ಕಳುಹಿಸುತ್ತಾನೋ ಅಷ್ಟರಿಂದಲೇ ನಾನು ತೃಪ್ತನಾಗಿದ್ದೇನೆ. ನೀನು ನಿಜವಾಗಿಯೂ ಬಡವ. ಏಕೆಂದರೆ ನೀನು ಸದಾ ಅತೃಪ್ತ, ಇನ್ನೂ ಹೆಚ್ಚು ಕರುಣಿಸೆಂಬುದಾಗಿ ಯಾವಾಗಲೂ ದೇವರಲ್ಲಿ ಮೊರೆಯಿಡುತ್ತಿರುವೆ.”

*****

೫. ಸುಲ್ತಾನನೂ ಷೇಕ್‌ನೂ

ಅನೇಕ ವರ್ಷಗಳ ಹಿಂದೆ ಆಟಮನ್‌ ಸಮ್ರಾಜ್ಯದ ಸುಲ್ತಾನನೊಬ್ಬ ಇಸ್ತಾನ್‌ಬುಲ್‌ನ ವಿಖ್ಯಾತ ಷೇಕ್‌ ಒಬ್ಬನನ್ನು ಭೇಟಿ ಮಾಡಿದ. ಷೇಕ್‌ನ ಪ್ರಾಮಾಣಿಕತೆ ಹಾಗೂ ವಿವೇಕದಿಂದ ಆತ ಪ್ರಭಾವಿತನಾದ. ತತ್ಪರಿಣಾಮವಾಗಿ ಷೇಕ್‌ನ ಸಭೆಗಳಿಗೆ ಏಕರೀತಿಯಲ್ಲಿ ತಪ್ಪದೆ ಬರಲಾರಂಭಿಸಿದ.
ಸ್ವಲ್ಪ ಕಾಲದ ನಂತರ ಸುಲ್ತಾನ ಹೇಳಿದ, “ನಿಮ್ಮನ್ನೂ ನಿಮ್ಮ ಬೋಧನೆಗಳನ್ನೂ ನಾನು ಪ್ರೀತಿಸುತ್ತೇನೆ. ನಿಮಗೆ ಯಾವಾಗಲಾದರೂ ಏನಾದರೂ ಬೇಕಾದರೆ ದಯವಿಟ್ಟು ನನಗೆ ತಿಳಿಸಿ. ನನ್ನಿಂದ ಸಾಧ್ಯವಾಗುವಂತಹುದು ಅದಾಗಿದ್ದರೆ ಖಂಡಿತ ಕೊಡುತ್ತೇನೆ.” ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲೀ ಶ್ರೀಮಂತನೊಬ್ಬ ನೀಡಿದ ಖಾಲಿ ಧನಾದೇಶ ಎಂಬುದಾಗಿ ಪರಿಗಣಿಸಬಹುದಾದ ಆಶ್ವಾಸನೆ ಇದಾಗಿತ್ತು.
ಷೇಕ್‌ ಉತ್ತರಿಸಿದ, “ನನಗಾಗಿ ನೀವು ಮಾಡಬಹುದಾದದ್ದು ಒಂದಿದೆ. ನೀವು ಪುನಃ ಇಲ್ಲಿಗೆ ಬರಬೇಡಿ!”

ಆಶ್ಚರ್ಯಚಕಿತನಾದ ಸುಲ್ತಾನ ಕೇಳಿದ, “ಏಕೆ? ನಾನೇದರೂ ನಿಮ್ಮ ಮನಸ್ಸನ್ನು ನೋಯಿಸಿದ್ದೇನೆಯೇ? ಹಾಗೇನಾದರೂ ಮಾಡಿದ್ದರೆ ದಯವಿಟ್ಟು ನನ್ನ ಕ್ಷಮಾಯಾಚನೆಯನ್ನು ಒಪ್ಪಿಕೊಳ್ಳಿ.”

ಷೇಕ್‌ ಪ್ರತಿಕ್ರಿಯಿಸಿದ, “ಇಲ್ಲ ಇಲ್ಲ. ಸಮಸ್ಯೆ ನೀವಲ್ಲ. ಸಮಸ್ಯೆ ಆಗಿರುವುದು ನನ್ನ ಫಕೀರರು. ನೀವು ಬರುವ ಮುನ್ನ ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು, ದೇವರ ನಾಮಸ್ಮರಣೆ ಮಾಡುತ್ತಿದ್ದರು, ದೇವರ ಅನುಗ್ರಹವನ್ನು ಮಾತ್ರ ಬಯಸುತ್ತಿದ್ದರು. ಈಗಲಾದರೋ ನಿಮ್ಮನ್ನು ಸಂತೋಷಪಡಿಸುವುದು ಹೇಗೆ, ನಿಮ್ಮಿಂದ ಬಹುಮಾನಗಳನ್ನು ಪಡೆಯುವುದು ಹೇಗೆ ಎಂಬ ಆಲೋಚನೆಗಳೇ ಅವರ ಮನಸ್ಸಿನಲ್ಲಿ ತುಂಬಿದೆ. ಇಲ್ಲಿ ನಿಮ್ಮ ಇರುವಿಕೆಯನ್ನು ನಿಭಾಯಿಸಬಹುದಾದಷ್ಟು ಆಧ್ಯಾತ್ಮಿಕವಾಗಿ ನಾವು ಪಕ್ವವಾಗಿಲ್ಲ ಎಂಬ ಕಾರಣಕ್ಕಾಗಿ ನೀವು ಪುನಃ ಇಲ್ಲಿಗೆ ಬರಬೇಡಿ ಎಂಬುದಾಗಿ ವಿನಂತಿಸಬೇಕಾಗಿದೆ!”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x